ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಸ್ಪೀಕರ್ ಆಗಿದ್ದ ಕೆ. ಆರ್. ರಮೇಶ್ ಕುಮಾರ್ ರಾಜಿನಾಮೆ ನೀಡಿದ್ದು, ಆ ಸ್ಥಾನಕ್ಕೆ ಈಗ ಉತ್ತರ ಕನ್ನಡ ಜಿಲ್ಲೆ ಶಿರಸಿ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬಂದಿದ್ದಾರೆ. ಬುಧವಾರ ಕಾಗೇರಿ ಅವರನ್ನು ಸ್ಪೀಕರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ರೀತಿಯ ಸಹಕಾರ ನೀಡಿದ್ದ ಕೆ. ಜಿ. ಬೋಪಯ್ಯ ಅವರನ್ನು ಮತ್ತೊಮ್ಮೆ ಸ್ಪೀಕರ್ ಆಗಿ ನೇಮಿಸಬೇಕೆಂಬ ಬಯಕೆ ಇತ್ತು. ಬೋಪಯ್ಯ ಅವರಿಗೆ ಇದು ಇಷ್ಟವಿಲ್ಲದಿದ್ದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ವಿಶ್ವಾಸಮತ ಸಾಬೀತುಪಡಿಸುತ್ತಿದ್ದಂತೆ ಸ್ಪೀಕರ್ ಸ್ಥಾನಕ್ಕೆ ಅವರ ಹೆಸರನ್ನೇ ಪ್ರಸ್ತಾಪಿಸಿದ್ದರು. ಆದರೆ, ಬಿಜೆಪಿಯ ಇತರ ಶಾಸಕರಿಗೆ ಮತ್ತು ವರಿಷ್ಠರಿಗೆ ಇದು ಇಷ್ಟವಿರಲಿಲ್ಲ. ಹೀಗಾಗಿ ಯಡಿಯೂರಪ್ಪ ಅವರು ಬೋಪಯ್ಯ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಈ ವಿಚಾರವನ್ನು ದೆಹಲಿ ನಾಯಕರ ಗಮನಕ್ಕೆ ತಂದ ಶಾಸಕರು, ಬೋಪಯ್ಯ ಬದಲಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸ್ಪೀಕರ್ ಮಾಡಲು ಮನವಿ ಮಾಡಿಕೊಂಡಿದ್ದರು. ಅದರಂತೆ ದೆಹಲಿ ನಾಯಕರ ಸೂಚನೆ ಮೇಲೆ ಯಡಿಯೂರಪ್ಪ ಅವರು ಬೋಪಯ್ಯ ಬದಲು ಕಾಗೇರಿ ಅವರ ಹೆಸರು ಸೂಚಿಸಿದ್ದು, ಇದೀಗ ಕಾಗೇರಿ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಬಿವಿಪಿ ಚಳವಳಿ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಕಾಗೇರಿ ಅವರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಾನು ಇಂತಹ ಹುದ್ದೆಗೆ (ಸ್ಪೀಕರ್) ಬಂದಿರುವುದು ನನ್ನ ಸುದೈವ ಎಂದು ಕಾಗೇರಿ ಹೇಳಿದ್ದಾರೆ. ಆದರೆ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪಾಲಿಗೆ ಸ್ಪೀಕರ್ ಹುದ್ದೆ ಬಯಸದೇ ಬಂದ ಭಾಗ್ಯ ಎನ್ನುವುದಕ್ಕಿಂತಲೂ ಬೇಡದಿದ್ದರೂ ಬಂದ ಭಾಗ್ಯ ಎನ್ನಬೇಕು. ಏಕೆಂದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಚಿವರಾಗಬೇಕು ಎಂದು ಕನಸು ಕಾಣುತ್ತಿದ್ದ ಅವರು ಸ್ಪೀಕರ್ ಹುದ್ದೆ ಸಿಕ್ಕಿದರೂ ಬೇಡ ಎನ್ನುತ್ತಿದ್ದರು. ಆದರೆ, ಕೊನೆಗೆ ಯಾವ ಹುದ್ದೆ ತಮಗೆ ಬೇಡ ಎನ್ನುತ್ತಿದ್ದರೂ ಆ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗುವಂತಾಗಿದೆ.
ಕರ್ನಾಟಕ ವಿಧಾನಸಭೆ ಸ್ಪೀಕರ್ ಎಂದರೆ ಹೆಚ್ಚಾಗಿ ನೆನಪಿಗೆ ಬರುವುದು ಬಿ. ವೈಕುಂಠ ಬಾಳಿಗಾ, ನಾಗರತ್ನಮ್ಮ, ಬಿ. ಜಿ. ಬಣಕಾರ್, ಕೆ. ಎಚ್. ರಂಗನಾಥ್, ಕೆ. ಆರ್. ರಮೇಶ್ ಕುಮಾರ್ ಅವರು. ಇವರ ಅವಧಿಯಲ್ಲಿ ಸ್ಪೀಕರ್ ಹುದ್ದೆಯ ಗೌರವ ಇನ್ನಷ್ಟು ಹೆಚ್ಚಾಗಿತ್ತು. ಅದರಲ್ಲೂ ವೈಕುಂಠ ಬಾಳಿಗಾ ಅವರ ಹೆಸರು ಸ್ಪೀಕರ್ ಹುದ್ದೆಯ ವಿಚಾರ ಚರ್ಚೆಯಾಗುವಾಗೆಲ್ಲಾ ಪ್ರಸ್ತಾಪವಾಗುತ್ತದೆ. ಇಂತಹ ಮಹಾನ್ ವ್ಯಕ್ತಿಗಳು ಇದ್ದು ಬಿಟ್ಟು ಹೋದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನೂತನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮೇಲಿದೆ.
ಸ್ಪೀಕರ್ ಕಾಗೇರಿ ಎಂಬುದು ಮೊದಲೇ ನಿರ್ಧಾರವಾಗಿತ್ತು:
ಹೌದು, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಆರಂಭದಲ್ಲಿ ಸ್ಪೀಕರ್ ಹುದ್ದೆಗೆ ಕೆ. ಜಿ. ಬೋಪಯ್ಯ ಅವರ ಹೆಸರು ಪ್ರಸ್ತಾಪವವಾದರೂ ಕಾಗೇರಿ ಅವರೇ ಈ ಸ್ಥಾನ ಆಲಂಕರಿಸುತ್ತಾರೆ ಎಂಬುದು ಮೊದಲೇ ನಿರ್ಧಾರವಾಗಿತ್ತು! ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಬಿಜೆಪಿಯಲ್ಲಿ ಈ ವಿಚಾರ ಆಗಾಗ್ಗೆ ಚರ್ಚೆಯಾಗುತ್ತಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಬಿಜೆಪಿ ಪ್ರತಿಪಕ್ಷವಾಗಿ ಕುಳಿತಿತ್ತು. ಪಕ್ಷದ ಶಾಸಕರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ. ಟಿ. ರವಿ, ಸುನೀಲ್ ಕುಮಾರ್, ಡಿ. ಎನ್. ಜೀವರಾಜ್ ಅವರದ್ದೊಂದು ಗುಂಪು ಸದಾ ಒಟ್ಟಾಗಿರುತ್ತಿತ್ತು. ಆಗಾಗ್ಗೆ ಬಸವರಾಜ ಬೊಮ್ಮಾಯಿ, ಲಕ್ಮಣ ಸವದಿ ಮತ್ತಿತರರು ಸೇರಿಕೊಂಡು ಯಾವುದಾದರೂ ವಿಚಾರದ ಬಗ್ಗೆ ಚರ್ಚಿಸುತ್ತಾ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದರು. ಈ ಪೈಕಿ ಹೆಚ್ಚು ಕಾಲೆಳೆಸಿಕೊಳ್ಳುತ್ತಿದ್ದವರು ಕಾಗೇರಿಯವರು. ಹಿಂದೆ ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ವೇಳೆ ತಾವು ಮಾಡಿದ ಕೆಲಸಗಳು, ಆಗಬೇಕಾಗಿದ್ದೂ ಸಾಧ್ಯವಾಗದೇ ಇರುವ ಕೆಲಸಗಳನ್ನು ಪ್ರಸ್ತಾಪಿಸುತ್ತಿದ್ದ ಕಾಗೇರಿಯವರು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು ಸಚಿವರಾದರೆ ಬಾಕಿ ಇರುವ ಕೆಲಸ ಮಾಡುತ್ತೇನೆ ಎನ್ನುತ್ತಿದ್ದರು. ಅದಕ್ಕೆ ಇತರೆ ಶಾಸಕರು, ಪಕ್ಷ ಅಧಿಕಾರಕ್ಕೆ ಬಂದರೆ ನೀವು ಕೆಲಸ ಮಾಡುವುದಲ್ಲ, ಮಾಡಿಸುವ ಸ್ಥಾನದಲ್ಲಿರುತ್ತೀರಿ. ನಿಮ್ಮನ್ನು ಸ್ಪೀಕರ್ ಮಾಡುತ್ತೇವೆ ಎನ್ನುತ್ತಿದ್ದರು. ಇದಕ್ಕೆ ಪ್ರತಿಕ್ರಿಯಿಸುತ್ತಿದ್ದ ಕಾಗೇರಿಯವರು, ಸಚಿವ ಸ್ಥಾನ ಸಿಗದೇ ಇದ್ದರೂ ಪರವಾಗಿಲ್ಲ, ಕೇವಲ ಶಾಸಕನಾಗಿರುತ್ತೇನೆ. ಸ್ಪೀಕರ್ ಸ್ಥಾನ ಮಾತ್ರ ಬೇಡವೇ ಬೇಡ ಎಂದು ಹೇಳುತ್ತಿದ್ದರು.
ಇದಿಷ್ಟೇ ಅಲ್ಲ, ಸದನದ ಕಲಾಪ ಆರಂಭವಾಗುವ ಮುನ್ನ ಜೀವರಾಜ್, ಸಿ. ಟಿ. ರವಿ, ಸುನೀಲ್ ಕುಮಾರ್ ಕುಳಿತಿದ್ದಾಗ ಕಾಗೇರಿಯವರೇನಾದರೂ ಸದನದೊಳಗೆ ಆಗಮಿಸಿದರೆ, ಹೋ ನಮ್ಮ ಭಾವೀ ಸ್ಪೀಕರ್ ಬಂದರು ಎನ್ನುತ್ತಾ ಎದ್ದು ನಿಲ್ಲುತ್ತಿದ್ದರು. ಆಗ, “ನನ್ನನ್ನು ಹಾಳು ಮಾಡೋಕೇ ನೀವಿದ್ದೀರಿ” ಎಂದು ಹುಸಿ ಮುನಿಸು ತೋರಿಸುತ್ತಿದ್ದ ಕಾಗೇರಿಯವರು, ನಿಮ್ಮ ಸಹವಾಸವೇ ಬೇಡ ಎಂದು ಎರಡೂ ಕೈ ಮುಗಿಯುತ್ತಿದ್ದರು. ಕೆಲವೊಮ್ಮೆ ಮುಂದಿನ ಸ್ಪೀಕರ್ ನೀವೇ ಆಗುವುದು. ಬೇಕಿದ್ದರೆ ಬೆಟ್ ಕಟ್ಟೋಣ ಎಂದು ಕಾಗೇರಿಯವರಿಗೆ ಸವಾಲು ಹಾಕುತ್ತಿದ್ದರು. ಈ ಎಲ್ಲಾ ಚರ್ಚೆ, ಸವಾಲುಗಳು ತಮಾಷೆಗೋ, ಕಾಲೆಳೆಯುವುದಕ್ಕೋ ಏನೇ ಆಗಿದ್ದರೂ ಅದು ನಿಜವಾಗಿದೆ.
ಶಿವರಾಮ್ ಹೆಬ್ಬಾರ್ ಅವರಿಗಾಗಿ ಸ್ಪೀಕರ್ ಹುದ್ದೆ ಒಪ್ಪಿದರೇ ಕಾಗೇರಿ:
ಬಿಜೆಪಿಯ ಬಹುತೇಕ ಶಾಸಕರಿಗೆ ಕಾಗೇರಿ ಅವರೇ ಸ್ಪೀಕರ್ ಆಗಬೇಕು ಎಂದಿದ್ದರೂ ಕಾಗೇರಿ ಮಾತ್ರ ಇದಕ್ಕೆ ಸುತಾರಾಂ ಒಪ್ಪಿರಲಿಲ್ಲ. ಯಡಿಯೂರಪ್ಪ ಅವರಿಗೂ ಕಾಗೇರಿ ಅವರನ್ನು ಸ್ಪೀಕರ್ ಮಾಡುವ ಬಗ್ಗೆ ಆಸಕ್ತಿ ಇರಲಿಲ್ಲ. 2018ರಲ್ಲಿ ವಿಧಾನಸಭೆ ಚುನಾವಣೆ ಮುಗಿದು ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಸ್ಪೀಕರ್ ಸ್ಥಾನಕ್ಕೆ ಕಾಗೇರಿಯವರ ಹೆಸರು ಪ್ರಸ್ತಾಪವಾಗಿತ್ತು. ಈ ಸಂದರ್ಭದಲ್ಲಿ ಕಾಗೇರಿಯವರು ಈ ಸ್ಥಾನ ನನಗೆ ಬೇಡ ಎಂದು ಯಡಿಯೂರಪ್ಪ ಅವರಲ್ಲಿ ನೇರವಾಗಿಯೇ ಹೇಳಿದ್ದರು. ನಂತರದಲ್ಲಿ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲು ವಿಫಲರಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು.
ಆದರೆ, 17 ಶಾಸಕರ ರಾಜಿನಾಮೆಯಿಂದಾಗಿ (ಈ ಶಾಸಕರು ಅನರ್ಹರಾಗಿದ್ದಾರೆ) ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮಗೆ ಆಸಕ್ತಿ ಇಲ್ಲದೇ ಇದ್ದರೂ ಸ್ಪೀಕರ್ ಸ್ಥಾನ ಒಪ್ಪಿಕೊಳ್ಳುವುದು ಅನಿವಾರ್ಯವಾಯಿತು. ಅನರ್ಹಗೊಂಡಿರುವ ಶಾಸಕರ ಪೈಕಿ ಉತ್ತರ ಕನ್ನಡ ಜಿಲ್ಲೆಯವರೇ ಆದ ಶಿವರಾಮ್ ಹೆಬ್ಬಾರ್ ಕೂಡ ಇದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಅವರ ಅನರ್ಹತೆ ರದ್ದುಗೊಂಡರೆ ಬಿಜೆಪಿ ಸರ್ಕಾರ ಬರಲು ಕಾರಣರಾದ ಹೆಬ್ಬಾರ್ ಅವರಿಗೆ ಸಚಿವ ಸ್ಥಾನ ನೀಡಲೇ ಬೇಕು. ಆಗ ಕಾಗೇರಿಯವರೂ ಸಚಿವರಾಗಿದ್ದರೆ ಒಂದೇ ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಬೇಕಾಗುತ್ತಿತ್ತು. ಇದು ಇತರೆ ಜಿಲ್ಲೆಗಳ ಶಾಸಕರ ಕೆಂಗಣ್ಣಿಗೆ ಕಾರಣವಾಗುತ್ತಿತ್ತು. ಇಂತಹ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳುವ ಉದ್ದೇಶದಿಂದ ಕಾಗೇರಿ ಅವರಿಗೆ ಸ್ಪೀಕರ್ ಸ್ಥಾನ ನೀಡುವ ತೀರ್ಮಾನ ಕೈಗೊಳ್ಳಲಾಯಿತು. ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿರುವ ಕಾಗೇರಿ ಅವರು ಪಕ್ಷ ಮತ್ತು ಸರ್ಕಾರದ ಹಿತದೃಷ್ಟಿಯಿಂದ ಅದನ್ನು ಒಪ್ಪಿಕೊಳ್ಳಲೇ ಬೇಕಾಯಿತು.