ಎರಡು ತಿಂಗಳ ಕಾಲ ವಿಳಂಬವಾಗಿಯಾದರೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಹಂಗಾಮಿ ಅಧ್ಯಕ್ಷರ ನೇಮಕ ಮಾಡಲಾಗಿದೆ. ಮತ್ತೊಮ್ಮೆ ಕ್ಲಿಷ್ಟಕರ ಸನ್ನಿವೇಶದಲ್ಲಿ ಸೋನಿಯ ಗಾಂಧಿ ಅಧ್ಯಕ್ಷೆ ಆಗಬೇಕಾಗಿ ಬಂದಿದೆ. ರಾಹುಲ್ ಗಾಂಧಿ ಏಐಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಸುತರಾಂ ಒಪ್ಪದಿರುವುದರಿಂದ ಹೊಸ ಅಧ್ಯಕ್ಷರ ಆಯ್ಕೆ ಮಾಡಲೇಬೇಕಿತ್ತು. ದೆಹಲಿಯಲ್ಲಿ ಸಭೆ ಸೇರಿದ ಕಾಂಗ್ರೆಸ್ ವರ್ಕಿಂಗ್ ಕಮಿಟಿ (ಸಿಡಬ್ಲ್ಯುಸಿ) ಹಂಗಾಮಿ ಅಧ್ಯಕ್ಷರ ಆಯ್ಕೆ ಮಾಡಿದೆ. ಈ ವ್ಯವಸ್ಥೆ ಮೂರು ವರ್ಷಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದ ಇಂದಿನ ಪರಿಸ್ಥಿತಿಯಲ್ಲಿ ಇದೊಂದು ಉತ್ತಮ ಆಯ್ಕೆ ಎನ್ನಬಹುದು.
ಮಾಜಿ ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಮುಕುಲ್ ವಾಸ್ನಿಕ್, ಸುಶೀಲ್ ಕುಮಾರ್ ಶಿಂಧೆ ಅವರ ಹೆಸರುಗಳನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಾಧ್ಯಮಗಳಲ್ಲಿ ಹರಿಯಬಿಡಲಾಗಿತ್ತು. ಇಂದಿನ ಕಾಲದಲ್ಲಿ ಈ ಹಳೆ ಹುಲಿಗಳ ಬದಲು ಯುವ ಮುಖಂಡರಾದ ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂಧಿಯ, ಮಿಲಿಂದ್ ದೇವೊರ ಅಥವ ಶಶಿ ತರೂರ್ ಅವರ ಹೆಸರುಗಳು ಚಲಾವಣೆ ಆಗಬೇಕಾಗಿತ್ತು. ಹಾಗಾಗಲಿಲ್ಲ. ಮೊದಲಿಗೆ, ಹಳೆಯ ಹುಲಿಗಳಾಗಲಿ, ಯುವ ಮುಖಂಡರಾಗಲಿ, ಕೇರಳದವರೇ ಆದ ಶಶಿ ತರೂರ್ ಅಧ್ಯಕ್ಷ ಸ್ಥಾನದ ಹತ್ತಿರ ಬರುವಂತೆಯೇ ಇಲ್ಲ. ಏಕೆಂದರೆ, ಕಾಂಗ್ರೆಸ್ ಈಗ ಕೇರಳ ಕಾಂಗ್ರೆಸ್ ಆಗಿದೆ.
ಕೇರಳದ ಮಾಜಿ ಮುಖ್ಯಮಂತ್ರಿ ಎ. ಕೆ. ಆಂಟನಿಯವರಿಂದ ಆರಂಭಿಸಿ ಏಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ತನಕ ಕಾಂಗ್ರೆಸ್ ಪಕ್ಷವನ್ನು ಮಲೆಯಾಳಿಗಳು ಆವರಿಸಿಕೊಂಡಿದ್ದಾರೆ. ಬೇರೆ ಯಾವುದೇ ರಾಜ್ಯದ ಮುಖಂಡರಿಗಿಂತ ಹೆಚ್ಚಿನ ರಾಜಕೀಯ ಪ್ರಜ್ಞೆ, ಪಕ್ಷ ನಿಷ್ಠೆ ಕೇರಳದ ಕಾಂಗ್ರೆಸ್ಸಿಗರಿಗಿದೆ. ಕಾಂಗ್ರೆಸ್ ಪಕ್ಷವನ್ನು ನಿಯಂತ್ರಿಸುವ ಕೇರಳ ಲಾಬಿಗೆ ಸೋನಿಯ ಗಾಂಧಿ ಅವರಿಗಿಂತ ಉತ್ತಮ ಆಯ್ಕೆ ಬೇರೊಂದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಕೂಡ ಇಂದು ಸೋನಿಯ ನಾಯಕತ್ವ ಅನಿವಾರ್ಯ ಆಗಲಿದೆ. ಸೋನಿಯ ನಾಯಕತ್ವದಲ್ಲೇ ಪಕ್ಷ ಎರಡು ಬಾರಿ ಅಧಿಕಾರಕ್ಕೇರಿತ್ತು.
ಹಲವು ಪಕ್ಷಗಳ ಮೈತ್ರಿಯನ್ನು ಮಾಡುವ ಮೂಲಕ ಅಟಲ್ ಬಿಹಾರಿ ವಾಜಪೇಯಿ ಸರಕಾರವನ್ನು ಸೋಲಿಸಿ ಸತತ ಎರಡು ಬಾರಿ ಯುಪಿಎ ಗೆಲ್ಲುವಲ್ಲಿ ಸೋನಿಯ ಪಾತ್ರ ಇತ್ತು. ಅನಿವಾರ್ಯ ಸಂದರ್ಭದಲ್ಲಿ ಕಾಂಗ್ರೆಸ್ ಮುನ್ನಡೆಸಿದ್ದರೂ, ತನ್ನ ಮಗನ ಅವಧಿಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಮುಗ್ಗರಿಸಿರುವುದು ವಾಸ್ತವ. ಮಗನ ನೇತೃತ್ವದಲ್ಲಿ ಮುರಿದು ಹಾಕಲಾಗಿರುವುದನ್ನು ಅಮ್ಮನೇ ಸರಿಪಡಿಸಬೇಕಾಗಿದೆ.
ರಾಹುಲ್ ಗಾಂಧಿಯ ರಾಜಕೀಯ ಎಂಟ್ರಿ 2004ರಲ್ಲಿ ಆಯಿತು. ತಾಯಿ ತೆರವು ಮಾಡಿದ್ದ ಅಮೇಥಿ ಕ್ಷೇತ್ರದಿಂದ ಮೊದಲಿಗೆ ಲೋಕಸಭಾ ಸದಸ್ಯ. 2007ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯನ್ನು ಪುನಾರಚರನೆ ಮಾಡಿದಾಗ ಯುವ ಕಾಂಗ್ರೆಸ್ ಮತ್ತು ವಿದ್ಯಾರ್ಥಿ ಕಾಂಗ್ರೆಸ್ (ಎನ್ಎಸ್ ಯುಐ) ಜವಾಬ್ದಾರಿಯನ್ನು ನೀಡಲಾಯಿತು. ಜವಾಬ್ದಾರಿ ಪಡೆದ ಯುವರಾಜನ ಪ್ರಯೋಗದಲ್ಲಿ ಇಂದು ಯುವ ಕಾಂಗ್ರೆಸ್ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ಸರ್ವನಾಶ ಆಗಿದೆ.

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಹಣವಂತರು ಮತ್ತು ಬಲಿಷ್ಠ ಸಮುದಾಯದವರು ಮಾತ್ರ ಭಾಗವಹಿಸುತ್ತಿದ್ದರು. ವಿದ್ಯಾರ್ಥಿಗಳ ಸಂಘಟನೆ ಮಾಡಲು ಆಸಕ್ತಿ ವಹಿಸದ ಈ ಯುವ ಕಾಂಗ್ರೆಸ್ ಮುಖಂಡರು ಹೆಚ್ಚಾಗಿ ರಾಜಕೀಯ ವ್ಯಾಪಾರಿ ಡೀಲು ಮಾಸ್ಟರ್ ಆಗಿ ಬೆಳೆದರೆ ವಿನಃ ಪಕ್ಷಕ್ಕೆ ಯಾವ ಪ್ರಯೋಜನವೂ ಆಗಲಿಲ್ಲ.
ಕಾಂಗ್ರೆಸ್ ಅಧ್ಯಕ್ಷನಾಗಿ ಮೊದಲಿಗೆ ರಾಹುಲ್ ಗಾಂಧಿ ತನ್ನ ಆಪ್ತ ಸಲಹೆಗಾರರ ತಪ್ಪು ನಡೆಗಳಿಂದ ನಗೆ ಪಾಟಲಿಗೆ ಗುರಿಯಾಗಬೇಕಾಯಿತು. ದೇಶದಲ್ಲಿ ನೂರಾರು ಸುದ್ದಿ ಚಾನಲುಗಳು ಇರುವಾಗ ಯಾವ ಮೂರ್ಖ ಕೂಡ ರಾಹುಲ್ ಗಾಂಧಿಯಂತಹ ಪುಟ್ಟ ಬಾಲಕನನ್ನು ಟೈಮ್ಸ್ ನೌ ಸಂಪಾದಕನೆಂದು ಹೇಳಲಾದ ಅರ್ನಾಬ್ ಗೋಸ್ವಾಮಿ ಎಂಬ ಮಾಧ್ಯಮ ಕಟುಕನ ಕಸಾಯಿಖಾನೆಗೆ ಕಳುಹಿಸುತ್ತಿರಲಿಲ್ಲ. ಇದಕ್ಕಿಂತ ಕೆಟ್ಟ ನಿರ್ಧಾರಗಳ ಉದಾಹರಣೆಗಳು ಬೇಕಾಗಿಲ್ಲ. ಅದೇ ರೀತಿ ರಾಹುಲ್ ಗಾಂಧಿಯ ಅಂಕಿ ಅಂಶ ತಂಡ ಮತ್ತು ಸೋಶಿಯಲ್ ಮಿಡಿಯಾ ನಟನಾಮಣಿಗಳ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ.
ಇದಕ್ಕೂ ಮುನ್ನ ಯುಪಿಎ-2 ಅವಧಿಯಲ್ಲಿ ಪ್ರಧಾನಿ ಮನಮೋಹನ ಸಿಂಗ್ ಸಚಿವ ಸಂಪುಟದಲ್ಲಿ ಮಂತ್ರಿ ಆಗದಿರುವುದು ರಾಹುಲ್ ಗಾಂಧಿಯ ರಾಜಕೀಯ ಅಪಕ್ವತೆಗೆ ಸಾಕ್ಷಿ. ಅದಕ್ಕಿಂತಲೂ ಹೆಚ್ಚಾಗಿ ತಾನು ಪ್ರಧಾನಿ ಪಟ್ಟ ಆಲಂಕರಿಸಲು ಹುಟ್ಟಿದ ಯುವರಾಜ ಎಂಬ ತಪ್ಪು ಕಲ್ಪನೆ ಇಂದು ಕಾಂಗ್ರೆಸ್ ಪಕ್ಷದ ಹಿನ್ನಡೆಗೊಂದು ಕಾರಣವಾಗಿದೆ. ವೈಯಕ್ತಿಕವಾಗಿ ಉತ್ತಮ ಗುಣ ಸ್ವಭಾವ ಹೊಂದಿರುವ ರಾಹುಲ್ ಗಾಂಧಿ ವ್ಯಕ್ತಿತ್ವ ಪಕ್ಷಕ್ಕೆ ಸೂಕ್ತವೇ ಆಗಿದ್ದರು, ಕಾಂಗ್ರೆಸ್ ಭಟ್ಟಂಗಿಗಳನ್ನು ನಿಭಾಯಿಸಲು ಶಕ್ತವಾಗಿಲ್ಲ. ಕೇವಲ ತಮ್ಮ ಸ್ವಾರ್ಥ ಸಾಧನೆ, ಸಂಪತ್ತು ಕೂಡಿ ಹಾಕಲು ಸೇರಿಕೊಂಡಿರುವ ಬಹಳಷ್ಟು ಮಂದಿ ಕಾಂಗ್ರೆಸ್ ಮುಖಂಡರಿಗೆ ಪಕ್ಷದ ಮೇಲೆ ಯಾವ ನಿಷ್ಠೆಯೂ ಇಲ್ಲ, ಪ್ರಾಮಾಣಿಕತೆಯೂ ಇಲ್ಲ.
ಇಂತಹ ಪರಿಸ್ಥಿತಿಯಲ್ಲಿ ಪ್ರತಿಸ್ಪರ್ಧಿ ರಾಜಕೀಯ ಪಕ್ಷವೊಂದು ಕಾಂಗ್ರೆಸ್ ಪಕ್ಷವೇ ಅನುಷ್ಠಾನಗೊಳಿಸಿದ ಆಧುನಿಕ ತಂತ್ರಜ್ಞಾನಗಳನ್ನು ತನ್ನ ಚುನಾವಣಾ ರಾಜಕೀಯಕ್ಕಾಗಿ ಸಮರ್ಥವಾಗಿ ಬಳಸಿಕೊಳ್ಳುತ್ತಿರುವಾಗ, ತನ್ನ ರಾಜಕೀಯ ಲಾ, ಭಕ್ಕಾಗಿ ಯಾವುದೇ ಕೃತ್ಯಕ್ಕೂ ಸಜ್ಜಾಗಿ ಇರುವಾಗ ಕಾಂಗ್ರೆಸ್ ಪಾರ್ಟಿ ಮಾತ್ರ ಓಬಿರಾಯನ ಕಾಲದ ಲೈಟ್ ಕಂಬದ ನೆರಳಿನಿಂದ ಹೊರಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸೋನಿಯಾ ಗಾಂಧಿ ಎದುರು ಪಕ್ಷವನ್ನು ಮತ್ತೆ ಸಂಘಟಿಸಲು ಹಲವು ಸವಾಲುಗಳಿವೆ.
ಲೋಕಸಭಾ ಚುನಾವಣೆಯಲ್ಲಿ ಎದುರಾದ ಹೀನಾಯ ಸೋಲಿಗಿಂತ ಹೆಚ್ಚಾಗಿ ಬಿಜೆಪಿಯ ಆಕರ್ಷಣೆಯಿಂದ ಪಕ್ಷ ತೊರೆಯುತ್ತಿರುವ ಕಾಂಗ್ರೆಸ್ ಮುಖಂಡರ ಪಟಲಾಂ ಮತ್ತು ಕುಗ್ಗಿ ಹೋಗಿರುವ ಕಾರ್ಯಕರ್ತರ ನೈತಿಕ ಸ್ಥೈರ್ಯ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿರುವ ಮೊದಲ ಸಮಸ್ಯೆ. ಪಕ್ಷ ಸಂಘಟನೆಗಿಂತಲೂ ಮುಖ್ಯವಾಗಿ ಮಾಡಬೇಕಾಗಿರುವುದು ಮಂಚೂಣಿ ಸಂಘಟನೆಗಳ ಪುನಶ್ಚೇತನ. ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್ ಪದಾಧಿಕಾರಿಗಳನ್ನು ದೂರವಿಟ್ಟು ಕೆಲಸ ಮಾಡುವ ಕಾಯಕ ಪಡೆಯನ್ನು ಸಿದ್ದಪಡಿಸಬೇಕಾಗಿದೆ. ಒಂದು ಹೊಸ ಕಾರ್ಯ ವ್ಯವಸ್ಥೆಯನ್ನು ಜಾರಿಗೆ ತರದಿದ್ದಲ್ಲಿ ದೇಶದ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಹತ್ವದ ಪಾತ್ರ ಇರುವುದಿಲ್ಲ.