ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಬಿಕ್ಕಟ್ಟು ಶಮನಗೊಳಿಸಿ ಒಗ್ಗಟ್ಟು ಮೂಡಿಸುವ ಪ್ರಯತ್ನದಲ್ಲಿ ವಿಫಲವಾದ ಹೈಕಮಾಂಡ್ ಇದೀಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಹುದ್ದೆಗಳ ನೇಮಕ ಸೇರಿದಂತೆ ನಾಯಕತ್ವ ಬದಲಾವಣೆ ವಿಚಾರದಲ್ಲಿ ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಎಂಬ ಯೋಚನೆಗೆ ಬಂದಂತಿದೆ. ಈ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಅಂತಿಮಗೊಂಡರೂ ಕಾರ್ಯಾಧ್ಯಕ್ಷರ ನೇಮಕ, ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಸ್ಥಾನದ ಕುರಿತಂತೆ ತೀರ್ಮಾನ ಕೈಗೊಳ್ಳುವಲ್ಲಿ ಯೋಚಿಸಿ ಹೆಜ್ಜೆ ಇಡುತ್ತಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಅಂತಿಮಗೊಂಡಿದ್ದರೂ ಅಧಿಕೃತ ಘೋಷಣೆ ಇನ್ನೂ ಬಾಕಿ ಉಳಿದಿದೆ.
ರಾಜ್ಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಣ ಮತ್ತು ಹಿರಿಯ ಕಾಂಗ್ರೆಸ್ಸಿಗರು ಎಂಬ ಎರಡು ಗುಂಪುಗಳು ಪರಸ್ಪರ ಕಾಲೆಳೆದುಕೊಳ್ಳುತ್ತಾ ಹುದ್ದೆಗಳಿಗಾಗಿ ಪೈಪೋಟಿ ನಡೆಸುತ್ತಿದ್ದರೆ, ಮೂರನೆಯದ್ದಾಗಿರುವ ತಟಸ್ಥ ಗುಂಪೊಂದು ಎಲ್ಲವನ್ನೂ ನೋಡುತ್ತಾ ಇಬ್ಬರ ಜಗಳದಲ್ಲಿ ಮೂರನೆಯವನಿಗೆ ನ್ಯಾಯ ಎಂಬಂತೆ ತಮಗೇನಾದರೂ ಸಿಗುತ್ತದೋ ಎಂದು ಕಾಯುತ್ತಿದೆ. ಆದರೆ, ಈ ಅನಾರೋಗ್ಯಕರ ಪೈಪೋಟಿಯಿಂದ ಭವಿಷ್ಯದಲ್ಲಿ ಪಕ್ಷದ ಬೆಳವಣಿಗೆಗೆ ಧಕ್ಕೆಯಾಗುತ್ತದೆ ಎಂಬ ಆತಂಕ ಕಾಂಗ್ರೆಸ್ ವರಿಷ್ಠರನ್ನು ಕಾಡುತ್ತಿದ್ದು, ಇದಕ್ಕಾಗಿ ಎಲ್ಲರನ್ನೂ ಸಮಾಧಾನಪಡಿಸುವುದು ಹೇಗೆ ಎಂದು ಯೋಚಿಸಿ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ನೇಮಕ ಬಹುತೇಕ ಅಂತಿಮವಾಗಿದೆ. ಆದರೆ, ಕಾರ್ಯಾಧ್ಯಕ್ಷರ ಹುದ್ದೆ ರಾಜ್ಯ ನಾಯಕರ ಹಗ್ಗ ಜಗ್ಗಾಟದಿಂದ ಇನ್ನೂ ಅಂತಿಮಗೊಂಡಿಲ್ಲ. ಈಗಿರುವಂತೆ ಎರಡು ಕಾರ್ಯಾಧ್ಯಕ್ಷ ಹುದ್ದೆಗಳನ್ನು ಮುಂದುವರಿಸಬೇಕು ಎಂಬುದು ಹೈಕಮಾಂಡ್ ಇಂಗಿತ. ಆದರೆ, ಕೆಪಿಸಿಸಿ ಹುದ್ದೆ ತಾವು ಹೇಳಿದವರಿಗೆ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ನಾಲ್ಕು ವಿಭಾಗಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ನಾಲ್ಕು ಕಾರ್ಯಾಧ್ಯಕ್ಷ ಹುದ್ದೆಗಳನ್ನು ಸೃಷ್ಟಿಸಬೇಕು ಎಂಬ ಬೇಡಿಕೆಯನ್ನು ವರಿಷ್ಠರ ಮುಂದಿಟ್ಟಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಈ ವಾದಕ್ಕೆ ಹಿರಿಯ ಕಾಂಗ್ರೆಸ್ಸಿಗರು, ಅದರಲ್ಲೂ ಮುಖ್ಯವಾಗಿ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ಮುಂತಾದವರು ಒಪ್ಪುತ್ತಿಲ್ಲ.
ಎತ್ತು ಏರಿಗೆ, ಕೋಣ ನೀರಿಗೆ ಎಂಬಂತಾಗಿದೆ ಹುದ್ದೆಗಳ ಪರಿಸ್ಥಿತಿ
ಕೆಪಿಸಿಸಿ ಅಧ್ಯಕ್ಷ ಹುದ್ದೆ ತಮ್ಮ ಬಣದ ಕೈತಪ್ಪಿದ್ದರಿಂದ ಮುಂದೆ ಪಕ್ಷದಲ್ಲಿ ಹಿಡಿತ ಸಾಧಿಸಲು ಕಷ್ಟವಾಗಬಹುದು. ಅದಕ್ಕಾಗಿ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸಿ ಅವರಲ್ಲಿ ಮೂರು ಮಂದಿ ತಮಗೆ ಬೇಕಾದವರನ್ನು ಕೂರಿಸಿದರೆ ಹಿಡಿತ ಬಿಗಿಗೊಳಿಸಲು ಅನುಕೂಲವಾಗುತ್ತದೆ ಎಂಬುದು ಸಿದ್ದರಾಮಯ್ಯ ಅವರ ಇಂಗಿತ. ಈ ಮಧ್ಯೆ ಹೇಗಾದರೂ ಮಾಡಿ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಹಿಡಿತವನ್ನು ಸಡಿಲಗೊಳಿಸಲು ಪ್ರಯತ್ನಿಸುತ್ತಿರುವ ಹಿರಿಯ ಕಾಂಗ್ರೆಸ್ಸಿಗರು ಇದಕ್ಕೆ ಒಪ್ಪುತ್ತಿಲ್ಲ. ಕಾರ್ಯಾಧ್ಯಕ್ಷರ ಹುದ್ದೆ ಹೆಚ್ಚಾದಂತೆ ಬಣ ರಾಜಕಾರಣ ಹೆಚ್ಚಾಗಬಹುದು. ಒಬ್ಬೊಬ್ಬರದ್ದು ಒಂದೊಂದು ದಾರಿಯಾದರೆ ಸಂಘಟನೆಗೆ ಕಷ್ಟವಾಗಬಹುದು ಎಂಬ ವಾದವನ್ನು ಹೈಕಮಾಂಡ್ ನಾಯಕರ ಮುಂದಿಟ್ಟಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಸುತಾರಾಂ ತಮ್ಮ ಯೋಚನೆಯಿಂದ ದೂರ ಬರಲು ನಿರಾಕರಿಸುತ್ತಿದ್ದಾರೆ.
ಸಿದ್ದರಾಮಯ್ಯ ಅವರು ತಮ್ಮ ಪಟ್ಟು ಸಡಿಲಿಸಲು ನಿರಾಕರಿಸುತ್ತಿರುವುದರಿಂದ ಅಸಮಾಧಾನಗೊಂಡಿರುವ ಹಿರಿಯ ಕಾಂಗ್ರೆಸ್ಸಿಗರು ಅವರ ಬುಡಕ್ಕೇ ಪೆಟ್ಟು ನೀಡಲು ಮುಂದಾಗಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರೂ ಹೌದು. ಶಾಸಕಾಂಗ ಪಕ್ಷದ ನಾಯಕರೇ ಪ್ರತಿಪಕ್ಷ ನಾಯಕರಾಗುವುದು ಅಥವಾ ಆಡಳಿತ ಪಕ್ಷದ ನಾಯಕರಾಗುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ಅದರಂತೆ ಸಿದ್ದರಾಮಯ್ಯ ಅವರಿಗೆ ಈ ಎರಡೂ ಹುದ್ದೆಗಳು ಸಿಕ್ಕಿವೆ. ಆದರೆ, ಸಿದ್ದರಾಮಯ್ಯ ಬಲ ಕುಂದಿಸುವ ಉದ್ದೇಶದಿಂದ ಈ ಎರಡು ಹುದ್ದೆಗಳ ಪೈಕಿ ಯಾವುದನ್ನಾದರೂ ಒಂದನ್ನು ಸಿದ್ದರಾಮಯ್ಯ ಅವರಿಗೆ ನೀಡಿ ಇನ್ನೊಂದು ಸ್ಥಾನವನ್ನು ಬೇರೆಯವರಿಗೆ ನೀಡಬೇಕು ಎಂಬ ವಾದವನ್ನು ಹಿರಿಯ ಕಾಂಗ್ರೆಸ್ ನಾಯಕರು ವರಿಷ್ಠರ ಮುಂದಿಟ್ಟಿದ್ದಾರೆ. ಪ್ರತಿಪಕ್ಷ ನಾಯಕ ಮತ್ತು ಶಾಸಕಾಂಗ ಪಕ್ಷದ ನಾಯಕರು ಬೇರೆ ಬೇರೆ ಆಗಿರುವ ಉದಾಹರಣೆಗಳಿವೆ. ಇದರಿಂದ ಯಾವುದೇ ಸಮಸ್ಯೆಗಳಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರು ಒಪ್ಪದೇ ಇದ್ದಲ್ಲಿ ಅವರನ್ನು ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ನೇಮಕ ಮಾಡಿ ಎರಡೂ ಹುದ್ದೆಗಳನ್ನು ವಿಭಜಿಸಿ ಬೇರೆಯವರಿಗೆ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ.
ಆದರೆ, ಸಿದ್ದರಾಮಯ್ಯ ಇದಕ್ಕೆ ಒಪ್ಪುತ್ತಿಲ್ಲ. ಶಾಸಕಾಂಗ ನಾಯಕನ ಹುದ್ದೆ ಕಳೆದುಕೊಂಡರೆ ಶಾಸಕರ ಮೇಲಿನ ಹಿಡಿತ ಕೈತಪ್ಪುತ್ತದೆ. ಪ್ರತಿಪಕ್ಷ ನಾಯಕನ ಹುದ್ದೆ ಹೋದರೆ ವಿಧಾನಸಭೆಯ ಒಳಗೆ ಮತ್ತು ಹೊರಗೆ ಸರ್ಕಾರದ ವಿರುದ್ಧ ಹೋರಾಡುವ ಶಕ್ತಿ ಕಳೆದುಕೊಳ್ಳಬೇಕಾಗುತ್ತದೆ. ಒಟ್ಟಾರೆ ಈ ಎರಡು ಹುದ್ದೆಗಳ ಪೈಕಿ ಒಂದು ಹುದ್ದೆ ಕೈತಪ್ಪಿದರೂ ರಾಜಕೀಯವಾಗಿ ಅದು ಬಾರೀ ಹಿನ್ನಡೆ ತರುತ್ತದೆ ಎಂಬುದು ಸಿದ್ದರಾಮಯ್ಯ ಅವರ ಆತಂಕ. ಹೀಗಾಗಿ ಈ ಎರಡು ಹುದ್ದೆಗಳಿಗೆ ಸಂಬಂಧಿಸಿದಂತೆ ಇದುವರೆಗಿನ ಸಂಪ್ರದಾಯವನ್ನೇ ಮುಂದುವರಿಸಬೇಕು. ನೀಡುವುದಿದ್ದರೆ ಎರಡೂ ಸ್ಥಾನ ನನಗೆ ನೀಡಿ. ಇಲ್ಲದೇ ಇದ್ದರೆ ಯಾವುದೂ ಬೇಡ. ಒಬ್ಬ ಶಾಸಕನಾಗಿ ಮುಂದುವರಿಯುತ್ತೇನೆ. ಅದೇ ರೀತಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ ನನಗೆ ಅವಕಾಶ ಬೇಕಾಗಿಲ್ಲ. ನನ್ನ ಪಾಡಿಗೆ ನನ್ನನ್ನು ಬಿಟ್ಟುಬಿಡಿ ಎಂದು ವರಿಷ್ಠರಿಗೆ ಹೇಳಿಬಂದಿದ್ದಾರೆ.
ಎಲ್ಲರನ್ನೂ ಸಮಾಧಾನಪಡಿಸುವ ಯೋಜನೆ ರೂಪಿಸಲು ಹೈಕಮಾಂಡ್ ಚಿಂತನೆ
ಇವರ ಈ ಆಂತರಿಕ ಕಚ್ಚಾಟವೇ ಹೈಕಮಾಂಡ್ ನಾಯಕರ ನಿದ್ದೆಗೆಡಿಸಿರುವುದು. ಪ್ರಸ್ತುತ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಬಲಾಢ್ಯವಾಗಿರುವುದು ಕರ್ನಾಟಕದಲ್ಲಿ ಮಾತ್ರ. ಈ ರಾಜ್ಯದ ನಾಯಕತ್ವ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ಸ್ವಲ್ಪ ವ್ಯತ್ಯಾಸವಾದರೂ ಪಕ್ಷದ ಬೆಳವಣಿಗೆಗೆ ಅಡ್ಡಿಯಾಗಬಹುದು ಎಂಬ ಆತಂಕ ಅವರನ್ನು ಕಾಡಲಾರಂಭಿಸಿದೆ. ಅದಕ್ಕಾಗಿ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರಿಗೂ ನೋವಾಗಬಾರದು, ಅವರ ವಿರೋಧಿ ಬಣದವರಿಗೂ ಅನ್ಯಾಯವಾಗಬಾರದು. ಎರಡೂ ಕಡೆಯವರಿಗೆ ಸಮಾನ ನ್ಯಾಯ ಸಿಗುವಂತಾಗಬೇಕು ಎಂದು ಯೋಚಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜತೆಗೆ ಈಗಿರುವ ಎರಡು ಕಾರ್ಯಾಧ್ಯಕ್ಷ ಸ್ಥಾನಗಳನ್ನು ಮುಂದುವರಿಸುವುವುದು. ನಾಲ್ಕು ಸ್ಥಾನಗಳನ್ನು ಸೃಷ್ಟಿಸಬೇಕು ಎಂಬ ಸಿದ್ದರಾಮಯ್ಯ ಅವರ ವಾದವನ್ನು ಪಕ್ಕಕ್ಕಿಡಲು ಯೋಚಿಸುತ್ತಿದ್ದಾರೆ. ಇದರಿಂದ ಸಿದ್ದರಾಮಯ್ಯ ಅಸಮಾಧಾನಗೊಳ್ಳಬಹುದಾದರೂ ಅವರನ್ನು ಸಮಾಧಾನಪಡಿಸಲುವ ಉದ್ದೇಶದಿಂದ ಎರಡು ಕಾರ್ಯಾಧ್ಯಕ್ಷ ಹುದ್ದೆಗಳನ್ನು ಸಿದ್ದರಾಮಯ್ಯ ಅವರು ಹೇಳಿದವರಿಗೆ ನೀಡಬೇಕು ಎಂದು ತೀರ್ಮಾನಿಸಿದ್ದಾರೆ.
ಅಂದರೆ, ಇಲ್ಲಿ ಹಿರಿಯ ಕಾಂಗ್ರೆಸ್ಸಿಗರು ಹೇಳಿದಂತೆ ಎರಡು ಕಾರ್ಯಾಧ್ಯಕ್ಷ ಹುದ್ದೆಗಳು ಮಾತ್ರ ಇರುತ್ತವೆಯಾಗಿದ್ದರಿಂದ ಅವರ ಮಾತೂ ನಡೆದಂತಾಗುತ್ತದೆ. ಸಿದ್ದರಾಮಯ್ಯ ಹೇಳಿದವರನ್ನು ಆ ಹುದ್ದೆಗೆ ಆಯ್ಕೆ ಮಾಡಿದರೆ ಅವರೂ ಸುಮ್ಮನಾಗುತ್ತಾರೆ. ಇನ್ನೂ ಕೆಸಿಪಿಪಿ ಅಧ್ಯಕ್ಷ ಸ್ಥಾನ ಹೇಗೂ ಡಿ.ಕೆ.ಶಿವಕುಮಾರ್ ಅವರಿಗೆ ಸಿಗುವುದರಿಂದ ಕೆಲವು ಹಿರಿಯ ಕಾಂಗ್ರೆಸ್ಸಿಗರು ಅಸಮಾಧಾನಗೊಳ್ಳಬಹುದಾದರೂ ಮೂಲ ಕಾಂಗ್ರೆಸ್ಸಿಗರು ಮತ್ತು ಕಾರ್ಯಕರ್ತರಲ್ಲಿ ಹುರುಪು ಬರುತ್ತದೆ. ಇದರಿಂದ ವಿವಾದಕ್ಕೆ ತೆರೆ ಎಳೆಯಬಹುದು ಎಂಬ ಯೋಚನೆಯಲ್ಲಿ ಕಾರ್ಯತಂತ್ರಗಳನ್ನು ಹೆಣೆಯುತ್ತಿದ್ದಾರೆ. ಆದರೂ, ನಾಲ್ವರು ಕಾರ್ಯಾಧ್ಯಕ್ಷರ ಹುದ್ದೆ ಬೇಕು ಎಂಬ ತಮ್ಮ ನಿಲುವಿನಲ್ಲಿ ಸಿದ್ದರಾಮಯ್ಯ ಬದಲಾವಣೆ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ಯಾರ ಮಾತು ನಡೆಯುತ್ತದೆ ಎಂಬುದು ಕಾರ್ಯಾಧ್ಯಕ್ಷ ಹುದ್ದೆಗಳನ್ನು ಅಧಿಕೃತವಾಗಿ ಘೋಷಿಸುವವರೆಗೆ ಗೊತ್ತಾಗುವುದು ಕಷ್ಟಸಾಧ್ಯ.
ಸಿದ್ದರಾಮಯ್ಯ ಸ್ಥಾನಮಾನ ನಿರ್ಧಾರ ಹೈಕಮಾಂಡ್ ಹೆಗಲಿಗೆ
ಈ ಮಧ್ಯೆ ಸಿದ್ದರಾಮಯ್ಯ ಅವರಿಗೆ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಸ್ಥಾನದ ಪೈಕಿ ಒಂದನ್ನು ಮಾತ್ರ ನೀಡಬೇಕು ಎಂದು ಹಿರಿಯ ಕಾಂಗ್ರೆಸ್ಸಿಗರು ಹೈಕಮಾಂಡ್ ಮುಂದೆ ತಮ್ಮ ವಾದ ಮಂಡಿಸಿದ್ದಾರಾದರೂ ಅಂತಿಮ ತೀರ್ಮಾನವನ್ನು ವರಿಷ್ಠರಿಗೇ ಬಿಟ್ಟಿದ್ದಾರೆ. ಸಿದ್ದರಾಮಯ್ಯ ಅವರಿಗೆ ಒಂದು ಸ್ಥಾನ ನೀಡಿ ಇನ್ನೊಂದು ಸ್ಥಾನವನ್ನು ಬೇರೆಯವರಿಗೆ ನೀಡುವುದಾದರೆ ಮೊದಲು ಬರುವ ಹೆಸರು ಕೆಪಿಸಿಸಿ ಮಾಜಿ ಅಧ್ಯಕ್ಷರೂ ಆಗಿರುವ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್. ಆದರೆ, ಪರಮೇಶ್ವರ್ ಅವರ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕರ ಮಧ್ಯೆಯೇ ಒಮ್ಮತವಿಲ್ಲ. ಇನ್ನೊಂದೆಡೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಎರಡು ದ್ರುವಗಳಂತಿದ್ದು, ಇವರಿಬ್ಬರ ಪೈಪೋಟಿಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದು. ಹೀಗಾಗಿ ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತದೋ ಅದನ್ನು ಒಪ್ಪಿಕೊಳ್ಳೋಣ ಎಂದು ಸಿದ್ದರಾಮಯ್ಯ ಅವರನ್ನು ವಿರೋಧಿಸುತ್ತಿರುವ ಹಿರಿಯ ಕಾಂಗ್ರೆಸ್ಸಿಗರ ಒಂದು ಗುಂಪು ತೀರ್ಮಾನಿಸಿದ್ದು, ಪರಮೇಶ್ವರ್ ಪರ ಪ್ರಬಲ ಲಾಬಿ ನಡೆಸುತ್ತಿಲ್ಲ. ಇದು ಸಿದ್ದರಾಮಯ್ಯ ಅವರಿಗೆ ಲಾಭವಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಆದರೆ, ಅದೆಲ್ಲವೂ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವನ್ನು ಅವಲಂಬಿಸಿರುತ್ತದೆ.