ಒಂದು ಶತಮಾನಕ್ಕಿಂತಲೂ ಮೀರಿದ ಇತಿಹಾಸವುಳ್ಳ ಕಾಂಗ್ರೆಸ್, ದೇಶದ ರಾಜಕೀಯ ಕ್ಷಿತಿಜದಿಂದ ಕ್ರಮೇಣ ಮಾಯವಾಗುವ ಪರಿಸ್ಥಿತಿ ಸಮೀಪಿಸುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ, ಒಂದು ಕಾಲದಲ್ಲಿ ಇಡೀ ದೇಶ ವ್ಯಾಪಿಸಿದ್ದ ಕಾಂಗ್ರೆಸಿನ ತಳಹದಿಯು ಪ್ರತಿಯೊಂದು ಚುನಾವಣೆಯಲ್ಲಿಯೂ, ಅದು ಲೋಕಸಭೆಯದಾಗಲೀ, ವಿಧಾನಸಭೆಗಳ ಚುನಾವಣೆಯಲ್ಲಿ ಆಗಲೀ, ಕುಸಿಯುತ್ತಿರುವುದು ಕಾಣಿಸುತ್ತಿದೆ. ರಾಷ್ಟ್ರದ ಯಾವ ಪ್ರಮುಖ ರಾಜ್ಯಗಳೂ, ಉತ್ತರ, ದಕ್ಷಿಣ, ಪೂರ್ವ ಪಶ್ಚಿಮ ದಲ್ಲಾಗಲೀ, ಕಾಂಗ್ರೆಸ್ ಕೈಯಲ್ಲಿ ಇಲ್ಲ.
ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಕಾಲ ಎಂದೋ ಮುಗಿದುಹೋಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ, ಉಳಿದ ಸಣ್ಣ-ಸಣ್ಣ ಪ್ರಾದೇಶಿಕ ಪಕ್ಷಗಳೊಡನೆ ಕೂಡಿ ಕಾಂಗ್ರೆಸ್‌ಗಿದ್ದ ಅವಕಾಶವನ್ನು ಭಾಜಪದ ನರೇಂದ್ರ ಮೋದಿ ಕಸಿದುಕೊಂಡರು. ಈಗ ನಡೆದಿರುವ ಲೋಕಸಭೆ ಚುನಾವಣೆಯಲ್ಲಿಯೂ ಚರಿತ್ರೆ ಮರುಕಳಿಸುವ ಸಾಧ್ಯತೆ ಇದೆ. ಮತಗಳ ಎಣಿಕೆ ಶುರುವಾಗುವ ಮುನ್ನವೇ ರಾಜಕೀಯ ವಿಶ್ಲೇಷಕರು ಕಾಂಗ್ರೆಸ್‌ನ ಕುಸಿಯುತ್ತಿರುವ ಭವಿಷ್ಯ ನುಡಿಯುತ್ತಿದ್ದಾರೆ. 2014ರಲ್ಲಿ ಕಾಂಗ್ರೆಸ್ ಸೋಲು ಎಷ್ಟು ಹೀನಾಯವಾಗಿತ್ತು ಎಂದರೆ, ಅದಕ್ಕೆ ಅಧಿಕೃತವಾಗಿ ವಿರೋಧ ಪಕ್ಷವೆಂದು ಕರೆಸಿಕೊಳ್ಳುವಷ್ಟು ಅಗತ್ಯ ಸ್ಥಾನಗಳೂ ಸಿಗಲಿಲ್ಲ. ಈಗ ಪ್ರಧಾನ ಮಂತ್ರಿ ಸ್ಪರ್ಧಿಸುತ್ತಿರುವ ವಾರಾಣಸಿಯಲ್ಲಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸುತ್ತಾರೆ ಎಂಬ ಸುದ್ದಿಯನ್ನು ಕಾಂಗ್ರೆಸ್ ಹಬ್ಬಿಸಿ, ಈಗ ಅವರ ಬದಲು ಒಬ್ಬ ಅನಾಮಧೇಯನನ್ನು ಕಣಕ್ಕೆ ಇಳಿಸಿದೆ. ಇದು ಭಾಜಪಕ್ಕೆ ಪ್ರಬಲ ಸ್ಪರ್ಧೆ ನೀಡಲು ಕಾಂಗ್ರೆಸಿಗೆ ಇಚ್ಛಾಶಕ್ತಿಯ ಅಭಾವದ ಸೂಚನೆ ಮತ್ತು ಕಣಕ್ಕೆ ಇಳಿಯುವ ಮುನ್ನವೇ ಕಾಂಗ್ರೆಸ್ ಸೋಲು ಒಪ್ಪಿಕೊಂಡಂತೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೆಗ್ಗಳಿಕೆಯುಳ್ಳ ಮಹಾತ್ಮ ಗಾಂದಿ, ಜವಾಹರಲಾಲ್ ನೆಹರು, ಸರದಾರ್ ಪಟೇಲರಂತಹ ಮಹಾ ಮೇಧಾವಿಗಳನ್ನು, ಇಂದಿರಾ ಗಾಂದಿ, ರಾಜೀವ್ ಗಾಂಧಿ, ನರಸಿಂಹರಾವ್ ಮೊದಲಾದಂತಹ ಪ್ರಧಾನಮಂತ್ರಿಗಳನ್ನು ಕೊಟ್ಟು ಸರಕಾರಗಳನ್ನು ನಡೆಸಿದ ಮತ್ತು ಮೊರಾರ್ಜಿ ದೇಸಾಯಿ, ವಾಜಪೇಯಿ, ಲಾಲ್ ಕೃಷ್ಣ ಆಡ್ವಾಣಿ ಅಂಥವರೊಂದಿಗೆ ಸೆಣೆಸಿದ ಕಾಂಗ್ರೆಸಿಗೆ ಈಗ ಏನಾಗಿದೆ? ಕೀಳರಿಮೆ ಕಾಡುತ್ತಿದೆಯೇ? ಪಕ್ಷವು ಎಲ್ಲಿ ದಾರಿ ತಪ್ಪಿದೆ? ಮತ್ತು ತನ್ನ ಕಡು ರಾಜಕೀಯ ವೈರಿ ಮತ್ತು ಪ್ರತಿಸ್ಪರ್ಧಿ ಎಂದು ಕೆಲವಾರು ವರ್ಷಗಳಿಂದ ಎಣಿಸಿದ ಭಾಜಪವು ಜನರ ವಿಶ್ವಾಸ ಗಳಿಸಿ, ಅಧಿಕಾರದತ್ತ ದಾಪುಗಾಲು ಹಾಕುತ್ತಿದ್ದರೆ, ಕಾಂಗ್ರೆಸ್ ಬಗ್ಗೆ ಏಕೆ ಜನಕ್ಕೆ ವಿಶ್ವಾಸ ಕಡಿಮೆಯಾಗುತ್ತಿದೆ? ಮುಂತಾದ ಪ್ರಶ್ನೆಗಳು ಉದ್ಭವವಾಗಿವೆ.
ಸ್ವಾತಂತ್ರ ಬರುವುದಕ್ಕಿಂತ ಮುನ್ನ ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ, ಒಂದು ಹೊಸ ಪಕ್ಷ ಕಟ್ಟಲು ಕೊಟ್ಟ ಸಲಹೆಯನ್ನು ಅಲಕ್ಷಿಸಿ, ಅಪ್ಪ ಜವಹರಲಾಲ್, ಮಗಳು ಇಂದಿರಾ ಗಾಂಧಿ ಮತ್ತು ಮೊಮ್ಮಗ ರಾಜೀವ್ ಗಾಂಧಿಯವರು ಚುಕ್ಕಾಣಿ ಹಿಡಿದ ಕಾಂಗ್ರೆಸ್, ಅವರ ಮರಿಮೊಮ್ಮಗ ರಾಹುಲ್ ಗಾಂಧಿಯವರ ಕಾಲದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ರಾಜೀವ್ ಗಾಂಧಿಯವರು ಮುಂಬಯಿಯಲ್ಲಿ ನಡೆದ ಕಾಂಗ್ರೆಸಿನ ಶತಮಾನೋತ್ಸವದಲ್ಲಿ ಮಾಡಿದ ಭಾಷಣದಲ್ಲಿ ಕಾಣಿಸಿದ ಉಜ್ವಲ ಭವಿಷ್ಯದ ಕನಸು ಈಗ ಹುಸಿಯಾಗುವಂತೆ ಕಾಣುತ್ತಿದೆ.
ಹಳೆ ತಲೆಮಾರಿನ ಕಾಂಗ್ರೆಸ್ಸಿಗರ ಪ್ರಕಾರ, ಮೊದಲಿನಿಂದಲೂ ಕಾಂಗ್ರೆಸ್, ಕಾಯಕರ್ತರ ಶ್ರೇಣಿಯ ಬಲದ ಮೇಲೆ ಬೆಳೆದ ಪಕ್ಷ. ಈಗ ಹಾಗಿಲ್ಲ. ಮೊದಲಿನ ದಿವಸಗಳಲ್ಲಿ, ಕಾರ್ಯಕರ್ತರಲ್ಲಿ ಎರಡು ಮುಖ್ಯ ಶ್ರೇಣಿಗಳಿದ್ದವು. ನಾಲ್ಕಾಣೆ (25 ಪೈಸೆ) ವಂತಿಗೆ ನೀಡಿದವರು ಸಾಮಾನ್ಯ ಕಾರ್ಯಕರ್ತರು ಮತ್ತು 11 ನಾಲ್ಕಾಣೆ (1.25 ಪೈಸೆ) ವಂತಿಗೆ ಕೊಟ್ಟ ಸಕ್ರಿಯ ಸದಸ್ಯರು. ಪಕ್ಷದ ಸ್ಥಾನ-ಮಾನ, ತಾಲೂಕು ಜಿಲ್ಲಾ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯತ್ವ, ಚುನಾವಣೆ ಪಕ್ಷದ ವತಿಯಿಂದ ಸ್ಪರ್ಧಿಸುವ ಅವಕಾಶವೆಲ್ಲ ಸಕ್ರಿಯ ಕಾರ್ಯಕರ್ತರಿಗೆ ಮೀಸಲು. ತಾಲೂಕು, ಜಿಲ್ಲಾ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳನ್ನು ಒಳಗೊಂಡ ಎಲ್ಲ ಸ್ಥಾನಗಳಿಗೂ ಸಾಂಘಿಕ ಚುನಾವಣೆ ಕಡ್ಡಾಯ, ಇತರರಿಗೆ ಅಲ್ಲ. ಕಾಂಗ್ರೆಸಿನಲ್ಲಿ ಏನಾದರೂ ಮಾಡಬೇಕೆಂದು ಇಚ್ಛಿಸುವವರು ಸಕ್ರೀಯ ಸದಸ್ಯರಾಗಿ ಪಕ್ಷದ ಕಾರ್ಯ ಮಾಡಬೇಕಾದುದು ಅನಿವಾರ್ಯ.
ಇದಲ್ಲದೆ, ಪಕ್ಷದಲ್ಲಿನ ಎಲ್ಲರೂ, ಮುುಖ್ಯಮಂತ್ರಿ, ಮಂತ್ರಿ, ಸಂಸದರು, ಶಾಸಕರು ಪಕ್ಷದ ಶಿಸ್ತಿನ ಚೌಕಟ್ಟಿನೊಳಗೆ ಕೆಲಸ ಮಾಡಬೇಕು, ಇದಕ್ಕೆ ಯಾರೂ ಅಪವಾದವಿರಲಿಲ್ಲ. ಪ್ರವಾಸದ ಮೇಲೆ ಬಂದ ಮಂತ್ರಿಗಳು, ಮುಖ್ಯಮಂತ್ರಿಗಳು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವುದು, ಕಾರ್ಯಕರ್ತರ ಜೊತೆಗೆ ಚರ್ಚಿಸುವುದು, ವಿಚಾರ ವಿನಿಮಯ ಮಾಡುವುದೂ ಕಡ್ಡಾಯ. ಅವರ ಅನುಮತಿ ಇಲ್ಲದೆ ಯಾವ ಕಾರ್ಯಕ್ರಮದಲ್ಲಿಯೂ ಭಾಗವಹಿಸುವಂತಿಲ್ಲ. ಎಲ್ಲಿಗೂ ಹೋಗುವಂತಿರಲಿಲ್ಲ. ಅಂದಿನ ಮುಂಬಯಿ ಪ್ರಾಂತ್ಯದ ಮುಖ್ಯಮಂತ್ರಿಗಳಾದ, ಶಿಸ್ತಿಗೆ ಹೆಸರಾಗಿದ್ದ ಮೊರಾರ್ಜಿ ದೇಸಾಯಿಯವರೂ ಸ್ಥಳೀಯ ಕಾಂಗ್ರೆಸ್ ಸಮಿತಿಯ ಅನುಮತಿ ಇರದ ಕಾರ್ಯಕ್ರಮಗಳಲ್ಲಿ ಮುಂಬಯಿ ಕನಾಟಕದ ಪ್ರದೇಶಗಳಲ್ಲಿ ಭಾಗವಹಿಸದಿರುವ ಅನೇಕ ನಿದರ್ಶನಗಳಿವೆ. ಕರ್ನಾಟಕವಾದ ಮೇಲೆ ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿರುವಾಗ, ಅವರ ಜಿಲ್ಲಾ ಪ್ರವಾಸದ ಸಮಯದಲ್ಲಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಅವರ ಜೊತೆ ಕಾರಿನಲ್ಲಿ ಸಂಚರಿಸುತ್ತಿದ್ದರು. ಹೀಗಾಗಿ, ಪಕ್ಷದ ಕಾರ್ಯಕರ್ತರಿಗೆ ಒಂದು ಮಾನ್ಯತೆ, ಘನತೆ, ಗೌರವಗಳು ಇರುತ್ತಿದ್ದವು. ಜಿಲ್ಲಾ ಸಮಿತಿ ಅಧ್ಯಕ್ಷರ ಮಾತಿಗೆ ಮಂತ್ರಿಗಳ ಮಾತಿನಷ್ಟೇ ಮರ್ಯಾದೆ ಇರುತ್ತಿತ್ತು.
ಕಾಂಗ್ರೆಸಿನ ಹೆಚ್ಚುಗಾರಿಕೆ ಎಂದರೆ, ಅದಕ್ಕೆ ಎಲ್ಲ ಹಂತದಲ್ಲಿದ್ದ ಸಾಂಘಿಕ ಶಕ್ತಿ. ಇದು ಇದ್ದುದರಿಂದ ಶಾಸಕರ ಮತ್ತು ಸಂಸದರ ಚುನಾವಣೆಗಳಿಗೆ ಹೆಚ್ಚಿನ ವೆಚ್ಚವಾಗುತ್ತಿರಲಿಲ್ಲ. ಆಯಾ ಕಾರ್ಯಕರ್ತರು ತಮ್ಮ-ತಮ್ಮ ಕ್ಷೇತ್ರಗಳಲ್ಲಿ ತಮ್ಮ-ತಮ್ಮ ಕೆಲಸ ಮಾಡುತ್ತಿದುದರಿಂದ ಹೆಚ್ಚಿನ ಹಣ ಖರ್ಚಾಗದೆ, ಎಷ್ಟೋ ಸಂದರ್ಭಗಳಲ್ಲಿ ಪಕ್ಷದ ಅಭ್ಯರ್ಥಿಗಳು ತಮಗೆ ಪಕ್ಷವು ಚುನಾವಣೆ ವೆಚ್ಚಕ್ಕೆಂದು ಕೊಟ್ಟ ಹಣದಲ್ಲಿ ಉಳಿಯಿತೆಂದು ಹಣವನ್ನು ವಾಪಸು ಕಳಿಸಿದ ಉದಾಹರಣೆಗಳೂ ಇದ್ದವು. ತಮ್ಮ-ತಮ್ಮ ರಾಜ್ಯಗಳಲ್ಲಿ, ಪಕ್ಷದ ಯೋಗಕ್ಷೇಮ ನಿರ್ವಹಿಸಲು ಸಮರ್ಥರಾದ ಪ್ರದೇಶ ಕಾಂಗ್ರೆಸ್ ಅದ್ಯಕ್ಷರುಗಳೇ ಪಕ್ಷದ ವರಿಷ್ಠ ಮಂಡಳಿಯಲ್ಲಿ ಇರುತ್ತಿದ್ದರು. ಉದಾಹರಣೆಗೆ, ಜಿ.ಬಿ.ಪಂತ್, ಚಂದ್ರ ಭಾನು ಗುಪ್ತಾ (ಉತ್ತರ ಪ್ರದೇಶ), ಬಿ.ಪಿ.ಚಾಲಿಹ (ಅಸ್ಸಾಂ), ಬಿ.ಸಿ.ರಾಯ್ (ಪ.ಬಂಗಾಳ). ರವಿ ಶಂಕರ ಶುಕ್ಲಾ (ಮಧ್ಯ ಪ್ರದೇಶ), ಕಾಮರಾಜ ನಾಡಾರ್ (ತಮಿಳುನಾಡು), ನಿಜಲಿಂಗಪ್ಪ (ಕರ್ನಾಟಕ). ಸಂಜೀವ ರೆಡ್ಡಿ (ಆಂಧ್ರ ಪ್ರದೇಶ). ಎಸ್.ಕೆ.ಪಾಟೀಲ (ಮಹಾರಾಷ್ಟ್ರ) ಮೊದಲಾದವರು. ತಮ್ಮ-ತಮ್ಮ ಪ್ರದೇಶದಲ್ಲಿ ಸಮಸ್ಯೆಗಳನ್ನು ಸರಿಪಡಿಸುವ ಸಾಮರ್ಥ್ಯವಿದ್ದುದರಿಂದ ಹೈಕಮಾಂಡ್ ಅದರ ಸಣ್ಣ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿರಲಿಲ್ಲ.
ಇದೆಲ್ಲವೂ ಬುಡಮೇಲಾದದ್ದು ಅರವತ್ತರ ದಶಕದ ಕೊನೆಯ ಭಾಗದಲ್ಲಿ. ಆಗ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿ ಮತ್ತು ಅವರ ಕೋರಿಕೆಯ ಮೇಲೆ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪನವರು ಅಖಲ ಭಾರತ ಕಾಂಗ್ರೆಸಿನ ಅಧ್ಯಕ್ಷರೆಂದು ದಿಲ್ಲಿಯಲ್ಲಿ ಜವಾಬ್ದಾರಿ ವಹಿಸಿಕೊಂಡಿದ್ದರು. ಆಗ ಕಾರಣಾಂತರಗಳಿಂದ ಕಾಂಗ್ರೆಸಿನಲ್ಲಿ ಹೊಸಬರ ಮತ್ತು ಹಳಬರ ಒಳಗಿನ ಜಗಳ ತಾರಕಕ್ಕೆ ಏರಿ, ಸಾಂಘಿಕ ಶಕ್ತಿ ಮತ್ತು ಅಧಿಕಾರದಲ್ಲಿರುವವರ ನಡುವೆ ತಿಕ್ಕಾಟ ಶುರುವಾಗಿ ಕಾಂಗ್ರೆಸ್ ಹೋಳಾಯಿತು. ವರಿಷ್ಠ ಮಂಡಲದಲ್ಲಿದ್ದ ಹಿರಿಯರು ತಮಗೆ ರಾಜಕೀಯವಾಗಿ ಸ್ಪಂದಿಸುವುದಿಲ್ಲ ಎಂದು ಭಾವಿಸಿದ ಇಂದಿರಾ ಗಾಂಧಿಯವರು, ಪಕ್ಷದಿಂದ ಹೊರನಡೆದು ತಮ್ಮದೇ ಆದ ಕಾಂಗ್ರೆಸ್ (ಅಧಿಕಾರರೂಢ) ಪಕ್ಷವನ್ನು ತಮ್ಮ ಬೆಂಬಲಿಗರೊಂದಿಗೆ ಹುಟ್ಟುಹಾಕಿದರು. ಸಂಘಟನೆಯು ಪಕ್ಷದ ವರಿಷ್ಠರ ಜೊತೆಗೆ ಉಳಿದು , ಕಾಂಗ್ರೆಸ್ (ಸಂಸ್ಥಾ) ಎಂದು ಹೆಸರಾಯಿತು. ಅಧಿಕಾರವಿದ್ದ ಕಾಂಗ್ರೆಸ್‌ಗೆ (ಆ) ಸಾಂಘಿಕ ಶಕ್ತಿ ಇರಲಿಲ್ಲ. ಸಾಂಘಿಕ ಶಕ್ತಿ ಇದ್ದ ಸಂಸ್ಥಾ ಕಾಂಗ್ರೆಸಿಗೆ ಕರ್ನಾಟಕ ಮತ್ತು ಗುಜರಾತ್ ಹೊರತು ಅಧಿಕಾರವಿರಲಿಲ್ಲ. ಈ ಪರಿಸ್ಥಿತಿಯೂ ಬಹಳ ದಿವಸವಿರದೆ ಕಾಂಗ್ರೆಸ್ (ಸಂ) ಇತಿಹಾಸ ಪುಟ ಸೇರಿತು.
ಹೊಸ ಪಕ್ಷ ಕಟ್ಟುವ ಹುಮ್ಮಸ್ಸಿನಲ್ಲಿ ಇದ್ದ ಇಂದಿರಾ ಗಾಂಧಿಯವರಿಗೆ ಕಂಡ-ಕಂಡ ಹೊಸಬರನ್ನು ಪಕ್ಷಕ್ಕೆ ಸೇರಿಸಿಕೊಂಡು ನೇಮಕ ಮಾಡಿಕೊಳ್ಳುವುದು ಅನಿವಾರ್ಯವಾಯಿತು. ಪಕ್ಷವನ್ನು ಭದ್ರ ಬುನಾದಿಯ ಮೇಲೆ ಕಟ್ಟಲು ರಾಜಕಿಯ ಒತ್ತಡಗಳಿಂದಾಗಿ ಅವರಿಗೆ ಆಗಲಿಲ್ಲ. ವೇಳೆಯೂ ಇರಲಿಲ್ಲ. ತಮಗೆ ಅಗತ್ಯವಿದ್ದವರನ್ನು ಆಯಾ ಸ್ಥಾನಗಳಲ್ಲಿ ನಾಮಕರಣದ ಮೂಲಕ ನೇಮಿಸಿ ಕೆಲಸ ನಡೆಸಿದರು. ಮೊದಲಿನ ದಿನದ ಅಗತ್ಯತೆ ನಂತರ ಅನಿವಾರ್ಯವಾಗಿ ಅದನ್ನು ದಿಲ್ಲಿಯ ಮಟ್ಟದಲ್ಲಿ ವಿಚಾರ ಮಾಡಿ ನಾಮಕರಣಗಳ ಮೂಲಕ ತುಂಬಲಾಯಿತು. ಏಕೆಂದರೆ, ಸಾಂಘಿಕ ಚುನಾವಣೆಗಳೇ ನಡೆಯಲಿಲ್ಲ. ಬ್ಲಾಕ್, ಜಿಲ್ಲಾ, ಪ್ರದೇಶ ಮಟ್ಚದಲ್ಲಿ ಚುನಾವಣೆಗಳು ನಡೆಯಲಿಲ್ಲ. ಸದಸ್ಯತ್ವದ ಅಭಿಯಾನವೂ ಬಹುಮಟ್ಟಿಗೆ ನಡೆಯಲೇ ಇಲ್ಲ. ಹೀಗಾಗಿ, ಪಕ್ಷದಲ್ಲಿ ಶ್ರೇಣಿಗಳು ಮಾಯವಾದವು. ಕಾರ್ಯಕರ್ತರು ಮತ್ತು ನಾಮಕರಣಗೊಂಡ ಪದಾಧಿಕಾರಿಗಳ ನಡುವೆ ಸಂಪರ್ಕ ಕಡೆದುಹೋಯಿತು. ಪಕ್ಷಕ್ಕೆ ಸೇವೆ ಮಾಡಿದವರಿಗೆ ಪಾರ್ಟಿ ಟಿಕೆಟ್, ಮನ್ನಣೆ ಎನ್ನುವುದೂ ನೇಪಥ್ಯಕ್ಕೆ ಸರಿದುದರಿಂದ ಪಕ್ಷದ ಘನತೆ, ಗೌರವ, ಮರ್ಯಾದೆಯೂ ಕಡಿಮೆಯಾಯಿತು. ಪಕ್ಷ-ಕಾರ್ಯಕರ್ತರ ನಡುವಿನ ಕೊಂಡಿ ಕಳಚಿತು. ಯಾರು ಬೇಕಾದರೂ, ಯಾವುದಾದರೂ ಸ್ಥಾನವನ್ನು ಈ ಪರಿಸ್ಥಿತಿಯಲ್ಲಿ ಪಡೆಯಬಹುದು.
ಜಿಲ್ಲಾ ಕಾಂಗ್ರೆಸ್ ಸಮಿತಿ, ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಯಾರು ಇರಬೇಕು ಇರುತ್ತಾರೆ ಎನ್ನುವುದು ಹೊಸದಿಲ್ಲಿಯಲ್ಲಿ ಗೊತ್ತಾಗುತ್ತದೆಯೇ ಹೊರತು, ಸ್ಥಳೀಯ ಧುರೀಣರಿಗೆ ಅದರ ಗಂಧವೂ ಗಾಳಿಯೂ ಗೊತ್ತಿರದಿರುವ ಪರಿಸ್ಥತಿ ಈಗ ಬಂದೊದಗಿದೆ. ತನ್ನದೇ ಸರಕಾರ ಇರುವಾಗಲೂ, ಪ್ರದೇಶ ಕಾಂಗ್ರೆಸ್ ಸಮಿತಿಯ ಆದ್ಯಕ್ಷರು, ಮುಖ್ಯಮಂತ್ರಿಯ ಮರ್ಜಿಯನ್ನು, ಜಿಲ್ಲಾ ಸಮಿತಿಯ ಆಧ್ಯಕ್ಷರು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮರ್ಜಿಯನ್ನು ಅನುಸರಿಸಿ ನಡೆಯಬೇಕು. ಎಷ್ಟೋ ಕಡೆ ಜಿಲ್ಲಾ ಸಮಿತಿಯ ಕಚೇರಿ ಎಲ್ಲಿದೆ ಎನ್ನುವುದು ಗೊತ್ತೇ ಇಲ್ಲ. ಯಾವ ಪುರುಷಾರ್ಥಕ್ಕಾಗಿ ಪಕ್ಷಕ್ಕೆ ದುಡಿಯಬೇಕು, ಕೆಲಸ ಮಾಡಬೇಕು ಎನ್ನುವುದೇ ಈಗಿರುವ ಕಾರ್ಯಕರ್ತರ ಮನಸ್ಸು ಕೊರೆಯುತ್ತಿರುವ ಪ್ರಶ್ನೆಗಳಾಗಿವೆ. ಅದಕ್ಕೆ ಉತ್ತರ, ಪರಿಹಾರ ಕೊಡುವವರು ಯಾರು? ಅದನ್ನು ಕೊಡುವತನಕ ಪಕ್ಷದ ಅವನತಿಯನ್ನು ತಡೆಯುವುದು ಹೇಗೆ ಎನ್ನುವುದೇ ಈಗಿನ ಯಕ್ಷಪ್ರಶ್ನೆ.
ಅಂಕಣಕಾರರು ಹಿರಿಯ ಪತ್ರಕರ್ತರು