1980 ನೇ ವರ್ಷ. ರಾಜ್ಯದಲ್ಲಿ ಗುಂಡೂರಾವ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತ. ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಹರಿಯುವ ಮಲಪ್ರಭೆ ನದಿ ತೀರದ ರೈತರ ಹೊಲಗಳಿಗೆ ನೀರು ಹರಿಯದಿದ್ದರೂ ಸರಕಾರ ಬೆಟರ್ ಮೆಂಟ್ ಲೇವ್ಹಿ ವಸೂಲು ಮಾಡಲು ಮುಂದಾದಾಗ ರೈತರು ಸಿಡಿದೆದ್ದು ಹೋರಾಟ ನಡೆಸಿದ್ದು ಇತಿಹಾಸ. ಆಗ ವಿಧಾನಸಭೆಯಲ್ಲಿ ವಿರೋಧಿ ಧುರೀಣರಾಗಿದ್ದ,ರಾಯ್ ವಾದಿ ಎಸ್. ಆರ್. ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರಕಾರ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯಲ್ಲಿ ಅಂದಿನ ರೋಣ ಶಾಸಕ ವೀರಣ್ಣ ಮತ್ತಿಕಟ್ಟಿ, ಸವದತ್ತಿ ಶಾಸಕ ಜಿ. ಕೆ. ಟಕ್ಕೇದ ಸಹ ಇದ್ದರು.
ಬೊಮ್ಮಾಯಿಯವರ ಸಮಿತಿಯ ಜೊತೆಗೆ ಮಲಪ್ರಭಾ ತೀರದ ಊರು, ಗ್ರಾಮಗಳಿಗೆ ಸುತ್ತಿದ 19 ವರ್ಷ ವಯಸ್ಸಿನ ಎಳೆಯದ ಪತ್ರಕರ್ತ ನಾನು! ಕಳಸಾ ಬಂಡೂರಿ ಹಳ್ಳಗಳ ನೀರನ್ನು ಮಲಪ್ರಭೆಗೆ ತಿರುಗಿಸಲು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದ್ದೇ ಬೊಮ್ಮಾಯಿಯವರ ಸಮಿತಿ.
ಇಲ್ಲಿಂದ ಆರಂಭವಾದ ” ಯೋಜನೆಯ ಪ್ರಯಾಣ” ಇನ್ನೂ ನಿಂತಿಲ್ಲ. ಅಂದಿನ ಕಾಂಗ್ರೆಸ್ ಸರಕಾರ ಇತರ ಶಿಫಾರಸುಗಳಂತೆ ಬೊಮ್ಮಾಯಿ ಶಿಫಾರಸನ್ನೂ ಕಪಾಟಿನಲ್ಲಿ ಇರಿಸಿತು. 1983 ರಲ್ಲಿ ಅಧಿಕಾರಕ್ಕೆ ಬಂದ ಪ್ರಥಮ ಕಾಂಗ್ರೆಸ್ಸೇತರ, ಹೆಗಡೆ ನೇತೃತ್ವದ ಜನತಾ ಪಕ್ಷದ ಸರಕಾರವೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. 1988 ರಲ್ಲಿ ನಡೆದ ರಾಜಕೀಯ ಏರಿಳಿತದಿಂದಾಗಿ ಮುಖ್ಯಮಂತ್ರಿಯಾದ ಎಸ್. ಆರ್. ಬೊಮ್ಮಾಯಿಯವರೇ ತಿರುವು ಯೋಜನೆಗೆ ಚಾಲನೆ ಕೊಟ್ಟರು. ಗೋವೆ ಸರಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಮಹತ್ವದ ಹೆಜ್ಜೆಯನ್ನಿಟ್ಟರು. ಆದರೆ ಬೊಮ್ಮಾಯಿಯವರ ಸರಕಾರ ಬಹಳ ಕಾಲ ಉಳಿಯಲಿಲ್ಲ. ಯೋಜನೆಯ ಅನುಷ್ಠಾನ ಮತ್ತೆ ನೆನೆಗುದಿಗೆ ಬಿತ್ತು.

1999 ರಲ್ಲಿ ರಾಜ್ಯದಲ್ಲಿ ಎಸ್. ಎಂ. ಕೃಷ್ಣ ಸರಕಾರ ಅಧಿಕಾರಕ್ಕೆ. 2002 ರಲ್ಲಿ ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್. ಡಿ. ಎ. ಸರಕಾರ. ತಿರುವು ಯೋಜನೆಗೆ ಅನುಮತಿ ಸಿಕ್ಕಿತು. ಆದರೆ ಅನುಷ್ಠಾನವು ನಿರೀಕ್ಷಿತ ವೇಗದಲ್ಲಿ ಸಾಗಲಿಲ್ಲ. ಅಷ್ಟರಲ್ಲಿ ಗೋವೆ ಸರಕಾರ ಅಪಸ್ವರ ತೆಗೆಯಲು ಆರಂಭಿಸಿತು. ಪರಿಸರದ ನೆಪದಲ್ಲಿ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿತು. 2010 ರಲ್ಲಿ ಕೇಂದ್ರ ಸರಕಾರ ನ್ಯಾ. ಮೂ. ಜೆ. ಎಮ್. ಪಾಂಚಾಲರ ನೇತೃತ್ವದಲ್ಲಿ ಮೂವರು ಸದಸ್ಯರ ಮಹಾದಾಯಿ ನ್ಯಾಯಮಂಡಳಿಯನ್ನು ರಚಿಸಿತು. ಅಲ್ಲಿಗೆ ಮಾತುಕತೆಯಿಂದ ಬಗೆಹರಿಯಬೇಕಾದ ವಿವಾದ ಕುಂಟುತ್ತ ಸಾಗಿತು.
2003/ 04 ರಲ್ಲಿ ಕಳಸಾ ಬಂಡೂರಾ ಯೋಜನೆಯ ಬಗ್ಗೆ ಹಾಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಾನು ಸಹಿತ ಅನೇಕರು ಸೇರಿ ಜನಜಾಗೃತಿ ಆಂದೋಲನ ನಡೆಸಿದೆವು. ತಾಲೂಕಾ ಕೇಂದ್ರಗಳಲ್ಲಿ,ಹಳ್ಳಿಗಳಲ್ಲಿ, ಸಂತೆ ಪೇಟೆಗಳಲ್ಲಿ ನಾವೆಲ್ಲ ಕರಪತ್ರ ಹಂಚಿ, ಬೀದಿ ಭಾಷಣ ಮಾಡಿದೆವು. ಖಾನಾಪುರ ಬಳಿಯ ಕಳಸಾ ಹಳ್ಳಕ್ಕೆ ಹೋಗಿ ವಸ್ತು ಸ್ಥಿತಿಯ ಅಧ್ಯಯನ ನಡೆಸಿದ್ದಲ್ಲದೇ ಯೋಜನೆಯ ಅನುಷ್ಠಾನದ ಪ್ರಯೋಜನೆಗಳ ಬಗ್ಗೆ ತಿಳುವಳಿಕೆ ನೀಡಿದೆವು.
ಬಸವರಾಜ ಬೊಮ್ಮಾಯಿಯವರು ಹೋರಾಟದ ರಾಜ್ಯ ಸಂಚಾಲಕರಾದರೆ ನಾನು ಬೆಳಗಾವಿ ಜಿಲ್ಲಾ ಸಂಚಾಲಕನಾಗಿ ಕೆಲಸ ಮಾಡಿದೆವು. 2010 ರಲ್ಲಿ ಟ್ರಿಬ್ಯುನಲ್ ರಚನೆಯಾಗಿ 2016 ರ ಜುಲೈ 28 ರಂದು ಮಧ್ಯಂತರ ಆದೇಶ ಬಂದಾಗ ನಮ್ಮ 7.56 ಟಿ ಎಮ್ ಸಿ ಕುಡಿಯುವ ನೀರಿನ ಬೇಡಿಕೆ ತಿರಸ್ಕಾರಗೊಂಡಿತು. ರೈತರ ಕಿಚ್ಚು ರೊಚ್ಚು ಹೆಚ್ಚಿತು. ಮತ್ತೆ ಹೋರಾಟದ ಹಾದಿ ಅನಿವಾರ್ಯವಾಯಿತು.

ಕಳೆದ 2018 ರ ಫೆಬ್ರುವರಿಯಲ್ಲಿ ಅಂತಿಮ ವಿಚಾರಣೆ ಪ್ರತಿದಿನವೂ ದಿಲ್ಲಿಯಲ್ಲಿ ನಡೆಯಿತು. ಕೊನೆಗೆ, 2018 ರ ಆಗಸ್ಟ್ 14 ರಂದು ತೀರ್ಪು ಹೊರಬಿತ್ತು. ಕರ್ನಾಟಕ ಕೇಳಿದ್ದ 36 ಟಿ ಎಮ್ ಸಿ ಪೈಕಿ 13.5 ಟಿ ಎಮ್ ಸಿ ಹಂಚಿಕೆಯಾಯಿತು. ಈಗಾಗಲೇ 9 ಟಿ ಎಮ್ ಸಿ ಬಳಸುತ್ತಿರುವ ಗೋವೆಗೆ 24 ಟಿ ಎಮ್ ಸಿ ಸಿಕ್ಕಿದೆ. ಮಹಾರಾಷ್ಟ್ರಕ್ಕೆ 1.33 ದೊರಕಿದೆ. ಕಳಸಾ ನಾಲೆಯಿಂದ 1.12 ಟಿ ಎಮ್ ಸಿ ಹಾಗೂ ಬಂಡೂರಾದಿಂದ 2.18 ಟಿ ಎಮ್ ಸಿ ಕರ್ನಾಟಕಕ್ಕೆ ಕುಡಿಯುವದಕ್ಕಾಗಿ ಹಂಚಿಕೆಯಾಗಿದೆ. 8.02 ಟಿ ಎಮ್ ಸಿ ನೀರು ವಿದ್ಯುತ್ ಉತ್ಪಾದನೆಗಾಗಿ ಕೊಡಲಾಗಿದೆ. ಮಹಾದಾಯಿ ನದಿಯಲ್ಲಿ ಒಟ್ಟು 188 ಟಿ ಎಮ್ ಸಿ ನೀರಿದೆಯೆಂಬ ತೀರ್ಮಾನಕ್ಕೆ ಮಹಾದಾಯಿ ಟ್ರಿಬ್ಯುನಲ್ ಬಂದಿದೆ. ಆದರೆ ಸದ್ಯ ಇನ್ನೂ 147.935 ಟಿ ಎಮ್ ಸಿ ಅಲಾಟ್ ಆಗಬೇಕಾಗಿದೆ. ಟ್ರಿಬ್ಯುನಲ್ ತೀರ್ಪನ್ನು ಪ್ರಶ್ನಿಸಿ ಗೋವೆ ಮತ್ತು ಕರ್ನಾಟಕ ಎರಡೂ ಸುಪ್ರೀಮ್ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿವೆ.

ಈಗ ಕೇಂದ್ರದಲ್ಲಿ ಹಾಗೂ ಕರ್ನಾಟಕ, ಗೋವೆ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಆಡಳಿತವಿರುವಾಗ ನ್ಯಾಯಾಲಯದ ಹೊರಗೆ ವಿವಾದವನ್ನು ಏಕೆ ಇತ್ಯರ್ಥ ಮಾಡಬಾರದು ಎಂಬುದು ನೀರಾವರಿ ಹೋರಾಟಗಾರರ ಪ್ರಶ್ನೆ.ಇದು ಸಹಜವೂ ಕೂಡ. ಈ ಹಿನ್ನೆಲೆಯಲ್ಲಿ ಕೇಂದ್ರ ಸಂಸದಿಯ ಖಾತೆಯ ಸಚಿವ ಪ್ರಹ್ಲಾದ ಜೋಶಿ ಅವರೂ ಆಸಕ್ತಿ ವಹಿಸಿದ್ದಾರೆ. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಇದೇ ಶನಿವಾರ ಸಪ್ಟೆಂಬರ್ 14 ರಂದು ಗೋವೆಯ ರಾಜಧಾನಿ ಪಣಜಿಯಲ್ಲಿ ಅಲ್ಲಿಯ ಮುಖ್ಯಮಂತ್ರಿ ಸಾವಂತ ಅವರ ಜೊತೆಗೆ ಮಾತುಕತೆ ನಡೆಸಲಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಈಗ ಗೋವೆಯ ಕಾಂಗ್ರೆಸ್ ನಾಯಕರು ಈ ಮಾತುಕತೆಗೆ ತೀವ್ರ ತಕರಾರು ತೆಗೆದಿದ್ದಾರೆ. ಗೋವೆಯ ಹಿತವನ್ನು ಬಲಿಕೊಟ್ಟು ಕರ್ನಾಟಕದ ಮುಖ್ಯಮಂತ್ರಿ ಜೊತೆಗೆ ಹೇಗೆ ಮಾತುಕತೆ ಮಾಡುತ್ತೀರಿ ಎಂದು ಬೊಬ್ಬೆ ಹಾಕುತ್ತಿದ್ದು ಗೋವೆಯ ದಿನಪತ್ರಿಕೆಗಳಿಗೆ ಇದು ದೊಡ್ಡ ಸುದ್ದಿ!
ಈ ವಿವಾದ ಸುಪ್ರೀಂ ಕೋರ್ಟಿನಲ್ಲೇ ಬಗೆಹರಿಯಲಿ ಎಂಬುದು ಗೋವೆಯ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ವಾದ. ಕಾವೇರಿ ಟ್ರಿಬ್ಯುನಲ್ 2007 ರಲ್ಲಿ ತೀರ್ಪು ನೀಡಿದಾಗ ಸುಪ್ರೀಮ್ ಕೋರ್ಟಿನಲ್ಲಿ ವಿಚಾರಣೆ ನಡೆದು ತೀರ್ಪು ಹೊರಬಂದಿದ್ದು 2014 ರಲ್ಲಿ! ಮಹಾದಾಯಿ ವಿಷಯದಲ್ಲೂ ಹೀಗೇ ಆದರೆ ಗತಿಯೇನು ಎಂಬುದು ಹೋರಾಟಗಾರರ ಆತಂಕ.
ಮುಂಬಯಿ ಕರ್ನಾಟಕದ ನಾಲ್ಕು ಜಿಲ್ಲೆಗಳ 13 ತಾಲೂಕಗಳು ಮತ್ತು ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸುವ ಕಳಸಾ ಯೋಜನೆ ತಿರುವು ಯೋಜನೆಯು ಈಗ ಈ ಭಾಗದ ಭಾವನಾತ್ಮಕ ವಿಷಯವಾಗಿದೆ. ಸದ್ಯ ಕಳಸಾದಿಂದ 1.12 ಟಿ ಎಮ್ ಸಿ ನೀರನ್ನು ಮಲಪ್ರಭೆಗೆ ಜೋಡಿಸಬೇಕಾದರೆ ಒಂದು ಸಾವಿರ ಕೋಟಿ ಬೇಕು. ಅರಣ್ಯ ಪ್ರದೇಶದಲ್ಲಿ ಐದು ಜಲಾಶಯಗಳನ್ನು ನಿರ್ಮಿಸಬೇಕು. ಇದಕ್ಕೆ ಕೇಂದ್ರದ ಅನುಮತಿಯೂ ಬೇಕು. ಟ್ರಿಬ್ಯುನಲ್ ತೀರ್ಪು ಬಂದು 13 ತಿಂಗಳಾದರೂ ಅದು ಅಧಿಸೂಚನೆಯಲ್ಲಿ ಇನ್ನೂ ಪ್ರಕಟವಾಗಿಲ್ಲ .
ಗೋವೆಯ ಕಾಂಗ್ರೆಸ್ ನಾಯಕರ ಅಪಸ್ವರದ ನಡುವೆಯೂ ಅಲ್ಲಿಯ ಮುಖ್ಯಮಂತ್ರಿಗಳು ಕರ್ನಾಟಕದ ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸುವ ಮೂಲಕ ನ್ಯಾಯಾಲಯದ ಹೊರಗೆ ಸಮಸ್ಯೆಯ ಇತ್ಯರ್ಥಕ್ಕೆ ಮುಂದಾಗುವರೆ ಎಂಬುದನ್ನು ಕಾದು ನೋಡಬೇಕು. ಇತ್ಯರ್ಥವಾಗದಿದ್ದರೆ ರೈತರ ಕೈಗೆ ಬಂದ ತುತ್ತು ಬಾಯಿಗೆ ಬೀಳಲು ಇನ್ನೂ ಕಾಯುವುದು ಅನಿವಾರ್ಯವಾಗುತ್ತದೆ.