ಇಂದು ಆರು ಜಿಲ್ಲೆಗಳಲ್ಲಿ ಸಂತಸ, ಸಂಭ್ರಮ ಹಾಗೂ ಆಚರಣೆಗಳು ನಡೆಯುತ್ತಿವೆ. ಇಂದು ಎಲ್ಲರೂ ಹೈದರಾಬಾದ್ ಕರ್ನಾಟಕ ಎಂಬ ಹೆಸರಿಗೆ ವಿದಾಯ ಹೇಳಿ ಕಲ್ಯಾಣ ಕರ್ನಾಟಕ ಎಂದು ಕರೆಯಲಾರಂಭಿಸಿದ್ದಾರೆ. ಈ ಭಾಗದ ಕರ್ನಾಟಕದ ಬೇಡಿಕೆ ಇದು ದಶಕಗಳಿಂದ ನಡೆದಿದ್ದು, ಬಸವರಾಜ ಪಾಟೀಲ್ ಸೇಡಂ 2008 ರಲ್ಲಿ ನೀವೇನಾದರೂ ಅನ್ನಿ, ನಾನು ಮಾತ್ರ ಇಂದಿನಿಂದ ಕಲ್ಯಾಣ ಕರ್ನಾಟಕವೆಂದೇ ಕರೆಯುತ್ತೇನೆ ಎಂದು ಘೋಷಿಸಿದ್ದರು. ಇಂದು ಅದು ನಿಜವಾಯಿತು.
ಹೆಸರೇಕೆ ಬೇಡವಾಗಿತ್ತು!
ಹೈದರಾಬಾದ್ ಕರ್ನಾಟಕ ಹೆಸರು ಬೇಡ ಎಂಬ ವಾದಗಳೂ ಹಲವೆಡೆ ಕೇಳಿ ಬಂದಿದ್ದವು. ಹೈದರಾಬಾದ್ ಎಂದರೆ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದು ಈಗಲೂ ಅದೇ ಹೆಸರೇಕೆ ಎಂಬುದು ಕೆಲವರ ವಾದವಾದರೆ, ಇನ್ನೊಂದು ರಾಜ್ಯದ ಹೆಸರಿಗಿಂತ ನಮ್ಮದೇ ಭಾಷೆಯ ಕಲ್ಯಾಣ ಅಂದರೆ, ಅಭ್ಯುದಯ ಎನ್ನುವುದೇ ಲೇಸು ಎನ್ನುವರು.
ಏನು ಬೇಕು ಜನರಿಗೆ?
ಈ ಭಾಗಕ್ಕೆ ಮುಖ್ಯವಾಗಿ ಬೇಕಾಗಿದ್ದು:
* ಪ್ರಥಮವಾಗಿ 371 (ಜೆ) ಪ್ರಕಾರ ಎಲ್ಲರಿಗೆ ಔದ್ಯೋಗಿಕ ಹಾಗೂ ಶೈಕ್ಷಣಿಕ ಸೌಲಭ್ಯ
* ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರ ನೇಮಕ ಹಾಗೂ 5 ವರ್ಷ ಅವಧಿ
* ಸಿದ್ದರಾಮಯ್ಯ ಸರ್ಕಾರ ಹೈ-ಕ ಮಂಡಳಿಗೆ 1500 ಕೋಟಿ ನೀಡಿದ್ದು ಅದನ್ನು 2,500 ಕೋಟಿಗೆ ಹೆಚ್ಚಿಸಬೇಕು
* ಮೂಲ ಸೌಲಭ್ಯಗಳ ಸುಧಾರಣೆ ಹಾಗೂ ಹೈಟೆಕ್ ಸ್ಪರ್ಶ
* ನಂಜುಂಡಪ್ಪ ವರದಿ ಪ್ರಕಾರ ಈ ಭಾಗದ ತಾಲೂಕುಗಳಿಗೆ ಹೆಚ್ಚಿನ ನೆರವು

ಕಲ್ಯಾಣ ವಾಗುತ್ತಾ?
ಈ ಪ್ರಶ್ನೆ ಮಾತ್ರ ಹಲವರಲ್ಲಿ ಮೂಡಿ ಹೀಗೆ ಬಂದು ಹಾಗೆ ಹೋದಂತಿದೆ. ಬರೀ ಹೆಸರನ್ನು ಬದಲಿಸಿದರೆ ನಾಡು ಅಭಿವೃದ್ಧಿಯ ಪಥದತ್ತ ಸಾಗುತ್ತದೆಯೇ ಎಂಬುದು ಹಲವರ ವಾದ. ನಿಜವೆಂದರೆ ಹಲವರು ಇದನ್ನು ಬಹಿರಂಗವಾಗಿ ಹೇಳದೇ ಮನದಲ್ಲೇ ಕೇಳಿಕೊಂಡು ಉತ್ತರ ಪಡೆಯಲು ಯತ್ನಿಸುತ್ತಿದ್ದಾರೆ.
ಯಾವುದೇ ಸರ್ಕಾರ ಬರಲಿ, ಯಾರೇ ಇರಲಿ, ಕಳೆದ ಹಲವು ದಶಕದಿಂದಲೂ ಈ ಭಾಗ ನಿರ್ಲಕ್ಷಕ್ಕೊಳಗಾಗಿದೆ ಎನ್ನುವುದು ಮಾತ್ರ ದಿಟ. ಅಚ್ಚರಿಯೆಂದರೆ ಈ ಭಾಗದಲ್ಲಿ ಒಂದಲ್ಲ ಎರಡಲ್ಲ, 41 ಜನ ಶಾಸಕರಿದ್ದಾರೆ. ಅವರೆಲ್ಲಾ ಒಬ್ಬರಿಗಿಂತ ಒಬ್ಬರು ಕಾರ್ಯಶೀಲ ಪ್ರವೃತ್ತಿಯನ್ನುಳ್ಳವರಿದ್ದಾರೆ. ಆದರೂ 371 ಕಲಂ ತರಲು ಅಷ್ಟು ದಿನ ಬೇಕಾಯಿತು. ಈಗ ಆ ಕಲಂ ಅನುಷ್ಠಾನ ಮಾಡಿದ್ದಾರೆ. ಆದರೆ ಆ ಅನುಷ್ಠಾನ ಉಪ ಸಮಿತಿಗೆ ಚೇರ್ಮನ್ ಕೂಡಾ ಇಲ್ಲ. ಹೀಗೆ ಪಟ್ಟಿ ಮಾಡುತ್ತ ಹೋದರೆ ಯಾವೆಲ್ಲಾ ಇಲ್ಲ ಎಂಬುದರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದೆಲ್ಲರ ಮಧ್ಯೆ ಬೇಕಿತ್ತಾ ಈ ಕಲ್ಯಾಣ, ಎಂದು ಉತ್ತರ ಕರ್ನಾಟಕ ಜಾಗೃತ ವೇದಿಕೆಯ ಮುಖಂಡ ಪ್ರಭುರಾಜಗೌಡ ಪಾಟೀಲ್ ಅವರ ಅಂಬೋಣ.

ಬಳ್ಳಾರಿಯ ಸಮಾಜ ಸೇವಕರಾದ ಚಂದ್ರೇಗೌಡ ಪಾಟೀಲ್ ಅವರ ಪ್ರಕಾರ, “ಈ ಭಾಗವು ಅತಿ ನಿರ್ಲಕ್ಷಕ್ಕೆ ಒಳಗಾಗಿದೆ. ಬರುವ ಮುಖ್ಯಮಂತ್ರಿಗಳು, ಮಂತ್ರಿಗಳು ದಕ್ಷಿಣ ಕರ್ನಾಟಕವನ್ನೇ ನೋಡುತ್ತಾರೆಯೇ ಹೊರತು ನಮ್ಮ ಭಾಗವನ್ನಲ್ಲ. ಮುಂಬೈ ಕರ್ನಾಟಕ ಈಗ ಸ್ವಲ್ಪ ಅಭಿವೃದ್ಧಿ ಕಾಣುತ್ತಿದೆ. ಆದರೆ ನಮ್ಮ ಭಾಗ ಅಂದರೆ ಈ ಆರೂ ಜಿಲ್ಲೆಗಳು ಅಬ್ಬಬ್ಬ… ಸರ್ಕಾರಿ ಅಧಿಕಾರಿಗಳು ದಿನಂಪ್ರತಿ ದೇವರಿಗೆ ಈ ಭಾಗಕ್ಕೆ ಟ್ರಾನ್ಸ್ ಫರ್ ಮಾತ್ರ ಮಾಡಬೇಡಪ್ಪ ಎಂದು ಬೇಡಿಕೊಳ್ಳುತ್ತಾರೆ. ಬೆಂಗಳೂರಿನ ಹೈ ಫೈ ಜನರು ಈ ಕಡೆಗೆ ಬಂದರೆ ದಂಗು ಹೊಡೆದು ಬಿಡುತ್ತಾರೆ. ಇಲ್ಲಿ ಸ್ವಚ್ಛತೆ ಮರೀಚಿಕೆ. ರಸ್ತೆಗಳೇ ಇಲ್ಲ. ಗ್ರಾಮಗಳು ಇನ್ನೂ ನೂರು ವರ್ಷಗಳಷ್ಟು ಹಿಂದೆ ಇವೆ. ಇಷ್ಟು ರಣ ರಣ ವೆನ್ನುವ ಜಿಲ್ಲೆಯಲ್ಲಿ ಅಲ್ಲಲ್ಲಿ ಹಸಿರು ಇದೆ, ಆದರೆ ಗುಡ್ಡಗಳನ್ನು ಮಾಯ ಮಾಡಿದ್ದಾರೆ. ಮಣ್ಣನ್ನು ಬಗೆದಿದ್ದಾರೆ. ಇಷ್ಟೆಲ್ಲ ಆದ ಮೇಲೆ ಈಗ ಕಲ್ಯಾಣ ಕರ್ನಾಟಕ!”

ಬೆಂಗಳೂರಿನ ಖಾಸಗಿ ಸಂಸ್ಥೆ ಉದ್ಯೋಗಿ ಎಸ್. ಮಂಜುನಾಥ ಹೇಳಿದ್ದು, “ನಾನು ಕಲಬುರಗಿ ನಗರಕ್ಕೆ ಬಂದು ಎರಡು ವರ್ಷಗಳಾದವು. ಪ್ರತಿಸಲದಂತೆ ಮೂರು ವರ್ಷಕ್ಕೊಮ್ಮೆ ಹೆಂಡತಿ ಮಗಳೊಂದಿಗೆ ಗಂಟು ಮೂಟೆ ಕಟ್ಟಿಕೊಂಡು ಇಲ್ಲಿ ಬಂದೆ. ಒಂದು ಮನೆ ಬಾಡಿಗೆ ಸಿಕ್ಕಿತು. ಒಂದೇ ವಾರದಲ್ಲಿ ನನ್ನ ಹೆಂಡತಿ ಮತ್ತು ಮಕ್ಕಳು ಬೆಂಗಳೂರಿಗೆ ವಾಪಸ್. ನಾನಿರುವ ಏರಿಯಾದಲ್ಲಿ ಕಾರ್ಪೋರೇಷನ್ ನಿಂದ ಬರುವ ನೀರು ಕೊಳಚೆಯುಕ್ತ. ಪ್ರತಿ ದಿನ ವಾಟರ್ ಕ್ಯಾನ್ ದುಡ್ಡು ಕೊಟ್ಟು ತರಬೇಕು. ಇಲ್ಲಿ ಸಮಸ್ಯೆಯಿದೆ, ಅದರ ತೀವ್ರತೆ ಇದೆ. ಆದರೆ, ಜನರು ಸುಮ್ಮನಿದ್ದಾರೆ. ಜನಪ್ರತಿನಿಧಿಗಳಂತೂ…ಇರಲಿ ಬಿಡಿ… ಪಾಪ ಅವರದೇ ಸಮಸ್ಯೆಗಳು ಇಂದು ಜಾಸ್ತಿಯಾಗಿವೆ. ಕಲ್ಯಾಣ ಕರ್ನಾಟಕವಾದ ಮೇಲಾದರೂ ಇಲ್ಲಿ ಅಧುನಿಕತೆಯ ಸ್ವರ್ಶ ಬರಲಿ…ಇಲ್ಲವಾದರೆ ಕೊನೆಗೆ ಅಭಿವೃದ್ಧಿ ಕರ್ನಾಟಕ ಎಂದು ಹೆಸರಿಡಬೇಕಾದೀತು!!!….
ರಾಯಚೂರಿನ ಜಯಂತ್ ಕುಲಕರ್ಣಿ ಅವರ ಪ್ರಕಾರ, “ಹೆಸರಿಡಲಿ ಅದಕ್ಕೇನು ಅಭ್ಯಂತರವಿಲ್ಲ. ಈ ಭಾಗದಲ್ಲಿ ಡಾ. ಡಿ. ಎಂ ನಂಜುಂಡಪ್ಪ ನೇತೃತ್ವದ ಸಮಿತಿ ನೀಡಿದ ಶಿಫಾರಸ್ಸುಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಜನರು ಗುಳೆ ಹೋಗುತ್ತಿದ್ದಾರೆ. ಪ್ರಾದೇಶಿಕ ಅಸಮಾನತೆ ತಾಂಡವವಾಡುತ್ತಿದೆ. ಜನರ ಜೀವನದ ಗುಣಮಟ್ಟ ಏರಿಲ್ಲ. ಆದರೂ, ಹೆಸರು ಬದಲಾವಣೆ ಆದ ಮೇಲೆ ಏನಾದರೂ ಬದಲಾಗುತ್ತಾ ಎಂಬ ಆಶಾ ಭಾವ ನಮ್ಮಲ್ಲಿದೆ. ಕಾದು ನೋಡೋಣ.’’
ಹೆಸರಿನಲ್ಲೇನಿದೆ?
ಬೀದರ್ ನ ಕೆ. ರಾಜೀವ್ ಅವರ ಪ್ರಕಾರ, “ಹೆಸರಲ್ಲೇನಿದೆ…ಅದು ನಮ್ಮ ಊರ ಹೆಸರಲ್ಲ…ಆದರೂ ಕಲ್ಯಾಣ ವಾಗಲಿ. ಇಲ್ಲಿ ಆಗಬೇಕಾದದ್ದು ಬಹಳಷ್ಟು ಇದೆ. ಸಂಭ್ರಮವನ್ನಾಚರಿಸಿ ಕೂರುವುದು ಮಾತ್ರವಲ್ಲ. ಬಿಜೆಪಿ ಸರ್ಕಾರ ಹೊಸ ಹೆಸರು ನಾಮಕರಣ ಮಾಡಿದ್ದು ಸ್ವಾಗತಾರ್ಹ ನಿಲುವು. ಅದರಂತೆ ಮುಖ್ಯಮಂತ್ರಿಗಳು ಈ ಭಾಗದತ್ತ ಕಾಳಜಿ ವಹಿಸಲಿ. ಜನರು ವೋಟು ಮಾಡಲು ಮಾತ್ರ ಇಲ್ಲ. ಆಶ್ವಾಸನೆಗಳು ನಮಗೆ ಬೇಡ, ಜಾಹೀರಾತುಗಳು ನಮಗೆ ಬೇಡ. ಕೆಲಸವಾದರೆ ಎಲ್ಲರಿಗೂ ಕಣ್ಣಿಗೆ ಕಾಣುತ್ತದೆ. ಅಖಂಡ ಕರ್ನಾಟಕವೂ ಅಭಿವೃದ್ಧಿ ಆಗಲಿ ಎಂಬುದು ನಮ್ಮ ಸದಾಶಯ”.
ಯಾವ ಯಾವ ಜಿಲ್ಲೆಗಳು?
ಕಲ್ಯಾಣ ಕರ್ನಾಟಕದಲ್ಲಿ ಒಟ್ಟು ಆರು ಜಿಲ್ಲೆಗಳಿವೆ. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ.
ಮುಖ್ಯಮಂತ್ರಿಗಳು ಮಾಧ್ಯಮಗಳಿಗೆ ಹೇಳಿದ್ದು:
ಜನರ ಜೀವನಮಟ್ಟ ಸುಧಾರಣೆಗೆ ಬೇಕಾಗಿರುವ ಎಲ್ಲ ಮೂಲ ಸೌಕರ್ಯಗಳು ಆರೋಗ್ಯ, ಶಿಕ್ಷಣ, ವ್ಯಾಪಾರ, ಕೈಗಾರಿಕೆ ಹಾಗೂ ಇನ್ನಿತರ ವಲಯಗಳಿಗೆ ಸರ್ಕಾರ ಆದ್ಯತೆ ನೀಡಲಿದೆ. ಮರು ನಾಮಕರಣ ಬರೀ ತೋರಿಕೆಗಷ್ಟೇ ಅಲ್ಲ, ಅನುಷ್ಠಾನವೂ ನಮ್ಮ ಆದ್ಯತೆ.