Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕಲೆ-ಸಾಹಿತ್ಯ-ಮನುಜ ಸಂವೇದನೆ ಮತ್ತು ಪ್ರಜಾಪ್ರಭುತ್ವ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪೋಷಿಸಿ ಬೆಳೆಸಬೇಕಾದ ಜವಾಬ್ದಾರಿ ಸಾಹಿತ್ಯಕ-ಸಾಂಸ್ಕೃತಿಕ ಸಂಸ್ಥೆಗಳ ಮೇಲಿದೆ

ನಾ ದಿವಾಕರ

ನಾ ದಿವಾಕರ

March 23, 2023
Share on FacebookShare on Twitter

ನಾ ದಿವಾಕರ

ಹೆಚ್ಚು ಓದಿದ ಸ್ಟೋರಿಗಳು

Chetan Ahimsa : ಕುಸ್ತಿಪಟುಗಳ ಬಗ್ಗೆ ಏಕಿಷ್ಟು ಮೌನ?

Anil Kumble stands in support of wrestlers : ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಅನಿಲ್‌ ಕುಂಬ್ಳೆ..!

Minister HC Mahadevappa : ನಮ್ಮ ʼಗ್ಯಾರೆಂಟಿʼಯನ್ನು ನೋಡಿ ಜನ ಕಾಂಗ್ರೆಸ್ ಗೆ ಬಹುಮತ ನೀಡಿದ್ದಾರೆ ; ಸಚಿವ .ಹೆಚ್.ಸಿ.ಮಹದೇವಪ್ಪ

ಬೆಂಗಳೂರು: ಮಾ.23: ಮಾನವ ಸಮಾಜದಲ್ಲಿ ಮೌಲ್ಯಗಳಿಗೆ ತನ್ನದೇ ಆದ ಮಹತ್ವದ ಸ್ಥಾನ ಇದೆ. ತನ್ನ ಸಾರ್ವಜನಿಕ ಬದುಕಿನ ಅನಿವಾರ್ಯತೆಗಳಿಗೆ ಪೂರಕವಾಗುವಂತೆ ಪ್ರತಿಯೊಂದು ಮತಧರ್ಮವೂ, ಜಾತಿ ಸಂಕುಲವೂ, ಸಮುದಾಯವೂ ಸಹ ತನ್ನದೇ ಆದ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳನ್ನು ಕಾಲದಿಂದ ಕಾಲಕ್ಕೆ ರೂಪಿಸಿಕೊಳ್ಳುತ್ತಿರುತ್ತದೆ. ಈ ಮೌಲ್ಯಗಳು ಯಾವುದೇ ಕಾಲಘಟ್ಟದಲ್ಲಾದರೂ ಬದಲಾವಣೆಗೊಳಗಾಗುವಂತಹ ನಮ್ಯತೆಯನ್ನೂ ಹೊಂದಿರುತ್ತವೆ. ಇದಮಿತ್ತಂ ಎನ್ನುವಂತೆ ಮನುಷ್ಯನ ಬದುಕಿನ ಮೌಲ್ಯಗಳನ್ನು ಸಾರ್ವತ್ರೀಕರಿಸುವ ಅವಕಾಶಗಳೂ ಸಹ ವಿರಳವಾಗುತ್ತಿರುತ್ತವೆ. ಏಕೆಂದರೆ ಮಾನವ ಸಮಾಜ ತನ್ನ ಅಭ್ಯುದಯದ ಹಾದಿಯಲ್ಲಿ ಕಾಣುವ ಆರ್ಥಿಕ ವ್ಯತ್ಯಯಗಳು, ಸಾಮಾಜಿಕ ಪಲ್ಲಟಗಳು ಮತ್ತು ಸಾಂಸ್ಕೃತಿಕ ಮನ್ವಂತರಗಳು, ವಿಭಿನ್ನ ಕಾಲಘಟ್ಟಗಳಲ್ಲಿ ಮನುಷ್ಯನ ವರ್ತನೆ, ಧೋರಣೆಗಳಲ್ಲಿ ಬದಲಾವಣೆಗಳನ್ನು ಸೃಷ್ಟಿಸುತ್ತಲೆ ಹೋಗುತ್ತವೆ. ಈ ಬದಲಾವಣೆಗೆ ಪೂರಕವಾಗಿ, ಜಾತಿ-ಮತಧರ್ಮಗಳನ್ನು ಪ್ರತಿನಿಧಿಸುವ ಪ್ರಬಲ ವರ್ಗಗಳು ಮೌಲ್ಯಗಳ ಪುನರಾವಲೋಕನ ಮಾಡುವುದರೊಂದಿಗೇ, ಮನುಷ್ಯನ ವರ್ತಮಾನದ ಜೀವನಕ್ಕೆ ತಕ್ಕಂತಹ ಹೊಸ ಮೌಲ್ಯಗಳನ್ನು ಹುಟ್ಟುಹಾಕುತ್ತಿರುತ್ತವೆ, ಹಾಗೆಯೇ ಹಳೆಯ ಮೌಲ್ಯಗಳನ್ನು ನವೀಕರಿಸುತ್ತಿರುತ್ತವೆ.

ವೇಗವಾಗಿ ಬೆಳೆಯುತ್ತಿರುವ ಆಧುನಿಕ ಜಗತ್ತಿನಲ್ಲಿ ಯುವ ಸಮುದಾಯ ಸ್ಥಾಪಿತ ಮೌಲ್ಯಗಳಿಂದ ದೂರವಾಗುತ್ತಿದೆ ಎಂಬ ಹಪಹಪಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ಬದಲಾದ ಮೌಲ್ಯಗಳಿಗೂ ಒಂದು ಸಾಂಸ್ಕೃತಿಕ ಭೂಮಿಕೆ ಇರುವುದನ್ನು ಕಾಣಲು ಸಾಧ್ಯ. ವರ್ತಮಾನದ ಆಧುನಿಕ ಬದುಕಿನ ಚೌಕಟ್ಟಿನಲ್ಲಿ ಪ್ರಾಚೀನ ಅಥವಾ ಶತಮಾನದ ಹಿಂದಿನ ಮೌಲ್ಯಗಳು ಅನಪೇಕ್ಷಿತವಾಗುವುದೇ ಅಲ್ಲದೆ, ತಮ್ಮ ಪೂರ್ವಿಕರ ಹೆಜ್ಜೆ ಗುರುತುಗಳನ್ನೂ ಅರಿಯದ ಬೃಹತ್‌ ಯುವಸಂಕುಲದ ದೃಷ್ಟಿಯಲ್ಲಿ ಅತಾರ್ತಿಕ ಎನಿಸಿಬಿಡುತ್ತದೆ. ಸಮಾಜದ ಪ್ರಬಲ ವರ್ಗಗಳು, ತಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಭೂಮಿಕೆಯನ್ನೇ ಬಳಸಿಕೊಂಡು, ಈ ಬದಲಾದ ಮೌಲ್ಯಗಳಿಗೆ ಮಾನ್ಯತೆ ನೀಡುವುದರಲ್ಲಿ ಮುಂದಾಗುತ್ತವೆ. ಇಲ್ಲಿ ಅಪಾಯಕ್ಕೊಳಗಾಗುವುದು ಮಾನವ ಸಮಾಜ ತನ್ನ ಬೆಳವಣಿಗೆಯ ಹಾದಿಯಲ್ಲಿ ರೂಢಿಸಿಕೊಂಡು ಬಂದಂತಹ ಮಾನವೀಯ ನೆಲೆಯ, ಸಮತೆ ಮತ್ತು ಸೋದರತ್ವವನ್ನು ಪೋಷಿಸುವಂತಹ, ಬದುಕಿನ ಮೌಲ್ಯಗಳು.

ನಾಗರಿಕ ಸಮಾಜದ ಮೌಲ್ಯಗಳು

ಆಧುನಿಕ ನಾಗರಿಕತೆಯಲ್ಲಿ ಮನುಜ ಸಮಾಜ ರೂಪಿಸಿಕೊಂಡಿರುವ ಹಲವು ಮೌಲ್ಯಗಳು ಪ್ರಾಚೀನ ಅಮಾನುಷ ಚೌಕಟ್ಟುಗಳನ್ನು ಭೇದಿಸಿ ನೆಲೆ ಕಂಡಿರುತ್ತವೆ. ಹಾಗೆಯೇ ಚಾರಿತ್ರಿಕ ಪ್ರಮಾದಗಳನ್ನು ಗುರುತಿಸುತ್ತಾ ವರ್ತಮಾನದ ಬದುಕನ್ನು ಹಸನಾಗಿಸುವ, ಭವಿಷ್ಯದ ಹಾದಿಗಳನ್ನು ಸುಗಮಗೊಳಿಸುವ ಸಪ್ರಯತ್ನದಲ್ಲಿ, ಸಮಾಜ ಸುಧಾರಕ ಮನಸುಗಳು ಹೊಸ ಮಾನವೀಯ ಮೌಲ್ಯಗಳನ್ನು ರೂಢಿಗತವಾಗಿಸಲು ಯತ್ನಿಸುತ್ತಿರುತ್ತವೆ. ಮನುಷ್ಯರೆಲ್ಲರನ್ನೂ ಸಮಾನವಾಗಿ ಕಾಣಬೇಕೆನ್ನುವ ಸಾರ್ವತ್ರಿಕ ಮೌಲ್ಯಗಳು ಶತಮಾನಗಳ ಕಾಲ ಪ್ರಾಪಂಚಿಕ ಬದುಕಿನಲ್ಲೂ ನೆಲೆಯೂರಲು ಇಂತಹ ಪ್ರಯತ್ನಗಳೇ ಕಾರಣ ಎನ್ನುವುದನ್ನು ಚರಿತ್ರೆಯ ಪ್ರತಿಯೊಂದು ಹೆಜ್ಜೆಯಲ್ಲೂ ಗಮನಿಸಬಹುದು. ಆಫ್ರಿಕಾ ದೇಶಗಳ ವರ್ಣಭೇದ ನೀತಿ, ಪಶ್ಚಿಮ ರಾಷ್ಟ್ರಗಳಲ್ಲಿನ ಸಾಮಾಜಿಕ ತಾರತಮ್ಯ ನೀತಿಗಳು, ಭಾರತೀಯ ಸಮಾಜದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯೇ ಮುಂತಾದ ಜಾತಿಶ್ರೇಷ್ಠತೆಯ ನಿಯಮಗಳು ಮತ್ತು ಜಗತ್ತಿನಾದ್ಯಂತ ಇಂದಿಗೂ ಜೀವಂತಿಕೆಯಿಂದಿರುವ ಪಿತೃಪ್ರಧಾನತೆಯಂತಹ ಅಹಮಿಕೆಯ ನೆಲೆಗಳು, ಇವೆಲ್ಲವನ್ನೂ ಹಿಮ್ಮೆಟಿಸಿ, ಒಂದು ಸುಂದರ ಮಾನವ ಜಗತ್ತನ್ನು ನಿರ್ಮಿಸುವ ನಿಟ್ಟಿನಲ್ಲಿ ಬುದ್ಧನಿಂದ ಅಂಬೇಡ್ಕರ್‌ವರೆಗೆ ನೂರಾರು ಸುಧಾರಕರು ಹೊಸ ಮಾನವೀಯ ಮೌಲ್ಯಗಳನ್ನು ರೂಪಿಸಿದ್ದಾರೆ.

ಈ ಪ್ರಕ್ರಿಯೆಯ ನಡುವೆಯೇ ಪ್ರಾಚೀನತೆಯನ್ನೇ ವೈಭವೀಕರಿಸುವ ಮನಸುಗಳೂ ನಮ್ಮ ನಡುವೆ ಜೀವಂತವಾಗಿರುತ್ತವೆ ಎನ್ನುವುದನ್ನು ನಿರ್ಲಕ್ಷಿಸಲಾಗುವುದಿಲ್ಲ. ತಾವು ಅನುಸರಿಸುವ ಧಾರ್ಮಿಕ, ಜನಾಂಗೀಯ ಅಥವಾ ಜಾತೀಯ ಸಾಮಾಜಿಕ-ಸಾಂಸ್ಕೃತಿಕ ನಿಲುವುಗಳು ಆಧುನಿಕತೆಯ ಬಿರುಗಾಳಿಗೆ ಸಿಲುಕದಂತೆ ಸಂರಕ್ಷಿಸಿ, ಆ ಮೌಲ್ಯಗಳನ್ನೇ ಪ್ರಾಪಂಚಿಕ ಬದುಕಿನ ಸಾರ್ವತ್ರಿಕ ಮೌಲ್ಯಗಳೆಂದು ಬಿಂಬಿಸುವ ಪ್ರಯತ್ನಗಳೂ ಸಹ ಈ ಸಮಾಜ ಸುಧಾರಣೆಯ ಅಲೆಗಳ ನಡುವೆಯೇ ಹರಿದುಬಂದಿವೆ. ಹಾಗಾಗಿಯೇ ಪ್ರತಿರೋಧ ಎದುರಿಸದ ಯಾವುದೇ ಸಮಾಜ ಸುಧಾರಕರನ್ನು ಇತಿಹಾಸದಲ್ಲಿ ಗುರುತಿಸುವುದು ಅಸಾಧ್ಯವಾಗುತ್ತದೆ. ಡಾ ಅಂಬೇಡ್ಕರ್‌ ಅವರ ಕ್ರಾಂತಿ-ಪ್ರತಿಕ್ರಾಂತಿ ಪ್ರಬಂಧವನ್ನು ಗಮನವಿಟ್ಟು ಅಧ್ಯಯನ ಮಾಡಿದರೆ ಈ ಸೂಕ್ಷ್ಮಗಳೂ ಅರ್ಥವಾಗಲು ಸಾಧ್ಯ. ಶತಮಾನಪೂರ್ವದ ಮಾವನ ಸಮಾಜದಲ್ಲಿ ಪ್ರಚಲಿತವಾಗಿದ್ದಂತಹ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳಿಗೆ, ಅಂದಿನಿಂದಲೂ ಅನುಸರಿಸಿಕೊಂಡು ಬಂದಂತಹ ಧಾರ್ಮಿಕತೆಯನ್ನು ಲೇಪಿಸುವ ಮೂಲಕ, ವರ್ತಮಾನದ ಸಾಮಾಜಿಕ ಜೀವನದಲ್ಲಿ ಅದೇ ಮೌಲ್ಯಗಳನ್ನು ಪುನರ್‌ಸ್ಥಾಪಿಸುವ ಒಂದು ಪ್ರಯತ್ನವನ್ನು ಇತಿಹಾಸದುದ್ದಕ್ಕೂ ಕಾಣಬಹುದು.

ಈ ಪುನರ್‌ಸ್ಥಾಪನೆಯ ಹಾದಿಯಲ್ಲಿ, ಮನುಷ್ಯ ತನ್ನ ಸೌಹಾರ್ದಯುತ ಬದುಕಿಗಾಗಿ ರೂಪಿಸಿಕೊಂಡಂತಹ, ಸಾರ್ವಜನಿಕ ಜೀವನದಲ್ಲಿ ರೂಢಿಸಿಕೊಂಡು ಬಂದಂತಹ ಕೆಲವು ಮನುಜಮುಖಿ ಮೌಲ್ಯಗಳೂ ಸಹ ಹುದುಗಿಹೋಗುವುದು ವರ್ತಮಾನದ ದುರಂತ. ಸಮಾಜದ ಮೇಲೆ ಸದಾ ತನ್ನ ಪಾರಮ್ಯವನ್ನು ಸಾಧಿಸಲು ಹೆಣಗಾಡುವ ಜಾತಿ ಮತ್ತು ಮತಧರ್ಮದ ಸಾಂಸ್ಥಿಕ ನೆಲೆಗಳು ಇಲ್ಲಿ ಸೃಷ್ಟಿಸುವಂತಹ ಸಂಕೀರ್ಣತೆಗಳು, ಸಿಕ್ಕುಗಳು ಮತ್ತು ಜಟಿಲತೆಗಳು ಸಾರ್ವಜನಿಕ ಬದುಕಿನಲ್ಲಿ ಇನ್ನಷ್ಟು ಗೊಂದಲಗಳನ್ನು ಉಂಟುಮಾಡುತ್ತವೆ. ನಂಬಿಕೆ, ಶ್ರದ್ಧೆ, ಆರಾಧನೆ ಮತ್ತು ಆಚರಣೆಗಳ ಮೂಲಕ ಆಧುನಿಕ ಮಾನವನ ಮನಸ್ಸು-ಮಿದುಳನ್ನು ಹಿಡಿದಿಟ್ಟಿರುವ ಸಾಂಪ್ರದಾಯಿಕ ಶಕ್ತಿಗಳು ತಮ್ಮ ಆಧಿಪತ್ಯವನ್ನು ಉಳಿಸಿಕೊಳ್ಳಲೆಂದೇ ಈ ಹುದುಗಿಹೋದ ಮಾನವೀಯ ಮೌಲ್ಯಗಳನ್ನು ಶಾಶ್ವತವಾಗಿ ಮರೆಯಾಗಿಸಲು, ಇತಿಹಾಸ, ಪುರಾಣ, ಮಿಥ್ಯೆ ಮತ್ತು ಇತರ ಪ್ರಾಚೀನ ಬೌದ್ಧಿಕ ನೆಲೆಗಳನ್ನು ಬಳಸಿಕೊಳ್ಳುತ್ತವೆ. ಈ ಪ್ರಕ್ರಿಯೆಯನ್ನು ಭಾರತವನ್ನೂ ಒಳಗೊಂಡಂತೆ , ಜಗತ್ತಿನಾದ್ಯಂತ ಎಲ್ಲ ದೇಶಗಳಲ್ಲೂ ಕಾಣಬಹುದು.

ವರ್ತಮಾನದ ಸಂದರ್ಭದಲ್ಲಿ ನಾವು ಯುವ ಸಮುದಾಯದ ನಡುವೆ ಕಾಣುತ್ತಿರುವ ತವಕ, ತಲ್ಲಣ, ತುಮುಲ ಮತ್ತು ಆತಂಕಗಳನ್ನು ಈ ಚಾರಿತ್ರಿಕ ಹಿನ್ನೆಲೆಯಲ್ಲೇ ಗುರುತಿಸಬೇಕಿದೆ. ಯುವ ಸಮುದಾಯ ಯಾವ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಪರ್ಯಾಯವಾಗಿ ಯಾವ ಮೌಲ್ಯಗಳನ್ನು ಅನುಸರಿಸುತ್ತಿದೆ ಎಂಬ ತೌಲನಿಕ ನಿಷ್ಕರ್ಷೆಯ ಮೂಲಕ ಮಾತ್ರವೇ ಪ್ರಸ್ತುತ ಸನ್ನಿವೇಶದ ಪಲ್ಲಟಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಆಧುನಿಕ ಮಾನವನ ಇತಿಹಾಸದಲ್ಲಿ ಲಿಂಕನ್‌-ಗಾಂಧಿ-ಮಂಡೇಲಾ-ಅಂಬೇಡ್ಕರ್‌ವರೆಗೆ ಪ್ರಜಾಪ್ರಭುತ್ವದ ನೆಲೆಗಳನ್ನು ವಿಸ್ತರಿಸಿದ ಅನೇಕಾನೇಕ ಚಿಂತಕರು ತಳಮಟ್ಟದ ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸಬೇಕಾದಂತಹ ಪ್ರಜಾಸತ್ತಾತ್ಮಕತೆಯ ಮೌಲ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಈ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳೇ ವಿಭಿನ್ನ ಆಯಾಮಗಳಲ್ಲಿ, ಸಾಹಿತ್ಯ-ಕಲೆ-ಚಿತ್ರಕಲೆ-ಶಿಲ್ಪಕಲೆ-ರಂಗಭೂಮಿ ಮತ್ತು ರಾಜಕೀಯ ಭೂಮಿಕೆಗಳಲ್ಲೂ ಒಂದು ಹೊಸ ಜಗತ್ತನ್ನು ರೂಪಿಸುವ ಪರಿಕರಗಳಾಗಿವೆ. ʼಮನುಜ ಜಾತಿ ತಾನೊಂದೇ ವಲಂʼ ಎಂದು ಹೇಳಿದ ಪಂಪಮಹಾಕವಿಯಿಂದ ʼ ವಿಶ್ವಮಾನವತೆ ʼಯನ್ನು ಬೋಧಿಸಿದ ರಾಷ್ಟ್ರಕವಿ ಕುವೆಂಪುವರೆಗೂ, ಕರ್ನಾಟಕದ ಚಿಂತಕರು ಇದೇ ಪರಿಕರಗಳನ್ನು ಅಸ್ತ್ರಗಳಂತೆ ಬಳಸುವ ಮೂಲಕ ಸುಂದರ ಸಮಾಜದ ಸಾಧ್ಯತೆಗಳನ್ನು ಸಾಕ್ಷೀಕರಿಸಿದ್ದಾರೆ.

ಕುಸಿದ ಮೌಲ್ಯಗಳ ಮರುಶೋಧ

ವರ್ತಮಾನ ಭಾರತದ ಪ್ರಜ್ಞಾವಂತ, ಮನುಜ ಸೂಕ್ಷ್ಮ ಮನಸುಗಳಿಗೆ ಢಾಳಾಗಿ ಕಾಣುತ್ತಿರುವ                   ʼ ಮೌಲ್ಯಗಳ ಕುಸಿತ ʼ ವನ್ನು ಈ ಹಿನ್ನೆಲೆಯಲ್ಲೇ ಗುರುತಿಸಬೇಕಾಗಿದೆ. ಯುವ ಸಂಕುಲ ಮೌಲ್ಯಗಳಿಂದ ದೂರವಾಗುತ್ತಿದೆ ಎಂಬ ಹಳಹಳಿಯ ಹಿಂದೆ, ಕುಸಿಯುತ್ತಿರುವ ಪ್ರಜಾಪ್ರಭುತ್ವದ ನೆಲೆಗಳು, ಶಿಥಿಲವಾಗುತ್ತಿರುವ ಸಾಂಸ್ಕೃತಿಕ ನೆಲೆಗಳು ಮತ್ತು ಕ್ಷೀಣಿಸುತ್ತಿರುವ ಮಾನವೀಯ ನೆಲೆಗಳು, ಪ್ರಜ್ಞಾವಂತ ಮನಸ್ಸುಗಳಿಗೆ ಅಪಾಯಕಾರಿಯಾಗಿಯೂ, ಆಘಾತಕಾರಿಯಾಗಿಯೂ ಕಾಣುತ್ತದೆ. ಸಮ ಸಮಾಜದ ಕನಸು ಕಂಡ ಹಾಗೂ ಕಾಣುತ್ತಿರುವ ಯಾವುದೇ ಮನುಜ ಸೂಕ್ಷ್ಮ ಮನಸುಗಳಿಗೂ ಪ್ರಜಾಪ್ರಭುತ್ವದ ಮೌಲ್ಯಗಳು ಅಪ್ಯಾಯಮಾನವಾಗಿರುತ್ತವೆ. ಬಹುಮುಖ್ಯವಾಗಿ ಇಂದಿನ ಯುವ ಸಂಕುಲ ಈ ಮೌಲ್ಯಗಳಿಂದ ದೂರವಾಗುತ್ತಿದೆ. ಚುನಾವಣಾ ರಾಜಕಾರಣದಿಂದಾಚೆಗಿನ ಸಾರ್ವಜನಿಕ ಬದುಕಿನಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಕ್ಷೀಣಿಸಿದಷ್ಟೂ ಅಸಮಾನತೆಯ ನೆಲೆಗಳು ಮತ್ತಷ್ಟು ವಿಸ್ತರಿಸುತ್ತಲೇ ಹೋಗುತ್ತವೆ. ಈ ವಿಸ್ತರಿಸಲ್ಪಟ್ಟ ಅಸಮಾನತೆಯ ಸಾಮಾಜಿಕ ಬದುಕಿನಲ್ಲಿ ಅಸ್ಪೃಶ್ಯತೆಯಂತಹ ಅಮಾನುಷ ಆಚರಣೆಗಳೂ, ಅತ್ಯಾಚಾರದಂತಹ ಮಹಿಳಾ ದೌರ್ಜನ್ಯಗಳೂ, ಸಾಮಾಜಿಕ ಬಹಿಷ್ಕಾರದಂತಹ ಪ್ರಾಚೀನ ನಡವಳಿಕೆಗಳೂ ಸಹ ಸ್ವೀಕೃತವಾಗುವಂತಹ ವಾತಾವರಣ ಸೃಷ್ಟಿಯಾಗುತ್ತದೆ. ಜಾತಿ ಶ್ರೇಷ್ಠತೆ ಮತ್ತು ಮತಶ್ರದ್ಧೆಯ ಅಹಮಿಕೆಗಳು ಈ ಸ್ವೀಕೃತಿಗೆ ಅಧಿಕೃತ ಮನ್ನಣೆ ನೀಡಲು ನೆರವಾಗುತ್ತವೆ.

ವರ್ತಮಾನದ ಭಾರತ ಇಂತಹ ಒಂದು ದುರ್ಗಮ ಹಾದಿಯಲ್ಲಿ ಅಮೃತ ಕಾಲದತ್ತ ಸಾಗುತ್ತಿದೆ. ಮೌಲ್ಯಾಧಾರಿತ ರಾಜಕಾರಣ ಈಗಾಗಲೇ ಇತಿಹಾಸದ ಕಸದಬುಟ್ಟಿ ಸೇರಿದ್ದು ಸಾರ್ವಜನಿಕ ಬದುಕಿನಲ್ಲಿ ಅಪೇಕ್ಷಿತವಾಗಿದ್ದ ಸಭ್ಯತೆ, ಸೌಜನ್ಯ, ಸಂಯಮ ಮತ್ತು ಸಂವೇದನೆಯ ನೆಲೆಗಳೆಲ್ಲವೂ ಕ್ರಮೇಣ ಶಿಥಿಲವಾಗುತ್ತಿವೆ. ರಾಜಕಾರಣದ ಪಾತಕೀಕರಣ ಪ್ರಕ್ರಿಯೆಗೆ ಹೊಸ ವ್ಯಾಖ್ಯಾನಗಳನ್ನೂ ಶೋಧಿಸಲಾಗುತ್ತಿದ್ದು, ಕ್ರಿಮಿನಲ್‌ ಅಪರಾಧಿಗಳನ್ನೂ ಸನ್ಮಾನಿಸುವ ಒಂದು ಪರಂಪರೆಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಆಧುನಿಕ ಶಿಕ್ಷಣ ಆಧುನಿಕ ಮಾನವೀಯ ಮೌಲ್ಯಗಳಿಗಿಂತಲೂ ಹೆಚ್ಚಾಗಿ, ಪ್ರಾಚೀನ-ಪಾರಂಪರಿಕ-ಸಾಂಪ್ರದಾಯಿಕ ಮೌಲ್ಯಗಳನ್ನು ಉದ್ಧೀಪನಗೊಳಿಸುವ ನಿಟ್ಟಿನಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ಪುನಾರಚಿಸಲಾಗುತ್ತಿದೆ. ತನ್ಮೂಲಕ ಪಿತೃಪ್ರಧಾನತೆಯಂತಹ ವಿದ್ಯಮಾನಗಳು ಇಡೀ ಸಮಾಜಕ್ಕೆ ಅಪ್ಯಾಯಮಾನವಾಗಿ ಕಾಣುತ್ತಿದೆ. ಸ್ತ್ರೀವಾದ, ಸಮತೆ ಮತ್ತು ಸಮಾನತೆಯ ಆಶಯಗಳು, ಸಮನ್ವಯ-ಸೌಹಾರ್ದತೆಯ ಭೂಮಿಕೆಗಳು ಎಲ್ಲವೂ ಸಹ ದೇಶದ ಮುನ್ನಡೆಗೆ ಕಂಟಕಪ್ರಾಯ ಎನ್ನುವ ಅಭಿಪ್ರಾಯವನ್ನು ವ್ಯವಸ್ಥಿತವಾಗಿ ಉತ್ಪಾದಿಸಲಾಗುತ್ತಿದೆ. ಯುವ ಸಂಕುಲ ಚರಿತ್ರೆಯ ಅರಿವೂ ಇಲ್ಲದೆ, ಸ್ವಪ್ರಜ್ಞೆಯೂ ಇಲ್ಲದೆ ಉತ್ಪಾದನಾ ಸಾಧನಗಳಾಗಿ, ಶಕ್ತಿಗಳಾಗಿ ರೂಪುಗೊಳ್ಳುತ್ತಿದೆ.

ಸಾಂಸ್ಕೃತಿಕ ಲೋಕದ ಜವಾಬ್ದಾರಿ

ಇಂತಹ ವಿಷಮ ಗಳಿಗೆಯಲ್ಲಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನೈತಿಕ ಜವಾಬ್ದಾರಿ ಕಲೆ-ಸಾಹಿತ್ಯ-ರಂಗಭೂಮಿ ಮತ್ತು ಅಕ್ಷರಲೋಕವನ್ನು ಪ್ರತಿನಿಧಿಸುವ ಸೂಕ್ಷ್ಮ ಮನಸುಗಳ ಮೇಲಿರುತ್ತದೆ. ಈ ಮನಸುಗಳನ್ನು ಅಧಿಕೃತವಾಗಿ ಪ್ರತಿನಿಧಿಸುವ ಸಾಹಿತ್ಯ ಪರಿಷತ್ತುಗಳು, ಅಕಾಡೆಮಿಗಳು, ಪ್ರಾಧಿಕಾರಗಳು, ರಂಗಾಯಣದಂತಹ ರಂಗಕಲೆಯ ಸಂಸ್ಥೆಗಳು ತಮ್ಮ ಈ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸದರೆ, ಸಂವಿಧಾನ ಅಪೇಕ್ಷಿಸುವ ಸಮ ಸಮಾಜದ ಮೌಲ್ಯಗಳ ಬೀಜಗಳನ್ನು ಬಿತ್ತಲು ಸಾಧ್ಯ. ಈ ಸಾಂಸ್ಕೃತಿಕ ನೆಲೆಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಶಿಥಿಲವಾಗುತ್ತಿರುವಂತೆಲ್ಲಾ, ಇವುಗಳು ಸಂಪರ್ಕಿಸುವ ತಳಮಟ್ಟದ ಸಮಾಜದಲ್ಲೂ ಸಹ ಮೌಲ್ಯಗಳು ಕ್ಷೀಣಿಸತೊಡಗುತ್ತವೆ. ಸಾಹಿತ್ಯ, ಕಲೆ ಮತ್ತು ರಂಗಭೂಮಿ ಮೂರು ವಿಭಿನ್ನ ಆಯಾಮಗಳ ಅಭಿವ್ಯಕ್ತಿಯೇ ಆದರೂ, ಈ ಮೂರೂ ವಲಯಗಳ ಮೂಲ ಧಾತು ಇರುವುದು ಜನಮಾನಸದ ನಿತ್ಯ ಬದುಕಿನಲ್ಲಿ, ಜನರ ನಿತ್ಯ ತಲ್ಲಣಗಳಲ್ಲಿ, ತುಮುಲಗಳಲ್ಲಿ ಮತ್ತು  ಜಟಿಲ ಸಿಕ್ಕುಗಳಲ್ಲಿ. ಹಾಗಾಗಿ ಈ ಅಭಿವ್ಯಕ್ತಿ ಸಾಧನದ ಮೂಲಕ ನಾವು ತಲುಪಿಸುವ ಸಂದೇಶಗಳು ಎಲ್ಲ ಸಿಕ್ಕುಗಳನ್ನೂ ಭಂಗಗೊಳಿಸಿ, ಮನುಜ ಸಮಾಜವನ್ನು ಸರಿದಾರಿಗೆ ತರುವಂತೆ ಇರಬೇಕಾಗುತ್ತದೆ.

ಈ ದೃಷ್ಟಿಯಿಂದಲೇ ಸಾಹಿತ್ಯ-ಕಲೆ-ರಂಗಭೂಮಿಯ ನೆಲೆಗಳು ತಮ್ಮ ಸ್ವಾಯತ್ತತೆ, ಸ್ವಾತಂತ್ರ್ಯ ಮತ್ತು ಸ್ವಂತಿಕೆಯನ್ನು ಸದಾ ಕಾಪಾಡಿಕೊಂಡಿರುವುದು ಅತ್ಯವಶ್ಯ. ಆಡಳಿತ ಪರಿಭಾಷೆಯಲ್ಲಿ ಪ್ರಜಾಸತ್ತಾತ್ಮಕ ಭೂಮಿಕೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದರೂ, ಈ ಮೂರೂ ನೆಲೆಗಳು ತಮ್ಮದೇ ಅನನ್ಯತೆಯನ್ನು ಹೊಂದಿರಬೇಕಾದ್ದು ಅತ್ಯವಶ್ಯ. ವಂದಿಮಾಗಧ ಧೋರಣೆ ಈ ಸೂಕ್ಷ್ಮ ನೆಲೆಗಳನ್ನು ನಾಶಪಡಿಸುವ ಒಂದು ಕ್ರಿಮಿಯಂತೆ ಸದಾ ಜಾಗೃತವಾಗಿರುವುದನ್ನೂ ಸದಾ ಗಮನದಲ್ಲಿರಿಸಬೇಕಾಗಿದೆ. ಇಂದಿಗೂ ರಾಜಪ್ರಭುತ್ವವನ್ನು ವೈಭವೀಕರಿಸುವ ಮನಸ್ಥಿತಿಯನ್ನು ಹೊಂದಿರುವ ವಿಶಾಲ ಭಾರತೀಯ ಸಮಾಜದಲ್ಲಿ ಇದೇನೂ ಅಚ್ಚರಿಯ ಅಂಶವಾಗಿ ಕಾಣುವುದಿಲ್ಲ. ಆದರೆ ಈ ಧೋರಣೆಯನ್ನು ಧಿಕ್ಕರಿಸಿ, ಸಮಾಜದ ಕಟ್ಟಕಡೆಯ ಮನುಷ್ಯನ ತಲ್ಲಣ ಮತ್ತು ತುಮುಲಗಳಿಗೆ ಸ್ಪಂದಿಸುವ ಕ್ಷಮತೆಯನ್ನು ಈ ಮೂರೂ ಬೌದ್ಧಿಕ ನೆಲೆಗಳು ರೂಢಿಸಿಕೊಳ್ಳಬೇಕಿದೆ. ವರ್ತಮಾನ ಭಾರತದ ಸಂದರ್ಭದಲ್ಲಿ ಈ ಮೂರೂ ನೆಲೆಗಳಲ್ಲಿ ಕಾಣುವ ವಂದಿಮಾಗಧ ಪರಂಪರೆ, ಭಟ್ಟಂಗಿತನ ಮತ್ತು ಯಜಮಾನಿಕೆಯ ಧೋರಣೆಗಳು, ಕುಸಿಯುತ್ತಿರುವ ಮೌಲ್ಯಗಳಿಗೆ ವೇಗೋತ್ಕರ್ಷ ಇಂಧನದಂತೆ ಕಾಣುತ್ತದೆ.

ವಿಶಾಲ ಸಮಾಜದ ಮೇಲೆ ಸದಾ ತನ್ನ ಹಿಡಿತವನ್ನು ಬಿಗಿಯಾಗಿಯೇ ಇರಿಸಿಕೊಳ್ಳಲು ಬಯಸುವ ಆಳುವ ವರ್ಗಗಳ ಪ್ರತಿನಿಧಿಗಳು ಮತ್ತು ಈ ವರ್ಗಗಳನ್ನೇ ಅವಲಂಬಿಸಿ ತಮ್ಮ ಸಾಮಾಜಿಕ-ಸಾಂಸ್ಕೃತಿಕ ಮೇಲರಿಮೆಯನ್ನು, ಆಧಿಪತ್ಯವನ್ನು, ಅಹಮಿಕೆಯನ್ನು ಕಾಪಾಡಿಕೊಳ್ಳಲು ಹಲುಬುವ ವರ್ಗಗಳು ಸದಾ ಜಾಗೃತವಾಗಿರುವಂತೆಯೇ, ಸಮಾಜದಲ್ಲಿ ಶತಮಾನಗಳಿಂದಲೂ ಪೋಷಿಸಿಕೊಂಡು ಬಂದಂತಹ ಸಂವೇದನೆಯ ನೆಲೆಗಳನ್ನು ಶಿಥಿಲಗೊಳಿಸಲು ಕಾರ್ಯತಂತ್ರಗಳನ್ನು ರೂಪಿಸುತ್ತಲೇ ಇರುತ್ತವೆ. ಈ ಕಾರ್ಯತಂತ್ರಗಳಿಗೆ ಸಾಹಿತ್ಯ-ಕಲೆ-ರಂಗಭೂಮಿಯ ವೇದಿಕೆಗಳು ಮುಖ್ಯ ಭೂಮಿಕೆಯನ್ನು ಒದಗಿಸಿದಾಗ, ಇಡೀ ಸಾಮಾಜಿಕ ಪ್ರಜ್ಞೆಯೇ ನಿಷ್ಕ್ರಿಯವಾಗತೊಡಗುತ್ತದೆ. ಕ್ರಮೇಣ ಈ ಬೌದ್ಧಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಈ ನಿಷ್ಕ್ರಿಯಗೊಂಡ ಪ್ರಜ್ಞೆಯ ಕಣಜಗಳಾಗಿ ಪರಿಣಮಿಸುತ್ತವೆ. ಕನ್ನಡ ಸಾಹಿತ್ಯ ಪರಿಷತ್ತು, ರಂಗಾಯಣ, ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಮುಂತಾದ ಸಂಸ್ಥೆಗಳು ಇಂತಹ ದುರವಸ್ಥೆಗೆ ಈಡಾಗುವುದನ್ನು ತಪ್ಪಿಸುವುದು ಪ್ರಜ್ಞಾವಂತ ನಾಗರಿಕ ಸಮಾಜದ ಆದ್ಯತೆಯಾಗಬೇಕಿದೆ.

-೦-೦-೦-೦-

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

BREAKING ಬೆಂಗಳೂರಿಗೆ ಹೊಸ ಪೊಲೀಸ್‌ ಕಮಿಷನರ್‌..!
Top Story

BREAKING ಬೆಂಗಳೂರಿಗೆ ಹೊಸ ಪೊಲೀಸ್‌ ಕಮಿಷನರ್‌..!

by ಪ್ರತಿಧ್ವನಿ
May 30, 2023
Chennai Super Kings defeat Gujarat Titans by 5 wickets : IPL ಫೈನಲ್‌ : ಗೆದ್ದು ಬೀಗಿದ ಚೆನ್ನೈ ಸೂಪರ್‌ ಕಿಂಗ್ಸ್‌, ತವರಲ್ಲಿ GTಗೆ ಮುಖಭಂಗ..!
Top Story

Chennai Super Kings defeat Gujarat Titans by 5 wickets : IPL ಫೈನಲ್‌ : ಗೆದ್ದು ಬೀಗಿದ ಚೆನ್ನೈ ಸೂಪರ್‌ ಕಿಂಗ್ಸ್‌, ತವರಲ್ಲಿ GTಗೆ ಮುಖಭಂಗ..!

by ಕೃಷ್ಣ ಮಣಿ
May 30, 2023
Congress is preparing Lok Sabha Elections | ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಎಲೆಕ್ಷನ್‌ ಗೆ ಕಾಂಗ್ರೆಸ್  ಭರ್ಜರಿ ಸಿದ್ಧತೆ..!
ಇತರೆ

Congress is preparing Lok Sabha Elections | ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಎಲೆಕ್ಷನ್‌ ಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ..!

by ಪ್ರತಿಧ್ವನಿ
May 24, 2023
24 ಹಿಂದೂ ಕಾರ್ಯಕರ್ತರನ್ನು ಸಿದ್ದರಾಮಯ್ಯ ಕೊಂದಿದ್ದಾರೆ : ಬಿಜೆಪಿ ಶಾಸಕನ ಗಂಭೀರ ಆರೋಪ
ರಾಜಕೀಯ

24 ಹಿಂದೂ ಕಾರ್ಯಕರ್ತರನ್ನು ಸಿದ್ದರಾಮಯ್ಯ ಕೊಂದಿದ್ದಾರೆ : ಬಿಜೆಪಿ ಶಾಸಕನ ಗಂಭೀರ ಆರೋಪ

by Prathidhvani
May 24, 2023
ಇದೇ ರಿಯಲ್ ಕೇರಳ ಸ್ಟೋರಿ ಎಂದ ಪ್ರೇಕ್ಷಕ.! 2018 ಸಿನಿಮಾ ದಾಖಲೆಯ ಗಳಿಕೆ..!
ಸಿನಿಮಾ

ಇದೇ ರಿಯಲ್ ಕೇರಳ ಸ್ಟೋರಿ ಎಂದ ಪ್ರೇಕ್ಷಕ.! 2018 ಸಿನಿಮಾ ದಾಖಲೆಯ ಗಳಿಕೆ..!

by Prathidhvani
May 25, 2023
Next Post
ಶ್ರೀ ಚಾರುಕೀರ್ತಿ ಭಟ್ಟಾಚಾರಕ ಸ್ವಾಮೀಜಿಯವರ ನಿಧನಕ್ಕೆ  ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ, ಹೆಚ್‌ ಡಿಕೆ ಸೇರಿ ಗಣ್ಯರಿಂದ ಸಂತಾಪ..

ಶ್ರೀ ಚಾರುಕೀರ್ತಿ ಭಟ್ಟಾಚಾರಕ ಸ್ವಾಮೀಜಿಯವರ ನಿಧನಕ್ಕೆ ಸಿಎಂ ಬೊಮ್ಮಾಯಿ, ಸಿದ್ದರಾಮಯ್ಯ, ಹೆಚ್‌ ಡಿಕೆ ಸೇರಿ ಗಣ್ಯರಿಂದ ಸಂತಾಪ..

ಬರ್ತಿದೆ ಲವ್‌ ಮಾಕ್ಟೇಲ್‌ 3..! ಗುಡ್‌ನ್ಯೂಸ್‌ ಕೊಟ್ಟ ಆದಿ-ನಿಧಿಮಾ

ಬರ್ತಿದೆ ಲವ್‌ ಮಾಕ್ಟೇಲ್‌ 3..! ಗುಡ್‌ನ್ಯೂಸ್‌ ಕೊಟ್ಟ ಆದಿ-ನಿಧಿಮಾ

HANUME GOWDA | ಬಿಜೆಪಿಯವರು ಅಧಿಕಾರದ ದಾಹದಿಂದ ಜನರ ಮನಸ್ಸಲ್ಲಿ ನಂಜು ಮತ್ತು ಉರಿ ತುಂಬುತ್ತಿದ್ದಾರೆ. | BJP| RSS

HANUME GOWDA | ಬಿಜೆಪಿಯವರು ಅಧಿಕಾರದ ದಾಹದಿಂದ ಜನರ ಮನಸ್ಸಲ್ಲಿ ನಂಜು ಮತ್ತು ಉರಿ ತುಂಬುತ್ತಿದ್ದಾರೆ. | BJP| RSS

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist