ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ಕಲಂ 370 ಮತ್ತು ಕಲಂ 35ಎ ಅನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಮಾತು ಉಳಿಸಿಕೊಂಡಿದ್ದಾರೆ. ಪ್ರತಿಪಕ್ಷಗಳ ಭಾರೀ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಕೈಗೊಂಡ ಈ ನಿರ್ಧಾರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಜಮ್ಮುಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವುದರ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಒಟ್ಟಾಗಿ ಕೇಂದ್ರದ ವಿರುದ್ಧ ಸಮರ ಸಾರಿವೆ. ಈ ವಿವಾದ ಇಲ್ಲಿ ಜಮ್ಮುಕಾಶ್ಮೀರದ ನಾಗರಿಕರು, ಅಲ್ಲಿನ ಪರಿಸ್ಥಿತಿಗಿಂತ ಮುಖ್ಯವಾಗಿ ರಾಜಕೀಯ ಪಕ್ಷಗಳಿಗೆ ತಮ್ಮ ಮತಬ್ಯಾಂಕ್ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವ ಸರಕಾಗಿ ಪರಿವರ್ತನೆಗೊಂಡಿದೆ.
ಇದೇ ವಿಚಾರದಲ್ಲಿ ಕಾಂಗ್ರೆಸ್, ಜಮ್ಮು-ಕಾಶ್ಮೀರದ ರಾಜಕೀಯ ಪಕ್ಷಗಳು ಸೇರಿದಂತೆ ಎನ್ ಡಿ ಎ ಹೊರತಾದ ಬಹುತೇಕ ಪಕ್ಷಗಳು ಕೇಂದ್ರದ ವಿರುದ್ಧ ಸಮರ ಸಾರಿವೆ. ಆದರೆ, ಆ ಪಕ್ಷಗಳ ನಿಲುವು ಮತ್ತು ಪಾಕಿಸ್ತಾನದ ನಿಲುವು ಒಂದೇ ತೆರನಾಗಿರುವುದರಿಂದ ಜಮ್ಮು-ಕಾಶ್ಮೀರದ ಮಟ್ಟಿಗೆ ಈ ಹೋರಾಟ ಯಶಸ್ವಿಯಾಗಬಹುದಾದರೂ ದೇಶದ ಇತರೆ ಭಾಗಗಳಲ್ಲಿ ಅದು ಬಿಜೆಪಿಗೆ ಲಾಭ ಮಾಡಿಕೊಡುವುದು ಖಂಡಿತ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ಕಲಂ 370 ಮತ್ತು ಕಲಂ 35ಎ ಅನ್ನು ಹಿಂಪಡೆದಿದೆ.
ಮೋದಿ-2 ಸರ್ಕಾರ ಬಂದು ಅಮಿತ್ ಶಾ ಗೃಹ ಸಚಿವರಾದಾಗಲೇ ಸಂವಿಧಾನದ ಕಲಂ 370 ಮತ್ತು ಕಲಂ 35ಎ ರದ್ದುಗೊಳಿಸುವ ಸೂಚನೆ ದೊರಕಿತ್ತು. ಸೋಮವಾರ ಈ ನಿರ್ಧಾರ ಕೈಗೊಳ್ಳಲು ಮೊದಲೇ ನಿರ್ಧರಿಸಿದ್ದ ಕೇಂದ್ರ ಸರ್ಕಾರ ಕಳೆದ ಒಂದು ವಾರದಿಂದ ಅದಕ್ಕೆ ಬೇಕಾದ ಅಂತಿಮ ಸಿದ್ಧತೆಗಳನ್ನು ನಡೆಸಿತ್ತು. ಆದರೆ, ಇದಕ್ಕೆ ಬೇಕಾದ ಪೂರ್ವ ತಯಾರಿಗಾಗಿ ಮೋದಿ ಸರ್ಕಾರ ಬರೋಬ್ಬರಿ ಐದು ವರ್ಷ ತೆಗೆದುಕೊಂಡಿತ್ತು. ಅದಕ್ಕೆ ಪೂರಕವಾಗಿ ಜಮ್ಮು-ಕಾಶ್ಮೀರ ಭಾಗದ ಜನರ ನಾಡಿ ಮಿಡಿತ ಅರಿಯುವ ಕೆಲಸವನ್ನೂ ಮಾಡಿತ್ತು.
ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಜಮ್ಮು, ಕಾಶ್ಮೀರ ಮತ್ತು ಲಡಾಕ್ ಎಂಬ ಮೂರು ಭಾಗಗಳಿವೆ. ಈ ಪೈಕಿ ಜಮ್ಮುವಿನಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೆ, ಕಾಶ್ಮೀರದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಡಾಕ್ ನಲ್ಲಿ ಬೌದ್ಧರ ಸಂಖ್ಯೆ ಹೆಚ್ಚಿದೆ. ಅವುಗಳಲ್ಲಿ ಜಮ್ಮು ಮತ್ತು ಲಡಾಕ್ ಭಾಗದ ಜನ ತಮ್ಮ ರಾಜ್ಯ ಭಾರತದ ಅವಿಭಾಜ್ಯ ಅಂಗವಾಗಿರಬೇಕು ಎಂದು ಬಯಸಿದ್ದರೆ, ಕಾಶ್ಮೀರದ ಮುಸ್ಲಿಮರು ಪ್ರತ್ಯೇಕತೆಯತ್ತ ವಾಲಿದ್ದರು. ಈ ರೀತಿ ಪ್ರತ್ಯೇಕತೆಯ ಕೂಗು ಎತ್ತಿದವರಲ್ಲಿ ಪಾಕಿಸ್ತಾನದ ಬಗ್ಗೆ ಒಲವು ಹೊಂದಿದವರು, ಪ್ರತ್ಯೇಕತಾವಾದಿಗಳೇ ಇದ್ದರು. ಮತಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಸೇರಿದಂತೆ ಆ ರಾಜ್ಯದ ರಾಜಕೀಯ ಪಕ್ಷಗಳು ವಿಶೇಷ ಸ್ಥಾನಮಾನದ ಪರವಾಗಿದ್ದವು. ವಿಶೇಷವೆಂದರೆ, ಆ ರಾಜ್ಯದ ಕಾಶ್ಮೀರ ಸೇರಿದಂತೆ ಎಲ್ಲಾ ಭಾಗದ ಮುಸ್ಲಿಮೇತರರಿಗೆ ವಿಶೇಷ ಸ್ಥಾನಮಾನ ಬೇಕಾಗಿರಲಿಲ್ಲ. ಇದೆಲ್ಲವನ್ನು ಅಧ್ಯಯನ ನಡೆಸಿಯೇ ಕೇಂದ್ರ ಸರ್ಕಾರ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ ಕಲಂ 370 ಮತ್ತು ಕಲಂ 35ಎ ರದ್ದುಪಡಿಸುವ ನಿರ್ಧಾರ ಕೈಗೊಂಡಿದೆ.

2014ರಿಂದಲೇ ಅಡಿಪಾಯ ಹಾಕುವ ಕೆಲಸ ನಡೆದಿತ್ತು
ಸಂವಿಧಾನದ ಕಲಂ 370 ಮತ್ತು ಕಲಂ 35ಎ ರದ್ದುಪಡಿಸುವ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶೇಷ ಸ್ಥಾನಮಾನ ವಿರೋಧಿಸುವವರ ಪಾಲಿನ ಹೀರೋ ಆಗಿದ್ದಾರೆ. ಆದರೆ, ಈ ಪ್ರಕ್ರಿಯೆ ಚುರುಕುಗೊಳಿಸಿ ನಿರ್ಧಾರ ಕೈಗೊಂಡಿದ್ದು ಅಮಿತ್ ಶಾ ಅವರೇ ಆಗಿದ್ದರೂ 2014ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೇ ಅದಕ್ಕೆ ಬೀಜ ಬಿತ್ತನೆ ಮಾಡಲಾಗಿತ್ತು. ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ಬೆಂಬಲಿಸುತ್ತಾ ಭಾರತೀಯ ಸೇನೆಯ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದವರು, ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದವರು, ಪ್ರತ್ಯೇಕತಾವಾದಿಗಳ ವಿರುದ್ಧ ಕಠಿಣ ಕ್ರಮ 2014-15ನೇ ಸಾಲಿನಿಂದಲೇ ಶುರುವಾಗಿತ್ತು. ಆರಂಭದಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾದರೂ ಕ್ರಮೇಣ ಜನರೂ ಕೇಂದ್ರ ಸರ್ಕಾರ ಮತ್ತು ಸೇನೆಯ ಪರ ನಿಂತರು. ಇಡೀ ದೇಶವೇ ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಬೇಕು. ಅದಕ್ಕಾಗಿ ವಿಶೇಷ ಸ್ಥಾನಮಾನ ರದ್ದುಗೊಳಿಸಬೇಕು ಎಂದು ದನಿ ಎತ್ತಿತ್ತು.
ಅಂದರೆ, ರಾಷ್ಟ್ರೀಯತೆ, ದೇಶಪ್ರೇಮ, ಐಕ್ಯತೆಯ ವಿಚಾರ ಬಂದಾಗ ದೇಶವೇ ಒಟ್ಟಾಗುತ್ತದೆ ಎಂಬುದನ್ನು ಮೋದಿ-1 ಸಮಯದಲ್ಲಿ ದೃಢಪಡಿಸಿಕೊಳ್ಳಲಾಯಿತು. ಅಲ್ಲದೆ, 2019ರ ಚುನಾವಣೆಯಲ್ಲಿ 2014ಕ್ಕಿಂತಲೂ ಹೆಚ್ಚು ಜನಬೆಂಬಲದೊಂದಿಗೆ ಮೋದಿ-2 ಸರ್ಕಾರ ಅಧಿಕಾರಕ್ಕೆ ಬಂದಾಗ ಅದು ಇನ್ನಷ್ಟು ಸ್ಪಷ್ಟವಾಯಿತು. ಜತೆಗೆ ಮೋದಿ-2ನಲ್ಲಿ ಅಮಿತ್ ಶಾ ಗೃಹ ಸಚಿವರಾಗಿದ್ದು ಸಮುದ್ರದ ಅಲೆಗೆ ಗಾಳಿಯ ಬೆಂಬಲ ಸಿಕ್ಕಿದಂತಾಯಿತು. ಅದರ ಪರಿಣಾಮ ಸಂವಿಧಾನದ ಕಲಂ 370 ಮತ್ತು ಕಲಂ 35ಎ ರದ್ದುಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸುವ ರಾಜಕೀಯ ಪಕ್ಷಗಳು ಪೂರ್ಣ ಎಚ್ಚೆತ್ತುಕೊಳ್ಳುವ ಮುನ್ನವೇ ಕೇಂದ್ರ ಸರ್ಕಾರ ಸಂವಿಧಾನದ ಕಲಂ 370 ಮತ್ತು ಕಲಂ 35ಎ ರದ್ದುಗೊಳಿಸಿ ರಾಷ್ಟ್ರಪತಿಗಳಿಂದ ಸಹಿ ಹಾಕಿಸಿಕೊಂಡಿತು.
ಇದೀಗ ಈ ವಿಚಾರದಲ್ಲಿ ಪ್ರತಿಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮುಂದಾಗಿದೆ. ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ ಕಾರಣದಿಂದಲೇ ಅಭಿವೃದ್ಧಿ ಕುಂಠಿತವಾಗಿತ್ತು. ಇದೀಗ ಆ ಭಾಗದ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಭಯೋತ್ಪಾದಕರ ನಿಗ್ರಹಕ್ಕೆ ನೆರವಾಗಲಿದೆ ಎಂಬಿತ್ಯಾದಿ ವಿಚಾರಗಳನ್ನು ಬಿಜೆಪಿ ಸೇರಿದಂತೆ ಕೇಂದ್ರ ಸರ್ಕಾರ ಈಗಾಗಲೇ ಜನರಿಗೆ ತಲುಪಿಸುವ ಕೆಲಸ ಆರಂಭಿಸಿದೆ.
ಪಾಕ್ ಮತ್ತು ಪ್ರತಿಪಕ್ಷಗಳ ಹೋಲಿಕೆಗೆ ಮುಂದಾಗಲಿದೆ ಬಿಜೆಪಿ
ಕೇಂದ್ರದ ಈ ಕೆಲಸಕ್ಕೆ ಪಾಕಿಸ್ತಾನದ ನಡೆಯೂ ನೆರವಾಗುತ್ತಿದೆ. ಭಾರತದ ಭಾಗವಾಗಿರುವ ಜಮ್ಮು-ಕಾಶ್ಮೀರದ ಬಗ್ಗೆ ಪಾಕಿಸ್ತಾನಕ್ಕೇಕೆ ಒಲವು ಎಂಬ ಪ್ರಶ್ನೆಯನ್ನು ಬಿಜೆಪಿ ನಾಯಕರು ಈಗಾಗಲೇ ಎತ್ತಿದ್ದಾರೆ. ಸಂವಿಧಾನದ ಕಲಂ 370 ಮತ್ತು ಕಲಂ 35ಎ ರದ್ದುಗೊಳಿಸಲು ಪಾಕಿಸ್ತಾನ ವಿರೋಧಿಸುತ್ತದೆ ಎಂದಾದರೆ ಅದರಿಂದ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿ ಭಾರತಕ್ಕೆ ಬೆದರಿಕೆಯೊಡ್ಡುವ ತನ್ನ ಹುನ್ನಾರಕ್ಕೆ ಅಡ್ಡಿಯಾಗುತ್ತಿದೆ. ಆರ್ಥಿಕ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಮ್ಮು-ಕಾಶ್ಮೀರ ಪ್ರಗತಿ ಹೊಂದಿದರೆ ಪಾಕಿಸ್ತಾನದ ಬೇಳೆ ಬೇಯುವುದಿಲ್ಲ. ಹೀಗಾಗಿ ದೇಶದ ಆಂತರಿಕ ವಿಚಾರದ ಬಗ್ಗೆ ಪಾಕ್ ಪ್ರಸ್ತಾಪಿಸುತ್ತಿದೆ. ಅದಕ್ಕೆ ಪೂರಕವಾಗಿ ಪ್ರತಿಪಕ್ಷಗಳು ಕೂಡ ವರ್ತಿಸುತ್ತಿರುವುದರಿಂದ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ದೇಶದ ಸಮಗ್ರತೆ, ಅಭಿವೃದ್ಧಿಗಿಂತ ಅಲ್ಪಸಂಖ್ಯಾತರ ಓಲೈಕೆ, ಮತಬ್ಯಾಂಕ್ ರಾಜಕಾರಣವೇ ಪ್ರಮುಖವಾಗಿದೆ ಎಂಬುದನ್ನು ಕೇಂದ್ರದಲ್ಲಿ ಅಧಿಕಾರದ ನೇತೃತ್ವ ವಹಿಸಿರುವ ಬಿಜೆಪಿ ದೇಶದ ಜನರಿಗೆ ಮುಟ್ಟಿಸುವ ಕೆಲಸ ಮಾಡುವುದು ಖಂಡಿತ.
ಏಕೆಂದರೆ, ಈ ಹಿಂದೆ ಉರಿ, ಪುಲ್ವಾಮಾ ದಾಳಿ ಮುಂತಾದ ಉಗ್ರರ ಚಟುವಟಿಕೆಗಳು, ಸರ್ಜಿಕಲ್ ಸ್ಟ್ರೈಕ್, ಹೀಗೆ ಭಯೋತ್ಪಾದನೆ ಮತ್ತು ಜಮ್ಮು-ಕಾಶ್ಮೀರ ವಿಚಾರದಲ್ಲಿ ಪ್ರತಿಪಕ್ಷಗಳು ಪ್ರತಿ ಸಂದರ್ಭದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಿದವು. ಆಗೆಲ್ಲಾ ದೇಶದ ಜನ ಕೇಂದ್ರದ ಜತೆ ನಿಂತಿದ್ದರು. ಅದರ ಪರಿಣಾಮ ದೇಶದಲ್ಲಿ ಬಿಜೆಪಿ ಶಕ್ತಿ ಹೆಚ್ಚಾಗಿ ಪ್ರತಿಪಕ್ಷಗಳ ಬಲ ಕುಂದಿತ್ತು. ಅದೇ ರೀತಿ ಸಂವಿಧಾನದ ಕಲಂ 370 ಮತ್ತು ಕಲಂ 35ಎ ರದ್ದು ವಿಚಾರವನ್ನೂ ರಾಷ್ಟ್ರೀಯತೆ ಮತ್ತು ಸಮಗ್ರತೆಗೆ ಥಳಕು ಹಾಕಿ ಪ್ರತಿಪಕ್ಷಗಳ ವಿರುದ್ಧ ಸಮರ ಸಾರಲು ಸಜ್ಜಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.