ಲೋಕಸಭೆ ಚುನಾವಣೆ ಫಲಿತಾಂಶ ಬರುವುದಕ್ಕೆ ಒಂದು ವಾರ ಇರುವಾಗಲೇ ಕರ್ನಾಟಕದಲ್ಲಿ ಸದ್ಯ ನಡೆಯುತ್ತಿರುವ ಸಮ್ಮಿಶ್ರ ಸರಕಾರವೆಂಬ ರಾಜಕೀಯ ಚದುರಂಗದಾಟಕ್ಕೆ ಹೊಸ ಆಯಾಮ ಬಂದಿದೆ.
ಇಲ್ಲಿವರೆಗೆ ಎಲ್ಲರ ಕಣ್ಣು ಇದ್ದುದು ಬಿಜೆಪಿ ಮತ್ತು ಯಡಿಯೂರಪ್ಪನವರ ಕಡೆಗೆ. ಅವರು ಎಷ್ಟು ಶಾಸಕರನ್ನು, ಹೇಗೆ ತಮ್ಮ ಕಡೆಗೆ ಸೆಳೆದುಕೊಂಡಾರು ಎಂದು. ಆದರೆ, ಈಗ ಎಲ್ಲರ ಗಮನವಿರುವುದು ಸಿದ್ದರಾಮಯ್ಯವನರ ಬಂಟರ ಮೇಲೆ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಬೇಕು ಎಂದು ಎಬ್ಬಿಸಿರುವ ಕೂಗು ಎಷ್ಟರಮಟ್ಟಿಗೆ ಫಲಕಾರಿಯಾದೀತು ಎಂದು. ಹಾಗಾದಲ್ಲಿ, ಬಹುವರ್ಷದ ನಂತರ ತಮ್ಮ ಪಕ್ಷದ ಕೈಗೆ ಬಂದ ಅಧಿಕಾರವನ್ನು ರಾಜಕೀಯ ಚಾಣಕ್ಯರೆಂದು ಹೆಸರಾದ ದೇವೇಗೌಡರು ಅಷ್ಟು ಸುಲಭವಾಗಿ ಬಿಟ್ಟುಕೊಡಬಹುದೇ? ಅಥವಾ ಕಳೆದ ಬಾರಿ ಆದ ಹಾಗೆ, ಜೆಡಿಎಸ್ ಕಾಂಗ್ರೆಸನ್ನು ಬಿಟ್ಟು ಬಿಜೆಪಿಯನ್ನು ಮತ್ತೆ ಕೈ ಹಿಡಿಯಲು ಮುಂದೆ ಬಂದೀತೇ? ಒಂದು ಬಾರಿ ನಂಬಿಕೆ ದ್ರೋಹ ಮಾಡಿದ ಜೆಡಿಎಸ್ ಅನ್ನು ಇನ್ನೊಂದು ಬಾರಿ ನಂಬುವ ಸಾಹಸವನ್ನು ಬಿಜೆಪಿ ಮಾಡೀತೇ?
ಈಗ ನಡೆದಿರುವದು ಬರೀ ಊಹಾಪೋಹ ಮಾತ್ರ. ಅದು ವಾಸ್ತವದ ಘಟ್ಟ ತಲುಪುವುದರ ನಡುವೆ ಸಾಕಷ್ಟು ಕಂದಕಗಳನ್ನು ದಾಟಬೇಕು. ಮೊದಲನೆಯದಾಗಿ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಆದದ್ದು ರಾಷ್ಟ್ರೀಯ ಮಟ್ಟದಲ್ಲಿ, ಅದೂ ಕಾಂಗ್ರೆಸ್ ಮತ್ತು ಜೆಡಿಎಸ್ ರಾಷ್ಟೀಯ ಅಧ್ಯಕ್ಷರುಗಳ ನಡುವೆ. ಈ ಮೈತ್ರಿಯನ್ನೇ ಲೋಕಸಭೆ ಚುನಾವಣೆಗೂ ವಿಸ್ತರಿಸಲಾಗಿದೆ. ಮೈತ್ರಿ ಸರಕಾರದ ಭವಿಷ್ಯ ನಿರ್ಧರಿಸುವವರು ಅವರಿಬ್ಬರೇ ಹೊರತು, ಎರಡೂ ಪಕ್ಷದ ರಾಜ್ಯ ನಾಯಕರಲ್ಲ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೇ ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆಗೆ ಮಾತಾನಾಡಿ ಎಲ್ಲವನ್ನೂ ನಿರ್ಧರಿಸಿದರೇ ಹೊರತು, ಸ್ಥಳೀಯವಾಗಿ ಸಿದ್ದರಾಮಯ್ಯನವರನ್ನು ಒಳಗೊಂಡಂತೆ ಯಾವ ಕಾಂಗ್ರೆಸ್ ನಾಯಕರ ಜೊತೆಯೂ ಚರ್ಚಿಸಲೇ ಇಲ್ಲ. ಒಂದು ವೇಳೆ ಏನಾದರೂ ಚರ್ಚೆ ಮಾಡಿದರೂ, ಸಿದ್ದರಾಮಯ್ಯನವರು ಒಪ್ಪುತ್ತಲೇ ಇರಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ.
ಆ ಸಮಯದಲ್ಲಿ ರಾಹುಲ್ ಗಾಂಧಿಯವರಿಗೆ, ಲೋಕಸಭೆ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಶತಾಯಗತಾಯ ಇರಬಾರದಾಗಿತ್ತು. ಆದ್ದರಿಂದಲೇ ಸಮ್ಮಿಶ್ರ ಸರಕಾರವನ್ನು ಯಾವ ಕರಾರು ಇಲ್ಲದೆ ಮಾಡಲಾಯಿತು. ಅದರಲ್ಲಿ ವಿಧಾನಸಭೆ ಅದಿಕಾರಾವಧಿಯೊಳಗೆ ಎರಡೂ ಪಕ್ಷಗಳು ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳಬೇಕೆನ್ನುವ ಕರಾರೂ ಇರಲಿಲ್ಲ. ಹೀಗಾಗಿ, ಮುಖ್ಯಮಂತ್ರಿ ಪದವಿಯನ್ನು ಕಾಂಗ್ರೆಸಿಗೆ ಬಿಟ್ಟುಕೊಡಬೇಕು ಎಂದು ಕೇಳಲು ಕಾಂಗ್ರೆಸಿಗೆ ಯಾವ ನೈತಿಕ ಅಧಿಕಾರವೂ ಇಲ್ಲ. ರಾಹುಲ್ ಗಾಂಧಿಯವರ ಅನುಮತಿಯಿಲ್ಲದೆ ಸ್ಥಳೀಯ ಕಾಂಗ್ರೆಸಿಗರಾಗಲೀ ಸಿದ್ದರಾಮಯ್ಯನವರಿಗಾಗಲೀ ಯಾವ ಬದಲಾವಣೆಯನ್ನೂ ಮಾಡುವ ಅಧಿಕಾರ ಈ ಬಾರಿಯಂತೂ ಹೊಂದಿಲ್ಲ. ಅವರು ಒಂದು ವೇಳೆ ಅನುಮತಿಯನ್ನು ಕೊಟ್ಟರೂ, ಅದನ್ನು ಒಪ್ಪುವುದಕ್ಕೆ ದೇವೇಗೌಡರು ತಯಾರು ಇರಲಿಕ್ಕಿಲ್ಲ.
ಹೀಗಾಗಿ , ಸಿದ್ದರಾಮಯ್ಯವವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆನ್ನುವ ವಿವಾದ ಈಗ ಸದ್ಯ ‘ಬಂಟರ’ ಮಟ್ಟದ ಮಾತುಕತೆಯಲ್ಲಷ್ಟೇ ಇದೆ. ಸಿದ್ದರಾಮಯ್ಯನವರು ಬಹಿರಂಗವಾಗಿ ಏನೂ ಹೇಳಿಲ್ಲ. ಎಲ್ಲ ಮಾತನ್ನು ಬಹಿರಂಗವಾಗಿ ಆಡುತ್ತಿರುವದು ಅವರ ನೆಚ್ಚಿನ ಬಂಟರು ಮಾತ್ರ. ಹಾಗೆಯೇ ಅತ್ತ ಜೆಡಿಎಸ್‌ನಲ್ಲೂ, ದೇವೇಗೌಡರು ಮೈತ್ರಿಧರ್ಮವನ್ನು ಪಾಲಿಸಬೇಕೆಂದು ಹೇಳಿದ್ದಾರೆಯೇ ಹೊರತು, ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಆದರೆ, ಅವರ ಪಕ್ಷದ ರಾಜ್ಯಾಧ್ಯಕ್ಷರಾದ ವಿಶ್ವನಾಥ ಅವರು ಬಹಳ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.
ಹೀಗಾಗಿ, ಒಂದು ತರಹದ ಮುಸುಕಿನ ಯುದ್ಧ ನಡೆದಿದೆ. ಇಲ್ಲಿ ಪ್ರಶ್ನೆ ಬಂದಿರುವುದು, ಸಿದ್ದರಾಮಯ್ಯನವರು ತಮ್ಮ ಬಂಟರ ಬಾಯಿಗೆ ಬೀಗ ಹಾಕಲು ಯಾಕೆ ತಯಾರಿಲ್ಲ? ಕಾಂಗ್ರೆಸ್ ಶಾಸಕರಲ್ಲಿ ಕುಮಾರಸ್ವಾಮಿಯವರ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ಅಸಮಧಾನವಿದೆ ಮತ್ತು ಅದರ ಅರಿವೂ ಸಿದ್ದರಾಮಯ್ಯನವರಿಗೆ ಇದೆ. 2014ರ ಲೋಕಸಭೆ ಚುನಾವಣೆಯ ಸೋಲಿನಿಂದ ಕಾಂಗ್ರೆಸ್ ನಿರ್ವಿಣ್ಣವಾದ ನಂತರ ಕಾಂಗ್ರೆಸ್ ಹೈಕಮಾಂಡು ತನ್ನ ಕಮಾಂಡು ಕಳೆದುಕೊಂಡಿತ್ತು. ಅಂತಹ ಪರಿಸ್ಥಿತಿ ಈಗ ಪುನಃ ಉದ್ಭವಿಸುವ ಪರಿಸ್ಥಿತಿ ಇರುವಾಗ, ಕಾಂಗ್ರೆಸ್ ಹೈಕಮಾಂಡಿನ ಮಾತನ್ನು ಸಿದ್ದರಾಮಯ್ಯನವರು ಎಷ್ಟರಮಟ್ಟಿಗೆ ಕೇಳಬಹುದು? ತಮ್ಮ ಬಂಟರನ್ನು ಮಾತನಾಡದಂತೆ ತಡೆಯದಿರುವ ಸಿದ್ದರಾಮಯ್ಯನವರು, ಬಹಿರಂಗವಾಗಿ ತಾವೇ ಮುಖ್ಯಮಂತ್ರಿಯಾಗಬೇಕೆಂದು ಸ್ವತಃ ಮಾತಾಡುವರೇ ಎನ್ನುವ ಒಂದು ಸನ್ನಿವೇಶವನ್ನು ಕಾದುನೋಡಬೇಕಿದೆ.
ಅಂಕಣಕಾರರು ಹಿರಿಯ ಪತ್ರಕರ್ತರು