ಕರೋನಾ ವೈರಸ್ ರೋಗ ಕಳೆದ ವರ್ಷಾಂತ್ಯಕ್ಕೆ ಸೃಷ್ಟಿಸಿದ ಭೀತಿ ಮೂರು ತಿಂಗಳಾದರೂ ಕಡಿಮೆಯಾಗಿಲ್ಲ. ದಿನದಿಂದ ದಿನಕ್ಕೆ ಜನರಲ್ಲಿ ಭಯ ಹೆಚ್ಚುತ್ತಲೇ ಇದೆ. ಇದಕ್ಕೆ ಸುದ್ದಿ ವಾಹಿನಿಗಳ ಕೊಡುಗೆಯಂತೂ ಸಾಕಷ್ಟು ಇದೆ. ಇಷ್ಟೆಲ್ಲದರ ನಡುವೆ ಕರೋನಾಕ್ಕೆ ಹೆದರಬೇಡಿ ಅಂತ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ. ಹಾಗೂ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಅಂತ ಅತೀ ಹೆಚ್ಚು ಭಯ ಮೂಡಿಸಿರುವ ಸುದ್ದಿವಾಹಿನಿಗಳ ಎದುರು ಹೇಳಿಕೊಂಡಿದ್ದಾರೆ ಎಂಬುದು ಒಂದು ದುರಂತ.
ಚೀನಾದ ವುಹಾನ್‌ನಿಂದ ಆರಂಭವಾದ ಕರೋನಾ ವೈರಸ್ ಏನಿಲ್ಲವದರೂ ಸುಮಾರು ಮೂರು ಸಾವಿರ ಜನರನ್ನ ಬಲಿ ತೆಗೆದುಕೊಂಡಿದೆ. ಒಂದು ಲಕ್ಷ ಜನರಿಗೆ ಸೋಂಕು ತಗುಲಿದೆ ಈ ಮಾಹಿತಿಯನ್ನ ವಿಶ್ವ ಆರೋಗ್ಯ ಸಂಸ್ಥೆಯೇ ಬಿಡುಗಡೆ ಮಾಡಿದೆ. ಹಾಂಕ್‌ಕಾಂಗ್, ಇರಾನ್, ಇಟಲಿ, ಜಪಾನ್, ಸಿಂಗಾಪುರ, ದಕ್ಷಿಣ ಕೋರಿಯಾ, ಅಮೆರಿಕಾದಲ್ಲೂ ಇದರ ಛಾಯೆ ಆವರಿಸಿಕೊಂಡಿದೆ. ಹಾಗೇ ಕರೋನಾ ತರಹದ ಸೋಂಕುಗಳ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ಮಾಧ್ಯಮಗಳು ಕ್ಷುಲ್ಲಕ ವಿಚಾರಗಳನ್ನ ಬ್ರೇಕಿಂಗ್ ಮಾಡಿ ಮುಗ್ಧ ಜನರನ್ನ ಹಾದಿ ತಪ್ಪಿಸುತ್ತಿವೆ. ಹೀಗೆ ಬರೆಯುತ್ತಾ ಮಾಧ್ಯಮಗಳನ್ನ ತೆಗಳುವ ಕೆಲಸ ಮಾಡುತ್ತೇವೆಂದೇನಲ್ಲ. ಎರಡು ದಿನಗಳಿಂದ ರಾಜ್ಯದೆಲ್ಲೆಡೆ ಕರೋನಾ ಭೀತಿಯದ್ದೇ ಮಾತು. ಸಾಮಾಜಿಕ ಜಾಲತಾಣಗಳಲ್ಲಿ ಟಿವಿ ಮಾಧ್ಯಮಗಳ ವಿಡಿಯೋ ತುಣುಕು ಹಾಗೂ ಪತ್ರಿಕೆಗಳ ಕಟ್ಟಿಂಗ್‌ಗನ್ನ ಅತೀ ಹೆಚ್ಚು ಶೇರ್ ಮಾಡಲಾಗುತ್ತಿದೆ.
ಈ ಎಲ್ಲಾ ಬೆಳವಣಿಗೆಯನ್ನ ನಾವು ರಚನಾತ್ಮಕ ಚರ್ಚೆಯ ಮೂಲಕ ತೆಗೆದುಕೊಂಡು ಹೋಗಬೇಕಿತ್ತು. ಆದರೆ, ಟಿವಿ ಮಾಧ್ಯಮಗಳು, ಪತ್ರಿಕೆಗಳು ಜನರಲ್ಲಿ ಹೃದಯ ಬಡಿತ ಏರಿಸುವುದರಲ್ಲೇ ನಿರತವಾಗಿವೆ. ಯಾವುದಾದರೂ ರೋಗ ಬಂದರೆ ಗಂಜಲ ಕುಡಿಸುವ, ಸಗಣಿ ಎರಚುವ ಜನಪ್ರತಿನಿಧಿಗಳೇ ಇರುವಾಗ ಆರೋಗ್ಯ ಇಲಾಖೆ ಸುಧಾರಣೆ ಎಲ್ಲಿಂದ ಆಗಬೇಕು? ಕರ್ನಾಟಕದ ದೈತ್ಯ ಸರ್ಕಾರಿ ಆಸ್ಪತ್ರೆ ಶಿವಮೊಗ್ಗದ ಜಿಲ್ಲಾಸ್ಪತ್ರೆ ಮೆಗ್ಗಾನ್. ಇಂದಿಗೂ ಶುಚಿತ್ವವನ್ನ ಕಾಪಾಡಿಕೊಂಡು ಬಂದಿಲ್ಲ. ನಗರದಲ್ಲಿರುವ ಖಾಸಗಿ ಆಸ್ಪತ್ರೆಗಳೆಲ್ಲಾ ಪರೋಕ್ಷವಾಗಿ ರಾಜಕಾರಣಿಗಳದ್ದೇ ಆದರೆ, ಸರ್ಕಾರಿ ಆಸ್ಪತ್ರೆಗಳು ಹೇಗೆ ಸರಿಯಾಗುತ್ತವೆ? ಶಿವಮೊಗ್ಗದಲ್ಲಿ ಕರೋನಾ ವೈರಸ್ 11 ಜನರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಖಾಸಗಿ ಚಾನೆಲ್ ಸುದ್ದು ಬಿತ್ತರಿಸಿ ವಿಡಿಯೋ ವೈರಲ್ ಆಗಲು ಕಾರಣವಾಗಿದೆ, ಒಂದೆರಡು ಪತ್ರಿಕೆಗಳೂ ಸಹ ಇಂತಹದ್ದೇ ವರದಿ ಪ್ರಕಟ ಮಾಡಿಕೊಂಡು ಚಾನೆಲ್‌ಗಳಿಗೂ ಸೆಡ್ಡು ಹೊಡೆದಿವೆ, ಇದನ್ನ ಯಾರು ಸುಧಾರಣೆ ಮಾಡ್ತಾರೆ..! ಹೆಚ್1ಎನ್1 ರೋಗ ಬಂದರೇ ಭಯಬೀಳುವ ನಾವು ಇಂತಹ ಮಾರಕ ರೋಗ ಬಂದರೆ ಬದುಕುವುದುಂಟೇ?
ಕರೋನಾ ದೇಶಕ್ಕೆ ಕಾಲಿಟ್ಟ ಮೇಲೆ ಸುಮಾರು ನಲವತ್ತು ಸಾವಿರಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ಮಾಡಿರುವುದು ನಿಜ. ಅವರ ಮೇಲೆ ಅರೋಗ್ಯಾಧಿಕಾರಿಗಳು ನಿಗಾ ಇಟ್ಟಿರುತ್ತಾರೆ , ಅವರೆಲ್ಲಾ ಮನೆಯಲ್ಲೇ ಇದ್ದರೂ ಸಹ ಪ್ರತಿದಿನ ಅವರಿಂದ ವರದಿ ಪಡೆದುಕೊಳ್ಳಲಾಗುತ್ತೆ, ಕರೋನಾ ವದಂತಿ ದೂರವಾಗುವ ವರೆಗೆ ಎಲ್ಲೂ ಹೊರಗಡೆ ಹೋಗಬೇಡಿ ಎಂದೂ ಕೂಡ ಆರೋಗ್ಯ ಅಧಿಕಾರಿಗಳು ಮನವಿ ಮಾಡಿಕೊಂಡಿರುತ್ತಾರೆ, ಪ್ರತಿದಿನ ಕರೋನಾ ಭೀತಿ ಇರುವ ರಾಷ್ಟ್ರಗಳಿಂದ ಬರುವ ವಿಮಾನಗಳ ಪ್ರಯಾಣಿಕರನ್ನ ಇದೇ ತರಹ ತಪಾಸಣೆಗೆ ಒಳಪಡಿಸುತ್ತಾರೆ, ಇದರ ಅರ್ಥ ಪ್ರತಿ ದಿನ ಈ ಸಂಖ್ಯೆ ಹೆಚ್ಚಾಗುತ್ತಿರುತ್ತೆ, ಅಂದ ಮಾತ್ರಕ್ಕೆ ಏರುದನಿಯ ಸುದ್ದಿ ಪ್ರಸಾರಕ್ಕೆ ಯೋಗಯ ಸರಕು ಎಂದೇಕೆ ಭಾವಿಸಿಕೊಂಡಿರುತ್ತಾರೆ..? ಬೆಂಗಳೂರಿನಲ್ಲಿ ಕೂತ ಪತ್ರಕರ್ತ ಜಿಲ್ಲೆಗಳ ವರದಿಗಾರರ ಮಾಹಿತಿ ಮೇರೆಗೆ ಸುದ್ದಿಯನ್ನ ವಿಚಿತ್ರ ಶಬ್ದದೊಂದಿಗೆ, ನಿರೂಪಕ ಏರು ದನಿಯಲ್ಲಿ ಬಿತ್ತರಿಸಿಬಿಟ್ಟ ಅಂದುಕೊಳ್ಳಿ, ಈಗ ಅದು ಕರೋನ ರೋಗಕ್ಕಿಂತ ಭಯಾನಕವಾಗಿ ಓಡಾಡಿರುತ್ತೆ. ಇದು ಕನ್ನಡದ ಪ್ರತಿಷ್ಠಿತ ಸುದ್ದಿವಾಹಿನಿಯೇ ಆಗಿರುತ್ತೆ. ಇದೇ ನಾವುಗಳು ಸೋಂಕನ್ನ ಹಬ್ಬಿಸುವ ಬಗೆ, ಇವೆಲ್ಲವನ್ನ ಬಿಟ್ಟು ಆರೋಗ್ಯ ಇಲಾಖೆಯಲ್ಲಿನ ಸುಧಾರಣೆ ಹಾಗೂ ಈ ತರಹದ ರೋಗಗಳು ಬಂದರೆ ನಿಭಾಯಿಸಲು ನಾವು ಹೇಗೆ ಸನ್ನದ್ಧರಾಗಿದ್ದೇವೆಂಬುದನ್ನ ಹಾಗೆಯೇ ಮುಂಜಾಗ್ರತ ಕ್ರಮದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ.
ಶಿವಮೊಗ್ಗದಲ್ಲಿ ವೈರಾಣು ಸಂಶೋಧನಾ ಕೇಂದ್ರ
ಮಂತ್ರಿ ಮಹೋದಯರಿಂದ ಮಾಧ್ಯಮ ಪ್ರತಿನಿಧಿಗಳವರೆಗೆ, ರಾಷ್ಟ್ರೀಯ ಪತ್ರಿಕೆ ಹಾಗೂ ಸುದ್ದಿವಾಹಿನಿಗಳ ಕೊಡುಗೆಯನ್ನೂ ನೆನೆಯುತ್ತಾ ನಾವು ಚಿಂತಿಸಬೇಕಿದ್ದ ವಿಷಯಗಳನ್ನ ನೋಡೋದಾದರೆ ನಮ್ಮ ದೇಶದಲ್ಲಿ ವೈರಾಣು ಸಂಶೋಧನಾ ಕೇಂದ್ರಗಳಿವೆಯಾ? ಇಂತಹ ರೋಗಗಳು ಬಂದರೆ ಸಂಶೋಧನೆ ಮಾಡಲು ಸೂಕ್ತ ಸ್ಥಳಗಳೆಲ್ಲಿವೆ? ಮಹಾರಾಷ್ಟ್ರದ ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಶೋಧನಾ ಕೇಂದ್ರಕ್ಕೆ ಈ ಎಲ್ಲಾ ರಕ್ತದ ಮಾದರಿಯನ್ನ ಕಳುಹಿಸಿ ದೃಢಪಡಿಸಿಕೊಳ್ಳಲಾಗುತ್ತಿದೆ ಎಂಬುದು ಆಶ್ವರ್ಯವೆನಿಸಿದರೂ ಸತ್ಯ. ಈಗ ಕರೋನಾ ವೈರಸ್ ಹಾಗೂ ಮಲೆನಾಡಿನ ಕೆಎಫ್‌ಡಿ ( ಕ್ಯಾಸನೂರು ಫಾರೆಸ್ಟ್ ಡಿಸೀಜ್) ಅಂದರೆ ಮಂಗನ ಕಾಯಿಲೆಯನ್ನ ಹೋಲಿಕೆ ಮಾಡಿ ನೋಡೋಣ. ನಾವು ಈಗಲೂ ಸಹ ಯಾವುದೇ ಮಾರಣಾಂತಿಕ ರೋಗಕ್ಕೆ ತುತ್ತಾದರೂ ರಕ್ಷಣೆ ಮಾಡಲು ಸೃಷ್ಟಿಕರ್ತನೇ ಬರಬೇಕೇ ವಿನಃ ವೈಜ್ಞಾನಿಕವಾಗಿ ಏನೂ ಸಾಧಿಸಿಕೊಂಡಿಲ್ಲ, ಮೇಲೆ ಹೇಳಿದಂತೆ ವೈರಾಣು ಸಂಶೋಧನಾ ಕೇಂದ್ರಗಳೇ ಇಲ್ಲ. ಮಂಗನ ಕಾಯಿಲೆ ಎರಡು ವರ್ಷಗಳ ಹಿಂದೆ ಮರಣ ಮೃದಂಗವನ್ನೇ ಭಾರಿಸಿತ್ತು. ಪಶ್ಚಿಮಘಟ್ಟದ ನಾಲ್ಕು ರಾಜ್ಯಗಳಲ್ಲಿ ದಶಕಗಳಿಂದ ಈ ವೈರಾಣುಗಳು ಕ್ರಿಯಾಶೀಲವಾಗಿವೆ. ಆದರೂ, ನಮ್ಮಲ್ಲಿ ಸಂಶೋಧನಾ ಕೇಂದ್ರವೂ ಇಲ್ಲ ಉತ್ತಮ ಆಸ್ಪತ್ರೆಯಂತೂ ಮೊದಲೇ ಇಲ್ಲ. ಕಳೆದ ಸರ್ಕಾರ ಈ ವಿದ್ಯಮಾನಗಳನ್ನ ಗಮನಿಸಿ ಬಜೆಟ್‌ನಲ್ಲಿ ಕೆಎಫ್‌ಡಿ ಲ್ಯಾಬ್ ನಿರ್ಮಾಣಕ್ಕೆ ಹದಿನೈದು ಕೋಟಿ ಮೀಸಲಿಟ್ಟಿತ್ತು, ಈಗಿನ ಸರ್ಕಾರ ಇನ್ನಷ್ಟು ಅನುದಾನವನ್ನ ನೀಡಿ ಒಂದು ಉತ್ತಮ ಗುಣಮಟ್ಟದ ವೈರಾಣು ಸಂಶೋಧನಾ ಕೇಂದ್ರವನ್ನ ಸ್ಥಾಪಿಸಲು ಹೊರಟಿದೆ.
ಕೆಎಫ್‌ಡಿ ಸಂಶೋಧನಾ ಕೇಂದ್ರ ದಕ್ಷಿಣ ಭಾರತದ ಅತಿ ದೊಡ್ಡ ವೈರಾಣು ಸಂಶೋಧನಾ ಕೇಂದ್ರವಾಗಿ ಶಿವಮೊಗ್ಗದಲ್ಲಿ ತಲೆ ಎತ್ತಲಿದೆ. ಇದಕ್ಕೂ ರಾಜಕೀಯ ಬೆಸೆದುಕೊಂಡು ಸಾಗರದ ಶಾಸಕ ಹರತಾಳು ಹಾಲಪ್ಪ ತಮ್ಮ ಕ್ಷೇತ್ರಕ್ಕೇ ಬೇಕು ಎಂದು ಹಟ ಹಿಡಿದಿದ್ದರು, ಮಂಗನ ಕಾಯಿಲೆ ಬಗ್ಗೆ ವಿಧಾನಸೌಧದಲ್ಲಿ ಕೂಗಾಡಿದ್ದ ಶ್ರೇಯವೂ ಅವರಿಗೆ ಸೇರಬೇಕು ಆದರೆ ವರ್ಷವಿಡೀ ಈ ಲ್ಯಾಬ್ ಮಂಗನ ಕಾಯಿಲೆಗೆ ಸೀಮಿತವಾಗುವುದಿಲ್ಲ, ಪುಣೆಯಲ್ಲಿನ ವೈರಾಣು ಸಂಶೋಧನಾ ಕೇಂದ್ರದ ತರಹ ಎಲ್ಲಾ ರೋಗಗಳಿಗೂ ಇಲ್ಲೇ ಸಂಶೋಧನೆ ಹಾಗೂ ರಕ್ತ ಪರೀಕ್ಷೆಯಾಗಬೇಕಿದೆ. ಈ ಸಂಶೋಧನಾ ಕೇಂದ್ರಗಳನ್ನ ಬೇಕಾಬಿಟ್ಟಿ ನಿರ್ಮಾಣ ಮಾಡಲಾಗದು, ಸಿವಿಲ್ ಕೆಲಸ ಮಾಡುವವರೂ ಕೂಡ ಪುಣೆಯ ವಿಜ್ಞಾನಿಗಳೇ ಆಗಿರ್ತಾರೆ, ಯಾವುದೇ ಮಾರಣಾಂತಿಕ ರೋಗವನ್ನ ಪರೀಕ್ಷೆ ಮಾಡಬೇಕಾದರೆ ಅದು ವಾತಾವರಣದ ಸಂಪರ್ಕಕ್ಕೆ ಬರುವ ಹಾಗಿಲ್ಲ, ಪುಣೆಯಲ್ಲಿರುವ ಕೇಂದ್ರವನ್ನೂ ಸಹ ೧೯೫೨ರಲ್ಲಿ ನಿರ್ಮಾಣ ಮಾಡುವಾಗ, ವಿಶ್ವ ಆರೋಗ್ಯ ಸಂಸ್ಥೆ, ಅಮೆರಿಕದ ರಾಕ್‌ಫೆಲ್ಲರ್ ಪ್ರತಿಷ್ಟಾನದ ಸಹಯೋಗದಿಂದ ನಿರ್ಮಾಣ ಮಾಡಲಾಗಿತ್ತು. ಶಿವಮೊಗ್ಗದಲ್ಲಿಯೇ ನಿರ್ಮಾಣವಾಗುವ ಈ ಕೇಂದ್ರ ಮಂಗನ ಕಾಯಿಲೆಯಷ್ಟೇ ಅಲ್ಲ ಕರೋನಾ ರೋಗಚರ್ಯೆಯನ್ನೂ ಪರೀಕ್ಷೆಗೆ ಒಳಪಡಿಸಬಹುದು. ರಾಜ್ಯವೇನೋ ಈ ತರಹದ ಸಂಶೋಧನಾ ಕೇಂದ್ರಕ್ಕೆ ಅಡಿಪಾಯ ಹಾಕಲು ಹೊರಟಿದೆ, ಬೇರೆ ರಾಜ್ಯಗಳ ಕಥೆ ಏನು? ಪುಣೆಯ ತರಹ ದಕ್ಷಿಣ ಭಾರತದ ರಾಜ್ಯಗಳಿಗೆ ಇಲ್ಲಿನ ಕೆಎಫ್‌ಡಿ ಲ್ಯಾಬ್ ಬಳಕೆಯಾಗುತ್ತೆ ಅಷ್ಟೇ.