ಇಡೀ ವಿಶ್ವವೇ ಕರೋನಾ ವೈರಸ್ ದಾಳಿಗೆ ತತ್ತರಿ ಹೋಗಿದೆ, ಇದರ ಬೆನ್ನಲ್ಲೇ ಹಂದಿ ಜ್ವರ, ಹಕ್ಕಿಜ್ವರದಂತಹ ಬಾಧೆಗಳೂ ಅಪ್ಪಳಿಸಿವೆ. ಇವುಗಳ ಸಾಲಿಗೆ ಮರೆತುಹೋದ ಭೀಕರ ವೈರಸ್ ಉಲ್ಭಣವಾಗುವ ಲಕ್ಷಣಗಳು ಕಾಣುತ್ತಿವೆ. ಚೀನಾದಲ್ಲೇ ಟಿಸಿಲೊಡೆಯುತ್ತಿರುವ ಈ ಜ್ವರದ ವೈರಾಣುವಿಗೆ ಹಂಟಾವೈರಸ್ ಎಂದು ಹೆಸರು. ಎಂಟು ದಶಕಗಳ ಹಿಂದೆಯೇ ಈ ವೈರಾಣು ಸಾವಿರಾರು ಜನರನ್ನ ಬಲಿತೆಗೆದುಕೊಂಡಿತ್ತು. ಈಗದು ಅದೇ ಪ್ರಾಂತ್ಯದಲ್ಲಿ ಅಂದರೆ ಚೀನಾದಲ್ಲೇ ಕಾಣಿಸಿಕೊಂಡಿದೆ ಎಂಬ ಸುದ್ದಿ ಆಘಾತ ಮೂಡಿಸಿದೆ.
ಹಂಟಾವೈರಸ್ ಮೂಲ, ವಿನಾಶ ಹಾಗೂ ವ್ಯಾಪ್ತಿಗೂ ಮುನ್ನ ಸುದ್ದಿ ಸ್ಫೋಟ ನೋಡುವುದಾದರೆ, ಚೀನಾದೇಶದ ಕಮ್ಯುನಿಷ್ಟ್ ಪಕ್ಷದ ಒಡೆತನದ ಗ್ಲೋಬಲ್ ಟೈಮ್ಸ್ ಹಂಟಾವೈರಸ್ ಬಗ್ಗೆ ಸುದ್ದಿ ಬಿತ್ತರಿಸಿದೆ. ಚೀನಾದ ಶಾನ್‌ಡಾಂಗ್ ಪ್ರಾಂತ್ಯಕ್ಕೆ ಹೊರಟಿದ್ದ ಯುನಾನ್ ಪ್ರಾಂತ್ಯದ ವ್ಯಕ್ತಿ ಬಸ್‌ನಲ್ಲಿಯೇ ಕುಸಿದು ಬಿದ್ದು ಮೃತನಾಗಿದ್ದಾನೆ. ಆತನ ಸಹ ಪ್ರಯಾಣಿಕರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಆತಂಕ ಹುಟ್ಟಿಸಿದೆ. ಏನದು ಹಂಟಾವೈರಸ್..? ಇದರ ವಾಹಿನಿ ಯಾವುದು..? ಔಷಧ ಇದೆಯಾ..?
ಹಂಟಾವೈರಸ್ ಧ್ವಂಸಕಗಳೆಂದು ಕರೆಯುವ ಇಲಿ ಹೆಗ್ಗಣಗಳನ್ನ ವಾಹಿನಿಯಾಗಿ ಬಳಸಿಕೊಳ್ಳುತ್ತೆ. ಈ ಬಗೆಯ ವೈರಸ್ ಮೊದಲು ಪತ್ತೆಯಾಗಿದ್ದು ೧೯೫೦ರಲ್ಲಿ ಅಮೆರಿಕಾ-ಕೊರಿಯಾ ಯುದ್ಧದ ಸಮಯದಲ್ಲಿ. ಇದರ ದಾಳಿಗೆ ಸುಮಾರು ಮೂರು ಸಾವಿರ ಜನರು ಮೃತಪಟ್ಟಿದ್ದರು. ದಕ್ಷಿಣ ಕೊರಿಯಾದ ಪ್ರಸಿದ್ಧ ನದಿ ಹಂಟನ್ ನ ತೀರದಲ್ಲಾದ ಮರಣ ಮೃದಂಗಕ್ಕಾಗಿ ಈ ವೈರಸ್ ಹಂಟಾವೈರಸ್ ಎಂದು ಕರೆದರು. ಇದನ್ನ ಎರಡು ಭಾಗಗಳಾಗಿ ವಿಂಗಡಿಸಿ ಸಂಬೋಧನೆ ಮಾಡಲಾಗುತ್ತೆ. ಯೂರೋಪ್ ಹಾಗೂ ಏಷ್ಯಾದಲ್ಲಿ ಓಲ್ಡ್ ವರ್ಲ್ಡ್ ಹಂಟಾವೈರಸ್ ಎಂದು ಕರೆದರೆ, ಅಮೆರಿಕದಲ್ಲಿ ಇದನ್ನ ನ್ಯೂವರ್ಲ್ಡ್ ಹಂಟಾವೈರಸ್ ಎಂದು ಕರೆಯಲಾಗುತ್ತೆ. ತೊಂಭತ್ತರ ದಶಕದಲ್ಲಿ ಹಾಗೂ ಇಪ್ಪತ್ತನೇ ಶತಮಾನದ ಆದಿಯಲ್ಲೂ ಈ ವೈರಸ್ ನೂರಾರು ಜನರನ್ನ ಬಲಿತೆಗೆದುಕೊಂಡಿತ್ತು.
ಕರೋನಾದಷ್ಟು ಕರಾಳವಾಗಿ ವ್ಯಾಪಿಸುವುದಿಲ್ಲ ಈ ಹಂಟಾವೈರಸ್. ನಾವು ಕನ್ನಡದಲ್ಲಿ ಧ್ವಂಸಕಗಳು ಎಂದು ಕರೆಯುವ ಇಲಿ, ಹೆಗ್ಗಣದಂತಹ ಪ್ರಾಣಿಗಳು ಈ ವೈರಸ್ ವಾಹಿನಿಗಳು. ಈ ಪ್ರಾಣಿಗಳಿಗೆ ಈ ವೈರಸ್ ಬಾಧಿಸುವುದಿಲ್ಲ ಆದರೆ ದೇಹದಲ್ಲಿ ಆಶ್ರಯಿಸಿರುತ್ತವೆ. ಇವುಗಳ ಮಲಮೂತ್ರದಿಂದ ಪಸರಿಸುವ ಹಂಟಾ ವೈರಾಣುಗಳು ಮನುಷ್ಯನ ದೇಹಕ್ಕೆ ಸೇರಿಕೊಂಡು ಶ್ವಾಸನಾಳಕ್ಕೆ ಬಾಧಿಸುತ್ತೆ. ಎಲ್ಲಾ ವೈರಾಣುಗಳಂತೆ ಇದೂ ಕೂಡ ಉಸಿರುಗಟ್ಟಿಸುವ ರೋಗವೇ ಆದರೆ ನಿಧಾನವಾಗಿ ಹರಡುತ್ತದೆ. ಕರೋನಾ ಹಾಗೂ ಹಂಟಾವೈರಸ್‌ಗಳ ರೋಗಚರ್ಯೆಯಲ್ಲಿ ಸಾಕಷ್ಟು ವ್ಯತ್ಯಾಸಗಳೇನು ಇಲ್ಲ. ಗಂಟಲು ನೋವಿನಿಂದ, ಥಂಡಿ-ಜ್ವರ, ತಲೆನೋವು, ಮೈಕೈನೋವು, ಹೊಟ್ಟೆನೋವು, ಊಟ ಸೇರದೇ ವಾಕರಿಕೆ, ದೇಹ ಆಯಾಸ ಕೊನೆಗೆ ಉಲ್ಭಣಗೊಂಡು ಉಸಿರಾಟಕ್ಕೆ ತೊಂದರೆ ಉಂಟಾಗುತ್ತೆ. ಹಂಟಾವೈರಸ್ ಪೀಡಿತನಿಗೆ ಮೂರ್ನಾಲ್ಕು ವಾರ ಐಸಿಯುನಲ್ಲೇ ಇಟ್ಟುಕೊಂಡು ಚಿಕಿತ್ಸೆ ನೀಡುತ್ತಾರೆ. ಇದಕ್ಕೆ ಎಪ್ಪತ್ತರ ದಶಕದಲ್ಲಿ ದಕ್ಷಿಣ ಕೊರಿಯಾದ ವೈರಾಣು ಸಂಶೋಧಕ ವಾಂಗ್ ಲೀ ಎಂಬುವರು ಚುಚ್ಚುಮದ್ದು ಕಂಡು ಹಿಡಿದು ಪ್ರತಿಬಂಧಿಸಿದ್ದರು. ಆದರೂ ನ್ಯೂವರ್ಲ್ಡ್ ಹಂಟವೈರಸ್ ತೊಂಭತ್ತರ ದಶಕದಲ್ಲಿ ಚಿಗುರಿಕೊಂಡಿತ್ತು.
ಹಂಟಾವೈರಸ್ ಬಗ್ಗೆ ಏಕೆ ಎಚ್ಚರದಿಂದ ನೋಡಬೇಕು ಎಂದರೆ, ನಮ್ಮ ದೇಶವೂ ಸಹ ರೋಗಗಳ ಆವಾಸ ಸ್ಥಾನ. ಪ್ಲೇಗ್‌ನಿಂದ ಕರೋನಾವರೆಗೆ ಎಲ್ಲಾ ರೋಗಗಳೂ ನಮ್ಮವರನ್ನ ಬಲಿತೆಗೆದುಕೊಂಡಿವೆ. ಇಲಿಗಳಿಂದ ಹಂಟಾವೈರಸ್ ಪಸರಿಸಬೇಕೆಂದೇನೂ ಇಲ್ಲ. ಇಲಿ, ಹೆಗ್ಗಣಗಳು ಸಾಕಷ್ಟು ರೋಗಗಳಿಗೆ ವಾಹಕಗಳಾಗಿವೆ. ನಮ್ಮ ದೇಶದಲ್ಲಿ ಇಲಿಜ್ವರ, ಹಕ್ಕಿಜ್ವರ, ಹಂದಿಜ್ವರ, ವೈರಲ್ ಫೀವರ್, ಡೆಂಗ್ಯೂ, ಚಿಕನ್‌ಗೂನ್ಯಾಗಳೂ ಪ್ರತಿವರ್ಷ ಸಾವಿರಾರು ಜನರ ಪ್ರಾಣ ತೆಗೆಯುತ್ತಿವೆ. ನಮಗೆ ರೋಗಗಳ ಸಾಮಾನ್ಯ ಜ್ಞಾನದ ಕೊರತೆ ಇದೆ. ಹಾಗೂ ಬೇಜವಾಬ್ದಾರಿತನ, ಅಸಡ್ಡೆಯಿಂದ ರೋಗವನ್ನ ಅಹ್ವಾನ ಮಾಡಿಕೊಳ್ಳುತ್ತಿದ್ದೇವೆ. ಇದರ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಮೈಖೆಲ್ ರೆಯಾನ್ ಭಾರತವನ್ನ ಹಾಗೂ ಕರೋನಾ ವಿರುದ್ಧ ಸಮರ ಸಾರಿರುವ ಪ್ರಧಾನಿಯನ್ನ ಹೊಗಳಿಬಿಟ್ಟಿದ್ದಾರೆ. ಸಿಡುಬು ಹಾಗೂ ಪೊಲೀಯೋ ಮುಕ್ತಗೊಳಿಸಿದ ಭಾರತಕ್ಕೆ ಕರೋನ ಕಟ್ಟಿಹಾಕುವ ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ. ಇಷ್ಟು ಜನಸಾಂದ್ರತೆ ಇರುವ ರಾಷ್ಟ್ರದಲ್ಲಿ ವೈರಸ್ ದಾಳಿಯನ್ನ ಲಘುವಾಗಿ ಪರಿಗಣಿಸದೇ ಕರೋನಾ ಜತೆಯಲ್ಲಿ ಇತರ ಸಾಂಕ್ರಮಿಕ ರೋಗಗಳ ಬಗ್ಗೆಯೂ ಗಮನ ಹರಿಸಬೇಕಿದೆ. ಸದ್ಯ ಮಾಧ್ಯಮಗಳ ಸುದ್ದಿಗೆ ಬೆಚ್ಚದೇ ಹಂಟಾವೈರಸ್ ಬಿಟ್ಟು ಕರೋನಾ ಮುಕ್ತಗೊಳಿಸಲು ನಾವುಗಳು ಪ್ರಯತ್ನಿಸಬೇಕು.