ಕರೋನಾ ಗುಣಪಡಿಸಲು ಗಂಗಾ ಜಲ ಬಳಸಲು ಸರ್ಕಾರ ಸಲಹೆ; ತಿರಸ್ಕರಿಸಿದ ICMR 

ಇಡೀ ವಿಶ್ವವನ್ನೇ ತಲ್ಲಣಗೊಳಿಸಿ ಎರಡು ಲಕ್ಷಕ್ಕೂ ಅಧಿಕ ಜನರನ್ನು ಬಲಿಪಡೆದುಕೊಂಡಿರುವ ಕೋವಿಡ್‌ 19 ಎಂಬ ಮಹಾಮಾರಿಗೆ ಮದ್ದು ಕಂಡುಹಿಡಿಯುವುದಕ್ಕಾಗಿ ಹತ್ತಾರು ದೇಶಗಳು ಪ್ರಯತ್ನಿಸುತ್ತಿವೆ. ಅದರಲ್ಲೂ ಕೋವಿಡ್‌-19 ನ ತವರು ಚೀನಾದಲ್ಲೂ ಇದಕ್ಕೆ ಲಸಿಕೆ ಕಂಡು ಹಿಡಿಯಲು ಪ್ರಯತ್ನಿಸುತಿದ್ದರೂ ಇನ್ನೂ ಫಲಕಾರಿ ಆಗಿಲ್ಲ. ಅಮೇರಿಕ, ಜರ್ಮನಿ, ಇಟಲಿ ,ಇಸ್ರೇಲ್‌ ಕೂಡ ತಮ್ಮ ಲ್ಯಾಬ್‌ ಗಳಲ್ಲಿ ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ಈ ಸೋಂಕನ್ನು ನಿರ್ನಾಮ ಮಾಡಲು ಶತಪ್ರಯತ್ನ ನಡೆಸಿವೆ. ಇದೆಲ್ಲದರ ನಡುವೆ ಇಸ್ರೇಲ್‌ ನ ವಿಜ್ಞಾನಿಗಳು

ಸಿದ್ದಪಡಿಸಿರುವ ಕೋವಿಡ್‌ ಸೋಂಕು ಲಸಿಕೆ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಹೇಳಲಾಗಿದೆ. ನಮ್ಮ ದೇಶದಲ್ಲೂ ಕೂಡ ಈ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಪ್ರಯತ್ನ ನಡೆಸಿದ್ದಾರೆ. ಆಯುರ್ವೇದದಲ್ಲೂ ಕೂಡ ಇದಕ್ಕೆ ಮದ್ದು ಕಂಡು ಹಿಡಿಯುವ ಪ್ರಯತ್ನಗಳೂ ನಡೆದಿವೆ. ಈ ನಡುವೆ ಕೇಂದ್ರದ ಮೋದಿ ಸರ್ಕಾರ ಗಂಗಾ ನದಿಯ ನೀರನ್ನು ಬಳಸಿಕೊಂಡು ಕೋವಿಡ್‌ 19 ನ್ನು ಗುಣಪಡಿಸಲು ಸಾಧ್ಯವೇ ಎಂಬ ಬಗ್ಗೆ ಸಂಶೋಧನೆ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಅರ್‌ ) ಯನ್ನು ಕೋರಿತ್ತು. ಆದರೆ ಈ ಪ್ರಸ್ತಾವನೆಯನ್ನು ಮಂಡಳಿ ತಿರಸ್ಕರಿಸಿದೆ. ಮಂಡಳಿಯ ಮೂಲವೊಂದು ಈ ವಿಷಯವನ್ನು ಬಹಿರಂಗಪಡಿಸಿದ್ದು ಇಡೀ ದೇಶವೇ ಕೋವಿಡ್‌ ವಿರುದ್ದ ಹೋರಾಡುತ್ತಿರುವ ಈ ಸಮಯದಲ್ಲಿ ಮಂಡಳಿ ಕೂಡ ಸೋಂಕಿನ ವಿರುದ್ದ ಹೋರಾಟದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದೆ. ಇದು ಸಂದಿಗ್ದ ಮತ್ತು ಅಮೂಲ್ಯ ಸಮಯವಾಗಿದ್ದು ಇತರ ಸಂಶೋಧನೆಗಳಿಗೆ ಸಮಯ ವ್ಯರ್ಥ ಮಾಡಲು ಸಾದ್ಯವಿಲ್ಲ ಎಂದು ಹೇಳಿದೆ.

ಈ ಕುರಿತು ಮೊದಲು ಪ್ರಸ್ತಾವನೆ ಸಲ್ಲಿಸಿದ್ದು ಅತುಲ್ಯ ಗಂಗಾ ಎಂಬ ಎನ್‌ಜಿಒ ಅಗಿದೆ. ಈ ಪ್ರಸ್ತಾವನೆಯ ಕುರಿತು ಹೆಚ್ಚಿನ ಸಂಶೋಧನೆ ನಡೆಸುವಂತೆ ಕೇಂದ್ರ ಜಲ ಶಕ್ತಿ ಸಚಿವಾಲಯ ವೈದ್ಯಕೀಯ ಮಂಡಳಿಯನ್ನು ಕೋರಿತ್ತು . ಅದರೆ ಮಂಡಳಿಯು ಈ ಮನವಿಯನ್ನು ತಳ್ಳಿ ಹಾಕಿದೆ ಎಂದು ತಿಳಿದು ಬಂದಿದೆ. ಅತುಲ್ಯ ಗಂಗಾ ಕಳೆದ ತಿಂಗಳು ಕೇಂದ್ರ ಸರ್ಕಾರಕ್ಕೆ ಪತ್ರವೊಂದನ್ನು ಬರೆದು ಗಂಗಾ ನದಿಯ ನೀರಿನಲ್ಲಿ ಬ್ಯಾಕ್ಟಿರಿಯೋಫೇಜ್‌ ಎಂದು ಕರೆಯಲ್ಪಡುವ ನಿಂಜಾ ವೈರಸ್‌ ಇರುವುದನ್ನು ಉಲ್ಲೇಖಿಸಿದ್ದು ಇದೊಂದು ಪ್ರಭಾವೀ ವೈರಸ್‌ ಆಗಿದ್ದು ಕೋವಿಡ್‌ 19 ವೈರಸ್‌ ನ್ನು ತಿನ್ನುತ್ತದೆ ಎಂದು ಹೇಳಿತ್ತು. ಈ ಸ್ವಯಂ ಸೇವಾ ಸಂಸ್ಥೆ ಕಳೆದ ಏಪ್ರಿಲ್ 3 ರಂದು ನಿಂಜಾ ವೈರಸ್ ನ ಗುಣ ಲಕ್ಷಣಗಳ ಕುರಿತು ಅಧ್ಯಯನ ನಡೆಸುವಂತೆ ಕೋರಿತ್ತು. ಅಲ್ಲದೆ ಈ ಪ್ರಸ್ತಾವನೆಯ ಪ್ರತಿ ಒಂದನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೂ ಕಳಿಸಿಕೊಟ್ಟಿತ್ತು.

ಗಂಗಾ ನದಿಯನ್ನು ಸ್ವಚ್ಚಗೊಳಿಸುವ ಸಂಬಂದ ಸ್ಥಾಪಿಸಲಾಗಿರುವ ರಾಷ್ಟ್ರೀಯ ಮಿಷನ್ ನಮಮಿ ಗಂಗಾ ಯೋಜನೆ ಯ ಮುಖ್ಯಸ್ಥರು ಇದನ್ನು ಕ್ಲಿನಿಕಲ್ ಟ್ರಯಲ್ ಗೆ ಪರಿಗಣಿಸಬೇಕೆಂದು ಕೋರಿ ಏಪ್ರಿಲ್ 30 ರಂದು ವೈದ್ಯಕೀಯ ಮಂಡಳಿಗೆ ಪತ್ರ ಬರೆದಿದ್ದರು. ಆದರೆ ವೈದ್ಯಕೀಯ ಮಂಡಳಿ ಈ ಕುರಿತು ಸಭೆಯೊಂದನ್ನು ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಿತು. ಆದರೆ ಈ ಕುರಿತು ಯಾವುದೇ ರೀತಿಯಲ್ಲಿ ಮುಂದುವರಿಯಲು ನಿರಾಕರಿಸಿತಲ್ಲದೆ ಅತುಲ್ಯ ಗಂಗಾ ಎನ್ ಜಿ ಓ ಗೆ ಹೊರಗಿನಿಂದ ಸಹಾಯ ಮಾಡಬಹುದೆಂದು ತಿಳಿಸಿತು.

ನಾವು ಈ ಪ್ರಸ್ತಾವನೆಯ ಕುರಿತು ಜಲ ಶಕ್ತಿ ಸಚಿವಾಲಯದಿಂದ ಪತ್ರವನ್ನು ಸ್ವೀಕರಿಸಿದ್ದು ಈ ಕುರಿತು ಹೆಚ್ಚಿನ ಸಂಶೋಧನೆ ನಡೆಸುವಂತೆ ಕೋರಲಾಗಿತ್ತು. ನಾವು ಈ ಬಗ್ಗೆ ಸದರಿ ಎನ್ಜಿುಓ ಗೆ ದೇಶದ ಯಾವುದೇ ಆಸ್ಪತ್ರೆ ಮತ್ತು ವೈದ್ಯರು ಈ ಕುರಿತು ಸಂಶೋಧನೆ ನಡೆಸಲು ಆಸಕ್ತಿ ತೋರಿದರೆ ಅಗತ್ಯ ನೆರವು ಒದಗಿಸಲು ಸಿದ್ದರಿರುವುದಾಗಿ ತಿಳಿಸಿದೆವು ಎಂದು ಐಸಿಎಂಆರ್ ನ ಅಧಿಕಾರಿಯೊಬ್ಬರು ತಿಳಿಸಿದರು.

ಈಗ ದೇಶದಲ್ಲಿ ಕೋವಿಡ್ 19 ಸೋಂಕನ್ನು ಗುಣಪಡಿಸಲು ಪ್ಲಾಸ್ಮಾ ಥೆರಪಿ ಚಿಕಿತ್ಸಾ ಪದ್ದತಿಯನ್ನು ಅನುಸರಿಸುತಿದ್ದು ಈಗಷ್ಟೆ ಅದರ ಬಗ್ಗೆ ಸಂಶೋಧನೆಯೂ ನಡೆಯುತ್ತಿದೆ. ಈ ಸಂಧರ್ಬದಲ್ಲಿ ಗಂಗಾ ನದಿಯ ನೀರಿನಲಿರುವ ಬ್ಯಾಕ್ಟಿರಿಯೋಫೇಜ್ ಎಂಬ ವೈರಸ್ ಕೋವಿಡ್ 19 ವೈರಸ್ ನ್ನು ತಿಂದು ನಾಶಪಡಿಸುತ್ತದೆ ಎಂದು ನಂಬುವುದರಲ್ಲಿ ಅರ್ಥವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಈ ಕುರಿತು ಜಲ ಶಕ್ತಿ ಸಚಿವಾಲಯ ಮುಂದುವರಿದರೆ ಅದಕ್ಕೆ ಸಹಕರಿಸಲು ಐಸಿಎಂಆರ್ ಸಿದ್ದವಿದೆ ಎಂದು ಹೇಳಿದ್ದೇವೆ ಎಂದು ಅವರು ಹೇಳಿದರು.ಈ ಕುರಿತು ನಮಮಿ ಗಂಗಾ ಯೋಜನೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.

ಅತುಲ್ಯ ಗಂಗಾ ಸದಸ್ಯ ಕರ್ನಲ್ (ನಿವೃತ್ತ) ಮನೋಜ್ ಕಿಶ್ವರ್ ಅವರು ಮಾತನಾಡಿ ಸಂಸ್ಥೆ ಪ್ರಧಾನ ಮಂತ್ರಿಗಳ ಕಚೇರಿ ಮತ್ತು ಜಲ ಶಕ್ತಿ ಸಚಿವಾಲಯಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಿದ್ದಾಗಿ ಹೇಳಿದರು. ಈ ಕುರಿತು ಜಲ ಶಕ್ತಿ ಸಚಿವಾಲಯ ಐಸಿಎಂಆರ್ ಗೆ ಪತ್ರ ಬರೆದಿದ್ದು ಈ ಪ್ರಸ್ತಾವನೆಯಲಿ ಅಲ್ಪ ಸತ್ಯವೇನಾದರೂ ಕಂಡು ಬಂದರೆ ಐಸಿಎಂಆರ್ ಸಂಶೋಧನೆ ನಡೆಸುವಂತೆ ಸೂಚಿಸಿದೆ ಎಂದರು. ಅಲ್ಲದೆ ಗಂಗಾ ನದಿಯಲ್ಲಿ ಬ್ಯಾಕ್ಟಿರಿಯೋಫೇಜ್ ವೈರಸ್ ಲಬ್ಯವಿದ್ದು ಇದು ಎತ್ತರದ ಪರ್ವತ ಪ್ರದೇಶಗಳಿಂದ ಬಂದಿದೆ. ಇದು ದೇಹದಲ್ಲಿ ಸೇರುವ ವಿನಾಶಕಾರಿ ವೈರಸ್ ನೊಂದಿಗೆ ಹೋರಾಡಬಲ್ಲ ಶಕ್ತಿ ಹೊಂದಿದೆ ಎಂದರು.

ಅತುಲ್ಯ ಗಂಗಾ ಬರೆದಿರುವ ಪತ್ರದ ಪ್ರಕಾರ ಐಐಟಿ ರೂರ್ಕಿ, ಐಐಟಿ ಕಾನ್ಪುರ, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ ಮತ್ತು ಲಕ್ನೋದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರೀಸರ್ಚ್ ಸಂಸ್ಥೆಗಳು ಗಂಗಾ ನದಿಯಲ್ಲಿ ಬ್ಯಾಕ್ಟಿರಿಯೋಫೇಜ್ ಇರುವುದನ್ನು ಪತ್ತೆ ಹಚ್ಚಿವೆ ಎಂದು ಹೇಳಿದೆ. ಅದರಲ್ಲೂ ಗಂಗಾ ನದಿಯ ಮೇಲ್ಭಾಗದಲ್ಲಿರುವ ಬಾಗೀರಥಿ ನದಿಯಲ್ಲಿ ಇದು ಪತ್ತೆ ಆಗಿದೆ ಎಂದಿದೆ. ಈ ಕುರಿತು ವೈದ್ಯಕೀಯ ಮಂಡಳಿಯು ನ್ಯಾಷನಲ್ ಎನ್ವಿರಾನ್ಮೆಂ ಟಲ್ ಎಂಜಿನಿಯರಿಂಗ್ ರೀಸರ್ಚ್ ಇನ್ಸ್ಟಿಯಟ್ಯೂಟ್ ಮತ್ತು NGO ನಡುವೆ ಚರ್ಚೆ ನಡೆದು ವೈದ್ಯಕೀಯ ಮಂಡಳಿಯು ಗಂಗಾ ನದಿಯಲ್ಲಿ ಇರುವ ಬ್ಯಾಕ್ಟೀರಿಯಾಗಳ ಕುರಿತು ಸಂಶೋಧನೆ ನಡೆಸುವಂತೆ ಕೋರಿತ್ತು.

ಆದರೆ ದೇಶದಲ್ಲಿ 21 ಸಂಶೋಧನಾ ಕೇಂದ್ರಗಳನ್ನು ಹೊಂದಿರುವ ಐಸಿಎಂಆರ್ ಇದನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ.

Please follow and like us:

Related articles

Share article

Stay connected

Latest articles

Please follow and like us: