ಕರಾವಳಿಯಲ್ಲಿ ಕಾಡುಬಿಟ್ಟು ನಾಡಿಗೆ ಬಂದಿದ್ದ ಕಾಡುಕೋಣವನ್ನು ಕೊಂದಿದ್ದು ಯಾರು..? ಎನ್ನುವ ಪ್ರಶ್ನೆ ಪ್ರಾಣಿ ಪ್ರಿಯರನ್ನು ಬಹಳವಾಗಿ ಕಾಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಮಂಗಳೂರಿಗೆ ಮೇ 5 ರ ಬೆಳಗ್ಗೆ ಕಾಡುಕೊಣವೊಂದು ಪ್ರವೇಶ ಪಡೆದಿತ್ತು. ಮಂಗಳೂರಿನ ಅಳಕೆ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡುಕೋಣ ಕಂಡು ಜನರು ಚಕಿತರಾಗಿ ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದರು. ವಿಶಾಲ್ ನರ್ಸಿಂಗ್ ಹೋಮ್ ಬಳಿಯಿಂದ ಶುರುವಾದ ಆಪರೇಷನ್ ಕಾಡುಕೋಣ ಮಧ್ಯಾಹ್ನ 12 ಗಂಟೆ ವೇಳೆಗೆ ಮುಕ್ತಾಯವಾಗಿತ್ತು. ಗಲ್ಲಿ ಗಲ್ಲಿಯಲ್ಲಿ ಸುತ್ತಾಡುತ್ತಿದ್ದ ಕಾಡುಕೋಣವನ್ನು ಅರಿವಳಿಕೆ ಮದ್ದು ನೀಡಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರು. ಆದರೆ ಸಂಜೆ ವೇಳೆಗೆ ಕಾಡಿಗೆ ರವಾನಿಸಲು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಾಡು ಕೋಣ ಸಾವನ್ನಪ್ಪಿದೆ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳು ಕೊಟ್ಟಿರುವ ಮಾಹಿತಿ. ಆದರೆ ಈ ಮಾಹಿತಿ ಕೊಡುವ ಮುನ್ನ ನೀಡಿದ ಗೊಂದಲಕಾರಿ ಮಾಹಿತಿ, ಕಾಡು ಕೋಣವನ್ನು ಕೊಂದವರು ನಿಜವಾಗಿಯು ಯಾರು ಎಂದು ಪ್ರಶ್ನೆ ಮಾಡುವಂತಿದೆ.
ಮಣ್ಣಗುಡ್ಡೆಯ ವೇರ್ ಹೌಸ್ ಬಳಿ ಕಾಡುಕೋಣವನ್ನು ಸೆರೆ ಹಿಡಿಯಲಾಯ್ತು. ಕಾರ್ಯಾಚರಣೆಗೆ ಮಂಗಳೂರಿನ ಪಿಲಿಕುಳ ಬಯಾಲಜಿಕಲ್ ಪಾರ್ಕ್ ನ ಪಶು ವೈದ್ಯ ಡಾ.ವಿಷ್ಣು ಅವರನ್ನು ಕರೆತರಲಾಗಿತ್ತು. ವೈದ್ಯ ಡಾ.ವಿಷ್ಣು ಅರಿವಳಿಕೆ ನೀಡಿದ ಬಳಿಕ ಕಾಡುಕೋಣವನ್ನು ಪರೀಕ್ಷಿಸಿದರು. ಕಾಡುಕೋಣದ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ ಎನ್ನುವುದನ್ನು ಅರಿತ ವೈದ್ಯರು, ಅರಣ್ಯ ಇಲಾಖೆ ಅಧಿಕಾರಿಗಳ ಸುಪರ್ದಿಗೆ ವಹಿಸಿ ಮತ್ತೊಂದು ಕೆಲಸದ ನಿಮಿತ್ತ ತೆರಳಿದ್ದರು. ಆದರೆ ಸಂಜೆ ವೇಳೆಗೆ ಚಾರ್ಮಾಡಿ ಘಾಟ್ ಗೆ ಬಿಡಲು ತೆರಳುತ್ತಿದ್ದಾಗ ಕಾಡುಕೋಣ ಸಾವನ್ನಪ್ಪಿದೆ ಎನ್ನುವ ಮಾಹಿತಿಯನ್ನು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ಕೊಟ್ಟ ʼಸಮಯʼ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಜೊತೆಗೆ ಅಧಿಕಾರಿಗಳ ದ್ವಂದ್ವ ಹೇಳಿಕೆ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
Animal Welfare Board of India ಅಡಿಯಲ್ಲಿ ಕೆಲಸ ಮಾಡುವ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಮಂಗಳೂರಿನ ವಿನಯ್ ಶೆಟ್ಟಿ ʼಪ್ರತಿಧ್ವನಿʼಯೊಂದಿಗೆಗೆ ಈ ಬಗ್ಗೆ ಮಾತನಾಡಿದ್ದು, ” ಮಂಗಳೂರು ನಗರದ ಶಾಸಕ ವೇದವ್ಯಾಸ ಕಾಮತ್ ಅವರು ಪಿಲಿಕುಳ ಬಯಾಲಜಿಕಲ್ ಪಾರ್ಕ್ ಗೆ ಕಾಡುಕೋಣವನ್ನು ಬಿಡಲಾಗುತ್ತದೆ ಎಂದು ಮಾಹಿತಿ ನೀಡಿದ್ದರು. ಆದರೆ ಸಂಜೆ 6.30ರ ವೇಳೆಗೆ ಕಾಡುಕೋಣ ಸಾವನ್ನಪ್ಪಿದೆ ಎನ್ನುವ ಮಾಹಿತಿ ಆಪ್ತ ವಲಯದಿಂದ ಬಂದಿತ್ತು. ನಾನು DFO ಶ್ರೀಧರ್ ಅವರಿಗೆ ಸಂಜೆ 7.30ರ ವೇಳೆಗೆ ಕರೆ ಮಾಡಿ ಕಾಡುಕೋಣದ ಮಾಹಿತಿ ಕೇಳಿದಾಗ ನಾವು ಕಾಡುಕೋಣ ಹಾಗೂ ಮತ್ತೊಂದು ಚಿರತೆಯನ್ನೂ ಕಾಡಿಗೆ ಬಿಟ್ಟಿದ್ದೇವೆ ಎಂದು ತಿಳಿಸಿದ್ದರು. ಆದರೆ ಹಿಡಿದ ಕಾಡುಪ್ರಾಣಿಗಳನ್ನು ಕಾಡಿಗೆ ಬಿಡುವಾಗ ಸಾಕ್ಷ್ಯಕ್ಕಾಗಿ ವಿಡಿಯೋ ಮಾಡಿಕೊಳ್ಳಬೇಕೆಂಬ ನಿಯಮವಿದೆ. ಕಾಡುಕೋಣವನ್ನು ಕಾಡಿಗೆ ಬಿಟ್ಟ ವಿಡಿಯೋ ಕಳುಹಿಸಿ ಎಂದಾಗ ʼಸರಿʼ ಎಂದವರು ಸುಮ್ಮನಾಗಿದ್ದರು. ಮತ್ತೆ 8.30ಕ್ಕೆ ಅವರಿಗೆ ಸಂದೇಶ ಕಳಹಿಸಿ ಜ್ಞಾಪಿಸಿದಾಗ ರಾತ್ರಿ 9.30ರ ವೇಳೆಗೆ ಕಾಡುಕೋಣ ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ ” ಎಂದಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಕಾಡು ಕೋಣವನ್ನು ಸೆರೆ ಹಿಡಿಯಲಾಗಿತ್ತು. ಆ ಬಳಿಕ ಕ್ರೇನ್ ಮೂಲಕ ಕಾಡುಕೋಣವನ್ನು ಲಾರಿಗೆ ತುಂಬಿಕೊಂಡು ಹೋಗಿದ್ದಾರೆ. ಇಲ್ಲಿಂದಲೇ ಗೊಂದಲಗಳು ಶುರುವಾಗಿರುವುದು. ಶಾಸಕರ ಪ್ರಕಾರ ಕಾಡುಕೋಣವನ್ನು ಪಿಲಿಕುಳಕ್ಕೆ ಬಿಡಲಾಗುತ್ತೆ ಎಂದಿದ್ದರು. ಆದರೆ ಅಲ್ಲಿಗೆ ಕೊಂಡೊಯ್ದಿಲ್ಲ. ಚಾರ್ಮಾಡಿ ಘಾಟ್ ಗೆ ಬಿಟ್ಟು ಬಂದಿದ್ದಾರೆ ಎಂದರೆ ಇಲ್ಲ ಅದು ಸಾವನ್ನಪ್ಪಿದೆ ಎಂದಿದ್ದಾರೆ. ಮಂಗಳೂರಿನಿಂದ ಚಾರ್ಮಾಡಿ ಫಾರೆಸ್ಟ್ ಗೆ ತೆರಳಲು ಕನಿಷ್ಟ ಒಂದೂವರೆ ಗಂಟೆಗಳ ಸಮಯ ಬೇಕಾಗುತ್ತದೆ. ಅಂದರೆ ಮಧ್ಯಾಹ್ನ 12 ಗಂಟೆಗೆ ಸೆರೆ ಹಿಡಿಯ ಕಾಡುಕೋಣ ಕಾಡು ಪಾಲಾಗಲು ಮಧ್ಯಾಹ್ನ 1.30 ಗಂಟೆ ಆಗಬೇಕಿತ್ತು. ಆದರೆ ಸಂಜೆವರೆಗೂ ಕಾಡುಕೋಣ ಎಲ್ಲಿತ್ತು..? ಎನ್ನುವ ಮಾಹಿತಿಯೇ ಇಲ್ಲ. ಕಾಡು ಕೋಣವನ್ನು ಸೆರೆ ಹಿಡಿದು ಲಾರಿಗೆ ತುಂಬಿಸಿದ ಬಳಿಕ ಸಂಜೆ ತನಕ ಲಾರಿ ಎಲ್ಲಿ ನಿಂತಿತ್ತು..? ಉರಿಯುವ ಬಿಸಿಲಿನಲ್ಲಿ ಲಾರಿ ನಿಲ್ಲಿಸಿದ್ದರೆ ಅರವಳಿಕೆ ಕೊಟ್ಟಿದ್ದ ಕಾಡು ಕೋಣ ಸಾಯದೆ ಇನ್ನೇನು ಆಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಕಾಡುಕೋಣಕ್ಕೆ ಅರಿವಳಿಕೆ ಕೊಟ್ಟ ಗರಿಷ್ಠ 4 ಗಂಟೆ ಸಮಯದಲ್ಲಿ ಮತ್ತೆ ಪ್ರಜ್ಞೆ ಬರುತ್ತದೆ ಎನ್ನುತ್ತಾರೆ ವೈದ್ಯರು. ಆಗಿದ್ದರೆ ಸಂಜೆ 4ರ ವೇಳೆಗೆ ಕಾಡು ಕೋಣಕ್ಕೆ ಪ್ರಜ್ಞೆ ಬಂದಿರಬೇಕು. ಆಗ ಲಾರಿಯಲ್ಲೇ ಒದ್ದಾಡಿ ನೋವು ಮಾಡಿಕೊಂಡು ಸತ್ತಿರಬೇಕು. ಈ ಪ್ರಕರಣಕ್ಕೆ ಇತಿಶ್ರೀ ಹಾಡುವ ನೆಪದಲ್ಲಿ ಚಾರ್ಮಾಡಿ ಕಡೆಗೆ ಲಾರಿ ಹೊರಟು ಕಾಡುಕೋಣ ಸತ್ತಿದೆ ಎಂದು ಸುಳ್ಳು ಹೇಳಿರಬಹುದು. ಇಷ್ಟೆಲ್ಲಾ ಆದ ಬಳಿಕವೂ ಡಿಎಫ್ಓ ಶ್ರೀಧರ್ ಅವರನ್ನು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ವಿನಯ್ ಶೆಟ್ಟಿ ಕೇಳಿದಾಗ ಸಂಜೆ 7.30 ಆಗಿದ್ದರೂ ಕಾಡಿಗೆ ಬಿಟ್ಟು ಬಂದಿದ್ದೇವೆ ಎಂದಿದ್ದು ಯಾಕೆ..? ಪ್ರಕರಣವನ್ನು ಮಾಧ್ಯಮಗಳಿಂದ ಮುಚ್ಚಿಟ್ಟು ರಾತ್ರಿ 9.30ಕ್ಕೆ ಬಣ್ಣ ಬಯಲಾದ ಮೇಲೆ ಹೃದಯಾಘಾತ ಎನ್ನುವ ಬಣ್ಣ ಬಳಿದಿದ್ದು ಯಾಕೆ ಎನ್ನುವ ಬಗ್ಗೆ ಹಿರಿಯ ಅಧಿಕಾರಿಗಳೇ ತನಿಖೆ ಮಾಡಬೇಕಿದೆ. ಒಟ್ಟಾರೆ, ಒಂದು ಕಾಡು ಪ್ರಾಣಿಯನ್ನು ಕರುಣೆ ಇಲ್ಲದೆ ಸಾಯಿಸಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ತಪ್ಪು ಮಾಡಿದ ಅಧಿಕಾರಿ ತಪ್ಪಿನಿಂದ ಪಾರಾಗಲು ಏನು ಮಾಡಬೇಕು ಅದನ್ನು ಮಾಡಲೂಬಹುದು. ಆದರೆ ಪ್ರಾಣಿ ಮೇಲೆ ಕರುಣೆ ಪ್ರೀತಿ ಇಲ್ಲದ ಅಧಿಕಾರಿ ಅರಣ್ಯ ಅಧಿಕಾರಿ ಆಗಿರಲು ನಾಲಾಯಾಕ್ ಎನ್ನುವುದು ಮಾತ್ರ ಸತ್ಯ.