ಮಳೆ ಪ್ರಮಾಣ ಈ ಬಾರಿ ಭೀಕರ ಬರಗಾಲದ ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಮಳೆಗಾಲದಲ್ಲಿ ಸುರಿದ ಮಳೆ ಪ್ರಮಾಣ ಕಡಿಮೆಯಾಗಿದ್ದು, ರಾಜ್ಯದಲ್ಲಿ ಶೇಕಡ 14ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಅದರಲ್ಲೂ, ಕರಾವಳಿಯಲ್ಲಿ ಸರಾಸರಿ ಮಳೆ ಪ್ರಮಾಣ ಕಡಿಮೆ ಆಗಿದ್ದು, ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡ 39ರಷ್ಟು ಮಳೆ ಕೊರತೆ ಕಾಡುತ್ತಿದೆ.
ಬೀದರ್ ಹೊರತು ಪಡಿಸಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚು ಕಡಿಮೆ ಸಾಮಾನ್ಯ ಮಳೆಯಾಗಿದ್ದರೂ, ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಶೇಕಡ 26ರಷ್ಟು ಮಳೆ ಕೊರೆತೆಯಾಗಿದೆ. ಇದು ಜುಲೈ ತಿಂಗಳ ಅಂತ್ಯದ ಅಂಕಿ ಅಂಶಗಳು.
ರಾಜ್ಯದಲ್ಲಿ ಶೇಕಡ 25ರಷ್ಟು ಮಳೆ ಪ್ರಮಾಣ ಕಡಿಮೆ ಆಗಿದ್ದು, ಜುಲೈ ತಿಂಗಳಲ್ಲೇ ಬರಗಾಲದ ಛಾಯೆ ಇದ್ದರೂ ಕೇಂದ್ರ ಸರಕಾರದ ಸಹಾಯ ದೊರೆಯುವ ಸಾಧ್ಯತೆಗಳು ಇಲ್ಲ. ಶೇಕಡ 50ರಷ್ಟು ಬಿತ್ತನೆ ಮತ್ತು ಅಷ್ಟೇ ಪ್ರಮಾಣದ ಮಳೆ ಆಗಿರದಿದ್ದಲ್ಲಿ ಮಾತ್ರ ಹೊಸ ನಿಯಮ ಪ್ರಕಾರ ರಾಜ್ಯಗಳಿಗೆ ಬರಗಾಲ ಪರಿಹಾರ ನೀಡಲಾಗುತ್ತದೆ. ಈ ನಿಯಮ ಪ್ರಕಾರ ಕೇರಳ ಮತ್ತು ಕರ್ನಾಟಕ ಕೇಂದ್ರದಿಂದ ಚಿಕ್ಕಾಸೂ ನಿರೀಕ್ಷೆ ಮಾಡುವಂತಿಲ್ಲ.
ಕೇರಳದಲ್ಲಿ ಶೇಕಡ 80ರಷ್ಟು ಭತ್ತದ ಬಿತ್ತನೆ ಆಗಿದ್ದು, ನಮ್ಮ ರಾಜ್ಯದಲ್ಲಿ ಶೇಕಡ 60 ರಷ್ಟು ಕಾರ್ಯ ಮುಗಿದಿದೆ. ಕೇರಳದಲ್ಲಿ ಶೇಕಡ 30 ಮತ್ತು ಕರ್ನಾಟಕದಲ್ಲಿ ಶೇಕಡ 25ರಷ್ಟು ಮಾತ್ರ ಮಳೆ ಕೊರತೆ ಆಗಿರುವುದರಿಂದ ಕೇಂದ್ರದ ಅನುದಾನ ದೊರೆಯುವುದಿಲ್ಲ. ರಾಜ್ಯದಲ್ಲಿ ಶೇಕಡ 50ರಷ್ಟು ಕಡಿಮೆ ಬಿತ್ತನೆ ಮಾಡಿದ ದಾಖಲೆ ಇಲ್ಲ ಎನ್ನುತ್ತಾರೆ ಅಧಿಕಾರಿಗಳು.
ಕಳೆದ ಹದಿನೈದು ವರ್ಷಗಳಲ್ಲಿ ಕೇವಲ ನಾಲ್ಕು ವರ್ಷಗಳನ್ನು ಹೊರತು ಪಡಿಸಿ ರಾಜ್ಯದ ಮೂರನೇ ಎರಡರಿಂದ ಮೂರನೇ ಒಂದಂಶ ತಾಲೂಕುಗಳು ಬರಗಾಲದಿಂದ ಬಳಲಿದ್ದವು. ಅತೀ ಹೆಚ್ಚು ಮಳೆ ಸುರಿಯುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಬರಗಾಲ, ನೀರಿನ ಕೊರತೆ ಕಂಡು ಬರುತ್ತಿದೆ. ಪ್ರಸಕ್ತ ವರ್ಷ ನೀರಿನ ಸಮಸ್ಯೆ ಉತ್ತುಂಗ ತಲಪುವ ಭೀತಿ ಎದುರಾಗಿದೆ.
ರಾಜ್ಯದ ಜಲಾಶಯಗಳು ಜುಲೈ ಅಂತ್ಯದ ವೇಳೆಗೆ ಸಂಪೂರ್ಣವಾಗಿ ತುಂಬಿಕೊಂಡಿಲ್ಲ. ಮಾತ್ರವಲ್ಲದೆ, ಬಹಳಷ್ಟು ಜಲಾಶಯಗಳು ಅರ್ಧದಷ್ಟು ಕೂಡ ಭರ್ತಿಯಾಗಿಲ್ಲ. ಕಬಿನಿ, ಆಲಮಟ್ಟಿ,ನಾರಾಯಣಪುರ, ಘಟಪ್ರಭಾ ಜಲಾಶಯಗಳು ಶೇಕಡ 60ರಿಂದ 90ರಷ್ಟು ಭರ್ತಿಯಾಗಿಲ್ಲ. ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿ ಪ್ರಸಕ್ತ ವರ್ಷ ಕಳೆದ ನಾಲ್ಕು ದಶಕಗಳಲ್ಲೇ ಅತೀ ಕಡಿಮೆ ಮಳೆಯಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸರಕಾರ ಮೋಡ ಬಿತ್ತನೆ ಕಾರ್ಯ ನಡೆಸಿದ್ದು, ಇದರಿಂದ ಶೇಕಡ 16ರಷ್ಟು ಹೆಚ್ಚು ಮಳೆ ಪ್ರಮಾಣ ಆಗಲಿದೆ ಎಂದು ಅಂದಾಜಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಆರಂಭವಾಗುವ ಜೂನ್ ತಿಂಗಳಿನಿಂದ ಜುಲೈ ಅಂತ್ಯದ ತನಕ ಎರಡು ತಿಂಗಳಲ್ಲಿ ಸರಾಸರಿ 2146 ಎಂಎಂ ಮಳೆ ಆಗಬೇಕಾಗಿದ್ದು, ಈ ಬಾರಿ ಕೇವಲ 1308 ಎಂಎಂ ಮಳೆಯಾಗುವ ಮೂಲಕ ಶೇಕಡ 39 ಕೊರತೆ ದಾಖಲಾಗಿದೆ. ಜುಲೈ ತಿಂಗಳಲ್ಲಿ ಕೂಡ 1217ಎಂಎಂ ಮಳೆಯಾಗಬೇಕಾಗಿದ್ದು, ಕೇವಲ 981 ಎಂಎಂ ಮಳೆಯಾಗಿದೆ. 2019 ಜನವರಿಯಿಂದ ಜುಲೈ ಅಂತ್ಯದ ವೇಳೆಗೆ ಸರಾಸರಿ 2393 ಎಂಎಂ ಮಳೆ ಸುರಿಯುವ ದಕ್ಷಿಣ ಕನ್ನಡದಲ್ಲಿ ಈ ವರ್ಷ 1480 ಎಂಎಂ ಮಾತ್ರ ಮಳೆ ದಾಖಲಾಗಿರುವುದು ಆತಂಕ ಉಂಟು ಮಾಡುತ್ತದೆ. ಇದಕ್ಕೆ ಪ್ರಮುಖ ಕಾರಣ ಮುಂಗಾರು ಪೂರ್ವ ಮಳೆ ಪ್ರಮಾಣ ಈ ವರ್ಷ ಗಣನೀಯವಾಗಿ ಕಡಿಮೆ ಆಗಿರುವುದು, ವಿಳಂಬ ಮುಂಗಾರು ಮತ್ತು ಹವಾಮಾನ ವೈಪರೀತ್ಯ ಕಾರಣ ಆಗಿದೆ.
ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜುಲೈ ತಿಂಗಳಲ್ಲಿ ಉತ್ತಮ ಮಳೆ ಆಗಿದ್ದರೂ ಮುಂಗಾರು ಅವಧಿಯ ಎರಡು ತಿಂಗಳ ಸರಾಸರಿಯಲ್ಲಿ ಶೇಕಡ 21ರಷ್ಟು ಕೊರತೆ ಆಗಿದೆ. ಉಡುಪಿ ಜಿಲ್ಲೆಯಲ್ಲಿ ಜುಲೈ ಕೊನೆಯ ವಾರ ಶೇಕಡ 22ರಷ್ಟು ಮಳೆ ಪ್ರಮಾಣ ಹೆಚ್ಚಳ ಆಗಿತ್ತು. ಆದರೆ, ಜೂನ್ – ಜುಲೈ ತಿಂಗಳಲ್ಲಿ ಸರಾಸರಿ 2505 ಎಂಎಂ ಮಳೆಯಾಗುವಲ್ಲಿ 1988 ಎಂಎಂ ಮಳೆ ದಾಖಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯಕ್ಕಿಂತ ತುಸು ಹೆಚ್ಚು ಮಳೆಯಾಗಿದೆ.
ಆಗಸ್ಟ್ ಎರಡನೇ ವಾರದಲ್ಲಿ ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದೇ ರೀತಿ ತಮಿಳುನಾಡು-ಕರ್ನಾಟಕದ ಘಟ್ಟ ಪ್ರದೇಶಗಳಲ್ಲಿ ಮಳೆ ಆಗಲಿದೆ. ರಾಜ್ಯದಂತೆ ಕೇರಳ, ತಮಿಳುನಾಡು, ರಾಯಲಸೀಮ ಪ್ರದೇಶಗಳಲ್ಲಿ ಕೂಡ ಮಳೆಯ ಕೊರತೆ ಆಗಿದೆ.
ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷವನ್ನು ಹೊರತು ಪಡಿಸಿದರೆ ಐದಾರು ವರ್ಷ ನಿರಂತರ ತೀವ್ರತರದ ಬರಗಾಲ ಪರಿಸ್ಥಿತಿ ಉಂಟಾಗಿತ್ತು. ಕಳೆದ ವರ್ಷ ಉತ್ತಮ ಮಳೆಯಾಗಿದ್ದರೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ರಾಜ್ಯದ ಬಹತೇಕ ಕಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಸರಕಾರ ನೀರಾವರಿ ಮತ್ತು ಕುಡಿಯುವ ನೀರಿಗೆ ಸಂಬಂಧಿಸಿ ಸುಸ್ಥಿರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ಮುಂದಾಗದಿದ್ದರೆ ಸಾರ್ವಜನಿಕರು ಮತ್ತಷ್ಟು ಸಂಕಷ್ಟಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.