ಲೋಕಸಭಾ ಚುನಾವಣೆಗೂ ಮೊದಲೇ ಕರ್ನಾಟಕ ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷ ಸೋಲೊಪ್ಪಿಕೊಂಡಿತ್ತು. ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ಕರಾವಳಿಯಲ್ಲಿ ಕೇಸರಿ ಪಡೆಯ ನಾಗಾಲೋಟವನ್ನು ತಡೆಯಲು ಕಾಂಗ್ರೆಸ್ ಸಂಪೂರ್ಣ ವಿಫಲವಾಗಿರುವುದು ನಿಚ್ಚಳವಾಗಿತ್ತು. ಕರಾವಳಿಯಲ್ಲಿ ಕಾಂಗ್ರೆಸ್ ಅಕ್ಷರಶ: ಹೀನಾಯ ಸ್ಥಿತಿಗೆ ತಲುಪಿದೆ.
ಕರಾವಳಿಯ ಮೂರೂ ಲೋಕಸಭಾ ಕ್ಷೇತ್ರಗಳಲ್ಲಿ ಕೂಡ ಬಿಜೆಪಿ ಭಾರಿ ಅಂತರದ ಮತಗಳಿಂದ ಜಯ ಗಳಿಸಿದೆ. ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆ ಕರ್ನಾಟಕ ರಾಜ್ಯದಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಮೂಲಕ ದಾಖಲೆ ಬರೆದಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ್ ಆಸ್ನೋಟಿಕರ್ ಅವರನ್ನು 4,77,081ಗಳಿಂದ ಹೆಗಡೆ ಸೋಲಿಸಿದ್ದಾರೆ. ಹೆಗಡೆ ಅವರು ಒಟ್ಟು 7,83,211 ಮತ ಪಡೆದರೆ, ಅಸ್ನೋಟಿಕರ್ ಕೇವಲ 3,06,130 ಮತಗಳನ್ನು ಪಡೆಯಲಷ್ಟೇ ಸಾಧ್ಯವಾಗಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ 3,49,599 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಮೈತ್ರಿ ಪಕ್ಷಗಳ ವೈಫಲ್ಯದತ್ತ ಬೊಟ್ಟು ಮಾಡಿದೆ. ಅದೇ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳಿನ್ ಕುಮಾರ್ ಕಟೀಲ್ 2.73 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯನ್ನು ಸೋಲಿಸಿರುವುದು ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸ್ಥಿತಿಯನ್ನು ತೋರಿಸುತ್ತದೆ.
ಶೋಭಾ ಕರಂದ್ಲಾಜೆ 7,1,8916 ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ 3,69,317 ಮತಗಳನ್ನು ಮಾತ್ರ ಪಡೆಯುವಲ್ಲಿ ಸಫಲರಾದರು. ಈ ರೀತಿ ಹೀನಾಯ ಸೋಲು ಅನುಭವಿಸಲು ಪ್ರಮೋದ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕಿತ್ತೇ ಎಂಬುದು ಅವರ ಆತ್ಮೀಯರು ಕೇಳುವ ಪ್ರಶ್ನೆ.
ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಹಾಲಿ ಸಂಸದರ ವಿರುದ್ಧ ಸಾರ್ವಜನಿಕರಿಗೆ ಮಾತ್ರವಲ್ಲದೆ, ಅವರದೇ ಪಕ್ಷದ ಕಾರ್ಯಕರ್ತರಿಗೆ ಕೇವಲ ಅಸಮಾಧಾನ ಮಾತ್ರವಲ್ಲದೆ ಆಕ್ರೋಶವೂ ಇತ್ತು. ಅಭಿವೃದ್ಧಿ ವಿಚಾರದಲ್ಲಿ ಸಂಸದರು ವಿಫಲರಾಗಿರುವುದು ಮಾತ್ರವಲ್ಲದೆ, ಕಾರ್ಯಕರ್ತರ ಮಾತುಗಳಿಗೆ ಸ್ಪಂದನೆ ದೊರೆಯುತ್ತಿರಲಿಲ್ಲ ಎಂಬುದು ಸಾಮಾನ್ಯ ಮಾತಾಗಿತ್ತು. ಪರಿಸ್ಥಿತಿ ಹೀಗಿದ್ದರೂ ಕಾಂಗ್ರೆಸ್ ಮುಖಂಡರು ಯಾವುದೇ ಮುತುವರ್ಜಿ ವಹಿಸಲಿಲ್ಲ. ಉಡುಪಿಯ ಮೈತ್ರಿ ಪಕ್ಷಗಳ ಅಭ್ಯರ್ಥಿ ಮಧ್ವರಾಜ್ ಅವರು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ಮನೆಗೆ ಫಲ ತಾಂಬೂಲ ನೀಡಿ ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು ಎಂದರೆ ಕಾಂಗ್ರೆಸ್ಸಿಗರು ಯಾವ ಕನಸಿನ ಮಹಲಿನಲ್ಲಿ ವಿಹರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿಲ್ಲ. ಕೊನೆಗೆ, ಜೆಡಿಎಸ್ ಚಿಹ್ನೆಯಡಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಉಮೇದುವಾರರಾಗುತ್ತಾರೆ. ಈಗಾಗಲೇ ಮೂರು ವಿಧಾನಸಭೆ ಚುನಾವಣೆಗಳನ್ನು ಸೋತು ಕೇವಲ ಒಂದು ಚುನಾವಣೆ ಗೆದ್ದಿರುವ ಪ್ರಮೋದ್, ಲೋಕಸಭಾ ಚುನಾವಣೆ ಸ್ಪರ್ಧಿಸಿರುವುದು ಕೂಡ ಚರ್ಚಾಸ್ಪದ.
ಕರಾವಳಿಯಲ್ಲಿ ಯಾವುದೇ ಪ್ರಾಬಲ್ಯ ಹೊಂದಿರದ ಜಾತ್ಯತೀತ ಜನತಾದಳಕ್ಕೆ ಟಿಕೆಟ್ ನೀಡಿದಾಗಲೇ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯನ್ನು ಸೋಲಿಸುವ ಯಾವ ರಾಜಕೀಯ ಇಚ್ಛಾಶಕ್ತಿಯೂ ಇಲ್ಲ ಎಂಬುದು ಸ್ಪಷ್ಟವಾಗಿತ್ತು ಎಂಬುದನ್ನು ನಾವಿದಾಗಲೇ ಹೇಳಿದ್ದೇವೆ. ಇನ್ನು, ಜಾತ್ಯತೀತ ಜನತಾದಳ ಕೂಡ ತನ್ನಲ್ಲಿ ಕಣಕ್ಕಿಳಿಯಲು ಅಭ್ಯರ್ಥಿಗಳು ಇಲ್ಲದಿದ್ದರೂ ಕೂಡ ಏಳೆಂಟು ಕ್ಷೇತ್ರಗಳಿಗೆ ಬೇಡಿಕೆ ಇರಿಸಿತ್ತು!
ಕಾಂಗ್ರೆಸ್ ಪಕ್ಷ ಈಗಲೂ ಅನುಸರಿಸುತ್ತಿರುವ ಓಬಿರಾಯನ ಕಾಲದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ, ವಿಳಂಬವಾಗಿ ಅಭ್ಯರ್ಥಿಗಳ ಘೋಷಣೆ, ಶಿಥಿಲ ಸಂಘಟನೆ, ಮಂಚೂಣಿ ಸಂಘಟನೆಗಳ ಕೊರತೆ, ಚುನಾವಣೆಗೆ ಬೇಕಾದ ತಂತ್ರಗಾರಿಕೆ ಮತ್ತು ಮೂಲಭೂತ ಸಂಪನ್ಮೂಲಗಳ ಕೊರತೆ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಕಂಗೆಡಿಸಿದೆ. ಅಧಿಕಾರಕ್ಕೆ ಬಂದ ಮೇಲೆ ಕಾರ್ಯಕರ್ತರನ್ನು ಕ್ಯಾರೇ ಅನ್ನದೆ ಮುಖಂಡರು ರಾಜಕೀಯವನ್ನೇ ವ್ಯಾಪಾರ ಮಾಡಿಕೊಂಡಿರುವ ಒಂದು ಗುಂಪಾದರೆ, ನಾಮ್ಕೆವಾಸ್ತೆ ವಿಸಿಟಿಂಗ್ ಕಾರ್ಡ್ ಮುಖಂಡರ ಗುಂಪು ಕಾಂಗ್ರೆಸ್ ಎಂಬ ಹಳೆಯ ರಾಜಕೀಯ ಪಾರ್ಟಿಯನ್ನು ಇಂದಿನ ಕಾಲದ ರಾಜಕೀಯದಲ್ಲಿ ಅಪ್ರಸ್ತುತಗೊಳಿಸುತ್ತದೆ.
ಭಾರತೀಯ ಜನತಾ ಪಾರ್ಟಿಯು ಪ್ರಧಾನಿ ನರೇಂದ್ರ ಮೋದಿ ಅವರಿಂದ ತೊಡಗಿ ಕೆಳಹಂತದವರೆಗೆ ಭಾಷಣವನ್ನೇ ಪ್ರಧಾನ ಚುನಾವಣಾ ಬಂಡವಾಳ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಜನರಿಗೆ ಮನಮುಟ್ಟುವಂತೆ ಭಾಷಣ ಮಾಡಬಲ್ಲ ಬೆರಳೆಣಿಕೆ ಮಂದಿಯೂ ಇಲ್ಲ. ಇಂದು ಏನಿದ್ದರೂ ಸಮೂಹ ಮಾಧ್ಯಮಗಳ ಯುಗ. ಮಾಧ್ಯಮ, ಟಿವಿ ವಾಹಿನಿಗಳು, ಡಿಜಿಟಲ್ ಮಾಧ್ಯಮ, ಸೋಶಿಯಲ್ ಮೀಡಿಯಾಗಳ ಮೂಲಕ ನಿಮಗೆ ನಿರಂತರವಾಗಿ ಜನರನ್ನು ತಲುಪಲು ಸಾಧ್ಯವಾದರೆ ಮಾತ್ರ ವೋಟು ಗಿಟ್ಟಿಸಬಹುದು.
ಈಗ ಮುಕ್ತಾಯಗೊಂಡಿರುವ ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿ ಒಂದು ವಿಚಾರವಾಗಲೇ ಇಲ್ಲ. ಅದೇ ರೀತಿ ಹಿಂದಿನ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳು, ನೋಟು ಅಮಾನ್ಯದಿಂದ ಆದ ತೊಂದರೆಗಳು ಚರ್ಚೆಯೇ ಆಗಲಿಲ್ಲ. ಅದೇ ರೀತಿ, ಕಾಂಗ್ರೆಸ್ ಪಕ್ಷ ಕೂಡ ಜನರಿಗೆ ಯಾವುದೇ ವಿಚಾರಗಳನ್ನು ತಲುಪಿಸುವಲ್ಲಿ ಸಂಪೂರ್ಣ ವಿಫಲವಾಯಿತು. ಏಕೆಂದರೆ, ಕಾಂಗ್ರೆಸ್ ಪಕ್ಷದಲ್ಲಿ ಅದಕ್ಕೆ ಬೇಕಾದ ಯಾವ ವ್ಯವಸ್ಥೆಗಳೂ ಇಲ್ಲ.
ಭಾರತೀಯ ಜನತಾ ಪಾರ್ಟಿ ಕರಾವಳಿಯ ಜಿಲ್ಲೆಗಳಲ್ಲಿ ತಮ್ಮ ಕಾರ್ಯಕರ್ತರನ್ನು ನಿರಂತರವಾಗಿ ಎಂಗೇಜ್ ಆಗಿರಲು ವರ್ಷವಿಡೀ ನಿರಂತರ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇರುತ್ತದೆ. ಕರಾವಳಿಯಲ್ಲಿ ಇದೀಗ ಯಕ್ಷಗಾನದಿಂದ ತೊಡಗಿ ಕೆಸರುಗದ್ದೆ ಓಟದ ತನಕ ಎಲ್ಲವೂ ರಾಜಕೀಯ ಹಿನ್ನೆಲೆಯ ಕಾರ್ಯಕ್ರಮಗಳೇ ಆಗಿರುತ್ತವೆ. ಇವರು ನಿರಂತರವಾಗಿ ಮಾಡಿರುವ ಪ್ರಚಾರ ಮತ್ತು ಅಪಪ್ರಚಾರವನ್ನು ಚುನಾವಣೆಯ ಒಂದು ತಿಂಗಳಲ್ಲಿ ಸರಪಡಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವೇ ಇಲ್ಲ ಎಂಬುದನ್ನು ಕಾಂಗ್ರೆಸ್ ಮುಖಂಡರು ಅರಿತುಕೊಂಡಿಲ್ಲ.
ಕರಾವಳಿಯಲ್ಲಿ ಮೂರೂ ಜಿಲ್ಲೆಗಳ ಪಟ್ಟಭದ್ರ ಕಾಂಗ್ರೆಸ್ ಮುಖಂಡರು ಹೊಸ ಮುಖಂಡರನ್ನು ಸಜ್ಜುಗೊಳಿಸದಿರುವುದು ಪಕ್ಷಕ್ಕೆ ನಿರಂತರವಾಗಿ ಆಗುತ್ತಿರುವ ಹಿನ್ನೆಡೆಗೆ ಕಾರಣ. ಕರಾವಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಧಾನಸಭಾ ಚುನಾವಣೆ ಗೆಲ್ಲುತ್ತಾರೆ. ಆದರೆ, ಲೋಕಸಭೆ ಚುನಾವಣೆ ಯಾಕೆ ಗೆಲ್ಲುತ್ತಿಲ್ಲ ಎಂಬುದಕ್ಕೆ ಅದೇ ವಿಧಾನಸಭಾ ಅಭ್ಯರ್ಥಿಗಳೇ ಕಾರಣ ಎಂಬ ಮಾತು ಪಕ್ಷದ ವಲಯದಲ್ಲಿ ಚಾಲ್ತಿಯಲ್ಲಿದೆ.