2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿದ್ದ ಸ್ಥಿತಿಗೂ ಇಂದಿನ ಸ್ಥಿತಿಗೂ ಅಜಗಜಾಂತರವಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿದ್ದ ಹಿಂದಿನ ಸ್ಥಿತಿಗೆ ಇಂದಿನ ಕಾಂಗ್ರೆಸ್ ಸ್ಥಿತಿಯನ್ನು ಹೋಲಿಸುವಂತೆಯೇ ಇಲ್ಲ.
2004 ಮತ್ತು 2009ರ ಲೋಕಸಭೆ ಚುನಾವಣೆಗಳಲ್ಲಿ ಬೆಳಗಾವಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಅಮರಸಿಂಹ ಪಾಟೀಲರಿಗೆ ಗೋಕಾಕ ಮತ್ತು ಅರಭಾವಿ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಆಗದಂತೆ ನೋಡಿಕೊಳ್ಳಲಾಗಿತ್ತು. ಲೋಕಸಭೆ ಮತಕ್ಷೇತ್ರದ ಎಂಟು ವಿಧಾನಸಭಾ ಮತಕ್ಷೇತ್ರಗಳ ಪೈಕಿ ಇವೆರಡೂ ಮತಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರು ಸ್ವತಃ ಅಚ್ಚರಿಪಡುವಷ್ಟು ಮುನ್ನಡೆ ಪಡೆದು ಆಯ್ಕೆಯಾಗಿದ್ದರು!
ಕಾಂಗ್ರೆಸ್ ಅಭ್ಯರ್ಥಿಯು ಸೋತ ನಂತರ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಗೋಕಾಕ ಶಾಸಕ ರಮೇಶ ಜಾರಕಿಹೊಳಿಯವರು, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರ ಎದುರೇ, “ನಾವೇ ಅಮರಸಿಂಹರನ್ನು ಕೆಡವಿದ್ದೇವೆ,” ಎಂದು ಗುಡುಗಿದ್ದರು. ಪರಮೇಶ್ವರ ಕಮಕ್ ಕಿಮಕ್ ಎನ್ನಲಿಲ್ಲ!
2016ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ನಿಪ್ಪಾಣಿಯ ಮಾಜಿ ಸಚಿವ ವೀರಕುಮಾರ ಪಾಟೀಲ್ ಕಾಂಗ್ರೆಸ್ಸಿನ ಅಧಿಕೃತ ಅಭ್ಯರ್ಥಿ. ಹಾಲಿ ಸಚಿವ ಸತೀಶ ಜಾರಕಿಹೊಳಿ ಅವರೇ ಖುದ್ದು ಆಸಕ್ತಿ ವಹಿಸಿ ಅವರಿಗೆ ಟಿಕೆಟ್ ಕೊಡಿಸಿದ್ದರು. ಆದರೆ, ರಮೇಶ ಜಾರಕಿಹೊಳಿ ಅವರು ಆಗ ಸಚಿವರಾಗಿದ್ದರು. ವೀರಕುಮಾರ ಮುಖ ನೋಡಲೂ ಅವರು ಸಿದ್ಧರಾಗಲಿಲ್ಲ. ರಾಯಭಾಗದ ಹುಲಿ ದಿ.ವಸಂತರಾವ ಪಾಟೀಲರ ದ್ವಿತೀಯ ಪುತ್ರ ವಿವೇಕ ಪಾಟೀಲರು ಪಕ್ಷೇತರ ಅಭ್ಯರ್ಥಿಯಾಗಿ ನಿಂತರು. ವಸಂತರಾವ ಗರಡಿಯಲ್ಲಿಯೇ ಪಳಗಿದ ರಮೇಶ ಜಾರಕಿಹೊಳಿ ಅವರು ವಿವೇಕರನ್ನು ಬೆಂಬಲಿಸಿದರು. ಕಾಲಿಗೆ ಚಕ್ರ ಕಟ್ಟಿಕೊಂಡು ಜಿಲ್ಲೆಯನ್ನು ಸುತ್ತಿದರು. ತಮ್ಮಲ್ಲಿರುವ ಎಲ್ಲ ರೀತಿಯ ಬಲವನ್ನು ಪ್ರಯೋಗಿಸಿದರು. ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ವೀರಕುಮಾರ ಸೋತರು. ವಿವೇಕ ಆರಿಸಿಬಂದರು. ರಮೇಶರ ಈ ಬಂಡಾಯ ಗುಟ್ಟಿನ ಸಂಗತಿಯಲ್ಲ.
2018ರ ವಿಧಾನಸಭೆ ಚುನಾವಣೆ. ಮತ್ತೆ ರಮೇಶ ರಾಜಕೀಯ ರಂಗಿನಾಟ. ಜಿಲ್ಲೆಯ 18 ವಿಧಾನಸಭೆ ಮತಕ್ಷೇತ್ರಗಳಲ್ಲಿ ಟಿಕೆಟ್ ಹಂಚುವಾಗ ಬಹುತೇಕ ಕಡೆಗಳಲ್ಲಿ ರಮೇಶ ನಿರ್ಧಾರವೇ ಫೈನಲ್! ಆದರೆ, ರಾಯಭಾಗ, ಕುಡಚಿ, ಸವದತ್ತಿ ಸಹಿತ ಕೆಲವು ಕಡೆ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದರು. ಇದರ ಪರಿಣಾಮವಾಗಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾದರು. ರಮೇಶ ಮತ್ತು ಸತೀಶ ಇಬ್ಬರು ಸಹೋದರರಲ್ಲಿ ಒಬ್ಬರ ಹೆಸರು ಅಧಿಕೃತ ಅಭ್ಯರ್ಥಿಗೆ ಅಂಟಿಕೊಂಡರೆ, ಇನ್ನೊಬ್ಬರದು ಬಂಡಾಯ ಅಭ್ಯರ್ಥಿಗಳಿಗೆ ತಗುಲಿಕೊಂಡಿತು. ಇಂಥ ಬಂಡಾಯದ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ 18ರಲ್ಲಿ ಕನಿಷ್ಠ ಐದು ಕ್ಷೇತ್ರವನ್ನಾದರೂ ಕಳೆದುಕೊಂಡಿದ್ದು ಸ್ಪಷ್ಟ.
2018ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ರಮೇಶ ಜಾರಕಿಹೊಳಿ ಮಂತ್ರಿಯಾದರು. ಒಂದೆರಡು ತಿಂಗಳಲ್ಲೇ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತು ಸಚಿವ ಡಿ ಕೆ ಶಿವಕುಮಾರ ವಿರುದ್ಧ ಜಾರಕಿಹೊಳಿ ಸಹೋದರರು ಬಹಿರಂಗ ಸಮರ ಆರಂಭಿಸಿದರು. ಸಚಿವ ರಮೇಶ ಮುನಿಸಿಕೊಂಡು ಸಂಪುಟ ಸಭೆಗಳಿಗೆ ಗೈರಾದರು. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಲೆನೋವಾದರು. ರಮೇಶ ಹಾರಿಸಿದ ಬಂಡಾಯದ ಬಾವುಟ ಹಿಡಿಯಲು ಇನ್ನೂ ಕೆಲವು ಶಾಸಕರು ಮುಂದಾದರು. ಇನ್ನೇನು ಸರಕಾರ ಬಿದ್ದೇಹೋಯಿತು ಎನ್ನುವಷ್ಟರಲ್ಲಿ ಸರಕಾರ ಜಪಾನಿನ ಬೊಂಬೆಯಂತೆ ಉರುಳದೆ ನಿಂತಿತು.
ರಮೇಶರನ್ನು ಬಗ್ಗುಬಡಿಯಲು ಅವರನ್ನು ಸಂಪುಟದಿಂದ ಕೈಬಿಟ್ಟು ಸತೀಶರನ್ನು ಸೇರಿಸಿಕೊಳ್ಳಲಾಯಿತು. “ಅಣ್ಣನನ್ನು ಕೈಬಿಟ್ಟಿದ್ದನ್ನು ಗಮನಕ್ಕೆ ತೆಗೆದುಕೊಳ್ಳದೆ, ತಾವಿಬ್ಬರೂ ಸೇರಿಯೇ ಡಿ ಕೆ ಶಿವಕುಮಾರ್ ವಿರುದ್ಧ ನಡೆಸಿದ ಸಮರದ ಗಂಭೀರತೆಯನ್ನು ಲೆಕ್ಕಿಸದೆ ಸತೀಶ ಮಂತ್ರಿ ಕುರ್ಚಿಯ ಮೇಲೆ ಕುಳಿತದ್ದೇ ರಮೇಶ ಮನಸ್ಸಿಗೆ ನೋವುಂಟು ಮಾಡಿದೆ,” ಎಂಬುದು ಅವರ ಆಪ್ತರು ಹೇಳುವ ಮಾತು.
ಅಣ್ಣನನ್ನು ಮನವೊಲಿಸಿ ‘ದಾರಿಗೆ ತರುವ’ ಸತೀಶ ಅವರ ‘ಪ್ರಯತ್ನಗಳು’ ವಿಫಲಗೊಂಡಿವೆ. ಈ ವೈಫಲ್ಯವನ್ನು ಸ್ವತಃ ಸತೀಶ ಅವರೇ ಮಾಧ್ಯಮದ ಎದುರು ಎರಡು ದಿನಗಳ ಹಿಂದೆ ಒಪ್ಪಿಕೊಂಡಿದ್ದಾರೆ.
ರಮೇಶ ಕಾಂಗ್ರೆಸ್ ಪ್ರಚಾರದಲ್ಲಿ ಭಾಗವಹಿಸುವುದು ಈಗ ಮುಗಿದ ಅಧ್ಯಾಯ. ಅವರು ಈಗಾಗಲೇ ಬಿಜೆಪಿ ಪರವಾಗಿ ಪ್ರಚಾರ ನಡೆಸಿರುವುದು ಜಿಲ್ಲೆಯಲ್ಲಿ ಗುಟ್ಟಾಗಿ ಉಳಿದಿಲ್ಲ. ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಮತಕ್ಷೇತ್ರಗಳಲ್ಲಿ ಸಚಿವ ಸತೀಶ ಜಾರಕಿಹೊಳಿಯವರೊಬ್ಬರೇ ‘ಸ್ಟಾರ್ ಪ್ರಚಾರಕರು.’ ರಮೇಶ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೋಕಾಕನಿಂದ 14 ಸಾವಿರ ಮತಗಳ ಅಂತರದಿಂದ ಆಯ್ಕೆಗೊಂಡು ಬಿಜೆಪಿಯನ್ನು ಸೋಲಿಸಿದ್ದಾರೆ. ಈಗ ಸ್ವತಃ ಅವರೇ ಬಿಜೆಪಿ ಪರವಾಗಿ ನಿಂತರೆ ಅಲ್ಲಿ ಏನಾಗಬಹುದೆಂಬುದನ್ನು ಸುಲಭವಾಗಿ ಊಹಿಸಬಹುದು. ನೆರೆಯ ಅರಭಾವಿ ಶಾಸಕ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ ಮತ್ತು ಅರಭಾವಿಗಳಲ್ಲಿ ಬಿಜೆಪಿಗೆ ಅತ್ಯಧಿಕ ಲೀಡ್ ತಂದುಕೊಡುವುದಾಗಿ ಘೋಷಿಸಿದ್ದಾರೆ. ರಮೇಶ ಜಾರಕಿಹೊಳಿ ಬಂಡಾಯದಿಂದಾಗಿ ತಮಗೆ ಗೋಕಾಕದಲ್ಲಿ ದೊಡ್ಡ ಶಕ್ತಿ ಲಭಿಸಿದೆ ಎಂದು ಬಾಲಚಂದ್ರ ಅವರು ಬಹಿರಂಗವಾಗಿಯೇ ಹೇಳಿದ್ದಾರೆ.
ರಮೇಶ ಮತ್ತು ಬಾಲಚಂದ್ರ ಅವರು ಜಂಟಿಯಾಗಿ ಬಿಜೆಪಿ ಪರವಾಗಿ ಗಟ್ಟಿಯಾಗಿ ನಿಂತರೆ ಕಾಂಗ್ರೆಸ್ ಪಕ್ಷದ ಸ್ಥಿತಿ ಏನಾಗಬಹುದು? ಸಚಿವ ಸತೀಶ ಅವರು ರಮೇಶ ಮತ್ತು ಬಾಲಚಂದ್ರ ಇಬ್ಬರನ್ನೂ ಎದುರಿಸಿ ಕಾಂಗ್ರೆಸ್ಸಿಗೆ ಅವೆರಡೂ ಮತಕ್ಷೇತ್ರಗಳಲ್ಲಿ ಬಲ ತುಂಬುವುದು ಸಾಧ್ಯವೇ? ಇನ್ನು ರಾಮದುರ್ಗ, ಸವದತ್ತಿ, ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರಗಳು ಬಿಜೆಪಿ ಹಿಡಿತದಲ್ಲಿವೆ. ಬೆಳಗಾವಿ ಗ್ರಾಮೀಣ ಮಾತ್ರ ಕಾಂಗ್ರೆಸ್ ವಶದಲ್ಲಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಪೆಟ್ಟು ತಿಂದ ಬಂಡಾಯ ಅಭ್ಯರ್ಥಿಗಳು, ಹಳೆಯ ಕಾಂಗ್ರೆಸ್ಸಿಗರು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿಲ್ಲ ಅಥವಾ ಅವರನ್ನು ನೆಪಕ್ಕಾದರೂ ಕರೆಯಲಾಗಿಲ್ಲ!
ಮತದಾನಕ್ಕೆ ನಾಲ್ಕೇ ದಿನಗಳು ಬಾಕಿಯಿದ್ದರೂ ಕಾಂಗ್ರೆಸ್ ನಲ್ಲಿ ತೇಪೆ ಹಚ್ಚುವ ಕೆಲಸ ನಿಂತಿಲ್ಲ. ಕಾಂಗ್ರೆಸ್ ಪ್ರಚಾರಕ್ಕೆ ತಮ್ಮನ್ನು ಕರೆಯಲಿಲ್ಲವೆಂದು ಮುನಿಸಿಕೊಂಡು ಮನೆಯಲ್ಲಿ ಕೂಡಲಾಗದ ಕೆಲವರು ಬೆಳಗಾವಿಯಲ್ಲಿ ಕಳೆದ ಗುರುವಾರ ಪಕ್ಷದ ಅಭ್ಯರ್ಥಿ ಅಥವಾ ಜಿಲ್ಲಾ ಸಚಿವರಿಲ್ಲದೆ ಒಂದು ಮೆರವಣಿಗೆ ನಡೆಸಿದರು. ತಾವು ಕಾಂಗ್ರೆಸ್‌ನಲ್ಲೇ ಇರುವುದನ್ನು ಜನತೆಗಾದರೂ ತಿಳಿಸುವ ಅವರ ಉದ್ದೇಶ ಸಫಲವಾಯಿತು!
ಒಂದು ಮಾತ್ರ ಸತ್ಯ; ರಮೇಶ ಜಾರಕಿಹೊಳಿ ಮರಳಿ ಕಾಂಗ್ರೆಸ್ ತೆಕ್ಕೆಗೆ ಬರುವುದು ಅಸಾಧ್ಯದ ಮಾತು. ಕೇಂದ್ರದಲ್ಲಿ ಮೋದಿ ಸರಕಾರ ಬರಲಿ, ಬಿಡಲಿ. ರಮೇಶ ಕಾಂಗ್ರೆಸ್‌ನಲ್ಲಿ ಉಳಿಯುವುದಿಲ್ಲ. ಹಠಮಾರಿ, ಹಿಡಿದ ಪಟ್ಟು ಬಿಡದ, ದಿ.ವಸಂತರಾವ ಪಾಟೀಲರ ಗರಡಿಯಲ್ಲಿ ಪಳಗಿದ ರಮೇಶ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದಾರೆ. ಅವರ ಬಲ ಬಿಜೆಪಿಗೆ ಸಿಕ್ಕರೆ ಜಿಲ್ಲೆಯಲ್ಲಿ ಬಿಜೆಪಿ ರೊಟ್ಟಿ ತುಪ್ಪದಲ್ಲಿ ಬಿದ್ದಂತೆಯೇ.
ರಮೇಶ ಹುಟ್ಟಾ ಮತ್ತು ಕಟ್ಟಾ ಕಾಂಗ್ರೆಸ್ಸಿಗರು. ಸತೀಶ ಜನತಾ ಪರಿವಾರದಿಂದ ಬಂದವರು. ಜಿಲ್ಲೆಯ ಹುಟ್ಟಾ ಮತ್ತು ಕಟ್ಟಾ ಕಾಂಗ್ರೆಸ್ಸಿಗರು ತಮ್ಮ ಮನೆಯಿಂದ ಹೊರಗೆ ಹೋಗುವ ಮತ್ತು ಹೊರಗಿನಿಂದ ವಲಸೆ ಬಂದವರ ಕೈಗೆ ಜುಟ್ಟು ಬಿಟ್ಟುಕೊಡುವ ಪರಿಸ್ಥಿತಿ ಉಂಟಾಗಿರುವುದು ರಾಜಕೀಯ ಕಾಲಚಕ್ರದ ಪರಿಣಾಮವಷ್ಟೆ. ಅದಕ್ಕೆ ಯಾರನ್ನೂ ದೂಷಿಸಲಾಗದು.
ಅಂಕಣಕಾರರು ಹಿರಿಯ ಪತ್ರಕರ್ತರು