ದೇಶದಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಪ್ರಮುಖ ನಗರಗಳಲ್ಲಿ ಬೆಂಗಳೂರು ಸಹ ಒಂದು. ಅದರಲ್ಲೂ ಅತಿ ಹೆಚ್ಚು ಟ್ರಾಫಿಕ್ ಹೊಂದಿರುವ ನಗರಗಳಲ್ಲಿ ರಾಜ್ಯದ ರಾಜಧಾನಿ ಎರಡನೇ ಸ್ಥಾನವನ್ನು ಹೊಂದಿರುವುದು ಹೆಮ್ಮೆಯ ವಿಷಯವೇ? ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ದಿನಕ್ಕೆ 80 ಲಕ್ಷಕ್ಕೂ ಹೆಚ್ಚಿನ ವಾಹನಗಳು ಓಡಾಡುತ್ತಿರುವುದರಿಂದ, ಅವುಗಳು ಉಗುಳುವ ಹೊಗೆಯಿಂದ ಜನರ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಉಸಿರಾಡುವ ಗಾಳಿಯು ಸಹ ವಿಷವಾಗಿ ಪರಿಣಮಿಸುತ್ತಿರುವುದು ಆತಂಕಕ್ಕೆ ಎಡೆ ಮಾಡಿ ಕೊಟ್ಟಿದೆ. ಈ ಕಾರಣದಿಂದಾಗಿ ಪ್ರಥಮವಾಗಿ ಕಬ್ಬನ್ ಪಾರ್ಕ್ ನಲ್ಲಿ ‘ಮ್ಯಾನ್ ಅಂಡ್ ಹಮ್ಮೆಲ್’ (MANN+HUMMEL) ಮತ್ತು ಹಡ್ಸನ್ ಸರ್ಕಲ್ ನಲ್ಲಿ ‘ಎ ಟೆಕ್ ಟ್ರೋನ್’ (ATECH TRON) ಎಂಬ ಎರಡು ಖಾಸಗಿ ಸಂಸ್ಥೆಗಳು ಸೂಕ್ಷ್ಮ ಧೂಳು ನಿಯಂತ್ರಕ ಯಂತ್ರವನ್ನು ಅಳವಡಿಸಿದೆ.
ಈ ಎರಡು ಸಂಸ್ಥೆಗಳು ಸ್ವಂತ ಖರ್ಚಿನಲ್ಲಿ ಪ್ರಾಯೋಗಿಕವಾಗಿ ಒಂದೊಂದು ಯಂತ್ರವನ್ನು ಅಳವಡಿಸಿದೆ. “ಪ್ರತಿ ಯಂತ್ರದ ಬೆಲೆ 3ರಿಂದ 4ಲಕ್ಷ. ಅಲ್ಲದೇ ಈ ಯಂತ್ರದಲ್ಲಿ ಫಿಲ್ಟರ್ ಮತ್ತು ಫ್ಯಾನ್ ಗಳಿದ್ದು, ತನ್ನ ಸುತ್ತಲಿನ 200 ಮೀಟರ್ ನಲ್ಲಿರುವ ಧೂಳಿನ ಕಣಗಳನ್ನು ಶೋಧಿಸಿ, ವಿಷಕಾರಿಯಂತಹ ಧೂಳಿನ ಕಣವನ್ನು ಶೇಖರಿಸಿಡುತ್ತದೆ. “ಸರ್ಕಾರ ಅನುಮತಿಯನ್ನು ನೀಡಿದರೆ, ನಗರದಲ್ಲಿ ಸಂಚಾರ ದಟ್ಟಣೆ ಇರುವ ಕಡೆ ಹಾಗೂ ಜಂಕ್ಷನ್ ಗಳಲ್ಲಿ ಈ ಯಂತ್ರವನ್ನು ಅಳವಡಿಸುತ್ತೇವೆ,” ಎಂದು ಸಂಸ್ಥೆಗಳು ಹೇಳುತ್ತಿವೆ.
ಹಡ್ಸನ್ ಸರ್ಕಲ್ ನಲ್ಲಿರುವ ಎ ಟೆಕ್ ಟ್ರೋನ್ ಸಂಸ್ಥೆಯ ಯಂತ್ರವು, ಒಟ್ಟು 2ರಿಂದ 3 ಕೆ.ಜಿಯಷ್ಟು ಧೂಳಿನ ಕಣವನ್ನು ಮಾತ್ರ ಸಂಗ್ರಹಿಸುತ್ತದೆ. ಆದರೆ ಅದಕ್ಕೂ ಮೀರಿ ಇರುವ ವಿಷಕಾರಿ ಧೂಳಿನ ಕಣಗಳನ್ನು ಏನು ಮಾಡಬೇಕು ಎಂಬುದು ದೊಡ್ಡ ಪ್ರಶ್ನೆ. ಅಲ್ಲದೇ ಒಂದು ಪ್ರದೇಶದಲ್ಲಿ, ಒಂದು ಯಂತ್ರವು 3 ಕೆ.ಜಿಯಷ್ಟು ಧೂಳಿನ ಕಣಗಳನ್ನು ಸಂಗ್ರಹಿಸುತ್ತದೆ ಎಂದಾದರೇ, ನಗರಾದ್ಯಂತ 4 ಲಕ್ಷಕ್ಕೂ ಹೆಚ್ಚು ಯಂತ್ರಗಳನ್ನು ಅಳವಡಿಸಬೇಕಾಗುತ್ತದೆ. ಇದಕ್ಕೆ ಕೋಟ್ಯಾಂತರ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ತಂತ್ರಜ್ಞಾನದಲ್ಲಿ ಚೀನಾ ದೇಶ ಸಾಕಷ್ಟು ಮುಂದೆ ಇರುವ ಕಾರಣ, ವಾಯು ಶುದ್ಧೀಕರಣ ಯಂತ್ರಗಳು ಯಶಸ್ವಿಯಾಗಿ ತನ್ನ ಕೆಲಸವನ್ನು ನಿರ್ವಹಿಸುತ್ತಿದೆ. ಆದರೆ ಭಾರತ ತಂತ್ರಜ್ಞಾನದಲ್ಲಿ ಮುಂದೆ ಇದ್ದರೂ, ಕೆಲವೊಮ್ಮೆ ನಿಯಂತ್ರಣದಲ್ಲಿ ಸಫಲತೆ ಕಾಣುವುದಿಲ್ಲ.

ಕಬ್ಬನ್ ಪಾರ್ಕ್ ನಲ್ಲಿ ನೈಸರ್ಗಿಕವಾಗಿ ಮರಗಳಿಂದಲೇ ಶುದ್ಧ ಗಾಳಿಯನ್ನು ಪಡೆಯಬಹುದು. ಅಲ್ಲದೇ ಈ ಯಂತ್ರವನ್ನು ಇಲ್ಲಿ ಅಳವಡಿಸಿರುವುದು ಹಾಸ್ಯಾಸ್ಪದವಾಗಿದೆ. ಕಬ್ಬನ್ ಪಾರ್ಕ್ ನಲ್ಲಿ ಸಾಧ್ಯವಾದಷ್ಟು ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿದರೆ, ವಾಯು ಶುದ್ಧೀಕರಣ ಅಥವಾ ಧೂಳು ನಿಯಂತ್ರಕ ಯಂತ್ರದ ಅವಶ್ಯಕತೆ ಇರುವುದಿಲ್ಲ. ಹಾಗೂ ಯಂತ್ರವನ್ನು ಅಳವಡಿಸಿ 8 ತಿಂಗಳಾದರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು, ಯಂತ್ರಗಳು ಹೇಗೆ ಕೆಲಸ ಮಾಡುತ್ತಿವೆ ಎಂಬ ಮಾಹಿತಿಯನ್ನು ಇದೂವರೆಗೆ ಪಡೆಯದಿರುವುದು ವಿಪರ್ಯಾಸ. ಮತ್ತು ಹಡ್ಸನ್ ಸರ್ಕಲ್ ನಲ್ಲಿ ಮಾಲಿನ್ಯ ಗುಣಮಟ್ಟದ ಸೂಚ್ಯಂಕ ಪಟ್ಟಿಯ ಯಂತ್ರವು ಕೂಡ ಕೆಟ್ಟು ಹೋಗಿದ್ದರೂ, ಸರಿಪಡಿಸದಿರುವುದು ದುರಂತ.
ಉಸಿರಾಡುವ ಗಾಳಿಯಲ್ಲಿ, ನೈಟ್ರಿಕ್ ಆಕ್ಸಿಡ್ ಮತ್ತು ನೈಟ್ರೋಜನ್ ಡೈಯಾಕ್ಸೈಡ್ (NO2), ಕಾರ್ಬನ್ ಮತ್ತು ಆಕ್ಸಿಜನ್ (CO), ಪರ್ಟಿಕ್ಯೂಲೇಟ್ ಮ್ಯಾಟೇರ್ (PM10) ಹಾಗೂ ಸಲ್ಫರ್ ಡಯಾಕ್ಸೈಡ್ (SO2)ಕಣಗಳು ಸೇರಿಕೊಂಡಿರುತ್ತದೆ. ಹೀಗಾಗಿ ಗಾಳಿಯ ಗುಣಮಟ್ಟವನ್ನು ಅಳೆಯಲು ಅಮೆರಿಕಾ ಪರಿಸರ ಸಂರಕ್ಷಣಾ ಸಂಸ್ಥೆಯು ಸೂಚ್ಯಂಕವನ್ನು ಸಿದ್ಧಪಡಿಸಿದೆ. ಗಾಳಿಯ ಗುಣಮಟ್ಟದಲ್ಲಿ ಈ ಕಣಗಳು 0-50 ಇದ್ದರೆ ಮನುಷ್ಯನ ದೇಹದ ಮೇಲೆ ಕನಿಷ್ಠ ಪರಿಣಾಮವನ್ನು ಬೀರುತ್ತದೆ (Minimal Impact). ಅದೇ ಕಣಗಳು 51-100 ಇದ್ದರೆ ಕೆಲ ಸೂಕ್ಷ್ಮ ವ್ಯಕ್ತಿಗಳಿಗೆ ಉಸಿರಾಟ ಸಮಸ್ಯೆಯನ್ನು ಉಂಟು ಮಾಡುತ್ತದೆ (Minor breathing discomfort to sensitive people), 101-200ರವರೆಗೆ ಇರುವ ಕಣಗಳಿಂದ ಶ್ವಾಸಕೋಶ, ಅಸ್ತಮಾ ಮತ್ತು ಹೃದ್ರೋಗಗಳಿಂದ ಬಳಲುತ್ತಿರುವವರ ಉಸಿರಾಟಕ್ಕೆ ತೊಂದರೆಯಾಗುತ್ತದೆ (Breathing discomfort to the people with lungs, asthma and heart diseases), 201-300 ಇರುವ ಕಣಗಳಿಂದ ಹೆಚ್ಚಿನ ರೀತಿಯಲ್ಲಿ ಜನರು ಉಸಿರಾಟದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ (Breathing discomfort to most people on prolonged exposure), 301-400 ಕಣಗಳಿದ್ದರೆ ಉಸಿರಾಟದ ಕಾಯಿಲೆ ಬರುವುದಂತು ನಿಶ್ಚಿತ (Respiratory illness on prolonged exposure), ಹಾಗೂ ಈ ಕಣಗಳು 401-500 ದಾಟಿದರೆ ಆರೋಗ್ಯವಂತ ಜನರ ಮೇಲೆಯೂ ಪರಿಣಾಮ ಬೀರುತ್ತದೆ ಮತ್ತು ಈಗಾಗಲೇ ಕಾಯಿಲೆಗಳಿಂದ ಬಳಲುತ್ತಿರುವವರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ (Affects healthy people and seriously impacts those with existing diseases) ಎಂದು ಹೇಳಿದೆ.

ಬೃಹತ್ ಕೈಗಾರಿಕೆಗಳಿಂದ, ಡಿಸೇಲ್ ಆಧರಿತ ಜನರೇಟರ್ ಗಳು, ಧೂಳಿನಿಂದ ಕೂಡಿದ ರಸ್ತೆಗಳು ಹಾಗೂ ಇನ್ನಿತರ ರಸ್ತೆ ಕಾಮಗಾರಿಗಳಿಂದ ಮಿತಿ ಮೀರಿದ ವಾಹನಗಳು ಉಗುಳುವ ಹೊಗೆಯನ್ನು ಸೇವಿಸಿ ಈಗಾಗಲೇ ಬೆಂಗಳೂರಿನಲ್ಲಿ ಸಾಕಷ್ಟು ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವಾಯು ಶುಧ್ಧೀಕರಣ ಯಂತ್ರದಿಂದ ವಾಯು ಮಾಲಿನ್ಯವನ್ನು ಎಷ್ಟರ ಮಟ್ಟಿಗೆ ತಡೆಗಟ್ಟಬಹುದು ಎಂಬುದು ಪ್ರಶ್ನೆ. ಆರಂಭದಲ್ಲಿ 1 ತಿಂಗಳು ಎಲ್ಲಾ ಯಂತ್ರಗಳು ಚೆನ್ನಾಗಿಯೇ ತನ್ನ ಕಾರ್ಯವನ್ನು ನಿರ್ವವಹಿಸುತ್ತದೆ. ಆದರೆ ಒಂದು ಬಾರಿ ಯಂತ್ರಗಳು ತಾಂತ್ರಿಕ ಸಮಸ್ಯೆಯಿಂದಾಗಿ ಅಥವಾ ಇನ್ನಿತರ ಸಮಸ್ಯೆಯಿಂದ ಕೆಟ್ಟು ಹೋದರೆ, ವರ್ಷವಾದರೂ ಅದನ್ನು ಸರಿಪಡಿಸುವುದಕ್ಕೆ, ಒಪ್ಪಿಕೊಂಡ ಇಲಾಖೆ ಸಹ ಮುಂದೆ ಬರುವುದಿಲ್ಲ.
ಸದ್ಯಕ್ಕೆ ಸರ್ಕಾರ, ಅಭಿವೃದ್ಧಿಗಾಗಿ ಮರಗಳನ್ನು ಕಡಿಯುವ ಚಿಂತನೆಯನ್ನು ಪಕ್ಕಕ್ಕೆ ಇಟ್ಟು, ಮಾಲಿನ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮಾಲಿನ್ಯ ಗುಣಮಟ್ಟದ ಮೇಲೆ ನಿಗಾವಹಿಸಬೇಕು. ಅಲ್ಲದೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ನೇತೃತ್ವವಹಿಸಿ, ಮರಗಳನ್ನು ಬೆಳೆಸುವುದಕ್ಕೆ, ತಿಂಗಳಿಗೆ ಇಂತಿಷ್ಟು ಗಿಡಗಳನ್ನು ನೆಡಲೇಬೇಕು ಎಂಬ ನಿರ್ಧಾರವನ್ನು ಕೈಗೆತ್ತಿಕೊಂಡರೆ, ನೈಸರ್ಗಿಕವಾಗಿ ಶುದ್ಧ ಗಾಳಿಯನ್ನು ಪಡೆಯಬಹುದು. ಇದನ್ನು ಬಿಟ್ಟು ಸೂಕ್ಷ್ಮ ಧೂಳು ನಿಯಂತ್ರಕ ಯಂತ್ರಗಳಿಂದ ತಕ್ಷಣ ಪರಿಹಾರವನ್ನು ಕಂಡುಕೊಂಡರು, ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವೇ?