ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಇನ್ನೂ ಮಳೆ ಬಂದಿಲ್ಲ, ಬರ ನೀಗಿಲ್ಲ. ಹನಿ ಹನಿ ನೀರಿಗೂ ತತ್ವಾರ ಪಡುವಂತಹ ಪರಿಸ್ಥಿತಿ ಬಹು ಕಾಲದಿಂದಲೂ ಇದೆ. ಜೂನ್ ಮೊದಲನೆಯ ವಾರದಲ್ಲಿ ಮಳೆ ಬರುತ್ತದೆ ಎಂದು ಮುಗಿಲನ್ನೇ ನೋಡುತ್ತ ಕುಳಿತ ರೈತರಿಗೆ ಈ ಬಾರಿ ನಿರಾಸೆಯಾಗಿದೆ. ಪ್ರತಿ ಸಲ ಮಳೆ ಬಾರದೇ ಇದ್ದಾಗ ಪೂಜೆ ಮಾಡುವ ಜನರು ಈ ಭಾಗದಲ್ಲಿ ಹಲವರು. ಬರವಿದ್ದರೂ ಬೆದರದೆ ಎಲ್ಲರೂ ಕೂಡಿ ಮಳೆ ದೇವರನ್ನು ಪ್ರಾರ್ಥಿಸುವ ಪರಿಪಾಠ ಇಲ್ಲಿ ಶತಮಾನಗಳಿಂದಲೂ ಇದೆ. ಈ ಪೂಜೆ ನೋಡಲು, ಕೇಳಲು ತುಂಬಾ ಸರಳ ಹಾಗೂ ಕುತೂಹಲಕಾರಿಯಾಗಿವೆ.
ಎಲ್ಲ ಭಾಗಗಳಲ್ಲಿ ಹೆಚ್ಚಾಗಿ ಮಾಡುವಂತಹ ಪೂಜೆ ಕತ್ತೆ ಮದುವೆ. ಕಲಬುರಗಿ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಇಂದಿಗೂ ಕತ್ತೆ ಮದುವೆ ಮಾಡುತ್ತಾರೆ. ಊರ ಜನರೆಲ್ಲ ಸೇರಿ ಕತ್ತೆ ಜೋಡಿಗಳನ್ನು ತಂದು ಅವುಗಳಿಗೆ ವರ ವಧುವಿನಂತೆ ಶೃಂಗರಿಸಿ ವಾದ್ಯ ಮೇಳಗಳೊಂದಿಗೆ ಊರೆಲ್ಲ ಮೆರವಣಿಗೆ ಮಾಡಿ ಎಲ್ಲರೂ ಸಿಹಿ ಊಟ ಮಾಡುತ್ತಾರೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಕಪ್ಪೆ ಮದುವೆ ಮಾಡುತ್ತಾರೆ. ಕಪ್ಪೆಗಳು ಮಳೆಯ ರಾಯಭಾರಿಗಳಿದ್ದಂತೆ ಅವುಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ಪ್ರತೀತಿ ಇನ್ನೂ ಹಲವು ಹಳ್ಳಿಗಳಲ್ಲಿ ಇದೆ. ಇದು ಉತ್ತರ ಕರ್ನಾಟಕವಲ್ಲದೇ ಮೊನ್ನೆ ಜೂನ್ ಮೊದಲನೇಯ ವಾರ ಉಡುಪಿಯಲ್ಲಿಯೂ ಬಹಳ ಅದ್ದೂರಿಯಿಂದ ಕಪ್ಪೆ ಮದುವೆ ಮಾಡಲಾಯಿತು.
ಇದು ಬಹು ಹಳೆಯ ಪದ್ಧತಿ. ಮಂಡೂಕ ಪರಿಣಯ ಎಂದು ಈ ಪದ್ಧತಿಗೆ ಕರೆಯುತ್ತಾರೆ. ಹಿಂದೂ ಸಂಸ್ಕೃತಿಯ ಪ್ರಕಾರ ಒಂದು ಗಂಡು ಕಪ್ಪೆ ಮತ್ತೊಂದು ಹೆಣ್ಣು ಕಪ್ಪೆ (ಬೇರೆ ಬೇರೆ ಕೆರೆಯಿಂದ) ತಂದು ಅವುಗಳನ್ನು ತಮ್ಮ ಮಕ್ಕಳಿಗೆ ಮದುವೆ ಮಾಡಿಸಿದಂತೆ ಎಲ್ಲ ಪದ್ಧತಿಗಳನ್ನು ಅನುಸರಿಸಿ ಕೊನೆಗೆ ಅವುಗಳನ್ನು ಬೇರೊಂದು ಕೆರೆಗೆ ಬಿಡುತ್ತಾರೆ. ಹೀಗೆ ಮಾಡಿದರೆ ಮಳೆ ಬರುತ್ತದೆ ಎಂಬುದು ಹಲವರ ನಂಬಿಕೆ.
ಗುರ್ಜಿ ಪೂಜೆ
ಇದು ಬಹಳಷ್ಟು ಹಳ್ಳಿಗಳಲ್ಲಿ ಹಾಗೂ ಕೆಲವು ನಗರ ಭಾಗಗಳಲ್ಲಿ ನಡೆಯುತ್ತದೆ. ಈ ಪೂಜಾ ವಿಧಾನದಲ್ಲಿ ಊರಿನ ಅಥವಾ ಹಳ್ಳಿಯ ಅವಿವಾಹಿತ ಯುವಕರು ಅಥವಾ ಮಕ್ಕಳ ತಲೆಯ ಮೇಲೆ ಚಪಾತಿ ಹೆಂಚನ್ನು ಇಡುತ್ತಾರೆ. ಆ ಹೆಂಚಿನ ಮೇಲೆ ಕುಳ್ಳು ಅಂದರೆ ಆಕಳು ಸೆಗಣಿಯನ್ನು ಇಟ್ಟು ಅದರ ಮೇಲೆ ಹುಲ್ಲನ್ನು ನೆಡುತ್ತಾರೆ. ಹುಡುಗರು ಆ ಹೆಂಚನ್ನು ತಲೆಯ ಮೇಲೆ ಹೊತ್ತು ಮನೆ ಮನೆಗಳಿಗೆ ತೆರಳಿ ಜೋಳದ ಹಿಟ್ಟನ್ನು ಅಥವಾ ಗೋಧಿ ಹಿಟ್ಟನ್ನು ಬಿಕ್ಷೆಯ ಮೂಲಕ ಸಂಗ್ರಹಿಸಿ ತರುತ್ತಾರೆ. ಊರ ಜನರು ಆ ಹುಡುಗರ ತಲೆಯ ಮೇಲೆ ನೀರನ್ನು ಸುರಿಯುತ್ತಾರೆ. ನೀರು ಸುರಿಯುತ್ತಾ ‘ ಬಾ ಬಾ ಮಳೆಯೇ’ ಎಂದು ಜಾನಪದ ಹಾಡನ್ನು ಹಾಡುತ್ತಾರೆ. ಸಂಗ್ರಹಿಸಿದ ಎಲ್ಲ ಹಿಟ್ಟಿನಿಂದ ರೊಟ್ಟಿ ಅಥವಾ ಚಪಾತಿ ಮಾಡಿ ಊರ ದೇವರಿಗೆ ಪೂಜೆ ಮಾಡಿ ಎಲ್ಲರೂ ಒಟ್ಟು ಪ್ರಸಾದವೆಂದು ತಿನ್ನುತ್ತಾರೆ. ಕೆಲವು ಭಾಗಗಳಲ್ಲಿ ಊರಿನ ಹೆಣ್ಣುಮಕ್ಕಳನ್ನು ಕರೆದು ಉಡಿ ತುಂಬುತ್ತಾರೆ. ಗುರ್ಜಿ ಪೂಜೆಯೂ ನಿನ್ನೆ ಮೊನ್ನೆಯದಲ್ಲ. ಇದು ಶತಮಾನದಿಂದ ಪಾಲಿಸಿಕೊಂಡು ಬಂದ ಪೂಜಾ ವಿಧಾನ
ಜೋಕುಮಾರ
ಜೋಕುಮಾರ ಮಳೆಯ ದೇವರು ಎಂದೇ ಪ್ರಸಿದ್ಧ. ಜೋಕುಮಾರನ ಬಗ್ಗೆ ಹಲವು ಕತೆಗಳಿವೆ. ಸಪ್ತ ಋಷಿಗಳ ಸೇವಕನೆಂದು ಕೆಲವರು ಹೇಳುತ್ತಾರೆ. ಕೆಲವರು ಜೋಕ ಮತ್ತು ದಿಟ್ಟವ್ವ ಎಂಬ ದಂಪತಿಗಳ ಮಗನಾಗಿದ್ದರಿಂದ ಜೋಕುಮಾರನೆಂದು ಕರೆಯುತ್ತಾರೆ. ಈ ಜೋಕುಮಾರ ನನ್ನು ಪೂಜಿಸಿದರೆ ಮಳೆ ಬರುತ್ತದೆ ಎಂದು ಇಂದಿಗೂ ಹಲವು ಹಳ್ಳಿಗಳಲ್ಲಿ ಜೋಕುಮಾರ ಆರಾಧನೆ ನಡೆಯುತ್ತದೆ. ಜೋಕುಮಾರನ ಪೂಜೆ ಮಾಡಿದ ಬಳಿಕ ಅಂಬಲಿಯನ್ನು ಪ್ರಸಾದವೆಂದು ಸೇವಿಸುತ್ತಾರೆ. ಕೆಲವು ಹಳ್ಳಿಗಳಲ್ಲಿ ಈ ಪ್ರಸಾದವನ್ನು ಸೇವಿಸುವ ಮೊದಲು ತಮ್ಮ ತಮ್ಮ ಹೊಲಗಳಿಗೆ ತೆರಳಿ ಅಲ್ಲಲ್ಲಿ ಅಂಬಲಿ ಚೆಲ್ಲಿ ಮಳೆ ಬರಲಿ ಚೆನ್ನಾಗಿ ಬೆಳೆ ಬರಲಿ ಎಂದು ಬೇಡಿಕೊಳ್ಳುತ್ತಾರೆ.
ಬೊಂಬೆ ಮದುವೆ
ಇದು ಅಲ್ಲಲ್ಲಿ ಆಗಾಗ ನಡೆಯುವ ವಿರಳ ಮದುವೆ. ಇಲ್ಲಿ ಬೊಂಬೆಗಳನ್ನು ಕೂರಿಸಿ, ಒಂದು ಬೊಂಬೆ ಹಿಡಿದು ಇನ್ನೊಂದು ಬೊಂಬೆಗೆ ತಾಳಿ ಕಟ್ಟಿಸಿ, ನೆರೆದವರು ಅಕ್ಷತಾರೋಪಣವನ್ನು ಮಾಡುವವರು. ಈ ಮದುವೆ ಮೊನ್ನೆ ಜೂನ್ 18 ರಂದು ಗದುಗಿನ ಲಕ್ಷ್ಮೇಶ್ವರದಲ್ಲಿ ನಡೆಯಿತು. ಪಟ್ಟಣದ ರೈತ ಸಮುದಾಯದವರೆಲ್ಲರೂ ಸೇರಿ ಬೀರೇಶ್ವರ ದೇವಸ್ಥಾನದಲ್ಲಿ ಬೊಂಬೆ ಮದುವೆ ಆಯೋಜಿಸಿದ್ದರು. ಮದುವೆಗಾಗಿ ರೈತರೆಲ್ಲರೂ ಸೇರಿ ಸಕಲ ಸಿದ್ಧತೆ ಕೈಗೊಂಡಿದ್ದರು. ಕೆಲವರು ವಧುವಿನ ಕಡೆಯಂತೆ ಇದ್ದರೆ ಕೆಲವರು ವರನ ಕಡೆಯಿದ್ದಂತೆ ಓಡಾಡುತ್ತಿದ್ದರು. ವರನ ಕಡೆಯ ಬೀಗರು ದೇವಸ್ಥಾನವನ್ನು ತಳಿರು ತೋರಣದಂತೆ ಸಿಂಗರಿಸಿದ್ದರು. ಹಾಲಗಂಬವನ್ನು ವಾದ್ಯ ಸಮೇತ ತಂದು ನಿಲ್ಲಿಸಿದ್ದರು. ಬೊಂಬೆಗಳಿಗೆ ಅರಸಿನ ಲೆಪನ ಮಾಡಿ ಸುರಗಿ ಎರೆದು ಹೊಸ ಬಟ್ಟೆಗಳನ್ನು ಹಾಕಿ ಸಿಂಗರಿಸಿದ್ದರು. ಸಕಲ ವಿಧಿ ವಿಧಾನ ತಾಳಿ ಕಟ್ಟುವ ಕಾರ್ಯವನ್ನು ನೆರವೇರಿಸಿದರು. ನಂತರ ಎಲ್ಲರೂ ಜೊತೆಗೂಡಿ ಸಿಹಿ ಸಜ್ಜಿಗೆ, ಅನ್ನ, ಸಂಗಟಿ ಸಾರು ಊಟ ಮಾಡಿದರು.
ಮಳೆ ಮಲ್ಲಪ್ಪನ ಪೂಜೆ

ಮಳೆ ಮಲ್ಲಪ್ಪ ಹೆಸರೇ ಸೂಚಿಸಿದಂತೆ ಈ ದೇವರ ಪೂಜೆ ಮಳೆಗಾಗಿ. ಈ ಪೂಜೆಯಲ್ಲಿ ಗುರ್ಜಿಯೂ ಒಂದು ಪ್ರಮುಖ ಭಾಗ. ಊರ ಜನರೆಲ್ಲ ಸೇರಿ ಮಾಡುವ ವಿಶಿಷ್ಟ ಪೂಜೆ ಇದು. ರೈತರು ಅದರಲ್ಲಿಯೂ ಮದುವೆಯಾಗದವರು ಮನೆ ಮನೆಗೆ ತಿರುಗಿ ಹಿಟ್ಟು, ತರಕಾರಿ ಸೇರಿಸಿ ತರುತ್ತಾರೆ. ಇವರೆಲ್ಲ ಗುಡಿಯ ಹತ್ತಿರ ಬಂದಿಡೆ ಊರಿನ ಹಿರಿಯರು ಇವರಿಗೆ ಹಾರ ಹಾಕಿ ಸ್ವಾಗತಿಸುತ್ತಾರೆ. ನಂತರ ಊರಿನ ಹೆಣ್ಣು ಮಕ್ಕಳು ಊರಿನಲ್ಲಿರುವ ಎಲ್ಲಾ ದೇವತೆಗಳ ಗುಡಿಗಳಿಗೆ ತೆರಳಿ (ದುರ್ಗವ್ವ, ದ್ಯಾಮವ್ವ, ಅಂಬಾ ಭವಾನಿ, ಲಕ್ಷ್ಮೀ) ಉಡಿ ತುಂಬುತ್ತಾರೆ. ನಂತರ ಸಂಗ್ರಹಿಸಿಟ್ಟ ಹಿಟ್ಟಿನಿಂದ ಸಂಗಟಿ ಮತ್ತು ಸಾರನ್ನು ಅಲ್ಲಿಯೇ ತಯಾರಿಸಿ ಪ್ರಸಾದ ರೂಪದಲ್ಲಿ ಸೇವಿಸುತ್ತಾರೆ.
ಗುಡ್ಡದ ಮೇಲೆ ಕಂಬಳಿ ಬೀಸಿ ಮಳೆ ಕರೆಯುವ ಪದ್ಧತಿ
ಈ ವಿಶಿಷ್ಟ ಪೂಜೆ ಉತ್ತರ ಕರ್ನಾಟಕ ಗುಡ್ಡ ಗಾಡು ಪ್ರದೇಶಗಳಲ್ಲಿದೆ. ತಾಂಡಾ ಅಥವಾ ಗುಡ್ಡದ ಅಂಚಿನ ಜನರೆಲ್ಲ ಸೇರಿ ಗುಡ್ಡದ ಮೇಲೆ ತೆರಳಿ ಕಂಬಳಿ ಬೀಸುತ್ತ ಮಳೆ ದೇವರನ್ನು ಕೂಗಿ ಕರೆಯುತ್ತಾರೆ. ಕಂಬಳಿ ಬೀಸಿ ಜೋರಾಗಿ ಕೂಗಿದರೆ ದೇವರು ಕಣ್ಣು ಬಿಟ್ಟು ಮಳೆ ಸುರಿಸುತ್ತಾನೆ ಎಂಬ ನಂಬಿಕೆ ಈ ಜನರದ್ದು.
ಮಕ್ಕಳ ಅರೆ ಬೆತ್ತಲೆ ಸೇವೆ
ಇದು ಮಳೆಗಾಗಿ ಪ್ರಾರ್ಥಿಸುವ ಇನ್ನೊಂದು ವಿಧಾನ. ಮಕ್ಕಳನ್ನು ಊರ ಹತ್ತರವಿರುವ ಸ್ನಾನ ಮಾಡಿಸಿ, ಮೈಯನ್ನು ಒರೆಸಿಕೊಳ್ಳದೆ ಊರಿನ ಗುಡಿಗಳಿಗೆ ತೆರಳಿ ಮಕ್ಕಳಿಂದ ಸೇವೆ ಮಾಡಿಸುತ್ತಾರೆ. ಈ ವಿಧಾನ ಪ್ರತಿ 50 ಕಿಮಿ ಗೆ ಕೊಂಚ ಬದಲಾಗುತ್ತದೆ. ಕೆಲವರು ಗುಡಿಯ ಮುಂದೆ ನೀರು ಹಾಕಿದರೆ ಕೆಲವರು ದೀಡ ನಮಸ್ಕಾರ ಹಾಕುತ್ತಾರೆ.
ಬಾಗಲಕೋಟೆಯ ಶಂಭುಲಿಂಗಯ್ಯ ಮಠದ, ಸಾಮಾಜಿಕ ಕಾರ್ಯಕರ್ತರು ಪೂಜೆಗಳ ಬಗ್ಗೆ ಹೀಗೆ ಹೇಳಿದರು, “ಉತ್ತರ ಕರ್ನಾಟಕ ಎಂದರೆ ಮಳೆಯ ಕೊರತೆ, ಬರ, ಬವಣೆಯ ಚಿತ್ರಗಳು ಮನದಲ್ಲಿ ಬರುತ್ತವೆ. ಇಲ್ಲಿಯ ಜನರು ಬರವಿದ್ದರೂ ತಾಳ್ಮೆಯಿಂದ ದೇವರನ್ನು ಪೂಜಿಸುವ ಪರಿಪಾಠ ಹಾಕಿಕೊಂಡು ಬಂದಿದ್ದಾರೆ. ಕೆಲವರ ನಂಬಿಕೆಯಂತೂ ವಿಚಿತ್ರವೆನ್ನಿಸುತ್ತದೆ. ಕಿಲೋಮಿಟರುಗಟ್ಟಲೇ ಬಿಸಿಲಲ್ಲಿ ನಡೆದು ನೀರು ತಂದರೂ, ಕೊಂಚವೂ ದೈವವನ್ನು ನಿಂದಿಸದೇ ಆ ಭಗವಂತ ತಮ್ಮನ್ನೆಲ್ಲ ಕಾಪಾಡುತ್ತಾನೆ ಎಂಬ ನಂಬಿಕೆಯಿಂದ ಬದುಕು ಸಾಗಿಸುತ್ತಾರೆ. ಈ ಭಾಗದಲ್ಲಿ ಹಲವು ವಿಶಿಷ್ಟ ಹಾಗೂ ವಿಚಿತ್ರ ಆಚರಣೆಗಳಿವೆ. ಇವುಗಳನ್ನು ಮೂಢನಂಬಿಕೆ ಎಂದು ಹಲವರು ಕರೆದರೂ, ಈ ಭಾಗದ ಜನರು ಮಾತ್ರ ತಲೆ ಕೆಡಿಸಿಕೊಳ್ಳದೆ ಪಾಲಿಸುತ್ತಲೇ ಇದ್ದಾರೆ”.
ವಿಜಯಪುರದ ಸುನಂದಾ ಪರ್ವತಿಕರ, ಎಂಬ ಮಹಿಳೆ ಹೇಳುವ ಪ್ರಕಾರ, “ಇಂದಿನ ಜನರು ಪೂಜೆ ಪುನಸ್ಕಾರಗಳನ್ನು ಮರೆತು ಮಾಡರ್ನ್ ಯುಗದಲ್ಲಿದ್ದಾರೆ. ಅಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಪದ್ಧತಿಗಳು ನಶಿಸಿ ಹೋಗುತ್ತವೆ ಎಂಬ ಕಾಲದಲ್ಲಿ, ಇನ್ನೂ ಹಲವು ಹಳ್ಳಿಗಳಲ್ಲಿ ಇಂತಹ ಪೂಜೆ ನಡೆಯುತ್ತಿರುವುದು ತುಸು ಸಮಾಧಾನಕರ. ನಂಬಿಕೆ ಎಂಬ ನೆಪದಿಂದ ಸಂಸ್ಕೃತಿಯನ್ನು ಅಥವಾ ಪೂಜಾ ವಿಧಿ ವಿಧಾನಗಳನ್ನು ಜೀವಂತವಿಟ್ಟು ಮುಂಬರುವ ಸಂತತಿಗಳಿಗೆ ಅವುಗಳನ್ನು ಪರಿಚಯಿಸುವುದು ಅಷ್ಟೇ ಮುಖ್ಯ. ಈ ಪೂಜೆಗಳಿಂದ ಏನೂ ಆಗದಿದ್ದರೂ ಸಾಮುದಾಯಿಕ ಬಾಂಧವ್ಯ ಹಾಗೂ ಸೌಹಾರ್ದತೆ ಬೆಸೆಯುತ್ತದೆ, ಬೆಳೆಯುತ್ತದೆ”.
ರಾಜು ಖಾನಪ್ಪನವರ, ಗದುಗಿನ ಸಾಮಾಜಿಕ ಕಾರ್ಯಕರ್ತ ಹಾಗೂ ಪರಿಸರವಾದಿ ಹೇಳುವ ಪ್ರಕಾರ, “ಇಂತಹ ಪೂಜೆಗಳು ಅವರವರ ನಂಬಿಕೆ ಹಾಗೂ ಆಚರಣೆಗಳು. ಈ ವಿಧಾನಗಳಲ್ಲಿ ಯಾರೂ ಪ್ರಾಣಿ ವಧೆ ಮಾಡುವುದಿಲ್ಲ ಹಾಗೂ ಪರಿಸರ ಹಾನಿ ಮಾಡುವುದಿಲ್ಲ ಎಂಬುದೇ ಸಮಾಧಾನ. ಎಲ್ಲರೂ ಜೊತೆಗೂಡಿ ಊಟ ಮಾಡಲು, ಸುಖ ಸಂಕಟಗಳನ್ನು ಹಂಚಿಕೊಳ್ಳಲು ಸಹಾಯಕವಾಗುತ್ತದೆ. ಇಲ್ಲಿ ಬೊಂಬೆಗಳು ಓಕೆ ಆದರೆ ಕಪ್ಪೆ, ಕತ್ತೆಗಳ ಮದುವೆಯಂತಹ ರೂಢಿಗಳು ಬೇಡ ಎಂಬುದು ನಮ್ಮ ಕಳಿಕಳಿಯ ವಿನಂತಿ ಅಷ್ಟೆ”.
ಹೀಗೆ ಉತ್ತರ ಕರ್ನಾಟಕದ ಹಲವು ಹಳ್ಳಿಗಳಲ್ಲಿ ಮಾಡುವ ಪೂಜೆಗಳು ವಿಶೇಷವಾಗಿರುತ್ತವೆ. ಈ ಪೂಜೆಗಳಿಂದ ಮಳೆ ಸುರಿಯುತ್ತದೆ ಇಲ್ಲವೋ ಗೊತ್ತಿಲ್ಲ. ಆದರೆ ಗ್ರಾಮಸ್ಥರನ್ನು ಹಾಗೂ ಜನರನ್ನು ಒಟ್ಟುಗೂಡಿಸುವಲ್ಲಿ ಈ ಪೂಜೆಗಳು ಯಶಸ್ವಿಯಾಗಿವೆ. ಜಗತ್ತು ತಾಂತ್ರಿಕತೆಯತ್ತ ಸಾಗುತ್ತಿದ್ದು ಪಟ್ಟಣದ ಬ್ಯೂಸಿ (ಬಿಸಿ) ಜೀವನ ದಿಂದ ಸಂಬಂಧಗಳು ವಿಮುಖವಾಗುತ್ತಿರುವ ಈ ಕಾಲದಲ್ಲಿ ಮಳೆ ಪೂಜೆ ಎಂಬ ನೆವದಿಂದ ಎಲ್ಲರೂ ಒಂದೆಡೆ ಸೇರಿ ಹಳೆಯ ಕಾಲದ ಸಾಂಪ್ರದಾಯಿಕ ರೂಢಿಗಳನ್ನು ಇನ್ನೂ ಜೀವಂತವಿಡುವಲ್ಲಿ ಸಫಲವಾಗಿವೆ.