ಬಹುಕಾಲದಿಂದ ಜಗ್ಗಾಟ ನಡೆದಿದ್ದ ವಿಷಯವೊಂದು ಕೊನೆ ಮುಟ್ಟಿದೆ. ಅಜರ್ ಮಸೂದನನ್ನು ವಿಶ್ವ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಐದು ಪ್ರಯತ್ನಗಳ ಪೈಕಿ ನಾಲ್ಕಕ್ಕೆ ತಾಂತ್ರಿಕ ಅಡ್ಡಗಾಲು ಹಾಕಿದ್ದ ಚೀನಾ, ಐದನೆಯದಕ್ಕೆ ಸಮ್ಮತಿ ನೀಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ (ವಿಟೋ ಅಧಿಕಾರ) ಹೊಂದಿರುವ ದೇಶಗಳು ರಷ್ಯಾ, ಚೀನಾ, ಅಮೆರಿಕ, ಬ್ರಿಟನ್ ಹಾಗೂ ಫ್ರಾನ್ಸ್. ಪಾಕಿಸ್ತಾನದ ಅನುಗಾಲದ ಆಪ್ತಮಿತ್ರ ಚೀನಾ ವಿನಾ ಉಳಿದೆಲ್ಲ ರಾಷ್ಟ್ರಗಳಿಗೆ ಅಜರ್ ಕುರಿತ ಭಾರತದ ಆಗ್ರಹವನ್ನು 2009ರಷ್ಟು ಹಿಂದೆಯೇ ಒಪ್ಪಿದ್ದವು.
ಅಜರ್ ಜಾಗತಿಕ ಭಯೋತ್ಪಾದಕನೆಂದು ವಿಶ್ವಸಂಸ್ಥೆ ಘೋಷಿಸಬೇಕೆಂಬ ಅಮೆರಿಕ, ಬ್ರಿಟನ್ ಹಾಗೂ ಫ್ರಾನ್ಸ್ ಮಂಡಿಸಿದ್ದ ನಿರ್ಣಯ ಅಂಗೀಕಾರ ಆದದ್ದು, ಚೀನಾದ (ಪರೋಕ್ಷವಾಗಿ ಪಾಕಿಸ್ತಾನ) ಕತ್ತರಿ ಪ್ರಯೋಗಕ್ಕೆ ಒಳಗಾದ ನಂತರವೇ ಎಂಬುದು ಗಮನಿಸಬೇಕಾದ ಸಂಗತಿ.
ಚೀನಾ ತಡೆದಿಟ್ಟಿತ್ತು. ತಡೆದಿಟ್ಟರೆ ಭದ್ರತಾ ಮಂಡಳಿಯ 15 ಮಂದಿ ಸದಸ್ಯ ರಾಷ್ಟ್ರಗಳ ಸಭೆಯ ಮುಂದೆ ಒಯ್ಯುವುದಾಗಿ ಬೆದರಿಕೆ ಹಾಕಲಾಗಿತ್ತು. ಪುಲ್ವಾಮಾ ನಂತರ ನಾವೇ ಮಾಡಿಸಿದ್ದೇವೆಂದು ಅಜರ್ ಸಂಘಟನೆಯ ಹೇಳಿಕೆ ಅಜರ್‌ಗೆ ಮತ್ತು ಪಾಕಿಸ್ತಾನಕ್ಕೆ ಮುಳುವಾಗಿತ್ತು. ಭಾರತದ ಕೈ ಬಲಪಡಿಸಿತ್ತು. 2008ರಲ್ಲಿ ಜೈಶ್-ಎ-ಮಹಮ್ಮದ್ ಮಾಡಿಸಿದ್ದ ಭಿತ್ತಿಪತ್ರಗಳೂ ಅಜರ್‌ಗೆ ತಿರುಗುಬಾಣ ಆದದ್ದುಂಟು. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನೆಯ ವಿರುದ್ಧ ಹೋರಾಡುತ್ತಿರುವ ತಾಲಿಬಾನ್‌ಗೆ ನೆರವಾಗಿ ಕಾದಾಡಲು ಜಿಹಾದಿ ಕಟ್ಟಾಳುಗಳು ಬೇಕಿದ್ದಾರೆ ಎಂಬುದು ಈ ಭಿತ್ತಿಪತ್ರಗಳಲ್ಲಿನ ಮನವಿಯಾಗಿತ್ತು. ಪರಿಣಾಮವಾಗಿ, ಅಮೆರಿಕ ಕೂಡ ಭಾರತದ ಜೊತೆ ದನಿಗೂಡಿಸಿತ್ತು. ಪುಲ್ವಾಮಾ ದಾಳಿ ತನ್ನದೇ ಕೃತ್ಯವೆಂದು ಅಜರ್ ತಾನಾಗಿ ಹೇಳಿಕೊಂಡ ನಂತರ ಚೀನಾದ ಕೈ ಕಟ್ಟಿಹಾಕಿದಂತಾಗಿತ್ತು. ಇನ್ನು, ತನ್ನ ವಿರೋಧ ಹೆಚ್ಚು ಕಾಲ ನಡೆಯುವುದಿಲ್ಲವೆಂದು ಪಾಕಿಸ್ತಾನಕ್ಕೆ ನಿಚ್ಚಳವಾಗಿ ತಿಳಿಸಿತು. ಒಪ್ಪುವುದು ಒಳ್ಳೆಯದು, ಭಯೋತ್ಪಾದನೆ ಹತ್ತಿಕ್ಕುವಲ್ಲಿ ಪಾಕಿಸ್ತಾನದ ಕಳಕಳಿ ಸಾಚಾ ಎಂಬ ಸಂದೇಶವೂ ರವಾನೆಯಾಗುತ್ತದೆ ಎಂಬ ಚೀನಾದ ಬುದ್ಧಿವಾದಕ್ಕೆ ಪಾಕಿಸ್ತಾನ ಕಿವಿಗೊಡಲೇಬೇಕಾಯಿತು.
ಭಾರತ ತಯಾರಿಸಿದ್ದ ನಿರ್ಣಯದಲ್ಲಿ ಕಾಶ್ಮೀರದ ಪುಲ್ವಾಮ ದಾಳಿಯ ಪ್ರಸ್ತಾಪ ಇತ್ತು. ಈ ಪ್ರಸ್ತಾಪವನ್ನು ತೆಗೆದುಹಾಕಿಸುವಂತೆ ಚೀನಾವನ್ನು ಕೋರಿತು ಪಾಕಿಸ್ತಾನ. ತೆಗೆದುಹಾಕಿಸದೆ ಹೋದರೆ ಪಾಕಿಸ್ತಾನದ ಗುಂಪೊಂದು ಕಾಶ್ಮೀರದಲ್ಲಿ ಭಯೋತ್ಪಾದನೆಯಲ್ಲಿ ತೊಡಗಿತ್ತು ಎಂಬ ಖಚಿತ ಪುರಾವೆ ದೊರೆತಂತಾಗುತ್ತದೆ. ತಾನು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಕುಮ್ಮುಕ್ಕು ನೀಡುತ್ತಿರುವ ಆಪಾದನೆಗೆ ಈ ಅಂಶ ಇಂಬು ನೀಡುತ್ತದೆ. ಅಷ್ಟೇ ಅಲ್ಲ, ಪಾಕ್ ಭಯೋತ್ಪಾದನೆಯ ನಂಟಿದೆ ಎಂಬ ಕಳಂಕ ಕಾಶ್ಮೀರದ ಸ್ವಾತಂತ್ರ್ಯ ಹೋರಾಟಕ್ಕೂ ಅಂಟಲಿದೆ ಎಂಬುದು ಪಾಕಿಸ್ತಾನದ ಚಿಂತೆಯಾಗಿತ್ತು. ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ತನ್ನ ಅಡ್ಡಿಯಿಲ್ಲ, ಆದರೆ, ಕಾಶ್ಮೀರದ (ಪುಲ್ವಾಮ) ಪ್ರಸ್ತಾಪವನ್ನು ನಿರ್ಣಯದಿಂದ ತೆಗೆದುಹಾಕುವಂತೆ ಒತ್ತಡ ಹೇರಬೇಕೆಂದು ಚೀನಾದ ಮನವೊಲಿಸಿತು ಪಾಕಿಸ್ತಾನ. ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಬದಲಾಗಿ ಅಲ್ ಖೈದಾ ಮತ್ತು ಐ.ಎಸ್ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಸಂಬಂಧ ಹೊಂದಿರುವ ಕಾರಣ ಅಜರ್‌ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಲಾಗುತ್ತಿದೆ ಎಂಬ ಅಂಶ ನಿರ್ಣಯದಲ್ಲಿರಲಿ ಎಂದಿತ್ತು. ನಿರ್ಣಯ ಮಂಡಿಸಿದ್ದ ಅಮೆರಿಕ, ಬ್ರಿಟನ್ ಹಾಗೂ ಫ್ರಾನ್ಸ್ (ಅರ್ಥಾತ್ ಭಾರತ) ಈ ರಾಜಿ ಮಾಡಿಕೊಳ್ಳಲು ಒಪ್ಪಿದವು. ಅಜರ್ ಕಾಶ್ಮೀರದಲ್ಲಿ ಭಯೋತ್ಪಾದನೆ ನಡೆಸುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿದ್ದದ್ದೇ. ಪುಲ್ವಾಮ ಪ್ರಸ್ತಾಪ ಕೈಬಿಟ್ಟರೇನಂತೆ, ಕನಿಷ್ಠಪಕ್ಷ ಜಾಗತಿಕ ಭಯೋತ್ಪಾದಕರ ಪಟ್ಟಿಗಾದರೂ ಸೇರುವನಲ್ಲ ಎಂದು ಸಮಾಧಾನ ಮಾಡಿಕೊಳ್ಳಲಾಯಿತು.
ಅಜರ್ ಹಣೆಗೆ ಜಾಗತಿಕ ಭಯೋತ್ಪಾದಕನ ಪಟ್ಟಿ ತಗುಲಿತು. ತನ್ನ ವಿಜಯವಿದು ಎಂದು ಭಾರತ ಎದೆಯುಬ್ಬಿಸಿ ಸಾರಿತು. ತನ್ನ ಮಿತ್ರ ಪಾಕಿಸ್ತಾನಕ್ಕೆ ಕೊಟ್ಟಿದ್ದ ವಚನವನ್ನು ನೆರವೇರಿಸಿದ್ದಷ್ಟೇ ಅಲ್ಲದೆ, ಭಾರತದ ಮನೋಗತಕ್ಕೆ ಕತ್ತರಿ ಹಾಕಿದನೆಂದು ಚೀನಾ ಬೀಗಿತು. ಜಾಗತಿಕ ಭಯೋತ್ಪಾದಕನ ಹಣೆಪಟ್ಟಿಯ ಹಿಂದಿನ ಕಾರಣಗಳಲ್ಲಿ ಕಾಶ್ಮೀರದ ಪ್ರಸ್ತಾಪ ಆಗದಂತೆ ನೋಡಿಕೊಂಡದ್ದು ತನ್ನ ವಿಜಯವೆಂದು ಪಾಕಿಸ್ತಾನ ಡಂಗುರ ಹೊಡೆಯಿತು. ಅಡ್ಡಗಾಲು ಹಾಕುತ್ತ ಬಂದಿದ್ದ ಚೀನಾ, ತಾವು ಮಂಡಿಸಿದ ನಿರ್ಣಯಕ್ಕೆ ಕಡೆಗೂ ಮಣಿಯಬೇಕಾಯಿತು ಎಂಬುದಾಗಿ ಬ್ರಿಟನ್, ಅಮೆರಿಕ ಹಾಗೂ ಫ್ರಾನ್ಸ್ ಸಂಭ್ರಮಿಸಿದವು. ಹಾಗಾದರೆ ಇಲ್ಲಿ ತಮಗೆ ಹಿನ್ನಡೆಯಾಯಿತು ಎಂದು ಒಪ್ಪಿಕೊಳ್ಳಲು ಚೀನಾ, ಪಾಕಿಸ್ತಾನ, ಭಾರತ, ಬ್ರಿಟನ್-ಅಮೆರಿಕ-ಫ್ರಾನ್ಸ್ ಯಾರೆಂದರೆ ಯಾರೂ ತಯಾರಿಲ್ಲ.
ಕಾಶ್ಮೀರದ ಪ್ರಸ್ತಾಪ ಬರಲಿಲ್ಲ ಎಂಬುದು ಪಾಕಿಸ್ತಾನದ ಗೆಲುವೆಂದು ಇಮ್ರಾನ್ ಖಾನ್ ಸರ್ಕಾರ ಮತ್ತು ಪಾಕಿಸ್ತಾನದ ಸಮೂಹ ಮಾಧ್ಯಮಗಳು ಹೇಳಿವೆ. ಭಾರತ ಕುರಿತ ತಮ್ಮ ವಿರೋಧವನ್ನು, ತುಸುಮಟ್ಟಿಗಿನ ದ್ವೇಷವನ್ನು ಅವುಗಳು ಬಿಟ್ಟುಕೊಟ್ಟಿಲ್ಲ. ಚೀನಾ-ಪಾಕಿಸ್ತಾನದ ಗಟ್ಟಿ ಗೆಳೆತನವನ್ನು ಹಾಡಿ ಹರಸಿವೆ. ಆದರೆ, ಅಜರ್ ಮತ್ತು ಜೈಶ್ ಎ ಮಹಮ್ಮದ್‌ನಂತಹ ಭಯೋತ್ಪಾದಕ ವ್ಯಕ್ತಿಗಳು ಮತ್ತು ಸಂಘಟನೆಗಳನ್ನು ಮಟ್ಟ ಹಾಕುವುದೇ ಸರಿ ಎಂಬ ಖಚಿತ ನಿಲುವನ್ನೂ ತಳೆದಿರುವುದು ಗಮನಾರ್ಹ.
ಪಾಕಿಸ್ತಾನದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಎಂದು ಪರಿಗಣಿಸಲಾದ ‘ಡಾನ್’ (DAWN) ಇದೇ ತಿಂಗಳ ಮೂರರಂದು ಪ್ರಕಟಿಸಿರುವ ಸಂಪಾದಕೀಯವೇ ಈ ಮಾತುಗಳಿಗೆ ನಿಚ್ಚಳ ನಿದರ್ಶನ: “ಹರ್ಕತುಲ್ ಮುಜಾಹಿದೀನ್ ಮತ್ತು ಜೈಶ್ ಎ ಮಹಮ್ಮದ್ ಎಂಬ ದಕ್ಷಿಣ ಏಷ್ಯಾದ ಎರಡು ಮಾರಕ ಸಂಘಟನೆಗಳನ್ನು ಇಪ್ಪತ್ತು ವರ್ಷಗಳ ಕಾಲ ಮುನ್ನಡೆಸಿದ ಮಸೂದ್ ಅಜರ್ ಸುತ್ತ ಕುಣಿಕೆ ಬಿಗಿಯಾದಂತೆ ತೋರುತ್ತಿದೆ. ಕೆಲ ವರ್ಗಗಳು ಈ ಬೆಳವಣಿಗೆಯನ್ನು ಇಂಡಿಯಾದ ‘ಗೆಲುವು’ ಎಂದು ನೋಡಬಹುದು. ಆದರೆ, ಮಸೂದ್ ಅಜರ್ ಮತ್ತು ಅವನ ಗುಂಪು ಈ ದೇಶಕ್ಕೆ (ಪಾಕಿಸ್ತಾನ) ಉಪಟಳವನ್ನಲ್ಲದೆ ಬೇರೇನನ್ನೂ ನೀಡಿಲ್ಲ. ಕಾಶ್ಮೀರವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಜೈಶ್ ಮಾಡಿಕೊಂಡಿರಬಹುದಾದರೂ, ಈ ಸಂಘಟನೆಯ ಮಂದಿ ಪಾಕಿಸ್ತಾನದಲ್ಲೂ ಮಾಡಿರುವ ವಿನಾಶ ಅಷ್ಟಿಷ್ಟಲ್ಲ. ಜೈಶ್ ಅನ್ನು 2002ರಲ್ಲೇ ಪಾಕಿಸ್ತಾನದಲ್ಲಿ ನಿಷೇಧಿಸಲಾಯಿತಾದರೂ ಅದರ ಚಟುವಟಿಕೆಗಳು ನಿಲ್ಲಲಿಲ್ಲ. ಮಸೂದ್ ಅಜರ್ ಬಹುತೇಕ ಸರ್ವತಂತ್ರ ಸ್ವತಂತ್ರನಾಗಿದ್ದ. ಇದೀಗ ವಿಶ್ವಸಂಸ್ಥೆಯ ನಿರ್ಣಯದ ಕಾರಣ ಸಂಸ್ಥೆ ಮತ್ತು ವ್ಯಕ್ತಿ ಕಾಯಮ್ಮಾಗಿ ನಿಷ್ಕ್ರಿಯ ಆಗುವ ನಿರೀಕ್ಷೆ ಮೂಡಿದೆ. ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವ ದಶಕದ ಪ್ರಯತ್ನಕ್ಕೆ ಚೀನಾ ‘ತಾಂತ್ರಿಕ’ ತಡೆ ಹಾಕಿತು. ಕಾಶ್ಮೀರಿ ಸ್ವಾತಂತ್ರ್ಯ ಹೋರಾಟಕ್ಕೆ ಭಯೋತ್ಪಾದನಾ ಬಂಡಾಯವೆಂಬ ಹಣೆಪಟ್ಟಿ ಕಟ್ಟಲು ಜೈಶ್ ಮತ್ತು ಅಜರ್‌ನನ್ನು ಬಳಸಿಕೊಂಡಿತ್ತು ಇಂಡಿಯಾ. ಅಜರ್ ವಿರುದ್ಧದ ವಿಶ್ವಸಂಸ್ಥೆಯಲ್ಲಿನ ಪ್ರಯತ್ನವನ್ನು ಚೀನಾ ಮತ್ತು ಪಾಕಿಸ್ತಾನ ವಿರೋಧಿಸುತ್ತ ಬಂದಿರುವುದು ಈ ಕಾರಣಕ್ಕಾಗಿಯೇ. ಇದೀಗ ಈ ರಾಜಕೀಯ ಉಲ್ಲೇಖಗಳನ್ನು ಕೈಬಿಟ್ಟಿರುವ ಕಾರಣ ಚೀನಾ ತನ್ನ ತಡೆಯನ್ನು ಹಿಂಪಡೆದಿದೆ. ಇಲ್ಲಿ ಎರಡು ಪಾಠಗಳಿವೆ- ನ್ಯಾಯಬದ್ಧ ಮತ್ತು ಬಹುತೇಕ ಅದೇ ನೆಲದಿಂದ ಹೊಮ್ಮಿದ ಕಾಶ್ಮೀರಿ ಸ್ವಾತಂತ್ರ್ಯ ಹೋರಾಟವು ಭಯೋತ್ಪಾದನೆ ಎಂದು ಸಾಧಿಸಲು ಇಂಡಿಯಾ ಮುಂದಾಗಿದೆ. ಈ ಪೊಳ್ಳನ್ನು ಬಯಲು ಮಾಡಬೇಕಿದೆ. ಎರಡನೆಯದಾಗಿ, ಭಯೋತ್ಪಾದನೆಯ ಗುಂಪುಗಳು ಪಾಕಿಸ್ತಾನದ ಹೆಗಲ ಮೇಲಿನ ಹೊರೆಗಳು. ಈ ಗುಂಪುಗಳು ಅಂತಾರಾಷ್ಟ್ರೀಯವಾಗಿ ಪಾಕಿಸ್ತಾನವನ್ನು ಕಟ್ಟಕಡೆಗೆ ಏಕಾಂಗಿತನಕ್ಕೆ ನೂಕಲಿವೆ, ನಮ್ಮ ಮನೆಯನ್ನು ನಾವು ಸರಿಯಾಗಿ ಇಟ್ಟುಕೊಂಡಿದ್ದಲ್ಲಿ ಪಾಕಿಸ್ತಾನವನ್ನು ಜಿಹಾದಿ ಗುಂಪುಗಳ ಜೊತೆ ಜೋಡಿಸಿ ಪರಿಸ್ಥಿತಿಯ ದುರ್ಲಾಭ ಪಡೆಯವ ಪ್ರಯತ್ನವನ್ನು ಇಂಡಿಯಾ ಮಾಡುತ್ತಿರಲಿಲ್ಲ. ಅಜರ್‌ನನ್ನು ಕಪ್ಪುಪಟ್ಟಿಗೆ ಸೇರಿಸುವ ಕ್ರಮವು ಭಯೋತ್ಪಾದಕ ಗುಂಪುಗಳನ್ನು ನಿಗ್ರಹಿಸಲು ಕಠಿಣವಾಗಿ ಶ್ರಮಿಸತೊಡಗಿದೆ ಪಾಕಿಸ್ತಾನ ಎಂಬ ಸಂದೇಶ ರವಾನೆಯಾಗಲಿದೆ. ಹಣಕಾಸಿನ ಸಂಕಟಕ್ಕೆ ಸಿಲುಕಿರುವ ಪಾಕಿಸ್ತಾನದ ಪಾಲಿಗೆ ಅನುಕೂಲಕರ ನಿರ್ಣಯ ತೆಗೆದುಕೊಳ್ಳುವಂತೆ ಎಫ್.ಎ.ಟಿ.ಎಫ್ (Financial Action Task Force) ಮೇಲೆ ಪ್ರಭಾವ ಬೀರುವುದೂ ಸಾಧ್ಯವಾಗಬಹುದು. ದ್ವೇಷ, ಒಡಕು ಹಾಗೂ ಪಂಥೀಯ ಭಾವನೆಗಳನ್ನು ಬಿತ್ತುವ ಎಲ್ಲ ಭಯೋತ್ಪಾದಕ ಗುಂಪುಗಳಿಗೆ ಬೀಗ ಜಡಿಯಬೇಕು. ಅವುಗಳಿಗೆ ಹಣಕಾಸು ಹರಿವನ್ನು ಕತ್ತರಿಸಿ ಹಾಕಬೇಕು. ಸಂಘಟನಾ ಸಾಮರ್ಥ್ಯಗಳನ್ನು ನಿಷ್ಕ್ರ್ರಿಯಗೊಳಿಸಬೇಕು.. ರಾಷ್ಟ್ರೀಯ ಕ್ರಿಯಾ ಯೋಜನೆಯಲ್ಲಿ ಈ ಅಂಶಗಳು ನಮೂದಾಗಿವೆ. ಆದರೆ, ಅವುಗಳನ್ನು ಕಾರ್ಯರೂಪಕ್ಕೆ ತರಬೇಕಿದೆ.”
“ಅಜರ್ ಒಂದಲ್ಲ ಒಂದು ದಿನ ಕಪ್ಪುಪಟ್ಟಿಗೆ ಸೇರಲಿದ್ದ. ಆದರೆ ಇಂಡಿಯಾ ಭಯೋತ್ಪಾದನೆ ಎಂದು ಯಾವುದನ್ನು ಕರೆಯುತ್ತದೆಯೋ ಅದಕ್ಕೂ ಅಜರ್ ಕಪ್ಪುಪಟ್ಟಿ ಸೇರ್ಪಡೆಗೂ ಸಂಬಂಧ ತುಂಡರಿಸಲಾಯಿತಲ್ಲ, ಅದೇ ಪಾಕಿಸ್ತಾನದ ಕೂಟನೀತಿಗೆ ದೊರೆತ ಗೆಲುವು,” ಎಂದು ‘The Express Tribune’ ಎಂಬ ಮತ್ತೊಂದು ಪ್ರಮುಖ ಪಾಕ್ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಸಂಭ್ರಮಿಸಿದೆ. “ಪಾಕಿಸ್ತಾನ-ಚೀನಾ ಮೈತ್ರಿಗೆ ಭಂಗವಿಲ್ಲದೆ ಈ ಸುದೀರ್ಘ ವಿವಾದ ಸೌಹಾರ್ದಯುತವಾಗಿ ಇತ್ಯರ್ಥವಾಗಿದೆ. ಈ ಇಬ್ಬರು ಗಾಢ ಗೆಳೆಯರ ಸ್ನೇಹ ಬಿರುಕು ಬಿಡುವುದನ್ನು ನಿರೀಕ್ಷಿಸಿದ್ದ ಇಂಡಿಯಾಕ್ಕೆ ತೀವ್ರ ನಿರಾಸೆಯಾಗಿರಬೇಕು. ತಮ್ಮ ‘ರಾಜತಾಂತ್ರಿಕ ವಿಜಯ’ವನ್ನು ಈಗಲೂ ಆಚರಿಸುತ್ತಿರಬಹುದಾದ ಪ್ರಧಾನಮಂತ್ರಿ ಮೋದಿಯವರ ಚರ್ಯೆಯನ್ನು ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿಟ್ಟು ನೋಡಬೇಕಿದೆ. ಇಂಡಿಯಾದ ಸಂಭ್ರಮಾಚರಣೆಗಳು ‘ಅಪ್ಪಟ ಪೊಳ್ಳು ಮತ್ತು ನಿರಾಧಾರ’ ಎಂದು ಪಾಕಿಸ್ತಾನ ವಿದೇಶ ಮಂತ್ರಾಲಯ ಬಣ್ಣಿಸಿದೆ. ಅಷ್ಟೇ ಅಲ್ಲದೆ, ಕಾಶ್ಮೀರಿ ಸ್ವಾತಂತ್ರ್ಯ ಆಂದೋಲನಕ್ಕೆ ತನ್ನ ನೈತಿಕ, ರಾಜಕೀಯ ಹಾಗೂ ರಾಜತಾಂತ್ರಿಕ ಬೆಂಬಲವನ್ನು ನೀಡುವುದಾಗಿ ಘೋಷಿಸಿದೆ. ದಶಕದಷ್ಟು ದೀರ್ಘ ಬಿಕ್ಕಟ್ಟನ್ನು ಚೀನಾ ಸೌಹಾರ್ದಯುತವಾಗಿ ನಿರ್ವಹಿಸಿದೆ. ಪಾಕಿಸ್ತಾನದ ಹೆಸರಿಗೆ ಮತ್ತು ಕಾಶ್ಮೀರದ ನ್ಯಾಯಬದ್ಧ ಸ್ವಾತಂತ್ರ್ಯ ಆಂದೋಲನಕ್ಕೆ ಮಸಿ ಬಳಿಯುವ ಇಂಡಿಯಾ ನೇತೃತ್ವದ ಪ್ರಯತ್ನಗಳನ್ನು ವಿಫಲಗೊಳಿಸಿದೆ. ಮಂಡಿಸಿದವರು ತಮ್ಮ ನಿರ್ಣಯವನ್ನು ತಿದ್ದಿಕೊಳ್ಳಲು ವಿವಶರನ್ನಾಗಿ ಮಾಡಿದೆ. ಇದೆಲ್ಲವನ್ನೂ ಪಾಕಿಸ್ತಾನದೊಂದಿಗೆ ತನ್ನ ಗೆಳೆತನಕ್ಕಾಗಿ ಚೀನಾ ಮಾಡಿದೆ. ಅಮೆರಿಕೆಗೆ ಎದುರಾಗಿ ಬೆಳೆದಿರುವ ಜಾಗತಿಕ ಸೂಪರ್ ಪವರ್ ಚೀನಾ ಮತ್ತು ಪಾಕಿಸ್ತಾನದ ಮೈತ್ರಿಯು ಹಿಮಾಲಯಕ್ಕಿಂತ ಉನ್ನತ, ಸಾಗರಗಳಿಗಿಂತ ಆಳ ಹಾಗೂ ಮಧುವಿಗಿಂತ ಮಧುರ,” ಎಂದು ಆ ಪತ್ರಿಕೆ ಬಣ್ಣಿಸಿದೆ.