ದೇಶದ್ರೋಹ ಪ್ರಕರಣ(124-ಎ), ಭಾರತದ ಮಟ್ಟಿಗೆ 2016ಕ್ಕೂ ಮುಂಚೆ ಇದು ಅಷ್ಟೊಂದು ಪರಿಚಿತವಲ್ಲದ ಅಪರೂಪದ ಪದ. ಅಲ್ಲೊಂದು ಇಲ್ಲೊಂದು ದಾಖಲಾಗುತ್ತಿದ್ದ ಪ್ರಕರಣಗಳು ಸುದ್ದಿಯಾಗುತ್ತಿದ್ದದ್ದು ತೀರಾ ಕಡಿಮೆ. ಆದರೆ, ದೇಶದಲ್ಲಿ ಬಿಜೆಪಿ ಆಡಳಿತ ಅಧಿಕಾರಕ್ಕೆ ಬಂದ ನಂತರ ದೇಶದ್ರೋಹದ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಅಂಕಿಸಂಖ್ಯೆಗಳೂ ಈ ಹೇಳಿಕೆಗೆ ಪುಷ್ಠಿ ನೀಡುತ್ತಿವೆ.
ಅದರಲ್ಲೂ ಕಳೆದ 4 ವರ್ಷದ ಅವಧಿಯಲ್ಲಿ ದೇಶದ್ರೋಹ ಪ್ರಕರಣ ಎಂಬುದು ತೀರಾ ಸಾಮಾನ್ಯವಾದ ಸಂಗತಿಯಂತೆ ಬದಲಾಗಿದೆ. ಸರ್ಕಾರದ ವಿರುದ್ಧ ಘೋಷಣೆ ಕೂಗುವರ, ಪ್ರತಿಭಟಿಸುವವರ ಮೇಲೆ ಪೆಟಿ ಕೇಸ್ ಮಾದರಿಯಲ್ಲಿ ಪ್ರಯೋಗವಾಗುತ್ತಿದ್ದ ಈ ಪ್ರಕರಣ ಕಡೆಕಡೆಗೆ ಸರ್ಕಾರದ ಕಾರ್ಯವೈಖರಿಯನ್ನು ನಾಟಕದ ಮೂಲಕ, ಕವಿತೆಗಳ ಮೂಲಕ ಟೀಕೆ ಮಾಡುವವರ ವಿರುದ್ಧವೂ ಪ್ರಯೋಗವಾಗುತ್ತಿರುವುದು ಭಾರತದ ರಾಜಕೀಯ ಇತಿಹಾಸದ ಮಟ್ಟಿಗೆ ವಿಪರ್ಯಾಸವೇ ಸರಿ.
ಒಂದೆಡೆ ಸರ್ಕಾರದ ವಿರುದ್ಧ ಪ್ರತಿಭಟಿಸುವವರ ಮೇಲೆ ದೇಶದ್ರೋಹ ಪ್ರಕರಣಗಳು ದಾಖಲಾಗುತ್ತಿದ್ದರೆ, ಮತ್ತೊಂದೆಡೆ ಪ್ರಚಾರದ ಗೀಳಿಗೆ ಬೀಳುತ್ತಿರುವ ಯುವ ಸಮುದಾಯ ಬಹಿರಂಗ ಸಭೆಗಳಲ್ಲಿ ಪಾಕ್ ಪರ ಘೋಷಣೆ ಕೂಗುವ ಮೂಲಕ ಸ್ವಯಂಪ್ರೇರಿತರಾಗಿ ದೇಶದ್ರೋಹ ಪ್ರಕರಣವನ್ನು ತಮ್ಮ ಹೆಸರಿಗೆ ಜಡಿಸಿಕೊಳ್ಳುತ್ತಿರುವುದು ಮತ್ತೊಂದು ದುರಂತ. ಇದಕ್ಕೆ ನಿದರ್ಶನವೆಂಬಂತೆ ಫೆ.20ರ ಅಮೂಲ್ಯ ಪ್ರಕರಣ ಹಾಗೂ ಫೆ.21ರ ಆರುದ್ರಾ (ಅನ್ನಪೂರ್ಣ) ಪ್ರಕರಣ ನಮ್ಮ ಮುಂದಿದೆ,
ಅಸಲಿಗೆ ಈ ದುರಂತದ ಕರಾಳ ಇತಿಹಾಸ ಆರಂಭವಾಗುವುದೇ ದೆಹಲಿಯ ಜವಹರ್ಲಾಲ್ ವಿಶ್ವವಿದ್ಯಾಲಯದಿಂದ. ಇಡೀ ದೇಶದಲ್ಲಿ ಮೊತ್ತಮೊದಲ ಬಾರಿಗೆ ದೇಶದ್ರೋಹ ಪ್ರಕರಣವನ್ನು ತನ್ನ ಹೆಸರಿಗೆ ಬರೆಕೊಂಡ ವಿದ್ಯಾರ್ಥಿ ಕನ್ಹಯ್ಯ ಕುಮಾರ್. ಆದರೆ, ನಿಜಕ್ಕೂ ಇದರಲ್ಲಿ ಕನ್ಹಯ್ಯ ತಪ್ಪು ಮಾಡಿಲ್ಲ ಎಂದು ಸ್ವತಃ ಸುಪ್ರೀಂ ಕೋರ್ಟ್ ಹೇಳಿತ್ತು. ಹೀಗಾಗಿ ಕನ್ಹಯ್ಯ ಬಚಾವ್ ಆಗಿದ್ದರು.
ಆದರೆ, ಅಮೂಲ್ಯ, ಆರುದ್ರ, ಹುಬ್ಬಳ್ಳಿಯ ಇಂಜಿಯರಿಂಗ್ ವಿದ್ಯಾರ್ಥಿಗಳ ಪ್ರಕರಣ ಹಾಗಲ್ಲ. ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದಿರುವುದು ಖಚಿತವಾಗಿದೆ. ಆರುದ್ರ ಫ್ರೀ ಕಾಶ್ಮೀರ್ ಫಲಕ ಹಿಡಿದದ್ದು ಸ್ಪಷ್ಟವಾಗಿದೆ. ಆ ಕುರಿತು ವಿಡಿಯೋ ತುಣುಕು ಲಭ್ಯವಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಅಮೂಲ್ಯ ಅವರನ್ನು ಈಗಾಗಲೇ 14 ದಿನಗಳ ನ್ಯಾಯಾಂಗ ಬಂಧನಕ್ಕೂ ಒಳಪಡಿಸಲಾಗಿದೆ. ಕಳೆದ ತಿಂಗಳ ಮೈಸೂರಿನಲ್ಲಿ ನಳಿನಿ ಬಾಲಕುಮಾರ್ ಎಂಬ ವಿದ್ಯಾರ್ಥಿನಿ ಸಹ ಇದೇ ಪ್ರಕರಣದಲ್ಲಿ ವಿಚಾರಣೆಗೊಳಗಾಗಿದ್ದಳು.
ಅಸಲಿಗೆ ಪ್ರಸ್ತುತ ಯುವ ಸಮೂಹ ಯಾಕೆ ಹೀಗೆ ವರ್ತಿಸುತ್ತಿದೆ? ಇವರ ವರ್ತನೆಯ ಹಿಂದೆ ಪ್ರಚಾರದ ಗೀಳಿದೆಯೇ? ದೇಶದ್ರೋಹ ಪ್ರಕರಣ ಕಲಂ 124-ಎ ಏನು ಹೇಳುತ್ತದೆ. ಕನ್ಹಯ್ಯಾ ಕುಮಾರ್ ಟು ಅಮೂಲ್ಯ ತನಕ ದಾಖಲಾದ ಪ್ರಮುಖ ಪ್ರಕರಣಗಳ ಹಿನ್ನೆಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಕನ್ಹಯ್ಯಾ ಕುಮಾರ್ ಟು ಅಮೂಲ್ಯ
2001ರಲ್ಲಿ ಭಾರತದ ಸಂಸತ್ ಮೇಲೆ ಅಫ್ಜಲ್ ಗುರು ಎಂಬ ವ್ಯಕ್ತಿ ಪಾಕಿಸ್ತಾನದ ಉಗ್ರಗಾಮಿಗಳು ದಾಳಿ ನಡೆಸಲು ಸಂಚು ರೂಪಿಸಿ ಕೊಟ್ಟಿದ್ದ ಎಂಬ ಆರೋಪದ ಮೇಲೆ ಆತನನ್ನು ದೇಶದ ಸಂವಿಧಾನ ಸ್ಥಾಪಿತ ಕಾನೂನಿನ ಅಡಿಯಲ್ಲಿ ನೇಣಿಗೆ ಏರಿಸಲಾಗಿತ್ತು. ಆದರೆ, ಆತನ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಇಲ್ಲದ ಹೊರತಾಗಿಯೂ ಜನರ ಆಶೋತ್ತರಗಳಿಗೆ ಸ್ಪಂದಿಸಿ ಆತನನ್ನು ಗಲ್ಲಿಗೆ ಏರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು.
ಭಾರತದ ಕಾನೂನಿನ ಮಟ್ಟಿಗೆ ಸೂಕ್ತ ಸಾಕ್ಷ್ಯಗಳು ಇಲ್ಲದಾಗ್ಯೂ ಜನರ ಆಶೋತ್ತರಗಳಿಗಾಗಿ ಕಾನೂನಿನ ಅಡಿಯಲ್ಲಿ ನೇಣಿಗೇರಿಸಲ್ಪಟ್ಟ ಮೊದಲ ವ್ಯಕ್ತಿ ಅಫ್ಜಲ್ ಗುರು.
ಆದರೆ, ಸುಪ್ರೀಂನ ಈ ತೀರ್ಪನ್ನು ಬರಹಗಾರ್ತಿ ಅರುಂದತಿ ರಾಯ್ನಿಂದ ಅಂದಿನ ಜೆಎನ್ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ವರೆಗೆ ಎಲ್ಲರೂ ವಿರೋಧಿಸಿದ್ದರು. ಅರುಂದತಿ ರಾಯ್ 13 December: A Reader, the Strange Case of the Attack on the Indian Parliament ಎಂಬ ಪುಸ್ತಕವನ್ನೂ ಸಹ ಬರೆದಿದ್ದರು.
ಆದರೆ, ಜುಲೈ.12 2016ರಂದು ದೆಹಲಿ JNU ವಿಶ್ವವಿದ್ಯಾಲಯದ ಆವರಣದಲ್ಲಿ ಅಫ್ಜಲ್ ಗುರುವನ್ನು ನೇಣಿಗೇರಿಸುವುದನ್ನು ವಿರೋಧಿಸಿ ಕನ್ಹಯ್ಯ ಕುಮಾರ್ ನಡೆಸಿದ ಆ ಒಂದು ಪ್ರತಿಭಟನೆ ಆತನ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಲು ಕಾರಣವಾಗಿತ್ತು.
ಈ ಪ್ರತಿಭಟನೆಯ ವೇಳೆ ಪಾಕಿಸ್ತಾನದ ಬಾವುಟ ಹಾರಿಸಲಾಗಿತ್ತು, ಪಾಕಿಸ್ತಾನದ ಪರ ಘೋಷಣೆ ಮೊಳಗಿಸಲಾಗಿತ್ತು ಎಂದು ದೆಹಲಿ ಪೊಲೀಸರು ಕನ್ಹಯ್ಯ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲು ಮಾಡಿದ್ದರು. ಆದರೆ, ನ್ಯಾಯಾಲಯದ ವಿಚಾರಣೆಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ದು ಮತ್ತು ಘೋಷಣೆ ಕೂಗಿದ್ದು ಸುಳ್ಳು. ಕೆಲವರು ಪ್ರತಿಭಟನೆಯ ಪೋಟೋವನ್ನು ಮಾರ್ಪಿಂಗ್ ಮಾಡಿದ್ದಾರೆ ಎಂಬ ವಿಚಾರ ಬಯಲಾಗಿತ್ತು. ಹೀಗಾಗಿ ದೇಶದ್ರೋಹ ಆರೋಪಿ ಕನ್ಹಯ್ಯ ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿತ್ತು.
ಈ ತೀರ್ಪಿನ ನಂತರ ಕನ್ಹಯ್ಯ ಕುಮಾರ್ ಮತ್ತಷ್ಟು ಖ್ಯಾತಿ ಪಡೆದದ್ದು, ಕೇಂದ್ರ ಸರ್ಕಾರದ ವಿರುದ್ಧ ನಿರಂತರವಾಗಿ ಪ್ರತಿಭಟಿಸಿದ್ದು ಹಾಗೂ ರಾಜಕೀಯ ಪ್ರವೇಶಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದು ಇಂದು ಇತಿಹಾಸ.
ಕನ್ಹಯ್ಯ ಕುಮಾರ್ ಪ್ರಕರಣದ ನಂತರ ದೇಶದ್ರೋಹ ಪ್ರಕರಣ ಎಂಬುದು ಇಂದು ಸರ್ವೇ ಸಾಮಾನ್ಯವಾಗಿದೆ. 2016ರಿಂದೀಚೆಗೆ ಸಾಲಾಗಿ ಹಲವರ ಮೇಲೆ ದೇಶದ್ರೋಹದ ಪ್ರಕರಣ ಹೊರಿಸಲಾಗಿದೆ. ಗುಜರಾತ್ನಲ್ಲಿ ಪಾಟೀಧಾರ್ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಹಾರ್ದಿಕ್ ಪಟೇಲ್ ಮೇಲೂ ಈ ಪ್ರಕರಣವನ್ನು ದಾಖಲಿಸಲಾಗಿತ್ತು.
ತೀರಾ ಇತ್ತೀಚೆಗೆ ಕರ್ನಾಟಕದ ಮೈಸೂರಿನಲ್ಲಿ ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶಿಸಿದ ನಳಿನಿ, ಸಿಎಎ ವಿರೋಧಿ ನಾಟಕ ಮಾಡಿದ ಬೀದರ್ ಶಾಹಿನ್ ಶಾಲೆ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕವನ ಓದಿದರು ಎಂಬ ಕಾರಣಕ್ಕೆ ಕವಿ ಸಿರಾಜ್ ಬಿಸರಳ್ಳಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡುವ ಮೂಲಕ ಪೊಲೀಸರು ಮತ್ತು ಈ ಕಾನೂನು ನಗೆಪಾಟಲಿಗೆ ಈಡಾಗಿತ್ತು. ಆದರೆ, ಅಮೂಲ್ಯ ಮತ್ತು ಹುಬ್ಬಳ್ಳಿ ಯುವಕರ ಪ್ರಕರಣ ಹಾಗಲ್ಲ.
ಪ್ರಚಾರದ ಗೀಳಿಗೆ ಬಿತ್ತೇ ಯುವ ಸಮೂಹ?
ಅಮೂಲ್ಯ ಈಗಿನ್ನೂ ಮೊದಲ ವರ್ಷದ ಬಿಎ ಓದುತ್ತಿರುವ ವಿದ್ಯಾರ್ಥಿನಿ. ಯಾವುದೇ ವೇದಿಕೆ ಇದ್ದರೂ ಅಲ್ಲಿಗೆ ನುಗ್ಗಿ ಮೈಕ್ ಕಸಿದು ಮಾತನಾಡುವ ಛಾತಿ ಇದ್ದ ಹುಡುಗಿಗೆ ಕೊಂಚ ಹೆಚ್ಚೇ ಪ್ರಚಾರದ ಗೀಳು ಇತ್ತು ಎನ್ನುತ್ತಿದ್ದಾರೆ ಆಕೆಯನ್ನು ಹತ್ತಿರದಿಂದ ಬಲ್ಲವರು. ಹಾಗೆ ನೋಡಿದರೆ ವಿದ್ಯಾರ್ಥಿಗಳು ರಾಜ್ಯದಲ್ಲಿ ಹೀಗೆ ಪ್ರಚಾರದ ಗೀಳಿಗೆ ಬೀಳುತ್ತಿರುವ ಸಮಸ್ಯೆಗೆ ಬೀಜ ಬಿತ್ತದ್ದೇ ಚೈತ್ರಾ ಕುಂದಾಪುರ.
ಬಲಪಂಥೀಯ ವಿಚಾರಧಾರೆ ಹೊಂದಿದ್ದ ಚೈತ್ರಾ ಕುಂದಾಪುರ ಎಂಬ ಪತ್ರಿಕೋದ್ಯಮ ವಿದ್ಯಾರ್ಥಿನಿ ಈ ಹಿಂದೆ ಸಭೆ ಸಮಾರಂಭಗಳಲ್ಲಿ ಹೀಗೆ ಭಾಗವಹಿಸುತ್ತಿದ್ದರು. ದೊಡ್ಡ ಧ್ವನಿಯಲ್ಲಿ ಹಿಂದೂ ಸಮುದಾಯದ ಪರ ಧ್ವನಿ ಎತ್ತುತ್ತಾ ಪ್ರಚಾರದ ಮುನ್ನಲೆಗೆ ಬಂದಿದ್ದರು. ಆದರೆ, ತದನಂತರ ಕೆಲವು ಹಿಂದೂ ಸಂಘಟನೆಯವರೇ ಆಕೆಯನ್ನು ದೂರ ಮಾಡಿರುವ ಪರಿಣಾಮ ಇದೀಗ ಆಕೆ ಸಾಮಾಜಿಕವಾಗಿ ಎಲ್ಲೂ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ
ಹೀಗೆ ಬಲಪಂಥೀಯ ಧೋರಣೆ ಈ ನಾಡಿಗೆ ಚೈತ್ರಾ ಕುಂದಾಪುರ ಎಂಬ ಯುವತಿಯನ್ನು ಕೊಡುಗೆಯಾಗಿ ನೀಡಿದರೆ, ಎಡಪಂಥ ನೀಡಿದ ಇಂತಹದ್ದೇ ಒಂದು ಅರೆಬೆಂದ ಪಳೆಯುಳಿಕೆಯೇ ಅಮೂಲ್ಯ. ಅಸಲಿಗೆ ಸಮಾಜಿಕ ಜಾಲತಾಣಗಳು ಹೆಚ್ಚು ಪರಿಣಾಮಕಾರಿಯಾಗಿರುವ ಇಂದಿನ ದಿನಗಳಲ್ಲಿ ಯುವ ಸಮಾಜದ ಪ್ರಚಾರಕ್ಕಾಗಿಯೇ ಹೀಗೆ ವರ್ತಿಸುತ್ತಿವೆ ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಾಗಿಲ್ಲ.
2016ರಲ್ಲಿ ಕನ್ಹಯ್ಯ ಕುಮಾರ್ ಮೇಲೆ ಹೊರಿಸಿದ್ದು ಸುಳ್ಳು ಆರೋಪ ಎಂಬುದು ಸಾಬೀತಾಗಿದೆ. ಆದರೆ, ಅಮೂಲ್ಯ ಮಾಡಿರುವುದು ಅಕ್ಷಮ್ಯ ಅಪರಾಧ. ತುಂಬು ಸಭೆಯಲ್ಲಿ ಸಾವಿರಾರು ಜನರ ಎದುರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ. ಇದು ದೃಶ್ಯಗಳಲ್ಲಿ ದಾಖಲಾಗಿದೆ. ಹೀಗಾಗಿ ಆಕೆಯನ್ನು 14 ದಿನ ನ್ಯಾಯಾಂಗ ಬಂಧಕ್ಕೆ ನೀಡಲಾಗಿದೆ. ಆರೋಪ ಸಾಬೀತಾದರೆ ದೇಶದ್ರೋಹ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡುವುದಕ್ಕೂ ಆವಕಾಶ ಇದೆ. ಹೀಗಾಗಿ ಅಮೂಲ್ಯ ಭವಿಷ್ಯ ಆತಂಕದಲ್ಲಿದೆ ಎಂದೇ ಹೇಳಲಾಗುತ್ತಿದೆ.
ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾಶ್ಮೀರಿ ಮೂಲದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಭವಿಷ್ಯವೂ ಇದೀಗ ತೂಗು ಗತ್ತಿಯ ಮೇಲಿದೆ.
ಏನಿದು ದೇಶದ್ರೋಹ ಪ್ರಕರಣದ ಇತಿಹಾಸ, ಮತ್ತು ಶಿಕ್ಷೆಯ ಪ್ರಮಾಣ?
ದೇಶದ್ರೋಹದ ಪ್ರಕರಣದ ಕುರಿತಾಗಿ ಸುಪ್ರಿಂ ಕೋರ್ಟ್ ನೀಡಿದ ತೀರ್ಪು
- ‘ಸೆಡಿಶನ್’ ಹೆಸರಿನ ಭಾರತೀಯ ದಂಡ ಸಂಹಿತೆಯಲ್ಲಿನ ಸೆಕ್ಷನ್ 124-ಎ, ದೇಶದ್ರೋಹವನ್ನು ತುಂಬಾ ವಿಶಾಲವಾಗಿ ಅರ್ಥೈಸುತ್ತದೆ.
- ಈ ಕಾಯ್ದೆಯ ಪ್ರಕಾರ ಯಾರು ಪದಗಳಿಂದ, ತಮ್ಮ ಮಾತುಗಳಿಂದ, ಬರಹಗಳ ಮೂಲಕ ಹಾಗೂ ಚಿಹ್ನೆಗಳ ಮೂಲಕ ಸಮಾಜದಲ್ಲಿ ದೇಶದ ವಿರುದ್ಧ ದ್ವೇಷ ಮತ್ತು ತಿರಸ್ಕಾರದ ಮನೋಭಾವ ತರಲು ಪ್ರಯತ್ನಿಸುತ್ತಾರೋ ಅಥವಾ ಕಾನೂನಿನ ಅಡಿಯಲ್ಲಿ ಸ್ಥಾಪಿತವಾಗಿರುವ ಸರ್ಕಾರದ ವಿರುದ್ಧ ಪ್ರಚೋಧನೆಗೆ ಯತ್ನಿಸುತ್ತಾರೋ? ಅದನ್ನು ದೇಶದ್ರೋಹ ಎಂದು ಪರಿಗಣಿಸಲಾಗುತ್ತದೆ. ಈ ಅಪರಾಧಕ್ಕೆ ಜೀವಾವಧಿ ಶಿಕ್ಷೆ ವಿಧಿಸುವ ಅವಕಾಶ ಕಾನೂನಿನಲ್ಲಿದೆ.
- ದ್ವೇಷ, ತಿರಸ್ಕಾರ ಹಾಗೂ ಅಸಮಾಧಾನವನ್ನು ಪ್ರಚೋದಿಸದೆ ಕಾನೂನುಬದ್ಧ ವಿಧಾನಗಳಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರೆ ಆ ಕ್ರಿಯೆ ಅಪರಾಧವಾಗುವುದಿಲ್ಲ ಎಂದು ಈ ಕಾಯ್ದೆ ಹೇಳುತ್ತದೆ.
- 1870ಕ್ಕೂ ಮುನ್ನ ಕಲಂ 124-ಎ ದೇಶದ್ರೋಹ ಕಾಯ್ದೆ ಐಪಿಸಿ ಸೆಕ್ಷನ್ ಭಾಗವಾಗಿರಲಿಲ್ಲ. ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬ್ರಿಟೀಷ್ ಅಧಿಕಾರಿ ಥಾಮಸ್ ಮಕಾಲೆ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬಲವಾದ ಅಸ್ತ್ರವನ್ನು ಪ್ರಯೋಗಿಸುವ ನಿಟ್ಟಿನಲ್ಲಿ ಈ ಕಾನೂನನ್ನು ಜಾರಿಗೆ ತಂದಿದ್ದ.
- ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಬಾಲಗಂಗಾಧರ ತಿಲಕ್ ಸೇರಿದಂತೆ ಅನೇಕ ಭಾರತೀಯರ ವಿರುದ್ಧ ಈ ಕಾನೂನನ್ನು ಪ್ರಯೋಗಿಸಿ ದೇಶದ್ರೋಹದ ಪಟ್ಟ ಕಟ್ಟಿ ಜೈಲಿಗೆ ಕಳುಹಿಸಲಾಗಿತ್ತು.
- ಆದರೆ, ಭಾರತ ಸ್ವಾತಂತ್ರ್ಯಗೊಂಡ ನಂತರ ಮೊದಲ ಅಧಿವೇಶನದಲ್ಲೇ ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರು ಕಲಂ 124-ಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಕಾನೂನು ಅಸಂವಿಧಾನಿಕ ಹಾಗೂ ಅಷ್ಟೇ ಆಕ್ಷೇಪಾರ್ಹ-ಅಸಹ್ಯಕರ ಕಾನೂನಾಗಿದ್ದು, ಐತಿಹಾಸಿಕ ಕಾರಣಗಳಿಗಾಗಿ ಈ ಕಾನೂನಿಗೆ ಯಾವುದೇ ಸ್ಥಾನ ಇರಬಾರದು ಆದಷ್ಟು ಬೇಗ ಇದನ್ನು ನಾವು ತೊಡೆದು ಹಾಕುತ್ತೇವೆ ಎಂದು ಹೇಳಿದ್ದರು. ಆದರೆ, ಈವರೆಗೆ ಈ ಕಾಯ್ದೆ ತನ್ನ ಅಸ್ಥಿತ್ವವನ್ನು ಹಾಗೆ ಉಳಿಸಿಕೊಂಡು ಬಂದಿದೆ,