ಸುಪ್ರೀಂ ಕೋರ್ಟ್ ತೀರ್ಪುಗಳು ಎಂದಾಕ್ಷಣ ಕುತೂಹಲದ ಜೊತೆಗೆ ಸ್ವಲ್ಪ ನಿರಾಸೆಯೂ ಇರುತ್ತಿತ್ತು ಆಸಕ್ತ ಸಾರ್ವಜನಿಕರಿಗೆ. ಇದಕ್ಕೆ ಕಾರಣವಾಗಿದ್ದು, ಆ ತೀರ್ಪುಗಳು ಇಂಗ್ಲಿಷ್‌ನಲ್ಲಿ ಮಾತ್ರವೇ ಇರುತ್ತಿದ್ದುದು. ಇದೀಗ ಈ ಭಾಷಾ ಬಂಧನದಿಂದ ಆಚೆ ಬರಲು ನಿರ್ಧರಿಸಿರುವ ಸುಪ್ರೀಂ ಕೋರ್ಟ್, ಕನ್ನಡ ಸೇರಿದಂತೆ ಆರು ಸ್ಥಳೀಯ ಭಾಷೆಗಳಲ್ಲಿಯೂ ತೀರ್ಪುಗಳನ್ನು ಅನುವಾದ ಮಾಡಿಸಲು ಮುಂದಾಗಿದೆ.
ಸುಪ್ರೀಂ ಕೋರ್ಟ್‌ನ ಎಲೆಕ್ಟ್ರಾನಿಕ್ ಸಾಫ್ಟ್‌ವೇರ್ ವಿಭಾಗ ತಯಾರಿಸಿರುವ ನೂತನ ತಂತ್ರಜ್ಞಾನಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಸಮ್ಮತಿಸಿದ್ದು, ಈ ತಿಂಗಳ ಕೊನೆಯ ಹೊತ್ತಿಗೆ ಸ್ಥಳೀಯ ಭಾಷೆಗಳಲ್ಲೂ ಸುಪ್ರೀಂ ಕೋರ್ಟ್ ತೀರ್ಪುಗಳು ಲಭ್ಯವಾಗಲಿವೆ. ತೀರ್ಪು ಹೊರಬಿದ್ದ ದಿನವೇ ಅಧಿಕೃತ ವೆಬ್‌ಸೈಟಿನಲ್ಲಿ ಇಂಗ್ಲಿಷ್‌ನಲ್ಲಿ ಲಭ್ಯವಿರುತ್ತದೆ ಹಾಗೂ ತೀರ್ಪು ಬಂದ ಒಂದು ವಾರದೊಳಗೆ ಸ್ಥಳೀಯ ಭಾಷೆಗಳಲ್ಲಿ ಲಭ್ಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಎಲೆಕ್ಟ್ರಾನಿಕ್ ಸಾಫ್ಟ್‌ವೇರ್ ವಿಭಾಗದ ಮೂಲಗಳು ತಿಳಿಸಿವೆ. ಸದ್ಯಕ್ಕೆ ಕನ್ನಡ, ಅಸ್ಸಾಮಿ, ಮರಾಠಿ, ಒರಿಯಾ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತೀರ್ಪುಗಳು ಓದಲು ಸಿಗಲಿವೆ.
ಅಸಲಿಗೆ ಈ ಐಡಿಯಾ ಬಂದದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ. 2017ರ ಅಕ್ಟೋಬರ್‌ನಲ್ಲಿ ಅವರು, ಹೈಕೋರ್ಟುಗಳ ತೀರ್ಪುಗಳನ್ನು ಆಯಾ ರಾಜ್ಯದ ಸ್ಥಳೀಯ ಭಾಷೆಗಳಲ್ಲೂ ಸಿಗುವಂತೆ ಮಾಡಿದರೆ ಅನುಕೂಲ ಎಂಬ ಪ್ರಸ್ತಾವನೆ ಮಂಡಿಸಿದ್ದರು. ಕೇರಳ ಹೈಕೋರ್ಟ್‌ನ ಕಾರ್ಯಕಮವೊಂದರಲ್ಲಿ ಮಾತನಾಡಿದ್ದ ಅವರು, “ಜನರಿಗೆ ನ್ಯಾಯ ಸಿಗುವಂತೆ ಮಾಡವುದು ಮುಖ್ಯ. ಅದರ ಜೊತೆಗೆ, ದಾವೆಗೆ ಸಂಬಂಧಪಟ್ಟವರ ಭಾಷೆಯಲ್ಲಿ ತೀರ್ಪು ಸಿಗುವಂತೆಯೂ ಮಾಡಬೇಕು. ಹೈಕೋರ್ಟ್‌ಗಳು ಇಂಗ್ಲಿಷ್‌ನಲ್ಲಿ ತೀರ್ಪು ಪ್ರಕಟಿಸುತ್ತವೆ. ಆದರೆ ನಮ್ಮದು ಭಾಷಾ ವೈವಿಧ್ಯ ಇರುವ ದೇಶ. ಪ್ರಕರಣಕ್ಕೆ ಸಂಬಂಧಪಟ್ಟವರಿಗೇ ತೀರ್ಪನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲವೆಂದರೆ ಹೇಗೆ? ಅವರು ವಕೀಲರನ್ನೋ ಅಥವಾ ಅನುವಾದಕರನ್ನೋ ಅವಲಂಬಿಸಬೇಕಾಗುತ್ತದೆ. ಇದು ದುರದೃಷ್ಟಕರ. ಅದರ ಬದಲು, ಪ್ರಕಟಿತ ತೀರ್ಪುಗಳ ಅಧಿಕೃತ ಅನುವಾದಗಳು ಸ್ಥಳೀಯ ಭಾಷೆಯಲ್ಲೂ ಸಿಗುವಂತಾಗಬೇಕು. ತೀರ್ಪು ಹೊರಬಿದ್ದ ಎರಡು ಅಥವಾ ಮೂರು ದಿನದಲ್ಲಿ ಇದು ಸಾಧ್ಯವಾದರೆ ಒಳಿತು,” ಎಂದು ಸಲಹೆ ನೀಡಿದ್ದರು.
ಹೈಕೋರ್ಟ್‌ಗಳಲ್ಲಿ ಯಾವಾಗ?
ರಾಷ್ಟ್ರಪತಿ ನೀಡಿದ ಸಲಹೆಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿ ಕಾರ್ಯರೂಪಕ್ಕೆ ತರುವ ಪ್ರಯತ್ನವನ್ನೇನೋ ಮಾಡಿದೆ. ಆದರೆ, ಇದು ಎಲ್ಲ ಹೈಕೋರ್ಟ್‌ಗಳಲ್ಲೂ ಸಾಧ್ಯವಾಗವುದು ಯಾವಾಗ ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದಿದೆ. ಅಸಲಿಗೆ, ಸುಪ್ರೀಂ ಕೋರ್ಟ್ ತೀರ್ಪುಗಳಿಗಿಂತಲೂ ಮುಖ್ಯವಾಗಿ ಹೈಕೋರ್ಟ್‌ಗಳ ತೀರ್ಪುಗಳು ಜನರಿಗೆ ತಲುಪುವ ಭಾಷೆಗಳಲ್ಲಿ ಸಿಗಬೇಕಾದ ಅನಿವಾರ್ಯತೆ ಇದೆ. ಏಕೆಂದರೆ, ಸಾಮಾನ್ಯ ಜನರ ಬಹುತೇಕ ದಾವೆಗಳು ಹೈಕೋರ್ಟ್ ದಾಟಿ ಹೋಗುವುದು ನಾನಾ ಕಾರಣಗಳಿಂದ ದುಸ್ತರ. ಹಾಗಾಗಿ, ಇದೂ ಸಾಧ್ಯವಾದರೆ ದಾವೆದಾರರಿಗೆ ಸಾಕಷ್ಟು ಅನುಕೂಲವಾದೀತು.