ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕೆಂಬ ಆಗ್ರಹದ ಅಭಿಯಾನವೊಂದು ಇತ್ತೀಚೆಗಷ್ಟೆ ಸದ್ದು ಮಾಡಿತ್ತು. ಅದರ ಹಿಂದೆಯೇ, ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಕುರಿತೂ ಚರ್ಚೆ ಜೋರು ನಡೆದಿತ್ತು. ಇವೆರಡರ ಕಾವು ಆರುವ ಮುನ್ನವೇ, ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆಯು ದೊಡ್ಡ ಎಡವಟ್ಟಿನಿಂದಾಗಿ ವಿವಾದಕ್ಕೆ ತುತ್ತಾಗಿದೆ.
ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗ ಮೀಸಲಾತಿ ಕುರಿತು ಮಾತನಾಡುವ ಸರೋಜಿನಿ ಮಹಿಷಿ ವರದಿ (1986) ಪ್ರಕಾರ, ಕರ್ನಾಟಕದಲ್ಲಿ ಕನಿಷ್ಠ 15 ವರ್ಷ ವಾಸವಿರುವ ಹಾಗೂ ಕನಿಷ್ಠ 10ನೇ ತರಗತಿವರೆಗೆ ಕನ್ನಡ ಕಲಿತಿರುವವರು ಮಾತ್ರವೇ ‘ಕನ್ನಡಿಗರು.’ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಾಗ ಅಭ್ಯರ್ಥಿಯು ‘ಕನ್ನಡಿಗ’ನೇ ಅಲ್ಲವೇ ಎಂದು ನಿರ್ಧಾರವಾಗಬೇಕೆಂದರೆ ಈ ಎರಡು ಅಂಶಗಳು ಇರಲೇಬೇಕು ಎಂಬುದು ಮಹಿಷಿ ವರದಿಯ ಕಟ್ಟಪ್ಪಣೆ. ಆದರೆ, ಸದ್ಯ ರಾಜ್ಯ ಸರ್ಕಾರ ಹೊರಡಿಸಿರುವ ಕರ್ನಾಟಕ ಕೈಗಾರಿಕಾ ಉದ್ಯೋಗ ಕಾಯ್ದೆ ತಿದ್ದುಪಡಿಯ ಕರಡು ಅಧಿಸೂಚನೆಯಲ್ಲಿ (ಮೇ 24) ಈ ಎರಡೂ ವಿಷಯಗಳಲ್ಲೂ ದೊಡ್ಡ ಮಟ್ಟದ ಸಡಿಲಿಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸವಿರುವ ಹಾಗೂ ಕನ್ನಡ ಓದಲು ಮತ್ತು ಬರೆಯಲು ಬಲ್ಲವ ‘ಕನ್ನಡಿಗ’ ಎನ್ನುತ್ತದೆ ಕರಡು ಅಧಿಸೂಚನೆ. ಈ ಸಡಿಲಿಕೆಯು ಪರೋಕ್ಷವಾಗಿ ಕನ್ನಡಿಗರ ಉದ್ಯೋಗ ಕಸಿದುಕೊಳ್ಳಲಿದೆ ಎಂದು ಟೀಕಿಸಿರುವ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗುತ್ತಿವೆ.
ಈ ಕುರಿತು ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ, “ಈ ಬಗ್ಗೆ ರಾಜಕಾರಣಿಗಳನ್ನು ದೂರಿ ಪ್ರಯೋಜನವಿಲ್ಲ. ಇದು ಹಿರಿಯ ಅಧಿಕಾರಿಗಳು ಉದ್ದೇಶಪೂರ್ವಕ ಮಾಡಿರುವ ಎಡವಟ್ಟು,” ಎಂದು ನೇರ ಆರೋಪ ಮಾಡಿದ್ದಾರೆ.
ಅಸಲಿಗೆ, ಕರ್ನಾಟಕದಲ್ಲಿನ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಇದುವರೆಗೂ ಯಾವ ಸರ್ಕಾರವೂ ಅಗತ್ಯ ಧೈರ್ಯ ತೋರಿಲ್ಲ. ಖಾಸಗಿ ಕಂಪನಿಗಳೊಂದಿಗಿನ ರಾಜಕಾರಣಿಗಳ ದೋಸ್ತಿ ಮತ್ತು ಖಾಸಗಿ ಕಂಪನಿಗಳು ರಾಜ್ಯದಿಂದ ಕಾಲು ಕೀಳಬಹುದು ಎಂಬ ಹಿಂಜರಿಕೆ ಇದಕ್ಕೆ ಕಾರಣ. 2017ರ ಬಜೆಟ್‌ನಲ್ಲಿ ಈ ಬಗ್ಗೆ ಆಶಾದಾಯಕ ಭರವಸೆ ನೀಡಿದ್ದು ಆಗಿನ ಸಿಎಂ ಸಿದ್ದರಾಮಯ್ಯ. “ಖಾಸಗಿ ವಲಯದ ಉದ್ದಿಮೆಗಳ ಸಿ ಮತ್ತು ಡಿ ದರ್ಜೆ ನೇಮಕದಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲು ಕಲ್ಪಿಸಲಾಗುವುದು; ಈ ಪೈಕಿ ವಿಕಲಚೇತನರಿಗೆ ಶೇ.5ರಷ್ಟು ಆದ್ಯತೆ ನೀಡಲಾಗುವುದು,” ಎಂದು ಬಜೆಟ್ ಪುಸ್ತಕದಲ್ಲಿ ಉಲ್ಲೇಖಿಸಲಾಗಿತ್ತು. ಇದಕ್ಕೂ ಮೊದಲು, ಖಾಸಗಿ ಕ್ಷೇತ್ರದಲ್ಲಿ ಈ ಮೀಸಲು ಸ್ವರೂಪ ಹೇಗಿರಬೇಕೆಂಬ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದರ ಮುಂದುವರಿದ ಭಾಗವಾಗಿಯೇ ಮೈತ್ರಿ ಸರ್ಕಾರ ಸಂಪುಟ ಸಭೆ ನಡೆಸಿ, ಕರಡು ಅಧಿಸೂಚನೆ ಹೊರಡಿಸುವ ತೀರ್ಮಾನ ಮಾಡಿತ್ತು.
ಫೆಬ್ರವರಿ 14ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವು ‘ಕರ್ನಾಟಕ ಔದ್ಯೋಗಿಕ ಕೈಗಾರಿಕೆ ಉದ್ಯೋಗಗಳ ನಿಯಮಾವಳಿಗಳ ನಿಯಮಗಳು-2018’ಕ್ಕೆ ಅನುಮೋದನೆ ನೀಡಿತು. ಈ ಕುರಿತು ಕರಡು ಅಧಿಸೂಚನೆ ಹೊರಡಿಸುವುದು ಮಾತ್ರ ಬಾಕಿ ಇತ್ತು. ಆದರೆ, ಸಚಿವ ಸಂಪುಟ ನಡೆದ ಬಳಿಕ ಈ ಕುರಿತು ವಿವರಣೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇ ಗೌಡ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸಿದ್ದು ಆಗ ಸುದ್ದಿಯಾಗಿತ್ತು ಕೂಡ. “ಖಾಸಗಿ ಕ್ಷೇತ್ರದಲ್ಲಿ ಸಿ ಮತ್ತು ಡಿ ದರ್ಜೆ ಉದ್ಯೋಗಗಳು ಎಷ್ಟು ಖಾಲಿ ಇವೆ ಮತ್ತು ‘ಕಡ್ಡಾಯ’ ಎಂಬ ಪದ ಬಳಕೆ ಮಾಡದೆ ಇರುವುದರಿಂದ ಕೈಗಾರಿಕಾ ಸಂಸ್ಥೆಗಳಿಗೆ ಜಾರಿಕೊಳ್ಳಲು ಅವಕಾಶವಾಗುವುದಿಲ್ಲವೇ?” ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಲು ಸಚಿವರು ನಿರಾಕರಿಸಿದ್ದರು. ಹೀಗಾಗಿ, ಹೊಸ ನಿಯಮದ ಮೂಲಕ ರಾಜ್ಯ ಸರ್ಕಾರವು ಕನ್ನಡಿಗರ ಕಣ್ಣೊರೆಸುವ ತಂತ್ರ ನಡೆಸುತ್ತಿದೆ ಎಂದೇ ಊಹಿಸಲಾಗಿತ್ತು. ಆ ಊಹೆ ಇದೀಗ ನಿಜವಾಗಿದೆ.
ಆದರೆ, ಸದ್ಯದ ಅಧಿಸೂಚನೆ ಕೇವಲ ಕರಡು ಆದ್ದರಿಂದ ತಿದ್ದುಪಡಿ ಮಾಡುವ ಅವಕಾಶವಂತೂ ಇದ್ದು, ಸರ್ಕಾರ ಖಾಸಗಿ ಸಂಸ್ಥೆಗಳ ಪರ ತೀರ್ಮಾನ ಕೈಗೊಳ್ಳಲಿದೆಯೋ ಅಥವಾ ಕನ್ನಡಿಗರ ಪರ ನಿಲುವು ತಾಳಲಿದೆಯೋ ಕಾದುನೋಡಬೇಕಿದೆ.