ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ (ಕನ್ನಡಿಗರಿಗೆ) ಉದ್ಯೋಗಾವಕಾಶ ಕಲ್ಪಿಸಿಕೊಡಬೇಕೆಂದು ಸಾಕಷ್ಟು ಹೋರಾಟಗಳು ನಡೆದಿವೆ, ಇನ್ನೂ ನಡೆಯುತ್ತಲೇ ಇವೆ. ಆದರೆ ಸರ್ಕಾರ, ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಹೆಚ್ಚು ಅವಕಾಶ ನೀಡಬೇಕು ಎಂದು ಕ್ಷಣಮಾತ್ರದಲ್ಲಿ ಹೇಳಿ ಮೌನವಾಗಿಬಿಡುತ್ತದೆ. ಆದರೆ ಎಲ್ಲಾ ಕಂಪೆನಿಗಳೂ ನಿಯಮವನ್ನು ಪಾಲಿಸುತ್ತಿದೆಯೇ ಎಂಬುದನ್ನು ನೋಡಿಕೊಳ್ಳುವುದಕ್ಕೆ ಯಾವುದೇ ಇಲಾಖೆ ಇಲ್ಲದಿರುವುದು ದುರಂತ.
ಏನಾಯ್ತು ಡಾ. ಸರೋಜಿನಿ ಮಹಿಷಿ ವರದಿ?
30 ದಶಕಗಳ ಹಿಂದೆ ರಾಜ್ಯದಲ್ಲಿ ಬಹುತೇಕ ಉದ್ದಿಮೆಗಳಲ್ಲಿ ಹೊರ ರಾಜ್ಯದ ಕಾರ್ಮಿಕರನ್ನೇ ತೆಗೆದುಕೊಳ್ಳಲಾಗುತ್ತಿತ್ತು. ಇದರ ಪರಿಣಾಮವಾಗಿ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸುತ್ತಾ “ಖಾಸಗಿ ಸಂಸ್ಥೆಗಳಲ್ಲಿ ಬಹುತೇಕ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿಕೊಡಬೇಕೆಂದು” ಆಗ್ರಹಿಸಿ ಅಭಿಯಾನ ಹಾಗೂ ಹೋರಾಟಗಳನ್ನು ಪ್ರಾರಂಭಿಸಿದಾಗ, ಅಂದಿನ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ, ಖಾಸಗಿ ಸಂಸ್ಥೆಗಳು ಹಾಗೂ ಕನ್ನಡಿಗರ ಉದ್ಯೋಗದ ಕುರಿತು ಅಧ್ಯಯನ ನಡೆಸಲು, ಡಾ. ಸರೋಜಿನಿ ಮಹಿಷಿ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ನಂತರ ಈ ಸಮಿತಿಯು ಸತತ ಮೂರು ವರ್ಷಗಳ ಕಾಲ ರಾಜ್ಯಾದ್ಯಂತ ಆಧ್ಯಯನ ನಡೆಸಿ 58 ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಿತ್ತು. ನಂತರ ಸರ್ಕಾರ ವರದಿಗಳನ್ನು ಪರಿಶೀಲಿಸಿ 45 ಶಿಫಾರಸ್ಸುಗಳಿಗೆ ಸಹಿ ಹಾಕಿತು. ಆದರೆ ಅನುಷ್ಠಾನಗೊಳಿಸಲಿಲ್ಲ. ಹೀಗೆ 30 ದಶಕಗಳಿಂದ ಎಲ್ಲಾ ಸರ್ಕಾರಗಳು ವರದಿಯ ಬಗ್ಗೆ ಚರ್ಚೆ ನಡೆಯಬೇಕು ಹಾಗೂ ಮತ್ತೊಮ್ಮ ಪರಿಷ್ಕರಿಸಬೇಕು ನಂತರ ಅನುಷ್ಠಾನಗೊಳಿಸುತ್ತೇವೆ ಎಂದು ಕಾಲವನ್ನು ದೂಡುತ್ತಲೇ ಬರುತ್ತಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕೈಗಾರಿಕಾ ನೀತಿ ಪ್ರಕ್ರಿಯೆಯಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಶೇ. 70ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ನೀಡುವಂತೆ ಕಡ್ಡಾಯವಾಗಿ ಆದೇಶ ಮಾಡಿತ್ತು. ಆದರೆ ಇದರ ಅನುಷ್ಟಾನಕ್ಕೆ ಯಾವುದೇ ಇಲಾಖೆಗೂ ಸೂಚಿಸಿರಲಿಲ್ಲ. ನಂತರ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ, ರಾಜ್ಯದ ಖಾಸಗಿ ಕಂಪನಿಗಳ ಸಿ ಮತ್ತು ಡಿ ಗ್ರೂಪ್ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.100ರಷ್ಟು ಮೀಸಲಾತಿಗೆ ಆದ್ಯತೆ ಕಲ್ಪಿಸಿ, ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದರು.
ತದನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 73ನೇ ಸ್ವಾತಂತ್ರ್ಯ ದಿನಾಚರಣೆಯ ದಿನದಂದು “ಇತ್ತೀಚೆಗೆ ರಾಜ್ಯದಲ್ಲಿನ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ಕಡಿಮೆಯಾಗುತ್ತಿದೆ ಎಂಬ ಧ್ವನಿ ಎಲ್ಲೆಡೆ ಕೇಳಿಬರುತ್ತಿದೆ. ಕನ್ನಡಿಗರ ಸ್ವಾಭಿಮಾನ, ಗೌರವ ಮತ್ತು ಉದ್ಯೋಗಾವಕಾಶಕ್ಕೆ ಧಕ್ಕೆ ಬಾರದಂತೆ ಎಚ್ಚರ ವಹಿಸಲು ಸರ್ಕಾರ ಬದ್ಧ. ರಾಜ್ಯದಲ್ಲಿನ ಉದ್ಯೋಗಗಳಲ್ಲಿ ಅತಿ ಹೆಚ್ಚಿನ ಸ್ಥಾನ ಕನ್ನಡಿಗರಿಗೆ ಸಿಗಬೇಕು ಎಂಬುದು ಸರಕಾರದ ನಿಲುವಾಗಿದ್ದು, ಪ್ರತಿಯೊಬ್ಬ ಕನ್ನಡಿಗ, ನೆಮ್ಮದಿ, ಸ್ವಾಭಿಮಾನದಿಂದ ಬದುಕುವಂತಾಗಬೇಕು ಎನ್ನುವುದು ನನ್ನ ಆಶಯ,’’ ಎಂದು ಹೇಳಿದ್ದರು. ಆದರೆ ಅದು ಇನ್ನೂ ಮಾತಾಗಿಯೇ ಇದೆ.

ಕಾರ್ಮಿಕ ಇಲಾಖೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಏನು ಮಾಡುತ್ತಿದೆ?
ಖಾಸಗಿ ಸಂಸ್ಥೆಗಳಲ್ಲಿ ಕನ್ನಡಗಿರಗೇ ಹೆಚ್ಚು ಉದ್ಯೋಗವಕಾಶಗಳು ಸಿಗಬೇಕಾದರೆ ಕಾರ್ಮಿಕ ಇಲಾಖೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪಾತ್ರ ವಹಿಸಬೇಕಲ್ಲವೆ? ಆದರೆ ಕಾರ್ಮಿಕ ಇಲಾಖೆ ಬರೀ ಉದ್ದಿಮೆಗಳಿಗೆ ಪರವಾನಗಿ ಕೊಡುವ ಕೆಲಸವನ್ನು ಮಾಡುತ್ತಿದೆಯೇ ವಿನಃ, ಎಷ್ಟು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಕೆಲಸ ಸಿಕ್ಕಿದೆ ಎಂಬ ಸೂಚ್ಯಂಕವನ್ನು ಸಿದ್ಧಪಡಿಸಿರುವುದಾಗಲಿ ಅಥವಾ ಸ್ಥಳೀಯರಿಗೆ ಉದ್ಯೋಗವಾಕಾಶವನ್ನು ಕೊಡದೆ ವಂಚಿಸುತ್ತಿರುವ ಸಂಸ್ಥೆಗಳ ಮೇಲೆ ಸೂಕ್ತ ಕ್ರಮ ಕೈಗೊಂಡಿರುವುದಾಗಲಿ ಇಲ್ಲ. ಇನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ನಮಗೆ ದೂರು ಬಂದರೆ ಮಾತ್ರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಮೌನವಾಗುವುದು ದುರಂತ.
ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆಂದು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಖಾಸಗಿ ಸಂಸ್ಥೆಗಳಿಗೆ ಸಾವಿರಾರು ಎಕರೆ ಜಾಗವನ್ನು ಒದಗಿಸುವಾಗಿನ ಒಪ್ಪಂದದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ನೀಡುವುದು ಶರತ್ತುಗಳಲ್ಲಿ ಒಂದು. ಒಮ್ಮೆ ಭೂಮಿ ಹಸ್ತಾಂತರವಾದೊಡನೆ ಈ ಬಗ್ಗೆ ಕೆಐಡಿಬಿ ಕೂಡ ಈ ನಿಬಂಧನೆ ಪೂರ್ಣಗೊಂಡ ಬಗ್ಗೆ ಪರಶೀಲನೆ ನಡೆಸಿಲ್ಲ. ಮಂಡಳಿಯ ಪ್ರಕಾರ, “ಸ್ಥಳೀಯರಿಗೆ ಉದ್ಯೋಗ ಒದಗಿಸುವುದರ ಕುರಿತು ನಮಗೆ ಇದುವರೆಗೂ ಯಾವುದೇ ದೂರು ಬಂದಿಲ್ಲ. ಹೀಗಾಗಿ ನಾವು ಯಾವುದೇ ಸಂಸ್ಥೆಗಳ ಮೇಲೆ ಕ್ರಮ ತೆಗೆದುಕೊಂಡಿಲ್ಲ” ಎಂದು ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದೆ.
ಆಡಳಿತಕ್ಕೆ ಬರುವ ಸರ್ಕಾರಗಳೆಲ್ಲಾ ಬರೀ ಆದೇಶ, ಅನುಮೋದನೆ ಕೊಟ್ಟರೂ, ಅದನ್ನು ಸೂಕ್ತ ರೀತಿಯಲ್ಲಿ ಕ್ರಮ ತೆಗೆದುಕೊಂಡು, ಇಲಾಖೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ನಿಯಮ ರೂಪಿಸಬೇಕು.
ಹೊರ ರಾಜ್ಯದ ಕಾರ್ಮಿಕರೇ, ಉದ್ಯಮಿಗಳಿಗೆ ಲಾಭದ ಪ್ರಭುಗಳು
ರಾಜ್ಯದ ಉದ್ಯಮಿಗಳೆಲ್ಲಾ ಸ್ಥಳೀಯರಿಗೆ ಉದ್ಯೋಗ ಕೊಟ್ಟರೆ ಕನಿಷ್ಠ ವೇತನ, ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಏನಾದರೂ ಸೌಕರ್ಯಗಳನ್ನು ನೀಡದಿದ್ದರೆ ಹೋರಾಟ ನಡೆಯುತ್ತದೆ ಹಾಗೂ ಅವರ ಬೇಡಿಕೆ ಈಡೇರಿಸಬೇಕಾಗುವ ಪರಿಸ್ಥಿತಿ ಎದುರಾಗುತ್ತದೆ. ಈ ಕಾರಣಕ್ಕೆ ಉದ್ಯಮಿಗಳು ಹೊರ ರಾಜ್ಯದ ಕಾರ್ಮಿಕರನ್ನು ಕಡಿಮೆ ವೇತನಕ್ಕೆ ನೇಮಕ ಮಾಡಿಕೊಳ್ಳುತ್ತಾರೆ.
ನೆರೆಹೊರೆ ರಾಜ್ಯಗಳಾದ ಮಹಾರಾಷ್ಟ್ರ, ಹಿಮಾಚಲ ಪ್ರದೇಶ, ತಮಿಳುನಾಡು, ಒಡಿಶಾ, ಗೋವಾ, ಮಧ್ಯಪ್ರದೇಶ, ಗುಜರಾತ್, ಸಿಕ್ಕಿಂ, ಜಾರ್ಖಂಡ್ ಸರ್ಕಾರಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಶೇಕಡ 60ರಿಂದ 80ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡುವುದಾಗಿ ಪ್ರಕಟಿಸಿದ್ದಾರೆ ಹಾಗೂ ಅನುಷ್ಠಾನಗೊಳಿಸಲು ಮುಂದಾಗುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಸರ್ಕಾರದ ಆದೇಶವಿದ್ದರೂ ಇಲ್ಲದಂತಾಗಿದೆ.