ಕನ್ನಡದಲ್ಲಿ ‘ಮಾಲ್ಗುಡಿ ಡೇಸ್‘; ಮುಖ್ಯವಾಹಿನಿಗೆ ಡಬ್ಬಿಂಗ್

ಒಂಬತ್ತು ವರ್ಷದ ಹಿಂದಿನ ಮಾತು. ವಾಹಿನಿಯೊಂದು ಒಂದು ಗಂಟೆ ಅವಧಿಯ ‘ಝಾನ್ಸಿ ರಾಣಿ ಲಕ್ಷ್ಮೀಬಾಯಿ’ ಹಿಂದಿ ಕಾರ್ಯಕ್ರಮದ ಕನ್ನಡ ಡಬ್ಬಿಂಗ್ ಅವತರಣಿಕೆಯನ್ನು ಪ್ರಸಾರ ಮಾಡಿತ್ತು. ಆಗ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‍ನ ಮೂವತ್ತಕ್ಕೂ ಹೆಚ್ಚು ಸದಸ್ಯರು ವಾಹಿನಿ ಕಚೇರಿಗೆ ನುಗ್ಗಿ ಪ್ರತಿಭಟಿಸಿದ್ದರು. ಘಟನೆಯಲ್ಲಿ ಕಂಪ್ಯೂಟರ್, ಪೀಠೋಪರಣಗಳಿಗೆ ಹಾನಿಯಾಗಿ ಪೊಲೀಸರ ಮಧ್ಯ ಪ್ರವೇಶವಾಗಿತ್ತು. ಪರಸ್ಪರ ಒಪ್ಪಂದದ ಮೇರೆಗೆ ವಾಹಿನಿ ದೂರು ವಾಪಸು ತೆಗೆದುಕೊಂಡಿತ್ತು. ಅಲ್ಲಿಂದ ಮುಂದೆ ಆಗಿಂದಾಗ್ಗೆ ಟೀವಿ ವಾಹಿನಿಗಳು ಮತ್ತು ಟೆಲಿವಿಷನ್ ಅಸೋಸಿಯೇಷನ್ ಮಧ್ಯೆ ಮುಸುಕಿನ ಗುದ್ದಾಟಗಳಾಗುತ್ತಲೇ ಇದ್ದವು.

ಕನ್ನಡದಲ್ಲಿ ಡಬ್ಬಿಂಗ್ ಪರ-ವಿರೋಧದ ಹೋರಾಟ ಏಳೆಂಟು ದಶಕಗಳಷ್ಟು ಹಳೆಯದು. ದಶಕದ ಹಿಂದಿನವರೆಗೂ ಇಲ್ಲಿ ಅನಧಿಕೃತ ಡಬ್ಬಿಂಗ್ ವಿರೋಧಿ ನಿಲುವಿತ್ತು. ಡಬ್ಬಿಂಗ್ ಪರವಾಗಿ ದೊಡ್ಡ ದನಿ ಶುರುವಾಗಿದ್ದು 2006ರ ನಂತರ. ಇತ್ತೀಚಿನ ಏಳೆಂಟು ವರ್ಷಗಳಲ್ಲಿನ ಪರ-ವಿರೋಧದ ಹೋರಾಟಗಳು ಕೋರ್ಟ್ ಮೆಟ್ಟಿಲೇರಿದ್ದೂ ಆಯ್ತು. ನ್ಯಾಯಾಲಯದ ಛೀಮಾರಿಯ ನಂತರ ಇದೀಗ ಡಬ್ಬಿಂಗ್ ವಿರೋಧಿ ನಿಲುವು ಸಂಪೂರ್ಣ ಅಡಗಿದೆ. ಪರಿಣಾಮವಾಗಿ ಕಳೆದ ಎರಡು ವರ್ಷಗಳಿಂದೀಚೆಗೆ ಕೆಲವು ದೊಡ್ಡ ಬಜೆಟ್‍ನ ಪರಭಾಷಾ ಸ್ಟಾರ್ ಹೀರೋಗಳ ಸಿನಿಮಾಗಳು ಕನ್ನಡದಲ್ಲಿ ಡಬ್ ಆಗಿ ತೆರೆಕಂಡವು. ಈ ಡಬ್ಬಿಂಗ್ ಸಿನಿಮಾಗಳು ಟೀವಿ ವಾಹಿನಿಯಲ್ಲೂ ಪ್ರಸಾರವಾದವು. ಇದೀಗ ಹಿಂದಿ ಧಾರಾವಾಹಿ ‘ಮಾಲ್ಗುಡಿ ಡೇಸ್’ನ ಕನ್ನಡ ಅವತರಣಿಕೆ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕನ್ನಡದ ಖಾಸಗಿ ಮನರಂಜನಾ ವಾಹಿನಿಯಲ್ಲಿ ಅಧಿಕೃತವಾಗಿ ಪ್ರಸಾರವಾಗುತ್ತಿರುವ ಮೊದಲ ದೊಡ್ಡ ಸರಣಿಯಿದು. ಈ ಬೆಳವಣಿಗೆ ಕನ್ನಡ ಕಿರುತೆರೆ ಉದ್ಯಮದ ಮೇಲೆ ಮುಂದಿನ ದಿನಗಳಲ್ಲಿ ಸಾಕಷ್ಟು ಬದಲಾವಣೆ ತರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

“ಶಂಕರ್ ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಹಿಂದಿ ಸರಣಿಯ ಡಬ್ಬಿಂಗ್ ಅವತರಣಿಕೆ ಇದೇ ತಿಂಗಳ 11ರಿಂದ ನಮ್ಮ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದು ನಮ್ಮ ಕನಸಿನ ಯೋಜನೆಯಾಗಿತ್ತು. ಲಾಕ್‍ಡೌನ್‍ನಿಂದಾಗಿ ಪ್ರಸಾರ ಕೊಂಚ ತಡವಾಯ್ತು. ಇದೀಗ ವಾರಕ್ಕೆ ಐದು ದಿನ ಧಾರಾವಾಹಿ ಪ್ರಸಾರವಾಗಲಿದೆ. ಜನಪ್ರಿಯ ಧಾರಾವಾಹಿಯನ್ನು ಖಂಡಿತ ಪ್ರೇಕ್ಷಕರು ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸ ನಮ್ಮದು” ಎನ್ನುತ್ತಾರೆ ಜೀ ವಾಹಿನಿ ಬಿಸ್ನೆಸ್ ಹೆಡ್ ರಾಘವೇಂದ್ರ ಹುಣಸೂರು. ‘ಮಾಲ್ಗುಡಿ ಡೇಸ್’ನ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಮಾಸ್ಟರ್ ಮಂಜುನಾಥ್ ಕೂಡ ಕನ್ನಡ ಅವತರಣಿಕೆ ಕುರಿತು ಉತ್ಸುಕರಾಗಿದ್ದಾರೆ. ಸರಣಿಯ ಮೊದಲ ಸೀಸನ್ ಪ್ರಸಾರವಾಗಿದ್ದು 1986ರಲ್ಲಿ. ಟೀವಿ ಸೆಟ್‍ಗಳು ಮೇಲ್ಮಧ್ಯಮ ವರ್ಗದವರಲ್ಲಷ್ಟೇ ಇದ್ದ ಕಾಲವದು. ಹಾಗಾಗಿ ದೊಡ್ಡ ಸಂಖ್ಯೆಯಲ್ಲಿ ಸರಣಿ ಪ್ರೇಕ್ಷಕರಿಗೆ ತಲುಪಿರಲಿಲ್ಲ. ಇತ್ತೀಚೆಗೆ ಸ್ಟ್ರೀಮಿಂಗ್ ಮೀಡಿಯಾದಲ್ಲಿದ್ದ ಡಬ್ಬಿಂಗ್ ಅವತರಣಿಕೆಯನ್ನು ಆಸಕ್ತರು ನೋಡಿ ಮೆಚ್ಚಿದ್ದರು. ಇದೀಗ ವಾಹಿನಿ ಮೂಲಕ ಸರಣಿ ದೊಡ್ಡ ಪ್ರೇಕ್ಷಕ ಬಳಗಕ್ಕೆ ತಲುಪಲಿದೆ. “ಮೊದಲು ನಾನು ಕೂಡ ಡಬ್ಬಿಂಗ್ ವಿರೋಧಿ ನಿಲುವು ಹೊಂದಿದ್ದೆ. ಬದಲಾದ ದಿನಗಳಲ್ಲಿ ನನ್ನ ನಿಲುವು ಸರಿಯಲ್ಲ ಎನಿಸಿತು. ಸರಣಿ ಕನ್ನಡದಲ್ಲಿ ಬರುತ್ತಿರುವುದು ಖುಷಿಯ ಸಂಗತಿ. ಕನ್ನಡಿಗರು ಖಂಡಿತ ಈ ಪ್ರಯೋಗ ಮೆಚ್ಚುತ್ತಾರೆ” ಎನ್ನುತ್ತಾರೆ ಮಂಜುನಾಥ್.

ಕನ್ನಡ ನಾಡಿನಲ್ಲಿ ಡಬ್ಬಿಂಗ್ ಪರವಾಗಿ ಆರಂಭದಿಂದಲೂ ಗಟ್ಟಿ ಧ್ವನಿಯಲ್ಲಿ ಹೋರಾಟ ನಡೆಸಿದ್ದು ಬನವಾಸಿ ಬಳಗ. ಡಬ್ಬಿಂಗ್ ಪರ-ವಿರೋಧದ ಪ್ರತೀ ಚರ್ಚೆಗಳಲ್ಲೂ ಈ ಬಳಗದ ಸದಸ್ಯರು ಮುಂಚೂಣಿಯಲ್ಲಿದ್ದರು. ಸುಮಾರು ಹತ್ತನ್ನೆರೆಡು ವರ್ಷಗಳ ನಿರಂತರ ಹೋರಾಟಕ್ಕೆ ಫಲ ಸಿಕ್ಕಿದೆ ಎನ್ನುತ್ತಾರೆ ಬನವಾಸಿ ಬಳಗದ ಆನಂದ್. “ಎಲ್ಲಾ ಭಾಷೆಯ ಕಂಟೆಂಟ್ ಅನ್ನು ಕನ್ನಡದಲ್ಲೇ ವೀಕ್ಷಿಸುವುದು ಕನ್ನಡಿಗರ ಹಕ್ಕು ಎನ್ನುವ ಆಶಯದಲ್ಲೇ ನಾವು ಹೋರಾಟ ನಡೆಸುತ್ತಾ ಬಂದಿದ್ದೇವೆ. ಈ ಹಂತದಲ್ಲಿ ಸಾಕಷ್ಟು ಕಾನೂನು ಹೋರಾಟಗಳೂ ನಡೆದವು. ಡಬ್ಬಿಂಗ್ ವಿರೋಧಿಸಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಕಿರುತೆರೆ ಅಸೋಸಿಯೇಷನ್‍ಗೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ದಂಡ ವಿಧಿಸಿತು. ಕೆಲವು ಹೋರಾಟಗರರು ವೈಯಕ್ತಿಕವಾಗಿಯೂ ದಂಡ ಕಟ್ಟಿದರು. ಕಾನೂನಿನ ಬೆಂಬಲ ಇದ್ದುದರಿಂದ ನಮ್ಮ ಹೋರಾಟಕ್ಕೆ ಜಯ ಸಿಕ್ಕಿತು” ಎನ್ನುತ್ತಾರೆ ಆನಂದ್.

ಕಿರುತೆರೆ ಹಿರಿಯ ನಟ, ನಿರ್ದೇಶಕ ರವಿಕಿರಣ್ ಹಿಂದೆ ಡಬ್ಬಿಂಗ್ ವಿರೋಧಿ ಪ್ರತಿಭಟನೆಗಳಲ್ಲಿ ಸಕ್ರಿಯರಾಗಿದ್ದವರು. ಈಗಿನ ಬೆಳವಣಿಗೆ ಕುರಿತು ಅವರು ನಿರ್ಲಪ್ತರಾಗಿದ್ದಾರೆ. ಈ ಬೆಳವಣಿಗೆಯಿಂದಾಗಿ ಕನ್ನಡ ಕಿರುತೆರೆ ಉದ್ಯಮ ಮುಂದಿನ ದಿನಗಳಲ್ಲಿ ಸಾಕಷ್ಟು ಆತಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ. “ಕನ್ನಡ ಕಿರುತೆರೆ ಉದ್ಯಮ, ಇಲ್ಲಿನ ಕಲಾವಿದರು ಹಾಗೂ ತಂತ್ರಜ್ಞರ ಹಿತಾಸಕ್ತಿ ಮತ್ತು ಕನ್ನಡಿಗರ ಅಭಿರುಚಿ ದೃಷ್ಟಿಯಿಂದ ನಾವು ನಿರಂತರವಾಗಿ ಡಬ್ಬಿಂಗ್ ವಿರೋಧಿ ಹೋರಾಟ ನಡೆಸಿದೆವು. ಕಾನೂನಿನ ತೊಡಕುಗಳ ನಂತರ ಹಿಂದೆ ಸರಿಯಬೇಕಾಯ್ತು. ಡಬ್ಬಿಂಗ್‍ನಿಂದಾಗಿ ಕನ್ನಡ ಕಿರುತೆರೆ ಉದ್ಯಮ ಮುಂದಿನ ದಿನಗಳಲ್ಲಿ ಸಾಕಷ್ಟು ಅಡ್ಡಿ, ಆತಂಕಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದಂತೂ ಸತ್ಯ” ಎನ್ನುವ ರವಿಕಿರಣ್ ಮಾತುಗಳಲ್ಲಿ ಹುರುಳಿಲ್ಲದಿಲ್ಲ. ಡಬ್ಬಿಂಗ್‍ನಿಂದಾಗಿ ಮನರಂಜನಾ ವಾಹಿನಿಗಳಿಗೆ ನೇರವಾಗಿ ಕಂಟೆಂಟ್ ತಯಾರಿಸುವ ಸಮಯ, ಹಣಕಾಸಿನ ರಿಸ್ಕ್ ಕಡಿಮೆಯಾಗಲಿದೆ. ಮತ್ತೊಂದೆಡೆ ಕಿರುತೆರೆಯನ್ನೇ ನಂಬಿಕೊಂಡ ತಂತ್ರಜ್ಞರು ಹಾಗೂ ಕಲಾವಿದರ ಬಳಗದಲ್ಲಿ ಏನೆಲ್ಲಾ ಸ್ಥಿತ್ಯಂತರಗಳಾಗಲಿವೆ ಎನ್ನುವುದನ್ನು ಕಾದು ನೋಡಬೇಕು.

Please follow and like us:

Related articles

Share article

Stay connected

Latest articles

Please follow and like us: