ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುವಂತೆ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅತ್ಯಂತ ಎಚ್ಚರಿಕೆ ಮತ್ತು ಬುದ್ಧಿವಂತಿಕೆಯ ಹೆಜ್ಜೆ ಇಟ್ಟಿದ್ದಾರೆ. ನೂತನವಾಗಿ ಸಚಿವರಾದ ಅರ್ಹ 10 ಮಂದಿಗೆ ಸೋಮವಾರ ಖಾತೆಗಳನ್ನು ಹಂಚಿಕೆ ಮಾಡಿದ್ದು, ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಕೇಳಿದ ಖಾತೆಯನ್ನು ಕೊಟ್ಟು ಇತರರಿಗೆ ತಮ್ಮಿಚ್ಚೆಯಂತೆ ಖಾತೆಗಳನ್ನು ಹಂಚಿಕೆ ಮಾಡುವ ಮೂಲಕ ಎಲ್ಲಾ ಹತ್ತು ಸಚಿವರ ಬಾಯಿ ಮುಚ್ಚಿಸುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದಾರೆ.
ಅದಷ್ಟೇ ಅಲ್ಲ, ತಮ್ಮ ಬಳಿ ಇದ್ದ ಇಂಧನ, ಬೆಂಗಳೂರು ನಗರಾಭಿವೃದ್ಧಿ, ಇತರೆ ಮೂಲ ಬಿಜೆಪಿ ಸಚಿವರ ಬಳಿ ಇದ್ದ ಲೋಕೋಪಯೋಗಿ, ಕೃಷಿ, ಹಿಂದುಳಿದ ವರ್ಗಗಳ ಕಲ್ಯಾಣದಂತಹ ಪ್ರಮುಖ ಖಾತೆಗಳನ್ನು ಮುಂದೆ ಬರುವವರಿಗಾಗಿ ಮೀಸಲಿಟ್ಟಿದ್ದಾರೆ. ಆ ಮೂಲಕ ಈಗಿರುವವರಿಗೂ ಬೇಸರವಾಗದಂತೆ, ಮುಂದೆ ಬರುವವರಿಗೂ ನಿರಾಶೆಯಾಗದಂತೆ ಖಾತೆ ಹಂಚಿಕೆ ಎಂಬ ದೊಡ್ಡ ಸವಾಲನ್ನು ಎದುರಿಸಿ ನಿಂತಿದ್ದಾರೆ.
ನೂತನವಾಗಿ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ, ಬಿ.ಸಿ.ಪಾಟೀಲ್- ಅರಣ್ಯ, ಎಸ್.ಟಿ.ಸೋಮಶೇಖರ್- ಸಹಕಾರ, ಬಿ.ಎ.ಬಸವರಾಜು (ಭೈರತಿ ಬಸವರಾಜು)- ನಗರಾಭಿವೃದ್ಧಿ, ಡಾ.ಕೆ.ಸುಧಾಕರ್- ವೈದ್ಯಕೀಯ ಶಿಕ್ಷಣ, ಕೆ.ಗೋಪಾಲಯ್ಯ- ಸಣ್ಣ ಕೈಗಾರಿಕೆ, ಶಿವರಾಮ್ ಹೆಬ್ಬಾರ್- ಕಾರ್ಮಿಕ, ಶ್ರೀಮಂತ ಪಾಟೀಲ್- ಜವಳಿ, ನಾರಾಯಣ ಗೌಡ- ಪೌರಾಡಳಿತ ಮತ್ತು ತೋಟಗಾರಿಕೆ, ಆನಂದ್ ಸಿಂಗ್ ಅವರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಗಳು ಸಿಕ್ಕಿವೆ.
ರಮೇಶ್ ಜಾರಕಿಹೊಳಿಗಷ್ಟೇ ಸಿಕ್ಕಿದ್ದು ಬಯಸಿದ ಖಾತೆ
ಜಲಸಂಪನ್ಮೂಲ ಖಾತೆಗಾಗಿ ಪ್ರಸ್ತುತ ಗೃಹ ಸಚಿವರಾಗಿರುವ ಬಸವರಾಜ ಬೊಮ್ಮಾಯಿ ಮತ್ತು ರಮೇಶ್ ಜಾರಕಿಹೊಳಿ ಭಾರೀ ಪೈಪೋಟಿ ನಡೆಸಿದ್ದರು. ಈ ಹಿಂದಿನ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಜಲ ಸಂಪನ್ಮೂಲ ಸಚಿವರಾಗಿದ್ದಾಗ ಇಲಾಖೆಯಲ್ಲಿ ಸಾಕಷ್ಟು ಪ್ರಗತಿಯಾಗಿತ್ತು. ಮೂಲತಃ ಎಂಜಿನಿಯರ್ ಆಗಿರುವ ಬೊಮ್ಮಾಯಿ, ಆ ಖಾತೆಯೇ ತಮಗೆ ಬೇಕು. ಗೃಹ ಇಲಾಖೆಯನ್ನು ಬೇರೆಯವರಿಗೆ ಬಿಟ್ಟುಕೊಡುತ್ತೇನೆ ಎಂದು ಹೇಳಿದ್ದರು. ಆದರೆ, ಉಪಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದ ರಮೇಶ್ ಜಾರಕಿಹೊಳಿ, ಆ ಹುದ್ದೆ ಸಿಗದೇ ಇದ್ದಲ್ಲಿ ಮೈತ್ರಿ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ನಿರ್ವಹಿಸಿದ್ದ ಜಲಸಂಪನ್ಮೂಲ ಖಾತೆ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಹೀಗಾಗಿ ತಮ್ಮ ಆಪ್ತರಾದ ಬಸವರಾಜ ಬೊಮ್ಮಾಯಿ ಅವರಿಗೆ ಪರಿಸ್ಥಿತಿಯ ಮನವರಿಕೆ ಮಾಡಿಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಲಸಂಪನ್ಮೂಲ ಖಾತೆಯನ್ನು ರಮೇಶ್ ಜಾರಕಿಹೊಳಿಗೆ ವಹಿಸುವ ಮೂಲಕ ಅವರು ಕೇಳಿದ ಖಾತೆಯನ್ನು ನೀಡಿ ಸಮಾಧಾನಪಡಿಸಿದ್ದಾರೆ.
ಇನ್ನು ಬೆಂಗಳೂರು ನಗರಾಭಿವೃದ್ಧಿ ಖಾತೆ ಮೇಲೆ ನೂತನವಾಗಿ ಸಚಿವರಾಗಿರುವ ಭೈರತಿ ಬಸವರಾಜು ಮತ್ತು ಎಸ್.ಟಿ.ಸೋಮಶೇಖರ್ ಕಣ್ಣಿಟ್ಟಿದ್ದರಾದರೂ ಅವರಿಗೆ ಆ ಖಾತೆ ದಕ್ಕಿಲ್ಲ. ಏಕೆಂದರೆ, ಹಿರಿಯ ಸಚಿವ ಆರ್.ಅಶೋಕ್ ಮತ್ತು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕೂಡ ಬೆಂಗಳೂರು ನಗರಾಭಿವೃದ್ಧಿ ಖಾತೆ ಬಗ್ಗೆ ಲಾಬಿ ನಡೆಸಿದ್ದರು. ಸದ್ಯ ನಿಮ್ಮ ಬಳಿ ಇರುವ ಈ ಖಾತೆಯನ್ನು ನೀವೇ ಇಟ್ಟುಕೊಂಡರೆ ಪರವಾಗಿಲ್ಲ. ಒಂದೊಮ್ಮೆ ಬೇರೆಯವರಿಗೆ ವಹಿಸುವುದಾದರೆ ತಮಗೆ ಬೇಕೇ ಬೇಕು ಎಂದು ಈ ಇಬ್ಬರೂ ಮುಖ್ಯಮಂತ್ರಿಗಳ ಬಳಿ ಹೇಳಿದ್ದರು. ಹೀಗಾಗಿ ಬೆಂಗಳೂರು ನಗರಾಭಿವೃದ್ಧಿಯನ್ನು ಯಾರಿಗೇ ಕೊಟ್ಟರೂ ಇತರರಿಗೆ ಅಸಮಾಧಾನ ಖಚಿತ. ಅದರಲ್ಲೂ ಹೊಸಬರಿಗೆ ನೀಡಿದರೆ ಆರ್.ಅಶೋಕ್ ಮತ್ತು ಡಾ.ಅಶ್ವತ್ಥನಾರಾಯಣ ಮತ್ತಷ್ಟು ಕೆರಳಬಹುದು ಎಂಬ ಕಾರಣಕ್ಕೆ ಆ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಯಡಿಯೂರಪ್ಪ ಅವರು ಭೈರತಿ ಬಸವರಾಜು ಅವರಿಗೆ ತಮ್ಮ ಬಳಿ ಇದ್ದ ನಗರಾಭಿವೃದ್ಧಿ (ಬೆಂಗಳೂರು ನಗರಾಭಿವೃದ್ಧಿ ಹೊರತುಪಡಿಸಿ) ಮತ್ತು ಎಸ್.ಟಿ.ಸೋಮಶೇಖರ್ ಅವರಿಗೆ ಸಚಿವ ಬಸವರಾಜ ಬೊಮ್ಮಾಯಿ ಅವರಲ್ಲಿ ಹೆಚ್ಚುವರಿಯಾಗಿದ್ದ ಸಹಕಾರ ಖಾತೆಯನ್ನು ಹಂಚಿಕೆ ಮಾಡಿದ್ದಾರೆ.
ಬಸವರಾಜ ಬೊಮ್ಮಾಯಿ ಅವರ ಬಳಿ ಇದ್ದ ಗೃಹ ಖಾತೆ ಮೇಲೆ ಕಣ್ಣಿಟ್ಟಿದ್ದ ಮತ್ತೊಬ್ಬ ನೂತನ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಸಿ.ಸಿ.ಪಾಟೀಲ್ ಅವರಲ್ಲಿದ್ದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಡಾ.ಸುಧಾಕರ್ ಅವರಿಗೆ ಡಾ.ಅಶ್ವತ್ಥನಾರಾಯಣ ಬಳಿ ಹೆಚ್ಚುವರಿಯಾಗಿದ್ದ ವೈದ್ಯಕೀಯ ಶಿಕ್ಷಣ, ಕೆ.ಗೋಪಾಲಯ್ಯ ಅವರಿಗೆ ತಮ್ಮ ಬಳಿ ಇದ್ದ ಸಣ್ಣ ಕೈಗಾರಿಕೆ, ಶಿವರಾಮ್ ಹೆಬ್ಬಾರ್- ಅವರಿಗೆ ಸುರೇಶ್ ಕುಮಾರ್ ಬಳಿ ಹೆಚ್ಚುವರಿಯಾಗಿದ್ದ ಕಾರ್ಮಿಕ, ಶ್ರೀಮಂತ ಪಾಟೀಲ್ ಅವರಿಗೆ ತಮ್ಮ ಬಳಿ ಇದ್ದ ಜವಳಿ, ನಾರಾಯಣ ಗೌಡ ಅವರಿಗೆ ಅಶೋಕ್ ಬಳಿಯಿದ್ದ ಪೌರಾಡಳಿತ ಮತ್ತು ವಿ.ಸೋಮಣ್ಣ ಬಳಿ ಹೆಚ್ಚುವರಿಯಾಗಿ ಇದ್ದ ತೋಟಗಾರಿಕೆ, ಆನಂದ್ ಸಿಂಗ್ ಅವರಿಗೆ ಶಶಿಕಲಾ ಜೊಲ್ಲೆ ಅವರಲ್ಲಿ ಹೆಚ್ಚುವರಿಯಾಗಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಇದರೊಂದಿಗೆ ರಮೇಶ್ ಜಾರಕಿಹೊಳಿಗೆ ಮಾತ್ರ ಕೇಳಿದ ಖಾತೆ ಸಿಕ್ಕಿದ್ದು, ಉಳಿದವರು ಮುಖ್ಯಮಂತ್ರಿಗಳು ಕೊಟ್ಟ ಇಲಾಖೆಯ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ.
ಖಾತೆ ಹಂಚಿಕೆ ವಿಚಾರದಲ್ಲಿ ಬುದ್ಧಿವಂತಿಕೆ ಮೆರೆದ ಮುಖ್ಯಮಂತ್ರಿ
ರಮೇಶ್ ಜಾರಕಿಹೊಳಿ ಅವರಿಗೆ ಕೇಳಿದ ಖಾತೆ ನೀಡಿ ಉಳಿದವರು ಕೇಳಿದ ಖಾತೆಗಳನ್ನು ನೀಡದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ವಿಚಾರದಲ್ಲೂ ಬುದ್ಧಿವಂತಿಕೆ ಮೆರೆದಿದ್ದಾರೆ. ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಬರಲು ಬಲೆ ಹೆಣೆಯಲಾರಂಭಿಸಿದ್ದೇ ರಮೇಶ್ ಜಾರಕಿಹೊಳಿ. ಅವರ ನೇತೃತ್ವದಲ್ಲೇ ಎಲ್ಲರೂ ಇದಕ್ಕೆ ಕೈಜೋಡಿಸಿ ಯಶಸ್ವಿಯಾಗುವಂತೆ ನೋಡಿಕೊಂಡರು. ಅಲ್ಲದೆ, ಎಚ್.ವಿಶ್ವನಾಥ್ ಸೋತಿರುವುದರಿಂದ ನೂತನವಾಗಿ ಸಚಿವರಾಗಿರುವ ಹತ್ತು ಮಂದಿಗೆ ರಮೇಶ್ ಜಾರಕಿಹೊಳಿ ಏಕೈಕ ನಾಯಕ. ನಾಯಕನನ್ನು ಸಮಾಧಾನಪಡಿಸಿದರೆ ಇತರರು ಸುಮ್ಮನಿರುತ್ತಾರೆ ಎಂಬುದು ಯಡಿಯೂರಪ್ಪ ಅವರಿಗೂ ಗೊತ್ತು. ಅಷ್ಟೇ ಅಲ್ಲ, ರಮೇಶ್ ಜಾರಕಿಹೊಳಿ ಅವರು ಉಪಮುಖ್ಯಮಂತ್ರಿ ಹುದ್ದೆ ಬಯಸಿದ್ದರಾದರೂ ಅದನ್ನು ನೀಡಲು ಸಾಧ್ಯವಾಗದ ಅನಿವಾರ್ಯತೆಯನ್ನು ರಮೇಶ್ ಜಾರಕಿಹೊಳಿಗೆ ನೀಡಿದ್ದ ಯಡಿಯೂರಪ್ಪ ಅವರು ಕೇಳಿದ ಖಾತೆ ಕೊಡುವುದಾಗಿ ಭರವಸೆ ನೀಡಿದ್ದರು.
ಇನ್ನು ನೂತನವಾಗಿ ಶಾಸಕರಾದ ಮಹೇಶ್ ಕುಮುಟಳ್ಳಿ ಅವರನ್ನು ಸಚಿವರನ್ನಾಗಿ ಆಯ್ಕೆ ಮಾಡಬೇಕಿತ್ತಾದರೂ ಒಂದೇ ಕ್ಷೇತ್ರಕ್ಕೆ ಎರಡು ಹುದ್ದೆ ನೀಡಬಾರದು ಎಂಬ ಕಾರಣಕ್ಕೆ ಕುಮುಟಳ್ಳಿ ಅವರನ್ನು ಸಮಾಧಾನಪಡಿಸುವ ಜವಾಬ್ದಾರಿಯನ್ನು ವಹಿಸಿದ್ದು ಕೂಡ ರಮೇಶ್ ಜಾರಕಿಹೊಳಿ ಅವರಿಗೆ. ಹೀಗಾಗಿ ರಮೇಶ್ ಮಾತು ಇತರರು ಕೇಳುತ್ತಾರೆ ಎಂಬುದು ಬಹುತೇಕ ಖಚಿತವಾಗಿತ್ತು. ಹೀಗಾಗಿ ರಮೇಶ್ ಒಬ್ಬರಿಗೆ ಮಾತ್ರ ಬಯಸಿದ ಖಾತೆ ಕೊಟ್ಟು ಉಳಿದವರು ಅಸಮಾಧಾನ ಹೊರಹಾಕದಂತೆ ಯಡಿಯೂರಪ್ಪ ಅವರು ನೋಡಿಕೊಂಡಿದ್ದಾರೆ. ಒಂದೊಮ್ಮೆ ಆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರೂ ಅವರನ್ನು ಸಮಾಧಾನಪಡಿಸುವ ಕೆಲಸವನ್ನು ರಮೇಶ್ ಜಾರಕಿಹೊಳಿ ನೋಡಿಕೊಳ್ಳಲಿದ್ದಾರೆ.
ಹಳಬರಿಗೂ ಅಸಮಾಧಾನವಾಗದಂತೆ ಕ್ರಮ
ಈ ಮಧ್ಯೆ ಸಚಿವಾಕಾಂಕ್ಷಿ ಮೂಲ ಬಿಜೆಪಿಯವರಿಗೆ ಮುಂದೆ ಸಂಪುಟ ವಿಸ್ತರಣೆ ಮಾಡಿ ಅವಕಾಶ ಕಲ್ಪಿಸುವುದಾಗಿ ಹೇಳಿದ್ದ ಯಡಿಯೂರಪ್ಪ ಅವರು ಆರು ಪ್ರಮುಖ ಖಾತೆಗಳನ್ನು ಇನ್ನೂ ತಮ್ಮ ಬಳಿ ಅಥವಾ ಹಳೆಯ ಸಚಿವರಲ್ಲಿ ಉಳಿಸಿಕೊಂಡಿದ್ದಾರೆ. ಇನ್ನು ಆರು ಮಂದಿಗೆ ಸಚಿವ ಸ್ಥಾನ ಸಿಗಬೇಕಾಗಿದ್ದು, ಅವರಿಗಾಗಿ ಇಂಧನ, ಲೋಕೋಪಯೋಗಿ, ಕೃಷಿ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ, ಸಕ್ಕರೆ ಮುಂತಾದ ಪ್ರಮುಖ ಖಾತೆಗಳು ಇನ್ನೂ ಉಳಿಸಿಕೊಳ್ಳಲಾಗಿದೆ.
ಆರಂಭದಲ್ಲಿ ನಿರ್ಧರಿಸಿದ್ದಂತೆ ಈ ಬಾರಿ ಉಮೇಶ್ ಕತ್ತಿ ಅವರು ಸಚಿವರಾಗಿದ್ದರೆ ಅವರಿಗೆ ಕೃಷಿ ಖಾತೆ ವಹಿಸಲು ತೀರ್ಮಾನಿಸಲಾಗಿತ್ತು. ಅದೇ ರೀತಿ ಅರವಿಂದ ಲಿಂಬಾವಳಿ ಅವರಿಗೆ ಇಂಧನ ಅಥವಾ ಲೋಕೋಪಯೋಗಿ ಇಲಾಖೆ ನೀಡುವ ಉದ್ದೇಶವನ್ನು ಅವರು ಹೊಂದಿದ್ದರು. ಆದರೆ, ಅವರಿಗೆ ಸಚಿವರಾಗುವ ಅವಕಾಶ ಸಿಗದ ಕಾರಣ ಈ ಖಾತೆಗಳನ್ನು ಇನ್ನೂ ಅವರಿಗಾಗಿ ಕಾಯ್ದಿರಿಸಲಾಗಿದೆ. ಮುಂದಿನ ಹಂಚದ ಸಚಿವ ಸಂಪುಟ ವಿಸ್ತರಣೆ ವೇಳೆ ಈ ಖಾತೆಗಳನ್ನು ಹಂಚಿಕೆ ಮಾಡಲಾಗುತ್ತದೆ.