ದಿನಬೆಳಗಾದರೆ ಅದೇ ರಾಜಕೀಯ ಕೆಸರೆರಚಾಟ, ಸಿನೆಮಾ ಮಂದಿಯ ಗಾಸಿಪ್ಪುಗಳ ಮಧ್ಯೆ ಸದ್ದು ಮಾಡುತ್ತಿದ್ದಾನೆ ಈ ಕರಾವಳಿಯ ಕುವರ ಶ್ರೀನಿವಾಸ್ ಗೌಡ aka ಸೀನು.
ಕರಾವಳಿಯ ಉಪ್ಪಿನ ಗದ್ದೆ, ಭತ್ತದ ಗದ್ದೆಗಳಿಗಿಂತ ಜಾಸ್ತಿ ಫೇಮಸ್ ಎಂದರೆ ಅದು ಕಂಬಳಕ್ಕಾಗಿ ಹದ ಮಾಡಿದ ಓಟದ ಗದ್ದೆ. ಇತ್ತೀಚಿನ ದಿನಗಳಲ್ಲಿ ಕೆಲ ಸ್ವಘೋಷಿತ ಪ್ರಾಣಿ ದಯಾ ಸಂಘಟನೆಗಳ ಕಾಟದಿಂದ ಈ ಸಾಂಪ್ರದಾಯಿಕ ಕ್ರೀಡೆಯ ಭವಿಷ್ಯವು ನ್ಯಾಯಾಂಗದ ಕಟಕಟೆಯಲ್ಲಿ ತೂಗುಯ್ಯಾಲೆಯಲ್ಲಿ ಇರುವಂತೆ ಆಗಿಬಿಟ್ಟಿತ್ತು. ಆದರೆ, ಸೀನುವಿನ ಈ ಸಾಧನೆಯಿಂದಾಗಿ ಕಂಬಳದ ಪರವಾಗಿ ಇಡೀ ದೇಶದ ಜನತೆಯ ಒಕ್ಕೊರಲಿನ ದನಿಗೂಡುವಂತೆ ಆಗಿದೆ ಎಂದರೆ ಅತಿಶಯೋಕ್ತಿಯಲ್ಲ.
ದಕ್ಷಿಣ ಕನ್ನಡದ ಅಳಂಜೆ ಬಳಿಕ ಐಕಳದ ಕಂಬಳ ಗದ್ದೆಯಲ್ಲಿ 142.50 ಮೀಟರ್ ಓಟವನ್ನು ಕೇವಲ 13.62 ಸೆಕೆಂಡ್‌ಗಳಲ್ಲಿ ಓಡಿ ಮುಗಿಸಿದ ಶ್ರೀನಿವಾಸ್ ಅಲ್ಲಿದ್ದವರನ್ನೆಲ್ಲಾ ದಂಗು ಬಡಿಸಿಬಿಟ್ಟಿದ್ದಾರೆ. ಆತನ ಈ ಓಟದ ಪರಿಗೆ ದಂಗು ಬಡಿದಂತಾದ ಕೆಲ ಸ್ಥಳೀಯ ಅಂಕಿ ಅಂಶಗಳ ತಜ್ಞರು, ಶ್ರೀನಿವಾಸ್‌ರ ಈ ದಾಖಲೆಯನ್ನು 100 ಮೀಟರ್ ಓಟಕ್ಕೆ ತಲುನೆ ಮಾಡಿ ನೋಡಿದಾಗ, ಇದೇ ವೇಗದಲ್ಲಿ ಅಷ್ಟು ದೂರ ಕ್ರಮಿಸಲು ಸೀನುಗೆ ಉಸೇನ್ ಬೋಲ್ಟ್ ದಾಖಲೆಯ ಅವಧಿಯಾದ 9.55 ಸೆಕೆಂಡ್‌ಗಿಂತಲೂ 0.33 ಸೆಕೆಂಡ್ ಕಡಿವೆ ಅವಧಿ ತಗುಲುತ್ತದೆ ಎಂದು ತಿಳಿಯಿತು ಅಷ್ಟೇ….. ಮುಂದಿನ ಕೆಲವೇ ನಿಮಿಷಗಳಲ್ಲಿ ಈ mind numbing stats ಜೊತೆಗೆ ಸೀನುವಿನ ಚಿತ್ರಗಳು ಟ್ವಿಟರ್‌ನಲ್ಲಿ ಸಖತ್ ಸುದ್ದಿಯಾಗಿಬಿಟ್ಟವು.
ನೋಡ ನೋಡುತ್ತದೇ ಇಡೀ ದೇಶವೇ ದಕ್ಷಿಣ ಕನ್ನಡದತ್ತ ನೋಡಲು ಆರಂಭಿಸಿ, ಕಂಬಳವೆಂದರೇನು? ಈ ಸೀನು ಮಾಡಿದ್ದು ಏನು? ಆ ಕೆಸರು ಗದ್ದೆಯಲ್ಲಿ ಓಡುವುದು ಎಷ್ಟು ಮಟ್ಟಿಗೆ ದೈಹಿಕ ಕ್ಷಮತೆಯನ್ನು ಬೇಡುತ್ತದೆ ಎಂಬೆಲ್ಲಾ ವಿಚಾರಗಳನ್ನು ಗೂಗಲ್ ಮಾಡುವುದರಿಂದ ಹಿಡಿದು, ತಿಳಿದವರನ್ನು ಕೇಳಿ ತಿಳಿಯಲು ಆರಂಭ ಮಾಡಿಕೊಂಡುಬಿಟ್ಟಿತು.
ಸಾಂಪ್ರದಾಯಿಕ ಕ್ರೀಡೆಯ ಮೇಲಿನ ಪ್ರೀತಿ ಹಾಗೂ ಪರಂಪರೆಯ ಮೇಲಿನ ಹೆಮ್ಮೆಯಿಂದ ಭಾಗವಹಿಸಿದ್ದ ಓಟವು ತನ್ನ ಹೆಸರನ್ನು ದೇಶಾದ್ಯಂತ ರಾತ್ರೋರಾತ್ರಿ ಹೀರೋ ಮಾಡಬಲ್ಲದು ಎಂದು ಖುದ್ದು ಸೀನು ಸಹ ಕನಸಿನಲ್ಲೂ ಎಣಿಸಿರಲಿಲ್ಲ. ಹಾಗಂತ, ಸೀನುಗೆ ಸಿಕ್ಕ ಈ ಖ್ಯಾತಿ ಏನು ಇದ್ದಕ್ಕಿದ್ದಂತೆ ಘಟಿಸಿದ್ದಲ್ಲ. ಮೊನ್ನೆಯ ಆ ಶುಭ ದಿನಕ್ಕೂ ಮುನ್ನ 11 ವಿವಿಧ ಕಂಬಳ ಓಟಗಳಲ್ಲಿ 32 ಪದಕಗಳನ್ನು ಮುಡಿಗೇರಿಸಿಕೊಂಡಿದ್ದ ಸೀನುನ ದೇಹಸಿರಿ ಕಂಬಳದ ಓಟಕ್ಕೆಂದೇ ಹರವಾಗಿದ್ದಂತೆ ಕಾಣುತ್ತಿರುವುದರಲ್ಲಿ ಅಚ್ಚರಿಯಿಲ್ಲ.
ಕೆಸರು ಗದ್ದೆಯಲ್ಲಿ ಓಡುವುದಿರಲಿ, ನಡೆಯುವುದಕ್ಕೂ ಸ್ವಲ್ಪ ಹೆಚ್ಚೇ ಶ್ರಮ ಹಾಕಬೇಕು. ಅಂಥದ್ದರಲ್ಲಿ, ಹೆಜ್ಜೆ ಹೆಜ್ಜೆಗಳನ್ನೂ ಕೆಸರು ಮಣ್ಣಿನ ಒಳಗೆ ಇಟ್ಟು, ಪಾದಗಳನ್ನು ಮಣ್ಣಿನಿಂದ ಕಿತ್ತು ಇಡುತ್ತಾ ಓಡುವುದಲ್ಲದೇ, ಕೋಣಗಳನ್ನು ನಿಯಂತ್ರಿಸಿಕೊಂಡು ಹೋಗಲು ಅದ್ಯಾವ ಮಟ್ಟಿಗೆ ಮನೋ-ದೈಹಿಕ ಕ್ಷಮತೆಗಳು perfect syncನಲ್ಲಿ ಕೆಲಸ ಮಾಡಬೇಕೆಂಬುದು ನಿಮ್ಮ ಊಹೆಗೇ ಬಿಟ್ಟಿದ್ದು. ಕೋಣಗಳನ್ನು ಬಿಗಿಯಾದ ಹಗ್ಗದಲ್ಲಿ ಹಿಡಿದುಕೊಂಡು, ಬರಿಗಾಲಿನಲ್ಲಿ ನಿಂತು, ರೆಫ್ರೀ ಬಾವುಟವನ್ನು ಇಳಿಸುತ್ತಲೇ ಮೈಯಲ್ಲಿ ವೀರಾವೇಶ ತುಂಬಿಕೊಂಡವರಂತೆ ಫಿನಿಶಿಂಗ್ ಲೈನ್‌ನಲ್ಲಿರುವ ಮಂಜುಟ್ಟಿ ದಿಬ್ಬವನ್ನು ಏರುವುದನ್ನು ಬಿಟ್ಟು ಬೇರೇನೂ ಯೋಚಿಸದೇ ಓಡುವುದನ್ನು ಇಲ್ಲಿ ಪದಗಳಲ್ಲಿ ಓದುವುದಕ್ಕಿಂತಲೂ ಕಣ್ಣಾರೆ ನೋಡುವ ಆನಂದವೇ ಬೇರೆ.
ದೇಶಕ್ಕೊಬ್ಬ ಸಂಭವನೀಯ ಒಲಿಂಪಿಯನ್‌ಅನ್ನು ತುಳುನಾಡಿನ ಕಂಬಳ ಗದ್ದೆ ಸೃಷ್ಟಿ ಮಾಡಿದೆ ಎಂಬ ವಿಚಾರವೇ, ಕಂಬಳ ನಿಷೇಧ ಮಾಡಬೇಕೆಂದು ಕೋರಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದ ಕೆಲ NGOಗಳ ಬಾಯಿಗೆ ಬೀಗ ಹಾಕುವಂತೆ ಮಾಡಿಬಿಟ್ಟಿದೆ. ನಮ್ಮದೇ ಗ್ರಾಮೀಣ ಕ್ರೀಡೆಗಳು ಅದೆಷ್ಟು intense ಆದ ಮನೋ-ದೈಹಿಕ ಕ್ಷಮತೆಯನ್ನು ಬೇಡುತ್ತವೆ? ಹೀಗಿರುವಾಗ, ಇದೇ ಕ್ಷಮತೆಯನ್ನು ಜಾಗತಿಕ ಮಟ್ಟದ ಕ್ರೀಡಾಕೂಟಗಳಲ್ಲಿ ಬಳಸಿಕೊಳ್ಳಲು ಸರಿಯಾದ ರೀತಿಯಲ್ಲಿ channelize ಮಾಡಿದಲ್ಲಿ ಏನೆಲ್ಲಾ ಫಲಿತಾಂಶಗಳು ಸಿಗುವುದಿಲ್ಲ? ಎಂಬೆಲ್ಲಾ ರಚನಾತ್ಮಕ ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿಕೊಂಡಿರುವುದು ಸ್ವಾಗತಾರ್ಹ. ಅಷ್ಟರ ಮಟ್ಟಿಗೆ ಸೀನುವಿನ ಈ ಸಾಧನೆ ನಮ್ಮೆಲ್ಲರ ಕಣ್ಣುಳನ್ನು ತೆರೆಸಿದೆ.
ಇಂಥ ಪ್ರತಿಭೆಗಳಿಗೆ ಸದಾ ಬೆಂಬಲ ಕೊಡುತ್ತಾ ಬಂದಿರುವ ಬೃಹತ್ ಉದ್ಯಮಿ ಆನಂದ್ ಮಹೀಂದ್ರಾ, “ಆತನ ದೇಹ ದಾರ್ಢ್ಯ ನೋಡಿದರೇ ಸಾಕು, ಈತ ಅದ್ಭುತವಾದ ಅಥ್ಲೆಟಿಕ್ಸ್ ಸಾಧನೆ ಮಾಡಬಲ್ಲ ಎನಿಸುತ್ತದೆ. ಈಗ ಕಿರಣ್ ರಿಜಿಜು ಆತನಿಗೆ 100 ಮೀಟರ್ ಓಟಕ್ಕೆ ತರಬೇತಿಗೆ ವ್ಯವಸ್ಥೆ ಮಾಡಬೇಕು, ಇಲ್ಲ ಕಂಬಳವನ್ನು ಒಲಿಂಪಿಕ್ ಕ್ರೀಡೆಯನ್ನಾಗಿ ಮಾಡಬೇಕು. ಹೇಗಾದರೂ ಸರಿ, ಶ್ರೀನಿವಾಸನಿಗೆ ಚಿನ್ನದ ಪದಕ ಬೇಕು,” ಎಂದು ಟ್ವೀಟ್ ಮಾಡಿದ್ದಾರೆ.
ಇಷ್ಟು ದೊಡ್ಡ ಮಟ್ಟದಲ್ಲಿ senstation ಆಗಿರುವ ಸೀನುವಿನ ಸುದ್ದಿ ಕೇಂದ್ರ ಸರ್ಕಾರ ಅಂಗಳವನ್ನೂ ಮುಟ್ಟಿದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, “ಭಾರತೀಯ ಕ್ರೀಡಾ ಪ್ರಾಧಿಕಾರದ ಅಗ್ರ ಕೋಚ್‌ಗಳ ಮುಂದೆ ಶ್ರೀನಿವಾಸ್ ಗೌಡರನ್ನು ಟ್ರಯಲ್‌ಗಾಗಿ ಕರೆಯಲು ಇಚ್ಛಿಸುತ್ತೇನೆ. ಮಾನವದ ಉತ್ಕೃಷ್ಟ ಮಟ್ಟದ ಶಕ್ತಿ ಸಾಮರ್ಥ್ಯಗಳನ್ನೂ ಮೀರುವ ಸಾಧನೆಯನ್ನು ಬೇಡುವ ಒಲಿಂಪಿಕ್ಸ್ ಸ್ಟಾಂಡರ್ಡ್‌ಗಳ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿದೆ. ಭಾರತದಲ್ಲಿರುವ ಯಾವುದೇ ಪ್ರತಿಭೆಯೂ ಸಹ ಬೆಳಕಿಗೆ ಬಾರದೇ ಹೋಗಬಾರದು ಎಂಬುದನ್ನು ಖಾತ್ರಿ ಪಡಿಸುತ್ತೇನೆ,” ಎಂದು ತಿಳಿಸಿದ್ದಾರೆ.
ಏನೇ ಇರಲಿ, ಸೀನುವಿನಿಂದಾಗಿ ಈ ಕ್ರೀಡೆ ಇಂದು ದೇಶಾದ್ಯಂತ ಸುದ್ದಿ ಮಾಡಿದೆ. ಅದಾಗಲೇ, ಕಂಬಳವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿಕೊಂಡು ಬಂದಿರುವ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದ್ದು, ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸ್ಪಾನ್ಸರ್‌ಗಳು ಸಿಕ್ಕಿ, ಈ ಕ್ರೀಡೆಗೂ ಪ್ರೀಮಿಯರ್ ಕಬಡ್ಡಿ ಲೀಗ್ ಮಾದರಿಯಲ್ಲಿ ಹೊಸ ಮೇಕ್‌ಓವರ್ ಸಿಕ್ಕರೆ ಹೇಗೆ ಎನ್ನುವ ಕಲ್ಪನೆಯೇ ಅದೆಷ್ಟು ಚಂದ ಅಲ್ಲವೇ? ಇದೇ ಕಲ್ಪನೇ ನನ್ನಂತೆಯೇ ಅನೇಕ ಮಂದಿಗೆ ಬಂದಿರಲಿಕ್ಕೂ ಸಾಕು.
ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುವ ಸೀನು, ವಾರಾಂತ್ಯಗಳಲ್ಲಿ ಕಂಬಳದ ಗದ್ದೆಯಲ್ಲಿ ಓಡಿಕೊಂಡು ಬಂದಿದ್ದಾರೆ. ಕಂಬಳ ಗದ್ದೆ ಹಾಗೂ ಕೋಣಗಳ ಮೇಲಿನ ಪ್ರೀತಿ ಅಲ್ಲಿನ ಗಾಳಿಯಲ್ಲೇ ಇರುವ ಕಾರಣ, ಸೀನುಗೆ ಈ ಕ್ರೀಡೆಯ ಮೇಲಿನ ಸೆಳೆತ ಮೂಡಿದ್ದು ಅಚ್ಚರಿಯಿಲ್ಲ.
ಒಲಿಂಪಿಕ್ ಟ್ರ‍್ಯಾಕ್‌ನಲ್ಲಿ ಕೇವಲ 10 ಸೆಕೆಂಡ್‌ಗಳಲ್ಲಿ ಮುಗಿದುಬಿಡುವ 100ಮೀಟರ್ ರನ್ನಿಂಗ್ ಹಿಂದೆ ವರ್ಷಗಳಷ್ಟು ಪರಿಶ್ರಮ, ಬಿಗಿಯಾದ ಪಥ್ಯ, ಸ್ಪಾನ್ಸರ್‌ಗಳು ಕೊಡಿಸುವ ದುಬಾರಿ sports grearಗಳು, ವೃತ್ತಿಪರ ಕೋಚ್‌ಗಳಿಂದ ಟ್ರೇನಿಂಗ್ ಎಲ್ಲವನ್ನೂ ಪಡೆದುಕೊಂಡು, ಉತ್ಸಾಹಭರಿತವಾದ ಬಾಲ್ಯ ಹಾಗೂ ಹದಿಹರೆಯದ ಅಷ್ಟೂ ದಿನಗಳನ್ನು ತಂತಮ್ಮ ಜೀವನ ಪರಮ ಧ್ಯೇಯಕ್ಕೆಂದು ಮುಡಿಪಾಗಿಡುವ ಉಸೇನ್ ಬೋಲ್ಟ್‌ರಂಧ ಅಪ್ರತಿಮ ಸಾಧಕರ ಸಾಧನೆಗೆ ಈ ಹೋಲಿಕೆ ಅದೆಷ್ಟರ ಮಟ್ಟಿಗೆ ಸರಿಯೋ ತಪ್ಪೋ ಗೊತ್ತಿಲ್ಲ.
ಆದರೆ, ಯಾವುದೇ ಜಿಮ್ ಸೆಶನ್‌ಗಳಿಲ್ಲದೇ, ಡಯಟ್ ಪ್ಲಾನ್‌ಗಳಿಲ್ಲದೇ, ಕೇವಲ ಆಟದ ಮೇಲಿನ ಪ್ರೀತಿಗಾಗಿ ಸಾಂಪ್ರದಾಯಿಕವಾದ ರೀತಿ ನೀತಿಗಳ ಪಾಲನೆ ಹಾಗೂ ಮಣ್ಣಿನ ಮಕ್ಕಳ ಆ humbleness & rootednessಗಳ ಅಪರಾವತಾರದಂತಿರುವ ಶ್ರೀನಿವಾಸ್‌ರಂಥ ಯುವಕರ ಸಾಧನೆಗಳು ಖಂಡಿತಾ ಈ ಮಟ್ಟದ ಸುದ್ದಿಯಾಗಲು ಅರ್ಹ. ಇಷ್ಟೇ ಅಲ್ಲ, ಕಂಬಳ ಗದ್ದೆಯಲ್ಲಿ ಸೀನು ಸಿಕ್ಕಂತೆ; ತಮಿಳು ನಾಡಿನ ಜಲ್ಲಿಕಟ್ಟಿನ ಅಖಾಡಗಳಲ್ಲಿ ವಿಶ್ವ ವಿಜೇತ ಕುಸ್ತಿ ಪಟುವೂ ಸಿಗಬಹುದು, ದೊಂಬರಾಟಗಳನ್ನು ಮಾಡುತ್ತಾ ಊರೂರು ಅಲೆಯುವ ಕುಟುಂಬಗಳ ಪೈಕಿ ಒಳ್ಳೆಯ ಜಿಮ್ನಾಸ್ಟ್‌ಗಳೂ ಸಿಗಬಹುದು, ಯಾರಿಗ್ಗೊತ್ತು.
ಕಂಬಳ ಗದ್ದೆಯಲ್ಲಿ ಓಡಲು ಖುದ್ದು ತಮ್ಮದೇ ಅಂಗ ಸೌಷ್ಠವವನ್ನು ಎಷ್ಟರ ಮಟ್ಟಿಗೆ ಆರೈಕೆ ಮಾಡಿಕೊಳ್ಳುತ್ತಾರೋ, ಬಹುಶಃ ಅದಕ್ಕಿಂತ ಹೆಚ್ಚಾಗಿಯೇ ಈ ಕೋಣಗಳನ್ನು ಸಾಕಿ ಸಲಹುತ್ತಾರೆ. ತುಳುವರು ಪೂಜಿಸುವ ಪ್ರಮುಖ ದೈವಗಳಲ್ಲಿ ಕೊಣದ ಅವತಾರವಾದ ಮಹಿಷಂಡಾಯ ಕೂಡಾ ಒಬ್ಬ. ಗದ್ದೆಯಲ್ಲಿ ಓಟ ಆರಂಭಿಸುವ ಮುನ್ನ ಕೋಣಗಳಿಗೆ ಸಿಂಗರಿಸಿ, ಆ ನೇಗಿಲುಗಳನ್ನೂ ಪೂಜಿಸಿ, ಭಕ್ತಿಪರವಶರಾಗಿ ಕಣಕ್ಕೆ ಇಳಿಯುತ್ತಾರೆ. ಇಂಥ ಶ್ರೀಮಂತವಾದ ಸಂಸ್ಕೃತಿಯನ್ನು ಪ್ರತಿಧ್ವನಿಸುವ ಪಾರಂಪರಿಕ ಕ್ರೀಡೆಯ ಬಗ್ಗೆ ಇಂದು ಇಡೀ ದೇಶವೇ ಬಹಳ ಆಸಕ್ತಿಯಿಂದ ತಿಳಿದುಕೊಂಡಿರುವುದು ನಿಜಕ್ಕೂ ಸ್ವಾಗತಾರ್ಹವಾದ ಬೆಳವಣಿಗೆ. ಸೀನುವಿನ ಈ ಸಾಧನೆ ದೇಶದ ಇತರ ಗ್ರಾಮೀಣ ಕ್ರೀಡೆಗಳೂ ಮುನ್ನೆಲೆಗೆ ಬರಲು ಸ್ಫೂರ್ತಿಯಾಗಲಿ. ಹೇಗಿದ್ದರೂ, ಇಂಥ ಒಳ್ಳೆಯ ಸಾಧನೆಗಳನ್ನು ಕ್ಷಣಾರ್ಧದಲ್ಲಿ ಫೇಮಸ್ ಮಾಡಲು ಸಾಮಾಜಿಕ ಜಾಲತಾಣಗಳು ಇದ್ದೇ ಇವೆಯಲ್ಲ?