ಮೊದಲ ಬಾರಿ ವಿಧಾನ ಪರಿಷತ್ ಪ್ರವೇಶ ಮಾಡಿ ಸಾರ್ವಜನಿಕರಿಗೆ ಅರ್ಥಪೂರ್ಣ ಸೇವೆ ಮಾಡುವ ಹುಮ್ಮಸ್ಸಿನಲ್ಲಿರುವ ಯುವ ಶಾಸಕ, ಸಾಮಾಜಿಕ ಹೊಣೆಗಾರಿಕೆ ಅರಿತು ಜವಾಬ್ದಾರಿ ನಿರ್ವಹಿಸಲು ತಿಳಿದಿರುವ ಪತ್ರಕರ್ತರ ತಂಡ, ಅಧಿಕಾರಿಗಳ ಮಾತಿಗಿಂತ ಸಾರ್ವಜನಿಕರ ಮಾತಿನಲ್ಲಿ ವಿಶ್ವಾಸವಿರುವ ಓರ್ವ ಮಂತ್ರಿ… ಇಷ್ಟೂ ಮಂದಿ ಒಟ್ಟಿಗೆ ಬಂದರೆ ಏನು ಮಾಡಬಹುದು?
ಇಂತಹ ವಿಲಕ್ಷಣ ಕಾಕತಾಳೀಯ ನಡೆದದ್ದು ಕರ್ನಾಟಕದಲ್ಲಿ, ಎಂಬತ್ತರ ದಶಕದಲ್ಲಿ. ಸಂದರ್ಭ, ಆಗ ಬಂದಿದ್ದ ಬರ. ಮಳೆ ಆಧಾರಿತ ಪ್ರದೇಶದಲ್ಲಿ ಫಸಲು ಕೈಕೊಟ್ಟು ಜನರು ಕೆಲಸವಿಲ್ಲದೆ ಗುಳೆ ಹೋಗುತ್ತಿರುವ ದೃಶ್ಯ ಒಂದು ಕಡೆಗಿದ್ದರೆ, ಮೇವು ಮತ್ತು ಕುಡಿಯುವ ನೀರಿನ ಅಭಾವದಿಂದ ದನಕರುಗಳನ್ನು ಸಾಕಲಾರದೆ, ಕೈಗೆ ಬಂದಷ್ಟು ಬೆಲೆಯಲ್ಲಿ ರೈತರು ತಮ್ಮ ದನಗಳನ್ನು ಮಾರುವ, ಕಸಾಯಿಖಾನೆಗಳತ್ತ ತಳ್ಳುತ್ತಿರುವ ದೃಶ್ಯ ಇನ್ನೊಂದು ಕಡೆ.
ಆಗ ಇವರೆಲ್ಲರೂ ಆಕಸ್ಮಿಕವಾಗಿ ಒಟ್ಟುಗೂಡಿದ್ದರಿಂದ ಬರ ನಿರ್ವಹಣೆಯ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವೇ ಶುರುವಾಯಿತು. ಮೊದಲ ಬಾರಿ ಬರಗಾಲದಲ್ಲಿ ದನಕರುಗಳ ಯೋಗಕ್ಷೇಮ ನೋಡುವ ವ್ಯವಸ್ಥೆಯನ್ನೂ ಬರ ನಿರ್ವಹಣೆ ನೀತಿ ನಿಯಮಗಳಲ್ಲಿ ಹೊಸದಾಗಿ ಸೇರಿಸಲಾಯಿತು. ಇದರ ಫಲವಾಗಿ, ನೆರಳು, ನೀರು, ಮೇವಿನ ವ್ಯವಸ್ಥೆ ಇರುವಲ್ಲಿ ಪಶುವೈದ್ಯಕೀಯ ಸೌಲಭ್ಯ ಒದಗಿಸಿ, ಗೋಶಾಲೆಗಳನ್ನು ಶುರು ಮಾಡಬೇಕು ಮತ್ತು ಅವುಗಳನ್ನು ಪರಿಸ್ಥಿತಿ ಸುಧಾರಿಸುವವರೆಗೂ ನಡೆಸಬೇಕು ಎಂಬ ವ್ಯವಸ್ಥೆ ಜಾರಿಗೆ ಬಂದಿದ್ದು ಇಂದಿನ ತನಕ ನಡೆದಿದೆ. ಮಾಮೂಲಾಗಿ ಇಂತಹ ಪರಿಸ್ಥಿತಿಯಲ್ಲಿ, ನಡೆಯಲೇಬೇಕಾದ ಕೆಲಸಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯ ನಿರ್ದೇಶನ ಕೊಡುವಷ್ಟರ ಮಟ್ಟಿಗೆ ಪರಿಸ್ಥಿತಿಯನ್ನು ರಾಜ್ಯ ಸರಕಾರ ತಂದಿದ್ದೇಕೆ? ಲೋಕಸಭೆ ಚುನಾವಣೆಯ ಗಡಿಬಿಡಿಯಲ್ಲಿ ರಾಜ್ಯ ಸರಕಾರ ತನ್ನ ಜವಾಬ್ದಾರಿ ನಿರ್ವಹಿಸಲು ಮರೆಯಿತೇ?
ಇದಕ್ಕೆಲ್ಲ ಮೂಲ ಕಾರಣ ಆಗ ನಡೆದ ಒಂದು ಘಟನೆ, ಪರಿಸ್ಥಿತಿಯ ಭೀಕರತೆಗೆ ಕನ್ನಡಿ ಹಿಡಿದಂತೆ ಹುಬ್ಬಳ್ಳಿ-ಗದಗ ರಸ್ತೆಯಲ್ಲಿ ನಡೆಯಿತು. ಎತ್ತು ಮಾರಲು ಹುಬ್ಬಳ್ಳಿಯ ಮಾರುಕಟ್ಟೆಗೆ ಬಂದ ರೈತ ಸರಿಯಾದ ಬೆಲೆ ಸಿಗದೆ ತನ್ನೂರಿಗೆ ವಾಪಸು ನಡೆದಿದ್ದ. ದಾರಿಯಲ್ಲಿ ಅವನ ಎತ್ತು ಮೇವಿನ ಅಭಾವದಿಂದ ಅಸುನೀಗಿತು. ರೈತ ತಲೆಯ ಮೇಲೆ ಕೈ ಇಟ್ಟುಕೊಂಡು ಕುಳಿತಿದ್ದ. ಈ ದೃಶ್ಯವು ಅಕಸ್ಮಾತ್ತಾಗಿ ಅದೇ ದಾರಿಯಲ್ಲಿ ಹೋಗುತ್ತಿದ್ದ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲರ ಕಣ್ಣಿಗೆ ಬಿತ್ತು. ಅವರು ಆಗಷ್ಟೇ ವಿಧಾನ ಪರಿಷತ್ತಿನ ನೂತನ ಸದಸ್ಯರಾಗಿದ್ದರು. ರಾಮಕೃಷ್ಣ ಹೆಗಡೆಯವರ ಜನತಾದಳ ಸರಕಾರ ಅಧಿಕಾರದಲ್ಲಿ ಇತ್ತು. ಧಾರವಾಡ ಜಿಲ್ಲೆಯವರೇ ಆದ ಎಸ್ ಆರ್ ಬೊಮ್ಮಾಯಿಯವರು ಕಂದಾಯ ಮಂತ್ರಿಗಳು. ಬರ ನಿರ್ವಹಣೆಯ ಜವಾಬ್ದಾರಿ ಅವರ ಹೆಗಲಿಗಿತ್ತು.
ಶಾಸಕರಿಂದ ಈ ಸುದ್ದಿ ತಿಳಿದು ಅಲ್ಲಿಗೆ ಧಾವಿಸಿ ಬಂದ ಹುಬ್ಬಳ್ಳಿಯ ಪತ್ರಕರ್ತ ತಂಡಕ್ಕೆ ರೈತ ಹೇಳಿದ ವ್ಯಥೆಯ ಕತೆ ಕರುಳು ಕಿವುಚುವಂತಹುದಾಗಿತ್ತು ಹಾಗೂ ಅದು ಸಚಿತ್ರವಾಗಿ ಪ್ರಕಟವಾಯಿತು. ಆ ಕತೆ ಆ ಒಬ್ಬ ರೈತನದ್ದಾಗಿರಲಿಲ್ಲ. ಅದೊಂದು ಉದಾಹರಣೆ ಮಾತ್ರ. ಆದರೆ, ಜಿಲ್ಲಾ ಆಡಳಿತ ಅದೊಂದು ಕಟ್ಟು ಕತೆ ಎಂದು ಸರಕಾರಕ್ಕೆ ವರದಿ ಕೊಟ್ಟು ಕೈ ತೊಳೆದುಕೊಂಡಿತು. ಏಕೆಂದರೆ, ರೈತ ಹೇಳಿದ್ದೆಲ್ಲವೂ ಬಾಯಿಮಾತಿನಲ್ಲಿ ಇತ್ತೇ ಹೊರತು ಅದನ್ನು ಸಾಬೀತು ಮಾಡುವ ಯಾವ ದಾಖಲೆಗಳೂ ಪತ್ರಕರ್ತರ ಬಳಿಯೂ ಇರಲಿಲ್ಲ.
ಪರಿಸ್ಥಿತಿಯನ್ನುಇನ್ನಷ್ಟು ಕೂಲಂಕಷವಾಗಿ ಅಧ್ಯಯನ ಮಾಡಲು ಶಾಸಕರು ಮತ್ತು ಪತ್ರಕರ್ತರ ತಂಡ ಜಿಲ್ಲೆಯ ದನದ ಮಾರುಕಟ್ಟೆಗಳಿಗೆ ಭೇಟಿ ಕೊಟ್ಟಿತು. ದನಗಳು ಅತಿ ಕಡಿಮೆ ಬೆಲೆಯಲ್ಲಿ ಮಾರುತ್ತಿರುವ ವರದಿಗಳು ನಿಜ. ಆದರೆ, ಅದನ್ನು ಸಿದ್ಧ ಮಾಡುವ ಯಾವ ಅಧಿಕೃತ ದಾಖಲೆಗಳೂ ಇರಲಿಲ್ಲ. ಕಾರಣ ಇಷ್ಟೆ; ಮಾರುಕಟ್ಟೆಯಲ್ಲಿ ಮಾರಾಟವಾಗುವ ಯಾವುದೇ ವಸ್ತುಗಳಿಗೂ ಮಾರುಕಟ್ಟೆ ಸೆಸ್ ಕೊಡಬೇಕು. ಅದರಲ್ಲಿ ಮಾರಾಟದ ವಸ್ತುವಿನ ಬೆಲೆ ನಮೂದಿಸಿರಬೇಕು. ಸೆಸ್ ತಪ್ಪಿಸುವ ದೃಷ್ಟಿಯಿಂದ ಎಲ್ಲ ದನಕರುಗಳನ್ನು ಮಾರುಕಟ್ಟೆ ಪ್ರದೇಶದ ಹೊರಗೆ ಮಾರಾಟ ಮಾಡಲಾಗುತ್ತಿತ್ತು. ಹಾಗಾಗಿ, ಮಾರಾಟದ ಯಾವ ಅಧಿಕೃತ ದಾಖಲೆಗಳು ಇರುತ್ತಲೇ ಇರಲಿಲ್ಲ.
ರೋಣದ ಒಬ್ಬ ಗೃಹಸ್ಥರು ತಾವು ಬಡಕಲು ದನಗಳನ್ನು ಸೆಸ್ ಕೊಟ್ಟು ಖರೀದಿಸಿ, ಅವುಗಳನ್ನು ತಾವು ತೆರೆಯುವ ಗೋಶಾಲೆಗಳಲ್ಲಿ ಪರಿಸ್ಥಿತಿ ಸುಧಾರಿಸುವ ತನಕ ಸಂರಕ್ಷಿಸಿ, ಸಂಬಂಧಪಟ್ಟ ರೈತರಿಗೆ ಮರಳಿ ತಿರುಗಿಸುವುದಾಗಿ ಹೇಳಿ, ಅದರಂತೆ ಮಾಡಿದರು. ಅದು ಕಷ್ಟಕಾಲದಲ್ಲಿ ಕೈಗೆ ಸಿಕ್ಕ ದನಕರುಗಳನ್ನು ಮಾರಾಟ ಮಾಡುವುದಕ್ಕೆ ಸಿಕ್ಕ ಮೊದಲ ದಾಖಲೆ.
ವಿಷಯ ಇಷ್ಟಕ್ಕೇ ಮುಗಿಯಲಿಲ್ಲ. ಕಸಾಯಿಖಾನೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳು ಬರುತ್ತಿವೆ ಎನ್ನುವ ವರದಿಗಳು ಬರುತ್ತಿದ್ದವು. ಕಸಾಯಿಖಾನೆಯವರಂತೂ ಬಾಯಿ ಬಿಡುತ್ತಿರಲಿಲ್ಲ. ಕೆಲ ಸಾಂದರ್ಭಿಕ ಸಾಕ್ಷ್ಯಗಳ ಮೂಲಕ ಇದನ್ನು ಸಿದ್ಧ ಮಾಡಲಾಯಿತು.
ಈ ಸುದ್ದಿಗಳು ವ್ಯಾಪಕವಾಗಿ ಮುದ್ರಣ ಮಾದ್ಯಮದಲ್ಲಿ ಪ್ರಕಟವಾದ ಮೇಲೆ ಒಂದು ತರಹದ ಸಂಚಲನವನ್ನೇ ಸೃಷ್ಟಿಸಿದವು (ಅಂದಿನ್ನೂ ವಿದ್ಯುನ್ಮಾನ ಮಾಧ್ಯಮ ಬಂದಿರಲಿಲ್ಲ). ಕಷ್ಟದಲ್ಲಿದ್ದ ದನಕರುಗಳ ರಕ್ಷಣೆಗೆ ಸರಕಾರ ಧಾವಿಸಬೇಕೆಂಬ ಕೂಗು ಹೆಚ್ಚಾಗತೊಡಗಿತು. ರೈತರಿಗೆ ಸಹಾಯ ಮಾಡುವುದಕ್ಕಾಗಿ ಗೋಶಾಲೆಗಳನ್ನು ಪ್ರಾರಂಭಿಸಬೇಕು, ದನಕರುಗಳನ್ನು ಕಸಾಯಿಖಾನೆಗಳಿಗೆ ಸಾಗಿಸುವುದನ್ನು ತಡೆಯಬೇಕು ಎಂಬ ವ್ಯಾಪಕವಾದ ಕೂಗು ಎಲ್ಲ ಕಡೆಯಿಂದ ಕೇಳಿಸಲು ಶುರುವಾಯಿತು.
“ಕೇಂದ್ರ ಸರಕಾರ ಬರಗಾಲ ನಿರ್ವಹಣೆಯಲ್ಲಿ ಗೋಶಾಲೆ ತೆರೆಯಲಿ, ಬಿಡಲಿ, ರಾಜ್ಯ ಸರಕಾರ ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಲಿದೆ,” ಎಂದು ಕಂದಾಯ ಮಂತ್ರಿ ಎಸ್ ಆರ್ ಬೊಮ್ಮಾಯಿ ಘೋಷಿಸಿದರು. ಕೆಲ ತಿಂಗಳ ನಂತರ ಹೊಸದಿಲ್ಲಿಯಲ್ಲಿ ನಡೆದ ಕಂದಾಯ ಮಂತ್ರಿಗಳ ಸಭೆಯಲ್ಲಿ ಈ ವಿಷಯವನ್ನು ಎತ್ತಿ, ಬರ ನಿರ್ವಹಣೆ ನೀತಿ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಿ, ಗೋಶಾಲೆಗಳನ್ನು ತೆರೆಯುವುದು ಬರನಿರ್ವಹಣೆಯ ಕಾರ್ಯಗಳಲ್ಲಿ ಒಂದು ಎಂದು ಮಾಡಿದ್ದರಿಂದ ಈ ಕಾರ್ಯಕ್ರಮಕ್ಕೆ ಕೇಂದ್ರದ ಸಹಾಯ ದೊರಕುವಂತಾಯಿತು.
ಇದಲ್ಲದೆ, ಬರಪೀಡಿತ ಪ್ರದೇಶದಲ್ಲಿದ್ದ ರೈತರಿಗಾಗಿ ನಿರೂಪಿಸಿದ ಉದ್ಯೋಗ ಭರವಸೆ ಯೋಜನೆಯನ್ವಯ, ಕನಿಷ್ಠ ನೂರು ದಿನಗಳ ಉದ್ಯೋಗ ಕೊಡುವ ಸರಕಾರದ ಯೋಜನೆಯಲ್ಲಿದ್ದ ಅನೇಕ ಲೋಪದೋಷಗಳನ್ನು ಶಾಸಕರ ಮೂಲಕ ತಾಲೂಕು ಮತ್ತು ಗ್ರಾಮ ಪಂಚಾಯತಿಗಳಿಗೆ ಹೋಗಿ ಸಂಬಂಧಿಸಿದವರನ್ನು ಮಾತನಾಡಿಸಿ, ಹೊರಗೆ ತರಲಾಯಿತು. ಶಾಸಕರಿಲ್ಲದೆ ಪತ್ರಕರ್ತರು ನೇರವಾಗಿ ಹೋಗಿದ್ದರೆ ನಿಜ ಸ್ಥಿತಿ ಹೊರಬರುತ್ತಿರಲಿಲ್ಲ. ಏಕೆಂದರೆ, ಶಾಸಕರ ಮುಂದೆ ಸುಳ್ಳು ಹೇಳುವ ಧೈರ್ಯ ಕೆಳಮಟ್ಟದ ಅಧಿಕಾರಿಗಳಿಗೆ ಇರಲಿಲ್ಲ.
ಮಾಧ್ಯಮದವರೊಂದಿಗೆ ಹಾರ್ದಿಕ ಸಂಬಂಧ ಹೊಂದಿದ್ದ ಬೊಮ್ಮಾಯಿಯವರು, ಅದನ್ನು ದುರುಪಯೋಗ ಮಾಡಿಕೊಳ್ಳದೆ, ಪತ್ರಿಕೆಯಲ್ಲಿ ಬಂದ ಎಲ್ಲ ವರದಿಗಳನ್ನು ಆಧರಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಂಡು, ಅನುಷ್ಠಾನದಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿ ಮಾಡಿದರು. “ನಮಗೆ ಪತ್ರಿಕೆಯಲ್ಲಿ ಬರುತ್ತಿರುವ ವರದಿಗಳಿಗೆ ಸಮಜಾಯಿಷಿ ಕೊಡುವುದೇ ದೊಡ್ಡ ಕೆಲಸವಾಗಿದೆ. ದಯವಿಟ್ಟು ಪತ್ರಿಕೆಯವರು ನಮ್ಮ ಬೆನ್ನು ಹತ್ತದಂತೆ ಮಾಡಿ,” ಎಂದು ಜಿಲ್ಲಾ ಆಡಳಿತ ಗೋಗರೆದಿದ್ದರೂ, ಬೊಮ್ಮಾಯಿಯವರು ಪತಕರ್ತರಿಗೆ ಒಂದು ಮಾತೂ ಹೇಳಲಿಲ್ಲ. ಬದಲಾಗಿ, ಮಾಧ್ಯಮಗಳಲ್ಲಿ ಬಂದ ವರದಿಗಳ ನಕಲು ಪ್ರತಿಗಳನ್ನು ರಾಜ್ಯ ಸರಕಾರ, ಕೇಂದ್ರ ಸರಕಾರಕ್ಕೆ ಹೆಚ್ಚಿನ ನೆರವು ಕೋರಿ ಸಲ್ಲಿಸಿದ ಮನವಿಗೆ ಲಗತ್ತಿಸಿ, ಇನ್ನೂ ಹೆಚ್ಚಿನ ಸಹಾಯ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾದರು. ‘ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತನೆ’ ಎಂಬ ಪುಸ್ತಕವನ್ನೂ ಹೊರತಂದರು.
ಮುಂದಿನ ಬಾರಿ ಬರ ಬಂದಾಗ, ಪರಿಸ್ಥಿತಿ ಬದಲಾಗಿತ್ತು. ಪಾಟೀಲರ ಪಕ್ಷ ಅಧಿಕಾರಕ್ಕೆ ಬಂದು ಅವರು ಮಂತ್ರಿಗಳಾಗಿದ್ದರು. ಬರ ನಿರ್ವಹಣೆ ಅವರ ಪರಿವಿಗೆ ಬರಲಿಲ್ಲ. ಬೊಮ್ಮಾಯಿಯವರು ಮಂತ್ರಿಗಳಾಗಿರಲಿಲ್ಲ. ಪತ್ರಕರ್ತರು ಅವರೇ ಇದ್ದರು. ಆದರೆ, ಅವರಿಗೆ ಸೂಕ್ತ ಸಹಾಯ ಮಾಡುವ ಶಾಸಕ ಮತ್ತು ಮಂತ್ರಿಗಳು ಇರಲಿಲ್ಲ.
ಅಂಕಣಕಾರರು ಹಿರಿಯ ಪತ್ರಕರ್ತರು