ಸಣ್ಣ ಪುಟ್ಟ ಸಾಲ ಮಾಡಿ, ಹೊಟ್ಟೆಗಿಲ್ಲದ ರೈತರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಸಾವಿರಾರು ಕೋಟಿ. ಆಸ್ತಿಯಿದ್ದವರೂ ಅದೇ ದಾರಿ ಹಿಡಿಯುತ್ತಾರೆ ಏಕೆ? ಕಾಫಿ ಕಿಂಗ್, ಲಕ್ಷಾಂತರ ಕುಟುಂಬಗಳ ಆಶ್ರಯದಾತ ಸಿದ್ಧಾರ್ಥ್ ಅವರ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಜನಸಾಮಾನ್ಯರು ಇಂಥ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಕೇಳುವುದು ಸಹಜವೂ ಹೌದು.
ಕೇವಲ ಹೊಟ್ಟೆಗಿಲ್ಲದವರು, ಕಡು ಬಡವರು, ಸಣ್ಣ ಪುಟ್ಟ ಸಾಲದ ಸುಳಿಗೆ ಸಿಲುಕಿದವರು ಮಾತ್ರವೇ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ ಎಂದು ತಿಳಿದಿದ್ದರೆ ಅದು ತಪ್ಪು. ಎಲ್ಲವೂ ಇದ್ದೂ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಕುಳಿತು ತಿಂದರೂ ತೀರದಷ್ಟು ಆಸ್ತಿ, ಸಂಪತ್ತು ಮಾಡಿಟ್ಟವರೂ ಅದೇ ದಾರಿ ತುಳಿದ ನೂರಾರು ಪ್ರಕರಣಗಳಿವೆ.
ಆತ್ಮಹತ್ಯೆ ಎನ್ನುವುದು ಒಂದು ಮಾನಸಿಕ ಒತ್ತಡವನ್ನು ತಡೆಯಲಾಗದೇ ತುಳಿದ ಒಂದು ಹೆಜ್ಜೆ. ಒಬ್ಬ ವ್ಯಕ್ತಿಗೆ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಆ ದುಡುಕಿನ ಕ್ರಮ ಅವಲಂಬಿಸಿದೆ. ಹತ್ತು ಕಿಲೊ ಭಾರ ಹೊರುವ ಸಾಮರ್ಥ್ಯ ಹೊಂದಿರುವವನಿಗೆ ಐವತ್ತು ಕಿಲೊ ಹೊರಿಸಿದರೆ ಏನಾಗಬಹುದು? ಅವನು ಸಂಪೂರ್ಣವಾಗಿ ಕುಸಿದೇ ಕುಸಿಯುತ್ತಾನೆ. ಅದರಲ್ಲಿ ಎರಡು ಮಾತೇ ಇಲ್ಲ. ತಾನು ಎಷ್ಟು ಭಾರ ಹೊರಬಹುದೆಂಬುದನ್ನು ಅಂದಾಜು ಮಾಡುವಲ್ಲಿ ಆ ವ್ಯಕ್ತಿ ವಿಫಲನಾದಾಗ ಸಮಸ್ಯೆಗಳು ಆರಂಭವಾಗುತ್ತವೆ.
ರೈತರ ಆತ್ಮಹತ್ಯೆಗಳಿಗೂ ದೊಡ್ಡ ದೊಡ್ಡ ಉದ್ಯಮಿಗಳ ಆತ್ಮಹತ್ಯೆಗಳಿಗೂ ವ್ಯತ್ಯಾಸವಿದೆ. ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಬಾರದಾಗ ಅವನು ಸಾಲದ ಸುಳಿಗೆ ಸಿಲುಕುವುದು ನಿಶ್ಚಿತ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಕ್ಕರೇನೇ ಅವನು ತನ್ನ ಸಾಲ ತೀರಿಸಬಲ್ಲನು. ಸಿಗದಿದ್ದರೆ ಇಡೀ ವರ್ಷ ದುಡಿದದ್ದು ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆಯೇ.
ಒಬ್ಬ ಉದ್ದಿಮೆದಾರ ತನ್ನ ಉದ್ಯಮಗಳ ಸಾಮ್ರಾಜ್ಯವನ್ನು ವಿಸ್ತರಿಸುತ್ತಲೇ ಹೋಗುತ್ತಾನೆ. ಸಾವಿರಾರು ದುಡಿಯುವ ಕೈಗಳಿಗೆ ಉದ್ಯೋಗ ಕೊಡುತ್ತಾನೆ. ಅವನ ಉದ್ಯಮಗಳ ಬೆಳವಣಿಗೆಗೆ ಸಾಲ ಕೊಡಲು ಹಣಕಾಸು ಸಂಸ್ಥೆಗಳು ಅವನ ಮನೆಯೆದುರು ಸಾಲುಗಟ್ಟಿ ನಿಲ್ಲುತ್ತಾರೆ. ಉದ್ಯಮಗಳು ಪ್ರಗತಿಯ ಹಾದಿಯಲ್ಲಿರುವಾಗ ಈ ಸಾಲದ ಪ್ರವಾಹ ನಡೆದೇ ಇರುತ್ತದೆ. ಒಮ್ಮೆ ಉದ್ಯಮಗಳು ಯಾವುದೇ ಕಾರಣದಿಂದಾಗಿ ನೆಲ ಕಚ್ಚತೊಡಗಿದರೆ, ಶೇರುಗಳ ಮೌಲ್ಯ ಕುಸಿಯತೊಡಗಿದರೆ ಸಾಲ ಕೊಟ್ಟ ಸಂಸ್ಥೆಗಳು ಸಾವಕಾಶವಾಗಿ ಉದ್ದಿಮೆದಾರನ ಬಾಗಿಲು ತಟ್ಟುತ್ತವೆ!
ಯಾವುದೇ ಉದ್ಯಮವಿರಲಿ ಏಕ ವ್ಯಕ್ತಿಯ ಸಾಮರ್ಥ್ಯವನ್ನು ಅವಲಂಬಿಸಿದ್ದರೆ ಅದರ ಭವಿಷ್ಯ ಅನಿಶ್ಚಿತತೆಯಿಂದಲೇ ಕೂಡಿರುತ್ತದೆ. ಒಂದು ಕುಟುಂಬವು ಒಬ್ಬನೇ ವ್ಯಕ್ತಿಯನ್ನು ಆಧರಿಸಿದ್ದರೆ (ಅಂಥ ಕುಟುಂಬಗಳ ಸಂಖ್ಯೆಯೇ ಅಧಿಕ), ಮುಖ್ಯಸ್ಥನ ಅಗಲಿಕೆಯ ಪ್ರಸಂಗದಲ್ಲಿ ಇಡೀ ಕುಟುಂಬವೇ ಬೀದಿಗೆ ಬಿದ್ದ ಪ್ರಸಂಗಗಳು ಲಕ್ಷಾಂತರ ಸಂಖ್ಯೆಯಲ್ಲಿ ಕಾಣ ಸಿಗುತ್ತವೆ. ಅದೇ ರೀತಿಯಲ್ಲಿ ಒಬ್ಬ ವ್ಯಕ್ತಿಯನ್ನು ಆಧರಿಸಿದ ಉದ್ದಿಮೆಗಳ ಸ್ಥಿತಿಯೂ ಅದೇ ಆಗಿದೆ.
ಟಾಟಾ, ಬಿರ್ಲಾ ಉದ್ದಿಮೆಗಳಲ್ಲಿ ಯಾರು ಹೋದರು, ಯಾರು ಬಂದರು ಎಂಬುದು ಸಾಮಾನ್ಯರಿಗೆ ಗೊತ್ತೇ ಇಲ್ಲ. ಅವು ನಡೆಯುತ್ತಲೇ ಇರುತ್ತವೆ. ಆದರೆ ಒಬ್ಬ ವ್ಯಕ್ತಿ ಆಧಾರಿತ ಸಂಸ್ಥೆಗಳು ಹಾಗಾಗುವದಿಲ್ಲ.
ಉದ್ದಿಮೆಗಳ ಮೇಲಿನ ಸಾಲದ ಹೊರೆಗಳು ಮೈಮೇಲೆ ಬಿದ್ದಾಗ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ತನಿಖೆಗಳು ಉದ್ದಿಮೆದಾರನ ಮೇಲಿನ ಒತ್ತಡವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸುವುದು ಗೊತ್ತೇ ಇರುವ ಸಂಗತಿಯಾಗಿದೆ. ಕೆಲವು ಸಲ ತಮ್ಮ ಉದ್ದಿಮೆಗಳ ಸಂರಕ್ಷಣೆಗಾಗಿ ರಾಜಕೀಯ ಪಕ್ಷಗಳ, ನಾಯಕರ ಮೊರೆ ಹೋದ ಉದ್ದಿಮೆದಾರರೂ ಇದ್ದಾರೆ. ರಾಜಕೀಯ ನಾಯಕರಿಗೆ ಲೆಕ್ಕವಿಲ್ಲದ ಖಾತೆಯಿಂದ ಹಣ ಸಂದಾಯ ಮಾಡಲು ಹೋಗಿ ಸಿಕ್ಕಿ ಬಿದ್ದ ಉದಾಹರಣೆಗಳೂ ಇವೆ.
ಎಲ್ಲಕ್ಕೂ ಮಿಗಿಲಾಗಿ ನಾವು ಎಷ್ಟು ಪ್ರಮಾಣದಲ್ಲಿ ಮಾನಸಿಕ ಒತ್ತಡವನ್ನು ತಡೆದುಕೊಳ್ಳಬಹುದೆಂಬ ಅಂದಾಜು ಇದ್ದರೆ ಮಾತ್ರ ಸಂಕಷ್ಟ ಸ್ಥಿತಿಯನ್ನು ಎದುರಿಸಲು ಸಾಧ್ಯ. ವಿಜಯ ಮಲ್ಯ ಮತ್ತಿರರು ಭಂಡರಾಗಿದ್ದಾರೆಂದೇ ಏನೂ ಆಗದವರಂತೆ ಇದ್ದಾರೆ. ಕೋರ್ಟು, ಕಚೇರಿ, ಜೈಲು ಹೀಗೆ ಎಲ್ಲದಕ್ಕೂ ತಯಾರಿದ್ದವನು ಮಾತ್ರ ಬದುಕಲು ಸಾಧ್ಯವೆಂಬ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಸೂಕ್ಷ್ಮ, ಸಂವೇದನಾಶೀಲ ಸ್ವಭಾವದವರು ಮಾತ್ರ ಯಾವಾಗ ಏನು ಮಾಡಿಕೊಳ್ಳುತ್ತಾರೆಂದು ಹೇಳಲಿಕ್ಕಾಗದು.
ಸಾಲ, ಸೋಲ ಮಾಡಿದ ರೈತರೆಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಹೇಳಲಾಗದು. ಸಮಾಜದಲ್ಲಿ ಮರ್ಯಾದೆಗೆ ಅಂಜುವವರು, ಸ್ವಾಭಿಮಾನದ ಬದುಕಿಗೆ ಜೋತು ಬಿದ್ದವರು ಆತ್ಮಹತ್ಯೆಯಂತಹ ದುಡುಕಿನ ಕ್ರಮಕ್ಕೆ ಮುಂದಾಗಿದ್ದಾರೆ.
ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಗಂಡನಿಗೆ ಮತ್ತೊಂದು ಹೆಸರೇ ಸಾಲ ಎಂದು ಹೇಳುತ್ತಾರೆ. ಸಾಲ ಮಾಡುವ ಮುನ್ನ ಹತ್ತು ಸಲ ಮತ್ತೆ ಮತ್ತೆ ಯೋಚಿಸಬೇಕು ಎಂಬ ಮಾತಿದೆ. ಬಡ್ಡಿ, ಚಕ್ರಬಡ್ಡಿಗೆ ಬಲಿಯಾಗುವ ಬದಲು ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಬದುಕು ಆರಿಸಿಕೊಂಡರೆ ಒಳ್ಳೆಯದು ಎಂಬ ಬುದ್ಧಿವಾದವನ್ನೂ ಹಿರಿಯರು ಹೇಳುತ್ತಾರೆ.