ರಾಜಕೀಯ ಹೈ ಡ್ರಾಮದ ನಡುವೆ ರಾಜ್ಯ ಪೋಲಿಸರ ಮುಖದಲ್ಲಿ ಮಂದಹಾಸ ಮೂಡಿದೆ. ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ವೇತನ ಪರಿಷ್ಕರಣೆ ಹಾಗೂ ಬಡ್ತಿ ತಾರತಮ್ಯ ನಿವಾರಣೆ ಸೇರಿದಂತೆ ಅನೇಕ ಬೇಡಿಕೆಗಳು ಹಾಗೂ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿಯ ಶಿಫಾರಸ್ಸು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಹಿ ಹಾಕಿದ್ದಾರೆ.
ಔರಾದ್ಕರ್ ಸಮಿತಿ ಶೇಕಡ 30-35ರಷ್ಟು ವೇತನ ಹೆಚ್ಚಳ ಮಾಡಬೇಕೆಂದು ವರದಿಯಲ್ಲಿ ಶಿಫಾರಸು ಮಾಡಿತ್ತು. ಆದರೆ, ಸರ್ಕಾರಕ್ಕೆ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅಭಿಪ್ರಾಯ ಪಟ್ಟ ಸರ್ಕಾರ, ಮೂಲ ವರದಿಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿ, ಶೇಕಡ 30-35ರ ಬದಲಿಗೆ ಶೇಕಡ 12.5ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿಗೆ ನೀಡಿರುವುದರಿಂದ ಪೋಲಿಸ್ ಸಿಬ್ಬಂದಿಗಳು ಅಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಆದೇಶ ಹೊರಡಿಸಿದಂತೆ ನೂತನ ವೇತನ ಆಗಸ್ಟ್ 1ರಿಂದ ಅನ್ವಯವಾಗಲಿದೆ.
ಪರಿಷ್ಕೃತ ವೇತನದ ವಿವರ

ಏನಿದು ರಾಘವೇಂದ್ರ ಔರಾದ್ಕರ್ ವರದಿ?
ಪೊಲೀಸರ ವೇತನ ಪರಿಷ್ಕರಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದಲೂ ಇತ್ತು. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ವೇತನ ತಾರತಮ್ಯ ನಿವಾರಿಸಲು ಅಧ್ಯಯನ ನಡೆಸಿ, ವರದಿ ನೀಡಲು ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಲಾಗಿತ್ತು. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ವೇತನದಲ್ಲಿ ತಾರತಮ್ಯ ಇದೆ. ತೆಲಂಗಾಣ ಮುಂತಾದ ರಾಜ್ಯಗಳಲ್ಲಿ ಎಸ್ಸೈ ಹಾಗೂ ಇನ್ಸಪೆಕ್ಟರ್‌ಗಳ ವೇತನ 50 ರಿಂದ 60 ಸಾವಿರ ವರೆಗೂ ಇದೆ. ಹಾಗೂ ಇಲಾಖೆಯಲ್ಲಿ ಪೇದೆಯಾಗಿ ಸೇರುವವರಿಗೆ 20-30 ವರ್ಷವಾದರೂ ಬಡ್ತಿ ಸಿಗದು. ಮುಖ್ಯಪೇದೆ ಅಥವಾ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಆಗಿ ನಿವೃತ್ತಿಯಾಗುತ್ತಿದ್ದಾರೆ. ಪೊಲೀಸರ ವೇತನ ಶೇ 30 ರಿಂದ 35ರಷ್ಟು ಹೆಚ್ಚಿಸಬೇಕು ಎಂದು ಅಂದಿನ ಗೃಹ ಮಂತ್ರಿಯಾಗಿದ್ದ ಜಿ. ಪರಮೇಶ್ವರ್ ರವರಿಗೆ ವರದಿಯನ್ನು ಸಲ್ಲಿಸಲಾಗಿತ್ತು.
“ಪೊಲೀಸರ ವೇತನ ಕುರಿತು ಸಮಿತಿ ರಚನೆಯಾಗಿ ಹಲವು ಸುತ್ತಿನ ಸುದೀರ್ಘ ಸಭೆಗಳು ನಡೆದಿವೆ. ಬೇರೆ ರಾಜ್ಯಗಳ ಪೊಲೀಸರಿಗೆ ನೀಡುತ್ತಿರುವ ವೇತನ, ಇತರ ಸೌಲಭ್ಯ ಹಾಗೂ ಸರಕಾರದ ಬೇರೆ ಬೇರೆ ಇಲಾಖೆಗಳಲ್ಲಿನ ಸಿಬ್ಬಂದಿಗೆ ಸಿಗುತ್ತಿರುವ ವೇತನ ಪರಿಶೀಲಿಸಿ ವರದಿಯನ್ನು ಸಿದ್ಧಪಡಿಸಿದ್ದೆವು” – ಎಂದು ರಾಘವೇಂದ್ರ ಔರಾದ್ಕರ್ 2016ರಲ್ಲಿ ವರದಿ ಸಲ್ಲಿಸಿದ ಬಳಿಕ ಪ್ರತಿಕ್ರಿಯಿಸಿದ್ದರು.
ರಾಜ್ಯದ ರಕ್ಷಣೆಗಾಗಿ ಹಗಲು ರಾತ್ರಿ ಎಂದು ಗಮನಿಸದೆ ಶ್ರಮಿಸುತ್ತಿರುವ ಪೋಲಿಸ್ ಸಿಬ್ಬಂದಿಗೆ ಅಗತ್ಯ ಸೌಲಭ್ಯ ಕಲ್ಪಿಸುತ್ತೇನೆ ಎಂದು ಕಳೆದ 6 ತಿಂಗಳಿನಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಲೇ ಇದ್ದರು. ಆದರೆ ಆದೇಶ ಹೊರಡಿಸಿರಲಿಲ್ಲ. ಈಗ ಗೃಹ ಸಚಿವ ಎಂ ಬಿ ಪಾಟೀಲ್ ರವರು ವರದಿ ಜಾರಿಗಾಗಿ ಒತ್ತಡ ಹೇರಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ರಾಘವೇಂದ್ರ ಔರಾದ್ಕರ್ ಸಮಿತಿಯ ಶಿಫಾರಸು ಆಧರಿಸಿ ವೇತನ ಪರಿಷ್ಕರಿಸಿದ ವರದಿಗೆ ಸಹಿ ಹಾಕಿದ್ದರೂ ವಿನಃ ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ. ಆದರೆ ಸಮಯ ಕಳೆಯುತ್ತಿದ್ದಂತೆ ಸಂಜೆಯ ಹೊತ್ತಿಗೆ ಪೋಲಿಸ್ ಸಿಬ್ಬಂದಿಗಳಿಗೆ ಅಂತೂ ಸಿಹಿ ಸುದ್ದಿ ಮುಟ್ಟಿಸಿದರು.
