ಇಂದಿನ ಕಂಪ್ಯೂಟರ್ ಯುಗದಲ್ಲಿ ದಿನನಿತ್ಯದ ಅನೇಕ ಕೆಲಸ ಕಾರ್ಯಗಳು ಕಂಪ್ಯೂಟರ್ ಮೂಲಕವೇ ಅಗಬೇಕಿದೆ. ಕಂಪ್ಯೂಟರ್ ಇಲ್ಲದಿದ್ದರೆ ಬದುಕು ನಡೆಯುವುದಿಲ್ಲ ಎಂಬ ಮಟ್ಟಿಗೆ ನಾವು ಅದನ್ನು ಅವಲಂಬಿಸಿದ್ದೇವೆ. ಇದರಿಂದಾಗಿ ಬದುಕಿಗೆ ಹೆಚ್ಚು ಅನುಕೂಲವೂ ಆಗುತ್ತಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆನ್ ಲೈನ್ ಕ್ರಾಂತಿ ಇಂದು ಕೋಟ್ಯಾಂತರ ಜನರಿಗೆ ಉದ್ಯೋಗವನ್ನೂ, ಕೈತುಂಬಾ ಸಂಪಾದನೆಯನ್ನೂ ಕೊಡುತ್ತಿದೆ. ಈ ಅನ್ ಲೈನ್ ಸೌಲಭ್ಯದಿಂದಾಗಿ ಇಂದು ಒಂದೇ ಒಂದೂ ಕಾರು, ವಾಹನ ಹೊಂದಿರದ ಕಂಪೆನಿಗಳಾದ ಓಲಾ, ಊಬರ್ ನಂತಹ ಬಹುರಾಷ್ಟ್ರೀಯ ಕಂಪೆನಿಗಳು ತಿಂಗಳಿಗೆ ಕೋಟ್ಯಾಂತರ ರೂಪಾಯಿ ಲಾಭ ಮಾಡಿಕೊಳ್ಳುತ್ತಿವೆ. ವಿಶ್ವಾದ್ಯಂತ ಕೋಟ್ಯಾಂತರ ಜನರಿಗೆ ಸೇವೆಯನ್ನೂ ಒದಗಿಸುತ್ತಿವೆ.
ಅದೇ ರೀತಿ ಹೋಟೆಲ್ ಅಥವಾ ಲಾಡ್ಜ್ ಹೊಂದಿಲ್ಲದೇ ಇರುವ ಓಯೋ ಎಂಬ ಕಂಪೆನಿಯೂ ಕೋಟ್ಯಾಂತರ ರೂಪಾಯಿ ಲಾಭ ಮಾಡಿಕೊಳ್ಳುತ್ತಿದೆ. ಒಂದು ರೀತಿಯಲ್ಲಿ ಈ ಕಂಪೆನಿಗಳ ಸೇವೆ, ಅದನ್ನು ಬಳಸಿಕೊಳ್ಳುವವರಿಗೆ ಸರಳ ಮತ್ತು ಸುಲಭ ಅನ್ನಿಸುತ್ತದೆ. ಆದರೆ ಈ ಬಹುರಾಷ್ಟ್ರೀಯ ಕಂಪೆನಿ ಕೋಟ್ಯಾಂತರ ರೂಪಾಯಿ ಲಾಭ ಮಾಡಿಕೊಳ್ಳುವ ಭರದಲ್ಲಿ ತನ್ನ ಪಾಲುದಾರರಿಗೇ ಮೋಸ ಮಾಡುತ್ತಿರುವ ಪ್ರಕರಣಗಳೂ ವರದಿ ಆಗುತ್ತಿರುವುದು ಇವುಗಳ ವಿಸ್ವಾಸಾರ್ಹತೆಗೇ ಧಕ್ಕೆ ತಂದಿದೆ.
ರಾಜ್ಯದ ಇತರ ಕಡೆಗಳಂತೆ ಕೊಡಗಿನಲ್ಲೂ ಬಹುರಾಷ್ಟ್ರೀಯ ಓಯೋ ಕಂಪೆನಿ ವಿರುದ್ದ ಎಲ್ಲ ಹೋಟೆಲ್ ಹಾಗೂ ಲಾಡ್ಜ್ ಮಾಲೀಕರ ಸಂಘದವರು ತೋಳೇರಿಸಿದ್ದಾರೆ. ಓಯೋ ಕಂಪೆನಿ ಕಳೆದ ಎರಡು ವರ್ಷಗಳಿಂದ ಕೊಡಗಿನಲ್ಲಿ ಸುಮಾರು 200 ರಷ್ಟು ಹೋಟೆಲ್ ಮತ್ತು ಲಾಡ್ಜ್ ಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕೊಡಗಿನಲ್ಲಿ ಕಳೆದ ವರ್ಷದಿಂದ ಭೀಕರ ಮಳೆ ಮತ್ತು ಭೂ ಕುಸಿತದಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಕಂಡಿತ್ತು. ಮೊದಲೆಲ್ಲ ಉತ್ತಮ ವಹಿವಾಟು ನಡೆಸುತಿದ್ದ ಹೋಟೆಲ್, ಹೋಂ ಸ್ಟೇ ಗಳು ಈಗಲೂ ವ್ಯಾಪಾರ ಇಲ್ಲದೆ ಸೊರಗುತ್ತಿವೆ. ಇಂತಹ ಸನ್ನಿವೇಶದಲ್ಲಿ ಓಯೋ ಕಂಪೆನಿಯನ್ನು ಸಹಜವಾಗೇ ಹೋಂ ಸ್ಟೇ, ಹೋಟೆಲ್ ಮಾಲೀಕರು ಸ್ವಾಗತಿಸಿದ್ದರು.
ಓಯೋ ಕಂಪೆನಿ ಎಲ್ಲ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡಿತಷ್ಟೇ ಅಲ್ಲದೆ ನಯಾ ಪೈಸೆ ಅಡ್ವಾನ್ಸ್ ಏನನ್ನೂ ಕೊಡಲಿಲ್ಲ. ಮಾಲೀಕರ ಕೈಗೆ ಒಂದು ಟ್ಯಾಬ್ ಕೊಟ್ಟಿತು. ಇದರಲ್ಲೇ ಆನ್ ಲೈನ್ ಬುಕಿಂಗ್ ಅಲ್ಲದೆ ಮಾಲೀಕರಿಗೂ ಒಯೋ ಕಂಪೆನಿಗೂ ಸಂಪರ್ಕ ಕಲ್ಪಿಸುವಂತೆ ಸಾಫ್ಟ್ ವೇರ್ ಕೂಡ ಇತ್ತು. ಆರಂಭದಿದಲೇ ಒಯೋ ಕಂಪೆನಿ ತನ್ನ ಗ್ರಾಹಕರಿಗೆ ತರಹೇವಾರಿ ದರ ವಿಧಿಸುತಿತ್ತು. ಉದಾಹರಣೆಗೆ ಹೋಟೆಲ್ ಒಂದರ ಡಬಲ್ ಬೆಡ್ ರೂಮಿಗೆ ದರ 1,500 ಇದ್ದರೆ ಓಯೋ ಅದನ್ನು 1,050 ರೂಪಾಯಿಗೆ ಬುಕ್ ಮಾಡುತಿತ್ತು. ಇನ್ನು ಕೊಡಗಿನಲ್ಲೂ ವ್ಯಾಪಾರ ಕಡಿಮೆಯೇ ಆಗಿದ್ದರಿಂದ ಮಾಲೀಕರೂ ಬಂದಷ್ಟು ಬರಲಿ ಎಂದು ಸುಮ್ಮನಾಗಿದ್ದರು. ಅದರ ಜತೆಗೇ ಓಯೋ ತನ್ನ ಪಾಲಿನ ಕಮಿಷನ್ ಎಂದು ಶೇಕಡಾ 20 ನ್ನು ಕಟಾಯಿಸಿಕೊಳ್ಳುತ್ತಿತ್ತು.
ಇತ್ತೀಚಿನ ಕೆಲ ತಿಂಗಳುಗಳಲ್ಲಿ ಹೋಟೆಲ್ ಮಾಲೀಕರಿಗೆ ಏನೋ ಅನುಮಾನ ಬರ ಹತ್ತಿತು. ಓಯೋ ಕಳಿಸುವ ಗ್ರಾಹಕರ ಬಳಿ ಮಾತನಾಡಿದಾಗ ಸಂದೇಹಕ್ಕೆ ಪುಷ್ಟಿ ಸಿಕ್ಕಿತು. ಓಯೋ ತನ್ನ ಆನ್ ಲೈನ್ ಗ್ರಾಹಕರಿಂದ ಬೇರೆ ದರ ವಸೂಲಿ ಮಾಡಿಕೊಂಡು ಹೋಟೆಲ್ ಮಾಲೀಕರಿಗೆ ಕಡಿಮೆ ದರ ತೋರಿಸುತಿತ್ತು ಎಂದು ಕೊಡಗು ಜಿಲ್ಲಾ ಹೋಟೆಲ್ ಹಾಗೂ ರೆಸ್ಟೋರಂಟ್ ಮಾಲೀಕರ ಸಂಘದ ಅಧ್ಯಕ್ಷ ಬಿ ಆರ್ ನಾಗೇಂದ್ರ ಪ್ರಸಾದ್ ಆರೋಪಿಸುತ್ತಾರೆ.
ಪ್ರತಿದ್ವನಿಯೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಓಯೋ ಸಂಸ್ಥೆ ಜಿಲ್ಲೆಯಲ್ಲಿ ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ಹೊಟೇಲ್, ರೆಸ್ಟೋರೆಂಟ್ ಮತ್ತು ಹೋಂ ಸ್ಟೇಗಳನ್ನು ತನ್ನ ಹಿಡಿತಕ್ಕೆ ಪಡೆದುಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಪ್ರವಾಸಿಗರು ತಂಗುವುದಕ್ಕಾಗಿ 4 ಸಾವಿರಕ್ಕೂ ಅಧಿಕ ಹೋಂ ಸ್ಟೇಗಳು, 250 ಹೋಟೆಲ್, ರೆಸ್ಟೋರೆಂಟ್ ಗಳು ಸೇರಿದಂತೆ ಸುಮಾರು 30 ಸಾವಿರ ಕೋಣೆಗಳಿವೆ. ಆದರೆ, ಓಯೋ ಸಂಸ್ಥೆಯ ಪ್ರವೇಶದಿಂದಾಗಿ ಈ ಕ್ಷೇತ್ರ ನಷ್ಟದ ಹಾದಿಯಲ್ಲಿ ಸಾಗುತ್ತಿದೆ. ಇದರಿಂದ ಮಾಲೀಕರುಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದು ಬರೇ ಕೊಡಗಿನ ಹೋಟೆಲ್ ಮಾಲೀಕರ ಕಥೆಯಲ್ಲ. ಮೈಸೂರು ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ಹೋಟೆಲ್ ಮಾಲೀಕರ ಸಂಘವೂ ಕೂಡ ಒಯೋ ವನ್ನು ಬಹಿಷ್ಕರಿಸುವಂತೆ ತನ್ನ ಸದಸ್ಯರಿಗೆ ಕರೆ ನೀಡಿದೆ. ಅಕ್ಟೋಬರ್ 22 ರಂದು ಮೈಸೂರು ಹೋಟೆಲ್ ಮಾಲೀಕರ ಸಂಘವೂ ಕೂಡ ಪೋಲೀಸರಿಗೆ ದೂರು ನೀಡಿದೆ. ಪ್ರತೀ ತಿಂಗಳ 5 ನೇ ತಾರೀಕಿನಂದು ಓಯೋ ತನ್ನ ಸಹವರ್ತಿ ಹೋಟೆಲ್ ಮಾಲೀಕರಿಗೆ ರೂಮಿನ ಬಾಡಿಗೆ ಹಣ ಸಂದಾಯ ಮಾಡಬೇಕು. ಆದರೆ ಓಯೋ ಬಾಡಿಗೆ ಹಣ ನೀಡದೇ ಮೂರು ತಿಂಗಳಿಗೂ ಹೆಚ್ಚು ಸಮಯವಾಗಿದೆ ಎಂದು ಮೈಸೂರಿನ ಹೋಟೆಲ್ ಮಾಲೀಕರ ಸಂಘದ ಅದ್ಯಕ್ಷ ಸಿ ನಾರಾಯಣ ಗೌಡ ತಿಳಿಸಿದರು.
ಈಗ ಓಯೋ ಕಂಪೆನಿಯ ವರ್ತನೆ ತನ್ನ ಪಾಲುದಾರರಿಗೆ ಮೋಸ ಮಾಡುವ ಉದ್ದೇಶವನ್ನೇ ಹೊಂದಿದೆ ಎಂದು ಹೇಳಲಾಗದಿದ್ದರೂ, ಗ್ರಾಹಕರಿಂದ ವಸೂಲಾದ ಹಣವನ್ನು ಯಾಕೆ ಕೊಡುತ್ತಿಲ್ಲ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಈ ಕುರಿತು ಓಯೋ ಕಂಪೆನಿಯ ಪ್ರತಿನಿಧಿಯನ್ನು ಸಂರ್ಕಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದರು.
ಓಯೋ ಸಂದೇಹಾಸ್ಪದ ಬಾಕಿ ಉಳಿಸಿಕೊಂಡಿರುವುದು ಇದೇ ಮೊದಲೇನಲ್ಲ. ಈ ಕುರಿತು ಪ್ರತಿಧ್ವನಿ ತನಿಖೆ ನಡೆಸಿದಾಗ ಬೆಂಗಳೂರಿನ ವೈಟ್ ಫೀಲ್ಡ್ ನ ಹೋಟೆಲ್ ಮಾಲೀಕರಿಗೂ ಇದೇ ರೀತಿ ವಂಚಿಸಿರುವುದು ಪತ್ತೆಯಾಗಿದೆ. ಅಲ್ಲದೆ ವೈಟ್ ಪೀಲ್ಡ್ ಪೋಲೀಸ್ ಠಾಣೆಯಲ್ಲಿ ರಾಜಗುರು ಹೋಟೆಲ್ ಮಾಲೀಕರಾದ ವಿ ಆರ್ ಎಸ್ ನಟರಾಜನ್ ಅವರು ದೂರನ್ನೂ ದಾಖಲಿಸಿದ್ದಾರೆ. ಈ ಪ್ರಕಾರ ಕಳೆದ ಜೂನ್ 2017 ರಿಂದ ಆಗಸ್ಟ್ 2019 ರ ವರೆಗೆ ಓಯೋ ತನ್ನ ಹೋಟೆಲ್ ನ ರೂಂ ಗಳನ್ನು ಅತಿಥಿಗಳಿಗೆ ನೀಡಿದ್ದು ತನ್ನ ಪಾಲಿನ ಶೇಕಡ 80 ರಷ್ಟು ಹಣ ನೀಡಿಲ್ಲ. ಈ ಮೊತ್ತವೇ 1.5 ಕೋಟಿ ರೂಪಾಯಿಗಳಾಗುತ್ತವೆ. ಅಲ್ಲದೆ, ಕೊಠಡಿಗಳು ಭರ್ತಿಯಾಗಿದ್ದಾಗಲೂ ಬುಕಿಂಗ್ ಕ್ಯಾನ್ಸಲ್ ಎಂದು ತೋರಿಸಿ ಶೇಕಡಾ 20 ರಷ್ಟನ್ನು ಮಾತ್ರ ಹೋಟೆಲ್ ಮಾಲೀಕರಿಗೆ ನೀಡುವ ವಂಚನೆಯ ಆರೋಪವನ್ನೂ ಹೊರಿಸಲಾಗಿದೆ. ಆದರೆ ಓಯೋ ಈ ಆರೋಪಗಳನ್ನು ನಿರಾಕರಿಸಿದೆ.
ಓಯೋ ಈಗಾಗಲೇ ಮಾಡಿಕೊಂಡಿರುವ ಒಪ್ಪಂದಗಳನ್ನು ರದ್ದುಗೊಳಿಸುವಂತೆ ಹೋಟೆಲ್ ಮಾಲೀಕರು ಒತ್ತಡ ಹೇರುತಿದ್ದಾರೆ. ಅನೇಕ ಪೋಲೀಸ್ ಠಾಣೆಗಳಲ್ಲಿ ದೂರುಗಳೂ ದಾಖಲಾಗಿವೆ. ಈ ಕುರಿತು ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿದರೆ ಮಾತ್ರ ಅವ್ಯವಹಾರದ ನಿಜ ಸ್ವರೂಪ ಬೆಳಕಿಗೆ ಬರಲಿದೆ.