ಪಾಕಿಸ್ತಾನದ ವಿರುದ್ಧ ಐಸಿಸಿ ವಿಶ್ವಕಪ್ ಟೂರ್ನಿಯ ಮೊದಲ ಅಭ್ಯಾಸ ಪಂದ್ಯದಲ್ಲಿ ಮೊಹಮ್ಮದ್ ಶಹ್ಜಾದ್ ಗಾಯಗೊಂಡಿದ್ದರು. 24 ಎಸೆತಗಳಿಗೆ 22 ರನ್ ಗಳಿಸಿದ್ದ ವೇಳೆ ಅವರು 7ನೇ ಓವರ್ ನಲ್ಲಿ ಎಡ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು. ನಂತರ ಅವರು ಅಂಗಳದಿಂದ ಹೊರ ನಡೆದಿದ್ದರು. ಆ ಬಳಿಕ ಶೆಹ್ಜಾದ್ ಕ್ರೀಡಾಂಗಣಕ್ಕೆ ಇಳಿದಿರಲಿಲ್ಲ.
ಆಫ್ಘಾನಿಸ್ತಾನ ತಂಡ ವಿಕೆಟ್ ಕೀಪರ್ ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಆಕರ್ಷಣೆಯ ಕೇಂದ್ರ. ತಮ್ಮ ಸ್ಫೋಟಕ ಆಟದಿಂದ ಸ್ಟಾರ್ ಆಗಿ ಹೊಮ್ಮಿದವರು. ಆದರೆ ಈ ಜನಪ್ರಿಯತೆ ಆರಂಭಿಕ ಪಂದ್ಯಗಳಲ್ಲೇ ಕೊನೆಗಾಣುತ್ತಿದೆ. ತೀವ್ರವಾಗಿ ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ಮೊಹಮ್ಮದ್ ಶೆಹ್ಜಾದ್ ಟೂರ್ನಿಯಿಂದ ಹೊರಬಿದಿದ್ದಾರೆ.
ನಿರೀಕ್ಷಿತ ಸಮಯದಲ್ಲಿ ಚೇತರಿಸಿಕೊಳ್ಳಲಾಗದೇ ಹೋಗಿದ್ದರಿಂದ ಅನಿವಾರ್ಯವಾಗಿ ತಂಡದಿಂದ ಹೊರಗಿಡುವ ನಿರ್ಧಾರಕ್ಕೆ ಬರಲಾಗಿದೆ. ಶಹ್ಜಾದ್ ಅವರ ಸ್ಥಾನಕ್ಕೆ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಇಮ್ರಾನ್ ಅಲಿ ಖಿಲ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಇದಕ್ಕೆ 2019ರ ಐಸಿಸಿ ವಿಶ್ವಕಪ್ ಟೂರ್ನಿಯ ತಾಂತ್ರಿಕ ಸಮಿತಿ ಒಪ್ಪಿಗೆ ಕೂಡ ಸೂಚಿಸಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.