ಐಪಿಎಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸಾಮಿ ರಾಜಿನಾಮೆ ನೀಡಿದ್ದಾರೆ. ತಮಿಳುನಾಡಿನವರಾದ ಅಣ್ಣಾಮಲೈ 2011 ಬ್ಯಾಚ್ ನ ಐಪಿಎಸ್ ಅಧಿಕಾರಿ. ಇಂಜಿನಿಯರ್ ಪದವಿಧರರಾಗಿರುವ ಅಣ್ಣಾಮಲೈ ಲಖ್ನೊ ಐಐಎಮ್ ನಲ್ಲಿ ಮ್ಯಾನೆಜ್ ಮೆಂಟ್ ಪದವಿ ಗಳಿಸಿದವರು. ಉಡುಪಿ ಹಾಗೂ ಚಿಕ್ಕಮಗಳೂರಿನಲ್ಲಿ ಎಸ್ ಪಿ ಆಗಿ ಕಾರ್ಯ ನಿರ್ವಹಿಸಿದ್ದರು. ತಮ್ಮ ಸೇವಾವಧಿಯ 7ನೇ ವರ್ಷದಲ್ಲಿ ಅಣ್ಣಾಮಲೈ ವಿಚಿತ್ರ ನಿರ್ಧಾರಗಳ ಹಿನ್ನೆಯಲ್ಲಿ ಬೆಂಗಳೂರಿಗೆ ವರ್ಗವಾದರು.
ಮೇ 17, 2018. ಪೂರ್ಣ ಬಹುಮತ ಇಲ್ಲದೇ ಹೋದರೂ, ಸರ್ಕಾರ ರಚಿಸುವ ಸಂಖ್ಯೆ ಹೊಂದಿರುವ ವಿಶ್ವಾಸ ವ್ಯಕ್ತಪಡಿಸಿದ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೆಲವು ಹೊತ್ತಿನಲ್ಲೇ ಯಡಿಯೂರಪ್ಪ ಕೆಲವು ಹಿರಿಯ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿದರು. ಅವುಗಳಲ್ಲಿ ಒಂದು, ಚಿಕ್ಕಮಗಳೂರು ಎಸ್ ಪಿ ಯಾಗಿದ್ದ ಅಣ್ಣಾಮಲೈ ಅವರನ್ನು ತತ್ ಕ್ಷಣ ರಾಮನಗರ ಎಸ್ ಪಿ ಯಾಗಿ ವರ್ಗಾವಣೆ ಮಾಡಿದ್ದು. ಕಾಂಗ್ರೆಸ್ ತನ್ನ 78 ಶಾಸಕರನ್ನು ರಾಮನಗರದ ಈಗಲ್ಟನ್ ರೆಸಾರ್ಟ್ ನಲ್ಲಿ ಇರಿಸಿತ್ತು. ಕಾಂಗ್ರೆಸ್ ಶಾಸಕರ ಬೆಂಬಲದೊಂದಿಗೆ ತಮಗೆ ಬಹುಮತ ಇದೆ ಎಂದು ಹೇಳುತ್ತಿದ್ದ ಎಚ್ ಡಿ ಕುಮಾರಸ್ವಾಮಿ ಈ ವರ್ಗಾವಣೆಯನ್ನು ಖಂಡಿಸಿದ್ದರು.
ಆದರೆ, ಮುಂದಿನ ಎರಡೇ ದಿನಗಳಲ್ಲಿ ಯಡಿಯೂರಪ್ಪ ರಾಜಿನಾಮೆ ನೀಡಿದರು. ಅದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ಅಣ್ಣಾಮಲೈ ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಯಿತು.
ತಮ್ಮ ಹಲವಾರು ಸಮಾಜ-ಪರ ಧೋರಣೆ ಹಾಗೂ ನಿಲುವುಗಳಿಂದ ಪ್ರಸಿದ್ಧರಾಗಿರುವ ಅಣ್ಣಾಮಲೈ ಅವರ ಈ ನಿರ್ಧಾರಕ್ಕೆ ಖಚಿತ ಕಾರಣಗಳನ್ನು ಅವರು ನೀಡಿಲ್ಲ. ಕೆಲವೇ ತಿಂಗಳುಗಳ ಹಿಂದೆ ಬೆಂಗಳೂರು ದಕ್ಷಿಣದಲ್ಲಿರುವ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅಣ್ಣಾಮಲೈ ಪೊಲೀಸ್ ಇಲಾಖೆಯ ಬಗ್ಗೆ ತಮಗಿದ್ದ ಅಭಿಪ್ರಾಯಗಳಲ್ಲಿ ಕೆಲವು ಬದಲಾವಣೆಗೊಳ್ಳಲು ಬರೋಬ್ಬರಿ 7 ವರ್ಷಗಳು ಬೇಕಾಯಿತು ಎಂದಿದ್ದರು. “ಐಪಿಎಸ್ ಆಗುವ ಮೊದಲು ದೊಡ್ಡ ಹೊಟ್ಟೆಯ ಪೊಲೀಸರನ್ನು ಕಂಡಾಗ ಭ್ರಷ್ಟಾಚಾರವೇ ಇದಕ್ಕೆ ಕಾರಣ ಎಂಬ ತಪ್ಪು ಗ್ರಹಿಕೆಯಲ್ಲಿದ್ದೆ. ಆದರೆ, ಒಬ್ಬ ಪೊಲೀಸ್ ಪೇದೆ ಬೆಳಿಗ್ಗೆ 5 ಗಂಟೆಗೆ ಎದ್ದು, ರಾತ್ರಿ 11ಕ್ಕೆ ಮನೆಗೆ ಮರಳುತ್ತಾನೆ. ಊಟ, ತಿಂಡಿ ಸರಿಯಾದ ಸಮಯದಲ್ಲಿ ಮಾಡಲಾಗುವುದಿಲ್ಲ. ಅವಿರತ ಕೆಲಸ, ಆರೋಗ್ಯದ ಕಡೆ ನಿರ್ಲಕ್ಷ್ಯವೇ ಇದಕ್ಕೆ ಮುಖ್ಯ ಕಾರಣ ಎಂಬ ಸತ್ಯ ತಿಳಿಯಲು ಇಷ್ಟು ವರ್ಷ ಬೇಕಾಯಿತು.” ಎಂದಿದ್ದರು.
ತಮ್ಮ ಸ್ನೇಹಿತರು ಮತ್ತು ಹಿತೈಷಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಬರೆದಿರುವ ಪತ್ರ ವೈರಲ್ ಆಗಿದೆ. ಪತ್ರದ ಯಥಾವತ್ತು ಅನುವಾದ ಇಲ್ಲಿದೆ.
ನನ್ನೆಲ್ಲ ಸ್ನೇಹಿತರಿಗೆ ಹಾಗೂ ಹಿತೈಷಿಗಳಿಗೆ…
ನಮಸ್ಕಾರ. ಇತ್ತೀಚೆಗೆ ಮಾಧ್ಯಮಗಳಲ್ಲಿ ನನ್ನ ರಾಜಿನಾಮೆ ಕುರಿತು ಸುದ್ದಿ ಹರಿದಾಡುತ್ತಿರುವುದು ನಿಜ. ಇಂದು (ಮೇ ೨೮) ಭಾರತೀಯ ಪೊಲೀಸ್ ಸೇವೆಗೆ ನನ್ನ ರಾಜಿನಾಮೆ ಸಲ್ಲಿಸಿದ್ದು, ಅದರ ಪ್ರಕ್ರಿಯೆಗೆ ಸ್ವಲ್ಪ ಸಮಯ ಆಗಬಹುದು. ಸುಮಾರು ಆರು ತಿಂಗಳು ಯೋಚಿಸಿದ ನಂತರ ನಾನು ಈ ನಿರ್ಧಾರ ತೆಗೆದುಕೊಂಡದ್ದು. ಪೊಲೀಸ್ ಸೇವೆಯಲ್ಲಿ ಒಂಬತ್ತು ವರ್ಷ ಕಳೆದಿದ್ದು, ಸೇವೆಯ ಪ್ರತಿ ಕ್ಷಣವನ್ನೂ ನಾನು ಪೊಲೀಸ್ ಆಗಿಯೇ ಕಳೆದಿದ್ದೇನೆ. ಖಾಕಿ ಧಿರಿಸು ತರುವ ಹೆಮ್ಮೆ ಮತ್ತು ಸಹೋದ್ಯೋಗಿಗಳ ಜೊತೆಗಿನ ನನ್ನ ಸೇವಾ ಅನುಭವ ಮರೆಯಲಾಗದ್ದು. ನಾನಂತೂ ಪೊಲೀಸರ ಕೆಲಸ ದೇವರಿಗೆ ತುಂಬ ಹತ್ತಿರದ್ದು ಎಂದು ನಂಬಿದ್ದೇನೆ. ಅತ್ಯಂತ ಒತ್ತಡದ ಈ ಕೆಲಸದಲ್ಲಿ ಮಿತಿಗಳೂ ಇವೆ ಎಂಬುದನ್ನೂ ನಾನು ಬಲ್ಲೆ. ಈ ಅವಧಿಯಲ್ಲಿ ನಾನು, ನನಗೆ ಅವಶ್ಯವಿದ್ದಾಗ ಬೆನ್ನಿಗೆ ನಿಂತವರ ಬದುಕಿನ ಆಗುಹೋಗುಗಳಲ್ಲಿ ಭಾಗಿಯಾಗುವುದನ್ನು ಅನಿವಾರ್ಯವಾಗಿ ತಪ್ಪಿಸಿಕೊಳ್ಳಬೇಕಾಯಿತು. ತುಂಬಾನೇ ಬೇಸರವೂ ಆಯಿತು. ಮಾತಾಡಬೇಕಾದ ಸಮಯದಲ್ಲಿ ಆ ಬಗ್ಗೆ ಮಾತಾಡಲು ಆಗಲೇ ಇಲ್ಲ.
ಕಳೆದ ವರ್ಷ ಕೈಲಾಸ ಮಾನಸ ಸರೋವರಕ್ಕೆ ಭೇಟಿ ಕೊಟ್ಟಿದ್ದಾಗ ನನಗೆ ಬದುಕಿನ ಬಗೆಗೆ ಹೊಸ ತಿಳಿವಳಿಕೆ ಪ್ರಾಪ್ತವಾಯಿತು. ಬದುಕಿನಲ್ಲಿ ಯಾವುದು ಆದ್ಯತೆ ಆಗಬೇಕೆಂಬ ಹೊಳಹು ಸಿಕ್ಕಿತು. ಮಧುಕರ್ ಶೆಟ್ಟಿ ಸರ್ ಅವರ ಸಾವು ಕೂಡ ನನ್ನ ಬದುಕನ್ನು ನಾನೇ ಒಮ್ಮೆ ಅವಲೋಕಿಸುವಂತೆ ಪ್ರೇರೇಪಿಸಿತು. ಎಲ್ಲ ಒಳ್ಳೆಯ ಕೆಲಸಗಳಿಗೂ ಒಂದು ಕೊನೆ ಅಂತಿರುತ್ತದೆ, ಖಾಕಿಯೊಂದಿಗಿನ ನನ್ನ ಪಯಣಕ್ಕೂ ಕೊನೆ ಸಿಕ್ಕಿದೆ. ಲೋಕಸಭಾ ಚುನಾವಣೆಗೆ ಮೊದಲೇ ಈ ನಿರ್ಧಾರ ಕೈಗೊಳ್ಳಬೇಕೆಂಬ ತೀರ್ಮಾನಕ್ಕೆ ಬಂದಿದ್ದೆನಾದರೂ, ಆ ಹೊತ್ತಿನಲ್ಲಿ ದಿಢೀರ್ ರಾಜಿನಾಮೆ ನೀಡಿ ಸರ್ಕಾರಕ್ಕೆ ತೊಂದರೆ ಕೊಡುವುದು ಇಷ್ಟವಿರಲಿಲ್ಲ. ಒಂದು ವೇಳೆ ನನ್ನ ರಾಜಿನಾಮೆಯಿಂದ ನಿಮಗೆ ಇರುಸುಮುರುಸು, ಬೇಸರ ಉಂಟಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಪ್ರಾಮಾಣಿಕವಾಗಿ ಇದನ್ನು ಮಾಡಲೇಬೇಕು ಎನಿಸಿದ್ದರಿಂದಲೇ ಈ ರಾಜಿನಾಮೆ. ನನಗಿದು ತುಂಬಾ ಭಾವನಾತ್ಮಕ ಸಮಯ; ನನ್ನ ನೆಚ್ಚಿನ ಗೆಳತಿಯೂ ಆಗಿರುವ ನನ್ನ ಪತ್ನಿ ಇದರಿಂದ ಹೊರಬರಲು ಸಹಾಯ ಮಾಡುತ್ತಿದ್ದಾರೆ.
ಮುಂದೇನು?
ತುಂಬಾ ಜನರು ಏನೇನೋ ಊಹೆ ಮಾಡುತ್ತಿದ್ದಾರೆ. ಆದರೆ, ತುಂಬಾನೇ ದೊಡ್ಡ-ದೊಡ್ಡ ಗುರಿ ಹೊಂದಲು ನಾನಂತೂ ಸಣ್ಣವ. ಸದ್ಯಕ್ಕೆ ನಾನು ಸ್ವಲ್ಪ ಸಮಯ ಆರಾಮ ಕಳೆಯಬೇಕೆಂದಿದ್ದೇನೆ. ಇದುವರೆಗೂ ಬದುಕಿನಲ್ಲಿ ಕಳೆದುಕೊಂಡ ಸಣ್ಣಪುಟ್ಟ ಸಂತಸದ ಗಳಿಗೆಗಳನ್ನು ಸಾಧ್ಯವಾದರೆ ಮುಖಾಮುಖಿಯಾಗಲಿದ್ದೇನೆ. ತಂದೆಗೆ ಒಳ್ಳೆಯ ಮಗನಾಗಿ ಕೃಷಿಗೆ ಮರಳಬೇಕಿದೆ. ಮನೆಯಲ್ಲಿನ ಕುರಿ ಇನ್ನೂ ನನ್ನ ಮಾತು ಕೇಳುತ್ತದೆಯೋ ನೋಡಬೇಕು, ನಾನಂತೂ ಈಗ ಪೊಲೀಸ್ ಅಲ್ಲವಲ್ಲ. ಬದುಕು ಅನ್ನೋದೇ ತುಂಬಾ ದೊಡ್ಡ ಅವಕಾಶ ನನ್ನಂಥವರ ಪಾಲಿಗೆ.
ಕಾರ್ಕಳ, ಉಡುಪಿ, ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಸೇವೆ ಸಲ್ಲಿಸುವಾಗ ನ್ಯಾಯದ ಹಾದಿಯಲ್ಲಿ ಜೊತೆ ನಡೆದ ಎಲ್ಲ ಅದ್ಭುತ ಮನಸ್ಸುಗಳನ್ನು ನಾನು ಸದಾ ನೆನೆಯುತ್ತೇನೆ. ಮಾರ್ಗದರ್ಶನ ಮಾಡಿದ ಹಿರಿಯ ಸಹೋದ್ಯೋಗಿಗಳು ಮತ್ತು ನನಗಿಂತಲೂ ಸ್ಮಾರ್ಟ್ ಆದ ಕಿರಿಯ ಸಹೋದ್ಯೋಗಿಗಳನ್ನು ತುಂಬಾನೇ ನೆನಪಿಸಿಕೊಳ್ಳಲಿದ್ದೇನೆ. ಯಾವುದೇ ಸಂಶಯವಿಲ್ಲದೆ ನನ್ನೆಲ್ಲ ಕಾನ್ಸ್‌ಟೆಬಲ್‌ಗಳನ್ನು, ಜೂನಿಯರ್ ರ್ಯಾಂಕ್ ಅಧಿಕಾರಿಗಳನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ. ನಾನು ಅವರಿಗಾಗಿ ಬದುಕಿದೆ, ಅವರ ಬದುಕನ್ನು ಚಂದ ಮಾಡಲು ಪ್ರಯತ್ನಿಸಿದೆ ಎಂಬ ಖುಷಿ ಇದೆ.
ನಾನು ಅತ್ಯಂತ ಹೆಮ್ಮೆ ಮತ್ತು ಘನತೆಯಿಂದ ನಿಮ್ಮೆಲ್ಲರಿಗೂ ಸೇವೆ ಸಲ್ಲಿಸಿದ್ದೇನೆ ಎಂದು ನಂಬುತ್ತೇನೆ. ಒಂದು ವೇಳೆ, ನನ್ನಿಂದ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುವೆ, ನಾನು ಕೂಡ ಮನುಷ್ಯನೇ. ನಿಮ್ಮ ಪ್ರೀತಿಯನ್ನು ಸದಾ ಜ್ಞಾಪಿಸಿಕೊಳ್ಳುವೆ.
ಪ್ರೀತಿಯಿಂದ,
ಅಣ್ಣಾಮಲೈ