ಸಾವಿರಾರು ಕೋಟಿಯ ಐಎಂಎ ಹಗರಣದ ತನಿಖೆಯ ನಡುವೆ ಎರಡು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರು ಇದೀಗ ವಿಭಿನ್ನ ಕಾರಣಗಳಿಗೆ ಚರ್ಚೆಯಲ್ಲಿದೆ. ಹೇಮಂತ್ ನಿಂಬಾಳ್ಕರ್ ಅವರು 2019 ಜನವರಿಯಲ್ಲಿ ಸಿಐಡಿ ಐಜಿಪಿಯಾಗಿದ್ದಾಗ ಐಎಂಎ ಗೆ ಕ್ಲೀನ್ ಚಿಟ್ ನೀಡಿದ್ದರೆಂಬ ಆರೋಪಕ್ಕೆ ಹೊಸ ತಿರುವು ಸಿಕ್ಕಿದೆ. ಇನ್ನೋರ್ವ ಹಿರಿಯ ಐಪಿಎಸ್ ಅಧಿಕಾರಿ, ಪ್ರಸ್ತುತ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ತಾವು ಬೆಂಗಳೂರು ನಗರ ಕಮಿಷನರ್ ಆಗಿ ನಿಯುಕ್ತಿಗೊಳ್ಳಲು ಲಾಬಿ ನಡೆಸಿದ್ದರು ಎಂಬುದು ಬಹಿರಂಗಗೊಂಡಿದೆ. ಇದಕ್ಕೂ ಐಎಂಎ ಗೂ ಏನು ಸಂಬಂಧ? ವಿಶೇಷ ತನಿಖಾ ತಂಡ ಐಎಂಎ ಹಗರಣದ ಸಂಬಂಧ ಕಣ್ಗಾವಲು ಇಟ್ಟಿದ್ದ ಶಂಕಿತ ವ್ಯಕ್ತಿಯೊಂದಿಗೆ ಭಾಸ್ಕರ್ ರಾವ್ ಕಮಿಷನರ್ ಹುದ್ದೆಯ ಲಾಬಿಗಾಗಿ ಸಂಪರ್ಕದಲ್ಲಿದ್ದರು ಎಂಬುದು ಆಡಿಯೊ ಬಹಿರಂಗಪಡಿಸಿದ ವಿಷಯ. ಈ ಪ್ರಕರಣದಲ್ಲಿ ಆಡಿಯೊ ಕ್ಲಿಪ್ ಗಳನ್ನು ಮಾಧ್ಯಮಗಳಿಗೆ ಲೀಕ್ ಮಾಡಿದ್ದು ಯಾರು ಎಂಬ ಬಗ್ಗೆ ಮಾತ್ರ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಎರಡೂ ಪ್ರಕರಣಗಳು ಸದ್ಯ `ಪ್ರಾಥಮಿಕ ತನಿಖೆಯ’ ಹಂತದಲ್ಲಿವೆ.
ಪ್ರಕರಣ 1:
ಹೇಮಂತ್ ನಿಂಬಾಳ್ಕರ್ ಅವರ ವಿರುದ್ದ ತನಿಖೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈ ಕೋರ್ಟ್ ಮಂಗಳವಾರ (13-08-2019) ವಜಾಗೊಳಿಸಿದೆ. ಆದರೆ, ಐಎಂಎ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ದೂರು ಸಲ್ಲಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ನಿರ್ದೇಶಿಸಿದೆ. ಅರ್ಜಿ ಸಲ್ಲಿಸಿದ್ದ ಜನಾಧಿಕಾರ ಸಂಘರ್ಷ ಪರಿಷತ್ ಎಂಬ ಸರ್ಕಾರೇತರ ಸಂಸ್ಥೆ, ಹೇಮಂತ್ ನಿಂಬಾಳ್ಕರ್ ಅವರ ಸಹಿಯಲ್ಲಿ ಸಲ್ಲಿಸಲಾಗಿರುವ ಸಿಐಡಿ ತನಿಖಾ ವರದಿಯನ್ನು ಅರ್ಜಿಯೊಂದಿಗೆ ಲಗತ್ತಿಸಿದೆ. ಜನಾಧಿಕಾರ ಸಂಘರ್ಷ ಪರಿಷತ್ ನ ಜಂಟಿ ಅಧ್ಯಕ್ಷ ಆದರ್ಶ್ ಆರ್ ಐಯ್ಯರ್ ಅವರು ಸಲ್ಲಿಸಿರುವ ಅರ್ಜಿಯ ಪ್ರಕಾರ ಹೇಮಂತ್ ನಿಂಬಾಳ್ಕರ್ ಅವರ ವರದಿ ಐಎಂಎ ಹಗರಣದಲ್ಲಿ ಈಗ ಬಂಧನದಲ್ಲಿರುವ ಹಾಗೂ ಜಾರಿ ನಿರ್ದೇಶನಾಲಯ (Enforcement Directorate) ಹಾಗೂ ಪೊಲೀಸ್ ತನಿಖೆ ಎರಡನ್ನೂ ಎದುರಿಸುತ್ತಿರುವ ಮೊಹಮ್ಮದ್ ಮನ್ಸೂರ್ ಖಾನ್ ಗೆ ಕ್ಲೀನ್ ಚಿಟ್ ನೀಡಿತ್ತು.
18-01-2019ರ ಈ ಸಿಐಡಿ ವರದಿಯಲ್ಲಿ ಉಲ್ಲೇಖಿಸಿರುವಂತೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) 2017ರಲ್ಲಿಯೇ ಐಎಂಎ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಅದರಂತೆ, ರಾಜ್ಯ ಸರ್ಕಾರದ ನಿರ್ದೇಶನದಂತೆ ಸಿಐಡಿ ತನಿಖೆ ಆರಂಭಿಸಿತ್ತು. ಹೇಮಂತ್ ನಿಂಬಾಳ್ಕರ್ ಸಹಿ ಮಾಡಿರುವ ಈ ವರದಿಯಲ್ಲಿ ಸಿಐಡಿ ಪೊಲೀಸರು ದಾಖಲೆಗಳನ್ನು ಸಂಗ್ರಹಿಸಿ, RBI ನಿಂದ ಮಾಹಿತಿ, ದಾಖಲೆಗಳನ್ನು ಸಂಗ್ರಹಿಸಿರುವುದಾಗಿ ಹೇಳಲಾಗಿದೆ. ಅಷ್ಟೇ ಅಲ್ಲದೇ, ಸಿಐಡಿ ತಂಡ ಮೊಹಮ್ಮದ್ ಮನ್ಸೂರ್ ಖಾನ್, ಕಂಪೆನಿಯ ಲೆಕ್ಕ ಪರಿಶೋಧಕ ಇಕ್ಬಾಲ್ ಖಾನ್ ಹಾಗೂ ಇನ್ನಿತರರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದಿತ್ತು.
ವರದಿಯ ಕೊನೆಯ ಪ್ಯಾರಾ ಹೀಗೆ ಹೇಳುತ್ತದೆ:
“ವಿಚಾರಣಾಧಿಕಾರಿಗಳು ವಿಚಾರಣಾ ಕಾಲದಲ್ಲಿ ಸಂಗ್ರಹಿಸಿದ ದಾಖಲಾತಿಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳನ್ನು ಪರಾಂಬರಿಸಲಾಗಿ, “M/S I Monetary Advisory (IMA) and its group entities’’ ಕಂಪೆನಿಯು ಹಣಕಾಸಿನ ಸಂಸ್ಥೆಯಾಗಿರುವುದಿಲ್ಲ. ಹಣಕಾಸಿನ ಸಂಸ್ಥೆಯೆಂದು ಯಾವುದೇ ಹೂಡಿಕೆದಾರರು ಹಣ ಹೂಡಿಕೆ ಮಾಡಿರುವುದಿಲ್ಲ. ಸದರಿ ಕಂಪೆನಿಯು ಸಾರ್ವಜನಿಕರನ್ನು ನಂಬಿಸಿ ಹೆಚ್ಚು ಬಡ್ಡಿ, ಹೆಚ್ಚು ಲಾಭ ನೀಡುತ್ತೇವೆಂದು ಸಾರ್ವಜನಿಕರಿಂದ ಹಣವನ್ನು ಠೇವಣಿ ರೂಪದಲ್ಲಿ ಸಂಗ್ರಹಿಸಿ ಮೋಸ ಮಾಡಿರುವ ಬಗ್ಗೆ ಯಾವುದೇ ಪೂರಕ ಸಾಕ್ಷ್ಯಾಧಾರಗಳು ಹೊರಹೊಮ್ಮದ ಕಾರಣ ಮತ್ತು “M/S I Monetary Advisory (IMA) and its group entities’’ ಕಂಪೆನಿ ವತಿಯಿಂದ ವರ್ಷವಾರು ಆದಾಯ ಇಲಾಖೆಗೆ ಸಲ್ಲಿಸಿದ ಆಯವ್ಯಯ ಮಾಹಿತಿಯ ದಾಖಲೆಗಳು ಹಾಗೂ ಕಂಪೆನಿಯ ಪಾಲುದಾರ ಹಾಗೂ ಮುಖ್ಯಸ್ಥ ಮೊಹಮ್ಮದ್ ಮನ್ಸೂರ್ ಖಾನ್ ರವರ ವೈಯಕ್ತಿಕ ಆಯವ್ಯಯ (Balance-Sheet) 2011-2018 ರವರೆಗೆ ಪರಿಶೀಲಿಸಲಾಗಿ ಅಲ್ಲಿಯೂ ಕೂಡ ಯಾವುದೇ ನ್ಯೂನತೆಗಳು (ಠೇವಣೆದಾರರ ಮಾಹಿತಿ) ವಿಚಾರಣಾ ಕಾಲದಲ್ಲಿ ಕಂಡು ಬರದ ಕಾರಣ ಮತ್ತು ವೈಯಕ್ತಿಕವಾಗಿ ಠೇವಣಿ ನೀಡಿ ಮೋಸ ಹೋಗಿದ್ದೇವೆಂದು ಯಾರು ಹೇಳಿಕೆ ನೀಡಲು ಮುಂದೆ ಬರದಿರುವುದು ಮತ್ತು ಕಲಂ 2(2) (ii) ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ 2004 ರಲ್ಲಿ ನಮೂದಿಸಿರುವಂತೆ ಒಂದು ಕಂಪೆನಿಯ ಪಾಲುದಾರರು ನೀಡಿದ ಬಂಡವಾಳವನ್ನು ಠೇವಣಿ ಎಂದು ಪರಿಗಣಿಸಲು ಕಾನೂನಿನ ಪ್ರಕಾರ ಸಾಧ್ಯವಿಲ್ಲದೇ ಇರುವುದರಿಂದ…..ಆರೋಪಿತ ಕಂಪೆನಿಯ ವಿರುದ್ದ ಕ್ರಮ ಜರುಗಿಸಲು ಬರದೇ ಇರುವುದರಿಂದ ಕಲಂ 3 ರಲ್ಲಿ ಕ್ರಮ ತೆಗೆದುಕೊಳ್ಳಲು ಅವಕಾಶವಿರುವುದಿಲ್ಲ. ಆದ್ದರಿಂದ ಅರ್ಜಿಯ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗಿರುತ್ತದೆ.’’
ಆದರೆ, ವಿಶೇಷ ತನಿಖಾ ತಂಡ ತನಿಖೆ ಆರಂಭಿಸಿ, ಮೊಹಮ್ಮದ್ ಮನ್ಸೂರ್ ಖಾನ್, ಕಂಪೆನಿಯ ಲೆಕ್ಕ ಪರಿಶೋಧಕ ಇಕ್ಬಾಲ್ ಖಾನ್ ಅಲ್ಲದೆ ಇನ್ನಿತರರನ್ನೂ ಬಂಧಿಸಿತ್ತು. ವಿಶೇಷ ತನಿಖಾ ತಂಡ ಹೇಮಂತ್ ನಿಂಬಾಳ್ಕರ್ ಅವರ ವರದಿಯ ಬಗ್ಗೆ ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಹೈ ಕೋರ್ಟ್ ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಹೇಳಲಾಗಿದೆ. ಈ ಮಧ್ಯೆ ವಿಶೇಷ ತನಿಖಾ ತಂಡ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಬಿ ಎಂ ವಿಜಯಶಂಕರ್ ಹಾಗೂ ಸಹಾಯಕ ಆಯುಕ್ತರಾಗಿದ್ದ (Assistant Commissioner) ಎಲ್ ಸಿ ನಾಗರಾಜ್ ಅವರನ್ನು ಐಎಂಎ ಗೆ ಪೂರಕವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಮೊಹಮ್ಮದ್ ಮನ್ಸೂರ್ ಖಾನ್ ನಿಂದ ಲಂಚ ಪಡೆದ ಆರೋಪದಡಿ ಬಂಧಿಸಿತು. ಈ ನಡುವೆ, ಕುಮಾರಸ್ವಾಮಿ ಸರ್ಕಾರ ಇದ್ದಕ್ಕಿದ್ದಂತೆ ಹೇಮಂತ್ ನಿಂಬಾಳ್ಕರ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾವಣೆಗೊಳಿಸುತ್ತದೆ.
“ಹೈ ಕೋರ್ಟ್ ನಿರ್ದೇಶನದಂತೆ ನಾವು ವಿಶೇಷ ತನಿಖಾ ತಂಡಕ್ಕೆ ಹೇಮಂತ್ ನಿಂಬಾಳ್ಕರ್ ನೀಡಿದ ಐಎಂಎ ಪರವಾದ ವರದಿಯ ಬಗ್ಗೆ ತನಿಖೆ ನಡೆಸುವಂತೆ ದೂರು ಸಲ್ಲಿಸುತ್ತೇವೆ. ಒಂದು ವೇಳೆ ವಿಶೇಷ ತನಿಖಾ ತಂಡ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ ಮತ್ತೆ ಹೈ ಕೋರ್ಟ್ ಮೊರೆ ಹೋಗುತ್ತೇವೆ,’’ ಎಂದು ಆದರ್ಶ್ ಹೇಳಿದರು.
ಪ್ರಕರಣ 2:
ಐಎಂಎ ಪ್ರಕರಣಕ್ಕೆ ನೇರ ಸಂಬಂಧ ಇಲ್ಲದಿದ್ದರೂ, ಸದ್ಯ ವೈರಲ್ ಆಗಿರುವ ಮೊಬೈಲ್ ಸಂಭಾಷಣೆ, ಹಿರಿಯ ಅಧಿಕಾರಿಗಳ ವರ್ಗಾವಣೆಯ ಹಿಂದಿನ ಕಟು ವಾಸ್ತವವನ್ನು ತೆರೆದಿಟ್ಟಿದೆ. ಎಡಿಜಿಪಿ ಭಾಸ್ಕರ್ ರಾವ್ ಅವರು ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಕಮಿಷನರ್ ಹುದ್ದೆಗೆ ಲಾಬಿ ನಡೆಸಿದ್ದರು ಎನ್ನುವುದಕ್ಕೆ ಪುಷ್ಟಿ ನೀಡುವ ಅಂಶಗಳು ಈ ಆಡಿಯೊದಲ್ಲಿದೆ. ಈ ಆಡಿಯೋದಲ್ಲಿರುವ ಇನ್ನೋರ್ವ ವ್ಯಕ್ತಿ ಫರಾಜ್ ಫೋನ್ ಕರೆಗಳನ್ನು ವಿಶೇಷ ತನಿಖಾ ತಂಡ ಐಎಂಎ ಹಗರಣಕ್ಕೆ ಸಂಬಂಧಪಟ್ಟಂತೆ ಟ್ಯಾಪ್ ಮಾಡುತ್ತಿತ್ತು ಎಂಬುದು ಗಮನಕ್ಕೆ ಬಂದಿದೆ.
ಆಡಿಯೊ ಬಹಿರಂಗವಾಗುತ್ತಿದ್ದಂತೆ 08-08-2019ರಂದು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಈ ಬಗ್ಗೆ `ಆಡಳಿತಾತ್ಮಕ ಮತ್ತು ಕಾನೂನಾತ್ಮಕ’ ತನಿಖೆ ನಡೆಸುವಂತೆ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತರಿಗೆ (ಅಪರಾಧ) ಸೂಚನೆ ನೀಡಿದರು.
ಪತ್ರಿಕೆಗಳಲ್ಲಿ ಈ ಬಗ್ಗೆ ಕಳೆದ ಮೂರು ದಿನಗಳಿಂದ ವರದಿಗಳು ಪ್ರಕಟಗೊಂಡಿದ್ದು, ಆ ಪ್ರಕಾರ ಫರಾಜ್ ಎನ್ನುವ ವ್ಯಕ್ತಿಯ ಫೋನ್ ಕರೆಗಳನ್ನು ಪೂರ್ವ ಅನುಮತಿ ಪಡೆದು ಟ್ಯಾಪ್ ಮಾಡಲಾಗುತ್ತಿತ್ತು. ಈ ಬಗ್ಗೆ ಹಿಂದಿನ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿ, ಫೋನ್ ಟ್ಯಾಪಿಂಗ್ ಮಾಡಲು ಪೊಲೀಸ್ ಕಮಿಷನರ್ ಮತ್ತು ಮೇಲ್ಪಟ್ಟ ಅಧಿಕಾರಿಗಳು ಮಾತ್ರ ಅನುಮತಿ ನೀಡಬಹುದು ಎಂದಿದ್ದಾರೆ. ಕೆಲವು ಪತ್ರಿಕೆಗಳಲ್ಲಿ ಟ್ಯಾಪ್ ಆಗಿದ್ದ ಈ ಸಂಭಾಷಣೆಯನ್ನು ಅಲ್ಪಾವಧಿಯಲ್ಲಿಯೇ ಕಮಿಷನರ್ ಹುದ್ದೆಯಿಂದ ವರ್ಗಾವಣೆಗೊಂಡ ಅಲೋಕ್ ಕುಮಾರ್ ಅವರೇ ಮಾಧ್ಯಮಗಳಿಗೆ ನೀಡಿದ್ದಾರೆ ಎಂದು ವರದಿಯಾಗಿತ್ತು.
ಏನಿದೆ ಆಡಿಯೋದಲ್ಲಿ?
ಅಲೋಕ್ ಕುಮಾರ್ ರಾಜ್ಯದ ಎಡಿಜಿಪಿ ಅಧಿಕಾರಿಗಳ ಪೈಕಿ ಅತ್ಯಂತ ಕಿರಿಯವರಾಗಿದ್ದು ಅವರನ್ನು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಿಸುವ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಯೋಚಿಸುತ್ತಿದ್ದು, ಇದು ಇತರ ಹಿರಿಯ ಅಧಿಕಾರಿಗಳಲ್ಲಿ ತೀವ್ರ ಅಸಮಾಧಾನ ತಂದಿದೆ ಎಂದು ಭಾಸ್ಕರ್ ರಾವ್ ಅವರ ಧ್ವನಿ ಎಂದು ಹೇಳಲಾಗುತ್ತಿರುವ ವ್ಯಕ್ತಿ ಫರಾಜ್ ಗೆ ಈ ಸಂಭಾಷಣೆಯಲ್ಲಿ ಹೇಳುತ್ತಾರೆ. ಒಟ್ಟು ಮೂರು ಆಡಿಯೊ ಫೈಲ್ ಗಳು ಮಾಧ್ಯಮಗಳ ಕೈ ಸೇರಿದ್ದು, ಇವುಗಳ ಸಾರಾಂಶ ಹೀಗಿದೆ: ಭಾಸ್ಕರ್ ರಾವ್ ತಮ್ಮನ್ನು ಕಮಿಷನರ್ ಮಾಡುವಂತೆ ಕುಮಾರಸ್ವಾಮಿಯವರಲ್ಲಿ ಒತ್ತಾಯಿಸುವಂತೆ ಕಾಂಗ್ರೆಸ್ ಹೈ ಕಮಾಂಡ್ ಗೆ ಹೇಳುವಂತೆ ಫರಾಜ್ ಗೆ ಮನವಿ ಮಾಡುತ್ತಾರೆ. ಫರಾಜ್ ಎನ್ನುವ ವ್ಯಕ್ತಿ ತಾನು ಈಗಾಗಲೇ ಅಹ್ಮದ್ ಪಟೇಲ್ ಹಾಗೂ ಸೋನಿಯಾ ಗಾಂಧಿಯವರಿಗೆ ಈ ಬಗ್ಗೆ ತಿಳಿಸಿರುವುದಾಗಿ ಹೇಳುತ್ತಾರೆ. ಒಂದು ಹಂತದಲ್ಲಿ, ಭಾಸ್ಕರ್ ರಾವ್ ಹೇಳ್ತಾರೆ, ಸಮಯ ಮಿಂಚಿ ಹೋದಲ್ಲಿ ಮುಂದಿನ ಒಂದು ವರ್ಷದವರೆಗೆ ಅಲೋಕ್ ಕುಮಾರ್ ಅವರನ್ನು ಕಮಿಷನರ್ ಹುದ್ದೆಯಿಂದ ವರ್ಗಾವಣೆ ಮಾಡಲು ಆಗುವುದಿಲ್ಲ, ಹೀಗಾಗಿ ಶೀಘ್ರದಲ್ಲಿ ತಮ್ಮನ್ನು ಕಮಿಷನರ್ ಆಗಿ ನೇಮಿಸುವಂತೆ ಕುಮಾರಸ್ವಾಮಿಯವರಿಗೆ ತಿಳಿಸುವಂತೆ ಹೇಳುತ್ತಾರೆ.
ಮೂಲಗಳ ಪ್ರಕಾರ, ಬೆಂಗಳೂರು ನಗರ ಪೊಲೀಸರು ಈ ಆಡಿಯೊ ತುಣುಕುಗಳನ್ನು ಮಾಧ್ಯಮಗಳಿಗೆ ತಲುಪಿಸಿದವರು ಯಾರು ಎಂಬುದನ್ನಷ್ಟೇ ತನಿಖೆ ನಡೆಸುತ್ತಿದ್ದಾರೆ. ಆದರೆ, ಪೊಲೀಸ್ ಕಮಿಷನರ್ ಸೇರಿದಂತೆ ಇನ್ನಿತರ ಪ್ರಭಾವಿ ಹುದ್ದೆಗಳಿಗೆ ಲಾಬಿ ಹೇಗೆ, ಯಾರ ಮೂಲಕ ನಡೆಯುತ್ತದೆ ಎಂಬ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತಿಲ್ಲ.
ಅಂದ ಹಾಗೆ, ಬಿಜೆಪಿ ಸರ್ಕಾರದ ಬಹುಮತ ಸಾಬೀತು ಆದೊಡನೆ, ಅಂದರೆ ಆಗಸ್ಟ್ 1-2 ರಂದು, ಎರಡು ತಿಂಗಳಿಗೂ ಕಡಿಮೆ ಅವಧಿಯ ಹಿಂದೆ, ಜೂನ್ 2019ರಲ್ಲಿ, ಕಮಿಷನರ್ ಆಗಿ ನೇಮಕಗೊಂಡ ಅಲೋಕ್ ಕುಮಾರ್ ವರ್ಗಾವಣೆಗೊಂಡು, ಭಾಸ್ಕರ್ ರಾವ್ ಕಮಿಷನರ್ ಆಗಿ ನಿಯುಕ್ತಿಗೊಳ್ಳುತ್ತಾರೆ. ಹಾಗೆಯೆ, ಹೇಮಂತ್ ನಿಂಬಾಳ್ಕರ್ ಅವರನ್ನು ಬೆಂಗಳೂರು ನಗರ ಐಜಿಪಿ (administration) ಆಗಿ ವರ್ಗಾವಣೆ ಮಾಡಲಾಗುತ್ತದೆ.