2020-21ರ ಆಯವ್ಯಯಗಳನ್ನು ಸಂಸತ್ತಿನ ಮುಂದಿಡುವ ಸಂದರ್ಭದಲ್ಲಿ ದೇಶದ ಕಾಲಾತೀತ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಐದು ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ವಿಚಾರವೊಂದನ್ನು ಪ್ರಸ್ತಾಪಿಸಲಾಗಿದೆ.
ಸಹಸ್ರಮಾನಗಳು ಹಾಗೂ ಯುಗಗಳಷ್ಟು ಹಳೆಯ ಇತಿಹಾಸವನ್ನು ಕಂಡ ಭರತವರ್ಷವು, “ಮಾನವ ಜನಾಂಗದ ತೊಟ್ಟಿಲಾಗಿದ್ದು, ಭಾಷೆಯ ಉಗಮಸ್ಥಾನ, ಇತಿಹಾಸ ತಾಯಿ, ದಂತಕಥೆಗಳ ಅಜ್ಜಿ, ಹಾಗೂ ಸಂಪ್ರದಾಯಗಳ ಮುತ್ತಜ್ಜಿ. ಮಾನವನ ಇತಿಹಾಸದ ಕುರಿತ ಅತ್ಯಂತ ಮೌಲ್ಯಯುತವಾದ ನಿರ್ದೇಶನಾ ಸಂಪನ್ಮೂಲಗಳೆಲ್ಲವೂ ಭಾರತದಲ್ಲಿಯೇ ಸೇರಿಕೊಂಡಿವೆ,” ಎಂದು ಶ್ರೇಷ್ಠ ಬರಹಗಾರ, ಉದ್ಯಮಿ ಹಾಗೂ ಪ್ರಾಧ್ಯಾಪಕ ಮಾರ್ಕ್ ಟ್ವೈನ್ ಹೇಳಿದ್ದ ಮಾತುಗಳು ಎಂದೆಂದಿಗೂ ಪ್ರಸ್ತುತ.
ಯುಗಯುಗಳ ಇತಿಹಾಸದ ಕುರುಹುಗಳಾಗಿ ಉಳಿದುಕೊಂಡಿರುವ ಅನೇಕ ಸ್ಮಾರಕಗಳು ಭಾರತೀಯ ನಾಗರೀಕತೆ ನಡೆದು ಬಂದ ಹಾದಿಯನ್ನು ಥಟ್ಟೆಂದು ಹಾಗೇ ಕಣ್ಣ ಮುಂದೆ ತರಬಲ್ಲಷ್ಟು ಪ್ರಖರವಾದ ವಿಚಾರಗಳನ್ನು ತಮ್ಮಲ್ಲಿ ಹುದುಗಿಸಿಟ್ಟುಕೊಂಡಿವೆ.
ದ್ವಾಪರಯುಗದ ಮಹಾಭಾರತದಿಂದ ಹಿಡಿದು, ಮಣ್ಣಿನ ಮಡಿಕೆಗಳ ಬಳಕೆಯ ಆರಂಭಿಕ ದಿನಗಳು, ಹರಪ್ಪ-ಮೊಹೆಂಜೋದಾರೋ ನಾಗರೀಕತೆಯ ಸಂದರ್ಭದ ನಗರ ಯೋಜನೆಗಳ ಕುರಿತಂತೆ ಬೆಳಕು ಚೆಲ್ಲುವಂತಹ 5 ಐತಿಹಾಸಿಕ & ಪೌರಾಣಿಕ ಕ್ಷೇತ್ರಗಳ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಭಾರತೀಯ ಪ್ರವಾಸೋದ್ಯಮದಲ್ಲಿರುವ ಅಗಾಧವಾದ ಸಾಧ್ಯತೆಗಳನ್ನು ಸಾಕಾರಗೊಳಿಸಲು ಇಂಥ ಸಾಕಷ್ಟು ಕ್ರಮಗಳ ಅಗತ್ಯವಿದೆ.
ಅಂದ ಹಾಗೆ, ಇವೇ ಆ ಐದು ತಾಣಗಳು….
ಹಸ್ತಿನಾಪುರ
ಉತ್ತರ ಪ್ರದೇಶದ ಮೀರತ್ ಬಳಿ ಇರುವ ಹಸ್ತಿನಾಪುರದ ಇತಿಹಾಸ ಯುಗಗಳಷ್ಟು ಹಳೆಯದು. ಮಹಾಭಾರತದ ಪಾಂಡವರು ಹಾಗೂ ಕೌರವರ ರಾಜಧಾನಿಯಾಗಿದ್ದ ಈ ಊರಿನಲ್ಲಿ ದ್ವಾಪರಯುಗದ ಕುರುಹುಗಳನ್ನು ಈಗಲೂ ಕಾಣಬಹುದಾಗಿದೆ. ಹಸ್ತಿನಾಪುರವು ಸಾಮ್ರಾಟ ಭರತನ ರಾಜಧಾನಿಯೂ ಆಗಿತ್ತು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಜೈನ ಭಕ್ತರಿಗೂ ಪವಿತ್ರ ಕ್ಷೇತ್ರವಾದ ಹಸ್ತಿನಾಪುರ, ದೇಶದ ಗತಕಾಲದ ದಿನಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸಬಲ್ಲ ಜಾಗಗಳಲ್ಲಿ ಒಂದು.
ರಾಖಿಗರ್ಹಿ
ಹರಿಯಾಣಾದ ಹಿಸಾರ್‌ನಲ್ಲಿರುವ ರಾಖಿಗರ್ಹಿ ಸಿಂಧೂ ನಾಗರಿಕತೆಗಿಂತ ಹಳೆಯದಾಗಿದ್ದು, ಕ್ರಿಸ್ತ ಪೂರ್ವ 6500ದ ಕಾಲಕ್ಕೆ ಸೇರಿದೆ. ಅಲ್ಲದೇ ಸಿಂಧೂ ಕಣಿವೆ ನಾಗರಿಕತೆಯ ಪ್ರಬುದ್ಧ ಘಟ್ಟದ ಭಾಗವಾಗಿಯೂ (ಕ್ರಿ.ಪೂ 2600-1900) ಇರುವ ಈ ಜಾಗವನ್ನು ದೇಶದ ಅತ್ಯಂತ ಸೂಕ್ಷ್ಮ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ.
ಶಿವಸಾಗರ, ಅಸ್ಸಾಂ
ಶಿವನ ಸಾಗರ ಎಂಬ ಅರ್ಥದ ಈ ಊರು ಅಸ್ಸಾಂ ರಾಜ್ಯದಲ್ಲಿದೆ. 1699-1788ರ ನಡುವೆ ಅಹೋಮ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಶಿವಸಾಗರ್, ದೇಹಿಂಗ್ ಮಳೆಕಾಡುಗಳ ನಡುವೆ ಇರುವ ನಗರವಾಗಿದ್ದು, ’ಪೂರ್ವದ ಅಮೇಝಾನ್’ ಎಂದು ಕರೆಯಲ್ಪಡುತ್ತಿದೆ.
ಆದಿಚನಲ್ಲೂರು
ತಮಿಳುನಾಡಿದ ತೂತ್ತುಕುಡಿ ಜಿಲ್ಲೆಯಲ್ಲಿರುವ ಆದಿಚನಲ್ಲೂರು, ಪ್ರಾಚ್ಯವಸ್ತು ಸ್ಮಾರಕವಾಗಿದೆ. ಇಂದಿನ ದಿನಮಾದಲ್ಲೂ ಸಹ ಸಿಗಲಾರದಷ್ಟು ಉತ್ಕೃಷ್ಟ ಗುಣಮಟ್ಟ ಮಡಿಕೆಗಳು, ಕಬಿಣದ ಅಸ್ತ್ರಗಳು, ಮಾನವರ ಅಸ್ಥಿಯನ್ನು ಹೊಂದಿದ್ದ ಜೇಡಿಮಣ್ಣಿನ ಕುಡಿಕೆಗಳು ಇಲ್ಲಿ ಕಂಡುಬಂದಿದ್ದು, ಇವೆಲ್ಲಾ ಕನಿಷ್ಠ 38,000 ವರ್ಷಗಳಷ್ಟು ಹಳೆಯದಾಗಿವೆ ಎನ್ನಲಾಗಿದೆ.
ಧೋಲವಿರಾ
ಗುಜರಾತ್‌ನ ಕಚ್ಛ್ ಜಿಲ್ಲೆಯ ಧೊಲವಿರಾ ಹರಪ್ಪ ನಾಗರಿಕತೆಯ ಸ್ಮಾರಕಗಳ ಪೈಕಿ ಅತ್ಯಂತ ದೊಡ್ಡದಾದ ಎರಡು ಸ್ಮಾರಕಗಳಲ್ಲಿ ಒಂದಾಗಿದೆ. ಈ ಜಾಗವನ್ನು 1967ರಲ್ಲಿ ಪ್ರಾಚ್ಯ ವಸ್ತು ಇಲಾಖೆ ಹೊರತೆಗೆದಿದ್ದು, 1990ರಿಂದ ವ್ಯವಸ್ಥಿತವಾದ ಪ್ರಕ್ರಿಯೆಗಳ ಮೂಲಕ ಇನ್ನಷ್ಟು ಕುರುಹುಗಳನ್ನು ಆಚೆ ತರಲಾಗುತ್ತಿದೆ.