ಐಎಂಎ ಪ್ರಕರಣ: ಅಧಿಕಾರಗಳ ವಿರುದ್ಧ ಭ್ರಷ್ಟಾಚಾರ ತನಿಖೆ ಯಾಕಿಲ್ಲ?
ಲಂಚ ಪಡೆದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿರುದ್ಧ ಭ್ರಷ್ಟಾಚಾರ ಕಾಯ್ದೆ ವಿರುದ್ಧ ತನಿಖೆ ಇನ್ನಷ್ಟೇ ಆರಂಭಗೊಳ್ಳಬೇಕಿದೆ.
ಐಎಂಎ ಪ್ರಕರಣದಲ್ಲಿ ಬೆಂಗಳೂರು ನಗರದ ಕಂದಾಯ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳನ್ನು ವಿಶೇಷ ತನಿಖಾ ತಂಡ (Special Investigation Team) ಬಂಧಿಸಿತ್ತು. ಜುಲೈ 5ರಂದು ತನಿಖಾ ತಂಡ ಬೆಂಗಳೂರು ನಗರ ಉಪವಿಭಾಗಾಧಿಕಾರಿ (ಉತ್ತರ) ಎಲ್ ಸಿ ನಾಗರಾಜ್ ಹಾಗೂ ಗ್ರಾಮ ಲೆಕ್ಕಿಗ ಮಂಜುನಾಥ್ ಅವರನ್ನು ಬಂಧಿಸಿತು. ನಂತರ ಜುಲೈ 8ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ ಎಂ ವಿಜಯಶಂಕರ್ ಅವರನ್ನು ಇದೇ ಪ್ರಕರಣದಲ್ಲಿ ಬಂಧಿಸಲಾಯಿತು.
ವಿಶೇಷ ತನಿಖಾ ತಂಡದ ಪ್ರಕಾರ ಐಎಂಎ ಸಂಸ್ಥೆಯ ಬಗ್ಗೆ ವಿಚಾರಣೆ ಕೈಗೊಂಡು ವರದಿ ನೀಡಲು ರಾಜ್ಯ ಸರ್ಕಾರ ಉಪ ವಿಭಾಗಾಧಿಕಾರಿ (ಉತ್ತರ) ಎಲ್ ಸಿ ನಾಗರಾಜ್ ಅವರನ್ನು ಸಕ್ಷಮ ಪ್ರಾಧಿಕಾರಿಯಾಗಿ ನೇಮಿಸಿತ್ತು. ಆದರೆ, ನಾಗರಾಜ್ ಅವರು ನೈಜ ವಿಷಯಗಳನ್ನು ಮರೆಮಾಚಿ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಅವರಿಗೆ ಅನುಕೂಲವಾಗುವಂತೆ ವರದಿ ಸರ್ಕಾರಕ್ಕೆ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ನಾಗರಾಜ್ ಅವರು ಮನ್ಸೂರ್ ಅವರಿಂದ ರೂ. 4.5 ಕೋಟಿ ಲಂಚ ಪಡೆದಿದ್ದರು ಎಂಬುದು ತನಿಖಾ ತಂಡದ ಆರೋಪ. ಇನ್ನು, ಸರ್ಕಾರಕ್ಕೆ ಸಲ್ಲಿಸುವ ಮೊದಲು ಈ ಸತ್ಯ ಮರೆಮಾಚಿದ ವರದಿಯನ್ನು ಅನುಮೋದಿಸಿದ ಜಿಲ್ಲಾಧಿಕಾರಿ ವಿಜಯಶಂಕರ್ ಈ ಬಗ್ಗೆ ರೂ 1.5 ಕೋಟಿ ಲಂಚ ಪಡೆದಿದ್ದಾರೆಂದು ತನಿಖಾ ತಂಡ ಆರೋಪಿಸಿದೆ.
ಈ ಇಬ್ಬರೂ ಅಧಿಕಾರಿಗಳ ಮೇಲೆ ತನಿಖಾ ತಂಡ ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಸಂರಕ್ಷಣಾ ಕಾಯ್ದೆಯಡಿ (Karnataka Protection of Interest of Depositors in Financial Establishments Act 2004 – KPID) ಹಾಗೂ ಐಪಿಸಿ ಅಡಿಯಲ್ಲಿ (ವಂಚನೆ section 420 IPC) ಪ್ರಕರಣ ದಾಖಲಿಸಿದೆ. ಆದರೆ, ಲಂಚ ಪಡೆದ ಆರೋಪ ಎದುರಿಸುತ್ತಿರುವ ಈ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಪ್ರಕರಣ ಯಾಕೆ ದಾಖಲಾಗಿಲ್ಲ?
ಮೂಲಗಳ ಪ್ರಕಾರ ಜಿಲ್ಲಾಧಿಕಾರಿಗೆ ಹಣ ನೇರವಾಗಿ ತಲುಪಿಲ್ಲ. ವಿಜಯಶಂಕರ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಈ ವಿವರಗಳನ್ನು ನೀಡಲಾಗಿದೆ. ಅದರ ಪ್ರಕಾರ ಈ ಇಬ್ಬರೂ ಅಧಿಕಾರಿಗಳು ಲಂಚದ ರೂಪದಲ್ಲಿ ಮನ್ಸೂರ್ ಖಾನ್ ರಿಂದ ಪಡೆದ ಹಣ ಠೇವಣಿದಾರರ ಹಣವಾಗಿದ್ದು, ತನಿಖೆಯ ಮೊದಲ ಆದ್ಯತೆ ಈ ಹಣವನ್ನು ಪತ್ತೆ ಹಚ್ಚುವುದು. ಆ ನಂತರವಷ್ಟೇ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆಗೆ ನಿರ್ಧರಿಸಲಾಗುವುದು.
ತನಿಖಾ ತಂಡದ ಮೂಲಗಳ ಪ್ರಕಾರ ಜಿಲ್ಲಾಧಿಕಾರಿ ವಿಜಯಶಂಕರ್ ಅವರು ಕೃಷ್ಣಮೂರ್ತಿ ಎಂಬ ಡೆವಲಪರ್ ಜೊತೆಗೆ ಸಂಪರ್ಕ ಹೊಂದಿದ್ದರು. ಜಿಲ್ಲಾಧಿಕಾರಿ ಪಡೆದಿದ್ದಾರೆ ಎನ್ನಲಾದ ರೂ ರೂ 1.5 ಕೋಟಿ ಹಣವನ್ನು ಮನ್ಸೂರ್ ಖಾನ್ ಅವರು ಕೃಷ್ಣಮೂರ್ತಿ ಅವರ ಕಚೇರಿಗೆ (ಜೈನ್ ಕಾಲೇಜ್ ಹಿಂಭಾಗ ಎಂದು ಹೇಳಲಾಗಿದೆ) ತಲುಪಿಸಿದ್ದಾರೆ. ತನಿಖಾ ತಂಡ ಕೃಷ್ಣಮೂರ್ತಿಯವರನ್ನು ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಿದ್ದು, ಅವರ ಹೇಳಿಕೆಯನ್ನು ಸಿಆರ್ ಪಿಸಿ ಸೆಕ್ಷನ್ 164 ಪ್ರಕಾರ ಮ್ಯಾಜಿಸ್ಟ್ರೇಟ್ ಎದುರು ಪಡೆದಿದ್ದಾರೆ. ಈ ಹೇಳಿಕೆ ಪ್ರಕಾರ ವಿಜಯಶಂಕರ್ ಅವರು ದೇವನಹಳ್ಳಿ ಸಮೀಪ ಎರಡು ಪ್ರತ್ಯೇಕ ಭೂಮಿ ಖರೀದಿಸುವ ಸಂಬಂಧ ಕೃಷ್ಣಮೂರ್ತಿ ಅವರೊಂದಿಗೆ ಸಂಪರ್ಕದಲ್ಲಿದ್ದರು. ಅದರಂತೆ, ಮನ್ಸೂರ್ ಅವರಿಂದ ಪಡೆದ ರೂ 1.5 ಕೋಟಿ ಆ ಪೈಕಿ ಒಂದು ಜಾಗ ಖರೀದಿಗೆ ಬಳಸಲಾಗಿದೆ. ತನಿಖಾ ತಂಡ ಜಿಲ್ಲಾಧಿಕಾರಿ ಪಡೆದ ಲಂಚದ ಹಣವನ್ನು ವಶಪಡಿಸಿಕೊಂಡಿದ್ದು, ಶೀಘ್ರವೇ ಈ ಪ್ರಕರಣವನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆಗೆ ಎಸಿಬಿ ಗೆ ಹಸ್ತಾಂತರಿಸುವುದಾಗಿ ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ, ಜಿಲ್ಲಾಧಿಕಾರಿ ವಿಜಯಶಂಕರ್ ಅವರು ತನಿಖಾ ತಂಡದಿಂದ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಸಿಕ್ಕಿದೊಡನೆ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ಪ್ರಕಾರ ಜುಲೈ 6 ರಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ ತನಿಖಾ ತಂಡದ ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ. ಅರ್ಜಿಯಲ್ಲಿ ಮುಖ್ಯವಾಗಿ ವಿಜಯಶಂಕರ್ ಅವರು ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡವೊಂದಕ್ಕೆ ವಹಿಸಿರುವ ನಿರ್ಧಾರವನ್ನೇ ಪ್ರಶ್ನಿಸಿದ್ದಾರೆ. ಅವರ ಪ್ರಕಾರ ಐಎಂಎ ಒಂದು ಲಿಮಿಟೆಡ್ ಲಯಬಿಲಿಟಿ ಪಾರ್ಟನರಶಿಪ್ ಕಂಪೆನಿ (Limited Liability Partnership – LLP) ಆಗಿರುವುದರಿಂದ ಕೇಂದ್ರ ಸರ್ಕಾರ 2019 ಫೆಬ್ರವರಿಯಲ್ಲಿ ಜಾರಿಗೆ ತಂದ ಅನಿಯಂತ್ರಿತ ಡೆಪಾಸಿಟ್ ಗಳ ನಿಷೇಧ ಸುಗ್ರೀವಾಜ್ಞೆ (Banning of Unregulated Deposit Schemes Ordinance 2019) ಅಡಿಯಲ್ಲಿ ಪ್ರಕರಣದ ತನಿಖೆಯನ್ನು ಹಸ್ತಾಂತರಿಸಬೇಕು. ಈ ಸುಗ್ರೀವಾಜ್ಞೆಯ ಸೆಕ್ಷನ್ 29 ಮತ್ತು 30 ರ ಪ್ರಕಾರ, ತಹ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡ ಕಾನೂನು ಬಾಹಿರವಾಗುತ್ತದೆ. ಈ ಅರ್ಜಿ ಸಂಬಂಧ ಹೈ ಕೋರ್ಟ್ ರಾಜ್ಯ, ಕೇಂದ್ರ ಸರ್ಕಾರಗಳು ಹಾಗೂ ಸಿಬಿಐಗೆ ನೊಟೀಸ್ ಜಾರಿಗೊಳಿಸಿದೆ.
ಐಎಂಎ ಹಗರಣ, IMA Scam, ಕರ್ನಾಟಕ ಸರ್ಕಾರ, Government of Karnataka, ಎಚ್ ಡಿ ಕುಮಾರಸ್ವಾಮಿ, H D Kumaraswamy, ಕಂದಾಯ ಇಲಾಖೆ, Revenue Department, ಆರ್ ವಿ ದೇಶಪಾಂಡೆ, R V Deshpande, ಭಾರತೀಯ ರಿಸರ್ವ್ ಬ್ಯಾಂಕ್, Reserve Bank of India, ಕೆಪಿಐಡಿ ಕಾಯ್ದೆ, KPID Act, ಅನಿಯಂತ್ರಿತ ಡೆಪಾಸಿಟ್ ಗಳ ನಿಷೇಧ ಸುಗ್ರೀವಾಜ್ಞೆ, Banning of Unregulated Deposit Schemes Ordinance 2019, ಸಿಬಿಐ, CBI