ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆಂದೇ ರಾಜ್ಯ ಸರ್ಕಾರ ರೂಪಿಸಿದ್ದ ಬಡ್ತಿ ಮೀಸಲಾತಿ ಕಾಯ್ದೆ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಕಾಯ್ದೆಯು ಎಸ್ಸಿ, ಎಸ್ಟಿ ಅಧಿಕಾರಿಗಳಿಗೆ ಕಲ್ಪಿಸುವ ಬಡ್ತಿ ವಿಧಾನ ಆಕ್ಷೇಪಿಸಿ ಬಿ.ಕೆ.ಪವಿತ್ರ ಮತ್ತಿತರರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಇವೆಲ್ಲವನ್ನೂ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮೇ 10ರಂದು ತೀರ್ಪು ಪ್ರಕಟಿಸಿತು. ತೀರ್ಪಿನಲ್ಲಿ ಕರ್ನಾಟಕದ ನೂತನ ಬಡ್ತಿ ಮೀಸಲಾತಿ ಕಾಯ್ದೆಗೆ ಮಾನ್ಯತೆ ನೀಡಿರುವ ನ್ಯಾಯಾಲಯ, ಹಿಂದಿನ ಕಾಯ್ದೆಯಲ್ಲಿದ್ದ ಲೋಪಗಳನ್ನು ನಿವಾರಿಸುವಲ್ಲಿನ ರಾಜ್ಯ ಸರ್ಕಾರದ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರಕರಣದ ಕುರಿತು ತೀರ್ಪು ನೀಡುವಾಗ ಮೀಸಲಾತಿ, ಸಮಾನತೆ, ಸರ್ಕಾರದ ಕರ್ತವ್ಯ ಇತ್ಯಾದಿ ಸಂಗತಿಗಳ ಬಗ್ಗೆ ನ್ಯಾ.ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಯು.ಯು.ಲಲಿತ್ ಅವರಿದ್ದ ಪೀಠ ಮಾತನಾಡಿದೆ. ಆ ಮಾತುಗಳಲ್ಲಿ ಪ್ರಮುಖವೆನಿಸಿದ ಐದು ಅಂಶಗಳು ಇಲ್ಲಿವೆ.
- ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನ ಶತಮಾನಗಳಿಂದಲೂ ತಾರತಮ್ಯ, ಪೂರ್ವಗ್ರಹಗಳಿಂದ ಹೈರಾಣಾಗಿದ್ದಾರೆ. ಊಳಿಗಮಾನ್ಯ ಮತ್ತು ಜಾತಿ ಪ್ರಧಾನ ಸಾಮಾಜಿಕ ವ್ಯವಸ್ಥೆಗಳು ಅವರನ್ನು ಅವಕಾಶವಂಚಿತನ್ನಾಗಿ ಮಾಡಿವೆ. ಹಾಗಾಗಿ, ಅವರಿಗೆ ಅವಕಾಶಗಳನ್ನು ಕಲ್ಪಿಸುವ ವಿಷಯದಲ್ಲಿ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳದೆ ಹೋದಲ್ಲಿ ಸಂವಿಧಾನ ಪ್ರತಿಪಾದಿಸುವ ಸಂಗತಿಗಳು ಕಲ್ಪನೆಯಲ್ಲಿ ಮಾತ್ರ ಉಳಿದುಬಿಡುತ್ತವೆ.
- ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಅವಕಾಶಗಳನ್ನು ಕಲ್ಪಿಸುವುದು ಎಂದರೆ, ಸಂವಿಧಾನ ಬಯಸುವಂತೆ ಸಮಾನತೆಯ ಹಕ್ಕನ್ನು ಸಾಧ್ಯವಾಗಿಸುವುದೇ ಆಗಿದೆ. ಸಂವಿಧಾನವು ಹೇಳುವ ಈ ಸಂಗತಿಯೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಶ್ರೇಯೋಭಿವೃದ್ಧಿಗೆ ರೂಪಿಸುವ ವಿಶೇಷ ಕ್ರಮಗಳನ್ನು ಎತ್ತಿಹಿಡಿಯುತ್ತದೆ.
- ಆಡಳಿತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭ್ಯರ್ಥಿಗಳಿಗೆ ಅವಕಾಶ ಸೃಷ್ಟಿಸುವುದು ಸಮಾನ ನಾಗರಿಕತೆ ತತ್ವಕ್ಕೆ ಬಲ ತುಂಬುತ್ತದೆ. ನಮ್ಮ ಸಮಾಜದಲ್ಲಿ ಯಾವ ಜನ ಪೂರ್ವಗ್ರಹಗಳಿಂದ, ತಾರತಮ್ಯಗಳಿಂದ, ದೌರ್ಜನ್ಯದಿಂದ ನಲುಗಿರುತ್ತಾರೋ ಅವರಿಗೆ ಆಡಳಿತದ ಹಂತಗಳಲ್ಲಿ ದನಿ ಸಿಗುವಂತೆ ಮಾಡುವುದು ಕೂಡ ಸಮಾನ ನಾಗರಿಕ ತತ್ವ.
- ಕೇಂದ್ರ ಅಥವಾ ರಾಜ್ಯಗಳ ಆಡಳಿತದಲ್ಲಿನ ದಕ್ಷತೆ ಎಂಬುದು ಯಾವಾಗಲೂ ಎಲ್ಲರನ್ನೂ ಒಳಗೊಳ್ಳುವುದು ಎಂದೇ ಪರಿಗಣಿಸಬೇಕು. ಸಮಾಜದ ಎಲ್ಲ ವರ್ಗಗಳಿಗೂ ಆಡಳಿತದ ಹಂತದಲ್ಲಿ ಪ್ರತಿನಿಧಿತ್ವ ಸಿಕ್ಕಾಗ ಮಾತ್ರ ಜನರಿಂದ ಮತ್ತು ಜನರಿಗಾಗಿ ಆಡಳಿತ ಎಂಬ ಪರಿಕಲ್ಪನೆ ನಿಜವಾಗುತ್ತದೆ. ಆಡಳಿತದಲ್ಲಿ ಈ ಬಗೆಯ ಬಹುತ್ವ, ಎಲ್ಲ ವರ್ಗಗಳ ಪ್ರತಿನಿಧಿತ್ವ ಇಲ್ಲದೆಹೋದರೆ, ಆಡಳಿತವು ಸಮಾಜದ ಅಂಚಿನಲ್ಲಿರುವ ಜನರ ವಿರುದ್ಧವೇ ಯೋಚಿಸುವಂತಾಗುತ್ತದೆ. ಸಂವಿಧಾನದ ಆಶಯದಂತೆ ಆಡಳಿತದಲ್ಲಿಯೂ ಬಹುತ್ವಕ್ಕೆ ಮಣೆ ಹಾಕದಿದ್ದರೆ, ಈ ವಿಷಯದಲ್ಲಿ ನಮಗೆ ಬದ್ಧತೆ ಇಲ್ಲವಾದರೆ, ಚರಿತ್ರೆ ನಮ್ಮನ್ನು ಕಾಡುತ್ತದೆ ಮತ್ತು ಇನ್ನಷ್ಟು ಅಸಮಾನತೆಯತ್ತ ಜಾರುತ್ತೇವೆ; ಇದು ಸ್ವಾತಂತ್ರ್ಯ ಮತ್ತು ಸಹೋದರತ್ವ ಪ್ರತಿಪಾದಿಸುವ ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು ಎಂಬುದು ನಮಗೆ ಅರಿವಿರಬೇಕು.
- ಸಮಾನತೆಯನ್ನು ಜಾರಿ ಮಾಡುವ ದೃಷ್ಟಿಯಿಂದ ಹುದ್ದೆ ಅಥವಾ ಬಡ್ತಿ ಇನ್ನಿತರ ಅವಕಾಶ ಕಲ್ಪಿಸುವ ಅಭ್ಯರ್ಥಿಗಳು ಭಾರಿ ಬುದ್ಧಿವಂತರಲ್ಲದಿರಬಹುದು ಅಥವಾ ದೊಡ್ಡ ಸಾಧಕರೂ ಅಲ್ಲದಿರಬಹುದು. ಆದರೆ, ಇಂಥ ಕ್ರಮಗಳು ಸಂವಿಧಾನದ ಗುರಿಗಳನ್ನು ಸಾಧ್ಯವಾಗಿಸುತ್ತವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಇಂಥ ಅವಕಾಶ ಕಲ್ಪಿಸುವುದರಿಂದ ಆಡಳಿತದಲ್ಲಿ ವೈವಿಧ್ಯತೆ ಜೊತೆಗೆ ಸಮಾಜದ ಎಲ್ಲ ವರ್ಗಗಳ ಪ್ರತಿನಿಧಿತ್ವ ಕೂಡ ಸಾಧ್ಯವಾಗುತ್ತದೆ.