ಆಡಳಿತಾರೂಢ ಪಕ್ಷಗಳ ಬೆಂಬಲಿಗರು ಕಾಶ್ಮೀರ ವಿಚಾರದಲ್ಲಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ಹೌದು. ವಿಜಯೋತ್ಸವ ಆಚರಿಸುವುದು ಸಹಜವೇ. ಆದರೆ, ಅದಕ್ಕೂ ಮುನ್ನ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯ ಗಂಭೀರತೆಯನ್ನು ಮರೆಯುವುದು ಮಾತ್ರ ಅಸಹಜ.
ಖಾಸಗಿ ಮತ್ತು ಸರಕಾರ ವಲಯದ ಕೈಗಾರಿಕೆಗಳು ನಷ್ಟದಲ್ಲಿವೆ. ವಾಹನಗಳ ಮಾರಾಟ ಕಡಿಮೆ ಆಗಿದೆ, ಉತ್ಪಾದಿಸಲಾದ ವಾಹನಗಳು ಮಾರಾಟವಾಗದೆ ಉಳಿದಿವೆ. ಟಾಟಾ ಮೋಟಾರ್ಸ್ ನಂತಹ ಕಂಪೆನಿಗಳು ತಮ್ಮ ಕೆಲಸದ ವಾರವನ್ನು ಮೂರು ದಿವಸಕ್ಕೆ ಕಡಿತ ಮಾಡಿದೆ. ಸರಕಾರಿ ಕಂಪೆನಿಗಳು ಉದ್ಯೋಗಿಗಳಿಗ ವೇತನ ನೀಡಲು ಒದ್ದಾಡುತ್ತಿವೆ. ಶೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಿದೆ. ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದೆ.
ಗ್ರಾಮೀಣ ಪ್ರದೇಶದ ರೈತನಿಂದ ಹಿಡಿದು ಕೈಗಾರಿಕೆ ನಡೆಸುವ ಕೋಟ್ಯಾಧಿಪತಿ ಉದ್ಯಮಿಗಳ ತನಕ ಎಲ್ಲರು ಆತಂಕದ ದಿನಗಳನ್ನು ಎದುರು ನೋಡುತ್ತಿದ್ದಾರೆ. ಬ್ಯಾಂಕುಗಳು ಮುಗ್ಗಟ್ಟಿನಲ್ಲಿವೆ. ಸಾಲ ವಸೂಲಾಗುತ್ತಿಲ್ಲ. ಉಕ್ಕು ಕಾರ್ಖಾನೆಗಳ ಮಾರಾಟ ಪ್ರಮಾಣ ಕಡಿಮೆಯಾಗಿದೆ. ಜಿಂದಾಲ್, ಅರ್ಸೆನಲ್ ಮಿತ್ತಲ್ ನಂತಹ ಉಕ್ಕಿನ ಕಾರ್ಖಾನೆಗಳು ನಷ್ಟದಲ್ಲಿವೆ. ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಜಮ್ಶೇಡಪುರದಲ್ಲಿ ಟಾಟಾ ಮೋಟಾರ್ಸ್ ಕಂಪೆನಿ ತನ್ನ ಉತ್ಪಾದನಾ ಪ್ರಮಾಣವನ್ನು ಕಡಿಮೆ ಮಾಡಿದ ಪರಿಣಾಮ ಈ ಕಂಪೆನಿಯನ್ನು ಅಲವಂಬಿಸಿದ್ದ ಮೂವತ್ತಕ್ಕೂ ಹೆಚ್ಚು ಕೈಗಾರಿಕಾ ಘಟಕಗಳು ಲಾಕ್ ಔಟ್ ಆಗುವ ಸಂಭವವಿದ್ದು, ಒಂದು ಡಜನ್ ಠಕಗಳು ಈಗಾಗಲೇ ಬಂದ್ ಆಗಿವೆ. ಇದರಿಂದಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಸುಮಾರು ಒಂದು ಸಾವಿರ ಸಣ್ಣ ಉದ್ಯಮಗಳು ಟಾಟಾ ಮೋಟಾರ್ಸ್ ಕಂಪೆನಿಯನ್ನು ಅವಲಂಬಿಸಿ ಅದಕ್ಕೆ ಪೂರಕವಾದ ಉತ್ಪನ್ನಗಳ ನಿರ್ಮಾಣ ಮಾಡುತ್ತಿವೆ. ಟಾಟಾ ಮೋಟರ್ಸ್ ಕಳೆದ ಎರಡು ತಿಂಗಳಿನಿಂದ ಮಾಸಿಕ 15 ದಿವಸ ಮಾತ್ರ ಕೆಲಸ ಮಾಡುತ್ತಿದೆ. ಇದರಿಂದಾಗಿ ಮೂರು ಶಿಫ್ಟುಗಳಲ್ಲಿ ಕೆಲಸ ಮಾಡುತ್ತಿದ್ದ ಪೂರಕ ಘಟಕಗಳು ಈಗ ಕೇವಲ ಒಂದು ಶಿಫ್ಟ್ ಮಾತ್ರ ಕೆಲಸ ಮಾಡುತ್ತಿವೆ.
ಮಾರುತಿ ಸುಜುಕಿ, ಮಹೀಂದ್ರ, ಟೊಯೊಟೊ ಸಹಿತ ಬಹುತೇಕ ಎಲ್ಲ ವಾಹನ ಕಂಪೆನಿಗಳು ಉತ್ಪಾದನೆ ಕಡಿತ ಮಾಡಿವೆ. ದೇಶದಲ್ಲಿ ವಿವಿಧ ಕಂಪೆನಿಗಳ 35 ಸಾವಿರ ಕೋಟಿ ರೂಪಾಯಿ ಮೌಲ್ಯದ ಪ್ರಯಾಣಿಕರ ವಾಹನಗಳು ಮಾರಾಟ ಆಗದೆ ಕೊಳೆಯುತ್ತಿವೆ. ಸುಜುಕಿ ಕಂಪೆನಿ ತನ್ನೆಲ್ಲ ನಿರ್ಮಾಣ ಘಟಕಗಳಲ್ಲಿ ಉತ್ಪಾದನೆ ಕಡಿಮೆ ಮಾಡಿದೆ. ಇದೇ ಮೊದಲ ಬಾರಿಗೆ ಮಾರುತಿ ತನ್ನ ತಾತ್ಕಾಲಿಕ ನೌಕರರನ್ನು ಕೆಲಸದಿಂದ ವಜಾ ಮಾಡಲು ಸಿದ್ಧವಾಗಿದೆ. ಕಾರು ಮಾರಾಟ ಡೀಲರು ಶಾಪುಗಳು ಬಾಗಿಲು ಹಾಕತೊಡಗಿವೆ. ಕಳೆದ ಒಂದೂವರೆ ವರ್ಷದಲ್ಲಿ ದೇಶದಲ್ಲಿ 286 ಡೀಲರುಗಳು ತಮ್ಮ ಅಂಗಡಿ ಬಂದ್ ಮಾಡಿದ್ದು, ಅಂದಾಜು 32,00 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಆಟೋಮೊಬೈಲ್ ಉದ್ಯಮವೊಂದರಲ್ಲೇ ಕಳೆದ ಮೂರು ತಿಂಗಳಲ್ಲಿ ಎರಡು ಲಕ್ಷ ಮಂದಿ ಉದ್ಯೋಗ ವಂಚಿತರಾಗಿದ್ದಾರೆ. ಸರಕಾರದ ನೀತಿಯೊಂದಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉಂಟಾದ ವಿದ್ಯಮಾನಗಳು ಆಟೋಮೊಬೈಲ್ ಉದ್ಯಮದ ಮೇಲೆ ನೇರ ಪರಿಣಾಮಮ ಬೀರಿದೆ. ದೇಶದ ಅತೀ ದೊಡ್ಡ ಕಾರು ಉತ್ಪಾದಕರಾದ ಮಾರುತಿ ಸುಜುಕಿ ಶೇಕಡ 35ರಷ್ಟು ಮಾರುಕಟ್ಟೆಯನ್ನು ಕಳೆದುಕೊಂಡಿದೆ. ದೇಶದ ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇಕಡ 40ರಷ್ಟು ಕುಸಿತ ಕಂಡಿರುವುದುಪ ಕಳವಳಕಾರಿ ಬೆಳವಣಿಗೆ. ಕಳೆದ ಎರಡು ದಶಕಗಳಲ್ಲಿ ವಾಹನ ಉದ್ಯಮ ಇಂತಹ ದುಸ್ಥಿತಿಗೆ ತಲುಪಿರಲಿಲ್ಲ. ಇಂತಹ ಸಂದರ್ಭದಲ್ಲಿ ಸರಕಾರ ಉದ್ಯಮದ ನೆರವಿಗ ಬರುವುದುಂಟು. ಆದರೆ, ಈ ಬಾರಿ ಹಾಗಾಗುತ್ತಿಲ್ಲ ಎನ್ನುತ್ತಿದ್ದಾರೆ ಮಾರುಕಟ್ಟೆ ತಜ್ಞರು.

ಜೆಟ್ ಏರ್ ವೇಸ್ ಬಾಗಿಲು ಹಾಕಿಕೊಂಡಿತು. ಏರ್ ಇಂಡಿಯಾ ರಿಪೇರಿ ಮಾಡಲಾಗದಷ್ಟು ಆರ್ಥಿಕ ಅಧೋಗತಿಗೆ ತಲುಪಿದೆ. ಸರಕಾರ ಸ್ವಾಮ್ಯದ ಟೆಲಿಕಾಂ ದಿಗ್ಗಜ ಭಾರತ್ ಸಂಚಾರ್ ನಿಗಮ (ಬಿಎಸ್ಎನ್ಎಲ್) ಕಳೆದ ವರ್ಷ 7,992 ಕೋಟಿ ರೂಪಾಯಿ ನಷ್ಟ ಮಾಡಿಕೊಂಡಿದ್ದು, ವಿಳಂಬವಾಗಿ ವೇತನ ಪಾವತಿ ಮಾಡುತ್ತಿದೆ. ಏರ್ ಇಂಡಿಯಾ 5,337 ಕೋಟಿ ರೂಪಾಯಿ ನಷ್ಟದಲ್ಲಿದೆ. ಇವೆರಡು ಸರಕಾರಿ ಕಂಪೆನಿಗಿಂತಲೂ ಬಹುದೊಡ್ಡ ಮಟ್ಟದಲ್ಲಿ ಭಾರತೀಯ ಅಂಚೆ ಇಲಾಖೆ ನಷ್ಟ ಮಾಡಿಕೊಂಡಿದೆ. ಪೋಸ್ಟಲ್ ಡಿಪಾರ್ಟ್ ಮೆಂಟ್ 15,000 ಕೋಟಿ ರೂಪಾಯಿ ನಷ್ಟ ಮಾಡಿಕೊಂಡಿದೆ. 2016ರಲ್ಲಿ 6,000 ಕೋಟಿ ನಷ್ಟದಲ್ಲಿದ್ದ ಅಂಚೆ ಇಲಾಖೆ ಈ ಬಾರಿ ಮೂರು ಪಟ್ಟು ನಷ್ಟಕ್ಕೀಡಾಗಿದೆ. ಇತ್ತ ಕಡೆ ಎಚ್ ಎ ಎಲ್ ನಂತಹ ಹಲವರು ಸರಕಾರಿ ಸ್ವಾಮ್ಯದ ಕಂಪೆನಿಗಳು ಉದ್ಯೋಗಿಗಳಿಗ ವೇತನ ಪಾವತಿಸಲು ತಿಣುಕಾಡುವ ಪರಿಸ್ಥಿತಿ ಎದುರಾಗಿದೆ.
ದೇಶದಲ್ಲಿ ಸಾರ್ವಜನಿಕ ರಂಗದ 1300 ಉದ್ದಿಮೆಗಳಿವೆ. ಇದರಲ್ಲಿ ಮುನ್ನೂರಕ್ಕೂ ಹೆಚ್ಚು ಬಾಗಿಲು ಹಾಕಿವೆ ಅಥವಾ ಕೆಲಸ ಮಾಡುತ್ತಿಲ್ಲ. ಇನ್ನುಳಿದವುಗಳ ಒಟ್ಟು ಲಾಭ 17,537 ಕೋಟಿ ರೂಪಾಯಿ ಆಗಿದ್ದರೆ, ಅವುಗಳು ಮಾಡಿಕೊಂಡಿರುವ ಒಟ್ಟು ನಷ್ಟ 97,000 ಕೋಟಿ ರೂಪಾಯಿ.
14 ಸರಕಾರಿ ವಲಯದ ಬ್ಯಾಂಕುಗಳು ನಿರಂತರ ನಷ್ಟದಲ್ಲಿದ್ದು, ಅವುಗಳ ಒಟ್ಟು ನಷ್ಟ 74,000 ಕೋಟಿ ರೂಪಾಯಿ. ಭಾರತೀಯ ಸ್ಟೇಟ್ ಬ್ಯಾಂಕ್ ಕಳೆದ ತಿಂಗಳು 11,648 ಕೋಟಿ ರೂಪಾಯಿ ಬ್ಯಾಡ್ ಲೋನ್ ಗಾಗಿ ರಿಸರ್ವ್ ಇರಿಸಿಕೊಂಡಿದೆ. ಎಸ್ ಬಿಐಯ ಬಹುತೇಕ ದೊಡ್ಡ ಪ್ರಮಾಣದ ವಸೂಲಾಗದ ಸಾಲಗಳು ದಿವಾಳಿ ಕೋರ್ಟಿನಲ್ಲಿ ಕೊಳೆಯುತ್ತಿವೆ.
ಇನ್ನು ಖಾಸಗಿ ವಲಯದ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಕೂಡ ಉತ್ತಮ ಸ್ಥಿತಿಯಲ್ಲಿ ಇಲ್ಲ. ಖಾಸಗಿ ರಂಗದ ಮಂಚೂಣಿಯಲ್ಲಿದ್ದ ಟೆಲಿಕಾಂ ಕಂಪೆನಿ ಭಾರತಿ ಏರ್ ಟೆಲ್ ಹದಿನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗ ಕಳೆದ ಮೂರು ತಿಂಗಳಲ್ಲಿ 2,866 ಕೋಟಿ ರೂಪಾಯಿ ನಷ್ಟ ಮಾಡಿಕೊಂಡಿದೆ.
ಇನ್ನು, ಪ್ರಸಕ್ತ ವರ್ಷ ಕೃಷಿ ಕ್ಷೇತ್ರ ಮತ್ತಷ್ಟು ಡೋಲಾಯಮಾನ ಸ್ಥಿತಿಯಲ್ಲಿದೆ. ಒಂದೆಡೆ ಅತಿವೃಷ್ಟಿ ಆಗುತ್ತಿದ್ದರೆ, ಈ ವರ್ಷ ಜುಲೈ ತಿಂಗಳಲ್ಲೇ ಬರಗಾಲದ ಭೀತಿ ಎದುರಾಗಿತ್ತು. ಭಾರತದ ಬಹುತೇಕ ಕೃಷಿ ಪ್ರದೇಶ ಮಳೆಯಾಧಾರಿತ ಆಗಿರುವುದರಿಂದ ಮುಂಗಾರು ಮತ್ತು ಹಿಂಗಾರು ಮಳೆಯ ವಿತರಣೆಯಲ್ಲಿ ವ್ಯತ್ಯಾಸ ಆಗಿರುವುದರಿಂದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಕೇಂದ್ರ ಸರಕಾರದ ದುಪ್ಪಟ ಆದಾಯದ ಹೇಳಿಕೆ ಹಾಗಿಯೇ ಉಳಿದಿದ್ದು, ಆದಾಯ ವೃದ್ಧಿಯಗಾಗುವ ಲಕ್ಷಣಗಳು ಕಾಣುತ್ತಿಲ್ಲ.
ಕೇಂದ್ರ ಸರಕಾರ ಎಲ್ಲೆಲ್ಲಿ ಮೀಸಲು ಹಣ ಇದೆಯೊ, ಎಲ್ಲೆಲ್ಲ ಹಣ ಎತ್ತುವಳಿ ಮಾಡಲು ಸಾಧ್ಯವೊ ಅಲ್ಲಿಗೆ ಕೈ ಹಾಕುತ್ತಿದೆ. ರೈಲ್ವೇಯ ಖಾಸಗಿಕರಣಕ್ಕ ಮುಂದಾಗಿದೆ. ಜುಜುಬಿ ಮೊತ್ತಕ್ಕೆ ವಿಮಾನ ನಿಲ್ದಾಣಗಳ ಖಾಸಗೀಕರಣ ಮಾಡಲಾಗುತ್ತಿದೆ. ವಿದೇಶ ಸಾಲ ಎತ್ತುವ ಚಿಂತನೆ ನಡೆಸಿದೆ. ಎಷ್ಟೇ ವಿದೇಶ ಪ್ರವಾಸ ಮಾಡಿದರು ವಿದೇಶಿ ನೇರ ಹೂಡಿಕೆದಾರರು ಬರುತ್ತಿಲ್ಲ. ಮಾರಿಶಸ್ ಮೂಲಕ ತಮ್ಮದೇ ಹಣವನ್ನು ವಿದೇಶದ ಮೂಲಕ ಹೂಡಿಕೆ ಮಾಡುವ ಸ್ವದೇಶಿ ಮಂದಿ ಕೂಡ ಈಗ ಕಾಣುತ್ತಿಲ್ಲ. ಭಾರತೀಯ ಶೇರು ಮಾರುಕಟ್ಟೆಯಿಂದ ಬರೊಬ್ಬರಿ ಎರಡು ಟ್ರಿಲಿಯನ್ ಡಾಲರ್ ಅಪಮೌಲ್ಯವಾಗಿದೆ. ಆರ್ಥಿಕ ಸಂಕಷ್ಟ ಕಣ್ಣೆದುರಿಗಿದ್ದರೂ ಯಾವುದೇ ರಚನಾತ್ಮಕ ಕಾರ್ಯಕ್ಕೆ ಸರಕಾರದ ಮುಂದಾಗದೆ ಭಾವನಾತ್ಮಕ ವಿಚಾರದಲ್ಲಿಯೇ `attention diversion’ ಕೆಲಸ ಮಾಡುತ್ತಿದೆ. ಮಂದಿನ ದಿನಗಳು ಇನ್ನಷ್ಟು ಕರಾಳ ಆಗಲಿದೆ.