ಅಸ್ಸಾಂನಲ್ಲಿ ನಡೆಯುತ್ತಿರುವ ನಾಗರಿಕರ ರಾಷ್ಟ್ರೀಯ ನೋಂದಣಿ (ನ್ಯಾಷನಲ್ ರಿಜಿಸ್ಟರ್ ಫಾರ್ ಸಿಟಿಜನ್ಸ್-ಎನ್ ಆರ್ ಸಿ) ಮತ್ತು ವಿದೇಶಿಯರ ನ್ಯಾಯಮಂಡಳಿ (ಫಾರಿನರ್ಸ್ ಟ್ರಿಬ್ಯುನಲ್) ಚುಟುವಟಿಕೆಗಳ ಕುರಿತು ಹಿರಿಯ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಕಾನೂನು ವಲಯದ ತಜ್ಞರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ದೆಹಲಿಯ ಇಂಡಿಯನ್ ಸೊಸೈಟಿ ಆಫ್ ಇಂಟರ್ನ್ಯಾಷನಲ್ ಲಾ ಸಂಸ್ಥೆಯಲ್ಲಿ “ಅಸ್ಸಾಂನಲ್ಲಿ ನಾಗರಿಕತ್ವದ ತಕರಾರು: ಸಾಂವಿಧಾನಿಕ ಪ್ರಕ್ರಿಯೆಗಳು ಮತ್ತು ಮಾನವ ಬೆಲೆ” ಕುರಿತು ವಿವಿಧ ಮಾನವ ಹಕ್ಕು ಸಂಘಟನೆಗಳು ಮತ್ತು ಚಳವಳಿಗಳು ಆಯೋಜಿಸಿದ್ದ, “ಜನರ ನ್ಯಾಯಮಂಡಳಿ (ಪೀಪಲ್ಸ್ ಟ್ರಿಬ್ಯುನಲ್)” ಸಭೆಯಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಮದನ್ ಲೋಕುರ್, ಕುರಿಯನ್ ಜೋಸೆಫ್ ಮತ್ತು ಎ. ಪಿ. ಶಾ, ಹಾಗೂ ಪ್ರೊ. ಫೈಜನ್ ಮುಸ್ತಫಾ, ಪ್ರೊ. ಮೊನಿರುಲ್ ಹುಸೇನ್, ಸಯೀದಾ ಹಮೀದ್, ದೇಬ್ ಮುಖರ್ಜಿ ಮತ್ತು ಗೀತಾ ಹರಿಹರನ್ ಅವರು ನ್ಯಾಯದರ್ಶಿಗಳಾಗಿ (ಜ್ಯೂರಿ) ಭಾಗವಹಿಸಿದ್ದರು.
ವಿವಿಧ ಕ್ಷೇತ್ರಗಳ ತಜ್ಞರು, ಹಿರಿಯ ನ್ಯಾಯವಾದಿಗಳು ಮತ್ತು ಚಳವಳಿಗಾರರು; ಭೂಮಿ ಸಂಸ್ಕೃತಿ ಮತ್ತು ವಲಸೆ, ಭಾರತದಲ್ಲಿ ನಾಗರಿಕತ್ವದ ವಿಕಾಸ, ಅಸ್ಸಾಂನಲ್ಲಿನ ನಾಗರಿಕರ ರಾಷ್ಟ್ರೀಯ ನೋಂದಣಿ ಮತ್ತು ಸಾಂವಿಧಾನಿಕ ಪ್ರಕ್ರಿಯೆಗಳು, ಫಾರಿನರ್ಸ್ ಟ್ರಿಬ್ಯುನಲ್, ಬಂಧನ ಕೇಂದ್ರಗಳು ಮತ್ತು ಭಾರತದ ಇತರ ಪ್ರದೇಶಗಳಿಗೆ ಎನ್ ಆರ್ ಸಿ ವಿಸ್ತರಣೆಯ ಪರಿಣಾಮಗಳ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದರು.
ಇದುವರೆಗಿನ ಇತಿಹಾಸದಲ್ಲಿನ ಅತಿದೊಡ್ಡ ನಾಗರಿಕತ್ವದ ಶೋಧ ಎಂದು ಕರೆಯಲ್ಪಡುತ್ತಿರುವ ಅಸ್ಸಾಂನ ಎನ್ ಆರ್ ಸಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಎರಡು ದಿನಗಳ ಈ ಸಭೆ ಆಯೋಜಿಸಲಾಗಿತ್ತು. ಅಸ್ಸಾಂನ ಪರಿಷ್ಕೃತ ಎನ್ ಆರ್ ಸಿ ಪಟ್ಟಿಯನ್ನು ಕಳೆದ ಆಗಸ್ಟ್ 31 ರಂದು ಪ್ರಕಟಿಸಲಾಗಿದ್ದು, 19 ಲಕ್ಷ ಜನರನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ಆಡಳಿತಾತ್ಮಕ ಪ್ರಕ್ರಿಯೆಯಾಗಿರುವ ಎನ್ ಆರ್ ಸಿ ಪಟ್ಟಿ ತಯಾರಿಕೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಪಾಲ್ಗೊಂಡಿದ್ದಕ್ಕೆ ಜ್ಯೂರಿ ಸದಸ್ಯರು ಟೀಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸೇವಾವಧಿ ಮತ್ತು ವೇತನ, ಭತ್ಯೆ ವಿಷಯಗಳಲ್ಲಿ ಕಾರ್ಯಾಂಗದ ನೇರ ನಿಯಂತ್ರಣದಲ್ಲಿರುವ ಫಾರಿನರ್ಸ್ ಟ್ರಿಬ್ಯುನಲ್ ನ ಸ್ವಾಯತ್ತತೆ ಬಗ್ಗೆಯೂ ಸಂದೇಹ ವ್ಯಕ್ತಪಡಿಸಿದ್ದಾರೆ.
“ತಾವು ಸಹ ಮನುಷ್ಯರು ಹಾಗೂ ಈ ದೇಶದ ಸಹೋದರ ಮತ್ತು ಸಹೋದರಿಯರು ಎಂದು ಹೇಳಿಕೊಳ್ಳುವ ಸಾಂವಿಧಾನಿಕ ಘನತೆಯನ್ನು ಅನುಭವಿಸಲಾಗದ ಸ್ಥಿತಿಗೆ ಅಸ್ಸಾಂನ ಲಕ್ಷಾಂತರ ಜನರನ್ನು ದೂಡಲಾಗಿದೆ. ಘನತೆಯ ಹಕ್ಕು ಸೇರಿದಂತೆ ಸೂಕ್ತ ಕಾನೂನು ನೆರವಿನ ಹಕ್ಕು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದೆ. ಎನ್ ಆರ್ ಸಿ ಪಟ್ಟಿಯಲ್ಲಿ ಸೇರಿದ ಜನರಿಗೆ ಘನತೆಯಿಂದ ಬದುಕಲು ಅವಕಾಶ ನೀಡದಿದ್ದರೆ 21 ನೇ ವಿಧಿ ಅಡಿಯ ಅವರ ಹಕ್ಕುಗಳಿಗೆ ಧಕ್ಕೆಯಾಗುತ್ತದೆ” ಎಂಬುದಾಗಿ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅಭಿಪ್ರಾಯಪಟ್ಟಿದ್ದಾರೆ.

ಎನ್ ಆರ್ ಸಿ ವಿಷಯದಲ್ಲಿ ಅಸಮಾಧಾನ ಹೊರಹಾಕಿದ ನಿವೃತ್ತ ನ್ಯಾಯಮೂರ್ತಿ ಮದನ್ ಲೋಕುರ್ ಅವರು, “ಕಾರ್ಯಾಚರಣೆಗಾಗಿ ಸ್ವಯಂ ಪ್ರಕ್ರಿಯೆಗಳನ್ನು ರೂಪಿಸಿಕೊಳ್ಳುತ್ತಿರುವ ಟ್ರಿಬ್ಯುನಲ್ ಗಳು ನಿರಂಕುಶ ರೀತಿಯಲ್ಲಿ ವರ್ತಿಸುತ್ತಿವೆ. ಬಡ ಮತ್ತು ಅನಕ್ಷರಸ್ಥ ಜನರು ಸಂಕೀರ್ಣ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಣ್ಣ ಅಕ್ಷರ ದೋಷದ ಕಾರಣಕ್ಕೂ ಪಟ್ಟಿಯಿಂದ ಹೆಸರು ಕೈಬಿಡಲಾಗಿದೆ. ಎನ್ ಆರ್ ಸಿ ಗೆ ಅರ್ಜಿ ಸಲ್ಲಿಸದ ವ್ಯಕ್ತಿ ಅಸ್ಸಾಂ ಪಾಲಿಗೆ ನಾಗರಿಕನಲ್ಲದ ಅಥವಾ ರಾಜ್ಯರಹಿತ ವ್ಯಕ್ತಿಯಾಗಬಹುದು, ಆದರೆ ಆತ ಬೇರೆ ರಾಜ್ಯದಲ್ಲಿ ವಾಸಿಸುವ ಭಾರತದ ಪ್ರಜೆಯಾಗಿರಬಹುದಲ್ಲವೆ” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಪಟ್ಟಿಯಲ್ಲಿ ಸೇರಿರದ ವ್ಯಕ್ತಿಗಳ ಬಂಧನಕ್ಕೆ ಏಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂಬುದಾಗಿಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಎನ್ ಆರ್ ಸಿ ಅಂತಿಮ ಪಟ್ಟಿಯಲ್ಲಿ ಹೆಸರು ಕೈಬಿಡಲಾಗಿರುವ ಕೆಲವರ ಅಭಿಪ್ರಾಯ ಮತ್ತು ಅನುಭವಗಳನ್ನು ಆಲಿಸಿದ ಜ್ಯೂರಿ, ಎನ್ ಆರ್ ಸಿ ಪ್ರಕ್ರಿಯೆಯು ‘ಮಾನವೀಯತೆಯ ಬಿಕ್ಕಟ್ಟಿಗೆ ಎಡೆ ಮಾಡಿಕೊಡಲಿದೆ’ ಎಂದು ಉದ್ಗರಿಸಿತು. ಅಲ್ಲದೆ, ನಾಗರಿಕತ್ವ ಸಾಬೀತುಪಡಿಸಬೇಕಾದ ಹೊಣೆಗಾರಿಕೆಯ ಭಾರವನ್ನು ಸರ್ಕಾರಕ್ಕೆ ಬದಲಾಗಿ ವ್ಯಕ್ತಿಯ ಮೇಲೆ ಹೇರುವ ‘ಸರ್ಬಾನಂದ ಸೋನೊವಾಲ v/s ಭಾರತ ಸರ್ಕಾರ’ ಪ್ರಕರಣದಲ್ಲಿ ಸರ್ವೊಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ ಕುರಿತು ಟೀಕೆ ವ್ಯಕ್ತವಾಯಿತು. ಈ ತೀರ್ಪು ವಲಸಿಗರನ್ನು ‘ಅವಮಾನವಗೊಳಿಸಿದೆ’ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಅವರ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಅಭಿಪ್ರಾಯಪಟ್ಟಿತು.
ಎನ್ ಆರ್ ಸಿ ಪ್ರಕ್ರಿಯೆಯಿಂದ ಬಡ ಮತ್ತು ಅನಕ್ಷರಸ್ಥ ಜನರು, ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು, ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದ ಜ್ಯೂರಿ ಸದಸ್ಯರು, ಈ ವಿಷಯದ ಕುರಿತು ಅಂತರರಾಷ್ಟ್ರೀಯ ಸಮಾವೇಶಗಳು ನಡೆಯುವಂತಾಗಲು ಪ್ರಯತ್ನಿಸಬೇಕು ಮತ್ತು ರಾಷ್ಟ್ರೀಯತೆ ಪಡೆಯುವ ಜನರ ಹಕ್ಕುಗಳನ್ನು ಅಂತರರಾಷ್ಟ್ರೀಯ ಕಾನೂನಿಡಿ ಎತ್ತಿಹಿಡಿಯಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ಯಾಂಪೇನ್ ಫಾರ್ ಜ್ಯುಡಿಷಿಯಲ್ ಅಕೌಂಟಬಲಿಟಿ ಅಂಡ್ ರಿಫಾರ್ಮ್ಸ್, ಅಮನ್ ಬಿರಾದರಿ, ಕಾಮನ್ ಕಾಸ್, ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್, ನ್ಯಾಷನಲ್ ದಲಿತ್ ಮೂವ್ ಮೆಂಟ್ ಆಫ್ ಜಸ್ಟಿಸ್, ಸಿಟಿಜನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್, ಸತರ್ಕ್ ನಾಗರಿಕ್ ಸಂಘಟನ್, ಡೆಲ್ಲಿ ಸಾಲಿಡಾರಿಟಿ ಗ್ರೂಪ್, ನ್ಯಾಷನಲ್ ಅಲೆಯನ್ಸ್ ಆಫ್ ಪೀಪಲ್ಸ್ ಮೂವ್ ಮೆಂಟ್ಸ್, ಸ್ವರಾಜ್ ಅಭಿಯಾನ್ ಮತ್ತು ಸಿಟಿಜನ್ಸ್ ಅಗೆನೆಸ್ಟ್ ಹೇಟ್ ಅಂಡ್ ಹ್ಯೂಮನ್ ರೈಟ್ಸ್ ಲಾ ನೆಟ್ ವರ್ಕ್ ಸಂಘಟನೆಗಳ ಸಹಯೋಗದಲ್ಲಿ ಈ ಸಭೆ ಆಯೋಜಿಸಲಾಗಿತ್ತು.