ಕಳೆದ ತಿಂಗಳು ಅಸ್ಸಾಮಿನಲ್ಲಿ ದನದ ಮಾಂಸ ಮಾರುತ್ತಿದ್ದ ಮುಸಲ್ಮಾನನೊಬ್ಬನನ್ನು ಹಿಡಿದು ಬಡಿದು ಬಲವಂತವಾಗಿ ಹಂದಿ ಮಾಂಸ ತಿನ್ನಿಸಿದ ಗುಂಪು ಆತನನ್ನು ಕೇಳಿದ ಪ್ರಶ್ನೆಗಳು- “ನೀನು ಬಾಂಗ್ಲಾದೇಶದವನಾ, ನಿನ್ನ ಹೆಸರು ಎನ್.ಆರ್.ಸಿ.ಯಲ್ಲಿ ಇದೆಯಾ?”
‘ಗೆದ್ದಲು ಹುಳಗಳು’, ‘ನಮ್ಮ ಅನ್ನ ಮತ್ತು ಉದ್ಯೋಗ’ ಕಸಿದವರು ಎಂದೆಲ್ಲ ಅಕ್ರಮ ವಲಸೆಗಾರರನ್ನು ಬಿಜೆಪಿ ಬಣ್ಣಿಸುತ್ತ ಬಂದಿದೆ. ವಲಸೆಯನ್ನೂ ಹಿಂದು-ಮುಸ್ಲಿಂ ಎಂದು ಧೃವೀಕರಿಸಿ ಕಥನ ಕಟ್ಟಿರುವ ಫಲಿತವಿದು.
ಈ ಪ್ರಕರಣ ನಡೆದ ಮರುದಿನವೇ ಎನ್.ಆರ್.ಸಿ.ಯನ್ನು ದೇಶಾದ್ಯಂತ ಜಾರಿಗೆ ತರುವುದಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಘೋಷಿಸಿದ್ದರು. ಅಸ್ಸಾಮಿನ ಈ ತಳಮಳವೇ ಅಡಗುವ ಸೂಚನೆಗಳು ಸಮೀಪದಲ್ಲೆಲ್ಲೂ ಕಾಣದಿರುವಾಗ ರಾಜಕೀಯ ಲಾಭಕ್ಕಾಗಿ ಇಡೀ ದೇಶವನ್ನು ಪೌರತ್ವ ಪರೀಕ್ಷೆಯ ಅಸಹನೆ, ಅನುಮಾನ, ಗೊಂದಲ, ಕ್ಲೇಶಗಳಿಗೆ ತಳ್ಳುವುದು ವಿವೇಕ ಎನಿಸಿಕೊಳ್ಳುವುದಿಲ್ಲ.
ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ಯಾದಿಯ (National Register of Citizens-NRC) ಎರಡನೆಯ ಮತ್ತು ಅಂತಿಮ ಕರಡು ಪ್ರಕಟವಾಗಿ ಸದ್ಯದಲ್ಲೇ ವರ್ಷ ತುಂಬಲಿದೆ. ಅಸ್ಸಾಂ ರಾಜ್ಯದಲ್ಲಿನ ಎಲ್ಲ ಭಾರತೀಯ ಪೌರರ ಹೆಸರುಗಳು, ವಿಳಾಸಗಳು ಹಾಗೂ ಭಾವಚಿತ್ರಗಳನ್ನು ಈ ಕರಡು ಒಳಗೊಂಡಿದೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಸಮಿತಿಯೊಂದು ಈ ಪೌರರನ್ನು ಗುರುತಿಸಿತ್ತು. 1971ರ ಮಾರ್ಚ್ 24ಕ್ಕೆ ಮುನ್ನ ಅಸ್ಸಾಂನಲ್ಲಿ ವಾಸವಿದ್ದವರನ್ನು ಪೌರರೆಂದು ಗುರುತಿಸುವಂತೆ ನ್ಯಾಯಾಲಯವೇ ನಿರ್ದೇಶನ ನೀಡಿತ್ತು. ಅಸ್ಸಾಂ ಒಡಂಬಡಿಕೆಯಲ್ಲಿ ಒಪ್ಪಿತವಾಗಿದ್ದ ತೇದಿಯಿದು.
ಅಕ್ರಮ ವಲಸೆ ಮತ್ತು ಎನ್.ಆರ್.ಸಿ. ಅಸ್ಸಾಮಿನಲ್ಲಿ ರಾಜಕೀಯ ಬೆಂಕಿ ಹೆಚ್ಚಿ ದಶಕಗಳೇ ಉರುಳಿವೆ. ಅಕ್ರಮ ವಲಸೆಗಾರರನ್ನು ಗುರುತಿಸಿ ಅವರವರ ದೇಶಗಳಿಗೆ ವಾಪಸು ಕಳಿಸಲಾಗುವುದು ಎಂಬ ಆಶ್ವಾಸನೆ ನೀಡುವ ಒಪ್ಪಂದವದು. ಅಂದಿನ ರಾಜೀವಗಾಂಧೀ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಅಸ್ಸಾಮ್ ಆಂದೋಲನದ ನಾಯಕರ ನಡುವೆ 1985ರಲ್ಲಿ ಏರ್ಪಟ್ಟಿತ್ತು. ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟ, 1979ರಲ್ಲಿ ಆರಂಭಿಸಿದ್ದ ಆಂದೋಲನ ಒಡಂಬಡಿಕೆಯ ನಂತರ ಅಂತ್ಯವಾಗಿತ್ತು.

ಕಳೆದ ಜುಲೈ ಅಂತ್ಯದಲ್ಲಿ ಪ್ರಕಟಗೊಂಡಿದ್ದ ಪೌರತ್ವ ನೋಂದಣಿ ಕರಡು ಪಟ್ಟಿಯಲ್ಲಿ 40.07 ಲಕ್ಷ ಜನರ ಹೆಸರು ಸೇರಿಲ್ಲ. ಭಯ, ಅನಿಶ್ಚಿತತೆ, ಕಳವಳ, ಸಂದೇಹಗಳು ತಲೆಯೆತ್ತಿವೆ. ನಿರೀಕ್ಷೆಯಂತೆ ಆರ್ಥಿಕ- ಸಾಮಾಜಿಕ ತಳಮಳ ಶುರುವಾಗಿದೆ. ಮನೋಕ್ಲೇಶಗಳಿಂದ ಆತ್ಮಹತ್ಯೆಯಂತ ದುರಂತದ ಪ್ರಕರಣಗಳು ವರದಿಯಾಗತೊಡಗಿವೆ.
ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಉಳ್ಳ ಏಕೈಕ ರಾಜ್ಯ ಅಸ್ಸಾಂ. 1951ರಲ್ಲಿ ಪೂರ್ವ ಪಾಕಿಸ್ತಾನದಿಂದ ಭಾರೀ ವಲಸೆ ನಡೆದ ಸಂದರ್ಭದಲ್ಲಿ ಮೊದಲ ಎನ್.ಆರ್.ಸಿ. ತಯಾರಾಗಿತ್ತು. ಅಂದಿನ ದಿನಗಳಲ್ಲಿಯೂ ಅಕ್ರಮ ವಲಸೆ ಅಸ್ಸಾಮಿನ ಬಹುದೊಡ್ಡ ವಿವಾದಾಸ್ಪದ ವಿಷಯವೇ.
ಅಸ್ಸಾಂ ಒಡಂಬಡಿಕೆ ಕಾರ್ಯರೂಪಕ್ಕೆ ಇಳಿಯಲಿಲ್ಲ. 2005ರ ತನಕ ಯಾವುದೇ ಕ್ರಮ ಜರುಗಲಿಲ್ಲ. ಅಕ್ರಮ ವಲಸೆಯ ವಿಷಯವು ಆಳುವ ಪಕ್ಷಗಳು ಮತ್ತು ಪ್ರತಿಪಕ್ಷಗಳ ನಡುವಣ ರಾಜಕೀಯ ಗ್ರಾಸವಾಯಿತು. ರಾಜ್ಯ ಕಾಂಗ್ರೆಸ್ ಸರ್ಕಾರ 2015ರ ತನಕ ಕೈ ಕಟ್ಟಿ ಕುಳಿತಿತು. ಈ ನಡುವೆ ಬೋಡೋಲ್ಯಾಂಡ್ ಪ್ರಾಬಲ್ಯದ ಜಿಲ್ಲೆಗಳಲ್ಲಿ ಬಂಗಾಳಿ ಮುಸ್ಲಿಮರು ಮತ್ತು ಬುಡಕಟ್ಟು ಜನರ ನಡುವೆ ದ್ವೇಷದ ಘರ್ಷಣೆಗಳು ಜರುಗಿ ಎಪ್ಪತ್ತಕ್ಕೂ ಹೆಚ್ಚು ಮಂದಿ ಬಲಿಯಾದರು.
ಎನ್.ಆರ್.ಸಿ. ಪರಿಷ್ಕರಣೆಗೆ ಕಾಲಮಿತಿ ಗೊತ್ತುಪಡಿಸಿ ಸುಪ್ರೀಂ ಕೋರ್ಟ್ 2015ರಲ್ಲಿ ಆದೇಶ ನೀಡಿತು. 20016ರಲ್ಲಿ ಅಸ್ಸಾಂ ರಾಜ್ಯಾಧಿಕಾರ ಬಿಜೆಪಿ ವಶವಾಯಿತು. ಪರಿಷ್ಕರಣೆಯ ಕೆಲಸ ಚುರುಕಾಗಿ ನಡೆಯತೊಡಗಿತು. ಸುಪ್ರೀಂ ಕೋರ್ಟ್ ಛಾಟಿ ಬೀಸಿದ ನಂತರ 2018ರ ಜುಲೈ 30ರಂದು ಪರಿಷ್ಕರಣೆಯ ಕೆಲಸ ಪೂರ್ಣಗೊಂಡಿತು. ಪೌರತ್ವ ಬೇಡಿ ಒಟ್ಟು 3.29 ಕೋಟಿ ಅರ್ಜಿಗಳು ಬಂದಿದ್ದವು. ಸುಮಾರು 40 ಲಕ್ಷ ಮಂದಿ ಪೌರತ್ವ ಯಾದಿಯಿಂದ ಹೊರಗುಳಿದಿದ್ದಾರೆ. ಈ ಪೈಕಿ ಯಾವ ಧರ್ಮಕ್ಕೆ ಸೇರಿದವರು ಎಷ್ಟೆಷ್ಟು ಮಂದಿ ಇದ್ದಾರೆ ಎಂಬ ಅಂಕಿ ಅಂಶಗಳು ಇನ್ನೂ ಹೊರಬಿದ್ದಿಲ್ಲ. ಆದರೆ ಹಿಂದು ಬಂಗಾಳಿಗಳ ಸಂಖ್ಯೆಯೇ ದೊಡ್ಡದು ಎಂಬುದು ಕ್ರಮೇಣ ಅರಿವಿಗೆ ಬರತೊಡಗಿದೆ ಎನ್ನುತ್ತಾರೆ ಗುವಾಹಟಿ ವಿಶ್ವವಿದ್ಯಾಲಯದ ಅಂಕಿ ಅಂಶಗಳ ವಿಭಾಗದ ನಿವೃತ್ತ ಪ್ರೊಫೆಸರ್ ಅಬ್ದುಲ್ ಮನ್ನನ್. ಸುಮಾರು 25 ಲಕ್ಷ ಹಿಂದು ಬಂಗಾಳಿಗಳು ಅಂತಿಮ ಪಟ್ಟಿಯಿಂದ ಬಿಟ್ಟು ಹೋಗಿದ್ದಾರೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿನತ್ತ ಅವರು ಗಮನ ಸೆಳೆದಿದ್ದಾರೆ.

ಹತ್ತಾರು ಲಕ್ಷ ಬಾಂಗ್ಲಾದೇಶಿಗಳು ಇದ್ದಾರೆಂದು ನಂಬಿ ಸ್ಥಳಕ್ಕೆ ತೆರಳಿ ತನಿಖೆ ನಡೆಸುವ ಚುನಾವಣಾ ಆಯೋಗ ಮತ್ತು ಗಡಿ ಪೊಲೀಸ್ ದಳ, ಬಾಂಗ್ಲಾದೇಶಿಗಳು ಸಿಗದಿದ್ದರೆ ದಾಖಲೆ ದಸ್ತಾವೇಜುಗಳಿಲ್ಲದ ಭಾರತೀಯರನ್ನೇ ಬಾಂಗ್ಲಾದೇಶಿಗಳೆಂದು ಗುರುತಿಸುತ್ತಿರುವ ವಿಡಂಬನೆ ನಡೆದಿದೆ. ಹತ್ತಾರು ದಾಖಲೆ ದಸ್ತಾವೇಜುಗಳ ಹೊಂದಿಸಲು, ಜನ ತಮ್ಮ ಹಸುಗಳನ್ನು ಅರ್ಧ ಬೆಲೆಗೆ ಮಾರುತ್ತಿದ್ದಾರೆ. ಹೀಗೆ ಬಿಕರಿಯಾಗುತ್ತಿರುವ ಹಸುಗಳನ್ನು ಎನ್.ಆರ್.ಸಿ. ಹಸುಗಳೆಂದು ಕರೆಯಲಾಗುತ್ತಿದೆ. ಮೀನುಗಾರರು ತಮ್ಮ ದೋಣಿ ಮಾರುತ್ತಿದ್ದಾರೆ. ಕಡ ಪಡೆದವರು ಹಣ ಕೊಟ್ಟವರ ಮನೆಗಳಿಗೆ ಉಚಿತ ಮೀನು ಸರಬರಾಜು ಮಾಡುತ್ತಿದ್ದಾರೆ. ಇನ್ನು ಅಸ್ತಿಪಾಸ್ತಿ ಇಲ್ಲದ ಬಡಕೂಲಿಗಳ ಗೋಳು ಕೇಳುವವರೇ ಇಲ್ಲ. ಪೊಲೀಸರೂ ಸೇರಿದಂತೆ ಸರ್ಕಾರಿ ಸಿಬ್ಬಂದಿ ಸುಲಿಗೆಯಲ್ಲಿ ತೊಡಗಿದೆ. ಕೋಟ್ಯಂತರ ಮಂದಿ ಕಂಬ ಸುತ್ತುತ್ತಿದ್ದಾರೆ. ಒಂದೇ ಕುಟುಂಬದಲ್ಲಿ ಅಪ್ಪನನ್ನು ಪಟ್ಟಿಯಿಂದ ಕೈಬಿಟ್ಟಿರುವ ಅಥವಾ ಮಗಳನ್ನು ಪಟ್ಟಿಯಿಂದ ಹೊರಗಿಟ್ಟಿರುವ, ಗಂಡ ಹೆಂಡತಿಯನ್ನು ಬೇರೆ ಮಾಡಿರುವ ಅನರ್ಥಗಳು ಭಾರೀ ಸಂಖ್ಯೆಯಲ್ಲಿ ಘಟಿಸಿವೆ, ಬಡ ಅನಕ್ಷರಸ್ಥ ಬಂಗಾಳಿ ಜನ ಪೌರತ್ವದ ದಾಖಲೆಗಳಿದ್ದರೂ, ಅವುಗಳ ಮಹತ್ವ ಅರಿಯದೆ ಕಾಪಾಡಿಕೊಂಡವರಲ್ಲ. ಅಂತಹವರು ಹೇಳಲಾರದ ಫಜೀತಿಗೆ ಬಿದ್ದಿದ್ದಾರೆ. ಮುಂದಿನ ಗತಿ ಏನು ಎಂಬ ಕಳವಳ ಈ ಜನರನ್ನು ಮತ್ತು ಅವರ ಕುಟುಂಬಗಳನ್ನು ಬಾಧಿಸಿದೆ.
ಕಳೆದ ಒಂದೂವರೆ ವರ್ಷದಲ್ಲಿ ಪೌರತ್ವದ ಮನೋಕ್ಲೇಶಕ್ಕೆ ಈಡಾಗಿ ಅಸ್ಸಾಮಿನಲ್ಲಿ 16 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪೈಕಿ ಹಿಂದುಗಳು ಹನ್ನೆರಡು ಮಂದಿ. ಉಳಿದ ನಾಲ್ವರು ಮುಸಲ್ಮಾನರು ಎಂದು ಅಧ್ಯಯನಗಳು ಹೇಳುತ್ತಿವೆ. ಈ ಹಿಂದು ಆಯಾಮ ಅರಿವಿಗೆ ಬಂದ ನಂತರವೇ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಪ್ಘಾನಿಸ್ತಾನದ ಹಿಂದೂ-ಕ್ರೈಸ್ತ-ಬೌದ್ಧ-ಸಿಖ್ ವಲಸಿಗರಿಗೆ ಪೌರತ್ವ ನೀಡುವ ನಾಗರಿಕತೆ ಕಾಯಿದೆಗೆ ತಿದ್ದುಪಡಿ ತರುವ ವಿಧೇಯಕವನ್ನು ತಂದಿದೆ. ಆದರೆ ಈ ವಿಧೇಯಕ ಅಸ್ಸಾಮ್ ಮತ್ತು ಈಶಾನ್ಯ ಭಾರತದ ಅನೇಕ ರಾಜ್ಯಗಳ ಸ್ಥಳೀಯರಿಂದ ತೀವ್ರ ವಿರೋಧ ಎದುರಿಸಿದೆ.
ಆದರೆ ಹೊರಗುಳಿದಿರುವವರ ಹಾಲಿ ಹಣೆಬರೆಹವೇ ಅಂತಿಮ ಅಲ್ಲ. ಹೊಸ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಅರ್ಜಿಗಳ ವಿಚಾರಣೆ ನಡೆಸಿ, ದಾಖಲೆ ದಸ್ತಾವೇಜುಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು. ಆನಂತರವೂ ಹೊರಗುಳಿವವರ ಭವಿಷ್ಯವೇನು? ಸೆರೆವಾಸದ ಶಿಬಿರಗಳಿಗೆ ನೂಕುವುದೇ ಅಥವಾ ದೇಶದಿಂದ ಹೊರ ಹಾಕುವುದೇ? ಹೌದು ಎಂದುಕೊಂಡೇ ಬಂದಿದ್ದಾರೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ. ಆ ದಿನಗಳು ಇನ್ನೂ ಸಮೀಪಿಸಿಲ್ಲ.ಘೋಷಿತ ವಿದೇಶೀಯರನ್ನು ಸೆರೆಯಾಳು ಶಿಬಿರಗಳಲ್ಲಿ ಕೂಡಿ ಹಾಕಿ ಸಲಹುವುದು ಸರ್ಕಾರದ ಹೊಣೆ. ಹಾಲಿ ಆರು ಶಿಬಿರಗಳಲ್ಲಿ 265 ಹಿಂದುಗಳು, 618 ಮುಸಲ್ಮಾನರನ್ನು ಇರಿಸಲಾಗಿದೆ. ಈ ಶಿಬಿರಗಳನ್ನು ನಡೆಸಲು ತಿಂಗಳಿಗೆ 13 ಲಕ್ಷ ರುಪಾಯಿ ವೆಚ್ಚವಾಗುತ್ತಿದೆ.

ಅನ್ನ- ನೀರು- ಜಮೀನಿನಂತಹ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ನಡೆದಿರುವ ಈ ಮಾನವ ಸಂಘರ್ಷ ಕೇವಲ ಅಸ್ಸಾಮ್ ಗೆ ಸೀಮಿತ ಅಲ್ಲ. ಹೊಸ ನೆಲ, ಹೊಸ ಸೂರನ್ನು ನಿತ್ಯ ಅರಸತೊಡಗಿರುವ ನಿರಾಶ್ರಿತರ ಸಂಖ್ಯೆ ಜಗತ್ತಿನಾದ್ಯಂತ ಕೋಟಿಗಳ ಸಂಖ್ಯೆ ಮುಟ್ಟಿದೆ. ನಿರಾಶ್ರಿತರನ್ನು ನೋಡುವ ಬಗೆ ಬದಲಾಗುತ್ತಿರುವ ಇಂದಿನ ದಿನಮಾನದಲ್ಲಿ ಲಕ್ಷಾಂತರ ಮಂದಿಯನ್ನು ದೇಶದಿಂದ ಹೊರಹಾಕುವುದು ಸುಲಭ ಅಲ್ಲ. ರಾಷ್ಟ್ರೀಯ- ಅಂತಾರಾಷ್ಟ್ರೀಯ ಸಾಧಕ ಬಾಧಕಗಳಿಂದ ಹೊರತೂ ಅಲ್ಲ.
ತಮ್ಮ ಜಮೀನು ಉದ್ಯೋಗಗಳನ್ನು ಬಾಂಗ್ಲಾದೇಶಿ ವಲಸೆಗಾರರು ಕಿತ್ತುಕೊಳ್ಳುವ ಮತ್ತು ತಮ್ಮ ಸಂಸ್ಕೃತಿಯನ್ನು ಅಳಿಸಿ ಹಾಕುತ್ತಾರೆಂಬ ಭಯ ಅಸ್ಸಾಮಿ ಜನರನ್ನು ದೀರ್ಘಕಾಲದಿಂದ ಕಾಡಿದೆ. ಈ ಆತಂಕ ಆಧಾರ ರಹಿತ ಅಲ್ಲ. ಅಂತೆಯೇ ಬಹಳ ಹಿಂದೆಯೇ ಈ ಆತಂಕವನ್ನು ನಿವಾರಿಸುವ ಸೂಕ್ತ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಳ್ಳಬೇಕಿತ್ತು. ಆದರೆ ಯಾವುದೇ ಕ್ರಮ ಜರುಗಿಸುವ ಮುನ್ನ ಮೂಲಭೂತವಾಗಿ ಇದೊಂದು ಮಾನವೀಯ ಸಮಸ್ಯೆ ಎಂಬುದನ್ನು ಮರೆಯುವಂತಿಲ್ಲ. ಯಾವುದೇ ದುಡುಕಿನ ನಡೆಯು ಧರ್ಮಾಂಧತೆ ಮತ್ತು ಜನಾಂಗೀಯ ಹತ್ಯೆಗೆ ದಾರಿ ಮಾಡಬಲ್ಲದು. 1983ರ ಬರ್ಬರ ನೆಲ್ಲಿ ನರಮೇಧ ಮರುಕಳಿಸೀತು. ವಲಸೆಯ ಐತಿಹಾಸಿಕ ವಾಸ್ತವಗಳನ್ನು ಪರಿಗಣಿಸಿ ನ್ಯಾಯಯುತ ಪರಿಹಾರ ರೂಪಿಸಬೇಕಾಗಿದೆ.
ಮುಂದುವರಿಯುವುದು…