ಯಾವುದೇ ದೊಡ್ಡ ಯೋಜನೆಗೂ ಮೊದಲು, ಅದರಲ್ಲೂ ಅರಣ್ಯ ಪ್ರದೇಶವನ್ನು ಅರಣ್ಯಕ್ಕೆ ಸಂಬಂಧಪಡದ ಕಾಮಗಾರಿಗಳಿಗೆ (Non-Forest works) ಉಪಯೋಗಿಸುವ ಮೊದಲು ಪರಿಸರ ಹಾನಿ ವರದಿ ಮಾಡಬೇಕಾಗುವುದು (Environmental Impact Assessment – EIA – Notification of 2006) ನಿಯಮದಡಿಯಲ್ಲಿ. ಎತ್ತಿನಹೊಳೆ ಕಾಮಗಾರಿ ಆಕ್ಷೇಪಿಸಿ ಸಲ್ಲಿಸಲಾಗಿದ್ದ ಅರ್ಜಿ ತಿರಸ್ಕರಿಸುವಾಗ ಹಸಿರು ನ್ಯಾಯಮಂಡಳಿ (National Green Tribunal) ನೀಡಿದ ಕಾರಣ ಹಲವು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇವುಗಳಲ್ಲಿ ಮುಖ್ಯವಾದದ್ದು, ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಆದ ಕಾರಣ EIA ಪೂರ್ವ ಅನುಮತಿ ಅಗತ್ಯವಿಲ್ಲ ಎಂಬುದು.
ಪರಿಸರ ಹೋರಾಟಗಾರರಾದ ಕೆ ಸೋಮಶೇಖರನ್, ಹಾಗೂ ಎಚ್ ಎ ಕಿಶೋರ್ ಕುಮಾರ್ ಯೋಜನೆಯ ೆರಡನೆಯ ಹಂತದ ಅನುಮತಿ ಪ್ರಶ್ನಿಸಿ ಮತ್ತು ಪರಿಸರ ಹಾನಿ ವರದಿ ಇಲ್ಲದಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಹಸಿರು ನ್ಯಾಯಮಂಡಳಿಯ ದಕ್ಷಿಣ ಪೀಠ (ಚೆನ್ನೈ) ಅರ್ಜಿಯನ್ನು ತಿರಸ್ಕರಿಸಿತ್ತು. ಈ ಸಂಬಂಧ ಅರ್ಜಿದಾರರು ಮನವಿ ಸಲ್ಲಿಸಿದ್ದರು.
ಸಹಜವಾಗಿಯೇ ಮೂಡುವ ಪ್ರಶ್ನೆ ಎಂದರೆ, ಯಾವೆಲ್ಲಾ ಯೋಜನೆಗಳಿಗೆ EIA ನೋಟಿಫಿಕೇಶನ್ ನಿಯಮದಂತೆ ಪೂರ್ವಾನುಮತಿ ಅಗತ್ಯ? ನ್ಯಾಯಮಂಡಳಿ ತನ್ನ ಆದೇಶದಲ್ಲಿ ಈ ವಿವರಗಳನ್ನು ಸೂಚ್ಯವಾಗಿ ನೀಡಿದೆ. ಆದರೆ ಅದರ ವಿವರಗಳನ್ನು ಕೂಲಂಕುಶವಾಗಿ ನೋಡಬೇಕಿದೆ.
Environmental Impact Assessment Notification of 2006 ರಂತೆ, ಯೋಜನೆಗಳನ್ನು A ಹಾಗೂ B ವರ್ಗಗಳಲ್ಲಿ ವಿಂಗಡಿಸಲಾಗಿದೆ. A ವರ್ಗಗಳಡಿ ಬರುವ ಯೋಜನೆಗಳಿಗೆ ಕೇಂದ್ರ ಅರಣ್ಯ, ಪರಿಸರ ಇಲಾಖೆ ಅನುಮತಿ ನೀಡಬೇಕು ಹಾಗೂ B ವರ್ಗಗಳಲ್ಲಿ ಬರುವ ಯೋಜನೆಗಳಿಗೆ ರಾಜ್ಯ ಪರಿಸರ ಹಾನಿ ಮಾಪನ ಪ್ರಾಧಿಕಾರ (State Environment Impact Assessment Authority) ಅನುಮತಿ ನೀಡಬೇಕು.
ನದಿ ಪಾತ್ರಗಳಲ್ಲಿನ ಯೋಜನೆಗಳ ವಿವರ ನೋಟಿಫಿಕೇಶನ್ ನ 1-C ಅಡಿಯಲ್ಲಿ ವಿವರಿಸಲಾಗಿದೆ. ಇದರಂತೆ, 50 ಮೆಗಾವ್ಯಾಟ್ ಗಿಂತ ಹೆಚ್ಚಿನ ವಿದ್ಯುತ್ ಯೋಜನೆ A ವರ್ಗದಲ್ಲಿ ಇದೆ. ಹಾಗೆಯೇ, 50 ಮೆಗಾವ್ಯಾಟ್ ಗಿಂತ ಕಡಿಮೆ ಹಾಗೂ 25 ಮೆಗಾವ್ಯಾಟ್ ಗಿಂತ ಹೆಚ್ಚಿನ ವಿದ್ಯುತ್ ಯೋಜನೆ B ವರ್ಗದಲ್ಲಿ ಸೇರಿಸಲಾಗಿದೆ. ನೀರಾವರಿ ಯೋಜನೆಗಳಲ್ಲಿ 10,000 ಹೆಕ್ಟೇರ್ ನಷ್ಟು ಪ್ರದೇಶಗಳಲ್ಲಿನ ನೀರಾವರಿ ಯೋಜನೆ A ವರ್ಗದಲ್ಲಿ ಹಾಗೂ ಅದಕ್ಕೂ ಕಡಿಮೆಯ ಯೋಜನೆ B ವರ್ಗದಲ್ಲಿ ಸೇರಿಸಲಾಗಿದೆ.

“ಯೋಜನೆ ಅನುಷ್ಟಾನಗೊಳಿಸುವವರ ಪ್ರಕಾರ ಎತ್ತಿನಹೊಳೆ ಯೋಜನೆಯನ್ನು ಹೈಡ್ರಾಲಿಕ್ ವಿದ್ಯುತ್ ಸ್ಟೇಶನ್ ಗಾಗಿಯೋ ಅಥವಾ ಯಾವುದೇ ನೀರಾವರಿಗಾಗಿ (Irrigation) ಬಳಸುವ ಉದ್ದೇಶ ಇಲ್ಲ. ಯೋಜನೆ ಕೇವಲ ಕುಡಿಯುವ ನೀರಿಗಾಗಿ ಇರುವುದರಿಂದ EIA ನೋಟಿಫಿಕೇಶನ್ ಅಡಿ ಪೂರ್ವಾನುಮತಿ ಅಗತ್ಯವಿಲ್ಲ,’’ ಎಂದು ನ್ಯಾಯಮಂಡಳಿ ಹೇಳಿದೆ.
ಇಲ್ಲಿರುವ ಪ್ರಮುಖ ಪ್ರಶ್ನೆಯೆಂದರೆ, ಕುಡಿಯುವ ನೀರಿನ ಸಂಬಂಧ ನಡೆಯುವ ಕಾಮಗಾರಿಗಳಿಗೆ ಅನುಮತಿ ಬೇಕಿಲ್ಲ ಎಂದು EIA ನೋಟಿಫಿಕೇಶನ್ ಹೇಳಿದೆಯೇ? ನೋಟಿಫಿಕೇಶನ್ ಓದಿದರೆ ಎಲ್ಲಿಯೂ ಕುಡಿಯುವ ನೀರಿನ ಯೋಜನೆಗೆ ಅನುಮತಿ ಬೇಕಿಲ್ಲಎಂಬ ಅಂಶವಿಲ್ಲ. ಹಸಿರು ಪೀಠದ ಮುಂದೆ ಸೋಮಶೇಖರ್ ಪರವಾಗಿ ವಾದ ಮಂಡಿಸಿದ ವಕೀಲ ಪ್ರಿನ್ಸ್ ಐಸಾಕ್ ಪ್ರಕಾರ EIA ನೋಟಿಫಿಕೇಶನ್ ಬಗ್ಗೆ ಹಸಿರು ಪೀಠದ ಅಭಿಪ್ರಾಯ ಅಷ್ಟೊಂದು ತೃಪ್ತಿದಾಯಕವಾಗಿಲ್ಲ. ಬದಲಾಗಿ, ನೋಟಿಫೇಕಶನ್ ನ 1-C ಅಡಿಯಲ್ಲಿಯೂ ಎತ್ತಿನಹೊಳೆ ಯೋಜನೆಯ ಕಾರ್ಯ ಪ್ರಶ್ನಿಸಬಹುದು.
ಐಸಾಕ್ ಅವರ ಪ್ರಕಾರ ಸೋಮಶೇಖರ್ ಅವರು ಹಸಿರು ಪೀಠದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಸಿವಿಲ್ ಮನವಿ ಸಲ್ಲಿಸಲಿದ್ದಾರೆ.
ಎತ್ತಿನಹೊಳೆ ಕಾಮಗಾರಿ ನಿರ್ವಹಿಸುವುದು ಕರ್ನಾಟಕ ನೀರಾವರಿ ನಿಗಮ. ಕೇಂದ್ರ ಪರಿಸರ ಇಲಾಖೆ 2013 ರಲ್ಲಿ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತ್ತು. ಪರಿಸರದ ಮೇಲೆ ಆಗುವ ಹಾನಿಯ ವರದಿ ಪಡೆಯುವ ಪೂರ್ವ ಅನುಮತಿ ಅಗತ್ಯವಿಲ್ಲ ಎಂಬುದೂ ಕೂಡ ಆಗಲೇ ಸ್ಪಷ್ಟಪಡಿಸಲಾಗಿತ್ತು.
ಹಸಿರು ನ್ಯಾಯಮಂಡಳಿ ಮುಂದೆ ಸಲ್ಲಿಸಲಾದ ಅರ್ಜಿಗಳಲ್ಲಿ ಹೇಳಲಾದ ಅಂಶವೆಂದರೆ, 2015 ರಲ್ಲಿ (22-07-2015) ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (Principal Chief Conservator of Forests) ಯವರ ಶಿಫಾರಸನ್ನು ನಿರ್ಲಕ್ಷಿಸಲಾಗಿದೆ ಹಾಗೂ ಯೋಜನೆಯಿಂದ ಪಶ್ಚಿಮ ಘಟ್ಟದ ಜೀವ ವೈವಿಧ್ಯ ಹಾಗೂ ಪರಿಸರದ ಮೇಲಾಗುವ ಹಾನಿಯನ್ನು ಕಡೆಗಣಿಸಿ ಮುಂದುವರಿಸಲಾಗಿದೆ. ಎತ್ತಿನಹೊಳೆ, ಮೂಲತ: ಕುಡಿಯುವ ನೀರಿನ ಯೋಜನೆಯೆಂದು ಕರೆಯಲಾದರೂ, ಇದನ್ನು ನೀರಾವರಿಗೂ ಬಳಸುವ ಸಾಧ್ಯತೆ ಇರುವುದರಿಂದ Environmental Impact Assessment Notification of 2006 ನಿಯಮಾವಳಿಗಳಂತೆ ಪರಿಸರ ಪೂರ್ವಾನುಮತಿ ಅಗತ್ಯ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಅರ್ಜಿಯ ಇನ್ನಿತರ ಪ್ರಮುಖ ಅಂಶಗಳು;
1. ಯೋಜನಾ ವರದಿಯಲ್ಲಿ 13.93 ಹೆಕ್ಟೇರ್ ಅರಣ್ಯ ಪ್ರದೇಶ ಬಳಕೆಯಾಗಲಿದೆ ಎಂದು ಹೇಳಲಾದರೂ, ಬಳಸುತ್ತಿರುವ ಅರಣ್ಯ ಪ್ರದೇಶ 600 ಹೆಕ್ಟೇರ್.
2. ತಜ್ಞರ ಸಮಿತಿಯ ಸದಸ್ಯರಲ್ಲೊಬ್ಬರಾದ ಎಲ್ಲಪ್ಪ ರೆಡ್ಡಿ ಅವರು ಯೋಜನೆಯಿಂದ ಪಶ್ಚಿಮ ಘಟ್ಟದ ಜೀವ ವೈವಿಧ್ಯ ಮತ್ತು ಪರಿಸರದ ಮೇಲೆ ಅತೀವ ಹಾನಿಯಾಗಲಿದೆ ಎಂಬ ವರದಿ ನೀಡಿದ್ದರು.
3. ಕಾಮಗಾರಿಗೆ ಅನುಮತಿ ನೀಡುವ ಮೊದಲು ಪ್ರಾದೇಶಿಕ ಸಮಿತಿ ಕೆಲವು ನಿರ್ಬಂಧಗಳನ್ನು ವಿಧಿಸಿತ್ತು. ಮೊದಲ ಹಂತದಲ್ಲಿ (Stage-1) ಈ ನಿರ್ಬಂಧಗಳ ಪರಿಶೀಲನೆ ನಡೆಸದೇ ಎರಡನೇ ಹಂತದ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಮೊದಲ ಹಂತಕ್ಕೆ ಕೇಂದ್ರ ಪರಿಸರ ಇಲಾಖೆಯ ಅನುಮತಿ (ಕೆಲವು ನಿರ್ಬಂಧಗಳ ಜೊತೆ) ದೊರಕಿದ್ದು 06-01-2016 ರಲ್ಲಿ. ಎರಡನೇ ಹಂತಕ್ಕೆ ಅನುಮತಿ ದೊರೆತಿದ್ದು 15-09-2016 ರಲ್ಲಿ.
ತನ್ನ ಆದೇಶದಲ್ಲಿ NGT ಹೇಳಿರುವುದೇನೆಂದರೆ, ಮೊದಲ ಹಂತದ ನಿರ್ಬಂಧನೆಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಪರಿಶೀಲಿಸದೇ ಎರಡನೇ ಹಂತದ ಕಾಮಗಾರಿಗೆ ಅನುಮತಿ ನೀಡಲಾಗಿರುವುದು ತಪ್ಪು ಎಂಬ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ. ಏಕೆಂದರೆ, ಯಾವ ನಿಬಂಧನೆಗಳನ್ನು ಪಾಲಿಸಲಾಗಿಲ್ಲ ಎಂಬುದನ್ನು ಅರ್ಜಿದಾರರು ಹೇಳಿಲ್ಲ.
ಸರ್ಕಾರದ ನಿಲುವು: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಎದುರಿಸುತ್ತಿರುವುದು ಕೇವಲ ಕುಡಿಯುವ ನೀರಿನ ಕೊರತೆ ಮಾತ್ರವಲ್ಲ. ಈ ಜಿಲ್ಲೆಗಳಲ್ಲಿ ಅಂತರ್ಜಲ ಕುಸಿದಿದೆ, ನೀರಿನಲ್ಲಿ ಫ್ಲೋರೈಡ್, ನೈಟ್ರೇಟ್ ನಂತಹ ವಿಷಯುಕ್ತ ಪದಾರ್ಥಗಳು ಸೇರಿಕೊಂಡಿವೆ. ಪಶ್ಚಿಮ ಘಟ್ಟದಲ್ಲಿ 24.01 ಟಿ ಎಂ ಸಿ. ನೀರನ್ನು ಮಳೆಗಾಲದಲ್ಲಿ ಹಿಡಿದಿಟ್ಟುಕೊಂಡು ಈ ಜಿಲ್ಲೆಗಳ 70 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವುದು ಯೋಜನೆಯ ಉದ್ದೇಶ ಎಂದು ಸರ್ಕಾರ ಹೇಳಿದೆ. ಮೊದಲು ದೇವರಾಯದುರ್ಗದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಶೇಖರಣಾ ಜಲಾಶಯವನ್ನು ಅರಣ್ಯ ಪ್ರದೇಶ ಒತ್ತುವರಿಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಬೇರೆಡೆ ಸ್ಥಳಾಂತರಿಸಲಾಗಿದೆ. ಇದರಿಂದಾಗಿ ಒಟ್ಟು ಅರಣ್ಯ ಪ್ರದೇಶ ಬಳಕೆ 600 ಹೆಕ್ಟೇರ್ ನಿಂದ 13.93 ಹೆಕ್ಟೇರ್ ಗೆ ಇಳಿದಿದೆ. ಈ ಪೈಕಿ ಮೀಸಲು ಅರಣ್ಯ ಬಳಕೆ 1.85 ಹೆಕ್ಟೇರ್.
ಎತ್ತಿನಹೊಳೆ ಯೋಜನೆ: ಭೀಕರ ಬರಗಾಲ ಹಾಗೂ ಕುಡಿಯುವ ನೀರಿನ ಕೊರತೆ ಎದುರಿಸುತ್ತಿವ ಬಯಲುಸೀಮೆಯ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಿಗೆ ಪರಿಹಾರ ಯೋಜನೆಯನ್ನು ರಾಜ್ಯ ಸರ್ಕಾರ ಚಿಂತಿಸುತ್ತಲೇ ಇತ್ತು. 2002 ರಲ್ಲಿ ರಾಜ್ಯ ಸರ್ಕರದ ನೀರಾವರಿ ಸಲಹೆಗಾರರಾದ ಜಿ ಎಸ್ ಪರಮಶಿವಯ್ಯ ವರದಿಯೊಂದನ್ನು ಸಲ್ಲಿಸಿದ್ದರು. ಇದರಲ್ಲಿ ಪ್ರಸ್ತಾಪಿಸಲಾಗಿದ್ದ 7 ಯೋಜನೆಗಳಲ್ಲಿ ಎತ್ತಿನಹೊಳೆಯೂ ಒಂದು.
ಪಶ್ಚಿಮ ದಿಕ್ಕಿನತ್ತ ಹರಿಯುವ ನದಿಗಳ ನೀರನ್ನು ಮಳೆಗಾಲದಲ್ಲಿ ತಡೆ ಹಿಡಿದು ಪೂರ್ವ ಭಾಗಕ್ಕೆ ಹರಿಸುವುದು ಎತ್ತಿನಹೊಳೆ ಯೋಜನೆಯ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ನೇತ್ರಾವತಿಯ ಉಪ ನದಿಗಳಾದ ಎತ್ತಿನಹೊಳೆ, ಕಾಡುಮನೆ ಹೊಳೆ, ಕೆರೆಹೊಳೆ ಮತ್ತು ಹೊಂಗದಹಳ್ಳ ಹೊಳೆಗಳಿಗೆ ಎಂಟು ಕಡೆ ಅಣೆಕಟ್ಟುಗಳನ್ನು ಕಟ್ಟಿ, ನೀರನ್ನು ಹರವನಹಳ್ಳಿ ವಿತರಣಾ ಕೇಂದ್ರಕ್ಕೆ ಹರಿಸಲಾಗುತ್ತದೆ. ಅಲ್ಲಿಂದ ಗುರುತ್ವಾಕರ್ಷಣೆ ಮೂಲಕ 233 ಕಿ.ಮೀ. ಉದ್ದದ ಕಾಲುವೆಯಲ್ಲಿ ನೀರು ತುಮಕೂರು ಸೇರಿ ಅಲ್ಲಿಂದ ಕಾಲುವೆಗಳ ಮೂಲಕ ಇತರ ಜಿಲ್ಲೆಗಳಿಗೆ ಹರಿಸುವುದು ಯೋಜನೆಯ ಉದ್ದೇಶ.