ನೋಂದಾಯಿತವಲ್ಲದ ಹಣಕಾಸು ಸಂಸ್ಥೆ ಅಥವಾ ವ್ಯಕ್ತಿಗಳಿಂದ ಸಾಲ ಮಾಡಿದ ಭೂ ರಹಿತ ಕೃಷಿ ಕಾರ್ಮಿಕರು, 1.2 ಲಕ್ಷ ರೂಪಾಯಿಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಸಣ್ಣ ರೈತರು ಮತ್ತು ಭೂ ರಹಿತ ದುರ್ಬಲ ವರ್ಗದವರು 2019ರ ಜುಲೈ 23ಕ್ಕೆ ತಮ್ಮ ಆ ಸಾಲದಿಂದ ಮುಕ್ತರಾಗಿದ್ದಾರೆ. ಅಂದರೆ, ನೋಂದಾಯಿತವಲ್ಲದ ಹಣಕಾಸು ಸಂಸ್ಥೆ ಮತ್ತು ವ್ಯಕ್ತಿಗಳಿಂದ ಮಾಡಿದ ಸಾಲ ಬಾಕಿ ಇದ್ದರೂ ಅದನ್ನು ಮರುಪಾವತಿ ಮಾಡಬೇಕಿಲ್ಲ.
ಹೌದು, ಹೀಗೆಂದು ಹೇಳುವ ಕರ್ನಾಟಕ ಋಣ ಪರಿಹಾರ ಕಾಯ್ದೆ 2019ರ ಜುಲೈ 23ರಿಂದ ಜಾರಿಯಾಗಿದೆ. ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ಅವರ ಕನಸು ಇದು. ಬಡತನದ ಜೀವನ ನಡೆಸುತ್ತಿರುವ ಜನರನ್ನು ಸಾಲದ ಋಣದಿಂದ ರಕ್ಷಿಸಿ ಆರ್ಥಿಕ ಸಬಲತೆ ನೀಡುವುದರ ಜತೆಗೆ ಅವರ ಮನೋಸ್ಥೈರ್ಯ ಹೆಚ್ಚಿಸಿ ಬದುಕನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ಸದುದ್ದೇಶದಿಂದ ಈ ಕಾಯ್ದೆ ಜಾರಿಗೊಳಿಸಲಾಗಿದೆ. ಭೂರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗದ ಜನರು ಮತ್ತು ಸಣ್ಣ ರೈತರ ಹಿತದೃಷ್ಟಿ ಇಟ್ಟುಕೊಂಡು ಸರ್ಕಾರ ಈ ಕ್ರಮ ಕೈಗೊಂಡಿದೆ.
ಅತಿಯಾದ ಬಡ್ಡಿ ವಿಧಿಸಿ ಜನರನ್ನು ಹಿಂಡುತ್ತಿರುವ ಹಣಕಾಸು ಸಂಸ್ಥೆಗಳು ಮತ್ತು ಖಾಸಗಿ ಲೇವಾದೇವಿದಾರರ ನಿಯಂತ್ರಣಕ್ಕಾಗಿ ಮನಿ ಲಾಂಡರಿಂಗ್ ಆಕ್ಟ್ ಇದೆ. ಅದರ ಅನ್ವಯ ವಾರ್ಷಿಕ ಶೇ. 14 ಅಥವಾ ಶೇ. 16ಕ್ಕಿಂತ ಹೆಚ್ಚು ಬಡ್ಡಿ ದರದಲ್ಲಿ ಯಾರೂ ಸಾಲ ನೀಡುವಂತಿಲ್ಲ. ನಿಯಮ ಮೀರಿದವರಿಗೆ ಶಿಕ್ಷೆಯೂ ಇದೆ. ಈ ಕಾಯ್ದೆ ಸರಿಯಾಗಿ ಜಾರಿಗೆ ಬಾರದ ಹಿನ್ನೆಲೆಯಲ್ಲಿ ಮತ್ತು ನೋಂದಾಯಿತವಲ್ಲದ ಹಣಕಾಸು ಸಂಸ್ಥೆಗಳು ಮತ್ತು ವ್ಯಕ್ತಿಗಳು ಈ ಕಾಯ್ದೆಯಿಂದ ನುಣುಚಿಕೊಳ್ಳುತ್ತಿರುವುದನ್ನು ಮನಗಂಡು ಸರ್ಕಾರ ಒಳ್ಳೆಯ ಉದ್ದೇಶದಿಂದ ಈ ಕಾಯ್ದೆ ಜಾರಿಗೆ ತಂದಿದೆ.

ಆದರೆ, ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?
ಈ ಒಂದು ಪ್ರಶ್ನೆ ಋಣಮುಕ್ತ ಕಾಯ್ದೆ ಸಮರ್ಪಕವಾಗಿ ಜಾರಿಯಾಗುವ ಬಗ್ಗೆಯೇ ಅನುಮಾನ ಸೃಷ್ಟಿಸಿದೆ. ಏಕೆಂದರೆ, ನೋಂದಾಯಿತವಲ್ಲದ ಹಣಕಾಸು ಸಂಸ್ಥೆಗಳು, ವ್ಯಕ್ತಿಗಳು, ಗಿರವಿಯವರಿಂದ ಸಾಲ ಪಡೆದು ಈ ಕಾಯ್ದೆ ವ್ಯಾಪ್ತಿಗೆ ಬರುವವರು ಭೂ ರಹಿತ ಕೃಷಿ ಕಾರ್ಮಿಕರು, 1.2 ಲಕ್ಷ ರೂಪಾಯಿಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಸಣ್ಣ ರೈತರು ಮತ್ತು ಭೂ ರಹಿತ ದುರ್ಬಲ ವರ್ಗದವರು. ತುರ್ತು ಅಗತ್ಯಕ್ಕಾಗಿ ತಕ್ಷಣ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುತ್ತಾರೆ. ಕೆಲವೊಮ್ಮೆ ತಮ್ಮ ಆಸ್ತಿ, ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಅಡಮಾನ ಇಡುತ್ತಾರಾದರೂ ಬಹುತೇಕ ಸಂದರ್ಭಗಳಲ್ಲಿ ಪರಿಚಯ, ನಂಬಿಕೆ ಮೇಲೆಯೇ ಸಾಲದ ವ್ಯವಹಾರ ನಡೆಯುತ್ತದೆ.
ಈ ರೀತಿ ಸಾಲ ಪಡೆದವರು ಹೆಚ್ಚು ಬಡ್ಡಿ ಪಾವತಿಸಿ ಇಲ್ಲವೇ ಬಡ್ಡಿ ಪಾವತಿಸಲು ಸಾಧ್ಯವಾಗದೆ ತೊಂದರೆಗೊಳಗಾಗುತ್ತಾರೆ. ಸಾಲದ ಮೊತ್ತ ಹೆಚ್ಚುತ್ತದೆ. ಆದರೆ, ಋಣಮುಕ್ತ ಕಾಯ್ದೆಯಡಿ ದೂರು ನೀಡಿದರೆ ಆ ಒಂದು ಬಾರಿಗೆ ಋಣಮುಕ್ತರಾಗಬಹುದು. ನಂತರ ಜೀವನ ಸಾಗಿಸಲು ದಾರಿಯೇನು? ಒಮ್ಮೆ ಸಾಲ ನೀಡಿದವರ ಮೇಲೆ ದೂರು ಕೊಟ್ಟು ಋಣಮುಕ್ತರಾದರೆ ಬೇರೆ ಯಾರೂ ತುರ್ತು ಸಂದರ್ಭದಲ್ಲಿ ಸಾಲ ಕೊಡಲು ಮುಂದಾಗುವುದಿಲ್ಲ. ಇದರಿಂದ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ. ಈ ಕಾರಣಕ್ಕಾಗಿಯೇ ಋಣಮುಕ್ತ ಕಾಯ್ದೆ ಜಾರಿಯಾಗಿ ತಿಂಗಳಾದರೂ ಕಾಯ್ದೆಯಡಿ ಇದುವರೆಗೆ ಬೆರಳೆಣಿಕೆಯ ದೂರು ದಾಖಲಾಗಿಲ್ಲ. ಹಾಗೆಂದು ನೋಂದಾಯಿತವಲ್ಲದ ಹಣಕಾಸು ಸಂಸ್ಥೆಗಳು, ಲೇವೇದೇವಿದಾರರಿಂದ ಸಾಲ ಮಾಡಿದವರೇ ಇಲ್ಲ ಎಂದೇನೂ ಅಲ್ಲ. ದೂರು ನೀಡಿ ಜೀವನ ನಿರ್ವಹಣೆಗೆ ಇರುವ ದಾರಿಗಳನ್ನೂ ಮುಚ್ಚಿಕೊಳ್ಳಲು ಯಾರೂ ಬಯಸುವುದಿಲ್ಲ.

ಮಾರ್ಗಸೂಚಿಗಳು ಕೂಡ ಸಮಸ್ಯೆ
ಭೂ ರಹಿತ ಕೃಷಿ ಕಾರ್ಮಿಕರು, ವಾರ್ಷಿಕ 1.2 ಲಕ್ಷ ರೂಪಾಯಿ ಮೀರದ ಆದಾಯ ಹೊಂದಿರುವ ಸಣ್ಣ ರೈತರು ಮತ್ತು ದುರ್ಬಲ ವರ್ಗದವರು ಋಣಮುಕ್ತ ಕಾಯ್ದೆಯಡಿ ಬರುತ್ತಾರೆ. ನೋಂದಾಯಿತವಲ್ಲದ ಹಣಕಾಸು ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಇವರು ಸಾಲ ಪಡೆದಿದ್ದರೆ ಕಾಯ್ದೆ ಜಾರಿಗೆ ಬಂದ 90 ದಿನಗಳೊಳಗೆ (2019ರ ಜು. 27ರಿಂದ ಮೂರು ತಿಂಗಳೊಳಗೆ) ಉಪವಿಭಾಗಾಧಿಕಾರಿಗೆ ತಮ್ಮ ಬಾಕಿ ಇರುವ ಸಾಲದ ಬಗ್ಗೆ ವಿವರ ಸಲ್ಲಿಸಬೇಕು. ಸಾಲ ಮಾಡಿದವರ ಜತೆಗೆ ಅದಕ್ಕೆ ಜಾಮೀನು ನೀಡಿದವರಿದ್ದರೆ ಅವರೂ ಆ ಸಾಲಕ್ಕೆ ತಾವು ಅಡಮಾನ ಇಟ್ಟಿರುವ ಕುರಿತು ದಾಖಲೆ ಸಲ್ಲಿಸಬೇಕು. ಈ ರೀತಿ ಬಂದ ವಿವರಗಳನ್ನು ಉಪವಿಭಾಗಾಧಿಕಾರಿಗಳು ಪರಿಶೀಲಿಸಿ, ಈ ಪ್ರಕರಣ ಕಾಯ್ದೆಯಡಿ ಪರಿಹಾರ ನೀಡಲು ಅರ್ಹವೇ ಎಂಬ ಬಗ್ಗೆ ನಿರ್ಣಯಿಸಿ ಆದೇಶ ಹೊರಡಿಸಬೇಕು. ಒಂದೊಮ್ಮೆ ಅರ್ಹ ಎಂದಾದಲ್ಲಿ ಸಾಲ ನೀಡಿದವರು ಮತ್ತು ಪಡೆದವರನ್ನು ವಿಚಾರಣೆಗೆ ಒಳಪಡಿಸಿ ಕಾಯ್ದೆಯಡಿ ಅರ್ಹ ಫಲಾನುಭವಿಯನ್ನು ಋಣಮುಕ್ತ ಎಂದು ಘೋಷಿಸಿ ಆದೇಶ ಹೊರಡಿಸಬೇಕು. ಜತೆಗೆ ಸಾಲಗಾರರಿಂದ ಅಡಮಾನ ಇಟ್ಟುಕೊಂಡಿದ್ದ ವಸ್ತುಗಳನ್ನು ಹಿಂತಿರುಗಿಸುವಂತೆ ಮತ್ತು ಸಾಲ ವಸೂಲಿ ಮಾಡದಂತೆ ಸಾಲಗಾರರಿಗೆ ಸೂಚಿಸಬೇಕು. ಇದನ್ನು ಸಾಲ ನೀಡಿದ ವ್ಯಕ್ತಿ ಪಾಲಿಸದಿದ್ದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಜತೆಗೆ 1 ಲಕ್ಷ ರೂ. ದಂಡ ಪಾವತಿಸಬೇಕಾಗುತ್ತದೆ.
ಆದರೆ, ಈ ರೀತಿ ಉಪವಿಭಾಗಾಧಿಕಾರಿಗಳ ಬಳಿ ಸಾಲದ ವಿವರಗಳನ್ನು ನೀಡಿ ಪರಿಹಾರ ಪಡೆದುಕೊಳ್ಳಬೇಕಾದರೆ ಸಾಲಗಾರ ವ್ಯಕ್ತಿ ತನ್ನ ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆದಾಯ ದೃಢೀಕರಣ ಪತ್ರ, ಕೃಷಿ ಕಾರ್ಮಿಕರ ಪ್ರಮಾಣಪತ್ರ, ಸಣ್ಣ ಹಿಡುವಳಿದಾರರ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಸಾಲ ಪಡೆದು ಅಡ ಇಟ್ಟಿರುವ ಬಗ್ಗೆ ದಾಖಲೆಗಳು, ಸಾಲದಾರನ ಮಾಹಿತಿ ಹಾಗೂ ಪಡೆದ ಸಾಲ, ವಾರ್ಷಿಕ ಬಡ್ಡಿ, ಎಷ್ಟು ಮರುಪಾವತಿ ಮಾಡಲಾಗಿದೆ ಎಂಬಿತ್ಯಾದಿ ಮಾಹಿತಿಗಳನ್ನು ಒದಗಿಸಬೇಕಾಗುತ್ತದೆ. ಇವೆಲ್ಲವನ್ನು ಪರಿಗಣಿಸಿ ಉಪವಿಭಾಗಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಆದರೆ, ತಮ್ಮ ಕಾರ್ಯವೈಖರಿ ವಿಚಾರದಲ್ಲಿ ಈಗಾಗಲೇ ಸಾಕಷ್ಟು ವಿವಾದಗಳನ್ನು ಎದುರಿಸುತ್ತಿರುವ ಉಪವಿಭಾಗಾಧಿಕಾರಿಗಳು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಾರೆಯೇ?
ಒಂದು ಬಾರಿ ವ್ಯಕ್ತಿಗೆ ಸೇರಿದ ಈ ದಾಖಲೆಗಳು ಉಪ ವಿಭಾಗಾಧಿಕಾರಿಗಳ ಕಚೇರಿಗೆ ಹೋದರೆ ನಂತರದಲ್ಲಿ ಆ ವ್ಯಕ್ತಿಗೆ ಖಾಸಗಿ ಲೇವಾದೇವಿದಾರರೇಕೆ, ನೋಂದಾಯಿತ ಹಣಕಾಸು ಸಂಸ್ಥೆಗಳೂ ಸಾಲ ನೀಡಲು ಹಿಂದೇಟು ಹಾಕಬಹುದು. ಮೇಲಾಗಿ ಈ ಕಾಯ್ದೆಯಡಿ ದೂರು ದಾಖಲಾಗದೆ ಕ್ರಮ ಕೈಗೊಳ್ಳಲು ಅಧಿಕಾರ ಇಲ್ಲ. ನೋಂದಣಿ ಮಾಡದೆ ಹಣಕಾಸು ವ್ಯವಹಾರ ಮಾಡಬಾರದು ಎಂಬ ನಿರ್ಬಂಧ ಇದೆಯಾದರೂ ಅದು ಜಾರಿಯಾಗುತ್ತಿಲ್ಲ. ಈ ಕಾಯ್ದೆಯಲ್ಲೂ ಅಂತಹ ವ್ಯವಹಾರಗಳಿಗೆ ಕಡಿವಾಣ ಹಾಕಲು ಸ್ಪಷ್ಟ ಮಾರ್ಗಸೂಚಿ ಇಲ್ಲ. ಹೀಗಾಗಿ ಋಣಮುಕ್ತ ಕಾಯ್ದೆ ಎಂಬುದು ಜಾರಿಯಾಗುವ ಬದಲು ಕಾಗದದ ಹುಲಿಯಾಗಿಯೇ ಉಳಿಯುವ ಸಾಧ್ಯತೆಗಳೇ ಹೆಚ್ಚು ಎನ್ನುವಂತಾಗಿದೆ.