ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರ ಹುದ್ದೆಗೆ ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್ ಅವರು ರಾಜೀನಾಮೆ ಸಲ್ಲಿಸಿರುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಒಂದೂವರೆ ವರ್ಷದ ಹಿಂದೆ ಆಪರೇಷನ್ ಕಮಲದ ಮೂಲಕ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದಾಗ ಸಿಎಂ ಬಿಎಸ್ ಯಡಿಯೂರಪ್ಪ ಅವರು ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್ರನ್ನು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾಗಿ ನೇಮಕ ಮಾಡಿಕೊಂಡಿದ್ದರು. ಇದೀಗ ಇಷ್ಟು ದಿನಗಳ ಕಾಲ ಸೇವೆ ಸಲ್ಲಿಸಿದ ಮಹಾದೇವ ಪ್ರಕಾಶ್ ಸಿಎಂ ಮಾಧ್ಯಮ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನನಗೆ ತಮ್ಮ ಮಾಧ್ಯಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಹೃದಯಪೂರ್ವಕ ಧನ್ಯವಾದಗಳು. ನನ್ನ ವೈಯಕ್ತಿಕ ಕಾರಣಗಳಿಂದ ಮಾಧ್ಯಮ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಮಹದೇವ ಪ್ರಕಾಶ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ನೀಡಿದ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಮಹದೇವ ಪ್ರಕಾಶ್ ಅವರು ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದರೂ ಇದರ ಹಿಂದಿನ ಮರ್ಮವೇನು? ಎನ್ನುವುದರ ಸುತ್ತ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಉನ್ನತ ಮೂಲಗಳ ಪ್ರಕಾರ ರಾಜ್ಯ ಬಿಜೆಪಿ ಸರ್ಕಾರದಲ್ಲೀಗ ಸಿಎಂ ಬದಲಾವಣೆ ಕೂಗು ಕೇಳಿ ಬರುತ್ತಿದೆ. ಸದ್ಯದಲ್ಲೇ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಮಹದೇವ ಪ್ರಕಾಶ್ ರಾಜೀನಾಮೆ ನೀಡಿರಬಹುದು ಎಂಬ ಮಾತುಗಳು ಪತ್ರಕರ್ತರ ವಲಯದಲ್ಲಿ ಕೇಳಿಬರುತ್ತಿವೆ.
ಇನ್ನೊಂದೆಡೆ ಮಹಾದೇವ ಪ್ರಕಾಶ್ ಕಾರ್ಯವೈಖರಿ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ಅಸಮಾಧಾನ ಇತ್ತು. ನೀವು ಈ ರೀತಿ ಕಾರ್ಯನಿರ್ವಹಿಸುವ ರಾಜೀನಾಮೆ ನೀಡುವುದು ಸೂಕ್ತ ಎಂದು ಒಮ್ಮೆ ಯಡಿಯೂರಪ್ಪ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಹಾಗಾಗಿ ಮಹಾದೇವ ಪ್ರಕಾಶ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.
Also Read: ಮರಮಕಲ್ ನೇಮಕ ರದ್ದು: ವಿಜಯೇಂದ್ರ ದಿಗ್ವಿಜಯಕ್ಕೆ ಮತ್ತೊಂದು ಗರಿ!
ಈ ಮುನ್ನ ಹಿರಿಯ ಪತ್ರಕರ್ತ ಎಂ.ಬಿ ಮರಮಕಲ್ ಅವರು ತಮಗೆ ಮುಖ್ಯಮಂತ್ರಿ ಕಚೇರಿಯಲ್ಲಿ ನೀಡಲಾಗಿದ್ದ ಸ್ಥಾನವನ್ನು ತೊರೆದಿದ್ದರು. ಈಗ ಮಹದೇವ ಪ್ರಕಾಶ್ ರಾಜೀನಾಮೆ ನೀಡಿ ಸುದ್ದಿಯಲ್ಲಿದ್ದಾರೆ.
