ಮೊದಲ ಹಂತದ ಚುನಾವಣೆ ಮುಗಿದು ಎರಡನೇ ಹಂತಕ್ಕೆ ಅಂತಿಮ ವೇದಿಕೆ ಸಿದ್ಧವಾಗುತ್ತಿದೆ. ಮೊದಲ ಹಂತದಲ್ಲಿ ಹಳೇ ಮೈಸೂರು, ಕರಾವಳಿ ಭಾಗದ ಪ್ರದೇಶಗಳೇ ಹೆಚ್ಚಾಗಿದ್ದರೆ, ಎರಡನೇ ಹಂತದ ಚುನಾವಣೆ ಬಹುತೇಕ ಉತ್ತರ ಕರ್ನಾಟಕ ಭಾಗಕ್ಕೆ ಸೀಮಿತವಾಗಿದೆ. ಮಲೆನಾಡು, ಕರಾವಳಿಯ ತಲಾ ಒಂದು ಜಿಲ್ಲೆಗಳು ಮಾತ್ರ ಇವೆ. ಮೊದಲ ಹಂತದಂತೆ ಎರಡನೇ ಹಂತವೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡುವಿನ ಹೋರಾಟವಾಗಿಯೇ ಮುಂದುವರಿಯಲಿದೆ. ಅದರಲ್ಲೂ, ಮೊದಲ ಹಂತದ ಚುನಾವಣೆಯಲ್ಲಿ ಮೈತ್ರಿಪಕ್ಷಗಳ ಕಾರ್ಯಕರ್ತರ ಮಧ್ಯೆ ಜಗಳ ನಡೆಯದ ಕಾರಣ ಎರಡನೇ ಹಂತದಲ್ಲಿ ಮೈತ್ರಿ ಇನ್ನಷ್ಟು ಗಟ್ಟಿಗೊಳ್ಳುವ ಸಾಧ್ಯತೆ ಇದೆ.
ಎರಡನೇ ಹಂತದ 14 ಕ್ಷೇತ್ರಗಳ ಪೈಕಿ 2014ರಲ್ಲಿ ಬಿಜೆಪಿ 9 ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಕಾಂಗ್ರೆಸ್ ಕೇವಲ ಐದರಲ್ಲಿ ಮಾತ್ರ ಜಯ ಸಾಧಿಸಿತ್ತು. ಈ ಬಾರಿ ಒಂಬತ್ತು ಕ್ಷೇತ್ರಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಇನ್ನೂ ಒಂದೆರಡು ಕ್ಷೇತ್ರಗಳನ್ನು ತೆಕ್ಕೆಗೆ ತೆಗೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮಂತ್ರದೊಂದಿಗೆ ಬಿಜೆಪಿ ಪ್ರಯತ್ನಿಸುತ್ತಿದ್ದರೆ, ಜೆಡಿಎಸ್ ಜೊತೆಗಿನ ಮೈತ್ರಿಯ ಅನುಕೂಲ ಪಡೆದು ತನ್ನ ಸ್ಥಾನಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಹೋರಾಡುತ್ತಿದೆ.
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಬ್ರಾಂಡ್ ಹೇಗೆ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸುತ್ತದೋ ಹಾಗೆ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಬ್ರಾಂಡ್ ಪ್ರಧಾನವಾಗಿದೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ತೀವ್ರಗೊಂಡ ಕಾರಣದಿಂದ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಈ ಭಾಗದಲ್ಲಿ ಸಾಕಷ್ಟು ನಷ್ಟ ಅನುಭವಿಸಿತ್ತು. ಇದನ್ನು ಸರಿಪಡಿಸುವ ಉದ್ದೇಶದಿಂದ ಸಚಿವ ಡಿ ಕೆ ಶಿವಕುಮಾರ್ ಬಹಿರಂಗ ಕ್ಷಮೆ ಯಾಚಿಸಿದರಾದರೂ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ನೇತೃತ್ವ ವಹಿಸಿದ್ದ ಮತ್ತೊಬ್ಬ ಸಚಿವ ಎಂ.ಬಿ.ಪಾಟೀಲ್, ಶಿವಕುಮಾರ್ ವಿರುದ್ಧ ಹರಿಹಾಯ್ದು ಪ್ರತ್ಯೇಕ ಧರ್ಮವನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ, ಈ ವಿವಾದ ಮುಂದುವರಿಯುತ್ತಿರುವುದು ಬಿಜೆಪಿಗೆ ಲಾಭ ಮಾಡಿಕೊಡುವ ಸಾಧ್ಯತೆ ಇದೆ.
ಇನ್ನೊಂದೆಡೆ, ಕಾಂಗ್ರೆಸ್-ಜೆಡಿಎಸ್‌ಗೆ ಸದ್ಯ ಮೈತ್ರಿ ಒಂದೇ ಇರುವ ಶಕ್ತಿ. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಎಲ್ಲ ವಿಚಾರಗಳಲ್ಲೂ ಕಾಂಗ್ರೆಸ್ ಎಡವಿದ್ದರೂ ಜೆಡಿಎಸ್ ಬೆಂಬಲ ಪೂರ್ಣ ಪ್ರಮಾಣದಲ್ಲಿ ಸಿಕ್ಕಿದರೆ, ಎರಡೂ ಪಕ್ಷಗಳ ಕಾರ್ಯಕರ್ತರು ಹಿಂದಿನ ದ್ವೇಷ ಮರೆತು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಮೈತ್ರಿ ಅಭ್ಯರ್ಥಿಗಳಿಗೆ ಲಾಭ. ಇಲ್ಲವಾದಲ್ಲಿ ಬಿಜೆಪಿಗಿಂತಲೂ ಮೋದಿ ಅಲೆಯಲ್ಲಿ ಮತ್ತೊಮ್ಮೆ ಕೊಚ್ಚಿಹೋಗಬಹುದು.
ಚಿಕ್ಕೋಡಿ
2009ರಲ್ಲಿ ಉದಯವಾದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ. ಜೆಡಿಎಸ್ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ ಎನ್ನುವ ಸ್ಥಿತಿ. ಕಾಂಗ್ರೆಸ್‌ನಿಂದ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೆ, ಬಿಜೆಪಿಯಿಂದ ಅಣ್ಣಾ ಸಾಹೇಬ್ ಜೊಲ್ಲೆ ಇದ್ದಾರೆ. ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿರುವ ಕ್ಷೇತ್ರದಲ್ಲಿ ಎರಡೂ ಪಕ್ಷಗಳು ತಲಾ ನಾಲ್ವರು ಶಾಸಕರನ್ನು ಹೊಂದಿವೆ. ಪ್ರಧಾನಿ ನರೇಂದ್ರ ಮೋದಿ ಅಲೆ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ಇಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣ ಎಂದು ಹೇಳಲಾಗುತ್ತಿದೆಯಾದರೂ ಬಲಾಢ್ಯರಾಗಿರುವ ಕತ್ತಿ ಕುಟುಂಬದ ಕಡೆಯಿಂದ ಒಳಪೆಟ್ಟಿನ ಭೀತಿ ಎದುರಾಗಿದೆ. ಬಿಜೆಪಿ ಶಾಸಕ ಉಮೇಶ್ ಕತ್ತಿ ಸಹೋದರ ಹಾಗೂ ಮಾಜಿ ಸಂಸದ (2009ರಲ್ಲಿ ಗೆದ್ದು 2014ರಲ್ಲಿ ಪ್ರಕಾಶ್ ಹುಕ್ಕೇರಿ ವಿರುದ್ಧ ಸೋತಿದ್ದರು) ರಮೇಶ್ ಕತ್ತಿಗೆ ಟಿಕೆಟ್ ಸಿಗದೆ ಇರುವುದು ಕತ್ತಿ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿದೆ. ಅಣ್ಣಾ ಸಾಹೇಬ್ ಜೊಲ್ಲೆ ಗೆದ್ದರೆ ತಮ್ಮ ಹಿಡಿತ ಕಡಿಮೆಯಾಗಬಹುದು ಎಂಬ ಆತಂಕ ಕತ್ತಿ ಕುಟುಂಬವನ್ನು ಕಾಡುತ್ತಿದೆ. ಸದ್ಯ ಇದು ಬಹಿರಂಗವಾಗಿ ಕಾಣುತ್ತಿಲ್ಲವಾದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರಕ್ಕೆ ಆಗಮಿಸಿರುವುದರಿಂದ ಜೊಲ್ಲೆ ಪರ ವಾತಾವರಣ ಕಾಣಿಸುತ್ತಿದೆಯಾದರೂ, ಕತ್ತಿ ಕುಟುಂಬದ ಒಳಪೆಟ್ಟೇನಾದರೂ ಬಲವಾಗಿ ಕೆಲಸ ಮಾಡಿದರೆ ಪರಿಸ್ಥಿತಿ ಪ್ರಕಾಶ್ ಹುಕ್ಕೇರಿಗೆ ಅನುಕೂಲ ಆಗಬಹುದು.
ಬೆಳಗಾವಿ
ರಾಜ್ಯದಲ್ಲೇ ಅತಿ ಹೆಚ್ಚು ಅಭ್ಯರ್ಥಿಗಳಿರುವ (ಒಟ್ಟು 57) ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನೇರ ಹಣಾಹಣಿ ಏನಿದ್ದರೂ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತಿಕೂಟದ ನಡುವೆ. ಸಂಸತ್ ಪ್ರವೇಶಿಸುವಲ್ಲಿ ಈಗಾಗಲೇ ಹ್ಯಾಟ್ರಿಕ್ ಸಾಧಿಸಿರುವ ಸುರೇಶ್ ಅಂಗಡಿ ಮತ್ತೆ ಬಿಜೆಪಿ ಅಭ್ಯರ್ಥಿ. ಇನ್ನೊಂದೆಡೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಡಾ.ವಿ.ಎಸ್.ಸಾಧುನವರ ಅವರು ಕಣದಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದ ಸಂಸದರಿಗೆ ಹೋಲಿಸಿದರೆ ಅಭಿವೃದ್ಧಿ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಇದ್ದು, ಪ್ರಧಾನಿ ನರೇಂದ್ರ ಮೋದಿ ಅಲೆ ಪರಿಸ್ಥಿತಿಯನ್ನು ಸುರೇಶ್ ಅಂಗಡಿ ಅವರ ಪರ ಇರುವಂತೆ ನೋಡಿಕೊಳ್ಳಲಾಗಿದೆ. ಹಾಗೆಂದು ಪರಿಸ್ಥಿತಿ ಎಲ್ಲ ರೀತಿಯಲ್ಲಿ ಅನುಕೂಲವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಮರಾಠಿ ಮತಗಳ ವಿಭಜನೆ ಭೀತಿ, ಪಕ್ಷದಲ್ಲಿರುವ ಅಸಮಾಧಾನ ಸುರೇಶ್ ಅಂಗಡಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಬಹುದಾದರೂ ಗೆಲುವಿಗೆ ಅಡ್ಡಿಯಾಗದು ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ, ಮೈತ್ರಿಕೂಟಕ್ಕೆ ಸಾಧುನವರ ಅವರು ಕ್ಷೇತ್ರದಲ್ಲಿ ಅಪರಿಚಿತರಾಗಿರುವುದೇ ದೊಡ್ಡ ಸಮಸ್ಯೆಯಾದರೆ, ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಮುನಿಸಿಕೊಂಡು ಬಿಜೆಪಿಗೆ ಸಮೀಪವಾಗುತ್ತಿರುವುದು ಮತ್ತೊಂದು ರೀತಿಯಲ್ಲಿ ಆತಂಕ ತಂದೊಡ್ಡಿದೆ. ಹೀಗಾಗಿ, ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಸಾಧುನವರ ಅವರನ್ನು ಕಾಪಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಬಾಗಲಕೋಟೆ
ಕಳೆದ ಒಂದೂವರೆ ದಶಕದಿಂದ ಬಿಜೆಪಿಯ ಭದ್ರ ಕೋಟೆ ಎಂದೇ ಕರೆಸಿಕೊಳ್ಳುತ್ತಿರುವ ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿರುವ ಪಿ.ಸಿ.ಗದ್ದಿಗೌಡರ್ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ವೀಣಾ ಕಾಶಪ್ಪನವರ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಲಿಂಗಾಯತ ಸಮುದಾಯವೇ ಹೆಚ್ಚಾಗಿರುವ ಕ್ಷೇತ್ರದಲ್ಲಿ ಅದೇ ಸಮುದಾಯದ ಗದ್ದಿಗೌಡರ್ ಸುಲಭವಾಗಿ ಗೆದ್ದು ಬರುತ್ತಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ಕೂಡ ಲಿಂಗಾಯತ ಸಮುದಾಯದ ವೀಣಾ ಕಾಶಪ್ಪನವರ್ ಅವರನ್ನು ಕಣಕ್ಕಿಳಿಸಿರುವುದು ಸಮುದಾಯದ ಮತ ಸ್ವಲ್ಪ ಮಟ್ಟಿಗೆ ವಿಭಜನೆಯಾಗುವ ಸಾಧ್ಯತೆಗಳನ್ನು ಸೃಷ್ಟಿ ಮಾಡಿದೆ. ಜೊತೆಗೆ, ವೀಣಾ ಅವರ ಕುಟುಂಬವೂ ರಾಜಕೀಯವಾಗಿ ಸ್ವಲ್ಪ ಪ್ರಭಾವ ಹೊಂದಿದೆ. ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿರುವ ಇಲ್ಲಿ ಆರು ಮಂದಿ ಬಿಜೆಪಿ ಶಾಸಕರೇ ಇರುವುದು ಬಿಜೆಪಿಗೆ ಅನುಕೂಲ. ಜೊತೆಗೆ ಗದ್ದಿಗೌಡರ್ ಅವರ ಬಗ್ಗೆ ಕ್ಷೇತ್ರದ ಮತದಾರರಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಶಾಸಕರಾಗಿರುವುದರಿಂದ ಬಾಗಲಕೋಟೆಯನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ಪಡೆಯಯಲು ಶತಾಯಗತಾಯ ಹೋರಾಡುತ್ತಿದ್ದಾರೆ, ಅದಕ್ಕಾಗಿ ಪ್ರತಿಷ್ಠೆಯನ್ನೇ ಪಣಕ್ಕಿಟ್ಟಿದ್ದಾರೆ. ಹೀಗಾಗಿ, ಈ ಬಾರಿ ಮೈತ್ರಿ ಅಭ್ಯರ್ಥಿ ಮತ್ತು ಬಿಜೆಪಿ ಮಧ್ಯೆ ತುರುಸಿನ ಸ್ಪರ್ಧೆ ಕಾಣಿಸಿಕೊಳ್ಳಲಿದೆ.
ವಿಜಯಪುರ
ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಶಕ್ತಿ ಕಳೆದುಕೊಂಡಾಗಲೂ ವಿಜಯಪುರದಲ್ಲಿ ಮಾತ್ರ ಕಳೆದ ಎರಡು ದಶಕಗಳಿಂದ ಬಿಜೆಪಿ ಅಭ್ಯರ್ಥಿಗಳೇ ಲೋಕಸಭೆಗೆ ಆಯ್ಕೆಯಾಗುತ್ತಿದ್ದುದು ವಿಶೇಷ. ಇದೀಗ ಬಿಜೆಪಿಯ ಹಾಲಿ ಸಂಸದ, ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವರಾಗಿರುವ ರಮೇಶ್ ಜಿಗಜಿಣಗಿ ಹ್ಯಾಟ್ರಿಕ್ ಕನಸಿನೊಂದಿಗೆ ಕಣಕ್ಕಿಳಿದಿದ್ದರೆ, ಬಿಜೆಪಿಯ ಪ್ರಬಲ ಎದುರಾಳಿಯಾಗಿರುವ ಕಾಂಗ್ರೆಸ್ ತನ್ನ ಅಭ್ಯರ್ಥಿ ಕಣಕ್ಕಿಳಿಸದೆ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಜೆಡಿಎಸ್‌ನ ಸುನೀತಾ ಚೌಹಾಣ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಸಂಸತ್ತಿನಲ್ಲಿ ಅತ್ಯಂತ ಹೆಚ್ಚು ಸಕ್ರಿಯರಾಗಿರುವ ಸಂಸದರು ಎಂಬ ಖ್ಯಾತಿ ಜಿಗಜಿಣಗಿ ಅವರಿಗಿದ್ದರೆ, ಪ್ರತ್ಯೇಕ ಲಿಂಗಾಯತ ಧರ್ಮ ವಿವಾದದ ಬಳಿಕ ಬಹುತೇಕ ವೀರಶೈವ-ಲಿಂಗಾಯತರು ಬಿಜೆಪಿ ಜೊತೆ ನಿಂತಿರುವುದು, ಪ್ರಧಾನಿ ಮೋದಿ ಅಲೆ… ಹೀಗೆ ಎಲ್ಲವೂ ಬಿಜೆಪಿ ಅಭ್ಯರ್ಥಿ ಪರವಾಗಿದೆ. ಆದರೆ, ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದು ಸ್ಥಳೀಯ ಕಾಂಗ್ರೆಸ್ಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗೆಂದು ಜೆಡಿಎಸ್ ಕೂಡ ಸುಲಭವಾಗಿ ತಳ್ಳಿಹಾಕುವ ಸ್ಥಿತಿಯಲ್ಲಿಲ್ಲ. ಇಬ್ಬರು ಶಾಸಕರನ್ನು ಹೊಂದಿರುವುದರಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ಕ್ಷೇತ್ರದ ಬಗ್ಗೆ ಗಮನ ಹರಿಸಿದ್ದಾರೆ. ಜೊತೆಗೆ, ಕುಮಾರಸ್ವಾಮಿ ಸರ್ಕಾರದಲ್ಲಿ ಕೊನೆಗೂ ಸಚಿವ ಸ್ಥಾನ ಗಿಟ್ಟಿಸಿದ ಎಂ.ಬಿ.ಪಾಟೀಲ್ ಅವರಿಗೂ ತಮ್ಮ ಪ್ರತಿಷ್ಠೆ ಸಾಬೀತುಪಡಿಸಲು ಇದು ವೇದಿಕೆಯಾಗಿದೆ. ಪರಿಣಾಮವಾಗಿ, ಮೈತ್ರಿ ಗಟ್ಟಿಯಾಗಿ ನಿಂತು ಮತವಾಗಿ ಪರಿವರ್ತನೆಗೊಂಡರೆ ಆಗ ಬಿಜೆಪಿಗೆ ಕಷ್ಟವಾಗಬಹುದು.
ರಾಯಚೂರು
ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನೊಳಗೊಂಡ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಹೇಗೆ ನೇರ ಪೈಪೋಟಿಯೋ ಅದೇ ರೀತಿ ನಾಯಕ ಕುಟುಂಬಗಳ ಮಧ್ಯೆಯೂ ನೇರ ಹಣಾಹಣಿ ಇದೆ. ಕಾಂಗ್ರೆಸ್‌ನ ಹಾಲಿ ಸಂಸದ ಬಿ.ವಿ.ನಾಯಕ ಅವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಗುಂತಗೋಳ ಸಂಸ್ಥಾನದ ರಾಜವಂಶಸ್ಥ ರಾಜಾ ಅಮರೇಶ್ವರ ನಾಯಕ್ ಇದ್ದಾರೆ. ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಬರುತ್ತಿದ್ದು, ಬಿಜೆಪಿ 4, ಕಾಂಗ್ರೆಸ್ 3 ಮತ್ತು ಜೆಡಿಎಸ್ ಒಬ್ಬ ಶಾಸಕರನ್ನು ಹೊಂದಿದೆ. ಸಂಖ್ಯೆಯಲ್ಲಿ ಸಮಬಲ ಇದ್ದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇರುವುದರಿಂದ ಬಿ.ವಿ.ನಾಯಕ ಅವರಿಗೆ ಅನುಕೂಲಕರ ವಾತಾವರಣ ಕಾಣಿಸುತ್ತಿದೆ. ಆದರೂ ಕ್ಷೇತ್ರದಲ್ಲಿ ಮೈತ್ರಿ ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ಕಾಣಿಸುತ್ತಿಲ್ಲ. ಇದರ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅಲೆಯೊಂದಿಗೆ ರಾಜಾ ಅಮರೇಶ್ವರ ನಾಯಕ ಪೈಪೋಟಿ ನೀಡುತ್ತಿದ್ದಾರೆ. ಜೊತೆಗೆ, ಈ ಬಾರಿ ಅತಿ ಹೆಚ್ಚು ಯುವ ಮತದಾರರು ಕ್ಷೇತ್ರದಲ್ಲಿರುವುದು ಕೂಡ ಬಿಜೆಪಿಗೆ ಪೂರಕ ವಾತಾವರಣ ಸೃಷ್ಟಿ ಮಾಡಿದೆ. ಹೀಗಾಗಿ, ಕಳೆದ ಬಾರಿಯಂತೆ (ಬಿ.ವಿ.ನಾಯಕ ಅವರು ಬಿಜೆಪಿಯ ಶಿವನಗೌಡ ನಾಯಕ ವಿರುದ್ಧ ಕೇವಲ 1,499 ಮತಗಳ ಅಂತರದಿಂದ ಗೆದ್ದಿದ್ದರು) ಈ ಬಾರಿಯೂ ಕಾಂಗ್ರೆಸ್-ಬಿಜೆಪಿ ಮಧ್ಯೆ ಪ್ರಬಲ ಪೈಪೋಟಿ ಕಾಣಿಸಿಕೊಂಡಿದೆ.
ಕಲಬುರಗಿ
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ನೇತೃತ್ವದಲ್ಲಿ ಮಹಾಘಟಬಂಧನ್ ರಚನೆಯಾಗಿದ್ದರೆ, ಇತ್ತ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಸ್ಥಳೀಯ ಕೆಲವು ಕಾಂಗ್ರೆಸಿಗರು ಸೇರಿದಂತೆ ಒಂದು ಮಹಾಘಟಬಂಧನ್ ಸಿದ್ಧವಾಗಿದೆ. ಇದುವರೆಗೆ 17 ಲೋಕಸಭೆ ಚುನಾವಣೆಗಳಲ್ಲಿ ಒಮ್ಮೆ ಜೆಡಿಎಸ್, ಒಮ್ಮೆ ಬಿಜೆಪಿ ಪಾಲಾಗಿ ಉಳಿದ 15 ಬಾರಿ ಕಾಂಗ್ರೆಸ್‌ಗೆ ಒಲಿದಿರುವ ಕ್ಷೇತ್ರದಲ್ಲಿ ಸೋಲರಿಯದ ಸರದಾರ ಮಲ್ಲಿಕಾರ್ಜುನ ಖರ್ಗೆ ಮೈತ್ರಿ ಅಭ್ಯರ್ಥಿ. ಒಂದು ಕಾಲದಲ್ಲಿ ಖರ್ಗೆ ಅವರ ಆಪ್ತರಾಗಿದ್ದ ಕಾಂಗ್ರೆಸ್‌ನ ಮಾಜಿ ಶಾಸಕ ಉಮೇಶ್ ಜಾಧವ್ ಬಿಜೆಪಿ ಅಭ್ಯರ್ಥಿ. ಖರ್ಗೆ ಅವರು ತಮ್ಮ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಬೆಳೆಸಲು ಪಕ್ಷದ ಇತರರನ್ನು ಮೂಲೆಗುಂಪು ಮಾಡಿದರು ಎಂಬ ಸಿಟ್ಟು ಕಾಂಗ್ರೆಸ್‌ನ ಕೆಲವು ಮುಖಂಡರಲ್ಲೇ ಕಾಣಿಸಿಕೊಂಡಿದೆ. ಉಮೇಶ್ ಜಾಧವ್ ಮಾತ್ರವಲ್ಲದೆ, ಈ ಹಿಂದೆ ಮಾಜಿ ಸಚಿವ ಬಾಬೂರಾವ್ ಚಿಂಚನಸೂರ, ಮಾಲಿಕಯ್ಯ ಗುತ್ತೇದಾರ್ ಕೂಡ ಬಿಜೆಪಿ ಸೇರಿದ್ದಾರೆ. ಸುಭಾಷ್ ಗುತ್ತೇದಾರ್ ಕೂಡ ಬಿಜೆಪಿಯಿಂದ ಶಾಸಕರಾಗಿದ್ದಾರೆ. ಜೊತೆಗೆ ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ಅವರಿಗೆ ಆಪ್ತರಾಗಿದ್ದ ಕೆಲವರು ಖರ್ಗೆ ಅವರಿಗೆ ತಿರುಗಿಬಿದ್ದಿದ್ದಾರೆ. ಇದರಿಂದಾಗಿ, ಈ ಬಾರಿ ಖರ್ಗೆ ಅವರಿಗೆ ಉಮೇಶ್ ಜಾಧವ್ ತೀವ್ರ ಸ್ಪರ್ಧೆ ಒಡ್ಡಲಿದ್ದಾರೆ. ಒಂದೊಮ್ಮೆ ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡದಿದ್ದರೆ ಗೆಲ್ಲಲು ಖರ್ಗೆ ಹರಸಾಹಸ ಮಾಡಬೇಕಾಗುತ್ತದೆ.
ಬೀದರ್
ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಸಮಾನ ಅವಕಾಶ ಮಾಡಿಕೊಡುತ್ತಿರುವ ಬೀದರ್ ಲೋಕಸಭೆ ಕ್ಷೇತ್ರದಲ್ಲಿ ಹಾಲಿ ಸಂಸದ ಭಗವಂತ್ ಖೂಬಾ ಮತ್ತೆ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಕಣಕ್ಕಿಳಿದಿದ್ದಾರೆ. ಸ್ವಾತಂತ್ರ್ಯಾನಂತರದಲ್ಲಿ ಕಾಂಗ್ರೆಸ್ ಭದ್ರಕಟೆಯಾಗಿದ್ದು, 1991ರಿಂದ 2004ರವರೆಗೆ ಬಿಜೆಪಿ, 2004ರಿಂದ 2014ರವರೆಗೆ ಕಾಂಗ್ರೆಸ್, 2014ರಿಂದ ಮತ್ತೆ ಬಿಜೆಪಿ… ಹೀಗೆ ಎರಡು ಪಕ್ಷಗಳ ಮಧ್ಯೆಯೇ ಸುತ್ತುತ್ತಿರುವ ಕ್ಷೇತ್ರದಲ್ಲಿ ಸತತ ಎರಡನೇ ಬಾರಿ ಸಂಸತ್ ಪ್ರವೇಶಿಸಲು ಮುಂದಾಗಿರುವ ಭಗವಂತ್ ಖೂಬಾ ಅವರಿಗೆ ಈ ಬಾರಿ ಪರಿಸ್ಥಿತಿ ಸ್ವಲ್ಪ ಕಷ್ಟವಿದೆ. ಇದಕ್ಕೆ ಕಾರಣ, ಈಶ್ವರ್ ಖಂಡ್ರೆ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿರುವುದು. ಮೈತ್ರಿ ಗಟ್ಟಿಯಾಗಿ ಉಳಿದರೆ ಬಿಜೆಪಿ ಅಭ್ಯರ್ಥಿಗೆ ಕಷ್ಟವಾಗಬಹುದು. ಆದರೆ, ಮೈತ್ರಿ ಅಭ್ಯರ್ಥಿಯಾಗಿರುವ ಈಶ್ವರ್ ಖಂಡ್ರೆ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದದಲ್ಲಿ ಆರಂಭದಲ್ಲಿ ಪ್ರತ್ಯೇಕ ಧರ್ಮದ ಪರ ಇದ್ದವರು. ಇದೇ ಕಾರಣದಿಂದ ಸಚಿವ ಸ್ಥಾನ ಹೊಂದಿದ್ದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಪ್ರಮುಖ ಅಭ್ಯರ್ಥಿಗಳಿಬ್ಬರೂ ಲಿಂಗಾಯತರೇ ಆಗಿರುವುದರಿಂದ ಸ್ವಲ್ಪ ಮಟ್ಟಿಗೆ ಮತ ವಿಭಜನೆ ಆಗುವುದು ಖಚಿತ. ಅಂತಿಮವಾಗಿ ಅಭ್ಯರ್ಥಿಗಳ ಗೆಲುವು ಪ್ರಧಾನಿ ನರೇಂದ್ರ ಮೋದಿ ಅಲೆ ಪ್ರಬಲವಾಗಿದೆಯೋ ಅಥವಾ ಮೈತ್ರಿ ಗಟ್ಟಿಯಾಗಿದೆಯೋ ಎಂಬುದನ್ನು ಅವಲಂಬಿಸಿರುತ್ತದೆ.