ಸಚಿವ ಸ್ಥಾನ ವಂಚಿತರು ಸರ್ಕಾರದ ನ್ಯೂನತೆಗಳನ್ನು ಬಹಿರಂಗವಾಗಿ ಎತ್ತಿ ಹಿಡಿಯುವುದು ಪ್ರಜಾಪ್ರಭುತ್ವದ ಸೊಗಸುಗಾರಿಕೆಯನ್ನು ಹೆಚ್ಚಿಸುತ್ತದೆ. ಈಗ ಕೆಲ ವಾರಗಳಿಂದ ಕಾಂಗ್ರೆಸ್ ಪಕ್ಷ ಧುರೀಣ ಎಚ್ ಕೆ ಪಾಟೀಲ್ ಜಿಂದಲ್ ಕಂಪೆನಿಗೆ ಸರ್ಕಾರಿ ಭೂಮಿಯನ್ನು ಉದಾರವಾಗಿ ಮಾರುವ ವಿರುದ್ಧ ಅಸಮಧಾನ ಲೇಪಿತ ಪತ್ರಗಳನ್ನು ಬರೆದಿದ್ದರು. ಇದೀಗ ಜೆಡಿಎಸ್ ಸರದಿ.
ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಉತ್ತರ ಕರ್ನಾಟಕದ ಕಡೆಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯದ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಮುಖ್ಯ ಒಕ್ಕಣೆ ಕಲಬುರ್ಗಿ ಹಾಗೂ ಧಾರವಾಡ ಹೈಕೋರ್ಟ್ ಪೀಠಗಳಿಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗಳ ನೇಮಕಾತಿಯಲ್ಲಿ ಉತ್ತರ ಕರ್ನಾಟಕದ ಅರ್ಹ ವ್ಯಕ್ತಿಗಳನ್ನು ಪರಿಗಣಿಸದಿರುವ ಬಗ್ಗೆ.
ಹೊರಟ್ಟಿಯವರ ಪತ್ರದ ಸಾರಾಂಶ ಇಷ್ಟು: ರಾಜ್ಯದಲ್ಲಿ ಐದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗಳು ಮಂಜೂರಾಗಿ ಇದ್ದು, ಅದರಲ್ಲಿ ಒಂದು ದೆಹಲಿ, ಒಂದು ಕಲಬುರ್ಗಿ, ಒಂದು ಧಾರವಾಡ ಮತ್ತು ಎರಡು ಬೆಂಗಳೂರಿಗೆ ಇರುತ್ತದೆ. “ನಾಡಗೌಡ ಎನ್ನುವವರು ಕಲಬುರ್ಗಿಯಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಸೇವಾವಧಿ ಬಾಕಿ ಇದ್ದರೂ ಆಗಸ್ಟ್ 2018 ರಲ್ಲಿ ಅವರ ಜಾಗಕ್ಕೆ ಮಂಗಳೂರು ಮೂಲದವರಾದ ಸಂದೇಶ ಚೌಟ ಇವರನ್ನು ಕಲಬುರ್ಗಿಗೆ ನೇಮಿಸಿದ್ದೀರಿ. ಹುದ್ದೆ ಹೆಸರಿಗೆ ಮಾತ್ರ ಇದ್ದು, ಅವರು ಬೆಂಗಳೂರಿನಲ್ಲಿಯೇ ಸೇವೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದೀರಿ. ಅದರಂತೆ, ಧಾರವಾಡ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗೂ ಸಹ ಮಂಗಳೂರು ಮೂಲದವರಾದ ದಿನೇಶ್ ರಾವ್ ಇವರನ್ನು ನೇಮಕಾತಿ ಮಾಡಿ ಇವರೂ ಸಹ ಬೆಂಗಳೂರಿನಲ್ಲಿಯೇ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದ್ದೀರಿ. ಹೀಗೆ ಉತ್ತರ ಕರ್ನಾಟಕದವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಸ್ಥಳೀಯ ವಕೀಲರಿಗೆ ಯೋಗ್ಯತೆ ಇದ್ದರೂ ಅನ್ಯಾಯ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.’’
ಹೆಚ್ಚುವರಿ ಅಡ್ವೊಕೇಟ್ ಜನರಲ್ ನೇಮಕಕ್ಕೆ ಸಂಬಂಧಿಸಿದಂತೆ ಹೊರಟ್ಟಿಯವರ ಅಸಮಾಧಾನ ಇಲ್ಲಿಗೇ ನಿಲ್ಲುವುದಿಲ್ಲ. ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದ ಪೊನ್ನಣ್ಣ ಅವರು ಇತ್ತೀಚಿಗೆ ರಾಜಿನಾಮೆ ನೀಡಿ ತೆರವಾದ ಸ್ಥಾನಕ್ಕೆ ಧಾರವಾಡ ಮೂಲದವರನ್ನು ನೇಮಕ ಮಾಡಲು ಅಡ್ವೊಕೇಟ್ ಜನರಲ್ ಅವರು ಶಿಫಾರಸು ಮಾಡಿದರೂ, ಬೆಂಗಳೂರಿನವರನ್ನು ನೇಮಕ ಮಾಡುವ ಹುನ್ನಾರ ನಡೆದಿದೆ ಎಂದು ಹೊರಟ್ಟಿ ಆಪಾದಿಸಿದ್ದಾರೆ.
“ಈ ರೀತಿ ಸತತವಾಗಿ ಎಲ್ಲಾ ರೀತಿಯಿಂದಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಾ ಬಂದರೂ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು ಸ್ಪಷ್ಟ. ಎಲ್ಲಾ ರೀತಿಯಿಂದಲೂ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿಯೂ ಅಂದರೆ ಅನುದಾನ ಬಿಡುಗಡೆ, ಉನ್ನತ ಅಧಿಕಾರಿಗಳ ನೇಮಕಾತಿ, ಉಪಕುಲಪತಿಗಳ ನೇಮಕಾತಿ ಹೀಗೆ ಎಲ್ಲವೂ ದಕ್ಷಿಣ ಕರ್ನಾಟಕದವರ ಪಾಲಾಗುತ್ತಿವೆ,,’ ಎಂದು ಹೇಳಿರುವ ಹೊರಟ್ಟಿ, ಉತ್ತರ ಕರ್ನಾಟಕದ ಬಗೆಗಿನ ಕಾಳಜಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ವೇದಿಕೆಗಳ ಹೇಳಿಕೆಗಳಾಗಿಯೇ ಉಳಿದಿದೆ ಎಂದಿದ್ದಾರೆ.