ಆಗಸ್ಟ್ ತಿಂಗಳಲ್ಲಿ ಮುಂಗಾರು ಋತುವಿನ ಬಹುತೇಕ ಪಾಲು ಧೋ ಎಂದು ಸುರಿದ ಮಳೆಗೆ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದರೆ, ಕೋಲಾರ, ಬೆಂಗಳೂರು, ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ವಾಡಿಕೆಯ ಮಳೆ ಆಗಿಲ್ಲ. ಆಗಸ್ಟ್ ಎರಡನೇ ತಾರೀಕಿನಿಂದ ಆರಂಭವಾದ ಭಾರಿ ಮಳೆ ಆಗಸ್ಟ್ 6ರಿಂದ ಇಂದಿನ ತನಕ ಅಸಾಧಾರಣ ಪ್ರಮಾಣದಲ್ಲಿ ಸುರಿಯತೊಡಗಿದೆ.
ಸಾಧಾರಣವಾಗಿ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ಸರಾಸರಿ 6 ರಿಂದ 8 ಎಂ ಎಂ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಆಗಸ್ಟ್ 6 ರಿಂದ ಆಗಸ್ಟ್ 10ರ ತನಕ ಐದು ದಿನ ಪ್ರತಿದಿನ 40 ಎಂಎಂ ತನಕ, ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ 120 ಎಂಎಂ ತನಕ ಮಳೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಜೂನ್ 23 ಮತ್ತು ಜುಲೈ 30ರಂದು 15 ಎಂ ಎಂ ಗಿಂತ ಹೆಚ್ಚು ಮಳೆಯಾಗಿತ್ತು. ಆಗಸ್ಠ್ 6, 7 ಮತ್ತು 8ರಂದು 25ರಿಂದ 30 ಎಂ ಎಂ ತನಕ ಮಳೆ ದಾಖಲಾಗಿತ್ತು. ಇದೇ ವೇಳೆ ಕರಾವಳಿ ಜಿಲ್ಲೆಗಳಲ್ಲಿ 110ರಿಂದ 150 ಎಂಎಂ ತನಕ ಮಳೆಯಾಗಿತ್ತು.
ಬೆಳಗಾವಿ ಹೊರತುಪಡಿಸಿ ಉತ್ತರ ಕರ್ನಾಟಕದ ಇತರ ಜಿಲ್ಲೆಗಳ ದಿನದ ಮಳೆ ಸರಾಸರಿಗಿಂತ ಬಹಳಷ್ಟು ಹೆಚ್ಚಳವಾಗಿತ್ತು. ಇದರೊಂದಿಗೆ, ಮಹಾರಾಷ್ಟ್ರದ ಜಲಾಶಯಗಳಿಂದ ಪ್ರವಾಹ ಹರಿಯ ಬಿಟ್ಟಿರುವುದು ಜನರನ್ನು ಜಲಪ್ರವಾಹದಲ್ಲಿ ತತ್ತರಿಸುವಂತೆ ಮಾಡಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಳೆದ ಕೆಲ ದಿನಗಳಲ್ಲಿ ಕಡಿಮೆ ಆಗಿದ್ದರೂ, ಮಲೆನಾಡು, ಅರೆ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಕುಂಭದ್ರೋಣ ಮಳೆಯಾಗುತ್ತಿದ್ದು, ಬಹುತೇಕ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಶಿವಮೊಗ್ಗದ ತೀರ್ಥಹಳ್ಳಿ, ದಕ್ಷಿಣ ಕನ್ನಡದ ಸುಳ್ಯ, ಬೆಳ್ತಂಗಡಿ, ಕಡಬ, ಮಡಿಕೇರಿ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆ ದಾಖಲಾಗಿದೆ.
ಆಗಸ್ಟ್ 10ರಂದು ಬೆಳಗ್ಗೆ ಆಗುಂಬೆಯಲ್ಲಿ 188.50 ಎಂ ಎಂ ಮಳೆ ದಾಖಲಾಗಿದ್ದು, ತೀರ್ಥಹಳ್ಳಿ 203 ಎಂಎಂ, ಮಂಗಳೂರಿನ ಕಂದಾವರದಲ್ಲಿ 152 ಎಂ ಎಂ, ಸುಳ್ಯದ ಪೆರಾಜೆಯಲ್ಲಿ 127 ಎಂ ಎಂ, ಪುತ್ತೂರಿನ ಪಾಣಾಜೆಯಲ್ಲಿ 118 ಎಂಎಂ ಮಳೆಯಾಗಿದೆ. ಆಗಸ್ಟ್ 10ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 150 ಎಂ ಎಂ ಮಳೆ ದಾಖಲಾಗಿದ್ದು, ಕೊಡಗಿನಲ್ಲಿ 145, ಚಿಕ್ಕಮಗಳೂರು 116, ಶಿವಮೊಗ್ಗ 113, ಉಡುಪಿಯಲ್ಲಿ 111 ಎಂಎಂ ಮಳೆಯಾಗಿದೆ. ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಯಲ್ಲಿ 32 ಎಂಎಂ ಮಳೆಯಾಗಿದ್ದು, ಮೈಸೂರು 47, ಹಾವೇರಿ 22 ಮತ್ತು ಧಾರವಾಡದಲ್ಲಿ 16 ಎಂಎಂ ಮಳೆ ದಾಖಲಾಗಿದೆ. ಇದು ವಾಡಿಕೆ ಮಳೆಗಿಂತ ಹಲವರು ಪಟ್ಟು ಹೆಚ್ಚಿದೆ.




ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದರೆ, ಹೈದರಾಬಾದ್ ಕರ್ನಾಟಕ ಬೀದರ್, ಯಾದಗಿರಿ, ಕಲಬುರ್ಗಿ, ರಾಯಚೂರು ಕೊಪ್ಪಳ, ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವಾಡಿಕೆ ಮಳೆಯೂ ಆಗಿಲ್ಲ. ಬೆಳಗಾವಿ ಮತ್ತು ಬಾಗಲಕೋಟೆ ಪ್ರವಾಹದಲ್ಲಿ ಮುಳುಗಿದ್ದರೂ ಬಿಜಾಪುರದಲ್ಲಿ ವಾಡಿಕೆ ಮಳೆ ಬಂದಿಲ್ಲ.
ಹಳೇ ಮೈಸೂರು ಪ್ರಾಂತ್ಯದ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಕೃಪೆ ತೋರಿಲ್ಲ. ಉತ್ತರ ಕರ್ನಾಟಕ ಧಾರವಾಡದಲ್ಲಿ ಆಗಸ್ಟ್ 4ರಿಂದ 10 ತನಕ ವಾಡಿಕೆಗಿಂತ ಶೇಕಡ 900 ರಷ್ಟು ಮಳೆ ಹೆಚ್ಚಳವಾಗಿದೆ. ಒಂದು ವಾರದಲ್ಲಿ 28.50 ಎಂ ಎಂ ಇರುತ್ತಿದ್ದ ವಾಡಿಕೆ ಮಳೆ ಈ ಬಾರಿ 284 ಎಂಎಂಗೆ ಏರಿದೆ. ಕಳೆದ ಒಂದು ವಾರದಲ್ಲಿ ಬೆಳಗಾವಿ (293 ಎಂಎಂ), ಗದಗ (295 ಎಂಎಂ), ಹಾವೇರಿ (253 ಎಂಎಂ), ಬಾಗಲಕೋಟೆ (32.94 ಎಂಎಂ) ಆದ ಮಳೆ ವಾರದ ಸರಾಸರಿಗಿಂತ ಹಲವಾರು ಪಟ್ಟು ಹೆಚ್ಚು. ಒಂದು ತಿಂಗಳಲ್ಲೊ, ಕೆಲವು ಕಡೆ ಒಂದು ವರುಷದಲ್ಲಿ ಸುರಿಯ ಬೇಕಾದ ಮಳೆರಾಯ ಒಂದೇ ಸಮನೆ ಸುರಿದು ಜನರು ತ್ರಾಸಕ್ಕೀಡಾಗಿದ್ದಾರೆ.
ಆಗಸ್ಟ್ ಮೊದಲ ವಾರದಲ್ಲಿ ಕರ್ನಾಟಕ ರಾಜ್ಯದ ಸರಾಸರಿ ಮಳೆಗಿಂತ ಶೇಕಡ 130ರಷ್ಟು ಹೆಚ್ಚು ಮಳೆಯಾಗಿದೆ. ಇದೇ ವೇಳೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಮಳೆಯ ಪ್ರಮಾಣ ಸರಾಸರಿಗಿಂತ ಶೇಕಡ 233ಕ್ಕಿಂತ ಹೆಚ್ಚಳವಾಗಿದೆ. ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ಆಗಿರುವ ನಾಶ ನಷ್ಟದ ಅಧಿಕೃತ ಮಾಹಿತಿ ಲಭ್ಯವಿಲ್ಲದಿದ್ದರೂ, ಪ್ರಾಥಮಿಕ ಅಂಕಿ ಅಂಶಗಳ ಪ್ರಕಾರ ಒಂದೂವರೆ ಲಕ್ಷ ಹೆಕ್ಟರ್ ಕೃಷಿ ನಾಶ ಆಗಿದೆ. ವಿವಿಧ ಇಲಾಖೆಗಳಿಗೆ ಸೇರಿದ ಒಂದೂವರೆ ಸಾವಿರ ಕಿಲೋ ಮೀಟರ್ ರಸ್ತೆ ಹಾನಿಯಾಗಿದ್ದು, 250ಕ್ಕಿಂತ ಹೆಚ್ಚು ಸಣ್ಣ ಮತ್ತು ಮಧ್ಯ ಪ್ರಮಾಣದ ಸೇತುವೆಗಳು ಧ್ವಂಸ ಆಗಿವೆ. ಸಾವಿರಾರು ಜನರು ಮನೆಗಳನ್ನು ಕಳಕೊಂಡಿದ್ದು, ಹಲವಾರು ಎಕರೆ ಜಮೀನು ಕೃಷಿ ಮಾಡಲು ಅಯೋಗ್ಯವಾಗಿದೆ. ಹೆಚ್ಚಿನ ಪ್ರಮಾಣದ ನಾಶ ನಷ್ಟ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಸಂಭವಿಸಿದೆ.