ರಾಜ್ಯದ ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಅತಿವೃಷ್ಟಿಯ ಹೊರತಾಗಿಯು ಉತ್ತರ ಒಳನಾಡು ಪ್ರದೇಶ ಏಳು ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದ್ದು, ಶೇಕಡಾ 49ರಷ್ಟು ಸಣ್ಣ ನೀರಾವರಿ ಕೆರೆಗಳು ಭರ್ತಿಯಾಗಿಲ್ಲ. ಬಹುತೇಕ ಜಲಾಶಯಗಳು – ಲಿಂಗನಮಕ್ಕಿ (ಶಿವಮೊಗ್ಗ) ಮತ್ತು ಘಟಪ್ರಭಾ (ಬೆಳಗಾವಿ) ಜಲಾಶಯಗಳು ಸೆಪ್ಟೆಂಬರ್ ಮೊದಲ ವಾರ ಭರ್ತಿ ಆಗಿದ್ದರೂ, ತುಂಬಿದ್ದರೂ, ವಾರಾಹಿ (ಉಡುಪಿ) ಜಲಾಶಯದಲ್ಲಿ ನೀರು ತುಂಬಿಲ್ಲ.
ಹೈದರಾಬಾದ್ ಕರ್ನಾಟಕದ ರಾಯಚೂರು, ಬೀದರ್, ಯಾದಗಿರ್, ಕೊಪ್ಪಳ, ಕಲಬುರ್ಗಿ ಜಿಲ್ಲೆಗಳಲ್ಲಿ ಮತ್ತು ವಿಜಾಪುರ ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡ 39 ಹೆಚ್ಚು ಮಳೆ ಆಗಿದ್ದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡ 14ರಷ್ಟು ಮಳೆ ಕೊರತೆಯಾಗಿದೆ. ಕೋಲಾರದಲ್ಲಿ ವಾಡಿಕೆ ಮಳೆ ಸುರಿದಿದ್ದರೂ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡ 15ರಷ್ಟು ಮಳೆ ಕಡಿಮೆಯಾಗಿದೆ.
ಕಳೆದ ವರ್ಷ ಕೂಡ ಬರಗಾಲದಿಂದ ನಲುಗಿದ್ದ ರಾಯಚೂರು, ಬೀದರ್, ಯಾದಗಿರ್, ಕೊಪ್ಪಳ, ಕಲಬುರ್ಗಿ ಮತ್ತು ವಿಜಾಪುರ ಜಿಲ್ಲೆಯಲ್ಲಿ ಸೆಪ್ಟೆಂಬರ್ 6ರ ವೇಳೆಗೆ ಶೇಕಡ 38ರಿಂದ ಶೇಕಡ 22ರಷ್ಟು ಮಳೆ ಕೊರತೆಯಾಗಿದೆ. ಈ ಏಳು ಜಿಲ್ಲೆಗಳಲ್ಲಿ ಜೂನ್ ತಿಂಗಳಿನಿಂದ ಈ ತನಕ ಮುಂಗಾರು ಅವಧಿಯಲ್ಲಿ ಮಾತ್ರವಲ್ಲದೆ, ಜನವರಿ ತಿಂಗಳಿನಿಂದ ಈ ತನಕ ಕೂಡ ಸರಾಸರಿ ಒಂದೇ ರೀತಿ ಮಳೆ ಕಡಿಮೆಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸೆಪ್ಟಂಬರ್ ಮೊದಲ ವಾರದಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದೆ.
ಧಾರವಾಡ (51), ಉತ್ತರ ಕನ್ನಡ (39), ಹಾಸನ (35), ಬೆಳಗಾವಿ (34), ಮೈಸೂರು (29), ಹಾವೇರಿ (22), ಮಂಡ್ಯ (14), ಚಾಮರಾಜನಗರ (13) ಜಿಲ್ಲೆಗಳಲ್ಲಿ ಕಳೆದ ಅವಧಿಗಿಂತ ಶೇಕಡವಾರು 13ರಿಂದ 51ರಷ್ಟು ಹೆಚ್ಚು ಮಳೆಯಾಗಿದೆ. ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಗರಿಷ್ಟ ಪ್ರಮಾಣದ ಮಳೆಯಾಗಿದೆ. ಪ್ರವಾಹ ಪೀಡಿತ ಬೆಳಗಾವಿಯಲ್ಲಿ ಶೇಕಡ 34ರಷ್ಟು ಮಳೆ ಜಾಸ್ತಿ ಆಗಿದೆ.

ಉತ್ತರ ಒಳನಾಡು ಕರ್ನಾಟಕ ಹೊರತು ಪಡಿಸಿ ರಾಜ್ಯದ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಧಲ್ಲಿ ಉತ್ತಮ ಮಳೆಯಾಗದೆ. ಆರೇಳು ಜಿಲ್ಲೆಗಳಲ್ಲಿ ಸರಾಸರಿ ಮಳೆ ಪ್ರಮಾಣ ಕಡಿಮೆ ಆಗಿದ್ದರೂ ರಾಜ್ಯ ಸರಾಸರಿ ಶೇಕಡ 13ರಷ್ಟು ಹೆಚ್ಚು ಮಳೆ ದಾಖಲಾಗಿದೆ. ಉತ್ತರ ಒಳನಾಡು ಕರ್ನಾಟಕದಲ್ಲಿ ಶೇಕಡ 3ರಷ್ಟು ಮಳೆ ಕಡಿಮೆಯಾಗಿದೆ. ಕೆಲವೊಂದು ಜಿಲ್ಲೆಗಳಲ್ಲಿ ವಾಡಿಕೆಗಿಂತಲೂ ಶೇಕಡ 40ಕ್ಕಿಂತ ಹೆಚ್ಚು ಮಳೆ ದಾಖಲಾದ ಪರಿಣಾಮ ರಾಜ್ಯ ಸರಕಾರಿ ಮಿಗತೆ ತೋರಿಸುತ್ತಿದೆ. ವಾಸ್ತವದಲ್ಲಿ ಉತ್ತರ ಒಳನಾಡು ಪ್ರದೇಶದ ಏಳು ಜಿಲ್ಲೆಗಳು ಮಳೆ ಕೊರತೆ ಎದುರಿಸುತ್ತಿವೆ.
ಕೆರೆಗಳು ತುಂಬಿಲ್ಲ:
ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ ದಾಖಲೆಯಲ್ಲಿ ಇರುವ 3,611 ಕೆರೆಗಳಲ್ಲಿ ಕೇವಲ ಕಾಲಂಶ ಕೆರೆಗಳು ಮಾತ್ರ ಈ ಮುಂಗಾರು ಅವಧಿಯಲ್ಲಿ ಅರ್ಧಾಂಶಕ್ಕಿಂತ ಹೆಚ್ಚು ಭರ್ತಿ ಆಗಿವೆ. ಇತರ ಶೇಕಡ 27ರಷ್ಟು ಕೆರೆಗಳು ತಮ್ಮ ಸಂಗ್ರಹ ಸಾಮರ್ಥ್ಯದ ಶೇಕಡ 30 ರಿಂದ 50ರಷ್ಟು ಮಾತ್ರ ತುಂಬಿವೆ. ಇನ್ನುಳಿದ ಶೇಕಡ 49 ಕೆರೆಗಳು ನೀರಿಲ್ಲದೆ ಖಾಲಿಯಾಗಿವೆ.

ಮಳೆ ವಿತರಣೆಯಲ್ಲಿ ಬದಲಾವಣೆ:
ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾಗಿ ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆ ಆಗುತ್ತದೆ. ಅನಂತರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆ ಆಗುವುದು ರೂಢಿ. ಕಳೆದ ವರ್ಷ ಜೂನ್ ತಿಂಗಳಲ್ಲಿ ಸರಾಸರಿಗಿಂತ ಹೆಚ್ಚೇ ಮಳೆಯಾಗಿ ಆಗಸ್ಟ್ ಮೊದಲ ವಾರ ಕಡಿಮೆ ಆಗಿತ್ತು. ಆದರೆ, ಈ ವರ್ಷ ಜುಲೈ ಕೊನೆಯ ತನಕವೂ ಸರಾಸರಿಗಿಂತ ಕಡಿಮೆ ಮಳೆಯಾಗಿ, ಆಗಸ್ಟ್ ಮೊದಲ ವಾರದ ದಿಢೀರಾಗಿ ಹೆಚ್ಚಿನ ಪ್ರಮಾಣದ ಮಳೆ ಸುರಿಯತೊಡಗಿತು. ಈ ವ್ಯವಸ್ಥೆ ಇದೀಗ ಸೆಪ್ಟೆಂಬರ್ ಮೊದಲ ವಾರ ತನಕವೂ ಮುಂದುವರಿದಿದೆ. ಆಗಸ್ಟ್ 4ರಿಂದ ಒಂದು ವಾರ ಕಾಲ ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರಿ ಮಳೆಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಕಳೆದ ಒಂದು ದಶಕದಿಂದಲೂ ಮಳೆ ವಿತರಣೆಯಲ್ಲಿ ಬದಲಾವಣೆ ಆಗುತ್ತಲೇ ಇದೆ.