Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಉಡುಪಿಯ ಯುಪಿಸಿಎಲ್ ವಿರುದ್ಧ ಹಸಿರು ಪೀಠ ನೀಡಿದ ತೀರ್ಪಿನ ಅರ್ಥವೇನು?

ನರೇಂದ್ರ ಮೋದಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಾಗಲೇ ಈ ವಿವಾದಿತ ವಿದ್ಯುತ್ ಸ್ಥಾವರ ಗೌತಮ್ ಅದಾನಿ ತೆಕ್ಕೆಗೆ ಬಂದಾಗಿತ್ತು.
ಉಡುಪಿಯ ಯುಪಿಸಿಎಲ್ ವಿರುದ್ಧ ಹಸಿರು ಪೀಠ ನೀಡಿದ ತೀರ್ಪಿನ ಅರ್ಥವೇನು?
Pratidhvani Dhvani

Pratidhvani Dhvani

May 29, 2019
Share on FacebookShare on Twitter

ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ನಡುವೆ ಪಡುಬಿದ್ರೆ ಪಟ್ಟಣದ ನಂದಿಕೂರು ಗ್ರಾಮದಲ್ಲಿರುವ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್‌ಗೆ (ಯುಪಿಸಿಎಸ್) ಸೇರಿದ ಕಲ್ಲಿದ್ದಲು ಉಷ್ಣ ವಿದ್ಯುತ್ ಸ್ಥಾವರದ ದುಪ್ಪಟ್ಟು ವಿಸ್ತರಣೆಗೆ ತಡೆ ನೀಡಲಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಬೆಂಗಳೂರು ಜೈಲಿನಿಂದಲೇ ವಿಡಿಯೋ ಪೋಸ್ಟ್‌ ಮಾಡಿದ ಹರ್ಷ ಕೊಲೆ ಆರೋಪಿ!

ಸರಳ ವಾಸ್ತುಗೂ ಮುನ್ನ ಚಂದ್ರಶೇಖರ್‌ ಗುರೂಜಿ ಏನಾಗಿದ್ದರು ಗೊತ್ತಾ?

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಧರೆಗುರುಳಿದ ವಿದ್ಯುತ್ ಕಂಬಗಳು!

ದೇಶದಲ್ಲೇ ಬೃಹತ್ ವಿದ್ಯುತ್ ಸ್ಥಾವರಗಳನ್ನು ಹೊಂದಿರುವ ಅದಾನಿ ಪವರ್ ಗ್ರೂಪಿಗೆ ಸೇರಿದ ಕಂಪನಿ ಇದು. ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಾಗಲೇ ಈ ವಿವಾದಿತ ವಿದ್ಯುತ್ ಸ್ಥಾವರ ಗೌತಮ್ ಅದಾನಿ ತೆಕ್ಕೆಗೆ ಬಂದಾಗಿತ್ತು. ಎರಡನೇ ಅವಧಿಗೆ ಮೋದಿ ಪ್ರಧಾನಿ ಆಗುತ್ತಿದ್ದಂತೆ ಕಂಪನಿಗೆ ಸಂಕಷ್ಟ ಎದುರಾಗಿದೆ.

ಸಂಪೂರ್ಣ ವಿದೇಶದಿಂದ ನವಮಂಗಳೂರು ಬಂದರು ಮೂಲಕ ಕಲ್ಲಿದ್ದಲು ಆಮದು ಮಾಡಿಕೊಂಡು ಬಳಸುತ್ತಿರುವ ವಿದ್ಯುತ್ ಸ್ಥಾವರವಿದು. ಮೊದಲಿಗೆ ಎರಡು ಯುನಿಟುಗಳ 1,200 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದ್ದ ಯುಪಿಸಿಎಲ್ ಪ್ರಸ್ತಾಪಿಸಿದ್ದ ಎರಡನೇ ಹಂತದ 1,600 ಮೆಗಾವ್ಯಾಟ್ ಸಾರ್ಮಥ್ಯದ ಎರಡು ಯುನಿಟುಗಳ ವಿಸ್ತರಣೆಗೆ ಈಗ ರಾಷ್ಟ್ರೀಯ ಹಸಿರು ನ್ಯಾಯಪೀಠ (National Green Tribunal) ತಡೆಯಾಜ್ಞೆ ನೀಡಿದೆ. ಮಾತ್ರವಲ್ಲದೆ, ಹೆಚ್ಚುವರಿ ಪರಿಸರ ಪರಿಣಾಮ ಅಧ್ಯಯನವನ್ನು ನಡೆಸಿ, ಮೂರು ತಿಂಗಳಿಗೊಮ್ಮೆ ವರದಿ ಸಲ್ಲಿಸಲು ಸೂಚನೆ ನೀಡಿದೆ. ಪಡುಬಿದ್ರೆ ಪರಿಸರದ ಗ್ರಾಮಗಳ ನಿವಾಸಿಗಳಿಗೆ ಮತ್ತು ಹೋರಾಟಗಾರರಿಗೆ ಇದೊಂದು ಮಹತ್ವದ ಗೆಲುವು. ಏಕೆಂದರೆ, ಗ್ರಾಮಸ್ಥರಿಗೆ ಸರಕಾರಿ ವ್ಯವಸ್ಥೆಯಿಂದಾಗಲೀ, ನ್ಯಾಯಾಂಗದಿಂದಾಗಲೀ ಇದುವರೆಗೆ ಈ ಉಷ್ಣವಿದ್ಯುತ್ ಯೋಜನೆಗೆ ಸಂಬಂಧಿಸಿ ಯಾವ ನ್ಯಾಯವೂ ದೊರೆತಿರಲಿಲ್ಲ.

2017ರ ಆಗಸ್ಟ್ 1ರಂದು ಯುಪಿಸಿಎಲ್ ಯೋಜನೆಯ ಎರಡನೇ ಹಂತದ ವಿಸ್ತರಣೆಗೆ ಸಂಬಂಧಿಸಿ ನೀಡಲಾದ ಪರಿಸರ ಅನುಮತಿ ಕ್ರಮಬದ್ಧವಾಗಿಲ್ಲ ಎಂಬುದು ಇದೀಗ ಹಸಿರು ಪೀಠಕ್ಕೆ ಮನವರಿಕೆಯಾಗಿದೆ. ಆದುದರಿಂದ, ವಿಸ್ತರಣೆಗೆ ಅನುಮತಿ ನಿರಾಕರಿಸಲಾಗಿದೆ.

ಯುಪಿಸಿಎಲ್ ವಿಸ್ತರಣಾ ಯೋಜನೆಗೆ ಅನುಮತಿ ದೊರೆಯಬೇಕಾದರೆ ಹೆಚ್ಚುವರಿ ಪರಿಸರ ಪರಿಣಾಮ ಅಧ್ಯಯನವನ್ನು ನಡೆಸಬೇಕಾಗುತ್ತದೆ. ಕ್ರಮಬದ್ಧವಾಗಿ ಅಧ್ಯಯನ ಮುಗಿದ ಬಳಿಕವೇ ಪರಿಸರ ಇಲಾಖೆ ಪರಿಸರ ಅನುಮತಿ ನೀಡಬಹುದು. ಅಲ್ಲಿಯತನಕ ಪರಿಸರ ಇಲಾಖೆಯ 2017ರ ಆದೇಶ ಅಮಾನ್ಯವಾಗುತ್ತದೆ.

ಐಐಎಸ್ಸಿ ಸೇರಿದಂತೆ ಮೂರು ಸಂಸ್ಥೆಗಳ ತಜ್ಞರಿಂದ ಅಧ್ಯಯನ

“ಬೆಂಗಳೂರಿನ ಐಐಎಸ್ಸಿ (Indian Institute of Science), ಚೆನ್ನೈನ ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್ (Madras School of Economics) ಮತ್ತು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ತಜ್ಞರ ಸಮಿತಿಯು ಪರಿಸರ ಪರಿಣಾಮ ಅಧ್ಯಯನ ನಡೆಸಬೇಕು,” ಎಂದು ತಿದ್ದುಪಡಿ ಮಾಡಲಾದ ತನ್ನ ಆದೇಶದಲ್ಲಿ ಹಸಿರು ಪೀಠ ಹೇಳಿದೆ.

ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ನಂದಿಕೂರು, ನಡ್ಸಾಲ್, ಯೆಳ್ಳೂರು ಮುಂತಾದ ಒಂಬತ್ತು ಗ್ರಾಮಗಳ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತಿದ್ದ ಉಷ್ಣವಿದ್ಯುತ್ ಸ್ಥಾವರದ ವಿರುದ್ಧ ಹೋರಾಟ ನಡೆಸುತ್ತಿದ್ದ ನಂದಿಕೂರಿನ ಜನಜಾಗೃತಿ ಸಮಿತಿಗೆ ನೈತಿಕ ಜಯ ದೊರಕಿದೆ.

ನಂದಿಕೂರು ವಿದ್ಯುತ್ ಯೋಜನೆ ಆರಂಭದಿಂದಲೂ ನಿಯಮಗಳ ಉಲ್ಲಂಘನೆ ಮಾಡುತ್ತ ಬರಲಾಗಿದೆ ಎಂಬುದು ಹೋರಾಟಗಾರರ ದೂರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಇದ್ದಾಗ ನಂದಿಕೂರಿನಲ್ಲಿ ವಿದ್ಯುತ್ ಯೋಜನೆಯನ್ನು ಪ್ರಸ್ತಾಪ ಮಾಡಿದ್ದು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (National Thermal Power Corporation). ಅದೂ ಸೋವಿಯತ್ ಯೂನಿಯನ್ ಸಹಯೋಗದೊಂದಿಗೆ. ಸೋವಿಯತ್ ರಷ್ಯಾದ ಪತನದ ನಂತರ ಈ ಯೋಜನೆಯನ್ನು ಕೈಬಿಡಲಾಗಿತ್ತು. ಆಗ ಬಂದಿರುವುದೇ ಕೊಜೆಂಟ್ರಿಕ್ಸ್ ಹೂಡಿಕೆಯ ರಾನ್ ಸೋಮರ್ಸ್ ನೇತೃತ್ವದ ಮಂಗಳೂರು ಪವರ್ ಕಂಪನಿ. ಅನಂತರ ನಾಗರ್ಜುನ ಮತ್ತು ಲೇಂಕೋ ಕಂಪನಿಗಳ ಕೈ ಬದಲಾಗಿ, ಕೊನೆಗೂ ಸ್ಥಾವರ ವಿದ್ಯುತ್ ಉತ್ಪಾದನೆ ಆರಂಭಿಸಿತ್ತು.

ಎಡವಟ್ಟಿನ ಮೇಲೆ ಎಡವಟ್ಟು

1997ರಿಂದ ಇದುವರೆಗೂ ಯಾವುದೇ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದಿದ್ದರೂ ಸ್ಥಾವರಕ್ಕೆ ಪರಿಸರ ಅನುಮತಿ ನೀಡಲಾಗಿದೆ. 1997ರಲ್ಲಿ ನೀಡಲಾದ ಪರಿಸರ ಅನುಮತಿಯನ್ನು 2002ರ ಮೇ ತಿಂಗಳಲ್ಲಿ ಮತ್ತೆ ನವೀಕರಣ ಮಾಡಲಾಗಿತ್ತು. 2004ರಲ್ಲಿ ಸ್ಥಾವರ ಆರಂಭ ಆಗಿಲ್ಲ ಎಂಬ ಕಾರಣಕ್ಕೆ ಅನುಮತಿಯನ್ನು ಸರಕಾರ ಹಿಂದಕ್ಕೆ ಪಡೆದುಕೊಂಡಿತ್ತು. ಮುಂದಿನ ವರ್ಷ ಮತ್ತೆ ಪರಿಸರ ಅನುಮತಿಯನ್ನು ಊರ್ಜಿತ ಮಾಡಲಾಗಿತ್ತು. ಇದು ಕಾನೂನುಬಾಹಿರ ಕ್ರಮವಾಗಿತ್ತು. ಇದಾದ ಮೇಲೆ ಯೋಜನೆಯನ್ನು ಎರಡು ಬಾರಿ ಕಂಪನಿಯ ಕೋರಿಕೆಯ ಮೇರೆಗೆ ವಿಸ್ತರಿಸಲಾಯಿತು.

ಕಂಪನಿಯ ಆರಂಭಿಕ ಸ್ಥಾವರಗಳು ಮತ್ತು ಈಗ ವಿಸ್ತರಣೆಯ ಯೋಜನೆ ಸೇರಿದಂತೆ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಯ ಮೂಲಕ ನಡೆಯಬೇಕಾಗಿದ್ದ ಸಾರ್ವಜನಿಕ ಅಹವಾಲು ಸಭೆ ನಡೆಯಲೇ ಇಲ್ಲ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ನಿಯಮ ಪ್ರಕಾರ, ಇಂತಹದೊಂದು ಸಾರ್ವಜನಿಕ ಸಭೆ ಕಡ್ಡಾಯವಾಗಿ ಮಾಡಬೇಕಾಗುತ್ತದೆ.

“1994ರ ನಿಯಮಗಳ ಪ್ರಕಾರ, ಕಡ್ಡಾಯವಾಗಿರುವ ಸಾರ್ವಜನಿಕ ವಿಚಾರಣೆಯನ್ನು ನಡೆಸಲಾಗಿಲ್ಲ. ಮೇಲ್ಮನವಿ ನಂ.86/2018ರಲ್ಲಿ ಎದುರುದಾರ ನಂ.5 ಅವರು ಸಲ್ಲಿಸಿರುವ ಆಕ್ಷೇಪ ಹೇಳಿಕೆಯಲ್ಲಿ, ಪ್ಯಾರಾ 9ರಲ್ಲಿ 27.01.1994ರ ಪ್ರಕಟಣೆಯ ಪ್ಯಾರಾಗ್ರಾಫ್ III (c)ರ ಅಡಿಯಲ್ಲಿ ಸಾರ್ವಜನಿಕ ವಿಚಾರಣೆ ಕಡ್ಡಾಯ ಅಲ್ಲ ಎಂದು ಹೇಳಿದೆ ಎಂದು ತಿಳಿಸಲಾಗಿದೆ. ಈ ಹೇಳಿಕೆಯು ಆ ಕಾನೂನಿನ ಅಂಶಕ್ಕೆ ಸಂಪೂರ್ಣ ವ್ಯತಿರಿಕ್ತವಾದುದಾಗಿದ್ದು, ಈ ಹಿಂದಿನ ಪರಿಸರ ಅನುಮತಿಗಳನ್ನು ನೀಡುವ ಪ್ರಕ್ರಿಯೆಯಲ್ಲಿ ಸಾರ್ವಜನಿಕ ವಿಚಾರಣೆ ಸಭೆ ನಡೆಸದೆ ಇರುವುದು ಗಂಭೀರವಾದ ಲೋಪವಾಗಿದ್ದು, 01.09.2011ರ ವಿವಾದಿತ ಪರಿಸರ ಅನುಮತಿ (EC) ಅಕ್ರಮವಾಗುತ್ತದೆ,” ಎಂದು ಪರಿಸರ ಪೀಠ ಹೇಳಿದೆ.

“ಕೇಂದ್ರ ಸರಕಾರವು ನೀಡಿದ 20.3.1997ರ ಪರಿಸರ ಅನುಮತಿ (EC), ಬಳಿಕ 25.01.1999 ಮತ್ತು 9.9.2009 ರಂದು ಸ್ಥಾವರದ ಸಾಮರ್ಥ್ಯವನ್ನು ಕ್ರಮವಾಗಿ 1,000 MWನಿಂದ 1,015 MWಗೂ ಮತ್ತು 1,015 MWನಿಂದ 1200 MWಗೂ ಏರಿಸಿದ ವಿವಾದಿತ ಪತ್ರಗಳು ಮಾತ್ರವಲ್ಲದೆ, 1.9.2011ರಂದು ನೀಡಲಾಗಿರುವ ಸಮಗ್ರ ಪರಿಸರ ಅನುಮತಿ/ ತಿದ್ದುಪಡಿ ಮಾಡಲಾದ ಪರಿಸರ ಅನುಮತಿಗಳು 1994 ಮತ್ತು 2006ರ ಪರಿಸರ ಪರಿಣಾಮ ಅಧ್ಯಯನ (EIA) ಪ್ರಕಟಣೆಗಳ ನಿಯಮಗಳನ್ನು ಉಲ್ಲಂಘಿಸಿದೆ. ಹಾಗಾಗಿ, ಅವು ಅಮಾನ್ಯ. ಇದಕ್ಕೆ ವ್ಯತಿರಿಕ್ತವಾದ ಯಾವುದೇ ನ್ಯಾಯಮಂಡಳಿ ಅಥವಾ ಬೇರಾವುದೇ ಪ್ರಾಧಿಕಾರಗಳ ತೀರ್ಮಾನಗಳಿದ್ದರೆ ಅದನ್ನು ಈ ತೀರ್ಮಾನ ಬದಿಗೆ ಸರಿಸುತ್ತದೆ ಮತ್ತು ಅಂತಹ ತೀರ್ಮಾನಗಳು ಅಮಾನ್ಯವಾಗುತ್ತದೆ,” ಎಂದು ಆದೇಶದಲ್ಲಿ ಹೇಳಲಾಗಿದೆ.

ಯುಪಿಸಿಎಲ್ ಕಂಪನಿ ನೀಡಿದ ಮಾಹಿತಿಯನ್ನು ಮಾತ್ರ ಆಧರಿಸಿ ಪರಿಸರ ಅನುಮತಿ ಮತ್ತು ವಿಸ್ತರಣೆ ಅನುಮತಿಗಳನ್ನು ನೀಡಲಾಗಿದ್ದು, ನಿಯಮಗಳನ್ನು ಪಾಲಿಸಲಾಗಿಲ್ಲ ಎಂಬುದು ಕಣ್ಣಿಗೆ ರಾಚುವಂತಿದೆ.

ಎಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಣತರು 2012ರಲ್ಲಿ ನಡೆಸಿದ ಅಧ್ಯಯನದಲ್ಲಿ ನೀರು, ಮಣ್ಣು, ಗಾಳಿ, ಜೈವಿಕ ಪರಿಸರಕ್ಕೆ ಗಮನಾರ್ಹ ಹಾನಿ ಆಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಪ್ಲಾಂಟ್‌ನ ತಂಪುಕಾರಕ ಟವರುಗಳು ಹೊರಸೂಸುವ ಉಪ್ಪುಸಹಿತ ತೇವಾಂಶ ಕಾರಣವಾಗಿದೆ. ಉಪ್ಪಿನ ಅಂಶವಿರುವ ತೇವಾಂಶವು ಪ್ಲಾಂಟಿನಿಂದ ಎರಡು ಕಿಮೀ ಸುತ್ತಳತೆಯಲ್ಲಿ ಹಬ್ಬುತ್ತದೆ ಎಂಬುದು ಸಾಬೀತಾಗಿದೆ.

ಇರುವ ಯೋಜನೆಯಲ್ಲೇ ಇಷ್ಟೊಂದು ಪರಿಸರ ಸಮಸ್ಯೆಗಳಿರುವಾಗ ಅದನ್ನು ಅದರ ದುಪ್ಪಟ್ಟು ಗಾತ್ರಕ್ಕೆ ವಿಸ್ತರಿಸುವ ತೀರ್ಮಾನ ಪರಿಸರಕ್ಕೆ ಹಾನಿಕಾರಕ ಆಗುವುದರಲ್ಲಿ ಸಂಶಯ ಇಲ್ಲ. ಈ ವಿಚಾರವನ್ನು ಸುಸ್ಥಿರ ಅಭಿವೃದ್ಧಿಯ ದೃಷ್ಟಿಯಿಂದ ನೋಡಬೇಕಿದೆ. ಇಡೀ ಪ್ರಕರಣದಲ್ಲಿ ಕೇಂದ್ರ ಪರಿಸರ ಇಲಾಖೆಯ ಪಾತ್ರ ನಿಷ್ಪಕ್ಷಪಾತವಾಗಿಲ್ಲದಿರುವ ಕುರಿತು ನ್ಯಾಯಮಂಡಳಿ ಆಕ್ರೋಶ ವ್ಯಕ್ತ ಪಡಿಸಿದೆ.

ಪ್ರಕರಣ ಕುರಿತಂತೆ ಹಸಿರು ಪೀಠದ ಪ್ರಮುಖ ನಿರ್ದೇಶನಗಳು

  1. ಹಾಲಿ ಇರುವ 2×600 MW ಸಾಮರ್ಥ್ಯದ ಸ್ಥಾವರಕ್ಕೆ ಸಂಬಂಧಿಸಿದ ಬೇಸ್‌ಲೈನ್ ದತ್ತಾಂಶಗಳನ್ನು ನಿಖರವಾಗಿ ಸಂಗ್ರಹಿಸಬೇಕು.
  2. ಕರ್ನಾಟಕ ರಾಜ್ಯವು ಈ ಪ್ರದೇಶದ ಧಾರಣ ಸಾಮರ್ಥ್ಯದ ಅಧ್ಯಯನ ಕೈಗೊಳ್ಳಬೇಕು.
  3. ಬೇಸ್‌ಲೈನ್ ದತ್ತಾಂಶ ಮತ್ತು ಧಾರಣ ಸಾಮರ್ಥ್ಯದ ಅಧ್ಯಯನಗಳು ಪ್ರಸ್ತಾಪಿತ ವಿಸ್ತರಣೆಯ ಪರಿಣಾಮವನ್ನು ಅಧ್ಯಯನ ಮಾಡುವುದಕ್ಕೆ ಮೂಲಭೂತ ಅಂಶಗಳಾಗಬೇಕು.
  4. 2006ರ EIA ಪ್ರಕಟಣೆಯಲ್ಲಿ ಅನುಬಂಧ IVರಲ್ಲಿ ಹೇಳಲಾಗಿರುವ ಕಾರ್ಯವಿಧಾನಕ್ಕೆ ಅನುಸಾರವಾಗಿ ಅದನ್ನು ಕಡ್ಡಾಯವಾಗಿ ಪಾಲಿಸಿ ಸಾರ್ವಜನಿಕ ವಿಚಾರಣೆಯನ್ನು ನಡೆಸಬೇಕು ಮತ್ತು ಇದರಲ್ಲಿ ಯೋಜನೆಯಿಂದ ಪೀಡಿತರು ವ್ಯಾಪಕವಾಗಿ ಪಾಲ್ಗೊಳ್ಳುವಂತಾಗಬೇಕು.
  5. ಬಳಿಕ, MoEF&CCಯು ವರದಿಯೊಂದನ್ನು ಸಲ್ಲಿಸಬೇಕು ಮತ್ತು ಆ ವರದಿಯನ್ನು 2006 EIA ಪ್ರಕಟಣೆಯ ಹಂತ IV ರಲ್ಲಿ ವಿವರಿಸಲಾಗಿರುವಂತೆ ವಿಶೇಷ ತಜ್ಞರ ಸಮಿತಿಯು ಪರಿಶೀಲಿಸಬೇಕು.

ಯುಪಿಸಿಎಲ್ ಯೋಜನೆಯ ಒಂದನೇ ಹಂತ ಈಗ ಪೂರ್ಣಗೊಂಡಿದ್ದು, ವಿದ್ಯುತ್ ಉತ್ಪಾದನೆ ಆಗುತ್ತಿದೆ. ‘ಆಗಿ ಹೋದದ್ದಕ್ಕೆ ಚಿಂತಿಸಿ ಫಲವಿಲ್ಲ’ ಎಂಬ ಸ್ಥಿತಿಯನ್ನು ನ್ಯಾಯಾಲಯ ಒಪ್ಪದು. ಆದರೂ ಈಗ ಅಂತಹದೊಂದು ಸ್ಥಿತಿ ಎದುರಾಗಿದೆ. ಹಾಗಾದರೆ ನ್ಯಾಯಮಂಡಳಿ ಅಸಹಾಯಕವೇ ಎಂಬ ಪ್ರಶ್ನೆ ಎದ್ದಿದೆ.

“ನಾವು ಈಗಾಗಲೇ ಈ ತನಕದ ಎಲ್ಲ ಪರಿಸರ ಅನುಮತಿಗಳು ಅಕ್ರಮ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಹಾಗಾಗಿ, ಈ ಯೋಜನೆಯನ್ನು ರದ್ಧುಪಡಿಸಿ ಪರಿಸರವನ್ನು ಮೊದಲಿಂತೆ ಏರ್ಪಡಿಸಿ ಎಂದು ಹೇಳಬೇಕಾಗುತ್ತದೆ. ಅಂತಹ ಆದೇಶದಿಂದ ಸಾರ್ವಜನಿಕರ ಹಿತಾಸಕ್ತಿ ರಕ್ಷಣೆ ಆಗದು. ಹಾಗಾಗಿ, ಈಗಾಗಲೇ ಆಗಿರುವ ಹಾನಿಯನ್ನು ಸರಿಪಡಿಸುವ ಮತ್ತು ಪರಿಸರ ನಿಯಮಗಳಿಗೆ ಅನುಸಾರವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಲು ಅನುವು ಮಾಡಿಕೊಡುವ ಕ್ರಮಗಳನ್ನು ಸೂಚಿಸಬೇಕಾಗಿದೆ,” ಎಂದು ಪೀಠ ಉಲ್ಲೇಖಿಸಿರುವುದು ಗಮನಾರ್ಹವಾಗಿದೆ. ಅದು ಈ ಕೆಳಗಿನಂತಿದೆ:

“ನಾವು ಈಗಾಗಲೇ ಎಲ್ಲ ಪರಿಸರ ಅನುಮತಿಗಳಿಗೂ ಅಂದರೆ 20.3.1997, 25.1.1999 ಮತ್ತು 9.9.2009ರ ವಿಸ್ತರಣೆಗಳು ಮತ್ತು 1.9.2011 ರ ಸಮಗ್ರ ಪರಿಸರ ಅನುಮತಿಗಳೂ ಕಾನೂನುಬಾಹಿರ ಮತ್ತು ಹಾಗಾಗಿ ಅಮಾನ್ಯ ಎಂದು ಹೇಳಿದ್ದೇವೆ. ಹಾಗಾಗಿ, ಸ್ಥಾವರವನ್ನು ತೆಗೆದು, ಆ ಪರಿಸರ ಮತ್ತು ಜಾಗವನ್ನು ಮೊದಲಿನಂತೆ ಮರುಸ್ಥಾಪಿಸಲು ನಿರ್ದೇಶನ ನೀಡಬಹುದಾಗಿದೆ. ಅಂದರೆ, ವಾಸ್ತವಾಂಶ ಮತ್ತು ಸನ್ನಿವೇಶಗಳನ್ನು ಪರಿಗಣಿಸಿ, ಕಳೆದುಹೋದ ಸಮಯ ಮತ್ತು ಈಗಾಗಲೇ ಸಂಭವಿಸಿದ್ದು, ಅನುಭವಿಸದೆ ಬೇರೆ ಹಾದಿಯಿಲ್ಲ ಎಂಬ ಕಾರಣದಿಂದಾಗಿ, ಅಂತಹದೊಂದು ಆದೇಶ ನೀಡಿದರೆ ಅದು ಜನರ ಹಿತಾಸಕ್ತಿಯನ್ನು ಕಾಪಾಡುವುದಿಲ್ಲ ಎಂದು ಅಭಿಪ್ರಾಯಪಡುತ್ತೇವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಆಗಿರುವ ಹಾನಿಯನ್ನು ಸರಿಪಡಿಸುವ ಮತ್ತು ಸ್ಥಾವರವು ಪರಿಸರ ನಿಯಮಗಳನ್ನು ಶಿಸ್ತಿನಿಂದ ಪಾಲಿಸುತ್ತದೆನ್ನುವುದನ್ನು ಖಚಿತಪಡಿಸಿಕೊಳ್ಳುವ ಕ್ರಮಗಳನ್ನು ಕೈಗೊಳ್ಳುವುದು ಈ ಸಮಯದ ಅಗತ್ಯವಾಗಿದೆ. ಹಾಗಾಗಿ ನಾವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯಿದೆ, 2010ರ ಸೆಕ್ಷನ್ 20ರ ‘ಮಾಲಿನ್ಯ ಮಾಡಿದವರು ಪಾವತಿಸುತ್ತಾರೆ’ ಎಂಬ ತತ್ವವನ್ನು ಇಲ್ಲಿ ಅಳವಡಿಸುತ್ತೇವೆ ಮತ್ತು ಎದುರುದಾರ ನಂ.5, ಯೋಜನೆಯ ಪ್ರಾಯೋಜಕ ಮೆಸರ್ಸ್ ಉಡುಪಿ ಪವರ್ ಕಾರ್ಪೋರೇಷನ್ ಅವರು ಪರಿಣತ ಸಮಿತಿಯು ತೀರ್ಮಾನಿಸುವ ಪರಿಸರ ಪರಿಹಾರವನ್ನು ದಂಡಪಾವತಿ ಮಾಡಬೇಕೆಂದು ಆದೇಶಿಸುತ್ತಿದ್ದೇವೆ.”

ವಿಜಯ ಕುಮಾರ್ ಹೆಗ್ಡೆ, ಯುಪಿಸಿಎಲ್ ವಿರೋಧಿ ಹೋರಾಟಗಾರಗ್ರಾಮಸ್ಥರು, ಹೋರಾಟಗಾರರ ಕಳವಳಗಳಿಗೆ ಸರಕಾರ ಸೇರಿದಂತೆ ಯಾರೂ ಗಮನ ನೀಡಿಲ್ಲ. ಇದೀಗ ಹಸಿರು ಪೀಠ ವಾಸ್ತವ ಪರವಾದ ತೀರ್ಪು ನೀಡಿದೆ. ಪೀಠ ನೇಮಕ ಮಾಡಿದ ತಜ್ಞರ ಸಮಿತಿಗೆ ಇನ್ನಷ್ಟು ಸಂಸ್ಥೆಗಳು ನೆರವು ನೀಡಲಿದ್ದು, ಪರಿಸರ ಹಾನಿಯ ಅಧ್ಯಯನ ನಡೆಯಲಿದೆ.

ಪೀಠವು ನೇಮಕ ಮಾಡಿರುವ ತಜ್ಞರ ಸಮಿತಿಯ ವರದಿ ಬರುವ ತನಕ ಮುಂಗಡವಾಗಿ ಯುಪಿಸಿಎಲ್ ಕಂಪನಿಯು ಐದು ಕೋಟಿ ರೂಪಾಯಿಗಳ ಮಧ್ಯಂತರ ಪರಿಹಾರವನ್ನು ಒಂದು ತಿಂಗಳೊಳಗೆ ಕೇಂದ್ರ ಪರಿಸರ ಮಂಡಳಿಗೆ (ಸಿಪಿಸಿಬಿ) ಪಾವತಿ ಮಾಡಲು ಆದೇಶ ನೀಡಲಾಗಿದೆ. ಈ ನಿಧಿಯನ್ನು ಸಿಪಿಸಿಬಿ ಪರಿಸರ ಹಾನಿಗಳ ನಿವಾರಣೆ, ಜನರ ಸಂಕಷ್ಟಗಳ ನಿವಾರಣೆಗೆ ಬಳಸಬೇಕು. ಈ ಹಣ ಅವರ ಸಿಎಸ್‌ಆರ್ ಹೊಣೆಗಾರಿಕೆಗೆ ಹೊರತಾದುದಾಗಿರುತ್ತದೆ ಎಂದು ಉಲ್ಲೇಖಿಸಲಾಗಿದೆ. ಪರಿಸರ ಮಾಲಿನ್ಯದಿಂದ ಆಗಿರುವ ನಾಶ ನಷ್ಟದ ಪ್ರಮಾಣದ ಆಧಾರದಲ್ಲಿ ಈ ದಂಡದ ಮೊತ್ತವನ್ನು ಹಸಿರು ಪೀಠವು ಮರು ನಿಗದಿ ಮಾಡಲಿದೆ.

ಈಗ ಹಸಿರು ಪೀಠದ ಆದೇಶದ ಅನಂತರ ಹೆಚ್ಚುವರಿ ಪರಿಸರ ಪರಿಣಾಮ ಅಧ್ಯಯನವನ್ನು ನಡೆಸಿ, ಮೂರು ತಿಂಗಳಿಗೊಮ್ಮೆ ವರದಿ ಸಲ್ಲಿಸಬೇಕಾಗುತ್ತದೆ. ಇವೆಲ್ಲ ಕ್ರಮಬದ್ಧವಾಗಿ ಮುಗಿದ ಬಳಿಕವೇ ಪರಿಸರ ಇಲಾಖೆ ಯುಪಿಸಿಎಲ್‌ಗೆ ಪರಿಸರ ಅನುಮತಿ ನೀಡಬಹುದು ಎಂದಿದೆ ಆದೇಶ.

ರಾಷ್ಟ್ರೀಯ ಹಸಿರು ಪೀಠದ ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡುವ ಯತ್ನವನ್ನು ಪಿಯುಸಿಎಲ್ ಕಂಪನಿ ಮಾಡಿದೆ ಎಂಬುದು ಗೊತ್ತಾಗಿದೆ.

RS 500
RS 1500

SCAN HERE

don't miss it !

ಮಹಾರಾಷ್ಟ್ರ ರಾಜಕೀಯ : ಬಹುಮತ ಸಾಬೀತಿಗೆ ವೇದಿಕೆ ಸಜ್ಜು
ದೇಶ

ಮಹಾರಾಷ್ಟ್ರ ರಾಜಕೀಯ : ಬಹುಮತ ಸಾಬೀತಿಗೆ ವೇದಿಕೆ ಸಜ್ಜು

by ಪ್ರತಿಧ್ವನಿ
July 3, 2022
ಉಗ್ರ ಕಸಬ್ಗೂ ಇಷ್ಟು ಭದ್ರತೆ ಕೊಟ್ಟಿರಲಿಲ್ಲ : ಆದಿತ್ಯ ಠಾಕ್ರೆ
ದೇಶ

ಉಗ್ರ ಕಸಬ್ಗೂ ಇಷ್ಟು ಭದ್ರತೆ ಕೊಟ್ಟಿರಲಿಲ್ಲ : ಆದಿತ್ಯ ಠಾಕ್ರೆ

by ಪ್ರತಿಧ್ವನಿ
July 3, 2022
ಬೇರ್ ಸ್ಟೊ-ರೂಟ್ ಫಿಫ್ಟಿ: ಕುತೂಹಲ ಘಟ್ಟದಲ್ಲಿ ಭಾರತ-ಇಂಗ್ಲೆಂಡ್ ಟೆಸ್ಟ್
ಕ್ರೀಡೆ

ಬೇರ್ ಸ್ಟೊ-ರೂಟ್ ಫಿಫ್ಟಿ: ಕುತೂಹಲ ಘಟ್ಟದಲ್ಲಿ ಭಾರತ-ಇಂಗ್ಲೆಂಡ್ ಟೆಸ್ಟ್

by ಪ್ರತಿಧ್ವನಿ
July 4, 2022
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಬಸ್ ಪಾಸ್ ಅವಧಿ ವಿಸ್ತರಿಸಿದ KSRTC
ಕರ್ನಾಟಕ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಬಸ್ ಪಾಸ್ ಅವಧಿ ವಿಸ್ತರಿಸಿದ KSRTC

by ಪ್ರತಿಧ್ವನಿ
June 30, 2022
ಯಡಿಯೂರಪ್ಪ ಅವರನ್ನು ಆಪರೇಷನ್ ಕಮಲದ ರಾಯಭಾರಿಯಾಗಿ ನೇಮಿಸುತ್ತಿರಾ? : ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ
ಕರ್ನಾಟಕ

ಯಡಿಯೂರಪ್ಪ ಅವರನ್ನು ಆಪರೇಷನ್ ಕಮಲದ ರಾಯಭಾರಿಯಾಗಿ ನೇಮಿಸುತ್ತಿರಾ? : ಮಾಜಿ ಸಿಎಂ ಕುಮಾರಸ್ವಾಮಿ ಟೀಕೆ

by ಪ್ರತಿಧ್ವನಿ
July 4, 2022
Next Post
ಜಿಂದಾಲ್‌ನಿಂದ ಸರ್ಕಾರಕ್ಕೆ ಬರಬೇಕಿರುವ ರೂ. 1

ಜಿಂದಾಲ್‌ನಿಂದ ಸರ್ಕಾರಕ್ಕೆ ಬರಬೇಕಿರುವ ರೂ. 1,200 ಕೋಟಿ ವಸೂಲಿ ಅಸಾಧ್ಯವೇ?

ಜಿಂದಾಲ್‌ಗೆ ಉದಾರ ದರದಲ್ಲಿ ಭೂಮಿ; ಸಿಎಂಗೆ ಪಾಟೀಲ್ ಮತ್ತೊಂದು ತಕರಾರು ಪತ್ರ

ಜಿಂದಾಲ್‌ಗೆ ಉದಾರ ದರದಲ್ಲಿ ಭೂಮಿ; ಸಿಎಂಗೆ ಪಾಟೀಲ್ ಮತ್ತೊಂದು ತಕರಾರು ಪತ್ರ

ಸರ್ಕಾರಿ ರಜೆ ಕಡಿತ ಸರಿ

ಸರ್ಕಾರಿ ರಜೆ ಕಡಿತ ಸರಿ, ಬಯೊಮೆಟ್ರಿಕ್ ಹಾಜರಾತಿ ಪೂರ್ಣ ಅನುಷ್ಠಾನ ಯಾವಾಗ? 

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist