ಮಾನ್ಸೂನ್ ಮಳೆ ಒಂದು ವಾರ ತಡವಾಗಿ ಆರಂಭವಾಗಿದ್ದು, ಕಳೆದ ವರ್ಷಕ್ಕಿಂತ ಕಡಿಮೆ ಮಳೆ ಸುರಿಯುವ ಸೂಚನೆಗಳು ಸಿಕ್ಕಿವೆ. ಇನ್ನು, ಹವಾಮಾನ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಈ ವರ್ಷದ ಮಳೆ ಭಾರತದ ಅರ್ಧದಷ್ಟು ಭೂಮಿಯನ್ನು ಮಾತ್ರ ತಲುಪಬಲ್ಲದು. ಈ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಕೋಆರ್ಡಿನೇಷನ್ ಕಮಿಟಿಯು (ಎಐಕೆಎಸ್‌ಸಿಸಿ) ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಸತತ ಎರಡನೇ ವರ್ಷವೂ ಬರ ಎದುರಾಗುವ ಲಕ್ಷಣಗಳಿದ್ದು, ಈಗಿನಿಂದಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ದೀರ್ಘಕಾಲೀನ ಮಳೆಯನ್ನು ಗಣನೆಗೆ ತೆಗೆದುಕೊಂಡರೆ ಈ ವರ್ಷ ಸುರಿಯಲಿರುವ ಮಳೆ ಶೇಕಡ 43ರಷ್ಟು ಕಡಿಮೆ! ಕಳೆದ ಕೆಲವೇ ವರ್ಷಗಳ ಲೆಕ್ಕ ತೆಗೆದುಕೊಂಡರೂ ಮಾನ್ಸೂನ್ ಮಳೆ ಕಳೆದ ವರ್ಷ ಶೇಕಡ 9ರಷ್ಟು ಕಡಿಮೆಯಾಗಿತ್ತು. “ಈ ಬಾರಿ ಮಾನ್ಸೂನ್ ತಡವಾಗಿ ಆರಂಭ ಆಗಿರುವುದರಿಂದ ಈಗಾಗಲೇ ಬರ ಎದುರಿಸುತ್ತಿರುವ ಪ್ರದೇಶಗಳ (ದೇಶದ ಶೇಕಡ 46ರಷ್ಟು ಭೂಭಾಗ) ಸ್ಥಿತಿ ಇನ್ನಷ್ಟು ಘೋರವಾಗಿದೆ,” ಎನ್ನುತ್ತದೆ, ಗಾಂಧಿನಗರ ಐಐಟಿಯ ಬರ ಮುನ್ಸೂಚನಾ ವ್ಯವಸ್ಥೆ.
ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ, “ಅನಾವೃಷ್ಟಿ ಕಾರಣಕ್ಕೆ ಕಳೆದ ಬಾರಿಗಿಂತ ಬರ ಹೆಚ್ಚಾಗುವ ಸಂಭವ ಇರುವುದರಿಂದ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಲು ಕೇಂದ್ರ ತಯಾರಾಗಬೇಕಿದೆ,” ಎಂದಿದೆ ಎಐಕೆಎಸ್‌ಸಿಸಿ. ದೇಶಾದ್ಯಂತ ಇರುವ ಪ್ರಮುಖ ಕೆರೆಗಳ ನೀರಿನ ಪರಿಸ್ಥಿತಿಯನ್ನೂ ವಿವರಿಸುವ ಎಐಕೆಎಸ್‌ಸಿಸಿ, ವಿಪತ್ತು ಎದುರಾಗುವ ಎಲ್ಲ ಸೂಚನೆಗಳೂ ಇವೆ ಎಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ. ಬೇಸಿಗೆ ಕಳೆದ ನಂತರ ಇರಬಹುದಾದ ನೀರಿನ ಸಾಮಾನ್ಯ ಪ್ರಮಾಣಕ್ಕಿಂತ ಆಂಧ್ರಪ್ರದೇಶದಲ್ಲಿ ಶೇಕಡ 83, ಮಹಾರಾಷ್ಟ್ರದಲ್ಲಿ ಶೇಕಡ 68, ತಮಿಳುನಾಡಿನಲ್ಲಿ ಶೇಕಡ 41ರಷ್ಟು ಕಡಿಮೆ ನೀರು ಇರುವುದು ಪತ್ತೆಯಾಗಿದೆ.
“ನೀರಿಲ್ಲದೆ ಪರಿತಪಿಸುತ್ತಿರುವ ಹಳ್ಳಿಗಳು ಮತ್ತು ನಗರಗಳು, ಬೆಳೆ ನಷ್ಟ, ಸಾಕುಪ್ರಾಣಿಗಳ ಸಾವು, ನೀರು ಹಂಚಿಕೆ ಜಗಳ ಮುಂತಾದ ಸಂಗತಿಗಳ ಬಗ್ಗೆ ಈಗಾಗಲೇ ಸಾಕಷ್ಟು ಮಾಧ್ಯಮಗಳಲ್ಲಿ ಗಮನಾರ್ಹ ವರದಿಗಳು ಪ್ರಕಟವಾಗುತ್ತಲೇ ಇವೆ,” ಎಂದೂ ಎಐಕೆಎಸ್‌ಸಿಸಿ ಉಲ್ಲೇಖಿಸಿದೆ. 2018ಕ್ಕೆ ಹೋಲಿಸಿದರೆ (ಜೂನ್ 14ರವರೆಗಿನ ಲೆಕ್ಕದಂತೆ) ಈ ವರ್ಷ ಸುರಿದಿರುವ ಮುಂಗಾರು ಮಳೆಯಲ್ಲಿ ಬೆಳೆಯಲಿರುವ ಬೆಳೆಗಳಲ್ಲಿ ಶೇಕಡ 9ರಷ್ಟು ಇಳಿಕೆ ಕಂಡುಬಂದಿದೆ. ಬೇಳೆಕಾಳುಗಳು ಶೇಕಡ 50ರಷ್ಟು, ಎಣ್ಣೆಕಾಳುಗಳು ಶೇಕಡ 41ರಷ್ಟು, ಭತ್ತ ಶೇಕಡ 22ರಷ್ಟು, ಗೋಧಿ 27ರಷ್ಟು ಇಳುವರಿ ಕುಸಿತ ಕಂಡಿವೆ ಎಂದು ಅಂದಾಜಿಸಲಾಗಿದೆ.
ಇದುವರೆಗಿನ ಮಾನ್ಸೂನ್ ವರ್ತನೆ ಗಮನಿಸಿದರೆ ಮುಂದಿನ ತಿಂಗಳುಗಳಲ್ಲಿ ಕೂಡ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗುವ ಸಾಧ್ಯತೆ ತೀರಾ ಕಡಿಮೆ. ಹಾಗಾಗಿ ಬರ ಎಂದು ಘೋಷಣೆ ಮಾಡಿ, ಅದನ್ನು ಎದುರಿಸಲು ಮುಂದಾಗುವುದರಲ್ಲಿ ಕೇಂದ್ರ ಸರ್ಕಾರ ತಡ ಮಾಡಬಾರದು ಎಂದು ಎಐಕೆಎಸ್‌ಸಿಸಿ ಕೇಳಿಕೊಂಡಿದೆ. ಜೊತೆಗೆ, ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ, ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು, ಮಳೆಯಾಶ್ರಿತ ಕೃಷಿಭೂಮಿಗಳಿಗೆ ನೀಡಲಾಗುವ ಪರಿಹಾರವನ್ನು ಎಕರೆಗೆ 10,000 ರೂಪಾಯಿಗೆ ಹೆಚ್ಚಿಸಬೇಕು, ಮಹಾತ್ಮ ಗಾಂಧಿ ಗ್ರಾಮೀನ ಉದ್ಯೀಗ ಖಾತ್ರಿ ಯೋಜನೆಯಡಿ ನೀಡಲಾಗುವ ಕನಿಷ್ಠ ಕೂಲಿಯ ದಿನಗಳನ್ನು 150ಕ್ಕೆ ಏರಿಸಬೇಕು ಎಂದು ಬೇಡಿಕೆ ಮಂಡಿಸಿದೆ. ಅಲ್ಲದೆ, ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ಈಗಾಗಲೇ ಬಾಕಿ ಉಳಿದಿರುವ ವಿಮಾ ಹಣವನ್ನು ರೈತರಿಗೆ ಪಾವತಿ ಮಾಡುವಲ್ಲಿಯೂ ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದಿದೆ ಎಐಕೆಎಸ್‌ಸಿಸಿ.