ಬುದ್ಧಿ ಮಾಂದ್ಯ ಮಗುವಿನ ತಾಯಿಯೊಬ್ಬಳು ತನ್ನ ಮಗುವಿಗೆ ಫಿಟ್ಸ್ ಕಾಯಿಲೆಗೆ ಬೇಕಾದ ಮಾತ್ರೆಗಾಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಗೆ ಓಡಾಡುತ್ತಾ ಎಲ್ಲಿಯೂ ಸಿಗದೆ ಪರದಾಡುತ್ತ ಇರುವ ದೃಶ್ಯ ನೋಡಿ ನನ್ನ ನೆನಪಿಗೆ ಬಂದಿದ್ದು ಲೋಕಾಯುಕ್ತ ವೆಂಕಟಾಚಲಯ್ಯ, ವೈದ್ಯ ಹನುಮಂತ ರೆಡ್ಡಿ ಸುದರ್ಶನ್, ಆರೋಗ್ಯ ಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ,ರಮೇಶ್ ಕುಮಾರ್ ಮುಂತಾದವರು. ಏಕೆಂದರೆ ಇವರುಗಳು ಪದೇ ಪದೇ ಹೇಳುತ್ತಿದ್ದೇನೆಂದರೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಹೊರಗೆ ಚೀಟಿ ಬರೆದು ಕೊಟ್ಟರೆ ಅವರನ್ನು ಕೂಡಲೇ ಕೆಲಸದಿಂದ ತೆಗೆದು ಹಾಕಲಾಗುವುದು. ಇದು ಪತ್ರಿಕೆಗಳಲ್ಲೆಲ್ಲ ಬಂದುಬಿಡುತ್ತದೆ ಇವರೆಲ್ಲ ದೈವಾಂಶ ಸಂಭೂತರು ಎಂಬಂತೆ ಜನರು ಅಂದುಕೊಳ್ಳುತ್ತಾರೆ. ಸರ್ಕಾರಿ ವೈದ್ಯರೆಲ್ಲ ಸಿನಿಮಾದ ವಿಲನ್ ಗಳಂತೆ ಇವರಿಗೆ ತೋರುತ್ತಾರೆ .ಆದರೆ ನಿಜವಾಗಿ ನಡೆಯುವುದು ಏನು ಎಂಬುದು ಯಾರಿಗೂ ಗೊತ್ತಾಗುವುದಿಲ್ಲ.
ನಾನು ನೋಡಿದ ಘಟನೆ, ಮಹಿಳೆಯೊಬ್ಬರು ಉಡುಪಿಯ ಹತ್ತಿರದ ಮೂರು ಸರ್ಕಾರಿ ಆಸ್ಪತ್ರೆಗಳಿಗೆ ಕೇವಲ ಎರಡು ರೂಪಾಯಿಗೆ ಸಿಗುವ ಫಿನೋಬಾರ್ಬಿಟೊನ್ ಮಾತ್ರೆಯನ್ನು ಹುಡುಕಿಕೊಂಡು ಅಲೆದದ್ದು. ಅದನ್ನು ನೋಡಿದಾಗ ನನ್ನ ಕಣ್ಮುಂದೆ ಇವೆಲ್ಲ ವಿಷಯಗಳು ಬಂದವು.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ಜನರಿಗೆ ಉಚಿತವಾಗಿ ದೊರಕಬೇಕಾದ ಮಾತ್ರೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ essential drugs ಗಳ ಲಿಸ್ಟ್ ನಿಂದ ಆಯ್ದು ಸರ್ಕಾರ ಒದಗಿಸುತ್ತದೆ. ಆಯಾ ಪ್ರಾಂತ್ಯಗಳ ಪ್ರಮುಖ ಕಾಯಿಲೆಗಳನ್ನು ಕೂಡ ಗಮನದಲ್ಲಿಟ್ಟುಕೊಂಡು ಈ ಮಾತ್ರೆಗಳು ಬಡ ಜನರಿಗಾಗಿ ಉಚಿತವಾಗಿ ಸಿಗುವಂತಹ ವ್ಯವಸ್ಥೆ ಇರುತ್ತದೆ. ಅದರಲ್ಲಿ ಫೀಟ್ಸ್ ರೋಗಕ್ಕೆ ಪ್ರಮುಖವಾಗಿ ಸಿಗುವ ಮಾತ್ರ ಗಳೆಂದರೆ ಇಪ್ಟೊಯನ್ (eptoin) ಫಿನೋಬಾರ್ಬಿಟೋನ್(phenobarbitone) ಕಾರ್ಬಮಾಝೆಪಿನ್ (carbamazepine). ಈ ಮಾತ್ರೆಗಳನ್ನು ಹೆಚ್ಚಾಗಿ ದೇಶದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಗುವ ಹಾಗೆ ನೋಡಿಕೊಳ್ಳಲಾಗುತ್ತದೆ .
ನಾನು ಜಿಲ್ಲಾ ಆಸ್ಪತ್ರೆಯಲ್ಲಿ ಇರುವಾಗ ಏಕಾಏಕಿಯಾಗಿ ಕೆಲವೊಮ್ಮೆ ಈ ಮಾತ್ರೆಗಳ ಸ್ಟಾಕ್ ಮುಗಿದು ಹೋಗುತ್ತಿತ್ತು. ಆ ಬಗ್ಗೆ ಜಿಲ್ಲಾ ಸರ್ಜನ್ ಅವರನ್ನು ಅಥವಾ ಫಾರ್ಮಸಿಯ ಮುಖ್ಯಸ್ಥರನ್ನು ಕೇಳಿದಾಗ ಸಿಗುತ್ತಿದ್ದ ಉತ್ತರ ಒಂದೇ ..”ಸ್ಟಾಕ್ ಖಾಲಿಯಾಗಿದೆ ಅವರು ಹೊರಗೆ ಪಡೆದುಕೊಳ್ಳಲಿ, ಅಷ್ಟೇನೂ costly ಅಲ್ಲವಲ್ಲ…”
ಒಬ್ಬ ವೈದ್ಯನಾಗಿ ನಾನು ನೋಡುತ್ತಿದ್ದುದೇನೆಂದರೆ, ಹೆಚ್ಚಿನ ರೋಗಿಗಳು ಕೇವಲ ಬಸ್ ಚಾರ್ಜ್ ಮತ್ತು ಊಟದ ಖರ್ಚು ಎಂದು ಹತ್ತು ರುಪಾಯಿ ಹಿಡಿದುಕೊಂಡು ಆಸ್ಪತ್ರೆಗೆ ಬರುತ್ತಿದ್ದರು. ಈ ಮಾತ್ರೆ ಹಲವರು ತಮ್ಮ ಜೀವನ ಪೂರ್ತಿ ತೆಗೆದುಕೊಳ್ಳುವ ಮಾತ್ರೆಗಳಾಗಿತ್ತು. ಈ ಮಾತ್ರೆ ಸಿಗುತ್ತಿಲ್ಲ ಎಂದು ಗೊತ್ತಾದ ಕೂಡಲೇ ಸಣ್ಣ ಮುಖ ಮಾಡಿಕೊಂಡು ವಾಪಸ್ ಹೋಗುತ್ತಿದ್ದರು. ಕೆಲವರು ಮುಂದಿನ ದಿನ ಆಸ್ಪತ್ರೆಗೆ ತುರ್ತಾಗಿ ‘ಫಿಟ್ಸ್ ಅಟ್ಯಾಕ್’ (fits attack) ಬಂದು ಒಳರೋಗಿಯಾಗಿ ದಾಖಲಾಗಬೇಕಾದ ಸಂದರ್ಭ ಒದಗಿ ಬರುತ್ತಿತ್ತು. ಇದು 2004ರಿಂದ 2009 ರ ವರೆಗೆ ನಾನು ಸರ್ಕಾರಿ ವೈದ್ಯನಾಗಿ ನೋಡಿದ ಪರಿಸ್ಥಿತಿ. ಈಗ 2019ರಲ್ಲಿ ಕೂಡ ಇದೇ ಪರಿಸ್ಥಿತಿ ಮುಂದುವರಿಯುತ್ತಿದೆ ಎಂದಾಗ ನಿಜವಾಗಲೂ ಬೇಸರವಾಗುತ್ತದೆ. ಇಲ್ಲಿ ಮುಖ್ಯವಾದ ಸಮಸ್ಯೆ ಏನು ಎಂಬುದರ ಬಗ್ಗೆ ಒಂದು ಚರ್ಚೆ.
ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ ಹಾಗೆ ಈ ಅತಿ ಅಗತ್ಯ ಮಾತ್ರೆಗಳ ಪೂರೈಕೆ ಸರಕಾರಿ ಉಗ್ರಾಣದ ಜವಾಬ್ದಾರಿಯಾಗಿರುತ್ತದೆ. ಹಲವು ಬಾರಿ ಸರ್ಕಾರಿ ಉಗ್ರಾಣದಲ್ಲಿ ಈ ಅಗತ್ಯ ಮಾತ್ರೆಗಳ ಸ್ಟಾಕ್ ಮುಗಿದು ಹೋಗಿರುತ್ತದೆ. ಈ ಸ್ಟಾಕ್ ಇದ್ದರೂ ಕೆಲವೊಮ್ಮೆ ಆಸ್ಪತ್ರೆಯಲ್ಲಿ ಈ ಮಾತ್ರೆ ಮುಗಿದು ಹೋದಾಗ ಇಂಡೆಂಟ್ (indent) ಹಾಕುವುದು ಆ ಆಸ್ಪತ್ರೆಯ ಔಷಧಾಲಯದ ಫಾರ್ಮಸಿಸ್ಟ್ ಕರ್ತವ್ಯವಾಗಿರುತ್ತದೆ. ಹಲವೊಮ್ಮೆ ಈ ಫಾರ್ಮಸಿಸ್ಟ್ ಓಡಾಡಿಕೊಂಡು ಇರುವುದು ಅಥವಾ ಬೇರೆ ಬೇರೆ ಕಡೆಗಳಲ್ಲಿ ಇತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ಹೊಂದಿರುವುದರಿಂದ ಇಂಡೆಂಟ್ ಹಾಕಲು ಮರೆತು ಬಿಡುತ್ತಾರೆ. ಹಲವು ಆಸ್ಪತ್ರೆಗಳಲ್ಲಿ ಇವತ್ತಿಗೂ ಫಾರ್ಮಸಿಸ್ಟ್ ಪೋಸ್ಟ್ ಭರ್ತಿಯೇ ಆಗಿರುವುದಿಲ್ಲ. ಆ ಕಾರಣದಿಂದಾಗಿ ನರ್ಸ್ ಅಥವಾ ವೈದ್ಯರು ಈ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಸರ್ಕಾರಿ ಉಗ್ರಾಣದಲ್ಲಿ ಮಾತ್ರೆ ಖಾಲಿಯಾದಾಗ ಅಲ್ಲಿಯ ಅಧಿಕಾರಿಗಳ ಕರ್ತವ್ಯವೆಂದರೆ ರಾಜ್ಯದ ಇತರ ಭಾಗಗಳಲ್ಲಿ ಎಲ್ಲಿಯಾದರೂ ಈ ಮಾತ್ರೆಗಳು ಹೆಚ್ಚುವರಿಯಾಗಿ ಇದ್ದರೆ ಅದನ್ನು ಕೊರತೆ ಇರುವ ಜಾಗಗಳಿಗೆ ಆ ಮಾತ್ರೆಗಳನ್ನು ರವಾನಿಸಬೇಕಾಗಿರುವುದು. ಇದು ಕೂಡ ಹಲವೊಮ್ಮೆ ಅಧಿಕಾರಿಗಳು ಮಾಡುವುದಿಲ್ಲ.
ಇದನ್ನು ಏಕೆ ಬರೆಯುತ್ತಿದ್ದೇನೆ ಎಂದರೆ, ರಮೇಶ್ ಕುಮಾರ್ ಆರೋಗ್ಯ ಮಂತ್ರಿಯಾಗಿದ್ದಾಗ ಒಮ್ಮೆ ಎಷ್ಟೋ ಕೋಟಿ ರೂಪಾಯಿಯ ಮಾತ್ರೆಗಳನ್ನು ವಾಯಿದೆ ಮುಗಿದ ಕಾರಣ ಹೇಳಿ ಸರ್ಕಾರಿ ಉಗ್ರಾಣದಲ್ಲಿ ಸುಡಲಾಗಿತ್ತು.ಎಷ್ಟೋ ಮಾತ್ರೆಗಳು ಬೇರೆ ಆಸ್ಪತ್ರೆಯಲ್ಲಿ ಅಗತ್ಯವಿರುವಾಗಲೂ ಕೂಡ ರವಾನೆ ಹೊಂದದೆ expiry ಆದ ಮೇಲೆ ಬೆಂಕಿಗೆ ಬೀಳುತ್ತದೆ. ಇವೆಲ್ಲ ಹತ್ತು ವರ್ಷಗಳ ಹಿಂದೆ ಒಪ್ಪಬಹುದಿತ್ತು. ಆದರೆ, ಈಗ ಆಧುನಿಕ ಯುಗದಲ್ಲಿ ಕಂಪ್ಯೂಟರೀಕರಣಗೊಂಡು ಸರ್ಕಾರಿ ವ್ಯವಸ್ಥೆಯಲ್ಲಿ ಈ ತರಹ ಮಾತ್ರೆಗಳು ಸಿಗದೆ ಇರುವುದು ..ಮಾತ್ರೆಗಳ ನಷ್ಟವೂ ಒಂದು ಅಪರಾಧವಲ್ಲವೇ? ಆದರೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ, ಮಾತ್ರೆಗಳು ಇಲ್ಲದೇ ಇದ್ದಾಗ ನಾವು ಸರ್ಕಾರಿ ವೈದ್ಯರನ್ನು ಬೈಯುತ್ತೇವೆ ಹಾಗೂ ಈ ಮಾತ್ರೆಗಳು ಇಲ್ಲದೇ ಇರುವಾಗ ಅವರು ಹೊರಗೆ ಚೀಟಿ ಬರೆದರು ಎಂದು ಮಂತ್ರಿಗಳು ಮತ್ತು ಅಧಿಕಾರಿಗಳು ಅವರನ್ನು ಸಸ್ಪೆಂಡ್ ಮಾಡುತ್ತಾರೆ.

ಇನ್ನು ಜನಸಾಮಾನ್ಯರು ಮಾಡಬೇಕಾದದ್ದು ಏನು? ಜನಸಾಮಾನ್ಯರು ಜಿಲ್ಲಾ ಸರ್ಜನ್ ಅಥವಾ ಜಿಲ್ಲಾ ಆರೋಗ್ಯ ಅಧಿಕಾರಿಗೆ ಫೋನ್ ಮಾಡಿ ಹೇಳಬೇಕು. ಅವರು ನಮ್ಮ ಮಾತು ಕೇಳುತ್ತಾರೆಯೇ? ನಾನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯನಾಗಿದ್ದಾಗ ಕಂಡುಕೊಂಡ ಒಂದು ಪರಿಹಾರ ಎಂದರೆ ಆಡಳಿತ ಪಕ್ಷದ ಹಲವು ಕಾರ್ಯಕರ್ತರ ಫೋನ್ ನಂಬರ್ ಇಟ್ಟುಕೊಳ್ಳುತ್ತಾ ಇದ್ದೆ ಮತ್ತು ಈ ಮಾತ್ರೆಗಳು ಖಾಲಿಯಾದಾಗ ನೊಂದ ರೋಗಿಗಳಿಗೆ ಆ ನಂಬರ್ ಗಳನ್ನು ಕೊಟ್ಟು ಫೋನ್ ಮಾಡಲು ಹೇಳುತ್ತಾ ಇದ್ದೆ. ಹಲವಾರು ಜನ ಊರಿನ ಶಾಸಕರಿಗೆ ಫೋನ್ ಮಾಡಿ ತಲೆ ತಿನ್ನುತ್ತಿದ್ದರು. ನನ್ನ ಪ್ರಕಾರ ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳ ಪ್ರಮುಖ ಕರ್ತವ್ಯಗಳಲ್ಲಿ ಒಂದು ತಮ್ಮ ಊರಿನ ಆಸ್ಪತ್ರೆಗಳಲ್ಲಿ ಅಗತ್ಯ ಮಾತ್ರೆಗಳ ಪೂರೈಕೆ ಆಗುತ್ತಿದೆಯೋ ಇಲ್ಲವೋ ಎಂದು ನೋಡುವುದು. ಇದನ್ನು ಮಾಡಿದಾಗ ಹೆಚ್ಚಿನ ಅಧಿಕಾರಿಗಳು, ನರ್ಸ್ ಗಳು, ವೈದ್ಯರುಗಳು ಚುರುಕಾಗುತ್ತಾರೆ, ಹಾಗೂ ಈ ಮಾತ್ರೆಗಳ ಪೂರೈಕೆ ನಡೆಯುವಂತೆ ನೋಡಿಕೊಳ್ಳುತ್ತಾರೆ. ಜನಸಾಮಾನ್ಯರು ಅಧಿಕಾರಿಗಳನ್ನು ಪ್ರಶ್ನಿಸುವ ದಿನ ಬಹಳ ದೂರ ಇದೆ. ಜನಪ್ರತಿನಿಧಿಗಳಿಗೆ ನಮ್ಮ ಬೇಡಿಕೆಗಳನ್ನು ಈಡೇರಿಸುವ ಅನಿವಾರ್ಯತೆ ಇದೆ. ಅಧಿಕಾರಿಗಳಿಗೆ ಈ ಅನಿವಾರ್ಯತೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಯು ತನ್ನ ಅಧಿಕಾರವನ್ನು ಬಳಸಿಕೊಳ್ಳಲೇಬೇಕು ಆಗ ಮಾತ್ರ ಪ್ರಜೆಗೆ ಒಂದು ಬೆಲೆ ಇರುತ್ತದೆ ಎನ್ನುವುದು ನೆನಪಿರಬೇಕು.
ಈ ಮಾತ್ರೆಯ ಹುಡುಕಾಟದ ಚರ್ಚೆಯ ಬಗ್ಗೆ ಮಿತ್ರರೊಬ್ಬರು ನನಗೆ ಕಳಿಸಿದ ಮೆಸೇಜ್ ಎಂದರೆ ಆ ಹೆಂಗಸು ಅಷ್ಟು ಓಡಾಡುವುದಕ್ಕಿಂತ ಜನರಿಕ್ ಮಳಿಗೆಯಲ್ಲಿ ವಿಚಾರಿಸಬಹುದಿತ್ತು, ಆಗ ಕಡಿಮೆ ಬೆಲೆಗೆ ಸಿಗುತ್ತಿತ್ತು. ಇದು ನಿಜವೇ ಆದರೆ ನಮ್ಮ ಜನಸಾಮಾನ್ಯರಿಗೆ ಈ ರೀತಿಯ ಆಲೋಚನೆಗಳು ಬರಲು ಸಾಧ್ಯವೇ? ವರ್ಷಗಟ್ಟಲೆ ಸರ್ಕಾರಿ ಆಸ್ಪತ್ರೆಯಲ್ಲಿ ಈ ಮಾತ್ರೆಗಳನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದರೂ, ಜನರಿಕ್ ಮಳಿಗೆಯಲ್ಲಿ ಇದು ಸಿಗಬಹುದು ಎಂಬ ಊಹೆ ಕೂಡ ಅವರಲ್ಲಿ ಇರುವುದಿಲ್ಲ. ನಿಜ ಹೇಳಬೇಕೆಂದರೆ ಆ ಹೆಂಗಸು ಮಾತ್ರೆಗಾಗಿ ಓಡಾಡಿದ ಬಸ್ಸಿನ ವೆಚ್ಚದಲ್ಲೇ ಆ ಮಾತ್ರೆ ಪಕ್ಕದ ಅಂಗಡಿಯಲ್ಲಿ ಒಳ್ಳೆಯ ಕಂಪೆನಿಯ ಮಾತ್ರೆಗಳೇ ಸಿಕ್ಕಿ ಬಿಡುತ್ತಿತ್ತು. ಆದರೆ, ಪ್ರಶ್ನೆ ಇದಲ್ಲ. ಅಗತ್ಯ ಮಾತ್ರೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಪೂರೈಸುವುದು ಯಾರ ಕರ್ತವ್ಯ ಎಂಬುದರ ಬಗ್ಗೆ.
ಇನ್ನೊಬ್ಬ ಮಿತ್ರರು ಅದು ಡಿಎಚ್ಒ ಅವರ ಕರ್ತವ್ಯ ಅವರಿಗೆ ತಿಳಿಸಬೇಕು ಎಂಬುದಾಗಿ ಬರೆದಿದ್ದರು ಜಿಲ್ಲಾಧಿಕಾರಿಯೊಬ್ಬರು ಡಿಎಚ್ಒ ಅಂತಹ ಅಧಿಕಾರಿಗಳಿಗೆ ತಿಳಿಸಬೇಕು ಅನ್ನುವುದು ನಮ್ಮ ಜನಸಾಮಾನ್ಯರಲ್ಲಿ ಎಷ್ಟು ಜನರಿಗೆ ಗೊತ್ತಿದೆ? ಅಂತಹ ಧೈರ್ಯ ಎಷ್ಟು ಜನರಿಗೆ ಇದೆ.
ಇನ್ನೊಬ್ಬ ಮಿತ್ರರು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರುಗಳಿಗೆ ತಮ್ಮಲ್ಲಿ ಮಾತ್ರ ಇಲ್ಲದಿದ್ದರೆ ಜನರಿಕ್ ಮಾತ್ರೆಗಳನ್ನು ಕೊಂಡುಕೊಂಡು ರೋಗಿಗಳಿಗೆ ಕೊಡುವ power ಇದೆ ಎಂಬ ಮಾತನ್ನು ನನಗೆ ತಿಳಿಸಿದರು. ಇಂತಹ ಒಂದು ಅಧಿಕಾರವನ್ನು ಉಪಯೋಗಿಸುವ ಸಾಧ್ಯತೆ ನಮ್ಮ ಯುವ ವೈದ್ಯರಲ್ಲಿ ಇದೆಯೇ? ಹಲವರು ಈ ರೀತಿಯ ಅಧಿಕಾರವನ್ನು ಉಪಯೋಗಿಸಿ ಮುಂದೆ ಕ್ಲರ್ಕ್ ಒಬ್ಬ ಆಡಿಟ್ ಅಬ್ಜೆಕ್ಷನ್ ತಂದು ಈ ಮಾತ್ರೆಗಳಿಗೆ ಕೈಯಿಂದ ಹಣ ಕೊಟ್ಟ ಉದಾಹರಣೆಯೂ ಇದೆ. ಈ ಕಾರಣದಿಂದ ಹೆಚ್ಚಿನ ವೈದ್ಯರು ಇಂತಹ ಅಧಿಕಾರಗಳನ್ನು ಉಪಯೋಗಿಸುವುದಿಲ್ಲ. ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಯ ಮಾತ್ರೆಗಳನ್ನು ನಂಬಿಕೊಂಡಿರುವ ಬಡವ ಅಥವಾ ಬಡವನಲ್ಲದೇ ಇದ್ದರೂ ಅಮಾಯಕ ಪ್ರಜೆ ಫೀಟ್ಸ ಗೆ ಒಳಗಾಗುವುದು ಅನಿವಾರ್ಯವಾಗುತ್ತದೆ.
ಲೇಖಕರು ಮನೋವೈದ್ಯರು