“ಎಲೆಕ್ಟ್ರಿಕ್ ವೆಹಿಕಲ್ಸ್ ಅಂತ ಬೊಬ್ಬೆ ಹೊಡೀತಾರೆ. ಆದ್ರೆ ಅದನ್ನು ಕೊಂಡ್ಕೊಳ್ಳೋಕೆ ಮುಂಚೆ ಏನೇನ್ ಬೇಕೋ ಅದ್ನೆಲ್ಲ ಸೌಲಭ್ಯ ಮಾಡ್ಬೇಕಲ್ವಾ?”
“ಗವರ್ಮೆಂಟ್ನೋರು ಶೋಕಿಗೆ ಮಾಡ್ಕೊಂಡಿರೋದು ಅವೆಲ್ಲ (ಎಲೆಕ್ಟ್ರಿಕ್ ವೆಹಿಕಲ್ಸ್). ತಗೊಳೋವರ್ಗೆ ಮಾತ್ರ ತಗಳಿ ಅಂತ ಪುಸಲಾಯಿಸ್ತಾರೆ. ತಗಂಡ್ಮೇಲೆ ನಮ್ ಕಷ್ಟ ನಮ್ಗೆ. ಯಾವನೂ ಕ್ಯಾರೇ ಅನ್ನಲ್ಲ!”
“ಯಾವುದಾದ್ರೂ ಒಂದು ವೆಹಿಕಲ್ ತಗೋಬೇಕು ಅಂದ್ರೆ ನಾವೆಲ್ಲ ಏನ್ ನೋಡ್ತೀವಿ ಹೇಳಿ? ಚೆನ್ನಾಗಿ ಕಾಣ್ಬೇಕು, ಮೈಲೇಜ್ ಕೊಡ್ಬೇಕು ಅನ್ನೋದ್ರಷ್ಟೇ ಮೈಂಟೆನೆನ್ಸ್ ಕೂಡ ನೋಡ್ಬೇಕಲ್ವಾ?”
-ಎಲೆಕ್ಟ್ರಿಕ್ ವೆಹಿಕಲ್ಸ್ (ಇ-ವೆಹಿಕಲ್ಸ್) ಹೆಚ್ಚಿಸುವ ಮೂಲಕ ಬೆಂಗಳೂರು ನಗರದ ‘ಸಾರಿಗೆ ಮಾಲಿನ್ಯ’ ತಪ್ಪಿಸುವ ಪ್ರಯತ್ನದಲ್ಲಿರುವ ಸರ್ಕಾರಕ್ಕೆ, ಆಟೊಮೊಬೈಲ್ ಅಂಗಡಿಯವರು, ಕ್ಯಾಬ್ ಚಾಲಕರು ಕೊಟ್ಟ ಪ್ರತಿಕ್ರಿಯೆ ಇವು. ಸರ್ಕಾರದ ಇದುವರೆಗಿನ ಪ್ರಯತ್ನಗಳಿಗೆ ಇವರೆಲ್ಲ ಕೊಡುವುದು ಹತ್ತಕ್ಕೆ ಎರಡು ಅಂಕ ಮಾತ್ರ, ಅದೂ ಜಾಹಿರಾತಿಗೆ!
ಬೆಂಗಳೂರಿನಲ್ಲಿ ಓಡುತ್ತಿರುವ ಯಾವುದೇ ಕ್ಯಾಬ್ ಅಥವಾ ಆಟೋ ಡ್ರೈವರ್ ಮಾತನಾಡಿಸಿ ನೋಡಿ, ಅವರು ಇ-ವೆಹಿಕಲ್ಸ್ ಬಗ್ಗೆ ಇದೇ ಹೆಚ್ಚೂಕಡಿಮೆ ಇದೇ ಧಾಟಿಯಲ್ಲಿಯೇ ಮಾತನಾಡುತ್ತಾರೆ. ಇ-ವೆಹಿಕಲ್ಸ್ ಎಂಬ ಅತ್ಯಂತ ಆಕರ್ಷಕ ಹಾಗೂ ಪರಿಸರಕ್ಕೆ ಪೂರಕವಾದ ವ್ಯವಸ್ಥೆಯ ಬಗ್ಗೆ ಈ ಪರಿಯ ತಿರಸ್ಕಾರ, ಅಸಡ್ಡೆ ಉಂಟಾಗೋಕೆ ಕಾರಣ ಏನು ಅಂತ ನೋಡಲು ಹೊರಟರೆ ಹಲವು ಅಂಶಗಳು ಎದುರು ನಿಲ್ಲುತ್ತವೆ. ಇಡೀ ಸಮಸ್ಯೆಯನ್ನು ತೀರಾ ಸರಳವಾಗಿ ಹೇಳುವುದಾದರೆ, ‘ಮೊದಲು ಸೌಲಭ್ಯ ಕಲ್ಪಿಸಿ, ನಂತರ ಇ-ವೆಹಿಕಲ್ಸ್ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತೆ’ ಅನ್ನೋದು ವಾಹನ ಕೊಳ್ಳುವವರ ವಾದ; ಆದರೆ, ‘ಮೊದಲು ವಾಹನ ಕೊಳ್ಳಲಿ, ಆಮೇಲೆ ಸೌಲಭ್ಯ ಕಲ್ಪಿಸದಿದ್ದರೆ ಕೇಳಲಿ’ ಎಂಬುದು ಇ-ವೆಹಿಕಲ್ಸ್ ಹೆಚ್ಚಾಗಲಿ ಎಂದು ಪ್ರಯತ್ನಿಸುತ್ತಿರುವವರ ವಾದ. ಮೇಲ್ನೋಟಕ್ಕೆ ಎರಡೂ ಪ್ರತಿಪಾದನೆಗಳು ಸರಿಯೇ ಅನ್ನಿಸಿದರೂ ವಾಸ್ತವದಲ್ಲಿ ಯಾವುದು ಸಾಧ್ಯ ಎಂಬುದನ್ನು ಸರ್ಕಾರ ಆಲೋಚನೆ ಮಾಡದಿರುವುದೇ ಇಂಥದ್ದೊಂದು ಮಹತ್ವಾಕಾಂಕ್ಷಿ ಕನಸು ನನಸಾಗದೆ ಉಳಿಯಲು ಪ್ರಮುಖ ಕಾರಣ.
ಸದ್ಯ ಬೆಂಗಳೂರಿನಲ್ಲಿ ಸಂಚರಿಸುತ್ತಿರುವ, ನೋಂದಾಯಿಸಲಾದ ವಾಹನಗಳ ಸಂಖ್ಯೆ 80 ಲಕ್ಷಕ್ಕೂ ಹೆಚ್ಚು. ಇದರಲ್ಲಿ 9,316 ವಾಹನಗಳು ಮಾತ್ರ ವಿದ್ಯುತ್ ಅನ್ನು ಉರುವಲಾಗಿ ಬಳಸುವಂಥ ವ್ಯವಸ್ಥೆ ಹೊಂದಿವೆ. ಉದ್ಯಾನ ನಗರಿಯಲ್ಲಿ ಪ್ರತಿದಿನ 1750 ಹೊಸ ಕಾರು/ ವ್ಯಾನು ಮತ್ತಿತರ ವಾಹನಗಳು ನೋಂದಣಿ ಆಗುತ್ತಿವೆ. ಆದರೆ, ಈ ಪೈಕಿ ಎಲೆಕ್ಟ್ರಿಕ್ ವೆಹಿಕಲ್ ಸರಾಸರಿ ಸಂಖ್ಯೆ ಕೇವಲ ಎರಡು! ಇನ್ನು, 2018-19ನೇ ಆರ್ಥಿಕ ವರ್ಷದಲ್ಲಿ ನೋಂದಣಿ ಮಾಡಿಸಲಾದ ಇ-ವಾಹನಗಳ ಸಂಖ್ಯೆ 950. ಈ ಪೈಕಿ ಅತಿ ಹೆಚ್ಚು ಇ-ವಾಹನಗಳು ನೋಂದಣಿ ಆಗಿರುವುದು ಇಂದಿರಾನಗರ ಆರ್‌ಟಿಒ ವ್ಯಾಪ್ತಿಯಲ್ಲಿ (566). ಈ ಅಂಕಿ-ಅಂಶಗಳನ್ನೆಲ್ಲ ನೋಡುತ್ತಿದ್ದರೆ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಇ-ವೆಹಿಕಲ್ಸ್ ಕನಸಿಗೂ ಮತ್ತು ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸದ ಕಂದಕ ಇರುವುದು ಕಂಡುಬರುತ್ತದೆ.
“ಇ-ವೆಹಿಕಲ್ ತಗೊಂಡರೆ ಇನ್ಸೆಂಟೀವ್ಸ್ ಕೊಡ್ತೀವಿ ಅಂತ ಹೇಳ್ತಾರೆ. ಆದ್ರೆ, ಬರೀ ಇನ್ಸೆಂಟೀವ್ಸ್ ತಗೊಂಡು ಏನು ಮಾಡುವುದು? ಯಾವ ಟೈಮಿಗೆ ಎಲ್ಲಿಗೆ ಡ್ಯೂಟಿ ಬೀಳುತ್ತೆ, ಅದು ಎಷ್ಟು ಕಿಲೋಮೀಟರ್ ಇರುತ್ತೆ ಅಂತ ಹೇಳೋಕೆ ಆಗೋಲ್ಲ. ಇಷ್ಟೇ ಕಿಲೋಮೀಟರ್ ಹೋಗ್ತೀವಿ, ಇಂಥ ಕಡೆ ಡ್ಯೂಟಿ ಸಿಕ್ರೆ ಮಾತ್ರ ಹೋಗೋದು ಅಂತ ಕುಂತರೆ ಸಿಗೋ ನಾಲ್ಕು ಕಾಸೂ ಸಿಗೋಲ್ಲ. ಈ ಗಾಡಿ ಓಡಿಸ್ವಾಗ ಹೆಂಗೆ ಫ್ರೀಯಾಗಿದ್ದೀವೋ ಆ ಗಾಡಿ ತಗಂಡ್ಮೇಲೂ ಹಂಗೇ ಇರ್ಬೇಕು. ಅದನ್ ಬಿಟ್ಟು, ಗರ್ವಮೆಂಟ್ನೋರ್ನ ಖುಷಿಪಡ್ಸೋಕೆ ತಗಂಡು ನಾವ್ ಕಷ್ಟ ಅನುಭವಿಸ್ಬೇಕಾ?” ಎಂಬುದು, ಮಾಗಡಿಯಿಂದ ಬೆಂಗಳೂರು ಬಂದು ಓಲಾ ಕ್ಯಾಬ್ ಓಡಿಸುವ ಕೋಟೆ ಗೌಡ ಅವರ ಖಡಕ್ ನುಡಿ.
ಸಾರಿಗೆ ಆಯುಕ್ತ ವಿ ಪಿ ಇಕ್ಕೇರಿ ಅವರು ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ, “ಇ-ವಾಹನಗಳ ನೋಂದಣಿ ಪ್ರಮಾಣ ಅಷ್ಟೇನೂ ಸಮಾಧಾನಕರ ಆಗಿಲ್ಲ ಎಂಬುದು ನಿಜ. ಚಾರ್ಜಿಂಗ್ ಪಾಯಿಂಟ್ಸ್ ಸೇರಿದಂತೆ ಇ-ವಾಹನಗಳ ಬಳಕೆ ಹೆಚ್ಚಿಸಲು ಸರ್ಕಾರ ಸಾಕಷ್ಟು ಪಯತ್ನ ಮಾಡುತ್ತಿದೆ,” ಎಂದಿದ್ದಾರೆ. ಆದರೆ, ನಗರದಲ್ಲಿ ಕ್ಯಾಬ್ ಅಥವಾ ಆಟೋ ಓಡಿಸುವ ಮಂದಿಯನ್ನು ಮಾತನಾಡಿಸಿದರೆ ಆಯುಕ್ತರ ಮಾತಿನಲ್ಲಿ ಮೊದಲರ್ಧ ಮಾತ್ರವೇ ನಿಜ, ಮಿಕ್ಕ ಅರ್ಧ ಸತ್ಯಕ್ಕೆ ದೂರವಾದುದು ಎಂಬುದು ವಾಸ್ತವ. ಇ-ವಾಹನಗಳಿಗೆ ಅತ್ಯವಶ್ಯವಾದ ಚಾರ್ಜಿಂಗ್ ಪಾಯಿಂಟ್‌ಗಳು ನಗರದ ಹೊರವಲಯದ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ, ಮುಖ್ಯವಾಗಿ ಪೆಟ್ರೋಲ್ ಬಂಕ್‌ಗಳು ಇರುವಂತೆಯೇ ಮುಖ್ಯರಸ್ತೆಗಳ ಬದಿಯಲ್ಲಿ ಸಿಗುವಂತೆ ಮಾಡುವುದು ಅಗತ್ಯ. ಇದೇ ಫೆಬ್ರವರಿಯಲ್ಲಿ ಸಾರಿಗೆ ಇಲಾಖೆಯು ನಾಲ್ಕು ಕೋಟಿಯನ್ನು ಬೆಸ್ಕಾಂಗೆ ನೀಡಿ, ನೂರು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುವಂತೆ ಹೇಳಿದೆಯಾದರೂ, ಅದರ ಅನುಷ್ಠಾನದ ಸ್ಥಿತಿಗತಿ ಅವಲೋಕಿಸಿಲ್ಲ ಎಂಬುದು ಬೆಸ್ಕಾಂ ಸಿಬ್ಬಂದಿಯೊಬ್ಬರ ಅಸಮಾಧಾನ. ಇನ್ನು, ಉದ್ಯಾನ ನಗರಿಯ ರಸ್ತೆಗಳಲ್ಲಿ ಇ-ಬಸ್ ಓಡಿಸಬೇಕೆಂಬ ಬಿಎಂಟಿಸಿ ಪ್ರಯತ್ನಗಳು ಇದುವರೆಗೂ ಕೈಗೂಡಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಎಂಬತ್ತು ಇ-ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡುವ ಬಿಎಂಟಿಸಿ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಸಾರ್ವಜನಿಕ ಸಾರಿಗೆಗೇ ಇ-ವಾಹನಗಳ ಖರೀದಿ ಮತ್ತು ನಿರ್ವಹಣೆ ಇಷ್ಟು ದುಬಾರಿ ಮತ್ತು ನಿರ್ವಹಿಸಲು ಕಷ್ಟಸಾಧ್ಯ ಎನಿಸುವುದಾದರೆ, ಅಂಥ ವಾಹನಗಳನ್ನು ಕೊಂಡು ಅದರಿಂದಲೇ ದಿನನಿತ್ಯದ ಬದುಕು ನಿಭಾಯಿಸಬೇಕು ಎಂಬ ಸ್ಥಿತಿಯಲ್ಲಿ ಇರುವವರ ಪಾಡೇನು? ಬಿಎಂಟಿಸಿಯ ಇ-ಬಸ್ ಯೋಜನೆ ನನೆಗುದಿಗೆ ಬಿದ್ದಿರುವಾಗಲೇ, ಸಾರಿಗೆ ಇಲಾಖೆ ಇ-ಆಟೋ ಯೋಜನೆ ಪರಿಚಯಿಸಲು ಮುಂದಾಗಿದ್ದು, ನಗರ ವ್ಯಾಪ್ತಿಯಲ್ಲಿ ಪರ್ಮಿಟ್ ಇಲ್ಲದೆಯೂ ಓಡಿಸಲು ಅನುಮತಿ ನೀಡುವ ಉತ್ಸಾಹದಲ್ಲಿದೆ.
ಒಟ್ಟಿನಲ್ಲಿ, ಇ-ವಾಹನಗಳನ್ನು ಬೆಂಗಳೂರಿನ ರಸ್ತೆಗಿಳಿಸಲು ಸರ್ಕಾರದ ವತಿಯಿಂದ ಪ್ರಯತ್ನಗಳು ನಡೆದೇ ಇರುವುದು ನಿಜವಾದರೂ, ಅಂಥ ಪ್ರಯತ್ನಗಳು ವಾಹನ ಕೊಳ್ಳುವವರ ಆತಂಕಗಳನ್ನು ನಿವಾರಿಸುವಲ್ಲಿ ಶೇ.90ರಷ್ಟು ಮುಗ್ಗರಿಸುತ್ತಿವೆ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ವಾಹನ ಕೊಳ್ಳುವವರ ಆತಂಕಗಳನ್ನು ದೂರ ಮಾಡುವತ್ತ ಯೋಚಿಸಿ, ಸಾಕಷ್ಟು ವ್ಯವಸ್ಥೆ ಕಲ್ಪಿಸಿದ ನಂತರ ಇ-ವೆಹಿಕಲ್ಸ್ ಬಗ್ಗೆ ಜಾಹಿರಾತು, ಭಾಷಣ ಇತ್ಯಾದಿ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಸುಖಾಸುಮ್ಮನೆ ಹಾನಿ ಆಗುವುದೂ ತಪ್ಪುತ್ತದೆ, ಬೆಂಗಳೂರಿನ ರಸ್ತೆಗಳಿಗೆ ಇ-ವೆಹಿಕಲ್ಸ್ ಇಳಿದು ವಾಯುಮಾಲಿನ್ಯವೂ ತಗ್ಗುತ್ತದೆ.